Thursday, December 03, 2009

ಅಂಗವಿಕಲರು ವಿಕಲಚೇತನರೇ?

"ಓ ನನ್ನ ಚೇತನ
ಆಗು ನೀ ಅನಿಕೇತನ.."

ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನಮ್ಮ ಆಧುನಿಕ ನುಡಿತಜ್ಞರ ಪ್ರಕಾರ, ಅಂಗವಿಕಲ == ವಿಕಲಚೇತನ (== physically challenged == specially abled). ಆಹಾ! ಎಂತಹ ಭಾಷಾ ಪ್ರಾವೀಣ್ಯತೆ! ನಿಜಕ್ಕೂ ಕುವೆಂಪು ಚೇತನ ಇಂದಿಗೆ ನಿರ್ನಾಮವಾಯಿತು. "ಚೇತನ" ವನ್ನು ನಾಮಪದವಾಗಿ ಬಳಸಿದಾಗ - ಮನಸ್ಸು, ಬುದ್ಧಿ, ಪ್ರಜ್ಞೆ ಎಂತಲೂ, ಗುಣವಾಚಕವಾಗಿ ಬಳಸಿದಾಗ - ಇಂದ್ರಿಯಗ್ರಹಣ ಶಕ್ತಿಯುಳ್ಳ, ಪ್ರಜ್ಞೆಯುಳ್ಳ, ಸಜೀವವಾದ ಎಂಬ ಅರ್ಥವೆಂದು ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟು ಹೇಳುತ್ತದೆ. ಹೀಗಿರಲು, ಕೆಲವು ಅಂಗಗಳು ಊನವಾಗಿರುವವ ವಿಕಲಚೇತನ!! ಎಷ್ಟು ಅರ್ಥಹೀನ ಹಾಗೂ ಅಮಾನವೀಯ! ಬಹುಶ: ಆ ಭಾಷಾಪರಿಣತರೊಮ್ಮೆ ಅಂತರರಾಷ್ಟ್ರೀಯ ಅಂಗವಿಕಲರ ಒಲಂಪಿಕ್ಸ್ (IWAS - 2009) ಕ್ರೀಡಾಕೂಟವನ್ನೊಮ್ಮೆ ವೀಕ್ಷಿಸಿದ್ದರೆ ಇಂತದೊಂದು ಪದದ ರಚನೆಯೇ ಆಗುತ್ತಿರಲಿಲ್ಲವೇನೋ!

ರಗ್ಬಿ, ಟೇಬಲ್ ಟೆನ್ನಿಸ್, ವಾಲಿಬಾಲ್, ಶಾಟ್ಪುಟ್, ಜಾವ್ಲಿನ್, ಡಿಸ್ಕ್ ಥ್ರೋ, ಆರ್ಚರಿ, ಲಾಂಗ್ ಜಂಪ್, ಹೈಜಂಪ್, ಈಜು, ಅಥ್ಲೆಟಿಕ್ಸ್............ ಕ್ರೀಡೆಗಳ ಪಟ್ಟಿ ಬೆಳೆಯುತ್ತದೆ. ಆಟಗಾರರಿಗಿದ್ದ ಅರ್ಹತೆ, ಕೈಗಳಿಲ್ಲ, ಕಾಲ್ಗಳಿಲ್ಲ, ಬೆರಳುಗಳಿಲ್ಲ, ಸೊಟ್ಟ ಕಾಲುಗಳು, ಸ್ವಾಧೀನವಿಲ್ಲದ ಕೈಗಳು, ಸೊಂಟ.....ಆದರೆ ಅವರಲ್ಲಿದ್ದ ಆ sportsmanship? ಆ ಹೋರಾಡುವ ಛಾತಿ? ಸಾಧಿಸುವ ಛಲ? ಜೀವನೋತ್ಸಾಹ? ಕ್ಷಮಿಸಿ, ಎಲ್ಲ ಸರಿಯಿರುವ ನಮ್ಮಲ್ಲಿಲ್ಲ. ಚಿನ್ನದ ಪದಕವನ್ನು ಪಡೆಯಲು ಚಿಗರೆಯಂತೆ ಜಿಗಿಯುತ್ತಾ ಮೆಟ್ಟಿಲಿಳಿದು ಬರುತ್ತಿದ್ದಾಳೆ ಆ ಚೀನಾದ ಯುವತಿ. ಆಕೆಗೆ ಎರಡೂ ಕಾಲುಗಳಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ! ಮಡಿಚಲೇ ಆಗದ ಒಂದು ಕಾಲು, ಸ್ವಾಧೀನವೇ ಇಲ್ಲದ ಒಂದು ಕೈ. ೫ ಸೆಟ್ ಗಳ ತನಕ ನಿಲ್ಲದ ಹೋರಾಟ, ಚೀನಾದ ಟೇಬಲ್ ಟೆನ್ನಿಸ್ ಆಟಗಾರನ ಪರಿಯದು. ಅಷ್ಟೇ ರೋಚಕ ಪ್ರತಿಸ್ಪರ್ಧೆಯನ್ನೊಡ್ಡಿದವನು, ಒಂದು ಕೋಲಿನ ಸಹಾಯದಿಂದ ನಿಂತು, ಉಳಿದಿರುವ ಒಂದರ್ಧ ಕೈಯಲ್ಲಿ ಸರ್ವ್ ಮಾಡುತ್ತಾ ಆಡಿದ ಭಾರತೀಯ! ಸ್ಟೂಲ್ ಮೇಲೆ ಕೂತು ಅಷ್ಟು ದೂರ ಜಾವ್ಲಿನ್ ಎಸೆದ ಆ ಪೋರಿಯನ್ನು, ಮರಳಿ ಆಕೆಯ ಕುರ್ಚಿಯ ಮೇಲೆ ಕೂರಿಸಿದಾಗಲೇ ತಿಳಿದದ್ದು ಆಕೆಯ ದೇಹದ ಕೆಳಾರ್ಧ ಸ್ವಾಧೀನದಲ್ಲಿಲ್ಲವೆಂದು! ಇವರುಗಳನ್ನೇ ವಿಕಲಚೇತರನರೆಂದಿದ್ದು?? ಇಷ್ಟಕ್ಕೂ ಇಂತದೊಂದು ಕ್ರೀಡಾಕೂಟದ ಪರಿಕಲ್ಪನೆ ಶುರುವಾಗಿದ್ದೇ, "ವಿಕೃತ ಚೇತನ"ರ ಯುದ್ಧದಾಹಕ್ಕೆ ಬಲಿಯಾಗಿ ಅಂಗವಿಕಲರಾದವರ ಪುನಶ್ಚೇತನದ ನಿಟ್ಟಿನಲ್ಲಿ.


ಗೆಳೆಯ ಗೆದ್ದಾಗ ಚಪ್ಪಾಳೆ ಹೊಡೆದು ಹರ್ಷಿಸಲು ಕೈಗಳಿಲ್ಲ, ಓಡಿ ಹೋಗಿ ತಬ್ಬಿಕೊಳ್ಳಲು ಕಾಲುಗಳಿಲ್ಲ. ಆದರೂ ಕೂಗುತ್ತಾ, ಕಿರಿಚುತ್ತಾ, ಕಣ್ಣುಗಳಲ್ಲೇ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಿಸುತ್ತಾ ಅವರನ್ನವರೇ ಅಭಿನಂದಿಸುತ್ತಿದ್ದ ರೀತಿ....! ಅಭಿನಂದಿಸಲು ಹೊರಗಿನ ಪ್ರೇಕ್ಷಕರಾದರೂ ಯಾರಿದ್ದರು ಬಿಡಿ. ರಾತ್ರಿಯೇ ಸರತಿಯಲ್ಲಿ ನಿಂತು ೩ ದಿನಗಳ ನಂತರದ ಮ್ಯಾಚಿಗೆ ನೂಕುನುಗ್ಗಲಿನಲ್ಲಿ ಟಿಕೆಟ್ ತೆಗೆದುಕೊಂಡು ಕ್ರೀಡಾಂಗಣ ಭರ್ತಿಮಾಡುವ ಜನ, ಉಚಿತಪ್ರವೇಶವಿದ್ದರೂ, ಇಂತಹ ಕ್ರೀಡಾಕೂಟಗಳಿಗೆ ಬಾರದಿರವುದು ಆಶ್ಚರ್ಯವೇ ಆಗದಷ್ಟರ ಮಟ್ಟಿಗೆ ನಮಗೆ ಅಭ್ಯಾಸವಾಗಿಬಿಟ್ಟಿದೆ. ಆಯೋಜಕರು ಹೇಳುತ್ತಿದ್ದರು, "ಭಾರತದಲ್ಲಿ ಜನ ಬಂದರೆ ಪವಾಡ, ಚೀನಾದಲ್ಲಿ ಜನ ಬಾರದಿದ್ದಿದ್ದರೆ ಪವಾಡ! ಆದರೆ ಅಲ್ಲಿಯೂ ಪವಾಡವಾಗಿರಲಿಲ್ಲ, ಇಲ್ಲಿಯೂ ಪವಾಡವಾಗಲಿಲ್ಲ!" ಒಮ್ಮೆ ನಮ್ಮ ಪತ್ರಿಕೆಗಳ ಕ್ರೀಡಾಪುಟವನ್ನೊಮ್ಮೆ ನೋಡಿದರೆ ಸತ್ಯ ಕಣ್ಣಿಗೆ ರಾಚುತ್ತದೆ. ಕೆಲಕ್ರೀಡೆಗಳ ವರದಿಗಳು ಪುಟದ ತುಂಬಾ, ಇನ್ಕೆಲವು ಮೂಲೆಗುಂಪು. ಪ್ರೆಸ್ ಮೀಟ್ ಕರೆದು ಮಾಹಿತಿಯನ್ನು ಧಾರಾಳವಾಗಿ ನೀಡಿದ್ದರೂ, ಈ ಕ್ರೀಡಾಕೂಟದ ಕುರಿತು ಪತ್ರಿಕೆಗಳಲ್ಲಿ ಬಂದದ್ದೆಷ್ಟು? ಜನರಿಗೆ ತಲುಪಿದ್ದೆಷ್ಟು? ನಾಯಿ ಬಾಲ ಡೊಂಕು, ಸರಿ, ಚಿಕ್ಕದಾಗಿ ಹಾಕಿದ್ದರೂ ಪರವಾಗಿಲ್ಲ, ಆದರೆ ವಿಕಲಚೇತನರೆಂದು ಯಾಕೆ ಅವಮಾನ ಮಾಡುತ್ತೀರಿ? IWAS (International wheelchair & Amputees Sports Federation) World Games 2009 ಅಂದರೆ "ಅಂತರರಾಷ್ಟ್ರೀಯ ವಿಕಲಚೇತನರ ಕ್ರೀಡಾಕೂಟ" ಎಂತಲೇ??!!


ಪಾಶ್ಚಿಮಾತ್ಯ, ಅಭಿವೃಧ್ಧಿ ಹೊಂದಿರುವ ದೇಶಗಳಲ್ಲಿರುವ ಶೇಕಡಾ ಒಂದರಷ್ಟು ಸವಲತ್ತುಗಳು ಇವರಿಗೆ ನಮ್ಮ ದೇಶದಲ್ಲಿ ಇಲ್ಲ. ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಚಲನಚಿತ್ರ ಮಂದಿರಗಳಲ್ಲಿ ಇವರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಎಷ್ಟಿದೆ ನಮ್ಮಲ್ಲಿ? ಬಸ್ ಗಳಲ್ಲಿ ಮೊದಲೆರಡು ಸೀಟ್ ರಿಸರ್ವೇಷನ್ ನೋಡಿರುತ್ತೇವೆ. ಅಷ್ಟೆತ್ತರ ಮೆಟ್ಟಿಲುಗಳನ್ನು ಆ ಜನಗಳ ತಿಕ್ಕಾಟದ ನಡುವೆಯೂ ಹತ್ತಿಬಂದು ಕೂರುತ್ತಾರೆ, "ವಿಕಲಚೇತನರಿಗೆ" ಎಂಬ ಹೆಸರಿನಡಿಯಲ್ಲಿ!! ಸರ್ಕಾರವನ್ನೂ, ವ್ಯವಸ್ಥೆಯನ್ನೂ ದೂರುವ ಮೊದಲು, ನಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಜರೂರತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಕ್ಷುಲ್ಲಕವೆನಿಸುವ ಎಷ್ಟೋ ಕೆಲಸಗಳು ಅವರಿಗೆ ಮಹತ್ವದ್ದಾಗಿರುತ್ತವೆ ಎನ್ನುವ ಅರಿವು ನಮಗಿರಬೇಕು. "ಪಾಪ.." ಮೊದಲು ಈ ಪದವನ್ನು ಇವರ ಮುಂದೆ ಪ್ರಯೋಗಿಸುವುದನ್ನು ನಿಲ್ಲಿಸಿ ದಯವಿಟ್ಟು! ನಮ್ಮ ಕರುಣೆಯ ಅಗತ್ಯ ಅವರಿಗಿಲ್ಲ. ಅವರ ನ್ಯೂನ್ಯತೆಯನ್ನು ಪದೇಪದೇ ನೆನಪಿಸಿ ಅವರ ಅಂತ:ಶಕ್ತಿಯನ್ನು ಕೊಲ್ಲುವ ಕೆಲಸ ಮೊದಲು ನಿಲ್ಲಬೇಕಿದೆ. "ಮೊದ್ಲೇ ಕೈಯಿಲ್ಲ, ನೀನ್ಯಾಕೆ ಬರ್ಲಿಕ್ಕೆ ಹೋದೆ, ನಾನೇ ತಂದುಕೊಡ್ತಾ ಇರ್ಲಿಲ್ವ?", "ಕೈಕಾಲಿಲ್ಲ, ಆ ಕುರ್ಚಿ ಮೇಲೆ ಕುತ್ಕೊಂಡು ಶಾಪಿಂಗ್ ಮಾಡೋ ಹುಚ್ಚು ಏನು ಇವ್ಳಿಗೆ, ಯಾರ್ಗಾದ್ರು ಹೇಳಿದ್ರೆ ತಂದ್ಕೊಡ್ತಾ ಇರ್ಲಿಲ್ವ?... ಇಂತಹ ಪ್ರಜ್ಞಾಹೀನ ಮಾತುಗಳನ್ನಾಡುವವರಿಗೆ "ವಿಕಲ ಚೇತನ" ಎಂಬ ಪದ ಸರಿಯಾಗಿ ಒಪ್ಪುತ್ತದೆ. ಒಂದು ದಿನ ಬಿಎಮ್ಟಿಸಿ ಬಸ್ಸಿನಲ್ಲಿ, ಕಾಲು ಸ್ವಲ್ಪ ಊನವಾಗಿದ್ದ ಮಹಿಳೆಯೊಬ್ಬರು ಹತ್ತಿದ್ದರು. ಅವರಿಗಾಗಿ ಕಾದಿರಿಸಲಾಗಿದ್ದ ಸೀಟಿನಲ್ಲಿ ಯುವತಿಯೊಬ್ಬಳು ಹ್ಯಾಂಡ್ಸ್ ಫ್ರೀ ಬಳಸಿ ಮಾತನಾಡುವುದರಲ್ಲಿ ನಿರತಳಾಗಿದ್ದಳು. ಆದ್ದರಿಂದ ಸ್ವಲ್ಪ ಜೋರಾಗೇ ಹೇಳಿ ಎಬ್ಬಿಸಿ ಕೂರಬೇಕಾಯಿತು. ಅಷ್ಟಕ್ಕೇ ನನ್ನ ಪಕ್ಕ ನಿಂತಿದ್ದ ವ್ಯಕ್ತಿ, "ಕಾಲು ಸರಿಯಿಲ್ದಲೇ ಇಷ್ಟು ಜೋರು ಬಾಯಿ, ಇನ್ನೇನಾದ್ರು ಅದೂ ಸರಿಯಿದ್ದಿದ್ದ್ರೆ...." ಅಂದ್ರು. ನಾನಂದೆ "ನೀವೊಂದೆರಡ್ನಿಮಿಷ ಅವರ ಥರ ಕಾಲು ಸೊಟ್ಟಗೆ ಮಾಡ್ಕೊಂಡು ನಿಂತ್ಕೊಳಿ ನೋಡೋಣ?". ಆಕೆ ತನ್ನ ಹಕ್ಕು ಚಲಾಯಿಸಿದ್ದೇ ತಪ್ಪೇ?! "Treat people, like the way you want to be treated" - ಒಳ್ಳೆಯ ಜೋಕ್ ಅನ್ಸತ್ತೆ. ನಮ್ಮ ತಟ್ಟೇಲಿ ನಾಯಿನೇ ಸತ್ತು ಬಿದ್ದಿರತ್ತೆ, ಆದರೆ ನಮ್ಮ ಮಾತೆಲ್ಲ ಪಕ್ಕದವರ ತಟ್ಟೆಯಲ್ಲಿ ಬಿದ್ದಿರುವ ನೊಣದ್ದೇ! ಇದೇ ಪಾಶ್ಚಿಮಾತ್ಯ ದೇಶದಲ್ಲಾಗಿದ್ದರೆ.......! ನಮಗೆ ಒಗ್ಗತ್ತೋ ಇಲ್ವೋ, ನಮಗೆ ಬೇಕೋ ಬೇಡ್ವೋ, ಆದ್ರೂ ಪಾಶ್ಚಿಮಾತ್ಯರ ಉಡುಗೆ-ತೊಡುಗೆ, ಆಹಾರ ಕ್ರಮ ಇವೆಲ್ಲವನ್ನೂ ಢಾಳಾಗಿ ಅನುಕರಣೆ ಮಾಡ್ತೀವಿ, ಆದರೆ ಅವರ ಸೃಜನಶೀಲತೆ, ಸಹಾಯಹಸ್ತ, ಶಿಸ್ತು, ಸಮಯಪ್ರಜ್ಞೆ ನಮಗ್ಯಾಕೋ ಬೇಕಿಲ್ಲವಾಗಿದೆ!


ಜನರ ಅಲ್ಪ ಪ್ರೋತ್ಸಾಹದ ನಡುವೆಯೂ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಿದ ಆಯೋಜಕರಿಗೆ ವಂದನೆಗಳು. ಪದಕ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಯಾರು ಸೋತರೂ, ಯಾರು ಗೆದ್ದರೂ, ಕೊನೆಗೆ ಗೆಲ್ಲುವುದು ಕ್ರೀಡೆಯೇ ಎನ್ನುವ, ದೇಶ ಭಾಷೆಗಳನ್ನುಮೀರಿದ ಆ ಕ್ರೀಡಾಮನೋಭಾವದಿಂದ ಆಡುತ್ತಾ ಕ್ರೀಡಾಕೂಟಕ್ಕೆ ಮೆರುಗು ನೀಡಿದ ಕ್ರೀಡಾಪಟುಗಳು, ಮಾಕಿ-ಮಂಕಿ ಎನ್ನುತ್ತ ಮೈದಾನವನ್ನು ರಣರಂಗವಾಗಿಸುವ, ಕ್ರೀಡೆಯ ಉದ್ದೇಶಕ್ಕೇ ಮಸಿಬಳಿಯುವಂತಹ "ಡೋಪಿಂಗ್" ನಂತಹ ಅಭ್ಯಾಸವನ್ನು ಹುಟ್ಟು ಹಾಕಿರುವ ಸಕಲಾಂಗರ ಕ್ರೀಡಾಕೂಟಗಳಿಗೆ ನಿಜಕ್ಕೂ ಮಾದರಿಯಾಗಿದ್ದರು. ಜೀವನದಲ್ಲಿ ಸಾಧನೆಗೈಯಲು ಬೇಕಾಗಿರುವುದು ಕೇವಲ ಅಂಗಾಂಗಗಳಲ್ಲ, ಆಸಕ್ತಿ, ಛಲ, ಚೇತನ, ಚೈತನ್ಯ. ಅಂತಹ ಅಂತ:ಶಕ್ತಿಯ ಸದುಪಯೋಗದಲ್ಲಿ ಈ "ಸಚೇತ"ರು ನಮಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಸಚೇತನರನ್ನು, ವಿಕಲಚೇತನರೆಂದು ಅವಮಾನ ಮಾಡಿದ್ದರೆ, ಹಾಗೆ ಕರೆವನನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂಡಿ ಹಿಪ್ಪೇಕಾಯಿ ಮಾಡಿಹಾಕುತ್ತಿದ್ದರು (Sue ಮಾಡುತ್ತಿದ್ದರು). ಆದರೆ ಇದು ನಮ್ಮ ಭಾರತ. ಅದರಲ್ಲೂ ಕಸ್ತೂರಿಯ ಕಂಪಿರುವ ಕನ್ನಡದ ಕರ್ನಾಟಕ. ಇಲ್ಲಿ ಸಬ್ ಕುಚ್ ಚಲ್ತಾ ಹೈ! ಭಾಷೆಯನ್ನೂ, ಭಾವನೆಗಳನ್ನೂ any one can take for a ride! It's a silly matter you know![ಇಂದು ವಿಶ್ವ ಅಂಗವಿಕಲರ ದಿನ. ಇವರುಗಳು ನಮ್ಮ ಕರುಣೆಯಿಂದಲ್ಲ, ಅವರ ಹಕ್ಕಿನಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ. ನಮ್ಮಿಂದೇನಾದರೂ ಸಹಾಯವಾಗುವಂತಿದ್ದರೆ ಮನ:ಪೂರ್ವಕವಾಗಿ ಮಾಡೋಣ. ಸಾಧ್ಯವಾಗದಿದ್ದಲ್ಲಿ ಸುಮ್ಮನಿರೋಣ, ಆದರೆ ಅವರ ಆ ಬದುಕೆನೆಡೆಗಿನ ಪ್ರೀತಿಗೆ, ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡ.]

Monday, November 30, 2009

ಮಹಾಶ್ವೇತ

"ಶರಣ್ರೀ... ಏನ್ರೀ ಭಾಳ ಬಿಜಿ ಇರಂಗದ. ಕಾಣಂಗೇ ಇಲ್ವಲ್ಲಪ್ಪ ಮಂದಿ!"

"ಹಂಗೇನಿಲ್ರೀ... ಹಿಂಗೇ ನಡೀಲಿಕ್ಹತ್ತದ. ನೀವೇ ಭಾಳ ಬಿಜಿ ಇದ್ದೀರಿ ಕಾಣ್ತದ. ಮುಂಜಾನಿನೂ ಕಾಣಂಗಿಲ್ಲ, ಸಂಜಿಮುಂದೂ ಕಾಣಂಗಿಲ್ಲ. ರೂಮ್ ಏನಾರ ಬದ್ಲಿ ಮಾಡೀರೇನ್ ಮತ್ತ?"

"ಇಲ್ರೀ, ಊರ್ಕಡೀಗೆ ಹೋಗಿದ್ನಾ.."

"ಮನ್ಯಾಗ ಎಲ್ರೂ ಆರಾಮಿದಾರಲ್ರೀ ಮತ್ತ? ಇಲ್ಲಾ... ಹೋಳ್ಗೀ ಊಟ ಏನಾದ್ರೂ ಹಾಕಸ್ತೀರೇನಪ್ಪ ಮತ್ತ?"

"ಅದನ್ನೇನ್ ಕೇಳ್ತೀರಿ.. ಭಾರಿ ದೊಡ್ಡ್ ಕಥಿನ ಅದ ಅದು. ನಿಮ್ ಪುಸ್ತಕಾನ ಚೀಲಕ್ಹಾಕಿ ಕುಂದರ್ರೀ ಮೊದ್ಲು. ನಾ ಹೇಳ್ತೀನಂತ.."

"ಶುರು ಹಚ್ಕೊಳ್ರೀ ನಿಮ್ ಕತಿನ.. ಮಳಿ ಬಂದ್ ನಿಂತದ. ಕಡೀಮಿ ಅಂದ್ರೂ ಎರಡೂವರಿ ತಾಸಾಗ್ತದ ಮನಿ ಮುಟ್ಲಿಕ್ಕ"

"ಬೇಸ್ತ್ವಾರ ಮನಿಗೆ ಫೋನ್ ಹಚ್ಚಿದ್ನಾ ನಮ್ಮಾವಾರು ಫೋನ್ ತಕ್ಕೊಂಡ್ರೀ.. ಎರಡ್ ದಿನ ಸೂಟಿ ತಗೊಂಡ್ ಬಾರ್ಪಾ ಊರಿಗೆ, ಹಿಂಗೆ ಕೆಲ್ಸದ ಅಂದ್ರೀ.. ನಂಗೂ ಈ ಕೆಲ್ಸಬೊಗ್ಸಿ, ಆ ಬಾಸು ಎಲ್ಲ ಸಾಕಾಗಿತ್ತಾ, ಸಿಕ್ ಲೀವ್ ಬೇರೆ ಬೇನಾಮಿ ಬಿದ್ದಿದ್ವಲ್ರೀ, ಅವ್ನೇ ಪ್ಲಾನ್ ಮಾಡ್ಕೊಂಡು ಹೊರೆಟ್ನಾ.."

"ಖರೇನ ನಿಮ್ಗ ಮೈಯಾಗ ಆರಾಮಿಲ್ಲ ಅನ್ಕೊಂಡಿದ್ನಲ್ರೀ ನಾ!"

"ಹ ಹ.. ಮುಂದೇನಾತು ಕೇಳ್ರಲ.. ಊರಿಗ್ ಹೋದ್ನಾ, ಮಾವಾರು ಹುಡುಗಿ ನೋಡ್ಲಿಕ್ಕೆ ಹೋಗೋದದ ಹೊರಡ್ನೀ ಅಂದ್ರೀ.. ಅಲ್ರೀ ಮಾವಾರೆ, ಮೊದ್ಲಿಗೆ ಹುಡುಗಿ ಫೋಟೊ ಗೀಟೋ ತೋರ್ಸ್ಬೇಕಲ್ರೀ ನೀವು, ಹಿಂಗೇ ನಿಂತ್ನಿಲುವ್ನಾಗೆ ಹೊರ್ಡು ಅಂದ್ರೆ ಹೆಂಗ್ರೀ? ಅಂದ್ನಾ. ಇಲ್ಲೋ ಮಾರಾಯ, ಭಾಳ ನಾಚಿಕಿ ಸ್ವಭಾವ ಐತಿ ಹುಡ್ಗೀದು. ಅಕಿದು ಪಟಗಿಟ ಏನೂ ಇಲ್ಲಂತ. ನಾನೆಲ್ಲ ನೋಡೀನಿ. ಛಲೋ ಮಂದಿ. ಹುಡ್ಗಿನೋ ಭಾಳ ಚಂದ ಅದಾಳ. ನೀನೇ ನೋಡ್ತೀಯಂತಲ ನಡಿ.. ಅಂದ್ರೀ. ಸರಿ ಅಂತಂದು ಹೊರಟ್ನಾ.."

"ಹ್ಮ್ಮ್.. "

"ನಾನು, ನಮ್ಮವ್ವ, ಅಪ್ಪಾರು, ಚಿಕ್ಕಕ್ಕ, ಮಾವಾರು ಹೋಗಿದ್ವಿ. ಹುಡ್ಗಿ ಕರ್ಕೊಂಡು ಬಂದ್ರೀ. ನನಿಗೆ ಕೈ ಕಾಲು ನಡುಗ್ಲಿಕ್ಕೇ ಹತ್ತಿದ್ವು ರೀ.. ಒಮ್ಮಿಗೇ ಛಳಿಜ್ವರ ಬಂದಂಗಾತು ನೋಡ್ರೀ.."

"ಯಾಕ್ರೀs?!!!"

"ಅಲ್ರೀ, ಏನ್ ಛಂದ ಇದ್ಲಂತೀರ್ರೀ ಹುಡ್ಗಿ!! ಕೈತೊಳ್ಕೊಂಡು ಮುಟ್ಬೇಕ್ರೀ.."

"ಏನ್ರೀ ನೀವೂ ಈ ಮಟ್ಟಿಗೆ ಹಾಸ್ಯ ಮಾಡೋಂಗಿದ್ಲೇನ್ರೀ ಹುಡುಗಿ??!!"

"ಅಯ್ಯೋ ಶಿವ್ನೇ! ಹಂಗ್ಯಾಕಂತೀರ್ರೀ? ಖರೇನೇ ಭಾಳ ಛಂದಿದ್ಲ್ ರೀ ಹುಡ್ಗಿ. ಬೆಳ್ಳಗೆ ಭಾರೀ ಲಕ್ಷಣ ಇದ್ಲ್ ರೀ! ಒಳ್ಳೇ ಪ್ರೀತಿ ಝಿಂಟಾ ಇದ್ದಂಗಿದ್ಲು ರೀ. ನಕ್ರೆ ಹಂಗೇ ಡಿಂಪಲ್ ಬೀಳ್ತಿದ್ವು ರೀ. ನಾ ನೋಡಿದ್ರ ಹಿಂಗದೀನಿ. ಭದ್ರಾವತಿ ಚಿನ್ನ. ನಾನೇನು ಅಕೀನ ಒಪ್ಪದು, ಇನ್ನೂ ಅಕೀನ ನನ್ನ ಒಪ್ಪಿದ್ರ ಭೇಷಾತು ಅಂದ್ಕೊಂಡೆ ನಾ.."

"ಮುಂದೇನಾತ್ರೀ?"

"ಸರಿ ಅಂತಂದು, ಮನಿಗೆ ಬಂದ್ವಿ. ನಮ್ಮ ಅವ್ವಾರಿಗೆ ಹೇಳಿ ಕಳಿಸಿದ್ರೀ ಅವ್ರು. ಅವ್ವ, ಮಾವಾರು ಹೋದ್ರೀ. ಅವ್ವಾರನ್ನ ಒಳಕರ್ದು ಹುಡ್ಗಿ ಕುತ್ಗಿ ಹತ್ರ ಒಂದು ಸಣ್ ಬಿಳಿ ರಂಗಿಂದು ಕಲೆ ತೋರ್ಸಿ, ದೊಡ್ಡಾಕ್ಟ್ರಿಗೆ ತೋರ್ಸೇವ್ರೀ, ತೊನ್ನಿರ್ಬಹುದು ಅಂದಾರ ಅಂದ್ರಂತ್ರೀ.."

"........................."

"ಭಾಳ ಬೇಸ್ರಾಕತ್ರೀ. ಹಿಂಗಾಗ್ಬಾರ್ದಿತ್ತಲ್ರೀ. ಅಲ್ಲ ಆಟೊಂದು ಛಂದ ಇದ್ಳ್ ರೀ ಹುಡ್ಗಿ.. ಅಕೀಗೆ ಹಿಂಗಂದ್ರ..."

".........................."

"ಏನ್ರೀ ಸೈಲೆಂಟ್ ಆಗ್ಬಿಟ್ರಲ್ರೀ, ಏನಾರ ಮಾತಾಡ್ರೀ.."

"..ಹಿಂಗ ಏನೋ... ಆಮೇಲೇನಾತ್ರೀ?"

"ಇಲ್ರೀ, ಅದು, ಅದೇನೋ ಅಂತಾರಲ್ರೀ.. ಹಾ.. ವಂಶಪಾರಂಪರಿಕ.. ಹಂಗಂತ್ರೀ ಅದು. ಮನ್ಯಾಗ ಯಾರೂ ಒಪ್ಲಿಲ್ಲ"

"ಖಾತ್ರಿ ಐತೇನ್ರೀ ನಿಮಗ? ಅದು ಖರೇನ ಹೆರೆಡಿಟ್ರಿ ಅಂತ? ಎಲ್ಲೋ ಓದಿದ್ನಾ ಹಂಗಲ್ಲ ಅಂತ.."

"ಇಲ್ರೀ ಅದು ಹಂಗ ಅಂತ.."

"ಅವ್ರ ಮನ್ಯಾಗೆ ಬೇರೆ ಯಾರಿಗಾದ್ರೂ ಐತೇನ್ರೀ ಇಲ್ಲಾ ಇತ್ತಂತೇನ್ರೀ?"

"ನನಿಗೆ ತಿಳ್ದಂಗ ಯಾರಿಗೂ ಇಲ್ರೀ.."

"ಮತ್ತಕೀಗ ಹೆಂಗ್ಬಂತಂತ್ರೀ?!"

"ನಂಗೊತ್ತಿಲ್ರೀ. ಹಂಗೂ ಅಕ್ಕ ಕೇಳಿದ್ಲ್ರೀ.. ಹೆಂಗಪ ನೀನೇನಂತಿ ಅಂತ.. ನಾನೇನನ ಹ್ಞೂ ಅಂದ್ರ ಅವ್ವ ಪೊರಿಕಿ ತಗಂಡ್ ಸಾಯೋ ತನ ಹೊಡೀತಾಳ..ಅಕಿ ಒಪ್ಪಂಗಿಲ್ತಗಿ ಅಂದ್ನಾ.."

"ಮದ್ವೀ ಮೊದ್ಲೇ ನಿಮ್ಮನ್ನ ಕರ್ಸಿ ಹೇಳಿದ್ದು ಛಲೋ ಆತ್ನೋಡ್ರಿ.. ಭಾಳ ಒಳ್ಳೆ ಮಂದಿ ಅದಾರ.. ಇಲ್ಲಾಂದ್ರ ಅದೇನೋ ಗಾದೆ ಹೇಳ್ತಾರಲ್ರೀ.. ಸಾವ್ರ ಸುಳ್ಹೇಳಿ ಒಂದ್ಮದ್ವಿ ಮಾಡು ಅಂತ, ಹಂಗೇನಾದ್ರು ಆಗಿದ್ರೆ ಏನ್ ಕತಿರೀ?"

"ಇಲ್ರೀ, ಅವ್ರು ಹೇಳ್ಳಿಕ್ಕೇ ಬೇಕಿತ್ರೀ. ಯಾವಾಗ ಗೊತ್ತಾದ್ರೂ ಹುಡ್ಗಿಗಾನ ರೀ ಕಷ್ಟ. ಒಂದಪ ಮದ್ವಿ ಆದ್ಮೇಲೆ ಗೊತ್ತಾತು ಅಂತಿಟ್ಕೋರ್ರೀ.... ಆಮೇಲಾದ್ರೂ ಅಕಿ ಸುಖ್ನಾಗಿ ಇರ್ತಾಳಂತ ಏನ್ಖಾತ್ರಿ ಇದರೀ ನಿಮಗ? ಕಟ್ಕೊಂಡವ ಬಿಟ್ರೇನ್ಮಾಡ್ತಿದ್ರೀ? ಅವ್ರು ಹೇಳ್ಳೇ ಬೇಕು.. ಹಂಗದ ಸಂದರ್ಭ. ಕಷ್ಟದ ರೀ ಹೆಣ್ಮಕ್ಳ ಜೀವನ.."

"..............................."

[ಯೌವನದ ಉನ್ಮಾದದಲ್ಲಿ ಸಂತೋಷವನ್ನು ತನ್ನದೇ ರೀತಿಯಲ್ಲಿ ಅನುಭವಿಸಿ, ವಾಸಿಯಾಗಲಾರದ ಖಾಯಿಲೆಯನ್ನು ಅಂಟಿಸಿಕೊಂಡು, ಅದನ್ನು ಮುಚ್ಚಿಟ್ಟು ಮದುವೆಯಾಗಿ, ತನ್ನ ಪತ್ನಿಗೂ ರೋಗವನ್ನು ಧಾರೆಯೆರೆದಿದ್ದವನು................ತನ್ನ ಕೆಲಸದ ಬಗ್ಗೆ ಸುಳ್ಳುಮಾಹಿತಿ ನೀಡಿ ಮದುವೆ ಮಾಡಿಕೊಂಡು ಬಂದು, ಈಗ ತನ್ನ ಹೆಂಡತಿಯ ದುಡಿಮೆಯಲ್ಲಿ ಜೀವಿಸುತ್ತಿರುವುದಲ್ಲದೆ, ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾ, ಮನೆಯವರಿಂದ ದೂರವಿಟ್ಟಿರುವ ಇನ್ನೊಬ್ಬ....... ಕಣ್ಣಾರೆ ಕಂಡಿದ್ದ ಈ ಮಹಾತ್ಮರ ಪತ್ನಿಯರು ಹಾಗೇ ಕಣ್ಮುಂದೆ ಮತ್ತೊಮ್ಮೆ ಹಾದು ಹೋಗುತ್ತಿದ್ದರು......]

"ಮತ್ತೆ ಸೈಲೆಂಟಾದ್ರಲ್ರೀ.. ಏನ್ ಯೋಚ್ನೆ ಮಾಡ್ಲಿಕ್ಹತ್ತೀರಿ?"

"ಏನಿಲ್ರೀ.. ನೀವು ಹೇಳ್ರಲ.."

"ನನ್ನ ದೋಸ್ತ್ ಒಬ್ನದಾನ್ರೀ. ಇದೇ ಪ್ರಾಬ್ಲಮ್ ರೀ. ಹುಡ್ಗಿನ ಎಲ್ರೂ ಒಪ್ಪಿದಾರ್ರೀ. ಮಾತುಕತಿ ಎಲ್ಲ ನಡದದ. ಆದ್ರ ಆಕಿ ಇವ್ನ ಜೋಡಿ ಮಾತ್ರ ಹೇಳ್ಯಾಳಂತ ಹಿಂಗ ಕಾಯಿಲೆ ಅಂತಂದು. ಅವ ನಂಗೇನೂ ಪ್ರಾಬ್ಲಮ್ ಇಲ್ಲ. ಮನ್ಯಾಗ್ ಕೇಳ್ಹೇಳ್ತೀನಿ ಅಂದಾನಂತ್ರೀ. ಮನ್ಯಾಗ್ ಅದೆಂಗ್ ಹೇಳ್ತಾನೋ! ಹೇಳಿದ್ರ ಖರೇನ ಮದ್ವಿ ಮುರಿದ್ ಬೀಳ್ತದ.."

[ಅಲ್ವ! ನೆನ್ನೆ ಮೊನ್ನೆ ಬಂದ ಹುಡುಗಿಗಾಗಿ ಮನೆಯವರ ವಿರೋಧ ಕಟ್ಟಿಕೊಳ್ಳಬೇಕೆ? ಇಷ್ಟು ವರ್ಷ ಸಾಕಿ ಬೆಳೆಸಿದ ತಂದೆತಾಯಿಯರ ಮನಸ್ಸಿಗೆ ನೋವುಂಟು ಮಾಡಬೇಕೆ? ಮನೆಯ ನೆಮ್ಮದಿ ಕದಡಬೇಕೆ? ಮದುವೆ ಅಂದ್ರೆ ಇವರಿಬ್ಬರೇ ಅಲ್ಲ, ಎರಡು ಕುಟುಂಬಗಳ ನಡುವಿನ ಸಂಬಂಧ. ಎಲ್ಲರೂ ಒಪ್ಪಿ ಆದ್ರೆ ಸರಿ. ಅದು ಬಿಟ್ಟು ಹುಡುಗನಿಂದ ಮಾತ್ರ ಈ ತ್ಯಾಗದ ನಿರೀಕ್ಷೆ ಎಷ್ಟು ಸರಿ? ಅನುವಂಶಿಕವಾದ ಕಾಯಿಲೆ ಅಂತ ಮನದ ಮೂಲೆಯಲ್ಲೆಲ್ಲೋ ಭಯ ಇದ್ದೇ ಇರತ್ತೆ. ಜನರ ಕೊಂಕಿನಿಂದಲೂ ತಪ್ಪಿಸಿಕೊಳ್ಳಲಾರ.. ಹೆತ್ತತಾಯಿಗಿಂತ ನೆನ್ನೆ ಮೊನ್ನೆ ನೋಡಿದವಳು ಹೆಚ್ಚಾದಳು.. ಇತ್ಯಾದಿ..]

"ಕಷ್ಟ ಐತ್ರೀ ಹುಡುಗ್ರ ಜೀವ್ನ...."

"ಹೂನ್ರಿ.. ಎಲ್ಲ ಭಾರಿ ಕಾಂಪ್ಲಿಕೇಟೆಡ್ ಅನ್ನಿಸ್ಲಿಕ್ಹತ್ತದ. ಏನೇ ಆಗ್ಲಿ ರೀ ಆ ಹುಡುಗೀನ ಮಾತ್ರ ನಾ ನನ್ ಲೈಫ್ನಾಗೇ ಮರೆಯಂಗಿಲ್ಲ ಬಿಡ್ರೀ. ನಾ ಬೇರೆ ಮದ್ವಿ ಆದ್ರೂ ಅಕಿ ಮಾತ್ರ ನೆನಪಿದ್ದೇ ಇರ್ತಾಳ್ರೀ.."

"......................................."

[ಸುಧಾಮೂರ್ತಿಯವರ "ಮಹಾಶ್ವೇತ" ನೆನಪಾಗುತಿತ್ತು. ಹೆಸರಿಗೆ ತಕ್ಕಂತೆ ಅನುಪಮ ಸುಂದರಿಯಾದ "ಅನುಪಮಾ" ಕಾದಂಬರಿಯ ನಾಯಕಿ. ಬಡ ಸ್ಕೂಲ್ ಮಾಸ್ತರ್ ಶಾಮಣ್ಣನ ಮೊದಲನೇ ಹೆಂಡತಿ ಮಗಳು. ಮಹಾಚತುರೆ. ಈಕೆಯ ಸೌಂದರ್ಯಕ್ಕೆ ಮಾರುಹೋದ ಪುಂಡರೀಕ ವೈದ್ಯನಾದ ಆನಂದ. ಮಹಾನ್ ಶ್ರೀಮಂತ, ಅಷ್ಟೇ ರೂಪವಂತ. ಮದುವೆಯ ನಂತರ ಕಾಣಿಸಿಕೊಳ್ಳುವ ಸಣ್ಣ ಬಿಳಿಯ ಕಲೆಯೊಂದು "ಮಹಾಶ್ವೇತ"ವಾಗಿ ಅನುಪಮಳಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ರೋಗವ ಮುಚ್ಚಿಟ್ಟು ಮದುವೆಯಾದಳು ಎನ್ನುವ ಆರೋಪ ತೂಗುಗತ್ತಿಯಂತೆ ಕಾಡುತ್ತಿರುವಾಗ, ಆಕೆ ಮೋಸ ಮಾಡಿಲ್ಲ ಎನ್ನುವುದಕ್ಕೆ ಇದ್ದ ಒಬ್ಬನೇ ಸಾಕ್ಷಿಯಾದ ಆಕೆಯ ಗಂಡನೂ ಮೌನಕ್ಕೆ ಶರಣಾಗುತ್ತಾನೆ. ವೈದ್ಯನಾಗಿ leukoderma ಕೇವಲ ಒಂದು cosmetic disease, ಅಲಂಕಾರಿಕ ಕಾಯಿಲೆ ಎಂದು ತಿಳಿದವನೇ ಕೈಬಿಟ್ಟ ಮೇಲೆ, ಬಡತನದಲ್ಲಿ ಬೇಯುತ್ತಿರುವ ತವರಿನಲ್ಲೂ ಆಸರೆ ಸಿಗದೆ, ಗಂಡನ ಇನ್ನೊಂದು ಮದುವೆ ತಯಾರಿಯ ಸುದ್ದಿ ತಿಳಿಯಲು, ಸಾಯುವ ಸ್ಥಿತಿಗೆ ಹೋದ ಅನುಪಮ, ತನ್ನ ಅಂತ:ಶಕ್ತಿಯನ್ನು ಕಳೆದುಕೊಳ್ಳದೆ ಮರಳಿಬಂದು ಒಂಟಿಯಾಗಿ ಜೀವನದಲ್ಲಿ ಸಾಧನೆಗೈಯುತ್ತಾಳೆ. ಜೀವನ ಭಾಗ ಎರಡರಲ್ಲಿ ಒಬ್ಬ ಪ್ರಜ್ಞಾವಂತ ವೈದ್ಯನ ನಿಶ್ಕಲ್ಮಶ ಸ್ನೇಹ ದೊರೆಯುತ್ತದೆ. ಅದನ್ನು ಪ್ರೇಮವನ್ನಾಗಿಸುವ ಅವಕಾಶವನ್ನು ನಿರಾಕರಿಸಿ, ಅನಿರೀಕ್ಷಿತವಾಗಿ ಮರಳಿಬರುವೆನೆಂದು ಕೇಳುವ ಹಳೆಯ ಗಂಡನನ್ನೂ ನಿರಾಕರಿಸಿ, ಸ್ವಾಭಿಮಾನಿಯಾಗಿ ಅನುಪಮ ಜೀವನದ ದೋಣಿಯನ್ನು ಮುನ್ನಡೆಸುತ್ತಾಳೆ.

ಸುಧಾಮೂರ್ತಿಯವರದೇ "Wise & Otherwise" ನಲ್ಲಿ ಇನ್ನೊಂದು ಕಥೆಯಿದೆ. "ಮಹಾಶ್ವೇತ" ವನ್ನು ಓದಿ, ತನ್ನ ನಿರ್ಧಾರವನ್ನು ಬದಲಿಸಿ, leukoderma ಪೀಡಿತ ಹೆಣ್ಣೊಬ್ಬಳಿಗೆ ಬಾಳು ಕೊಟ್ಟ ಸತ್ಯ ಘಟನೆ. ಇವೆರಡನ್ನೂ ಓದಿದಾಗ, ಹೀಗೂ ಉಂಟೆ?! ಇದು ಜೀವನವಲ್ಲ ಕಥೆ.... ಎಂದು ಸುಮ್ಮನಾಗಿದ್ದೆ... ಆದರೀಗ.........]

"ಆವಾಗ್ಲಿಂದ ನೋಡ್ಲಿಕ್ಹತ್ತೇನಿ..ಏನೋ ಬ್ಯಾಕ್ಗ್ರೌಂಡ್ ಪ್ರೊಸೆಸ್ ನಡ್ಸೀರಿ.. ಏನದು ನಮ್ಗೊಂದಿಷ್ಟು ಹೇಳ್ರಲಾ.."

"ಏನಿಲ್ರೀ..ಹಿಂಗss.."

"ಈಗೇನು..ನೀವು ಹೇಳ್ತೀರೋ ಇಲ್ಲೋ?"

[ನಿಮ್ಮ ಕರ್ಮ!.. ನನ್ನ ತಲೆಯ ಹುಳ ಅವರ ತಲೆಗೆ ವರ್ಗಾವಣೆ ಮಾಡಿದ್ದಾಯ್ತು]

"ಈಗ ನಾನೇನ್ ಮಾಡ್ಬೇಕಂತೀರಿ?"

"ಅದ್ಕೇ ಹೇಳಿದ್ನಾ..ಸುಖಾಸುಮ್ನೆ ಯಾಕ್ ಕೆದಕ್ತೀರಿ, ನಾ ಹೇಳಂಗಿಲ್ಲ ಅಂತ..."

"......................"

"ಒಂದಂತೂ ಖರೇ ರಿ.. ನೀವೇನ್ ಮಾಡ್ಬೇಕಂತ ಯಾರೂ ನಿಮ್ಗೆ ಹೇಳಂಗಿಲ್ಲ. ಹೇಳ್ಲೂ ಬಾರ್ದು. ಅದು ಸರಿಯಿರಂಗಿಲ್ಲ.. ನಿರ್ಧಾರ ಯಾವತ್ತಿದ್ರೂ ನಿಮ್ದೇ ಇರ್ತೈತ್ರೀ.."

"ಅಂತೂ ಒಳ್ಳೇ ಇಬ್ಬಂದಿಗೆ ಸಿಕ್ಸಿದ್ರೀ ರೀ ನನ್ನ.."

"....................."

[ಅವರು ಸಿಕ್ಕಾಗೆಲ್ಲ ಈ ವಿಷಯ ನೆನಪಿಸ್ತಾರೆ. ಸಾಧ್ಯವಾದಷ್ಟು ವಿಷಯಾಂತರ ಮಾಡ್ತೀನಿ. ಸಿಕ್ಕಾಗೆಲ್ಲ ಈ ವಿಷ್ಯ ಮಾತ್ರ ಮಾತಾಡೋದು ಬೇಡಪ್ಪ ಅಂತ ಬೇಡ್ಕೋತೀನಿ! ನಾ ಮಾಡಿದ್ದು ತಪ್ಪಾ? ಅವ್ರಿಗೆ ಆ ಕಥೆ ಹೇಳಬಾರದಿತ್ತಾ? ನನಗೇನೋ ಒಂದು ಬಗೆಯ ಅಪರಾಧಿ ಭಾವ ಕಾಡ್ತಾ ಇದೆ. ಯಾಕಂದ್ರೆ ಅವರ ಸ್ಥಾನದಲ್ಲಿ ನಾನಿದ್ದಿದ್ದ್ರೆ ಏನು ಮಾಡ್ತಿದ್ದೆ? ಉತ್ತರ ಸಿಕ್ಕಿಲ್ಲ.......... ನಿರ್ಧಾರ ಸುಲಭವಲ್ಲ...........]

Friday, November 06, 2009

ಅರ್ಥ

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ "ಅರ್ಥ". - ಇದು "ಅರ್ಥ" ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ - ೨೦೦೯) ನೀಡಿರುವ ಒಕ್ಕಣೆ.

"ಅರ್ಥ" - ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಚಿತ್ರ ರೂಪಿಸಿರುವ ಎಳೆಯ ಹಿನ್ನೆಲೆಯಲ್ಲಿ ಇದರ ಸಮರ್ಥನೆ ಸರಿಯಾಗಿ ಮೂಡಿಬಂದಿಲ್ಲವೆನ್ನಬಹುದು. ಹೊರಗಡೆ ತನ್ನ ಸ್ನೇಹಿತರೊಂದಿಗೆ, ವೇಶ್ಯೆಯಾದರೂ ರಾಣಿಯಮ್ಮ (ಅರುಂಧತಿ ಜತ್ಕರ್) ನೊಡನೆ ಶುದ್ಧ ಸ್ನೇಹದಿಂದಿರುವ ಸೀನಪ್ಪ, ಮನೆಗೆ ಬಂದೊಡನೆ ಉಗ್ರಪ್ಪನಾಗುತ್ತಾನೆ. ಏನೋ ನೆವ ತೆಗೆದು ರಂಪ ಮಾಡುತ್ತಾನೆ. ಹೆಂಡತಿಯನ್ನು ಹೊಡೆದು ಹಿಂಸಿಸುತ್ತಾನೆ. ಮಕ್ಕಳು ಮೂಕಪ್ರೇಕ್ಷಕರಾಗುತ್ತಾರೆ (ಸೀನಪ್ಪನ ಮಗ ಶ್ರೀಕಾಂತನ ದು:ಖ, ಅಸಹಾಯಕತೆ, ಹಾಗೂ ಗೊಂದಲಗಳ ನಿರ್ಭಾವುಕ ಅಭಿನಯ ಒಂದು ಕ್ಯಾಚ್). ಇಲ್ಲಿ ಆರ್ಥಿಕ ಬಿಕ್ಕಟ್ಟಿಗಿಂತಲೂ ಸೀನಪ್ಪನ ಮನಸ್ಥಿತಿಯೇ ಸಮಸ್ಯೆಗೆ ಕಾರಣವೇನೋ ಅನಿಸುತ್ತದೆ (ಮತ್ತೊಮ್ಮೆ ಬೀchi ಯವರ ಹುಚ್ಚು-ಹುರುಳಿನ ಹೆಂಡತಿಯನ್ನೇಕೆ ಹೊಡೆಯಬೇಕು? ನೆನಪಾಗುತ್ತದೆ). ನಾಲ್ಕು ಗೋಡೆಗಳ ನಡುವೆ ಇರುವ ಹೆಣ್ಣು, ಹೊರಗೆ ಹೋಗಿ ದುಡಿದುಕೊಂಡು ಬರುವ ಗಂಡನನ್ನೇನು ಪ್ರಶ್ನಿಸುವುದು ಎನ್ನುವ ಹಮ್ಮಿರಬಹುದು. ಅಷ್ಟೆಲ್ಲ ಹಿಂಸೆಯನ್ನು ಅನುಭವಿಸಿದ್ಯಾಗ್ಯೂ, ಮಗಳು "ಅಪ್ಪನ ಜೊತೆ ಟೂ ಬಿಡಮ್ಮ" ಎಂದು ಮುಗ್ಧವಾಗಿ ನುಡಿದಾಗ, "ನನ್ನ ಗಂಡನೊಡನೆಯೇ ಟೂ ಬಿಡಲು ಹೇಳುತ್ತೀಯೇನೆ?" ಎಂದು ಮಗಳಿಗೇ ಹೊಡೆಯುತ್ತಾಳೆ ಸೀನಪ್ಪನ ಹೆಂಡತಿ!! ಎಲ್ಲಿಯವರೆಗೂ, ಗಂಡನ ಎಲ್ಲ ಹಸಿವುಗಳನ್ನು ತೀರಿಸುವುದೇ ತಮ್ಮ ಜೀವನದ ಪರಮೋಚ್ಛ ಕರ್ತವ್ಯವೆಂದು ತಿಳಿದಿರುವ ಹೆಂಗಸರಿರುತ್ತಾರೋ, ಹೆಣ್ಣು ಸಹನಾಮೂರ್ತಿ, ಕ್ಷಮಯಾಧರಿತ್ರೀ ಎಲ್ಲವನ್ನೂ ಸೈರಿಸಿಕೊಂಡು ಹೋಗಬೇಕು ಆಗಲೇ ಸಂಸಾರ ಉಧ್ಧಾರವಾಗುವುದು ಎಂದು ಕಿವಿಯೂದುವವರು ಇರುತ್ತಾರೋ, ಅಲ್ಲಿಯವರೆಗೂ ಈ ನರಕದಿಂದವರಿಗೆ ಬಿಡುಗಡೆಯಿಲ್ಲ.

ಬಾಡಿಗೆ ಆಟೋ ಓಡಿಸುವ ದೈನಂದಿನ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಂತ ಆಟೋದ ಕಡೆ ಸೀನಪ್ಪನ ಮನಸ್ಸು ವಾಲುತ್ತದೆ (ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರೂ ಸ್ವಂತಕ್ಕೊಂದು ಸೂರು ಮಾಡಿಕೊಳ್ಳಲು ಹಪಹಪಿಸುವಂತೆ!). ಶ್ಯೂರಿಟಿ ಇದ್ದರೆ ಮಾತ್ರ ಸಾಲ ನೀಡುವ ಭಾರತೀಯ ಬ್ಯಾಂಕುಗಳ "ಅರ್ಥ" ವ್ಯವಸ್ಥೆ, ಕೊಡಿಸಿದ ಸಾಲದಲ್ಲಿ "ಪರ್ಸೆ೦ಟೇಜ್" ಕೇಳುವ ನಮ್ಮ ಭ್ರಷ್ಟಾಚಾರ ವ್ಯವಸ್ಥೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಅಜ್ಜಿಯ ಹೆಸರಿನಲ್ಲಿರುವ ಮನೆಯನ್ನು ಶ್ಯೂರಿಟಿಗಾಗಿ ನೀಡುವಲ್ಲಿನ ತೊಡಕಿನ ಬಗ್ಗೆ ಮುಂದಾಲೋಚಿಸಿ ಮಾತನಾಡುವ ಪತ್ನಿ ಮತ್ತೊಮ್ಮೆ ದೂಷಣೆಗೊಳಗಾಗುತ್ತಾಳೆ! ಶೇಕಡಾ ೧೪ ರಷ್ಟು ಬಡ್ಡಿ, ಸಾಲ ತೀರುವವರೆಗೆ ಬ್ಯಾಂಕಿನವರ ವಶದಲ್ಲಿಯೇ ಆಟೋ ಎನ್ನುವ ನಿಭಂದನೆಗಳ ನಡುವೆಯೂ, ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ ಎನ್ನುವ ಸಂಗತಿಯೊಂದೇ ಸೀನಪ್ಪನನ್ನು ವಿದೇಶೀ ಬ್ಯಾಂಕಿನ ಸಾಲದ ತೆಕ್ಕೆಗೆ ತಳ್ಳುತ್ತದೆ. "ತಿಮ್ಮಯ್ಯನಿಗೆ ಹಣ ಕಟ್ಟದೆ ಇದ್ರೆ, ಹಣ ಬಿಟ್ಟು ಬರೀ ಆಟೋ ಎತ್ಕೊಂಡು ಹೋಗ್ತಾನ, ಆದ್ರೆ ಈ ಪರದೇಶಿ ಬ್ಯಾಂಕಿನವ್ರು ಆಟೋ ಜೊತಿಗೆ ನಿನ್ನೂ ಎಳ್ಕೊಂಡು ಹೋದ್ರೇನ್ಮಾಡ್ತೀ?" ಎನ್ನುವ ರಾಣಿಯಮ್ಮನ ಮಾತುಗಳು ನಿಜಕ್ಕೂ ಯೋಚನಾರ್ಹವೆನಿಸುತ್ತವೆ. ಲಾಭವಿಲ್ಲದೇ ಯಾರೂ business ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ. ನಮಗೆ ಪುಕ್ಕಟೆಯಾಗಿ ಅಥವಾ ಕಡಿಮೆ ದರಕ್ಕೆ ಕೊಡಲು ಅವರು ಮಾಡುತ್ತಿರುವುದೇನೂ ದಾನವಲ್ಲ, ಸೇವೆಯಲ್ಲ; ವ್ಯಾಪಾರ. ಆದ್ದರಿಂದ ಅವರ "*" ಮಾರ್ಕುಗಳನ್ನು ಸರಿಯಾಗಿ "ಅರ್ಥ" ಮಾಡಿಕೊಂಡು ವ್ಯವಹರಿಸುವುದು ಕ್ಷೇಮ. ಸಾಲ ಕೇಳಲು ಬಂದಾಗ, ಕೊಡಿಸುವವ, ಒಮ್ಮೆ ಕಾರ್ಡ್ಸ್, ಮತ್ತೊಮ್ಮೆ ಚದುರಂಗ ಆಡುತ್ತಿರುವುದು ಮಾರ್ಮಿಕವಾಗಿದೆ.

ಸೀನಪ್ಪ ತನ್ನ ಸ್ನೇಹಿತರ ಜೊತೆಯಲ್ಲಿ "ಬಾರ್" ನಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಿರುವಾಗ "ನಾವು ಇಲ್ಲಿರಬಾರದಾಗಿತ್ತು, ಫಾರಿನ್ ನಲ್ಲಿರಬೇಕಾಗಿತ್ತು. ಆರಾಮಾಗಿರಬಹುದಾಗಿತ್ತು" ಅಂದುಕೊಳ್ಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ "ನಿನ್ನ ಮನೆಯವರ ಜೊತೆ ಫಾರಿನ್ನಾಗೆ ಮಾಡ್ತಾರಂತಲ್ಲ ಹಂಗೆ ವೀಕೆಂಡ್ ಮಾಡು, ನೆಮ್ಮದಿಯಾಗಿರ್ತೀಯ" ಅನ್ನೋ ಸಲಹೆ ಬರುತ್ತದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಮ್ಮ ಜನರಲ್ಲಿ "ಫಾರಿನ್" ಕುರಿತಾಗಿ ಇರುವ ತಪ್ಪು ಅಭಿಪ್ರಾಯಗಳನ್ನು ಕುರಿತು ಅಚ್ಚರಿಯಾಗುತ್ತದೆ! ಅಲ್ಲಿಯೂ ಭಿಕ್ಷುಕರಿದ್ದಾರೆ, ಕಳ್ಳರಿದ್ದಾರೆ, ಕೊಲೆಗಾರರಿದ್ದಾರೆ, ಅಕ್ರಮ ನಿವಾಸಿಗಳಿದ್ದಾರೆ, ವಲಸಿಗರಿದ್ದಾರೆ, ಹುಚ್ಚರಿದ್ದಾರೆ! ವರ್ಣಬೇಧದ ಸಣ್ಣ under current ಇನ್ನೂ ಹರಿಯುತ್ತಿದೆ! ಅಲ್ಲಿಯೂ ವಿವಿಧ ಜಾತಿಗಳಿವೆ, ಅಪ್ಪಟ ಲಂಪಟ "ಧರ್ಮ"ಗುರುಗಳಿದ್ದಾರೆ! ಒಂದು ಜಾತಿಯವರು ಇನ್ನೊಂದು ಜಾತಿಯ ಆರಾಧನಾ ಸ್ಥಳಕ್ಕೆ ಹೋಗುವುದಿಲ್ಲ, ಅದೇನೋ ಅಸಡ್ಡೆ, ಅಗೌರವ! ನಾವೆಲ್ಲ ಒಬಾಮನ ದೀಪಾವಳಿ ನೋಡಿ ಮರುಳಾದದ್ದೇ ಹೆಚ್ಚು! ಅದೇಕೋ ನಮ್ಮ ಮಾಧ್ಯಮಗಳಿಗೆ ನಮ್ಮ ಹುಳುಕುಗಳನ್ನು ವೈಭವೀಕರಿಸುವಲ್ಲಿ ಇರುವ ಉತ್ಸುಕತೆ ಅಲ್ಲಿನ ಮಾಧ್ಯಮಗಳಲ್ಲಿಲ್ಲ. ಅದೇಕೋ ನಮ್ಮ ಜನಕ್ಕೆ ಆದಾಯ ಡಾಲರುಗಳಲ್ಲಿರುವುದು ಕಾಣುತ್ತದೆಯೇ ಹೊರತು ವೆಚ್ಚವೂ ಡಾಲರ್ ಗಳಲ್ಲಿಯೇ ಎನ್ನುವುದು ಕಾಣುವುದಿಲ್ಲ! ಅಲ್ಲಿ ಹೋಗಿ ಪೆಟ್ರೋಲ್ ಬಂಕುಗಳಲ್ಲಿ, ಮಾಲ್ ಗಳ ರೆಸ್ಟ್ ರೂಮ್ ಗಳಲ್ಲಿ ಕ್ಲೀನರ್ ಗಳಾಗಿ ಕೆಲಸಮಾಡಿದರೂ ಸರಿಯೇ, ಫಾರಿನ್ ಕೆಲಸವೇ ಆಗಬೇಕು! ಅದೇ ಕೆಲಸ ಇಲ್ಲಿ ಮಾಡಿದರೆ, dignity of labour! ಅದೇಕೋ ಅಲ್ಲಿನ ಐಷಾರಾಮ ಜೀವನವನ್ನು ನೋಡುವ ನಾವು, ಅಲ್ಲಿನ ಶಿಸ್ತು ಶುಚಿತ್ವವನ್ನು, ಗಂಡ ಹೆಂಡತಿಯನ್ನು ವಿನಾಕಾರಣ ಹೊಡೆಯುವುದಿಲ್ಲ ಎನ್ನುವುದನ್ನು, ದಂಪತಿಗಳು ಮಕ್ಕಳ ಮುಂದೆ ಜಗಳವಾಡುವುದಿಲ್ಲ ಎನ್ನುವುದನ್ನು, ವೃತ್ತಿ-ಸಂಸಾರವನ್ನು ಬೆರೆಸಿ ಕಿಚಡಿಯನ್ನು ಅವರು ಮಾಡುವುದಿಲ್ಲ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ! ಇಷ್ಟೆಲ್ಲದರ ನಡುವೆಯೂ ಮನೆಯವರೊಡನೆ ಸಮಯ ಕಳೆಯಬೇಕೆಂಬುದನ್ನು ಪಾಶ್ಚಿಮಾತ್ಯರ ವೀಕೆಂಡೇ ನಮಗೆ ಕಲಿಸಬೇಕಾಯಿತೇ? ವಿಪರ್ಯಾಸ!!

ಮನೆಯಲ್ಲಿ ದಿನನಿತ್ಯ ನಡೆಯುವ ಪ್ರಹಸನದಿಂದ ದೂರವಾಗಲು, ಜಂಜಡಗಳಿಂದ ಬಿಡಿಸಿಕೊಳ್ಳಲು, ಹೊತ್ತು ಕಳೆಯಲು, ಸೀನಪ್ಪನ ಮಗ ಶ್ರೀಕಾಂತ ಯಾವುದೋ ಮೂಲಭೂತವಾದಿ ಸಂಘಟನೆಗೆ ಸೇರಿರುತ್ತಾನೆ. ಅಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿ ಅಪ್ಪನ ವಿದೇಶಿ ಆಚರಣೆಗಳ ವಿರುಧ್ಧ ಮಾತನಾಡುತ್ತಾನೆ; ರಾಣಿಯಮ್ಮನನ್ನು ಬದಲಾಯಿಸುತ್ತಾನೆ. ಮಹಾನ್ ದೇಶಭಕ್ತ, ಕ್ರಾಂತಿಕಾರಿ ನಾಯಕ, ಸಂಸ್ಕೃತಿಯ ಪರಿಪಾಲಕನಂತೆ ತಂದೆಗೆ ಕಾಣುತ್ತಾನೆ. ಮಗ ಹೇಳಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಮಗ ಏನನ್ನೋ ಮಹತ್ತರವಾದದ್ದನ್ನು ಹೇಳುತ್ತಿದ್ದಾನೆ ಎಂದುಕೊಳ್ಳುವ ಸೀನಪ್ಪನಲ್ಲಿ ನಿಜವಾದ ಅರ್ಥದಲ್ಲಿ ಮುಗ್ಧ ಶ್ರೀಸಾಮಾನ್ಯ ಪ್ರತಿಬಿಂಬಿಸುತ್ತಾನೆ. ಒಂದೊಮ್ಮೆ, ಮಗ ಡ್ರಗ್ಸ್ ಎನ್ನುವ ದುಶ್ಚಟಕ್ಕೆಲ್ಲಿ ಬಲಿಯಾಗುವನೋ ಎಂದು ಕಳವಳಪಟ್ಟು ಅವುಗಳಿಂದ ದೂರವಿರಲು ತಾಕೀತು ಮಾಡುವ ಸೀನಪ್ಪನಿಗೆ, ಈಗ ಮಗನಿಗಂಟಿಕೊಂಡಿರುವ "ಚಟ" ಯಾವುದೇ ಗಾಂಜಾ, ಅಫೀಮಿಗಿಂತಲೂ ಅಪಾಯಕಾರಿ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಆತನನ್ನಷ್ಟೇ ಅಲ್ಲ, ಅನೇಕಾನೇಕ ಅಮಾಯಕರನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು "ಅರ್ಥ"ವಾಗುವುದೇ ಇಲ್ಲ. ಕಾಡುವ ವಿಷಯವೆಂದರೆ, ಯಾವನೋ ತಲೆಮಾಸಿದವನ ಹಳಸಲು ಆದರ್ಶಗಳಿಗೆ, ಕೊಳೆತ ಸಿಧ್ಧಾಂತಗಳಿಗೆ, ಕೆಟ್ಟ ರಾಜಕೀಯಕ್ಕೆ ಇರುವ ಪ್ರಭಾವ, ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುವ ಸಾಮಾನ್ಯರ ಆಲೋಚನೆಗಳಿಗಿಲ್ಲವಲ್ಲ! ಸಾಮಾನ್ಯ ಜನರಲ್ಲಿರುವ ಜಾತಿ ಪಂಗಡಗಳನ್ನು ಮೀರಿದ ಸ್ನೇಹ ಪ್ರೀತ್ಯಾದರಗಳು ಅದೇಕೋ "ಬುಧ್ಧಿವಂತ" ಜನರಲ್ಲಿ ಕಾಣೆಯಾಗಿವೆ! ಇಷ್ಟಾದರೂ ಅಂತದೊಂದು ಪ್ರಭಾವಳಿಗೆ ಬಲಿಯಾಗುವವರು ಸಾಮಾನ್ಯರೇ! ಸ್ವಾತಂತ್ರ್ಯದ ಜೊತೆಜೊತೆಗೆ ಬಂದ ದೇಶವಿಭಜನೆಯ ಗಲಭೆಯಿಂದ ಪ್ರಾರಂಭವಾಗಿ, ಸಿಖ್ ಹತ್ಯಾಕಾಂಡ, ಅಯೋಧ್ಯಾ ವಿವಾದ, ಗೋಧ್ರಾ ಪ್ರಕರಣ, ಈದ್ಗಾ ಪ್ರಕರಣ..... ಇಲ್ಲೆಲ್ಲೂ ಯಾವೊಬ್ಬ ನಾಯಕನ ಒಂದು ಕೂದಲೂ ಕದಲಲಿಲ್ಲ. ಬಲಿಯಾದವರೆಲ್ಲ ಶ್ರೀಸಾಮಾನ್ಯರು! ಇಂತದೊಂದು ಸಂದೇಶ, ಚಿತ್ರದಲ್ಲಿ ಸೀನಪ್ಪನ ಮಗ ಹಾಗೂ ಮುಸ್ಲಿಂ ಸ್ನೇಹಿತ ಕೋಮುಗಲಭೆಯಲ್ಲಿ ಸತ್ತಾಗ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೇಶದ ಅರ್ಥವ್ಯವಸ್ಥೆಗೊಂದು ಹೊಸದಿಕ್ಕನ್ನು ತೋರಿಸಬೇಕಾಗಿರುವ ದೇಶೀಯತೆ ಎನ್ನುವುದು ಮೂಲಭೂತವಾದಿಗಳ ಹಾಗೂ ಜ್ಯಾತ್ಯಾತೀತವಾದಿಗಳ ನಡುವೆ ಅಪಭ್ರಂಶುವಾಗಿ ನಲುಗುತ್ತಿರುವುದು ನಿಜಕ್ಕೂ ದುರಂತ...

ಅರ್ಥಕ್ಕೊಂದು ಹೊಸ ಅರ್ಥ ಕೊಡುವಲ್ಲಿ ಚಿತ್ರ ಸಾರ್ಥಕತೆ ಪಡೆದಿದೆ. ನಡುನಡುವೆ ಬರುವ ವಚನಗಳು, ನಾಗೇಂದ್ರ ಶಾ ರವರ ಚುಟುಕುಗಳು ಸರಿಯಾಗಿ ಕುಟುಕುತ್ತವೆ. ಆ ಪಾತ್ರವಂತೂ ನಿಜಕ್ಕೂ a treat to watch. ಕೊನೆಯಲ್ಲಿ, ಕೋಮುಗಲಭೆಯ ದಳ್ಳುರಿಯಲ್ಲಿ ಸೀನಪ್ಪನ ಆಟೋ, ವಿದೇಶಿ ಬ್ಯಾಂಕಿನ ಎತ್ತರದ ಹೋರ್ಡಿ೦ಗ್ ನ ಕೆಳಗೆ ಹತ್ತಿ ಉರಿಯುತ್ತಿರುತ್ತದೆ. "ಮನೆಯೊಳಗೆ ಕತ್ತಲಾಗಿದೆ ದೀಪ ಹಚ್ರೋ" ಎಂದು ಅಜ್ಜಿ ನುಡಿಯುತ್ತಾರೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?

Friday, October 09, 2009

ಕಾಡದಿರಿ ನೆನಪುಗಳೇ....!


ಬೆಳಗಿನ ಜಾವದ ಚುಮುಚುಮು ಚಳಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಅಪ್ಪನ ಕೈಯನ್ನೋ ಅಮ್ಮನ ಕೈಯನ್ನೋ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುವ ಆ ಮುದ್ದು ಮಕ್ಕಳನ್ನು ಕಂಡಾಗ ನಮ್ಮ ಬಾಲ್ಯದಂಗಳಕ್ಕೆ ಕರೆದೊಯ್ಯುತ್ತೀರಿ. ಬಸ್ ಸ್ಟಾಂಡ್ ನಲ್ಲಿ ಲೈಟ್ ಕಂಬ ಹಿಡಿದು ಸುತ್ತುತ್ತಿರುವ ಆ ಅಣ್ಣತಂಗಿಯನ್ನು ಕಂಡಾಗ, ಅಕ್ಕನ ಕೈಯಲ್ಲಿನ ಚಾಕಲೇಟೇ ಬೇಕು ಎಂದು ಅಳುತ್ತಿರುವ ತಂಗಿಯನ್ನು ಕಂಡಾಗ ನಮ್ಮ ಕದನಗಳ ರಣಭೂಮಿಗೆ ಹೊತ್ತೊಯ್ಯುತ್ತೀರಿ. ಅಲ್ಲೆಲ್ಲೋ ಕೆಫೆಯೊಂದರಲ್ಲಿ ಹರಟುತ್ತಿರುವ ಯುವಕ ಯುವತಿಯರನ್ನು ಕಂಡಾಗ ನಮ್ಮ ಕಾಲೇಜಿನ ಆವರಣದಲ್ಲೇ ಇಳಿಸುತ್ತೀರಿ. ಪ್ರೀತಿಪಾತ್ರರಿಂದ ದೂರವಾಗಿ ನೆಲೆಸಿ ನಡೆಯುತಿರಲು ಧುತ್ತೆಂದು ಧಾಳಿ ಮಾಡುತ್ತೀರಿ. ಖಿನ್ನತೆಯನ್ನು ಜೊತೆಗೂಡಿಸುತ್ತೀರಿ. ಆಸಕ್ತಿಯನ್ನು ಕಳೆದುಬಿಡುತ್ತೀರಿ. ಏಕೆ ಹೀಗೆ ಕಾಡುತ್ತೀರಿ? ಬಿಟ್ಟುಕೊಡಿ ಇಂದಿನ ಈ ಹೊತ್ತನ್ನು ಇಂದಿನ ಈ ಹೊತ್ತಿಗೆ. ಬಿಟ್ಟುಬಿಡಿ ಸವಿಯಲು ಈಗ ಕಾಣುತ್ತಿರುವ ಆ ಮಕ್ಕಳ ಮುಗ್ಧತೆಯನ್ನು, ಸೋದರವಾತ್ಸಲ್ಯವನ್ನು, ಹುಡುಗರ ಹುಡುಗಾಟಿಕೆಯನ್ನು. ದಾರಿಮಾಡಿಕೊಡಿ ಹೊಸನೆನಪುಗಳಿಗೆ. ತೆರೆದುಕೊಳ್ಳಲು ಬಿಡಿ ಹೊಸ ಅನುಭವಗಳಿಗೆ.....

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೇ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಾಲನ ಕೆಲಸವೇ ಅದು. ಯಾರ ಹಂಗೂ ಇಲ್ಲದೆ ಮುಂದೆ ಸಾಗುತ್ತಿರುತ್ತಾನೆ. ದಿನ, ವಾರ, ತಿಂಗಳುಗಳನ್ನು ಹೊತ್ತು ತರುತ್ತಾನೆಯೇ ಹೊರತು ವಸಂತಗಳನ್ನಲ್ಲ. ಆದರೆ ನೀವು ಕಾಲನನ್ನೇ ಮೀರಿದವರು. ಕ್ಷಣಮಾತ್ರದಲ್ಲೇ ಎಷ್ಟು ಏಡುಗಳನ್ನಾದರೂ ಎಣಿಸಿಬಿಡುತ್ತೀರಿ! ಓಡುತ್ತಿರುವ ಕಾಲನೊಂದಿಗೆ ಎಷ್ಟೇ ವೇಗವಾಗಿ ಓಡಿದರೂ ಕಟ್ಟಿಬಿಡುತ್ತೀರಲ್ಲ ಹರಿವಿಗೊಂದು ತಡೆಯನ್ನು! ಮರೆಯಬೇಕೆಂದಿರುವ ಘಟನೆಗಳನ್ನೇ ಬುನಾದಿಯಾಗಿಸಿ, ವ್ಯಕ್ತಿಗಳನ್ನೇ ಕೂಲಿಗಳನ್ನಾಗಿಸಿ ನಿಮ್ಮ ಭದ್ರಕೋಟೆಯನ್ನು ಕಟ್ಟುತ್ತೀರಿ. ಕಾಲಗತಿಯಲ್ಲಿ ಅಳಿಸಿಹೋಗಬಹುದಾದ ಸಾಧ್ಯತೆಯನ್ನೇ ಅಳಿಸಿಹಾಕುತ್ತೀರಿ.

ಕಪ್ಪುಕಣ್ಣಿನ ದಿಟ್ಟ ನೋಟದರೆಚಣವನ್ನೆ
ತೊಟ್ಟಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಇರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ

ಪಯಣದಲ್ಲೂ, ಏಕಾಂತದಲ್ಲೂ, ಕಣ್ಣುಮುಚ್ಚಿದರೂ, ತೆರೆದರೂ, ಮಗ್ಗಲು ಬದಲಿಸಿದರೂ ನೀವೇ ಇರುತ್ತೀರಿ. ಕನಸುಗಳು ಕಣ್ಮರೆಯಾಗಿವೆ. ಕಣ್ಣೀರು ಇಂಗಿ ಹೋಗಿದೆ. ಜೀವನದಲ್ಲಿಯ ಜೀವ ಕಳೆದುಹೋಗೆ, ಕೇವಲ ನಕಾರ ಉಳಿದುಕೊಂಡಿದೆ. ಎದೆ, ತನ್ನ ಗೂಡೇ ಒಡೆದುಹೋಗುತ್ತದೇನೋ ಎನ್ನುವಂತೆ, ಹೃದಯ, ತನ್ನ ಕವಾಟವೇ ಬಿರಿದುಹೋಗುತ್ತದೇನೋ ಎನ್ನುವಂತೆ ಚೀರುತ್ತಿದೆ ನಿಮ್ಮ ಬೇಡಿಯಿಂದ ಬಿಡಿಸಿಕೊಳ್ಳಲು. ಎಲ್ಲಿಯವರೆಗೆ ಕಾಡುತ್ತೀರಿ? ಎಲ್ಲಿಯವರೆಗೆ ನಿಮ್ಮ ಬಂಧನದ ಬೇಲಿಯೊಳಗೆ ಬದುಕನ್ನು ಬಂಧಿಸಿಡುತ್ತೀರಿ? ಮೈಕೊಡವಿ ನಿಮ್ಮಿಂದ ಬಿಡಿಸಿಕೊಂಡರೂ ಕೊನೆಗೆ ಸಿಗುವುದೇನು? ಗತಿಸಿಹೋದ ಗೆಳೆಯರ, ಮುರಿದುಹೋದ ಸಂಬಂಧಗಳ, ಕಳೆದು ಹೋದ ವಿಶ್ವಾಸದ, ನಶಿಸಿ ಹೋದ ನಂಬಿಕೆಯ, ವ್ಯರ್ಥವಾದ ಸಮಯದ ಕುರಿತಾದ ಒಂದು ನಿಡಿದಾದ ಉಸಿರು, ಕೊನೆಯದೇನೋ ಎಂಬಂತೆ ಕಣ್ಣಂಚಿನಲ್ಲಿ ಕೂತಿರುವ ಆ ನೀರ ಬಿಂದು... ...

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲ್ಲಿ ಇರಿಯದಿರು ಓ! ಚೆಂದ ನೆನಪೇ

ಹೊಸ ಕನಸುಗಳನ್ನು ಹೆಣೆಯಲು ಹವಣಿಸುತ್ತಿರುವಾಗ, ಹಳೆಯ ಛಿದ್ರಗೊಂಡ ಕನಸುಗಳ ಗೋರಿಯಿಂದ ಭಯವನ್ನೆತ್ತಿ ತರುತ್ತೀರಿ. ಹೊಸ ಗುರಿಯ ಹೊಸೆಯುತ್ತಿರಲು, ಹಿಂದೊಮ್ಮೆ ಗುರಿ ತಲುಪಿದ ಸಂಭ್ರಮದಲ್ಲಿ ಬುಡವೇ ಕಳಚಿಬಿದ್ದ ಅನುಭವಗಳ ಹೊತ್ತು ತರುತ್ತೀರಿ. ಕನಸುಗಳಿಲ್ಲದೆ ನಿದ್ದೆ ನಿರ್ವಿಣ್ಣವಾಗಿದೆ. ಗುರಿಯೊಂದು ಕಾಣದೆ ಹಾದಿ ಗೆದ್ದಲು ಹಿಡಿದಿದೆ. ಭವಿಷ್ಯವನ್ನು ನಿರ್ಧರಿಸಲಾಗದೆ, ಗತವನ್ನು ಬದಲಿಸಲಾಗದೆ ಜೀಕುತ್ತಿರುವ ಜೀವನ ಜಡ್ಡುಹಿಡಿದಿದೆ. ಬದುಕು ನಿಮ್ಮ ಸುಳಿಯಲ್ಲೇ ಸುತ್ತಿ ಸುತ್ತಿ ಸ್ಮಶಾನ ಸೇರುವ ಮೊದಲು ಅದನ್ನು ಮುಕ್ತಗೊಳಿಸಿ. ಬಾಳು ಪುನರುಜ್ಜೀವನಗೊಳ್ಳಲಿ ನವಚೈತನ್ಯದೊಂದಿಗೆ, ಸಾಗಲಿ ಹೊಸದಿಗಂತದೆಡೆಗೆ....

[ಕವನ: ಡಾ.ನಿಸಾರ್ ಅಹಮದ್]
[ಚಿತ್ರ: ಪಾಲಚಂದ್ರ]
[ಹಾಡನ್ನು ಇಲ್ಲಿ ಕೇಳಿ]

Wednesday, August 12, 2009

ಮಳೆಗಾಲದೊಂದು ರಾತ್ರಿ....

ಮಳೆಗಾಲದ ಒಂದು ರಾತ್ರಿ. ಕಛೇರಿಯಲ್ಲಿ ಕೆಲಸ ಮುಗಿದಿತ್ತು. ಮನೆಗೆ ಹೋಗಲೆಂದು ಬಸ್ ಹಿಡಿಯಲು ಹೊರಗೆ ಬಂದೆ. ಮಳೆ ಜಿನುಗುತಿತ್ತು. ಛತ್ರಿ ತಂದಿರಲಿಲ್ಲ (ನೀನೇ ದೊಡ್ಡ ಛತ್ರಿ ಅಂತೀರಾ? ಹಳೇ ಜೋಕು ರೀ!). ಅದೇನೋ ನನ್ನ ಛತ್ರಿಗೂ ಮಳೆಗೂ ಆಗಿ ಬಂದಿಲ್ಲ. ನಾನು ಛತ್ರಿ ತಂದಾಗೆಲ್ಲ ಮಳೆನೇ ಬರುವುದಿಲ್ಲ. ಆದ ಕಾರಣಕ್ಕೆ ಅದೊಂದು ಭಾರವನ್ನು ನಾನು ಜೊತೆಗೊಯ್ಯುವುದಿಲ್ಲ (ನನ್ನ ಭಾರವೇ ಸಾಕಷ್ಟಿರುವಾಗ !!). ಆದ್ದರಿಂದ ಆ ಜಿನುಗುವ ಮಳೆಯಲ್ಲೇ ಬಸ್ ನಿಲ್ದಾಣಕ್ಕೆ ಹೊರಟೆ. ಅಲ್ಲೂ ದುರಾದೃಷ್ಟ ನನ್ನ ಬೆನ್ನು ಬಿಡಲಿಲ್ಲ. ಮಧ್ಯ ಹಾದಿಯಲ್ಲೇ ವರುಣನ (ಅವ)ಕೃಪೆಗೆ ಪಾತ್ರವಾದೆ. ಧೋ ಎಂದು ಒಮ್ಮೆಗೆ ಮಳೆರಾಯನ ಆರ್ಭಟ. ನಿಲ್ಲಲೊಂದು ಸೂರು ಕಾಣಲಿಲ್ಲ. ಇನ್ನರ್ಧ ದಾರಿ ಸಾಗುವಷ್ಟರಲ್ಲಿ ಪೂರ್ತಿ ಒದ್ದೆಯಾಗಿ, ಇನ್ನೆರಡು ಕೆಜಿ ತೂಕ ಜಾಸ್ತಿಯಾಗಿ ಬಸ್ಸೇರುವಂತಾಯಿತು. ನಂತರ ಬಂದವರ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಯಾಕೆಂದರೆ ಮಳೆ ನಿಂತಿರಲಿಲ್ಲ. ನಿಲ್ಲುವ ಸೂಚನೆಯೂ ಇರಲಿಲ್ಲ.

ಚಳಿಗೆ ನಡುಗುತಿದ್ದ ಆ ದೇಹಗಳನ್ನೇ ಹೊತ್ತು ಬಸ್ಸು ಹೊರಟಿತು. ಬೆಂಗಳೂರಿನಲ್ಲಿ, ಮಳೆಗಾಲದಲ್ಲಿ, ಆ ವಾಹನ ಸಂದಣಿಯಲ್ಲಿ, ಎಲೆಕ್ಟ್ರಾನಿಕ್ ಸಿಟಿಯಿಂದ ಯಶವಂತಪುರದವರೆಗೆ, ಹೊಸೂರು ರಸ್ತೆ, ಎಂ.ಜಿ. ರಸ್ತೆಗಳನ್ನು ದಾಟಿ ಹೋಗಬೇಕು. ಪಯಣಿಗರ ಸ್ಥಿತಿ ಊಹೆಗೆ ಬಿಟ್ಟಿದ್ದು. ಕಾಲಹರಣವಾದರೂ ಹೇಗೆ? ಪುಸ್ತಕ ಓದುವ ಸ್ಥಿತಿಯಲ್ಲಿರಲಿಲ್ಲ. ಹಾಗೇ ಕಿಟಕಿಯಿಂದಾಚೆ ನೋಡುತ್ತಾ ಕುಳಿತೆ. ಆ ರಾತ್ರಿಯಲ್ಲಿ, ಸುರಿಯುತ್ತಿರುವ ಆ ಮಳೆಯಲ್ಲಿ ಏನು ಕಾಣಲು ಸಾಧ್ಯ? ರಸ್ತೆಯಲ್ಲಿ ತುಂಬಿದ್ದ ನೀರು, ಹುಯ್ಯುತ್ತಿರುವ ಮಳೆ.

ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು. ತೀರ್ಥಹಳ್ಳಿಗೆ. ಹೌದು, ಕುವೆಂಪು, ಹಾ.ಮಾ.ನಾಯಕ್, ಪೂರ್ಣ ಚಂದ್ರ ತೇಜಸ್ವಿ, ಎಂ.ಕೆ.ಇ೦ದಿರಾ ಇವರೇ ಮೊದಲಾದ ಸಾಹಿತ್ಯ ಭೀಮರನ್ನು ನಾಡಿಗೆ ನೀಡಿದ ಅದೇ ಶಿವಮೊಗ್ಗೆಯ ತೀರ್ಥಹಳ್ಳಿ.

ಮಲೆನಾಡಿನ ಮಳೆಯೆಂದರೆ ಬರೀ ಮಳೆಯೆ. ಅನುಭವಿಸಿಯೇ ತೀರಬೇಕು ಅದರ ಸೊಬಗನ್ನ. ದಿನದ ಯಾವ ಹೊತ್ತಿನಲ್ಲಿಯೂ ಸೂರ್ಯ ಕಾಣುವಂತೆಯೇ ಇಲ್ಲ. ಸದಾ ಆ ಕಪ್ಪು ಮೋಡಗಳ ನಡುವೆಯೇ ಅವಿತಿರುತ್ತಿದ್ದ. ಮೇ ತಿಂಗಳಿಗೆಲ್ಲ ಆರಂಭವಾಗಿಬಿಡುವ ಮಳೆ, ಸಪ್ಟೆಂಬರ್ - ಅಕ್ಟೋಬರ್ ನ ವರೆಗೂ ಇರುತ್ತಿತ್ತು. ಆ ನಾಲ್ಕೈದು ತಿಂಗಳು ಬಿಸಿಲೆಂಬುದು ಮರೀಚಿಕೆ. ಬಟ್ಟೆಗಳು ಒಣಗಿವೆಯೆಂದು ಒಳಗೆ ತಂದ ಜ್ಞಾಪಕವೇ ಇಲ್ಲ.

ಶಾಲೆಗಳು ಶುರುವಾಗುತ್ತಿದ್ದುದೇ ಮಳೆಗಾಲದಲ್ಲಿ (ಜೂನ್). ಮಳೆಯಲ್ಲಿ ಶಾಲೆಗೆ ಹೋಗುವುದೇ ಒಂದು ಮಜ. ಆ ದೊಡ್ಡ ದೊಡ್ಡ ಛತ್ರಿಗಳಡಿಯಲ್ಲಿ, ಗಾಳಿಯ ದಿಕ್ಕನ್ನನುಸರಿಸಿ ಛತ್ರಿಯನ್ನಾಡಿಸುತ್ತಾ, ನಿಂತ ನೀರಲ್ಲಿ ಕುಪ್ಪಳಿಸುತ್ತಾ, ಗೆಳೆಯ/ಗೆಳತಿಯರೊಂದಿಗೆ ಹರಟುತ್ತಾ ಸಾಗಿದರೆ ಸುಮಾರು ೩ ಕಿಲೊಮೀಟರುಗಳ ದಾರಿ ಸವೆದದ್ದೇ ತಿಳಿಯುತ್ತಿರಲಿಲ್ಲ.

ಬೆಳಿಗ್ಗೆ ಅಮ್ಮನ ಕೈಯ ಬಿಸಿ ಬಿಸಿ ತಿಂಡಿ ತಿಂದು ಬರುವಷ್ಟರಲ್ಲಿ, ಅಪ್ಪ ರೈನ್ ಕೋಟ್, ಮಳೆಗಾಲದ ಚಪ್ಪಲಿ (ಹೌದು, ಪ್ರತಿ ಮಳೆಗಾಲಕ್ಕೊಂದು ಸ್ಪೆಶಲ್ ಚಪ್ಪಲಿ), ಸ್ಕೂಲ್ ಬ್ಯಾಗ್ ಎಲ್ಲಾ ಸಿದ್ಧವಾಗಿರಿಸಿಕೊಂಡು, ತಾವೂ ಸಿದ್ಧರಾಗಿ, ಕರೆದೊಯ್ಯಲು ತಯಾರಾಗಿರುತ್ತಿದ್ದರು. ದಾರಿಯಲ್ಲಿ ಒಂದು ನಿಮಿಷ ಸುಮ್ಮನಿದ್ದ ಜ್ಞಾಪಕವಿಲ್ಲ. ಅದೇನೇನೊ ಪ್ರಶ್ನೆಗಳು. ಒಟ್ಟಿನಲ್ಲಿ ನಮ್ಮಪ್ಪನ ಜಿಕೆ ಟೆಸ್ಟ್. ತಂದೆಯವರೊ ಫಸ್ಟ್ ಕ್ಲಾಸ್ ನಲ್ಲಿ ಪಾಸ್. ಸಂಜೆ ತಾಯಿಯೊಡನೆ ಹಿಂದಿರುಗುವಾಗ ವರದಿಗಾರ್ತಿಯ ಕೆಲಸ. ದಾರಿಯುದ್ದಕ್ಕೂ ಆ ದಿನ ಶಾಲೆಯ ಆಗುಹೋಗುಗಳ ಸಂಪೂರ್ಣ ವರದಿ.

ಪ್ರತಿವರ್ಷವೂ ಶಾಲೆ ಶುರುವಾದ ಮೊದಲ ದಿನ, ನೋಟ್ ಪುಸ್ತಕಗಳ ಪಟ್ಟಿ ಮನೆಗೆ ಬರುತ್ತಿತ್ತು. (ಪಠ್ಯಪುಸ್ತಕಗಳು ನಮ್ಮ ಹಿರೀಕರಿ೦ದ ಬೇಸಿಗೆ ರಜೆಯಲ್ಲೇ ಬಂದಿರುತ್ತಿದ್ದವು. ತಂದೆಯವರ ದೆಸೆಯಿಂದ ಅರ್ಧ ಓದಿ ಮುಗಿಸಿಯೂ ಆಗಿರುತ್ತಿತ್ತೆನ್ನಿ). ಅಂದು ಸಂಜೆಯೇ ಪುಸ್ತಕಗಳನ್ನು ತಂದು ಅವುಗಳಿಗೆ ಬೈಂಡ್ ಹಾಕುವ ಕೆಲಸ. ಮೊದಲು ಪೇಪರ್ ಬೈಂಡ್ ಹಾಕಿ ಅದರ ಮೇಲೆ ಪ್ಲಾಸ್ಟಿಕ್ ಬೈಂಡ್ ಹಾಕಿ ಕೊಡುತ್ತಿದ್ದರು. ಮಳೆಗೆ ಪುಸ್ತಕಗಳು ನೆನೆಯಬಾರದಲ್ಲ, ಅದಕ್ಕೆ. ನಮಗೇನಾದರೂ ಪರವಾಗಿಲ್ಲ, ಆದರೆ ಪುಸ್ತಕಗಳನ್ನು ಹಾಳು ಮಾಡಿದರೆ ಮಾತ್ರ ತಂದೆಯವರ ಕೋಪಕ್ಕೆ ಗುರಿಯಾಗಬೇಕಿತ್ತು. ಇಂದೇನಾದರು ನನಗೆ ಪುಸ್ತಕಗಳ ಮಹತ್ವ ತಿಳಿದಿದೆಯೆಂದರೆ ಅದಕ್ಕೆ ಅವರ ಆ ಪುಸ್ತಕ ಭಕ್ತಿಯೆ ಕಾರಣ. ಅದಕ್ಕಾಗಿ ತಂದೆಯವರಿಗೆ ನಾ ಋಣಿ.

ನಮ್ಮ ಮನೆಯ ಹಿಂದೆಯೇ ಒಂದು ಕೆರೆಯಿತ್ತು. ಅದರಿಂದಲೇ ನಮ್ಮ ಮನೆ ಬೀದಿಯನ್ನು "ಶೀಬಿನಕೆರೆ" ಅಂತ ಕರೀತಿದ್ರು ಅನಿಸುತ್ತೆ. ದಿನವೂ ಆ ಕೆರೆದಂಡೆಯಲ್ಲಿಯೇ ನಡೆದು ಶಾಲೆಗೆ ಹೋಗಬೇಕು. ಆ ಕೆರೆಯ ಮಧ್ಯದಲ್ಲಿ ೨/೩ ಬಂಡೆಗಳಿದ್ದವು. ದಿನವೂ ಆ ಬಂಡೆಗಳು ಎಷ್ಟು ಮುಳುಗಿದವು ಎಂದು ಲೆಕ್ಕ ಹಾಕುವುದೇ ಒಂದು ಆಟ. ಕೆರೆದಂಡೆಯಲ್ಲೂ ಕೆಲವು ಗುರುತುಗಳಿದ್ದವು. ಲೈಟ್ ಕಂಬ, ಪಕ್ಕದ ಗದ್ದೆಗಳಿಗೆ ನೀರು ಹಾಯಿಸುವುದಕ್ಕೆಂದು ಏತ ಮಾದರಿಯಲ್ಲಿ ಕಟ್ಟಿದ್ದ ಕಟ್ಟೆ - ಕಾಲುವೆ ಇತ್ಯಾದಿ. ನೀರಿನ ಮಟ್ಟ ಎಷ್ಟಿದೆ ಎಂದು ಇವುಗಳನ್ನೆಲ್ಲ ನೋಡಿ ಹೇಳುವುದು; ಬಂಡೆ ಮುಳುಗಿತು, ಲೈಟ್ ಕಂಬದ ಹತ್ತಿರ ಬಂದಿದೆ.. ಬಹುಶ: ನಮಗರಿವಿಲ್ಲದೆಯೇ "ರೈನ್ ಗೇಜ್" ಒಂದು ವಿನ್ಯಾಸಗೊಂಡಿತ್ತು!!! ಆದರೆ ನೀರು ಒಮ್ಮೆಯೂ ದಂಡೆಯ ತುದಿಯವರೆಗೂ ಬರಲೇ ಇಲ್ಲ.

ಕಾಲಾನಂತರದಲ್ಲಿ, ನನ್ನ ತಂಗಿಯನ್ನು ಶಾಲೆಗೆ ಕರೊದೊಯ್ಯುವ ಜವಾಬ್ದಾರಿ ನನ್ನದಾಯಿತು. ಅದೊಂದು ವಿಶೇಷ ಹಾಗೂ ವಿಚಿತ್ರ ಅನುಭವ. ಅವಳಿಗೆ ರೈನ್ ಕೋಟ್ ಹಾಕಿ ಪೂರ್ತಿ ಪ್ಯಾಕ್ ಮಾಡಿದ್ದರೂ, ನನ್ನ ಛತ್ರಿಯಡಿಯಲ್ಲೇ ಕರೆದೊಯ್ಯಬೇಕಿತ್ತು. ಕಾರಣ, ಅವಳ ರೈನ್ ಕೋಟ್ ಒದ್ದೆಯಾಗಬಾರದು!!! ಮತ್ತೆ ದಾರಿಯುದ್ದಕ್ಕೂ ಒಂದೇ ಪ್ರಶ್ನೆ "ಸಂಜೆ ಬೇಗ ಬರ್ತೀಯ? ಎಷ್ಟೊತ್ತಿಗೆ ಬರ್ತೀಯ ಕರ್ಕೊಂಡು ಹೋಗೊಕೆ?". ನಾನಾಗ ಹೈಸ್ಕೂಲ್. ನಾನೋದಿದ ಪ್ರಾಥಮಿಕ ಶಾಲೆಗೆ ನನ್ನ ತಂಗಿ ಹೋಗ್ತಾ ಇದ್ದದ್ದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಅವಳನ್ನೂ ಜೊತೆಗೆ ಕರೆದುಕೊಂಡು ಹೋಗ್ತಾ ಇದ್ದೆ. ಸಂಜೆ ಬರುವಾಗ ಜೊತೆಯಲ್ಲೇ ಕರೆದುಕೊಂಡು ಬರುತ್ತಾ ಇದ್ದೆ. ಸಾಯಂಕಾಲ ನಾನು ಅವಳ ತರಗತಿಯ ಬಳಿ ಹೋಗುವುದೇ ತಡ, ಅದೆಲ್ಲಿರುತ್ತಿದ್ದಳೊ, ಅದಾವ ಮಾಯದಲ್ಲಿ ನನ್ನ ನೋಡಿರುತ್ತಿದ್ದಳೋ ತಿಳಿಯುತ್ತಿರಲಿಲ್ಲ; ತಕ್ಷಣ ಬಾಗಿಲಲ್ಲಿ ಹಾಜರಾಗುತಿದ್ದಳು. ಟೀಚರ್ ಸಹ, "ಅನುಷ, ನಿನ್ನನ್ನು ಕರೆಯೊದೇ ಬೇಡ" ಅನ್ನುತ್ತಿದ್ದರು.

ಅಬ್ಬಾ! ಆ ಶಾಲೆಯ ದಿನಗಳೇ!!! ಪಠ್ಯಪುಸ್ತಕಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ. ಆವೇನು ಆಟಗಳು; ಲಗೋರಿ, ಮೈಸೂರ್ ಗೋಲ್, ಕುಂಟಬಿಲ್ಲೆ, ಖೊ ಖೊ, ಕಬಡ್ಡಿ, ವೊಲಿಬಾಲ್, ಬ್ಯಾಡ್ಮಿಂಟನ್, ತರಾವರಿ ನೆಗೆತಗಳು, ಎಸೆತಗಳು, ಓಟಗಳು ಒಂದೇ ಎರಡೇ? ಪ್ರಬಂಧ, ಚರ್ಚೆ, ರಸಪ್ರಶ್ನೆ, ಗಾಯನ, ನೃತ್ಯ, ನಾಟಕ, ಮಾದರಿ ತಯಾರಿಕೆ, ತೋಟಗಾರಿಕೆ, ಚಿತ್ರಕಲೆ, ಆಶುಭಾಷಣ, ಗೈಡ್ಸ್ ಇವುಗಳಿಗೇನು ಲೆಖ್ಖವೇ? ಆಡದ ಆಟಗಳಿಲ್ಲ, ಭಾಗವಹಿಸದ ಚಟುವಟಿಕೆಗಳಿಲ್ಲ. ಚಾತಕ ಪಕ್ಷಿಗಳಂತೆ ಮಳೆಗಾಲ ಮುಗಿಯುವುದನ್ನೇ ಕಾಯುತಿದ್ದೆವು. ಸ್ವಲ್ಪ ಬಿಸಿಲು ಬಂದರೂ ಅನ್ನುವುದಕ್ಕಿಂತ, ಸ್ವಲ್ಪ ಮಳೆ ನಿಂತರೂ ಎನ್ನಬಹುದು. ಬೇಗ ಬೇಗ ಊಟ ಮುಗಿಸಿ ಆಟ. ಯಾವಾಗ ಫ್ರೀ ಪಿರಿಯಡ್ ಸಿಕ್ಕಿದರೂ ಪಿ‌ಇ ಟೀಚರ್ ಹತ್ತಿರ ಹೋಗಿ "ಆಟಕ್ಕೆ ಹೋಗ್ತೀವಿ" ಅಂತ ಒಂದೇ ದುಂಬಾಲು. ಗೇಮ್ಸ್ ಪಿರಿಯಡ್ ನಲ್ಲಂತೂ ಕೇಳೊದೇ ಬೇಡ. ಸುರೆ ಕುಡಿಸಿದ ಕಪಿಗಳಂತೆ ಮೈದಾನಕ್ಕೆ ಧಾಳಿ. ಎಷ್ಟೊಂದು ಆಟಗಳು, ಎಷ್ಟೊಂದು ಜಾಗ!!! ಎಷ್ಟಾಡಿದರೂ ದಣಿವಾಗದು!!! ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃಧ್ಧಿಗಾಗಿ ಶ್ರಮಿಸಿದ, ಶ್ರಮಿಸುತ್ತಿರುವ ಅಂತದೊಂದು ವಿದ್ಯಾಸಂಸ್ಥೆಗೆ ಹಾಗೂ ಅದರ ಸಮಸ್ತ ಶಿಕ್ಷಕ ವೃಂದಕ್ಕೆ ನನ್ನ ಅನಂತಾನಂತ ಧನ್ಯವಾದಗಳು.

ಎಲ್ಲೋ ಮನದ ಮೂಲೆಯಲ್ಲೊಂದು ಕೊರಗು ಕಾಣಿಸಿತು. ಈಗಿನ ನಗರದವರಿಗೆಲ್ಲಿದೆ ಈ ಸೌಭಾಗ್ಯ?? ಎಷ್ಟೊಂದು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಗೇಮ್ಸ್ ಪಿರಿಯಡ್ ಗಳೂ ಇಲ್ಲ. ಎಷ್ಟೊಂದು ಆಟಗಳ ಹೆಸರೇ ತಿಳಿದಿಲ್ಲ. ಮರಕ್ಕೂ ಗಿಡಕ್ಕೂ ವ್ಯತ್ಯಾಸವೇ ತಿಳಿದಿರುವುದಿಲ್ಲ. ಪುಸ್ತಕದ ಹುಳುಗಳಾಗಲು ಸಾಮಾನ್ಯ ಜ್ಞಾನವೆಲ್ಲೋ ಕಳೆದು ಹೋಗುತ್ತಿದೆಯೆ? ಹಾಗೆಂದನಿಸುತ್ತದೆ. ನಾವಾದರೊ ದೊಡ್ಡವರಾಗುತ್ತ, ಪ್ರಗತಿಯ ಹೆಸರಿನಲ್ಲೊ, ಪ್ರತಿಷ್ಠೆಯ ಸೋಗಿನಲ್ಲೋ ಕೇವಲ ಟಿವಿ ಗೋ, ಕಂಪ್ಯೂಟರ್ ಗೋ ಅ೦ಟಿಕೊ೦ಡೆವೇ? ಏನನ್ನೊ ಬೆಲೆಬಾಳುವಂತಹುದನ್ನು ಕಳೆದುಕೊಂಡಂತಹ ಭಾವನೆ ಮೂಡಿತು.

ಅಷ್ಟೆಲ್ಲ ಆಡಿ ಮನೆಗೆ ಹೋಗುವಷ್ಟರಲ್ಲಿ, ಅಮ್ಮ ತಿಂಡಿ ಹಾಲು ಸಿದ್ಧವಿರಿಸಿರುತ್ತಿದ್ದರು. ಸ್ವಾಹ ಮಾಡಿ ಓದುವ ಪ್ರಕ್ರಿಯೆ ಶುರು. ತಂದೆ ಬರುವಷ್ಟರಲ್ಲಿ ಹೋಮ್ ವರ್ಕ್ ಮುಗಿಸಿರಬೇಕು. ಅವರು ಬಂದು ತಯಾರಾದ ಬಳಿಕ ಪಾಠ ಶುರು. ಅರ್ಥವಾಗಿಲ್ಲ ಅಂದರೆ ಎಷ್ಟು ಬಾರಿಯಾದರೂ ಹೇಳಿಕೊಡುತ್ತಿದ್ದರು. ಆದರೆ "ಅರ್ಥವಾಯಿತು" ಎಂದು, ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಡದೆ ಹೋದರೆ, ಉದಾಸೀನದ ಉತ್ತರವನ್ನೇನಾದರು ಕೊಟ್ಟರೆ, ಮುಗಿಯಿತು ಕಥೆ. ತಿಂದ ಒದೆಗಳು ಈಗಲೂ ಜ್ಞಾಪಕದಲ್ಲಿವೆ!!! "ಓದುವಾಗ ಓದು, ಆಡುವಾಗ ಆಡು" ತಂದೆಯ ಸಿದ್ಧಾಂತ. ಬಹುಶ: ತಂದೆ ಚಿಕ್ಕಂದಿನಿಂದಲೂ ಓದಿನಲ್ಲಿ ಆ ತರಹದ ಸೀರಿಯಸ್ನೆಸ್ ತಂದಿರಲಿಲ್ಲವಾಗಿದ್ದರೆ, ಸ್ವತಂತ್ರವಾಗಿ, ಸಮರ್ಥವಾಗಿ, ಸ್ವಾವಲಂಬಿಯಾಗಿ ಓದುವ ಶಕ್ತಿ ಬರುತ್ತಿತ್ತೇ ಎಂಬುದು ಈಗಲೂ ಪ್ರಶ್ನೆ.

ನಂತರ ಎಲ್ಲರೂ ಕುಳಿತು ಊಟ. ಮಳೆಗಾಲ ಮುಗಿದಿದ್ದರೆ, ಚಂದ್ರನ ಸಾಕ್ಷಿಯಾಗಿ, ಮನೆಯಂಗಳದಲ್ಲಿ, ನೆರೆಯವರೊಡಗೂಡಿ ಬೆಳದಿಂಗಳೂಟ. ಬರಿದೇ ಅನ್ನ ಸಾರು ಊಟವೇ ಆದರೂ, ಎಲ್ಲರೂ ಕೂಡಿ ಹಂಚಿಕೊಂಡು ತಿನ್ನುವಾಗ ... ಅದನ್ನನುಭವಿಸಿಯೇ ತೀರಬೇಕು. ಅದೊಂದು ರಸಕವಳವೇ ಸರಿ.

ಉರುಳುತ್ತಿದ್ದ ಕಾಲಚಕ್ರದೊಂದಿಗೆ, ತಂದೆಯವರ ವರ್ಗಾವಣೆಯ ಫಲವಾಗಿ ನಗರವೊ೦ದಕ್ಕೆ ಬಂದಾಗ, ಹೊಸ ಅನುಭವ. ಹೊಸ ಜಾಗ, ಹೊಸ ಶಾಲೆ, ಹೊಸ ಜನ. ಹೊಸದರಲ್ಲಿ ಏನೋ ಕಸಿವಿಸಿ, ಮುಜುಗರ. ಹಳ್ಳಿಯಿಂದ ಬಂದವಳೆಂಬ ಅಸಡ್ಡೆಯೋ, ಅಥವಾ ಅಲ್ಲಿಯವರು ಬೆರೆಯುತ್ತಿದ್ದುದೇ ಹಾಗೆಯೋ ಗೊತ್ತಿಲ್ಲ. ಜನ ಯಾವುದೋ ಮುಸುಕು ಹಾಕಿಕೊಂಡು ಬದುಕುತ್ತಿದ್ದಾರೇನೊ ಎಂದು ಭಾಸವಾಯಿತು. ಆಟ-ಪಾಠ-ಪಠ್ಯೇತರ ಚಟುವಟಿಕೆಗಳೆಲ್ಲದರಲ್ಲೂ ಮುಂದಿರುತ್ತಿದ್ದ ನನಗೆ, ಎಲ್ಲೋ ಕೂಡಿಹಾಕಿದ ಅನುಭವ. ಆಡುವ ಆಟವನ್ನು ವರ್ಷದ ಶುರುವಿನಲ್ಲೇ ಹೇಳಿ, ವರ್ಷ ಪೂರ್ತಿ ಅದೇ ಆಟವನ್ನಾಡಬೇಕು. ಲೈಬ್ರರಿ ಪಿರಿಯಡ್ ನಲ್ಲಿ ಕನ್ನಡ ಪುಸ್ತಕ ಓದಿದರೆ "ಕನ್ನಡ ಪುಸ್ತಕ??" ಎಂಬಂತೊಂದು ನೋಟ. ಅದೇಕೆ ಎಂಬುದು ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಪಠ್ಯೇತರ ಚಟುವಟಿಕೆಗಳೂ ಸಹ ಕೆಲವೇ ಬಲ್ಲಿದವರಿಗೆ ತಿಳಿದಿರುತ್ತಿತ್ತು. ಆದರೆ ಹಠಕ್ಕಾಗಿ ಬರೆದ ಕನ್ನಡ ಪ್ರಬಂಧವೊಂದಕ್ಕೆ ರಾಜ್ಯ ಪ್ರಶಸ್ತಿ ಬಂದಾಗ ಚಿತ್ರಣ ಬದಲಾಯಿತೆನ್ನಿ. ನಿಜವಾದ ಚಿತ್ರಣವಲ್ಲ, ನನ್ನ ಪಾಲಿನದು ಮಾತ್ರ; ಅಂದರೆ ನಾನೂ ಆ ಬಲ್ಲಿದವರಲ್ಲೊಬ್ಬಳಾದೆ ಅಷ್ಟೆ!!! ಆದರೂ ಎಲ್ಲೋ ನನ್ನ ಆ ಮೊದಲಿನ ಫಾರ್ಮ್ ಕಳೆದು ಹೋದ ಅನುಭವ.

ನಂತರದ ಆ ಎರಡು ವರ್ಷಗಳು (೧ ಮತ್ತು ೨ ನೇ ಪಿ.ಯು.ಸಿ) ಹೇಗೆ ಓಡಿದವೋ ತಿಳಿಯಲಿಲ್ಲ. ಶುರು ಎನ್ನುವುದರೊಳಗಾಗಿ ಕೊನೆಯಾಗಿದ್ದವು. ಜೀವನದ "ಕೋಮಾ" ಸ್ಥಿತಿ ಅನಿಸುತ್ತದೆ. ಇಂಜಿನಿಯರಿಂಗ್ ಸಹ ಹಿಡಿಯುವುದರೊಳಗಾಗಿ ಜಾರಿ ಹೋಗಿತ್ತು. ಬರೀ ಇಂಟರ್ನಲ್ಸ್ - ಲ್ಯಾಬ್ - ಎಕ್ಸ್ಟರ್ನಲ್ಸ್ ಗಳಲ್ಲಿಯೇ ಮುಗಿದು ಹೋಯಿತು.

ಕಾಲಗರ್ಭದಲ್ಲಡಗಿದ್ದ ಈ ನೆನಪುಗಳು, ಮನ:ದ ಸ್ಮೃತಿಪಟಲದಲ್ಲಿ ಹೀಗೆ ಹಾದು ಹೋಗುತ್ತಿರುವಾಗ, ಅಬ್ಬಾ! ಕಾಲವೇ! ನಿನ್ನ ಹಿಡಿದವರುಂಟೇ ಎಂದೆನಿಸಿ ಎಚ್ಚರವಾಯಿತು. ಆಗ ಯಾವುದೋ ರೇಡಿಯೊ ವಾಹಿನಿಯಲ್ಲಿ ಬರುತ್ತಿದ್ದ ಹಳೇ ಹಿಂದಿ ಹಾಡಿನತ್ತ ಗಮನ ಹೋಯಿತು. ಹಾಡಿನ ಸಾಹಿತ್ಯ ಜ್ಞಾಪಕವಿಲ್ಲ. ಆದರೆ ಅದು ತಂದೆ ಮಗಳನ್ನು ಮದುವೆ ಮಾಡಿ ಕಳುಹಿಸುವ ಸಂದರ್ಭದಲ್ಲಿ ಹಾಡುವ ಹಾಡು. ಮಗಳ ಬಾಲ್ಯದ ನೆನಪುಗಳ ಸರಮಾಲೆ. ಏಕೋ ನನಗರಿವಿಲ್ಲದೆಯೇ ಕಣ್ಣಿನಿಂದೆರಡು ಹನಿ ಕೆಳಗುದುರಿತು. ಕೈ ಮೇಲೇನೋ ಬೆಚ್ಚಗಾದಾಗ ಅರಿವಿಗೆ ಬಂತು. ನೆನೆದದ್ದು ಒಳ್ಳೆಯದೇ ಆಯಿತು, ಕಣ್ಣೀರೆಂದು ಗೊತ್ತಾಗುವುದಿಲ್ಲ ಎಂಬ ಸಮಾಧಾನದಲ್ಲಿ ಪಕ್ಕಕ್ಕೆ ತಿರುಗಿದೆ. ಅವರು ಯಾವಾಗಲೋ ಇಳಿದು ಹೋಗಿದ್ದರು. ಆಗಲೇ ಸಾಕಷ್ಟು ನೆಂದಿದ್ದ ದೇಹಕ್ಕೆ ಆ ಎರಡು ಹನಿಗಳೇನು ಭಾರವಾಗಲಿಲ್ಲ.............

Friday, July 03, 2009

ಹರಟೆಯೊ೦ದು ತೆರೆದಿಟ್ಟ ಚಿತ್ರಣಗಳು...

ಬಹಳ ದಿನಗಳ ನ೦ತರ ಹಳೆಯ ಸಹುದ್ಯೋಗಿಯೊಬ್ಬರು ಸಿಕ್ಕಿದ್ದರು. ಹೀಗೇ ಉಭಯಕುಶಲೋಪರಿ ನ೦ತರ ವಸ್ತುಸ್ಥಿತಿಯ ಕಡೆ ಮಾತು ಹೊರಳಿತು. ಆರ್ಥಿಕ ಹಿ೦ಜರಿತ, ಕೆಲಸಕಡಿತ, ಇಷ್ಟವಿಲ್ಲದ ಅನಿವಾರ್ಯ ಕೆಲಸಗಳು, ಈ ಕೆಲಸವನ್ನು ನ೦ಬಿಕೊ೦ಡು ಸಾಲಮಾಡಿದವರ ಸ್ಥಿತಿ, ಕೆಲಸಕಳೆದುಕೊ೦ಡು ಅದನ್ನು ಹಿ೦ದಿರುಗಿಸಲಾಗದೆ ಭಾದೆಪಡುತ್ತಿರುವವರ ಅವಸ್ಥೆ, ಐಟಿ ಬಿದ್ದುಹೋಗಿದೆ ಎ೦ದು ಸ೦ತಸಪಡುತ್ತಿರುವ ಇನ್ನೊ೦ದು ವರ್ಗದ ಜನ, ಶಿಕ್ಷಣವೃತ್ತಿಯನ್ನು ಅರಸಿಹೊರಟ ಇನ್ನಿತರ ವೃತ್ತಿಪರರು, ಬಿದ್ದುಹೋಗಿದೆಯೆನ್ನುತ್ತಿರುವ ಸಾಫ್ಟ್ ವೇರ್ ಇ೦ಜಿನಿಯರುಗಳ ಮದುವೆ ಮಾರ್ಕೆಟ್.... ಹೀಗೆ ಹತ್ತು ಹಲವು ವಿಷಯಗಳು. ನಾನು ಇದುವರೆಗೆ ಯೋಚಿಸಿರದ ಒ೦ದು ಸಮಸ್ಯೆಯನ್ನು ಅವರು ಪ್ರಸ್ತಾಪಿಸಿದ್ದು ನನ್ನ ಗಮನ ಸೆಳೆಯಿತು. ಅವರು ಹೇಳಿದರು, "ಆಗ Prestige, International ಅನ್ಕೊ೦ಡು ದುಬಾರಿ ಶಾಲೆಗಳನ್ನ ಹುಡುಕಿಕೊ೦ಡು ಹೋಗಿ ಸೇರಿಸಿದ್ವಿ, ಈಗ manage ಮಾಡೋದು ಕಷ್ಟ ಆಗಿದೆ. ಟ್ಯೂಷನ್ ಗಳಿಗೆ ಕಳಿಸಬೇಕು, ಪ್ರತಿಯೊ೦ದಕ್ಕೂ ಏನಾದ್ರೂ ಆಮಿಷ ತೋರಿಸಿ ಓದಿಸಬೇಕು. ಎಷ್ಟೊ೦ದು ಕ್ಲಾಸ್ ಗಳಿಗೆಲ್ಲ ಸೇರಿಸಿ ಬಿಟ್ಟಿದೀವಿ. ಮಕ್ಕಳಿಗೆ ಈ cost cutting ಎಲ್ಲ ಹೇಳೋಕಾಗಲ್ಲ. ಅವರಿಗೆ ಅರ್ಥ ಆಗಲ್ಲ. ಮೊದಲಿನಿ೦ದಲೂ ಕೇಳಿದ್ದನ್ನೆಲ್ಲ ಕೊಡಿಸಿಕೊ೦ಡು ಅಭ್ಯಾಸವಾಗಿದೆ. ದುಡ್ಡಿಲ್ಲ ಅ೦ದ್ರೆ ಕಾರ್ಡ್ swipe ಮಾಡು ಸಾಕು ಅ೦ತಾರೆ. ಇಲ್ಲಾ೦ದ್ರೆ ATM ಕಾರ್ಡ್ ತಗೊ, ಬ್ಯಾ೦ಕ್ ಗೆ ಹೋಗಿ ತಗೊ೦ಡು ಬರೋಣ ಅ೦ತಾರೆ. Money has become just a plastic card, ಹಣ ಅನ್ನೋದು ಕೇವಲ ಪ್ಲಾಸ್ಟಿಕ್ ಕಾರ್ಡ್ ಆಗಿದೆ...". ಇನ್ನೂ ಹೇಳ್ತಾ ಇದ್ರೇನೋ, ಫೋನ್ ಕಾಲ್ ಬ೦ದು ಹಾಳು ಮಾಡ್ತು.

ಕಳೆದವಾರಾ೦ತ್ಯ ಅವಿರತ ಸ೦ಸ್ಥೆಯ ಪರವಾಗಿ, ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವಿತ್ತು. ಬೆ೦ಗಳೂರಾಚೆಗಿನ ಬಿಡದಿ ತಾಲ್ಲೂಕಿನ ಒ೦ದು cluster ನ ೧೬ ಶಾಲೆಗಳಿಗೆ ಸುಮಾರು ೧೦೦೦೦ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇವರ ಮಾತುಗಳನ್ನು ಕೇಳುತ್ತಾ ನನಗಲ್ಲಿಯ ಶಾಲೆಗಳು ನೆನಪಾದವು.

ಶೂ, ಸಾಕ್ಸ್ ಗಳಿರಲಿ, ಚಪ್ಪಲಿಗಳೂ ಇಲ್ಲದ ಬರಿಗಾಲುಗಳು, ಬೆ೦ಚು, ಡೆಸ್ಕುಗಳಿಲ್ಲದ ಖಾಲಿ ನೆಲ, ಒ೦ದೇ ಕೋಣೆಯಲ್ಲಿ ಹಲವಾರು ತರಗತಿಗಳು, ವಿದ್ಯಾರ್ಥಿಗಳೇ ಗುಡಿಸಿ ಒರೆಸಬೇಕಾದ ಕ್ಲಾಸ್ ರೂಮ್ಗಳು, ದೂರ ದೂರದಿ೦ದ ನಡೆದೇಬರಬೇಕಾದ ಸ್ಥಿತಿ........ ಇವುಗಳ ನಡುವೆಯೂ ಕಲಿಯುವ ಆಸಕ್ತಿ, ಚಿಮ್ಮುವ ಉತ್ಸಾಹ.

ಪುಸ್ತಕಗಳನ್ನು ತೆಗೆದುಕೊ೦ಡ ಮಕ್ಕಳು ಅವನ್ನು ಜೋಪಾನ ಮಾಡುವ ರೀತಿ ನೋಡಿ ಕರುಳು ಚುರಕ್ಕೆ೦ತು. ಅದೇನು ಸ೦ಭ್ರಮವಿತ್ತು ಆ ಕಣ್ಣುಗಳಲ್ಲಿ, ಮಾತುಗಳಲ್ಲಿ. "ನೋಡು ನನ್ಹತ್ರ ೪ ಪುಸ್ತಕ" ಎ೦ದು ಒ೦ದು ಮಗು ಇನ್ನೊ೦ದಕ್ಕೆ ತೋರಿಸಿದಾಗ, "ನನ್ಹತ್ರ ೬ ಇದಾವೆ" ಅ೦ತ ಇನ್ನೊ೦ದು ಹೇಳಿತು. "ಅದಿಕ್ಕೇನು, ಮು೦ದಿನ ವರ್ಷ ನನ್ಹತ್ರನೂ ೬ ಪುಸ್ತಕ ಇರತ್ತೆ ಬಿಡು" ಎ೦ದು ಹ೦ಚುತ್ತಿರುವವರ ಕಡೆ ನೋಡಿದಾಗ........ ಒ೦ದನೇ ಕ್ಲಾಸಿನ ಮಗು, ಪುಸ್ತಕಗಳನ್ನು ತೆಗೆದುಕೊ೦ಡು ಜಾಗದಲ್ಲಿ ಹೋಗಿ ಕುಳಿತುಕೊ೦ಡು ನಿಧಾನವಾಗಿ ತನ್ನ ಬ್ಯಾಗಿನಿ೦ದ ಒ೦ದು ಪ್ಲಾಸ್ಟಿಕ್ ಕವರಿನಲ್ಲಿದ್ದ ಪೆನ್ಸಿಲ್ ತೆಗೆದು, ಪುಸ್ತಕಗಳ ಮೇಲೆ ತನ್ನ ಹೆಸರು ಬರೆದು, ಏನೋ ತಪ್ಪಾಯಿತೆ೦ದು ಕಾಣತ್ತೆ, ರಬ್ಬರ್ ನಲ್ಲಿ ಅಳಿಸಿ ಮತ್ತೆ ನೀಟಾಗಿ ಬರೆದು, ಪೆನ್ಸಿಲ್ ರಬ್ಬರ್ ಗಳನ್ನು ಅಷ್ಟೇ ಜೋಪಾನವಾಗಿ ಮತ್ತೆ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಪುಸ್ತಕಗಳನ್ನು ಜೋಪಾನವಾಗಿ ಬ್ಯಾಗಿನಲ್ಲಿ ಹೊ೦ದಿಸಿಟ್ಟ ದೃಶ್ಯವನ್ನು ನೋಡುತ್ತಿದ್ದಾಗ........ (ಪೂರ್ಣವಿರಾಮ)

ಇದ್ದ ಆ ಕೊಠಡಿಯನ್ನೇ ಕೈಗೆಟಕುವ ಸೌಲಭ್ಯಗಳನ್ನೇ ಬಳಸಿ ಶಿಕ್ಷಕರು ಜತನದಿ೦ದ ಸಿ೦ಗರಿಸಿದ್ದರು. ಪಾಠಗಳಿಗೆ ತಕ್ಕ೦ತೆ ಬೇಕಾದ ಚಿತ್ರಗಳನ್ನು ತಾವೇ ಬರೆದು ನೇತುಹಾಕಿದ್ದರು. ಅವರು ಬರುತ್ತಿದ್ದುದು ವಿಜಯನಗರ, ಜಯನಗರದಿ೦ದ. ಸುಮಾರು ೨ ಗ೦ಟೆಗಳ ಪ್ರಯಾಣ. ಶನಿವಾರವಾದರೋ ೭.೩೦ ಕ್ಕೆಲ್ಲ ಶಾಲೆಯಲ್ಲಿರಬೇಕು. ಅವರ ಜೀವನ ಸುಲಭಸಾಧ್ಯವಿಲ್ಲ. ಜೊತೆಗೆ ಮಕ್ಕಳನ್ನು ಶಾಲೆ ಬಿಡದ೦ತೆ ತಡೆಯಬೇಕು. ಪೋಷಕರಿಗೆ ಬುದ್ಧಿ ಹೇಳಬೇಕು. ಪುಸ್ತಕ ಕೊಡಿಸಲಾಗುವುದಿಲ್ಲ ಎ೦ಬ ಕಾರಣಕ್ಕೆ ಶಾಲೆ ಬಿಡಿಸಿದ ಪ್ರಸ೦ಗಗಳಿದ್ದವು. ದಾನಿಗಳನ್ನು ಹಿಡಿದು ಈ ಸೌಕರ್ಯಗಳಿಗೆ ವ್ಯವಸ್ಥೆ ಮಾಡಬೇಕು. ಪುಸ್ತಕಗಳು, ಕ೦ಪ್ಯೂಟರ್ ಇತ್ಯಾದಿಗಳ ವಿಷಯಗಳ ಕುರಿತಾಗಿ ನೀಡಿದ ಸಹಾಯದಲ್ಲಿ ಕೇಳಿಬ೦ದ ಹೆಸರುಗಳು ಆರ್.ಕೆ ಫೌ೦ಡೇಶನ್ ಮತ್ತು ಅಜಿಮ್ ಜಿ ಫೌ೦ಡೇಶನ್. "ಹಲವಾರು ಉತ್ತಮ ಶೈಕ್ಷಣಿಕ ಸಿಡಿ ಗಳು, self learning ಸಿಡಿ ಗಳನ್ನೂ ಕೊಟ್ಟಿದ್ದಾರೆ. ಮಕ್ಕಳೇ operate ಮಾಡ್ತಾರೆ. ಬಹಳಬೇಗ ಕಲಿತುಬಿಡ್ತಾರೆ" ಎ೦ದು ಬಹಳ ಹೆಮ್ಮೆಯಿ೦ದ ಹೇಳಿದರು. "ಈ ಬಾರಿ ಹೊಸದಾಗಿ ೩ extra admission ಆಗಿವೆ ಹಾಗೂ ಯಾರೂ ಬಿಟ್ಟು ಹೋಗಿಲ್ಲ" ಎ೦ದಾಗ ಬೆಟ್ಟವನ್ನೇ ಎತ್ತಿ ಸಾಧಿಸಿದ ಸ೦ತೋಷವಿತ್ತು ಅವರ ದನಿಯಲ್ಲಿ.

ಹೊರಟುನಿ೦ತಾಗ ಅ೦ಗಳದಲ್ಲಿದ್ದ ಗಿಡಗಳು ಮನಸೆಳೆದವು. ಅವೂ ಸಹ ಆ ಮಕ್ಕಳ ಆರೈಕೆಯಲ್ಲೇ ಬೆಳೆದವು!! ಒಬ್ಬೊಬ್ಬರಿಗೆ ಒ೦ದೊ೦ದು ಗಿಡದ೦ತೆ ಜವಾಬ್ದಾರಿ ವಹಿಸಿದ್ದಾರ೦ತೆ! "ನೆಲ್ಲಿಕಾಯಿ ಬೇಕಿದ್ದರೆ ತಗೊಳ್ಳಿ" ಅ೦ದರು. ಅಷ್ಟೇ ಸಾಕಿತ್ತು, ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ... ! ಶಿಕ್ಷಕರಿಗೂ, ಮಕ್ಕಳಿಗೂ ಥ್ಯಾ೦ಕ್ಸ್ ಹೇಳಿ, ಹೊದ್ದಿದ್ದ ದುಪ್ಪಟ್ಟಾವನ್ನೇ ಜೋಳಿಗೆ ಮಾಡಿ ಅದರ ತು೦ಬಾ ನೆಲ್ಲಿಕಾಯಿ ತು೦ಬಿಕೊ೦ಡು, ತವರಿನಿ೦ದ ಮಡಿಲಕ್ಕಿ ತರುವ೦ತೆ ಹೊತ್ತು ತ೦ದೆವು.

ಎ೦ತಹ ವಿಭಿನ್ನ ಪರಿಸರಗಳು!! ಇ೦ದು ನಾವು ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವಾಗ, ಮೂಲಭೂತ ಶಿಕ್ಷಣದಿ೦ದಲೂ ವ೦ಚಿತರಾದವರಿದ್ದಾರೆ ಎ೦ಬುದು ಗೊತ್ತಾಗುವುದೇ ಇಲ್ಲ! ಪ್ರತಿ ದಿನಪತ್ರಿಕೆಯ ಮುಖಪುಟದ ಅರ್ಧಹಾಳೆಯಲ್ಲಿ ಮುಖ್ಯಮ೦ತ್ರಿ ಶಿಕ್ಷಣಮ೦ತ್ರಿಗಳ ಕಟ್ ಔಟ್ ಗಳ ಮಧ್ಯದಲ್ಲಿ "ಬನ್ನಿ, ಶಾಲೆಗೆ ಹೋಗೋಣ" ಎ೦ಬ ಘೋಷಗಳು! ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ತಲುಪಬೇಕಾದವರನ್ನು ತಲುಪುತ್ತಿವೆ?!

ತ೦ದೆಯವರು, ಬೆಳಿಗ್ಗೆ ಹೊಲಕ್ಕೆ ಕೂಲಿ ಹೋಗಿ, ದನ ಮೇಯಿಸಿಕೊ೦ಡು, ಮನೆಗೆಲಸ ಮುಗಿಸಿ....ನ೦ತರ ತಿ೦ಡಿ ಇದ್ದರೆ ತಿ೦ದು ಶಾಲೆಗೆ ಹೋಗುತ್ತಿದ್ದ ಕಥೆ ಹೇಳುತ್ತಿದ್ದಾಗ, 'his'tory ಎ೦ದು ಸುಮ್ಮನಾಗುತ್ತಿದ್ದೆವು. ನಮ್ಮ ಹಿ೦ದಿನ ತರಗತಿಗಳ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನೆಲ್ಲ ಸೇರಿಸಿ ಹೊಲೆದು ಹೊಸ ಪುಸ್ತಕ ಮಾಡಿ ಕೊಡುತ್ತಿದ್ದಾಗ, ಸೀನಿಯರ್ಸ್ ಹತ್ರ ಪಠ್ಯಪುಸ್ತಕಗಳನ್ನು ತೆಗೆದುಕೊ೦ಡು ಬಳಸುವಾಗ, ಒಮ್ಮೊಮ್ಮೆ, ಹೊಸ ಪುಸ್ತಕ ಕೊಡಿಸಬಾರದೇ ಎ೦ದುಕೊಳ್ಳುತ್ತಿದ್ದುದು೦ಟು. ಹೊಸತೇನನ್ನೂ ಕೊಡಿಸುತ್ತಿರಲಿಲ್ಲವೆ೦ದಲ್ಲ, ಅಗತ್ಯಕ್ಕೆಷ್ಟೋ ಅಷ್ಟೇ! ಅ೦ದಿಗದೇ ಅನಿವಾರ್ಯವೂ ಆಗಿತ್ತೆನ್ನಿ. ನನಗ೦ದು ಕೇಳದೆಯೇ 'Rotamac' ಪೆನ್ನು ದೊರಕಿದ್ದರೆ, ಇ೦ದು ತ೦ಗಿ ನನ್ನಿ೦ದ 'Parker' ಪೆನ್ ಕೊಡಿಸಿಕೊಳ್ಳುತ್ತಾಳೆ! ಇ೦ದು ಮಕ್ಕಳಿಗೇಕೆ ಅವರಿಗೆ ಬೇಕೆನಿಸಿದ್ದೆಲ್ಲವೂ ಕೇಳುವ ಮೊದಲೇ ಪೋಷಕರಿ೦ದ ಸಿಗುತ್ತಿದೆ? ನಾವು ಪಟ್ಟ ಕಷ್ಟ ಅವರಿಗಿಲ್ಲವಾಗಲಿ, ನಾವು ಕಾಣಲಾಗದ್ದೆಲ್ಲವೂ ನಮ್ಮ ಮಕ್ಕಳು ಕಾಣಲಿ ಎ೦ಬ ಕಾಳಜಿಯೇ? ಅವರಿಗೆ ಸರಿಯಾದ ಸಮಯ ನೀಡಲಾಗದೆ ನಾವು ಕ೦ಡುಕೊ೦ಡಿರುವ ಪರ್ಯಾಯ ಮಾರ್ಗವೇ? ಅಭಿವೃದ್ಧಿಯ ಸ೦ಕೇತವೇ? ಮಕ್ಕಳು ನಮ್ಮ ಪ್ರತಿಷ್ಠೆಯ ಕುರುಹುಗಳೇ? ಅರ್ಥವಾಗದ ಒಗಟು!

ಕೆನಡಾದಲ್ಲಿ ನೋಡಿದ ಘಟನೆಯೊ೦ದು ನೆನಪಾಯಿತು. ಅ೦ಗಡಿಯೊ೦ದರಲ್ಲಿ ಮಗುವೊ೦ದು ಗೊ೦ಬೆಗಾಗಿ ಹಠ ಮಾಡುತ್ತಿತ್ತು. ತಾಯಿ ಕೊಡಿಸಲಾಗದೆನ್ನುತ್ತಿದ್ದರು. ಮಗು ಕೇಳಿತು, "Mom, I need it, please". ತಾಯಿ ಹೇಳಿದರು, "Son, You don't need it, you want it. You already have a similar one at home. Sorry". ನಮ್ಮ 'ಬೇಕು' ಗಳೆಲ್ಲವೂ ನಮ್ಮ 'ಅಗತ್ಯ' ಗಳಲ್ಲ!! ನನ್ನ ಸಹುದ್ಯೋಗಿ ಲೆಸ್ಲಿಯ ಮಗ ಆಕೆಯನ್ನು ಕಾರ್ (ಅಮೆರಿಕದಲ್ಲಿ ಕಾರ್ ಒ೦ದು status symbol ಅಲ್ಲ, ಅಲ್ಲಿನ ಅವಶ್ಯಕತೆಗಳಲ್ಲೊ೦ದು) ಕೊಡಿಸುವ೦ತೆ ಕೇಳಿದಾಗ ಆಕೆ ಆತನಿಗೆ ತಿಳಿಸಿ ಹೇಳಿದಳು. ಆಕೆಯ ಸ೦ಬಳದಲ್ಲಿ ತಿ೦ಗಳಿಗೆ ಆಕೆ ಎಷ್ಟು ಆತನ ಕಾರಿಗಾಗಿ ಉಳಿಸುತ್ತಾಳೆ, ಆತನೆಷ್ಟು ಉಳಿಸಬೇಕು (ಪಾಕೆಟ್ ಮನಿಯಿ೦ದ), ಹೀಗೆ ಮಾಡಿದರೆ ಎಷ್ಟು ದಿನದಲ್ಲಿ ಕಾರ್ ತೆಗೆದುಕೊಳ್ಳಬಹುದು.. ಹೀಗೆ ಎಲ್ಲವನ್ನೂ. ಇಬ್ಬರೂ ಸೇರಿ ಹಣ ಕೂಡಿಡುತ್ತಿದ್ದರು! ನಾನ೦ದುಕೊಳ್ಳುತ್ತಿದ್ದೆ, ಇವರನ್ನೇ ನಾವು ಪಾಶ್ಚಿಮಾತ್ಯ ಸ೦ಸ್ಕೃತಿ ಎ೦ದು ಮೂದಲಿಸುವುದು?!!!

ಪುಸ್ತಕ ಹ೦ಚಿಕೆಯ ಕಾರ್ಯಕ್ರಮದ ವರದಿಯನ್ನು ಮನೆಯಲ್ಲಿ ಹೇಳುತ್ತಿರುವಾಗ, ಅಮ್ಮ ಹೇಳಿದರು "ಅಷ್ಟೊ೦ದ್ ಜನ ಮಿಲಿಯನಿಯರ್ ಗಳು, ಬಿಲಿಯನಿಯರ್ ಗಳು ಇದ್ದಾರೆ, ಎಲ್ಲಾ ದಾನ ಮಾಡಬಾರ್ದಾ?" ಈ ಬಾರಿ ಸಿಟ್ಟು ಬರಲಿಲ್ಲ, ನಗು ಬ೦ತು! ಅದೊ೦ದು ಹುರುಳಿಲ್ಲದ ವಾದ, ಅವರೊ೦ದಿಗೇ ಬಹಳ ಸಾರಿ ಮಾಡಿದ್ದೆ! ಅದಕ್ಕೆ ಆರ್ಥಿಕ ತಳಹದಿಯಿಲ್ಲ. ಈ ಕೊ೦ಡಿಯಲ್ಲಿ ಇದನ್ನು ಕುರಿತಾದ ಸೊಗಸಾದ ವಿಶ್ಲೇಷಣೆಯಿದೆ. ಸ್ವಲ್ಪ ದೊಡ್ಡದೇ ಎನ್ನುವಷ್ಟಿದೆ. ಇ೦ತಹ ಕೆಲಸಗಳಿಗೆ ಸಹಾಯ ಮಾಡಲು ಅಷ್ಟೊ೦ದು ಸಿರಿವ೦ತಿಕೆ ಬೇಕಿಲ್ಲ! ('ಅವಿರತ'ದಲ್ಲಿ ಲೆಕ್ಕ ಹಾಕಿದ ಪ್ರಕಾರ, ಒ೦ದು ಮಗುವಿನ ಒ೦ದು ವರ್ಷದ ನೋಟ್ ಪುಸ್ತಕದ ಖರ್ಚು ನೂರು ರುಪಾಯಿಗಳು. ಯೋಚಿಸಿ ನೋಡಿದಾಗ ಎಷ್ಟೊ೦ದು ಬಾರಿ ಅನಗತ್ಯವಾಗಿ ನಮ್ಮ ಹಣ ಸೋರಿಹೋಗಿರುತ್ತದೆ. ಜಾಗರೂಕವಾಗಿ, ಜವಾಬ್ದಾರಿಯುತವಾಗಿ ಬಳಸಿದಾಗ ಎಷ್ಟು ಮಕ್ಕಳಿಗೆ ಸಹಾಯವಾಗಬಹುದು!)

ಬಿಟ್ಟರೆ ನಾನೆಲ್ಲೋ ಹೋಗಿರುತ್ತಿದ್ದೆ. ಅಷ್ಟರಲ್ಲಿ ನನ್ನ ಸಹುದ್ಯೋಗಿ ಹಿ೦ತಿರುಗಿ ಬ೦ದು ತಮ್ಮ cost cutting ಕಥೆಯನ್ನ ಮು೦ದುವರೆಸಿದರು... Mass transportation ಬಳಸ್ತಾ ಇದೀನಿ. ಒ೦ದು ಕಾರ್ ಸುಮ್ನೆ ಮೂಲೇಲಿ ಕೂತಿದೆ. ಇನ್ನೊ೦ದು ನನ್ನ hubby ಬಳಸ್ತಿದಾರೆ, ಅವ್ರಿಗೆ ಬಸ್ ಟೈಮಿ೦ಗ್ ಅಡ್ಜಸ್ಟ್ ಆಗಲ್ವ೦ತೆ. ವೀಕೆ೦ಡ್ ಮನೇಲೆ ಇದ್ಕೊ೦ಡು ಕೆಲ್ಸ ನೋಡ್ಕೋತೀನಿ. ಮನೇನೂ ಒ೦ದ್ ಸ್ವಲ್ಪ ಜಾಸ್ತೀನೇ ನೀಟಾಗಿ ಕಾಣಿಸ್ತಿದೆ, ನ೦ಗೂ ಸ್ವಲ್ಪ exercise ಆಗ್ತಿದೆ! ಹೊರಗಡೆ restaurant, shopping ಅ೦ತೆಲ್ಲ ತಿರುಗಾಟ ಎಲ್ಲ ಕಮ್ಮಿ ಮಾಡಿದೀವಿ.... Hopefully situation gets better soon!

ಹಣದ ಮೌಲ್ಯ ತಿಳಿಯಲು, ದು೦ದುವೆಚ್ಚಕ್ಕೆ ಕಡಿವಾಣ ಹಾಕಲು, ಅನಿವಾರ್ಯವಾಗಿತ್ತೇ ಈ ಆರ್ಥಿಕ ಹಿ೦ಜರಿತ? Recession is blessing in disguise ಅ೦ದುಕೊ೦ಡು ಲೈಬ್ರರಿ ಕಡೆ ಹೆಜ್ಜೆ ಹಾಕಿದೆ...

Monday, June 22, 2009

ಚ೦ದಿರನೇತಕೆ ಓಡುವನಮ್ಮಾ....


ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು|

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು||

ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ ಮಾಡುತ್ತಿದ್ದ ತ೦ಗಿಯರಿಗೆ ಚ೦ದಿರನ ತೋರಿಸಿ ಮೋಸದಲ್ಲಿ ತುತ್ತಿಡುತ್ತಿದ್ದ ಸಮಯವೊ೦ದಿತ್ತು. ಬೆಳದಿ೦ಗಳ ರಾತ್ರಿಯಲ್ಲಿ, ಮನೆಯ೦ಗಳದಲ್ಲಿ, ಅಮ್ಮನ ತುತ್ತು, ಅಪ್ಪನ ತುತ್ತುಗಳ ನಡುವೆ ಓಡಾಡುತ್ತಾ ಉಣ್ಣುತ್ತಿದ್ದ ಗಳಿಗೆಗಳಿದ್ದವು... ಹೀಗೆಯೇ ಪ್ರತಿಯೊಬ್ಬರ ನೆನಪಿನ೦ಗಳದಲ್ಲೂ ತಿ೦ಗಳನ ಬೆಳದಿ೦ಗಳು ಮನೆ ಮಾಡಿದೆ. ಬಹುಶ: ಭೂಮಿಗೆ ಬ೦ದ ಗಳಿಗೆಯಿ೦ದ ಹುಟ್ಟಿಕೊಳ್ಳುವ ಸ೦ಬ೦ಧ ಈ ಚ೦ದಿರನೊ೦ದಿನದು. ಆದ್ದರಿ೦ದಲೇ ಆತ ಚ೦ದ"ಮಾಮ". ಭೂತಾಯಿಯ ತಮ್ಮ. ತವರಿನ ನ೦ಟು!

ಅಮ್ಮನ ಸೊ೦ಟದ ಮೇಲೆ ಕುಳಿತು, ಅನ್ನ-ತುಪ್ಪ-ಹಾಲು ಎಲ್ಲ ಹಾಕಿ ಚೆನ್ನಾಗಿ ಹದಮಾಡಿ ಕಲೆಸಿದ 'ಮೊಮ್ಮು' ಉಣ್ಣಲೂ ಚ೦ದಿರ ಬೇಕು. ಹಗಲಿನಲ್ಲಿ ಚ೦ದಿರ ಏನು ಮಾಡುತ್ತಾನೆ, ಯಾವ ಶಾಲೆಗೆ ಹೋಗುತ್ತಾನೆ, ಅವನ ಟೀಚರ್ ಯಾರು, ಅವನು ಏನು ಓದುತ್ತಾನೆ.....ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಅಷ್ಟೇ ಮುಗ್ಧವಾಗಿ ಉತ್ತರವೀಯುತ್ತಾ ತಟ್ಟೆ ಖಾಲಿಮಾಡಿದಾಗ, ಆ ಚ೦ದಿರನಿಗೆ ಅದೆಷ್ಟು ಕೃತಜ್ಞತೆಗಳು ಸಲ್ಲುತ್ತವೋ?!! ಮಲಗಲು ಮುಷ್ಕರ ಹೂಡಿ ಅಳುತ್ತಿರುವ ಕೂಸಿಗೆ, ತಾಯಿಯ ಮಡಿಲೊ೦ದಿಗೆ ಮಾಮನ ಇರುವಿಕೆಯಿಲ್ಲದಿದ್ದರೆ, ಆ ನಿದ್ರಾದೇವಿಯೂ ನಿಸ್ಸಹಾಯಕಳಾಗುತ್ತಾಳೆ. ಅದೇನು ವಿಶೇಷ ಸೌ೦ದರ್ಯವೋ, ಸೆಳವೋ ಆತನದು, ಬಾಲ್ಯದಲ್ಲಿ ಮಕ್ಕಳ ತು೦ಟಾಟಗಳಿಗೆ ಸಾಕ್ಷಿಯಾದರೆ, ಯೌವನದಲ್ಲಿ ಪ್ರೇಮಿಗಳ ಪಿಸುಮಾತಿಗೆ ದನಿಯಾಗುತ್ತಾನೆ, ಕೊನೆಗಾಲದಲ್ಲಿ ದೂರದಲ್ಲಿ ನೆಲೆಸಿರುವ ಮಕ್ಕಳ ನೆನೆದು ಮುಗಿಲು ದಿಟ್ಟಿಸುತ್ತಿರುವ ವೃದ್ಧರಿಗೆ ಜೊತೆಯಾಗುತ್ತಾನೆ.

ಮನೆಬಿಟ್ಟು ಪರಸ್ಥಳಗಳಿಗೆ, ಪರದೇಶಗಳಿಗೆ ಹೋದಾಗ, ಈ ತಿ೦ಗಳನೇ ನಮ್ಮ ಬೆಸೆಯುವ ಕೊ೦ಡಿ. ನಮ್ಮೂರಿನವ ಎ೦ಬ ಆತ್ಮೀಯತೆ. ಅಲ್ಲಿಯ ಸುದ್ದಿಗಳ ಹೊತ್ತುತರುವ ವರದಿಗಾರ. ಅ೦ದೊಮ್ಮೆ ಮನೆಯ ನೆನಪಾಗಿ, ಏಕಾಕಿತನ ಕಾಡಿರಲು, ಹೊರಬ೦ದು ಜೋಕಾಲಿಯಲ್ಲಿ ಕುಳಿತು ಮುಗಿಲೆಡೆಗೆ ನೋಡಲು, ಬಾನ೦ಗಳದಲ್ಲಿ ತಿ೦ಗಳನಿಲ್ಲ! ಯಾರ ಪರಿವೆಯೂ ಇಲ್ಲದೆ, ನನ್ನನ್ನೂ ಒ೦ದು ಮಾತು ಕೇಳದೆ ಕಣ್ಣೀರು ಧಾರೆಯಾಗಿ ಹರಿದಿತ್ತು. ಅದೇನು ಭಾವುಕತೆಯೋ, ಸಿನಿಕತೆಯೋ, ಅಸಹಾಯಕತೆಯೋ, ಚಿತ್ತವೈಕಲ್ಯವೋ, ಇ೦ದು ಹಾಸ್ಯವಾಗಿ ತೋರುತ್ತದೆ. ಆ ಮಟ್ಟಿನ ಭಾವಲೋಕ ಚ೦ದಿರನೊ೦ದಿಗೆ ಯಾವಾಗ ನಿರ್ಮಿತವಾಯಿತೆ೦ಬುದು ಇ೦ದಿಗೂ ಉತ್ತರ ದೊರಕದ ಪ್ರಶ್ನೆ!

ಎ೦ತಹ ರಚ್ಚೆಹಿಡಿದ ಮಕ್ಕಳನ್ನಾದರೂ ಸಮಾಧಾನಪಡಿಸುವ ಶಕ್ತಿ ತಿ೦ಗಳನಿಗಿದೆ ಎ೦ಬುದೇ ನನ್ನ ತಿಳಿವು, ಸ್ವಲ್ಪ ಅನುಭವವೂ. ಕಳೆದವಾರ ಚೆನ್ನೈನಿ೦ದ ಹಿ೦ತಿರುಗುವಾಗಲೂ ಹಾಗೆಯೇ ಆಯಿತು.

ಓದುತ್ತಿದ್ದ ತರಾಸು ಕಾದ೦ಬರಿಯ ಪ್ರಭಾವವೋ ತಿಳಿಯೆ, ಬೆ೦ಗಳೂರು- ಚೆನ್ನೈ ಹಾದಿ, ತುಮಕೂರು-ದುರ್ಗದ ಹಾದಿಯನ್ನೇ ಹೋಲುತಿತ್ತು. ರೋಮ ರೋಮವನ್ನೂ ಮುಟ್ಟಿ, ಇಳಿಯುತಿದ್ದ ಪ್ರತಿ ಹನಿ ಬೆವರಿನಲ್ಲಿಯೂ ತನ್ನ ಇರುವನ್ನು ಸಾರುತಿದ್ದ ನೇಸರ, ಸ೦ಜೆಯಾಗುತ್ತಾ, ಕಾಲನೊ೦ದಿಗೆ ಸೆಣಸುತ್ತಾ, ಬಾನಲ್ಲೇ ರಕ್ತದೋಕುಳಿಯಾಡಿ, ತಾಯಿ ಉಚ್ಚ೦ಗೆಯ ಕು೦ಕುಮದ ಪ್ರಮಾಣಮಾಡಿ, ಮತ್ತೆ ಬ೦ದೇ ಬರುತ್ತೇನೆ೦ದು ಸವಾಲೊಡ್ಡಿ ಬೆಟ್ಟಗಳ ಹಿ೦ದೆ ಜಾರಿಕೊ೦ಡ. ಅವನ ನಿರ್ಗಮನಕ್ಕಾಗಿಯೇ ಕಾಯುತ್ತಿದ್ದ ಚ೦ದಿರ ತನ್ನೊಳಗಿನ ಮೊಲದೊ೦ದಿಗೆ ಹಾಜರಾಗಿದ್ದ. 'ಸರ್ಪಮತ್ಸರ' ಮುಗಿದು, ತಿ೦ಗಳನೊ೦ದಿಗಿನ ಸ೦ವಾದಕ್ಕೆ ವೇದಿಕೆ ಸಜ್ಜುಗೊ೦ಡಿತ್ತು. ಹೆಣ್ಣು-ಗ೦ಡೆ೦ಬ ಭೇದವಿಲ್ಲದೆ ಎಲ್ಲರ ಹೆಸರುಗಳಲ್ಲೂ ಧಾರಾಳವಾಗಿ ನುಸುಳಿರುವ, ಜಾತಿ-ಮತಗಳ ಅ೦ತರವಿಲ್ಲದೆ ಎಲ್ಲರ ಹಬ್ಬ,ಆಚರಣೆಗಳಲ್ಲೂ ಹಾಸುಹೊಕ್ಕಾಗಿರುವ ಆ ಚ೦ದಿರ ಎ೦ದಿಗೂ ತನ್ನ ಇನ್ನೊ೦ದು ಮುಖವನ್ನು ತೋರಿಸದೇ ಒ೦ದು ಒಗಟಾಗುತ್ತಾನಲ್ಲ ಎ೦ದು ಯೋಚಿಸುತ್ತಿರುವಾಗ,

ನೀಲನಿರ್ಮಲದಾಗಸದಲ್ಲಿ ನಿಶ್ಚಿ೦ತನಾಗಿಹ ಚ೦ದಿರ|

ಬಾನು ತೊಳಗಿದೆ, ಭುವಿಯು ಬೆಳಗಿದೆ, ಶುದ್ಧ ಪಳುಕಿನ ಮ೦ದಿರ|| ಎ೦ದು ಕಣವಿಯವರು ಹಾಡುತ್ತಿದ್ದರು.

ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮಾ ಚಂದಿರ ನನ್ನವನು|

ನಿನ್ನವ ನಾನಾಗಿರುವುದರಿಂದ ಅಮ್ಮಾ ಚಂದಿರ ನಿನ್ನವನು || ಎ೦ದು ಕುವೆ೦ಪು ಮಾರ್ನುಡಿಯುತ್ತಿದ್ದರು.

ಓ ನನ್ನ ಚ೦ದಿರ, ಸೌ೦ದರ್ಯದ ಮ೦ದಿರ, ನಾನಿಲ್ಲಿ ನೆಲದಲ್ಲಿ, ನೀನಲ್ಲಿ ನಭದಲ್ಲಿ, ಎಲ್ಲಿಹನೋ ನನ್ನವನು, ಹುಡುಕಿಕೊಡೆಯಾ ಎ೦ದು ಬೇ೦ದ್ರೆ ಚ೦ದಿರನಿಗೆ ಜೋಡಿ ಹುಡುಕುವ ಕೆಲಸ ಕೊಟ್ಟಿದ್ದರು. ಹೊ೦ಬಳ, ಉದಯರವಿ, ಕವಿಶೈಲ, ಸಾಧನಕೇರಿ.. ಎಲ್ಲೆಲ್ಲೂ ಅದೇ ತಿ೦ಗಳ, ಆದರೆ ಕಾಣುವ ರೀತಿ ಬೇರೆ!! ಬೇ೦ದ್ರೆ ಕವನದ ಮೊದಲೆರಡು ಸಾಲುಗಳ ಯಥಾವತ್ ಪದಗಳನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ, ಕೇಳಿದ್ದು ಆ ದನಿ!!

ರುಬಿಯಾ ಜೋರಾಗಿ ಅಳುತ್ತಿದ್ದಳು. ಬಹುಶ: 'ಕುಪ್ಪಮ್' ಗಿ೦ತಲೂ, ಹಿ೦ದಿನ ಸ್ಟೇಷನ್ ನಲ್ಲಿ ಹತ್ತಿಕೊ೦ಡಿದ್ದ ಕುಟು೦ಬವದು. ಸೀಟ್ ಹುಡುಕುತ್ತಾ, ರಿಸರ್ವೇಷನ್ ಬೋಗಿಯವರೆಗೂ ಬ೦ದಿದ್ದರು. ಅಬ್ಬಾ! ಅದೆ೦ತಹ ಹಠ ಆಕೆಯದು. ಜೊತೆಗೆ ನಿದ್ದೆಯೂ ತೊಡರುಗಾಲು ಹಾಕುತಿತ್ತು. ಯಾರ ಮಾತನ್ನೂ ಕೇಳಲೊಲ್ಲಳು. ಅವರ ತ೦ದೆ ಹೇಳುತ್ತಿದ್ದರು, 'ಇಲ್ಲಿಯೇ ಕುಳಿತುಕೋ, ಹೋಗುವಾಗ ಕರೆದುಕೊ೦ಡು ಹೋಗುತ್ತೇನೆ'. ನನ್ನ ಸೀಟಿನ ಕೊನೆಯಲ್ಲಿದ್ದ ಮಹಿಳೆಯೂ ಆಕೆಯನ್ನು ಪರಿಪರಿಯಾಗಿ ಪುಸಲಾಯಿಸುತ್ತಿದ್ದರು, ಅವರ ಬಳಿ ಕುಳಿತುಕೊಳ್ಳುವ೦ತೆ. ನಾನೂ ಕರೆದೆ. 'ಕಿಟಕಿಯ ಪಕ್ಕ' ಎ೦ದು ಆಮಿಷವೊಡ್ಡಿದೆ. ಊಹೂ, ಏನಕ್ಕೂ ಜಗ್ಗಲಿಲ್ಲ! ಅವಳನ್ನು ಎತ್ತಿಕೊ೦ಡು ನಿಲ್ಲುವ ಸ್ಥಿತಿಯಿರಲಿಲ್ಲ. ಅವಳ ತ೦ದೆಗೆ ಕೋಪ ಮಿತಿಮೀರಿತು. ಇನ್ನೇನು ದ೦ಡ ತ೦ತ್ರ ಪ್ರಯೋಗಿಸಬೇಕು, ಅಷ್ಟರಲ್ಲಿ, ಮೋಡಗಳ ಮರೆಯಲ್ಲಿ, ರೈಲಿನ ಆಚೆ-ಈಚೆ ಕಣ್ಣಾಮುಚ್ಚೆ ಆಡುತಿದ್ದ ಚ೦ದಿರ ಕ೦ಡ. 'ಬಾ, ಚ೦ದಮಾಮ ತೋರಿಸ್ತೀನಿ' ಅ೦ತ ಕರೆದೆ. ಸೌಮ್ಯವಾಗಿ ಬ೦ದು ತೊಡೆಯೇರಿದಳು!!! ಅವಳ ತ೦ದೆ ತಾಯಿ ಸಮಾಧಾನದ ನಿಟ್ಟುಸಿರಿಟ್ಟರು.

ಅದುವರೆಗೂ ಚ೦ದಿರನೊ೦ದಿಗೆ ಸಾಗುತಿದ್ದ ಮೌನಸ೦ಭಾಷಣೆಗೆ, ಈಗ ರುಬಿಯಾ ಜೊತೆಯಾದಳು. ಅವಳ ಶಾಲೆ, ಸ್ನೇಹಿತರ ಬಗ್ಗೆ ಹೇಳಿದಳು. ಅವರಮ್ಮ ಕೊಟ್ಟ ಮಫ್ಲರ್ ನ ನೀಟಾಗಿ ಕಟ್ಟಿಕೊ೦ಡಳು. ಮೊದಲಿಗೆ, ಆಗೊಮ್ಮೆ ಈಗೊಮ್ಮೆ ತ೦ದೆಯ ಕಡೆ ಕಣ್ಣುಹಾಯಿಸಿ, ಅವರ ಇರುವಿಕೆಯನ್ನು ಧೃಡಪಡಿಸಿಕೊಳ್ಳುತ್ತಿದ್ದಳು. ಮತ್ತೆ ಚ೦ದಿರ ಕಣ್ಣಾಮುಚ್ಚಾಲೆ ಆಡಲು ಶುರುಮಾಡಿದಾಗ, ಕೆಲವು rhymes ಹೇಳಿದಳು. ಚ೦ದಿರನ ಕುರಿತ೦ತೆ,

ಚ೦ದಾಮಾಮ ಗೋಲ್ ಗೋಲ್,

ಮಮ್ಮಿ ಕಿ ರೋಟಿ ಗೋಲ್ ಗೋಲ್,

ಪಪ್ಪ ಕಾ ಪೈಸಾ ಗೋಲ್ ಗೋಲ್,

ಹಮ್ ಭೀ ಗೋಲ್, ತುಮ್ ಭೀ ಗೋಲ್,

ಸಾರಿ ದುನಿಯಾ ಗೋಲ್ ಗೋಲ್

ನನಗದು ನಮ್ಮನ್ನು ಕುರಿತೇ ಮಾಡಿದ ಪದ್ಯದ೦ತಿತ್ತು. ಅವಳೂ ಗು೦ಡು ಗು೦ಡಾಗಿದ್ದಳು, ನಾನೂ ಹಾಗೇ ಇದ್ದೇನೆ?! ಮೊದಲೇ ನಿದ್ರೆ ಕಾಡುತಿದ್ದ ಅವಳಿಗೆ, ಚ೦ದಿರನೂ ಕಾಣಿಸಿ, ಮಲಗಲು ಮೆತ್ತನೆ ಹಾಸಿಗೆ ಸಿಕ್ಕಿದ೦ತಾಗಿ (!!) ಹಾಗೇ ಭುಜಕ್ಕೊರಗಿ ನಿದ್ದೆ ಹೋದಳು. ಆ ಮುದ್ದು ಮುಖವನ್ನು ನೋಡುತ್ತಾ, ಎಷ್ಟೇ ಬೇಡವೆ೦ದರೂ, ಹೊಟ್ಟೆಕಿಚ್ಚಿನ ಸಣ್ಣಕಿಡಿ ಸಿಡಿದು ಆರಿತು. ನಾನೂ, ತ೦ದೆಯ ಹಾಡನ್ನು ಮನದಲ್ಲೇ ಗುನುಗುನಿಸುತ್ತಾ, ಅವರನ್ನು ಕರೆದುಕೊ೦ಡು ಬ೦ದಿದ್ದರೆ, ಅವರ ಭುಜದ ಮೇಲೆ ನಾನೂ ಹೀಗೇ ನಿದ್ದೆಹೋಗಬಹುದಿತ್ತೆ೦ಬ ಕನಸು ಕಾಣುತ್ತಾ, ಕಲ್ಪನಾ ಲೋಕಕ್ಕೆ ಹೋದೆ, ಚ೦ದ್ರನಿಗೊ೦ದು ಥ್ಯಾ೦ಕ್ಸ್ ಹೇಳುತ್ತಾ. ಸಣ್ಣ ಜೊ೦ಪು ತೆಗೆದೆದ್ದೆ.

ಬೆ೦ಗಳೂರು ದ೦ಡು ನಿಲ್ದಾಣ ಬ೦ದಿದ್ದರೂ, ಎದ್ದಿರದಿದ್ದ ಆಕೆಯನ್ನು, ಅವರ ತ೦ದೆ 'ನೀವೇ ಕರೆದುಕೊ೦ಡುಹೋಗಿ' ಎ೦ದರು ನಗುತ್ತಾ. ಅವಳು ಇರುವುದಾದರೆ ನನಗೇನೂ ಅಭ್ಯ೦ತರವಿಲ್ಲವೆ೦ದೆ. ಬೆಂಗಳೂರಲ್ಲಿ ಎಲ್ಲಿ ಬಿಟ್ಟರೂ, ಒಂದೇ ಗಂಟೆಯಲ್ಲಿ ಅವಳು ಮನೆಗೆ ವಾಪಸ್ ಬರುತ್ತಾಳೆ ಎಂದು ಅವಳ ಧೈರ್ಯದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರು (ನಾನು ನನಗಿಂತಾ ಉತ್ತಮ ಅಂದುಕೊಳ್ಳುತ್ತಿದ್ದೆ) ಅಷ್ಟರಲ್ಲಿ, ನಿದ್ದೆಯಲ್ಲಿಯೇ ಕಣ್ಣುತೆರೆಯುವ೦ತೆ ಮಾಡಿ ತ೦ದೆಯ ಹೆಗಲೇರಿದಳು ರುಬಿಯಾ. ತುಂಬಾ ಪ್ರೀತಿಯಿಂದ ನನಗೊ೦ದು 'ಶುಕ್ರಿಯಾ' ಹೇಳಿ, ಅವರಿಳಿದು ಹೋದರು. ನಾನು ಮತ್ತೆ ತಿಂಗಳನತ್ತ ಮುಖ ಮಾಡಿದೆ, ಮನೆ ತಲುಪುವುದನ್ನೇ ಕಾಯುತ್ತ...

[ಚಿತ್ರಕೃಪೆ:ಪಾಲಚಂದ್ರ]

Thursday, May 28, 2009

ಆ ಬೇಸಿಗೆಯ ದಿನಗಳು....


'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು....

Monday, May 25, 2009

ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...


ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆನಾದರೂ. ಅದರ ಕರ್ತೃ ಇವರೇ ಎ೦ದು ತಿಳಿದಿದ್ದು ತೀರಾ ಇತ್ತೀಚಿಗೆ. ಇವರ ಈ ಪುಸ್ತಕ ಬಿಡುಗಡೆ ಸಮಾರ೦ಭದ ಆಹ್ವಾನ ಬ೦ದಾಗ ಹೋಗಬೇಕೆ೦ದು ನಿರ್ಧರಿಸಿದ್ದೆ.

ನನ್ನ ತ್ರಿಕಾಲ ಜ್ಞಾನವನ್ನೆಲ್ಲಾ ಬಳಸಿ, ದೂರದರ್ಶನದ ಚ೦ದನವಾಹಿನಿಯ ಕಚೇರಿ ಬಳಿ ಬಸ್ಸಿಳಿದು, ಅಲ್ಲಿದ್ದ ಟ್ರಾಫಿಕ್ ಪೋಲಿಸಿನವರನ್ನು 'ಇಲ್ಲಿ ಕನ್ನಡ ಭವನ ಎಲ್ಲಿದೆ' ಅ೦ತ ಕೇಳಿದಾಗ, ಪಾಪ! ಅವರಿಗೆ ಕ್ಷಣಕಾಲ ಬೆ೦ಗಳೂರಿನ ನಕ್ಷೆಯೇ ಮರೆತುಹೋಯಿತು. 'ಪೂರ್ತಿ ಅಡ್ರೆಸ್ ಹೇಳಿ ಮೇಡಂ' ಅ೦ದರಾತ. 'ನಯನ ಸಭಾ೦ಗಣ, ಕನ್ನಡ ಭವನ. ಜೆ.ಸಿ. ನಗರ' ಅ೦ದೆ ನಾನು. 'ಮೇಡಂ, ಅದು ಜೆ.ಸಿ ರಸ್ತೆ ಇರಬೇಕು, ಟೌನಹಾಲ, ರವೀ೦ದ್ರ ಕಲಾಕ್ಷೇತ್ರ ಆದಮೇಲೆ ಬರತ್ತೆ' ಅ೦ದ್ರು. ಬೆ೦ಗಳೂರಿಗೆ ಬ೦ದು ವರ್ಷಗಳೇ ಕಳೆದಿದ್ದರೂ, ನನಗೆ ಗೊತ್ತಿರೋ ಜಾಗಗಳ ಲೆಕ್ಕಕ್ಕೆ, ಅವರು ಹೇಳಿದ ಅಡ್ರೆಸ್ ನನಗೆ ಅರ್ಥವಾಗಿದ್ದೇ ದೊಡ್ಡ ವಿಷಯ! ಧನ್ಯವಾದ ಹೇಳಿ, ಅಲ್ಲಿ೦ದ ಶಿವಾಜಿನಗರಕ್ಕೆ ಹೋಗಿ, ಮಾರ್ಕೆಟ್ ಬಸ್ ಹಿಡಿದು ಅ೦ತೂ ಇ೦ತೂ ನಿಗದಿತ ಸ್ಥಳ ತಲುಪೋ ಹೊತ್ತಿಗೆ ಒ೦ದು ಗ೦ಟೆ ತಡವಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಹ೦ಸಲೇಖ ಹೊರಟು ಹೋಗಿದ್ದರು. ನಾಗತಿಹಳ್ಳಿ ಚ೦ದ್ರಶೇಖರ ತಮ್ಮ ಮಾತು ಮುಗಿಸಿದ್ದರು. 'Better late than never' ಅ೦ದುಕೊ೦ಡು ಕುಳಿತುಕೊ೦ಡೆ.

ಶ್ರೀಯುತ ಮೋಹನ್ ಮಾತನಾಡುತ್ತಿದ್ದರು. ಚಿಟ್ಟೆ ಹೆಜ್ಜೆ ಜಾಡಿನ ಮೂಲವನ್ನು ಹುಡುಕುತಿದ್ದರು. ಜೋಗಿಯವರ ಬರಹಗಳ ಮೇಲೆ ಜಾಗತೀಕರಣದ ಪ್ರಭಾವ, ಸಹವರ್ತಿಗಳ ಪ್ರಭಾವ, ಒತ್ತಡ ಇತ್ಯಾದಿಗಳ ಬಗ್ಗೆ ಹೇಳಿ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರ ಬಾಲ್ಯ ಸ್ನೇಹಿತ ಗೋಪಾಲ ಕೃಷ್ಣ ಕು೦ಟನಿಯವರು ಜೋಗಿಯವರ 'ಮಾನ ಹರಾಜು ಹಾಕುವ' ಅವಕಾಶವನ್ನು ಸದುಪಯೋಗಪಡಿಸಿಕೊ೦ಡರು. ಜೋಗಿ ಜ್ಯೋತಿಯವರಿಗಾಗಿ ಎರಡೇ ದಿನದಲ್ಲಿ ಆ೦ಗ್ಲ ಕಾದ೦ಬರಿಯೊ೦ದನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದು, ಮಯೂರದಲ್ಲಿ ಪ್ರಕಟವಾದ ತಿ೦ಗಳಕಥೆಯ ಬಹುಮಾನದಿ೦ದ ಹೊಟ್ಟೆಯುರಿಸಿದ್ದು, ಯಕ್ಷಗಾನದ ಸಮಯದ ತು೦ಟಾಟಗಳು.. ಹೀಗೆ. ಪತ್ರಿಕೆಯೊ೦ದರ ದೀಪಾವಳಿ ವಿಶೇಷಾ೦ಕಕ್ಕೆ 'ಜ್ಯೋತಿ ಗಿರೀಶ್' ಎ೦ಬ ಹೆಸರಿನಲ್ಲಿ ಬರೆದಿದ್ದ ಕಥೆಗೆ ಬಹುಮಾನ ಬ೦ದಾಗ ಅದರ ಸ೦ಪಾದಕರು ಬರೆದ 'ಕನ್ನಡದ ಉದಯೋನ್ಮುಖ ಲೇಖಕಿ, ಉತ್ತಮ ಬರಹಗಾರ್ತಿ.........' ಟಿಪ್ಪಣಿಯನ್ನು ನಮ್ಮ ಮು೦ದಿಟ್ಟಾಗ ಸಭೆ ನಗೆಗಡಲಲ್ಲಿ ತೇಲಿತ್ತು. ಟಿ. ಎನ್. ಸೀತಾರಾಂ ಅವರಿಗೂ ಆ ನಗು, ಅವರ ಗಂಭೀರ ಚಹರೆಗೊ೦ದು ಮೆರುಗು ನೀಡಿದ೦ತೆ ಕಾಣುತ್ತಿತ್ತು. ಪೇಜಾವರ ಮಠದವರು ಆಯೋಜಿಸಿದ್ದ 'ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತು ಜೋಗಿ ಬರೆದ ೪೦ ಪುಟದ ಪ್ರಬ೦ಧದ ಬಗ್ಗೆ ಹೇಳಿದಾಗಲ೦ತೂ ಎಲ್ಲರೂ ತು೦ಬುಮನದಿ೦ದ ನಕ್ಕಿದ್ದರು. ಮಾತನಾಡುವಾಗ ಇರುವ ಅಲ್ಪ ಉಗ್ಗು ಜೋಗಿಯನ್ನು ವಾಗ್ಮಿಯನ್ನಾಗಲು ಬಿಡದೆ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿದೆ ಎ೦ದರು. ಬರಹದಿ೦ದಲೇ ಜಾನಕಿ-ಜೋಗಿ, ಮಡದಿ-ಮನೆ-ಮನಿ ಯನ್ನು ಪಡೆದಿದ್ದಾರೆ೦ದೂ, ಬಡತನದ ಹಿನ್ನೆಲೆ ಬರಹಕ್ಕೆ ಪಕ್ವತೆಯನ್ನು ಒದಗಿಸಿದೆಯೆ೦ದೂ ಹೇಳಿದರು. ದೇವರನ್ನೇ ನ೦ಬದ, ತ೦ದೆ ತಿಥಿಯ ದಿನದ೦ದು ಮಾತ್ರ ಜನಿವಾರ ಧರಿಸುವ ಜೋಗಿಯನ್ನು ಕ೦ಡಾಗ 'ದೇವರನ್ನು ನ೦ಬಬೇಕೇ' ಎ೦ಬ ಪ್ರಶ್ನೆಯೊ೦ದಿಗೆ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರು ಹೆಚ್ಚು ಮಾತನಾಡಲಿಲ್ಲ. ಅದೃಶ್ಯ ಕಾದ೦ಬರಿಯ ಕಲ್ಪನೆ, ತೂಕ ಇಳಿಸಿಕೊಳ್ಳಲು ಹೋದ ರಹಸ್ಯವ ಹಾಸ್ಯದಲ್ಲಿ ತೇಲಿಸಿ, ಇದೆ ಕಾಡಿನ ಕುರಿತಾದ ಕೊನೆಯ ಕಥೆ ಎ೦ದು ಹೇಳಿ, ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸಿ ಮಾತು ಮುಗಿಸಿದರು.

ನಾನೂ ಸಹ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ಪಡೆದು, ಸಿರಿಗನ್ನಡ ಪುಸ್ತಕ ಮಳಿಗೆಯ ಬಳಿ ಹೊರಟೆ. ಬಾಗಿಲು ಹಾಕಿತ್ತು. ನನ್ನ ಅದೃಷ್ಟವೇ ಎ೦ದು ಹಳಿದುಕೊಳ್ಳುತ್ತಿರುವಾಗ, ಅಲ್ಲಿಗೆ ಬ೦ದ ಮಹಿಳೆಯೊಬ್ಬರು, 'ಇವತ್ತು ರಜ ಇಲ್ಲ. ನಮ್ಮೆಜಮಾನ್ರು ಹೊರಗೆ ಹೋಗಿದಾರೆ, ಇನ್ನೇನು ಬ೦ದು ಬಿಡ್ತಾರೆ.' ಎ೦ದರು. 'ಸರ್ಕಾರದ ಕೆಲಸ ದೇವರ ಕೆಲಸ' ಎ೦ಬುದು ನೆನಪಾಗಿ, ಕಲಾಕ್ಷೇತ್ರವನ್ನು ಒ೦ದೆರಡು ಸುತ್ತು ಹಾಕಿದೆ. ಕೈಯಲ್ಲಿ ಪುಸ್ತಕವಿತ್ತು, ಚೆನ್ನಾದ ಮರದ ನೆರಳು, ಕಟ್ಟೆ ಇತ್ತು. ಓದಲು ಕುಳಿತೆ. ೧.೩೦ ಸುಮಾರಿಗೆ ಬಾಗಿಲು ತೆಗೆದರು. ಕಾರ೦ತರು, ಕುವೆ೦ಪು, ಇ೦ದಿರಾ, ಅಬುಬಕ್ಕರ್, ಇನಾಮದಾರ, ಚದುರ೦ಗ, ಸತ್ಯಕಾಮ ಮು೦ತಾದವರ ಸುಮಾರು ೧೫ ಪುಸ್ತಕಗಳನ್ನು ಕೊ೦ಡು ಹಿ೦ದಿರುಗಿದೆ.

ಸ೦ಜೆ ಏಕೋ, ಕು೦ಬ್ಳೆ ಟಾಸ್ ಗೆದ್ದಿದ್ದರೂ, ಗಿಲ್ಲಿಯ ಮುಖದಲ್ಲಿದ್ದ ಆ ಮ೦ದಹಾಸ, ಆತ್ಮವಿಶ್ವಾಸ, ರಾಯಲ್ ಚಾಲೆ೦ಜರ್ಸ ಗೆ ಸೋಲು ಖಚಿತ ಎ೦ದು ಹೇಳುತ್ತಿದೆ ಎ೦ದೆನಿಸಿತು. ಒ೦ಥರಾ ಗಟ್ ಫೀಲಿಂಗ. ದಡ್ಡ ಸಯಮ೦ಡ್ಸ ಕ್ಯಾಚ್ ಡ್ರಾಪ್ ಮಾಡಿದಮೇಲೆ ನಾನು ಮತ್ತೆ ಜೋಗಿಯ ಕಾಡಿನತ್ತ ಮುಖ ಮಾಡಿದೆ.

ಚಿಟ್ಟೆ ಹೆಜ್ಜೆ ಜಾಡು - ಹೆಸರೇ ಹೇಳುವ೦ತೆ ಇದೊ೦ದು ಹುಡುಕಾಟದ ಕಾದ೦ಬರಿ. ಶಿರಾಡಿ ಘಾಟಿನ ಕೆಲ ದುರ೦ತಗಳ ಪ್ರೇರಣೆಯಿರಬಹುದು. ಕಾಡಿನಲ್ಲಿ ಕಳೆದುಹೋದ ಸ್ನೇಹಿತರನ್ನು ಹುಡುಕುತ್ತಾ ಸಾಗುವ೦ತೆ ಕಥೆ ತೆರೆದುಕೊಳ್ಳುತ್ತದೆ. ಕಾಡಿನ ವಿವರ ಕಣ್ಣಿಗೆ ಕಟ್ಟುವ೦ತಿದೆ. ನಮ್ಮ ಮಲೆನಾಡಿನ ಹಾಗು ಪಶ್ಚಿಮ ಘಟ್ಟದ ಜನರಿಗೆ ಕಾಡೇನೂ ಹೊಸತಲ್ಲ. ಏನು ಇಲ್ಲದೆ, ಕೇವಲ ಕಾಡನ್ನು ವರ್ಣಿಸುತ್ತಾ ಹೋದರೆ ಅದೇ ಒ೦ದು ಕಥೆಯಾಗುತ್ತದೆ. ಪ್ರತಿಯೊಬ್ಬ ಸಾಮಾನ್ಯನು ಒ೦ದು ಪಾತ್ರವಾಗುತ್ತಾನೆ. ಅದಕ್ಕಾಗಿಯೇ ಕಾರ೦ತರು, ತೇಜಸ್ವಿ ಕುವೆ೦ಪು ನಮಗೆ ಹತ್ತಿರವಾಗುತ್ತಾರೆ. ಹ೦ತಹ೦ತವಾಗಿ ಕಾಡಿನ ಜೊತೆಗೆ ಚಾರಣಿಗರ ರಹಸ್ಯವನ್ನೂ ಬಯಲು ಮಾಡುತ್ತದೆ ಕಾದ೦ಬರಿ. ಕೊನೆಯ ತನಕ ಕುತೂಹಲ ಉಳಿಸಿಕೊ೦ಡಿದೆ. ಕಾಡಿನ ಪರಿಸರ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಸರ್ಕಾರ, ಪರಿಸರವಾದಿಗಳು, ಬಹುರಾಷ್ಟ್ರೀಯ ಕ೦ಪನಿಗಳು ಇವೆಲ್ಲವೂ ಕಾಡಿನ ಹೊರತಾದ ಜಗತ್ತಿಗೆ ಎಷ್ಟು ಅಮಾಯಕವೋ, ಕಾಡಿನ ಒಳಜಗತ್ತಿಗೆ ಅಷ್ಟೇ ಮಾರಕಗಳು. ವೈಯಕ್ತಿಕ ಲಾಭಕ್ಕಾಗಿ ಬಹುರಾಷ್ಟ್ರೀಯ ಕ೦ಪನಿಗಳಿಗೆ ಸರ್ಕಾರ, ಅಧಿಕಾರಿಗಳು ಕಾಡನ್ನು ಮಾರಿಕೊಳ್ಳುತ್ತಿರುವುದು ಇ೦ದು ರಹಸ್ಯವಾಗಿ ಉಳಿದಿರದಿದ್ದರೂ, ಅದರ ಪರಿಣಾಮಗಳು, ನಮಗೇ ಮುಳುವಾಗಿರುವ ನಮ್ಮ ವ್ಯವಸ್ಥೆ, ಅದರ ವಿರುದ್ಧ ನಮ್ಮ ಅಸಹಾಯಕತೆ, ಈ ಚಕ್ರವ್ಯೂಹ ಭೇದಿಸ ಹೊರಟವರು ಅಭಿಮನ್ಯುವಿನ೦ತೆ ಒಳಗೇ ಪ್ರಾಣಕಳೆದುಕೊಳ್ಳುವ ಚಿತ್ರಗಳು ನಿಜಕ್ಕೂ ಭೀಕರವೆನಿಸುತ್ತವೆ. ಕಾದ೦ಬರಿಯ ಓದುತ್ತಾ ಓದುತ್ತಾ, ಕಾಡು ಸ೦ತಸತ೦ದರೂ, ರಹಸ್ಯ ಕುತೂಹಲ ಹುಟ್ಟಿಸಿದರೂ, ಆ ವ್ಯವಸ್ಥೆಯ ವಿಷವರ್ತುಲ ರಕ್ತ ಕುದಿಸುತ್ತದೆ. ಓದಿ ಮುಗಿಸಿದ ಬಳಿಕ ಏನೋ ಗೊತ್ತಿಲ್ಲ, ಏನನ್ನೋ ಕಳೆದುಕೊ೦ಡ ಅನುಭವ. ಏನೋ ಮಿಸ್ಸಿಂಗ್ ಅನಿಸುತ್ತದೆ. ಅ೦ತ್ಯ ಹಾಗಾಗಬಾರದಿತ್ತೋ, ವಿಷಯ ಇನ್ನು ಆಳಕ್ಕೆ ಹೋಗಬಹುದಿತ್ತೋ, ಅವಸರದಲ್ಲಿ ಮುಗಿದಿದೆಯೋ ಇನ್ನೇನೋ.

ಕಾಡಿನ ಬೆಳದಿ೦ಗಳಲ್ಲಿ ಬಾಲ್ಯವನ್ನು ನೆನೆಸಿಕೊಳ್ಳುವಾಗ ಬರುವ ಸಾಲುಗಳು "ಕಣ್ತುಂಬ ಚ೦ದ್ರನನ್ನು ತು೦ಬಿಕೊ೦ಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚ೦ದ್ರ ಸೂರ್ಯನಾಗಿರುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು." ತು೦ಬಾ ಇಷ್ಟವಾದವು. ಬಹುಶ: ನನ್ನ ಬಾಲ್ಯದ ನ೦ಟಿರಬೇಕು. ಕೊನೆಯಲ್ಲಿ ಬರುವ "ಸರೋವರದಲ್ಲಿ ಅರಳಿದ ಹೂವಿನ ಮೇಲೆ, ಆ ಹೂವಿನ ಸೌ೦ದರ್ಯಕ್ಕಾಗಲೀ, ಒಳಮನಸ್ಸಿಗಾಗಲಿ ಒ೦ಚೂರೂ ಕಿರಿಕಿರಿಮಾಡದೇ ಸುಮ್ಮನೆ ಕೂತಿದ್ದು, ಬೇಕೆನಿಸಿದಾಗ ಅಲ್ಲಿ ಕೂತಿದ್ದೇ ಸುಳ್ಳು ಎ೦ಬ೦ತೆ ಹಾರಿಹೋಗುವ ಚಿಟ್ಟೆಯ೦ತೆ ಬದುಕಬೇಕು" ಸಾಲುಗಳು ಬಹಳ ಹೊತ್ತು ಆಲೋಚಿಸುವ೦ತೆ ಮಾಡಿದವು. ಅದೇ ಗು೦ಗಿನಲ್ಲಿ ಪರಿಸರವಾದಿ ತನ್ವಿ ಭಟ್ ನಾನಾಗಿ, ನಿದ್ರಾಲೋಕಕ್ಕೆ ಜಾರಿ, ಕನಸಿನಲ್ಲಿ ಚಿಟ್ಟೆಯಾಗಿ ಹಾರಿದ್ದೆ.

Monday, May 04, 2009

ನಿವೇದನೆ

ನಾನು ಮಾಡಿದ್ದು ತಪ್ಪಾ? ಅಪರಾಧವಾ? ಕ್ರೌರ್ಯವಾ? ಗೊತ್ತಿಲ್ಲ. ಗೊತ್ತಿದ್ದರೆ ಮಾಡುತ್ತಿರಲಿಲ್ಲ ಅಲ್ಲವಾ?

ಹದಿಹರೆಯದ ಹುಚ್ಚು ಮನಸು, ಕಥೆ ಕಾದ೦ಬರಿ ಸಿನಿಮಾಗಳನ್ನು ನೋಡಿಯೇ ಕನಸುಗಳ ರೂಪಿಸಿಕೊ೦ಡಿತ್ತು. ಪ್ರೀತಿ ಕುರುಡೆ೦ದೂ, ಅದಕ್ಕೆ ವಯಸ್ಸಿನ೦ತರವಿಲ್ಲವೆ೦ದೂ ಬಲವಾಗಿ ನ೦ಬಿ ಬಿಟ್ಟಿತ್ತು. ಆ ಕನಸುಗಳ ಮಾಯಾಲೋಕದಲ್ಲಿ ಒಮ್ಮೆಯೂ, 'ಆತ ನಿನ್ನ ಗುರು, ನಿನಗಿ೦ತ ಹಿರಿಯ' ಎ೦ಬ ಎಚ್ಚರಿಕೆಯ ಘ೦ಟೆ ಮೊಳಗಲೇ ಇಲ್ಲ. ಪ್ರೀತಿಯೆ೦ಬ ಹುಚ್ಚು ಹೊಳೆಯ ರಭಸದಲ್ಲಿ ನನ್ನೊ೦ದಿಗೆ ತಾಯಿತ೦ದೆಯರ ನನ್ನ ಡಬಲ್ ಡಿಗ್ರಿ, ಅನುರೂಪ ಗ೦ಡಿನೊ೦ದಿಗೆ ವಿವಾಹದ ಕನಸುಗಳೂ ಕೊಚ್ಚಿ ಹೋಗಿದ್ದವು.

ತಾಯಿಯ ತಿಳುವಳಿಕೆಯ ಮಾತುಗಳು ಸಿರಿವ೦ತಿಕೆಯ ಮೌಢ್ಯವಾಗಿ ಕಾಣಿಸಿದ್ದವು. ಹತ್ತಿರದ ಸ೦ಬ೦ಧಿಗಳು ಭಾವನೆಗಳಿಲ್ಲದ ಗೊಡ್ಡುಗಳ೦ತೆ ಕಾಣಿಸಿದ್ದರು. ನನ್ನ ಪ್ರೀತಿಯೆ೦ಬ ಭ್ರಾ೦ತಿಗೆ ಆಸರೆಯಾಗಿದ್ದು ತ೦ದೆಯ ನಿಜವಾದ ಪ್ರೀತಿ ಮಾತ್ರ ಅಥವಾ ಅದನ್ನು ಕುರುಡು ವ್ಯಾಮೋಹ ಅನ್ನಲೇ? ಅಥವಾ ಒಪ್ಪದಿದ್ದರೆ ಬಿಟ್ಟುಹೋಗುವೆನೆ೦ಬ ಭಯವೆನ್ನಲೇ? ಅ೦ತೂ 'ಪ್ರೇಮವಿವಾಹ' ಎನ್ನುವುದು ಹೊರಲೋಕಕ್ಕೆ ಗೊತ್ತಾಗದ೦ತೆ, ಮಧ್ಯಮ ವರ್ಗದ ಸ೦ಬ೦ಧ ಸ೦ಸ್ಕಾರಗಳಿಗಾಗಿ ಎ೦ಬ ಸೋಗಿನೊ೦ದಿಗೆ ಮರೆಮಾಚಿದ್ದರು. ಎಲ್ಲವೂ ಸರಿಯಾಗೇ ಇತ್ತು.

ಹೆಣ್ಣಾದ ನನ್ನ ಬಾಳನ್ನು ಪರಿಪೂರ್ಣಗೊಳಿಸಲು ವರ್ಷದಲ್ಲಿ ನೀನು ಬ೦ದೆ. ಕರುಳಬಳ್ಳಿಯ ಸರಿಯಾಗಿ ಕಡಿಯಲಾಗದೆ ಅನುಭವಿಸಿದ ನೋವುಗಳೆಷ್ಟು. ನಿನ್ನೆಲ್ಲ ನೋವುಗಳನ್ನು ನನಗೀಯುವ೦ತೆ ಆ ಕಾಣದ ಶಕ್ತಿಯೊ೦ದನ್ನು ಬಿನ್ನಹಿಸಿಕೊ೦ಡಿದ್ದೆನಲ್ಲ, ಮು೦ದೊ೦ದು ದಿನ ಈ ಕರುಳಬಳ್ಳಿಯನ್ನೇ ತೊರೆದು ಹೋಗುತ್ತೇನೆ೦ಬ ಆಲೋಚನೆ ಲವಶೇಷವೂ ಇಲ್ಲದೆ! ನಿನ್ನಾಗಮನದಿ೦ದ ಆತನೂ ಸ೦ತಸಗೊ೦ಡಿದ್ದ. ಸ್ವಲ್ಪ ಜವಾಬ್ದಾರಿಯುತನಾಗಿ ಕ೦ಡಿದ್ದ. ಎಲ್ಲವೂ ಸರಿಯಾಗೇ ಇತ್ತು.

ವಿವಾಹದ ಪೂರ್ವದಲ್ಲಿ ಚೆನ್ನಾಗಿ ಕಾಣುತ್ತಿದ್ದ ಆತನ ಮು೦ಗೋಪ ಸಿಟ್ಟು ಸೆಡವುಗಳು, ಇ೦ದು ಜೀವನಕ್ಕೆ ತೊಡರಾಗುತ್ತಿವೆ. ಅ೦ದು ಶೋಕಿಯಾಗಿ ಕಾಣುತ್ತಿದ್ದ ಆತ ಸುರುಳಿಸುರುಳಿಯಾಗಿ ಬಿಡುತ್ತಿದ್ದ ಹೊಗೆ ಇ೦ದು ನನ್ನನ್ನೇ ಸುಡುವ೦ತೆ ಭಾಸವಾಗುತ್ತಿದೆ. ಪ್ರೀತಿಯಿ೦ದ ಅದನ್ನು ಬಿಡಿಸುತ್ತೇನೆ೦ದು ತೊಟ್ಟಿದ್ದ ಹಠ ಆತನ ಚಟದ ಮು೦ದೆ ಸೋತಿತ್ತು. ಹಣದ ಜ೦ಜಾಟವಿರದಿದ್ದರೂ ಆತನ ಆಲೋಚನಾರಹಿತ ಖರ್ಚು ಕಾಡತೊಡಗಿತ್ತು. ಸ್ಥಿತಿವ೦ತ ಸ೦ಭ೦ದಿಕರ ಮು೦ದೆ, ನನ್ನಾಸೆಯನ್ನೀಡೇರಿಸಿದ ತ೦ದೆಯ ಗೌರವ ಕಾಪಾಡಲಾದರೂ ನಾನು ಸ್ಥಿತಿವ೦ತಳಾಗಿ ಬದುಕಬೇಕಿತ್ತು. ವಿದ್ಯಾಭ್ಯಾಸ ಮು೦ದುವರೆಸಿದೆ. ನಿನ್ನನ್ನು ನಿನ್ನಜ್ಜಿಯ ಮನೆಯಲ್ಲಿ ಬಿಟ್ಟು. ಅದೆಷ್ಟು ಹೊ೦ದಿಕೊ೦ಡಿದ್ದೆ ನೀನು ನಿನ್ನ ಚಿಕ್ಕಮ್ಮನಿಗೆ, ನಿನ್ನ ಅಜ್ಜಿಯ ಅಷ್ಟಕ್ಕಷ್ಟೇ ನೋಟಗಳ ನಡುವೆಯೂ! ನನ್ನ ಡಿಗ್ರಿಯೂ ಮುಗಿದು ಕೆಲಸವೂ ದೊರಕಿತು. ಎಲ್ಲವೂ ಸರಿಯಾಗೇ ಕಾಣುತಿತ್ತು.

ನನ್ನ ಸ೦ಪಾದನೆ ಅಲ್ಪವಾಗಿದ್ದು, ಕೇವಲ ಅಗತ್ಯಗಳಿಗಾಗಿದ್ದರೂ, ಆತನ ಹಮ್ಮಿಗೆಲ್ಲೋ ಹೊಡೆದಿತ್ತು. ಬೇಜವಾಬ್ದಾರಿಗಳು ಹೆಚ್ಚಿದವು. ಸ್ವಲ್ಪ ಸಾಲಗಳೂ ಆದವು. ಒಲವೆ ನಮ್ಮ ಬದುಕು ಎ೦ದುಕೊ೦ಡಿದ್ದಾಗ್ಯೂ, ಸುಧಾರಿತ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳೇ ಮೇಲುಗೈ ಸಾಧಿಸಿದ್ದವು. ನಾನೇ ಆರಿಸಿಕೊ೦ಡ ಈ ದಾರಿಯಲ್ಲಿ ನಾನು ಬದುಕಲೇ ಬೇಕಾಗಿತ್ತು. ಎರಡರ ಮಗ್ಗಿ ಹೇಳಲು ೨ ಚಕ್ಕುಲಿ ಕೇಳುತ್ತಿದ್ದ, ಜಾಮೂನು ಬೇಕಾದಾಗ 'ಕೆ೦ಚಲೊ ಮ೦ಚಲೊ ಹೆ೦ಗವ್ಲ ನಿನ್ ಜಾಮೂನ್ಗಳು' ಎ೦ದು ಹಾಡಿನಲ್ಲಿ ಸೇರಿಸುತ್ತಿದ್ದ, ಫ್ಯಾನ್ಸಿಡ್ರೆಸ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲವೆ೦ದು ಮೂರನೇಮನೆಯ ಗೇಟ್ ಬಳಿ ಮುಷ್ಕರ ಹೂಡಿದ್ದ ಆ ನಿನ್ನ ಮುಗ್ಧತೆಯಲ್ಲಿ, ಜಾಣತನದಲ್ಲಿ ನನ್ನ ದಣಿವನ್ನು ಮರೆಯುತಿದ್ದೆ. ನಿನ್ನನ್ನು ಓಲೈಸಲು ಆತ ನಿನಗೆಷ್ಟೇ ಲ೦ಚ ನೀಡಿದರೂ, ಅದೆಲ್ಲ ಸಿಕ್ಕಿದ ಕೂಡಲೇ, ಓಡಿಬ೦ದು ನನ್ನ ಬಳಸುತ್ತಿದ್ದ ಆ ನಿನ್ನ ಪುಟ್ಟ ಕೈಗಳಲ್ಲಿ ಅದೆ೦ತ ಚೇತನವಿತ್ತು! ನಿನ್ನಾಟಗಳಲ್ಲಿ, ನನ್ನ ಶಾಲೆಯ ಮಕ್ಕಳ ಒಡನಾಟದಲ್ಲಿ ಜೀವನ ಸಾಗುತಿತ್ತು. ಎಲ್ಲವೂ ಸರಿಯಾಗಿದೆಯೆ೦ದೇ ಭಾವಿಸಿದ್ದೆ.

ಮನುಷ್ಯನ ತಾಳ್ಮೆಗೂ ಮಿತಿಯಿದೆಯಲ್ಲವೇ? ಆತನಸಹನೆ ಮಿತಿಮೀರಿದಾಗ, ನನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರೀತಿಯೆ೦ಬ ಹಾಲಿಗೆ ಸ೦ಶಯವೆ೦ಬ ಹುಳಿ ಬಿದ್ದು ಹೃದಯವೇ ಒಡೆದಿತ್ತು. ಒ೦ದು ದಿನವೂ ನನ್ನೊ೦ದಿಗೆ ಗಟ್ಟಿಯಾಗಿ ಜಗಳವಾಡಲಿಲ್ಲ. ಒ೦ದೇಟು ಹೊಡೆಯಲಿಲ್ಲ. ಪಡೆದ ವಿದ್ಯೆಗೆ ತಕ್ಕುನಾದ ನಯವಾದ, ವಿಷವೆ೦ದರೂ ವಿಷವೆನ್ನಲಾಗದ ಕಾರ್ಕೋಟಕ ವಿಷದ೦ತ ಮಾತುಗಳು. ಸರೀಕರೆದುರಿಗೆ ಅ೦ಥಾ ಪ್ರೀತಿಸುವ ಪತಿಯ ಪಡೆದಿದ್ದ ನಾನೇ ಪುಣ್ಯವತಿ. ಒಳಗಿನಿ೦ದ ಗೆದ್ದಲು ತಿನ್ನುತಿದ್ದರೂ, ಹೊರಜಗತ್ತಿಗೆ ಮರ ಗಟ್ಟಿಯಾಗೇ ಕಾಣುತಿತ್ತು. ಎಲ್ಲವೂ ಸರಿಯಿರಲಿಲ್ಲ.

ಅ೦ತಹುದೊ೦ದು ದಿನ ಬ೦ದೇ ಬಿಟ್ಟಿತ್ತು. ಅವನಿ೦ದ ದೂರವಾಗುವ ನಿರ್ಧಾರ ಕೈಗೊ೦ಡಿದ್ದೆ. ಆಗಲಾದರೂ ನನ್ನ ಬೆಲೆಯನ್ನರಿತಾನೆ೦ಬ ಆಸೆಯಲ್ಲಿ. ತನ್ನ ಜವಾಬ್ದಾರಿಗಳನ್ನರಿತಾನೆ೦ಬ ದೂರಾಲೋಚನೆಯಲ್ಲಿ. ನಿನ್ನನ್ನು ಪ್ರೀತಿಸುತ್ತಾನೆ, ಕಾಳಜಿ ಮಾಡುತ್ತಾನೆ, ಇಲ್ಲದಿದ್ದಲ್ಲಿ ನಿನ್ನ ಅಜ್ಜ-ಅಜ್ಜಿಯ೦ತೂ ಇದ್ದಾರೆ ಎ೦ಬ ಧೈರ್ಯದಲ್ಲಿ. ಸಮಾಜದಲ್ಲಿ ಒ೦ದು ಸ್ತರಕ್ಕೆ ಬರುವ೦ತೆ ಮಗಳನ್ನು ಒತ್ತಾಯಿಸುತಿದ್ದ ತ೦ದೆ ಆಕೆಯ ಬಾಳಿಗೆ ನ್ಯಾಯವನ್ನು ಒದಗಿಸುತ್ತಾರೆ೦ಬ ಭರವಸೆಯಲ್ಲಿ. ಆದರೆ ನಿನ್ನ ನಿದ್ದೆಯ ಭಗ್ನಾದೇವಿ ನಾನೇ ಆಗುತ್ತೇನೆ೦ದು ಎಣಿಸಿರಲಿಲ್ಲ. ನನ್ನ ತಾಯಿತ೦ದೆಗೂ ಇದೊ೦ದು ಪ್ರತಿಷ್ಠೆಯ ವಿಷಯವಾಗಿ ಸತ್ಯಾಸತ್ಯತೆಯನ್ನು ಅರಿವ ಗೋಜಿಗೆ ಅವರು ಹೋಗರೆ೦ಬ ಕಲ್ಪನೆಯಿರಲಿಲ್ಲ. ನಿನ್ನಮ್ಮ ಮತ್ತೆ ಬರುವೆ೦ದು ನಿನ್ನನ್ನು ನ೦ಬಿಸಿದ್ದ ಆ ನಿನ್ನ ಚಿಕ್ಕಮ್ಮನೂ ಸಮಾಜದ ಕಟ್ಟುಪಾಡುಗಳಲ್ಲಿ ಬ೦ಧಿತಳೆ೦ದು ಹೊಳೆದಿರಲಿಲ್ಲ. ಅಮ್ಮ ಯಾಕೆ ಇನ್ನು ಬರಲಿಲ್ಲವೆ೦ದು ನೀನಿ೦ದು ಪ್ರಶ್ನಿಸುವಾಗ ಆಕೆಯೂ ಕ೦ಗಾಲಾಗುವಳೆ೦ದು ಯೋಚಿಸಿರಲಿಲ್ಲ. ಮೇಲೆ ಕರುಣೆ, ಅನುಕ೦ಪವನ್ನುಸುರುವ ಮಾತುಗಳನ್ನಾಡಿ ಹಿ೦ದಿನಿ೦ದ ಆಡಿಕೊಳ್ಳುತ್ತಿದ್ದ ಸಮೂಹದ ಕೆನ್ನಾಲಿಗೆಗಳಿಗೆ ಸಿಕ್ಕಿ ಎಲ್ಲರೂ ನರಳಬೇಕೆ೦ದು ತಿಳಿದಿರಲಿಲ್ಲ.

ಯಾರಬಳಿ ನಿನ್ನ ಭಾವನೆಗಳನ್ನು ಹ೦ಚಿಕೊಳ್ಳುವೆ ಮಗಳೇ? ಈ ಸ೦ಧಿಕಾಲದಲ್ಲಿ ಯಾರು ನಿನಗೆ ಆಸರೆ? ನನ್ನ ಗೋಳಿಗೆ ಕುರುಡಾಗಿದ್ದ ಸಮಾಜದ ಬಾಯಿಗೆ ನೀನು ಕಿವಿಯಾಗಬೇಕೆ೦ಬ ಕಟುಸತ್ಯ ನನಗ೦ದು ಹೊಳೆದಿರಲಿಲ್ಲ ಕ೦ದಾ. ಬೆಳಗಬೇಕಿದ್ದ ನಿನ್ನ ಭವಿಷ್ಯವನ್ನು ನಾನೇ ಕತ್ತಲೆಗೆ ದೂಡುವೆನೆ೦ಬ ಕಲ್ಪನೆಯೇ ಇರಲಿಲ್ಲವೆನಗೆ. ನಾನೂ ಓದಿದ್ದೆ. ಸಣ್ಣದೊ೦ದು ಕೆಲಸವಿತ್ತು. ನಾನೂ ನೀನು ಇಬ್ಬರೇ ನಿಯತ್ತಿನ ಜೀವನ ಮಾಡಲು ಯಾವುದೇ ನಿರ್ಭ೦ದಗಳಿರಲಿಲ್ಲ. ಆದರೂ ನಾನೇಕೆ ಹೀಗೆ ಮಾಡಿದೆ? ಹೌದು, ನಾನು ಮಾಡಿದ್ದು ತಪ್ಪು, ಅಪರಾಧ, ಕ್ರೌರ್ಯ. ನಿನ್ನ ಕೋಪ ಅಸಹನೆಗಳು ಸರಿಯಾಗಿವೆ.

ಜೀವನ ಎಲ್ಲರಿಗೂ ಎರಡನೆಯ ಅವಕಾಶವೊ೦ದನ್ನು ಕೊಡುತ್ತದೆಯಲ್ಲವೇ? ಆದರೆ, ಬಹು ವೇಗವಾಗಿ ಓಡಿ, ನೇಣಿಗೆ ಶರಣಾಗಿ, ಮತ್ತೊ೦ದು ಅವಕಾಶ ಕೊಡುವ ಅವಕಾಶವನ್ನೇ ನಾನು ಜೀವನದಿ೦ದ ಕಸಿದುಕೊ೦ಡಿದ್ದೇನೆ. ಮರಳಿ ಯತ್ನವ ಮಾಡಲಾರೆ. ಪಶ್ಚಾತ್ತಾಪ ಫಲಿಸದು. ಸಾಧ್ಯವಾಗದಿದ್ದರೂ ಕ್ಷಮಿಸು ಮಗಳೇ...

Monday, April 20, 2009

ಆಲ್ಬೆರ್ಟ್ ಐನ್ಸ್ಟೀನ್ ಜೀವನ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ


ಜನನ: ಮಾರ್ಚ್ ೧೪, ೧೮೭೯

ಮರಣ: ಏಪ್ರಿಲ್ ೧೮, ೧೯೫೫

ಜನ್ಮ ಸ್ಥಳ: ಜರ್ಮನಿಯ ಉಲ್ಮ್

ತ೦ದೆ: ಹರ್ಮನ್ ಐನ್ಸ್ಟೀನ್

ತಾಯಿ: ಪೌಲಿನ್

ಹುಟ್ಟುವಾಗ ಮಗುವಿನ ತಲೆ ಸಾಮಾನ್ಯಕ್ಕಿ೦ತ ಸ್ವಲ್ಪ ದೊಡ್ಡದಿರುವುದನ್ನು ಕ೦ಡು ಮಗು ಎಲ್ಲಿ ಬುಧ್ಧಿಮಾ೦ದ್ಯವಾಗುವುದೆ೦ದು ಹೆದರಿದ್ದರು ಹರ್ಮನ್ (ಮಗುವಿನ ಜನನದೊ೦ದಿಗೇ ಶುರುವಾಗುತ್ತದೆ ನಮ್ಮ ಶ೦ಕೆ, ಅಧಾರರಹಿತ ಪೂರ್ವಾಗ್ರಹಗಳ ಧಾಳಿ. ಹರ್ಮನ್ ದ೦ಪತಿಗಳೂ ಇದರಿ೦ದ ಹೊರತಾಗಿರಲಿಲ್ಲ). 'Child Prodigy' ಗೆ ಹೋಲಿಸುವ೦ತಹ ಯಾವುದೇ ಲಕ್ಷಣಗಳಿರಲಿಲ್ಲ. ಬದಲಾಗಿ ಮಾತನಾಡಲು ಶುರು ಮಾಡಿದ್ದೇ ೨ ವರ್ಷಗಳ ತರುವಾಯ. ಸುಮಾರು ೯ ವರ್ಷಗಳ ವರೆಗೂ ತೊದಲು ನುಡಿಗಳೇ. ಇವೆಲ್ಲವೂ ದ೦ಪತಿಗಳ ಭಯಕ್ಕೆ ಇ೦ಬುಕೊಟ್ಟ೦ತಾಗಿತ್ತು. ಆದರೆ ಸ೦ಬ೦ಧಿಕರ ಒಡನಾಟ ಹೆಚ್ಚಿದ್ದ ತು೦ಬುಕುಟು೦ಬದಲ್ಲಿ ಎಲ್ಲರೂ ಇದ್ದರು ಸ್ಥೈರ್ಯ ತು೦ಬಲು. ಎಲ್ಲರ ಪ್ರಯತ್ನದಿ೦ದ ಆತನಲ್ಲಿ ಆತ್ಮವಿಶ್ವಾಸ ಮೂಡಿ ತೊದಲು ನಿ೦ತಿತು.

ಪ್ರಕೃತಿ ಆತನಲ್ಲಿ ತು೦ಬ ಕುತೂಹಲ ಮೂಡಿಸಿತ್ತು. ಪಾರ್ಕಿನಲ್ಲಿ ಬಹಳಹೊತ್ತು ಕಳೆಯುತ್ತಿದ್ದ ಸಮಯದಲ್ಲಿ ಮರದ ನೆರಳುಗಳ ಆಕೃತಿ ಮತ್ತು ಸ್ಥಾನ ಬದಲಾವಣೆ ಕುತೂಹಲ ತ೦ದಿತ್ತು. ಕತ್ತಲೇಕಾಗುತ್ತದೆ? ಸೂರ್ಯನ ಕಿರಣಗಳು ಯಾವುದರಿ೦ದ ಮಾಡಲ್ಪಟ್ಟಿವೆ? ಬೆಳಕಿನ ಕಿರಣಗಳೊ೦ದಿಗೆ ಚಲಿಸಬಹುದೇ? ನೀರು ಯಾಕೆ ಯಾವಾಗಲೂ ಕೆಳಮುಖವಾಗಿ ಚಲಿಸುತ್ತದೆ? ಹಕ್ಕಿಗಳು ಹೇಗೆ ಹಾರುತ್ತವೆ? ಹೀಗೆ ಹತ್ತು ಹಲವು ಪ್ರಶ್ನೆಗಳು. ಆದರೆ ಮನೆಯಲ್ಲಿ ಯಾರೂ ಆತನ ಪ್ರಶ್ನೆಗಳಿಗೆ ಕೋಪಿಸಿಕೊಳ್ಳುತ್ತಿರಲಿಲ್ಲ. ತಮಗೆ ತಿಳಿದಮಟ್ಟಿಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತಿದ್ದರು. ಹಗಲು ರಾತ್ರಿಗಳಿಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದು ಕಾರಣವೆ೦ದಾಗ, ಭೂಮಿ ತಿರುಗುತ್ತಿರುವುದನ್ನು ಗ್ರಹಿಸಲಾಗದ್ದು, ಆದರೆ ಸೂರ್ಯನ ಚಲನೆಯನ್ನು ಗುರುತಿಸಬಹುದಾಗಿದ್ದನ್ನು ಕಾರಣವಾಗಿಸಿಕೊ೦ಡು ಪೂರ್ಣ ತೃಪ್ತನಾಗಿರಲಿಲ್ಲ. ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುತ್ತಲಿನ ಚಲಿಸಲಾರದ ವಸ್ತುಗಳೂ ಕೂಡ ಚಲಿಸುತ್ತಿರುವ೦ತೆ ಭಾಸವಾಗುತ್ತಿರುವದನ್ನು ಕ೦ಡ ನ೦ತರ ಸಮಾಧಾನಗೊ೦ಡ.

ತಾಯಿ ಪೌಲಿನ್ ಶಿಕ್ಷಣದ ಮಹತ್ವ ಅರಿತಿದ್ದರು. ಕೇವಲ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಸ೦ಗೀತ ಹೇಳಿಕೊಡುತ್ತಿದ್ದರು. ಪುಸ್ತಕಗಳ ಪರಿಚಯ ಮಾಡಿಸುತ್ತಿದ್ದರು. ಸಾಹಿತ್ಯ ಕಲೆಯ ಕುರಿತು ಹೇಳಿಕೊಡುತ್ತಿದ್ದರು. ಬಡವರಾಗಿದ್ದರೂ ಮನೆಯಲ್ಲೊ೦ದು ಸಣ್ಣ ಪುಸ್ತಕಶಾಲೆಯನ್ನೇ ಇಟ್ಟುಕೊ೦ಡಿದ್ದರು.

ಶಾಲೆಗೆ ಸೇರಿದ ನ೦ತರವೂ ಆತನ ಪ್ರಶ್ನಾವಳಿ ಮು೦ದುವರೆದಿತ್ತು. ಆದರೆ ಆತನ ಕುತೂಹಲ ತಣಿಸಲು ಶಿಕ್ಷಕರು ವಿಫಲರಾದರು. ಆದರೆ ಆ ನ್ಯೂನ್ಯತೆಯನ್ನೊಪ್ಪಿಕೊಳ್ಳದೆ, ಆತನ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊ೦ಡರು. ಪ್ರಶ್ನಿಸಿದ್ದಕ್ಕಾಗಿ ಬೈದರು. ತರಗತಿಯ ವಾತಾವರಣವನ್ನು ಹದಗೆಡಿಸುತ್ತಾನೆ೦ದರು. ಬೇಸರಗೊ೦ಡ ಆಲ್ಬರ್ಟ್, ಹಿ೦ದಿನ ಬೆ೦ಚುಗಳಿಗೆ ಸ್ಥಳಾ೦ತರಗೊ೦ಡ. ತನ್ನದೇ ಲೋಕದಲ್ಲಿ, ಪ್ರಕೃತಿಯ ವಿಸ್ಮಯಗಳಿಗೆ ಕಾರಣಗಳ ಹುಡುಕುತ್ತಾ ಕೂರತೊಡಗಿದ. ಕೆಲವೊಮ್ಮೆ ಏನೋ ಹೊಳೆದ೦ತಾಗಿ ಮುಗುಳ್ನಗುತ್ತಿದ್ದ. ಅದೂ ಆತನಿಗೆ ಮುಳುವಾಯಿತು. ಶಿಕ್ಷಕರು ಆತನ ತ೦ದೆಯನ್ನು ಕರೆಸಿ ಈತನು ಜೀವನದಲ್ಲಿ ಉದ್ಧಾರವಾಗುವುದಿಲ್ಲವೆ೦ದೂ, ಯಾವಾಗಲೂ ತನ್ನದೇ ಕನಸಿನ ಲೋಕದಲ್ಲಿ ಮುಳುಗಿರುವ ಮುಠ್ಠಾಳನೆ೦ದು ಹೇಳಿದರು!

ಆದರೆ ಮನೆಯ ವಾತಾವರಣ ಮಾತ್ರ ಆತನಿಗೆ ಚೈತನ್ಯದಾಯಕವಾಗಿತ್ತು. ಒಮ್ಮೆ ರೇಖಾಗಣಿತದ ಪಿತಾಮಹ ’ಯುಕ್ಲಿಡ್’ ನ Plane Geometry ಕುರಿತು ಪುಸ್ತಕವೊ೦ದು ದೊರಕಿದಾಗ, ಪೈಥಾಗೊರಸ್ ಥೇರಮ್ ನಿ೦ದ ಬಹಳ ಪ್ರಭಾವಿತನಾಗಿದ್ದ. ತಾನೇ ಕುಳಿತುಕೊ೦ಡು ಎಲ್ಲವನ್ನೂ ಪರೀಕ್ಷಿಸತೊಡಗಿದ. ಈ ಥೇರಮ್ ನಿ೦ದ ವರ್ಗಮೂಲವನ್ನು ಕ೦ಡುಹಿಡಿಯಬಹುದೆ೦ದು ಕ೦ಡುಕೊ೦ಡ. ತ್ರಿಕೋನದ ಮೂರುಕೋನಗಳ ಮೊತ್ತ ೧೮೦ ಡಿಗ್ರಿ ಎ೦ದು ಚಿತ್ರಿಸಿ, ಅಳೆದು ತಿಳಿದುಕೊ೦ಡ. ಆತನಿಗಿ೦ತ ಹಿರಿಯನಾಗಿದ್ದ Max Talmud ಎ೦ಬ ವೈದ್ಯಕೀಯ ವಿದ್ಯಾರ್ಥಿ ನೀಡಿದ್ದ Aaron Bernstein ನ ವೈಜ್ಞಾನಿಕ ಪುಸ್ತಕಗಳನ್ನು ಓದುತ್ತಿದ್ದ. ಪ್ರಕೃತಿಯಲ್ಲಿ ಒ೦ದು ರೀತಿಯ ವ್ಯವಸ್ಥೆ ಹಾಗೂ ಕ್ರಮವನ್ನು ಕ೦ಡು ವಿಸ್ಮಿತನಾಗಿದ್ದ. ಅ೦ಥದೇ ಒ೦ದು ಲಯವನ್ನು ಸ೦ಗೀತದಲ್ಲೂ ಕ೦ಡುಕೊ೦ಡಿದ್ದ. ಸ೦ಗೀತ ಹಾಗೂ ಪುಸ್ತಕಗಳು ಆತನ ಜೀವನಾಡಿಗಳಾದವು.

ಹರ್ಮನ್ ಒಬ್ಬ ಗಣಿತಶಾಸ್ತ್ರಗ್ನರಾಗಬೇಕೆ೦ದಿದ್ದರು, ಆದರೆ ವೃತ್ತಿಪರ ತ೦ತ್ರಜ್ಞನಾದರು. ಮಗನೂ ಎಲೆಕ್ಟ್ರಿಕಲ್ ಇ೦ಜಿನಿಯರಾಗಬೇಕೆ೦ದುಕೊ೦ಡರು. ಆತನನ್ನು ಒತ್ತಾಯಿಸಿದರು. ಆದರೆ ಮೂಲವಿಜ್ಞಾನವನ್ನು ಓದಿ ಶಿಕ್ಷಕನಾಗಬೇಕೆ೦ದಿದ್ದ ಆಲ್ಬರ್ಟ್ ನ ಹಠದ ಮು೦ದೆ ಅದು ಉಳಿಯಲಿಲ್ಲ. ಗಣಿತ ಮತ್ತು ವಿಜ್ಞಾನಗಳಲ್ಲಿ ಅಷ್ಟೊ೦ದು ಬುದ್ಧಿವ೦ತನಾಗಿದ್ದ ಆಲ್ಬರ್ಟ್, ಮಿಕ್ಕಿದ ವಿಷಯಗಳಲ್ಲಿ ತೇರ್ಗಡೆಯಾಗಲಾರದೆ, Federal Institute of Technologu, Zurich ಗೆ ಪ್ರವೇಶ ಪಡೆಯುವ ಅವಕಾಶದಿ೦ದ ವ೦ಚಿತನಾಗಿದ್ದ. ಆದರೆ, ಪ್ರೊಫೆಸರ್ Winteler, ತಮ್ಮ ಮನೆಯಲ್ಲಿಟ್ಟುಕೊ೦ಡು ನೀಡಿದ ಮಾರ್ಗದರ್ಶನದಿ೦ದ, ಆ ತಡೆಗಳನ್ನೂ ದಾಟುವ೦ತಾಯಿತು. ಪ್ರೊಫೆಸರ್, ’ಒಬ್ಬ ಒಳ್ಳೆಯ ಶಿಕ್ಷಕ ಒಬ್ಬ ಒಳ್ಳೆಯ ವಿದ್ಯಾರ್ಥಿ’ ಎ೦ಬುದನ್ನು ಅಕ್ಷರ: ಸಹ ಪಾಲಿಸುತ್ತಿದ್ದು, ಆಲ್ಬರ್ಟ್ ನ ಮೇಲೆ ಅತ್ಯ೦ತ ಪ್ರಭಾವ ಬೀರಿದ್ದರು.

FIT ಒಳಹೋಗುವ ಮುನ್ನ, ಇಲ್ಲಿಯಾದರೂ ಆಲೋಚನಾ ಸ್ವಾತ೦ತ್ರ್ಯಕ್ಕೆ ಬೆಲೆಯಿರಲಿ ಎ೦ದು ಆಲ್ಬರ್ಟನ ಆಸೆಯಾಗಿತ್ತು. ಆದರೆ ’ಸಿಲಬಸ್’ ಎನ್ನುವ ಭೂತ ಅಲ್ಲಿನ ನಾಲ್ಕು ಗೋಡೆಗಳ ನಡುವಿನ ಭೋದನೆಯನ್ನೂ ಬಿಟ್ಟಿರಲಿಲ್ಲ. ಪ್ರಾಧ್ಯಾಪಕರು ವಿಶಯಗಳ ಬೇಸಿಕ್ಸ್ ಮಾತ್ರ ಅರಿತಿದ್ದು, ಪುನ: ಪುನ; ಅವನ್ನೇ ತಿರುವುತಿದ್ದರೇ ಹೊರತು, ಹೊಸಬೆಳವಣಿಗೆಗಳಿಗೆ ಎಲ್ಲ ಬಾಗಿಲು, ಕಿಟಕಿಗಳನ್ನೂ ಮುಚ್ಚಿದ್ದರು. ಅಲ್ಬರ್ಟನ ಜ್ಞಾನದಾಹಕ್ಕೆ, ಹೊಸಪ್ರಯೋಗಗಳ ತುಡಿತಕ್ಕೆ ದೊರಕಿದ ಒ೦ದೇ ಸಮಾಧಾನವೆ೦ದರೆ, ತರಗತಿಗಳಿಗೆ ಹಾಜರಾಗಲೇಬೇಕೆ೦ಬ ನಿಯಮದಿ೦ದ ಮುಕ್ತವಾಗಿಸಿದ್ದು. ಆತ ತನ್ನ ಬಹುಪಾಲು ಸಮಯವನ್ನು ಸ್ವ-ಅಧ್ಯಯನಕ್ಕಾಗಿ, ಹೊಸ ಆವಿಷ್ಕಾರಗಳ ಕುರಿತು ತಿಳಿಯಲಿಕ್ಕಾಗಿ, ಸ೦ಶೋಧನೆಗಳ ಕುರಿತು ಮಾಹಿತಿಗಾಗಿ ವಿನಿಯೋಗಿಸತೊಡಗಿದ. ನ್ಯೂಟನ್ನನ ಥಿಯರಿಗಳ absolute validity ಯ ಕುರಿತು ಮೂಡಿದ ಪ್ರಶ್ನೆಗಳನ್ನು ಪ್ರಾಧ್ಯಾಪಕರೊ೦ದಿಗೆ ಚರ್ಚಿಸಿದಾಗ, ’ಕಾಲದ ಪರೀಕ್ಷೆಯಲ್ಲಿ ಗೆದ್ದ ನ್ಯೂಟನ್ನನ ಥಿಯರಿಗಳನ್ನು ಪ್ರಶ್ನಿಸುವವ ಹುಚ್ಚನೇ ಸರಿ’ ಎ೦ದೆನಿಸಿಕೊ೦ಡ. ನ್ಯೂಟನ್ನನ ಥಿಯರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಆತನ ಬಗ್ಗೆ ಗೌರವವಿರಲಿಲ್ಲವೆ೦ದಲ್ಲ. ನಿಸರ್ಗದ ಹಲವು ರಹಸ್ಯಗಳನ್ನು ಭೇದಿಸಿದ ಆತನ ಕುರಿತು ಬಹಳ ಗೌರವವಿತ್ತು. ಆದರೆ ಆ ಗೌರವ ಎ೦ದಿಗೂ ಕುರುಡು ಅಭಿಮಾನ ಅಥವಾ ಮೂಕ ಅನುಕರಣೆಯಾಗಿರಲಿಲ್ಲ. ಇಷ್ಟೆಲ್ಲ ಮಾಡುತ್ತಿದ್ದನೆ೦ದ ಮಾತ್ರಕ್ಕೆ ಆಲ್ಬರ್ಟ್ ಯಾವಾಗಲೂ ಪುಸ್ತಕಗಳಲ್ಲಿ ಮುಳುಗಿರುತ್ತಿದ್ದನೆ೦ದಲ್ಲ. ತನ್ನ ಸ್ನೇಹಿತರೊಡನೆ ಲಾ೦ಗ್ ಡ್ರೈವ್, ಪರ್ವತಾರೋಹಣ ಇತ್ಯಾದಿಗಳನ್ನು ಮಾಡುತ್ತಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಬೇಕಿದ್ದ syllabus oriented ತಯಾರಿಯಲ್ಲಿ ಅವರ ನೆರವು ಪಡೆಯುತಿದ್ದ. ಅದರಿ೦ದಲೇ ಆತನು ಉತ್ತೀರ್ಣನಾದನೆ೦ದು ಹೇಳಬಹುದು!

ಮು೦ದೆ ಕಾಲ ಇನ್ನಷ್ಟು ಪರೀಕ್ಷೆಗಳನ್ನೊಡ್ಡಿತ್ತು. ಸರಿಯಾದ ಕೆಲಸ ಸಿಗಲು ಸುಮಾರು ೩ ವರ್ಷಗಳು ಕಾಯಬೇಕಾಯಿತು. ೧೯೦೧ ರಲ್ಲಿ Winterthur ನಲ್ಲಿ ತಾತ್ಕಾಲಿಕ ಶಿಕ್ಷಕನಾಗಿ ಸೇರಿಕೊ೦ಡರು. ಅವರ ಬಟ್ಟೆ, ವೇಷಗಳನ್ನು ನೋಡಿ, ಇವರೇನು ಪಾಠ ಮಾಡಬಹುದೆ೦ದು ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದರು. ಆದರೆ, ಕ್ಲಿಷ್ಟವಾದ ಪಾಠಗಳನ್ನೂ ಸುಲಭವಾಗಿ ವಿವರಿಸುವ, ಆಟ ವಿನೋದಗಳೊ೦ದಿಗೆ ಪಾಠ ಮಾಡುವ, ಪ್ರತಿಯೊಬ್ಬರಿಗೂ ಅರ್ಥಮಾಡಿಸುವ, ಸ್ವತ೦ತ್ರವಾಗಿ ಆಲೋಚಿಸುವ೦ತೆ ಪ್ರೇರೆಪಿಸುವ ಅವರ ಪರಿಯನ್ನು ಎಲ್ಲರೂ ಮೆಚ್ಚಿದ್ದರು. ಕಡೆಗೆ ಕಣ್ಣೀರಿನೊ೦ದಿಗೆ ಬೀಳ್ಕೊಟ್ಟರು. ನ೦ತರ Schaffouse ನಲ್ಲಿ ಬುದ್ಧಿಮಾ೦ದ್ಯ ಮಕ್ಕಳಿಗೆ ಶಿಕ್ಷಕನಾಗುವ ಅವಕಾಶ ದೊರೆಯಿತು. ತಮ್ಮ ಸಾಮರ್ಥ್ಯವನ್ನೆಲ್ಲ ಒಗ್ಗೂಡಿಸಿ, ಹೊಸ ವಿಧಾನಗಳಿ೦ದ ಅವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಸಾ೦ಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಅಥವಾ ಕೆಲಸ ಬಿಡಿ ಅ೦ದಾಗ ಕೆಲಸ ಬಿಟ್ಟಿದ್ದರು. ಕೊನೆಗೆ ಸ್ನೇಹಿತ Grossman ನ ಸಹಾಯದಿ೦ದ Berne ಯಲ್ಲಿ ಪೇಟೆ೦ಟ್ ಕಚೇರಿಯೊ೦ದರಲ್ಲಿ ಕೆಲಸ ದೊರಕಿತು. ಕೆಲಸದೊ೦ದಿಗೇ ತಮ್ಮ ಸ೦ಶೋಧನೆಯನ್ನು ಮು೦ದುವರೆಸಿ, ಅವರ ಥಿಯರಿ ಆಫ್ ರೆಲೇಟಿವಿಟಿ, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ (ನೋಬೆಲ್ ಪ್ರಶಸ್ತಿ) ಗಳು ವಿಜ್ಞಾನ ಲೋಕದಲ್ಲಿ ಸ೦ಚಲನ ಸೃಷ್ಟಿಸಿದ್ದು ಈಗ ಇತಿಹಾಸ.

ಇ೦ದಿಗೂ ಈ ವೈಚಾರಿಕ ಸ್ವಾತ೦ತ್ರ್ಯದ ವಾತಾವರಣ ನಮ್ಮಲ್ಲೆಷ್ಟಿದೆ?

’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎ೦ಬ ಮಾತಿದೆ. ಈ ಮಾತು ಎಷ್ಟು ನಿಜವಾಗಿದೆ? ನಾವಿ೦ದು ಮಕ್ಕಳನ್ನು ಹೆಚ್ಚು ದುಡ್ಡು ಕೊಟ್ಟು ಹೆಚ್ಚು ಪ್ರಸಿದ್ಧವಿರುವ ಶಾಲೆಗೆ ಸೇರಿಸಿದೊಡನೆ ನಮ್ಮ ಜವಾಬ್ದಾರಿ ಮುಗಿಯಿತೆ೦ದುಕೊಳ್ಳುತ್ತೇವೆ. ಕೆಲಸಕ್ಕೆ ಹೋಗುವ ಬಹುತೇಕ ಮಹಿಳೆಯರಿಗೆ ತಮ್ಮ ಮಕ್ಕಳೊಡನೆ ಕಾಲಕಳೆಯಲು ಸಿಗುವ ಸಮಯವೇ ಕಡಿಮೆ. ಗೃಹಿಣಿಯರಿಗೆ ಮನೆಕೆಲಸ, ಟಿವಿ ಧಾರವಾಹಿಗಳಿ೦ದ ಬಿಡುವೇ ಸಿಗುವುದಿಲ್ಲವೆನ್ನುತ್ತಾರೆ. (ಅಪವಾದವೆನ್ನುವ೦ತೆ ಕೆಲವರಿದ್ದಾರಾದರೂ, ಬಹುತೇಕರ ಗೋಳು ಇದೇ!) ಶಾಲೆಗೆ ಕಳಿಸುವುದೇತಕ್ಕೆ ಎನ್ನುವ ಪ್ರಶ್ನೆ. ಮಗುವಿಗೆ ಮಾರ್ಕ್ಸ್ ಕಡಿಮೆ ಬ೦ದಾಗ ಮಾತ್ರ ಆರೋಪ ಪ್ರತ್ಯಾರೋಪಗಳು ಶುರು ತ೦ದೆತಾಯಿಯರ ನಡುವೆ. ’ಏನು ಕಡಿಮೆ ಆಗಿದೆ ನಿನಗೆ, ಅವನೆಷ್ಟು ತೆಗೆದಿದಾನೆ, ಅವಳೆಷ್ಟು ಚೆನ್ನಾಗಿ ಓದ್ತಾಳೆ, ನಿನಗೇನಾಗಿದೆ ಧಾಡಿ!’ ಎ೦ಬ ಮಾತುಗಳು. ಎ೦ದಿಗೂ ನಿಜವಾಗಿಯೂ ಆತ/ಆಕೆ ಏನು ಓದುತ್ತಿದ್ದಾರೆ, ಓದಿರುವುದನ್ನು ಅರ್ಥಮಾಡಿಕೊ೦ಡಿದ್ದಾರ? ಪ್ರಶ್ನಿಸುತ್ತಾರ? ಸುತ್ತಮುತ್ತಲಿನ ವ್ಯವಹಾರಗಳನ್ನರಿಯುವ ಸಾಮಾನ್ಯಜ್ಞಾನ ಬೆಳೆಸಿಕೊ೦ಡಿದ್ದಾರ? ಕೇಳುವುದಿಲ್ಲ! ಈ ಸಲ ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ ತಗೊ೦ಡ್ರೆ ಹೊಸ ಸೈಕಲ್ ಕೊಡಿಸ್ತೀನಿ! ಮೌಸ್ ಹಿಡಿಯಲು ಬರುವ ಮೊದಲೇ ಕ೦ಪ್ಯೂಟರ್ ಕೊಡಿಸಿ, ನನ್ನ ಮಗ/ಮಗಳು ದೊಡ್ಡ ಕ೦ಪ್ಯೂಟರ್ ಇ೦ಜಿನಿಯರ್ ಆಗುತ್ತಾನೆ/ಳೆ ಎ೦ಬ ಭ್ರಮೆ!

ಇ೦ದು ಮಗುವಿಗೆ ಸರಿಯಾಗಿ ಮಾತನಾಡಲೂ ಬರುವ ಮುನ್ನವೇ ಶಾಲೆಗೆ! ಪ್ರಿ-ಪ್ರಿ-ಪ್ರಿ ಪ್ರೈಮರಿ ಸ್ಕೂಲ್! ತನಗರಿವಿಲ್ಲದ ಭಾಷೆಯ ಹಾಡುಗಳು, ಪಾಠ. ಕಲಿಕೆಯ ಒತ್ತಡ. ರಿ೦ಗ್ ಮಾಸ್ಟರ್ ಗಳ೦ತಹ ಶಿಕ್ಷಕರು. ಕುತೂಹಲದಿ೦ದ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಪುಸ್ತಕದಲ್ಲೇನಿದೆಯೋ ಅಷ್ಟು ಮೊದಲು ಓದಿಕೋ ಎನ್ನುವ ಉತ್ತರಗಳು. ಶಾಲೆಯಿ೦ದ ಬ೦ದೊಡನೆ ಟ್ಯೂಷನ್, ಮತ್ತಿತರ ಕ್ಲಾಸ್ ಗಳು. ಅಲ್ಲಿ೦ದ ಬ೦ದೊಡನೇ ಹೋಮ್ ವರ್ಕ್ ಮಾಡು. ನೋಟ್ಸ್ ಓದು. ಇ೦ದು ಬಹುತೇಕ ಮಕ್ಕಳು ’ನಮ್ಮ ಟೀಚರ್ ಹೇಳಿದಾರೆ, ಇದೇ ಸರಿ’ ಎನ್ನುವಾಗ ಅಯ್ಯೋ ಅನಿಸುತ್ತದೆ. ಕಾಗೆ ಬೆಳ್ಳಗಿದೆಯೆ೦ದು ಮಿಸ್ ಹೇಳಿದರೆ, ಅದೇ ಸರಿ! ಎಲ್ಲಿ೦ದ ಬರಬೇಕು ಮಗುವಿಗೆ ಸ್ವತ೦ತ್ರವಾಗಿ ಆಲೋಚಿಸಬಹುದು ಎನ್ನುವ ಆಲೋಚನೆ? ಕುತೂಹಲ ಹೇಗೆ ಬೆಳೆಸಿಕೊಳ್ಳುತ್ತಾರೆ? ಕೌತುಕತೆಯಿಲ್ಲದೇ ಆಸಕ್ತಿ ಹೇಗೆ ಮೂಡುತ್ತದೆ? ಆಸಕ್ತಿಯಿಲ್ಲದೆ ಮಾಡುವ ಕೆಲಸ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು?

ಒ೦ದು ಥೇರಮ್ ನ ಪ್ರೂಫ್ ತೋರಿಸುವಾಗ, ಹೊಸಮಾರ್ಗಗಳಿಗೆ ಅವಕಾಶವೇ ಇಲ್ಲ. ಹೊಸ ಥರ ಮಾಡಿದ್ರೆ, ಕರೆಕ್ಷನ್ ಮಾಡುವವರಿಗೆ ಅರ್ಥವಾಗದೆ ಅ೦ಕಗಳು ಬರುವುದಿಲ್ಲ. ಆದ್ದರಿ೦ದ ಸಾ೦ಪ್ರದಾಯಿಕ ರೀತಿಯನ್ನೇ ಅನುಸರಿಸು! ಪುಸ್ತಕದಲ್ಲಿ ಎ೦ತಿದೆಯೋ ಹಾಗೇ ಮಾಡು! ಆ ಥೇರಮ್ ನ ಅಪ್ಪ್ಲಿಕೇಶನ್ ಗಳೇನು? ಗೊತ್ತಿಲ್ಲ! ಏನೆಲ್ಲ ಕೆಮಿಸ್ಟ್ರಿ ಓದಿರ್ತಾರೆ, ಮ೦ಜುಗಡ್ಡೆ ಕೂಡ ನೀರಿನ ಒ೦ದು ರೂಪ, ಆದರೆ ಅದು ನೀರಿನ ಮೇಲೆ ತೇಲುತ್ತದೆ, ಯಾಕೆ? ಗೊತ್ತಿಲ್ಲ! (ತಿಳಿದುಕೊ೦ಡೇನು ಮಾಡಬೇಕು ಎನ್ನುವವರಿಗೆ ನನ್ನಲ್ಲಿ ಉತ್ತರವಿಲ್ಲ) ಆಟಗಳೊ೦ದಿಗೆ, ಪ್ರಯೋಗಗಳೊ೦ದಿಗೆ ಪಾಠಹೇಳುವ ಪರಿಪಾಟವಿಲ್ಲ (ಆಟಗಳೇ ಮರೆಯಾಗಿ ಕ೦ಪ್ಯೂಟರ್, ಟಿವಿ ಗಳೊಳಗೆ ಅಡಗಿರುವಾಗ!). ಇದು ಕೇವಲ ಪ್ರಾಥಮಿಕ ಶಿಕ್ಷಣಗಳಿಗೆ ಮೀಸಲಾಗಿಲ್ಲ, ಇ೦ಜಿನಿಯರಿ೦ಗ್ ಗಳಲ್ಲಿ ಕೂಡ, ಗಣಿತದಲ್ಲಿ ಮಾಡಿವ ಫೊರಿಯರ್ ಟ್ರಾನ್ಸ್ಫಾರ್ಮ್ ಗೂ ಸಿಗ್ನಲ್ ಪ್ರೊಸೆಸಿ೦ಗ್ ನಲ್ಲಿ ಮಾಡುವ ಫೊರಿಯರ್ ಟ್ರಾನ್ಸ್ಫಾರ್ಮ್ ಗಳು ಭಿನ್ನ!

ಇದಕ್ಕೆಲ್ಲ ಶಿಕ್ಷಣ ವ್ಯವಸ್ಥೆಯನ್ನಷ್ಟೇ ದೂರುವುದು ಪಲಾಯನವಾದವಾದೀತು. ಮಕ್ಕಳಲ್ಲಿನ ಆಸಕ್ತಿಯನ್ನು ಗಮನಿಸಿ, ಗುರುತಿಸಿ, ಅವುಗಳಲ್ಲಿ ಕುತೂಹಲ ಪ್ರವೃತ್ತಿಯನ್ನ, ಪ್ರಾ೦ಜಲ ಬುಧ್ಧಿಯನ್ನೂ ಬೆಳೆಸದಿದ್ದಲ್ಲಿ, ಅವರ ಹಕ್ಕುಗಳಿಗೆ ನಾವು ಮಾಡಿದ ವ೦ಚನೆಯಾಗುತ್ತದೆ, ದ್ರೋಹವಾಗುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದಲ್ಲಿ ನಾವೇನೂ ಸಣ್ಣವರಾಗುವುದಿಲ್ಲ. ಉತ್ತರವನ್ನರಿಯುವ ಹುಡುಕಾಟದಲ್ಲಿ ನಮ್ಮ ಜ್ಞಾನಸ೦ಪತ್ತೂ ಹೆಚ್ಚುತ್ತದೆ ಎನ್ನುವುದನ್ನು ಮರೆಯಬಾರದು. ಪರೀಕ್ಷೆಯೊ೦ದರಲ್ಲಿ ನಪಾಸಾದೊಡನೆ ಜೀವನವೇ ಮುಗಿಯಿತೆನ್ನುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ, ೧೦/೧೨ ನೇ ತರಗತಿಯ ಫಲಿತಾ೦ಶದ ದಿನದ೦ದು ಜರುಗುವ ಆತ್ಮಹತ್ಯೆಯ ಘಟನೆಗಳೇ ಸಾಕ್ಷ್ಹಿ. ಹಾಗೆ೦ದ ಮಾತ್ರಕ್ಕೆ ಎಲ್ಲರೂ ವಿಜ್ಞಾನಿಗಳಾಗಬೇಕಿಲ್ಲ. ವಿಜ್ಞಾನ ಅಥವಾ ಗಳಿತದ೦ತಹ ವಿಷಯಗಳಿಗೆ ಮಾತ್ರ ಇದು ಮೀಸಲಾಗಿಲ್ಲ. ಕಲೆ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ವಿಷಯವಾಗಲಿ, ಸ್ಪೂನ್ ಫೀಡಿ೦ಗ್ ನಿಲ್ಲಬೇಕು. ವಿಶಯಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸಬೇಕು. ಪರೀಕ್ಷೆಯೆ೦ಬ ಪೆಡ೦ಭೂತ ಮಕ್ಕಳ ಬಾಲ್ಯವನ್ನು ಹಾಳುಮಾದದಿರಲಿ. ವೈಚಾರಿಕತೆಯನ್ನು ನು೦ಗದಿರಲಿ.

ಶಿಕ್ಷಣದ ವ್ಯವಸ್ಥೆಯಲ್ಲಿ ವಿಚಾರ ಸ್ವಾತ೦ತ್ರ್ಯವಿಲ್ಲವೆನ್ನುವುದಕ್ಕಾಗಿ ತನ್ನ ಹುಟ್ಟಿದ ದೇಶದ ಪೌರತ್ವವನ್ನೇ ತ್ಯಜಿಸಿದ ಆಲ್ಬರ್ಟ್ ಐನ್ಸ್ತೀನ್ ಚೇತನ ನಮ್ಮನ್ನಗಲಿ ನೆನ್ನೆಗೆ ೫೪ ವರ್ಷಗಳೇ ಸ೦ದಿದ್ದರೂ, ಅವರ ಅನುಭವಗಳು, ವಿಚಾರಗಳು ಇ೦ದಿಗೂ ಎಷ್ಟು ಪ್ರಸ್ತುತ!!!

Wednesday, April 15, 2009

ನಾನು ಮತ್ತು ???

ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ ಬಸ್ ಬರೋದಕ್ಕೂ ಸರಿ ಹೋಯ್ತು. MP3 ಪ್ಲೇಯರ್ ಕೇಳ್ಲೊ೦ಡು ಕೂತೆ. 'ತಪ್ಪಿ ಹೋಯಿತಲ್ಲೇ ಚುಕ್ಕಿ, ಬೆಳಕಿನ ಜಾಡು.....' ಹಾಡು ಬರ್ತಾ ಇತ್ತು. ಹಾಗೇ ಒ೦ದು ಜೋ೦ಪು ಹತ್ತಿತ್ತು. ಅಷ್ಟರಲ್ಲಿ 'ತ೦ಗಾಳಿಯಲ್ಲಿ ತೇಲಿ .. ' ಹಾಡು ಶುರು ಆಯ್ತು. ನನ್ನ ಸ್ಟಾಪೂ ಬ೦ತು. ಕೈಚೀಲ, ಸ್ಕಾರ್ಪು ಎಲ್ಲ ಹಾಕ್ಕೊ೦ಡು, ಡ್ರೈವರ್ ಗೆ ಶುಭರಾತ್ರಿ ಹೇಳಿ ಇಳಿದೆ.

ಡಿಸೆ೦ಬರ ಚಳಿ. ಉಷ್ಣಾಂಶ ಸುಮಾರು -೩ ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ ಕೊರೆಯೋ ತಣ್ಣನೆ ಗಾಳಿ ಬೇರೆ. ಕೈಚೀಲ ಹಾಕ್ಕೊ೦ಡಿದ್ರು ಕೈಗಳು ಕೋಟೊಳಗೆ ಇದ್ದವು. ಒಳ್ಳೆ ನಡೆದಾಡೋ ಮಮ್ಮಿ ಥರ ಇದ್ದೆ, ಪೂರ್ತಿ ಪ್ಯಾಕ್ ಮಾಡ್ಕೊ೦ಡು. ಎಲ್ರೂದೂ ಅದೇ ಕಥೆ ಅನ್ಕೊಳಿ ಆ ಚಳಿಗೆ. ಬಸ್ ಸ್ಟಾಪಿನಿ೦ದ ಅಪಾರ್ಟ್ಮೆ೦ಟಿಗೆ ಸುಮಾರು ಹತ್ತು ನಿಮಿಷದ ದಾರಿ. ನಡ್ಕೊ೦ಡು ಬರ್ತಾ ಇದ್ದೆ. ಯಾಕೋ ಯಾರೋ ಹಿ೦ಬಾಲಿಸ್ತಿದಾರೆ ಅನಿಸ್ತು. ಹಿನ್ನೆಲೆಯಲ್ಲಿ 'ತ೦ಗಾಳಿ ...' ಹಾಡು ಬೇರೆ ಬರ್ತಾ ಇತ್ತು.

ಹಾಗೇ ಕೆಳಗಡೆ ನೋಡ್ಕೊ೦ಡು ನಡೀತಾ ಇದ್ದೆ. ತಕ್ಷಣ ಏನೋ ಹೊಳೆದ೦ತಾಗಿ ಒ೦ದು ಮುಗುಳ್ನಗು ಮೂಡಿತು. ನನ್ನ ನೆರಳೇ ಅದು ಅ೦ತ ಕ೦ಡು ಹಿಡಿದ್ಬಿಟ್ಟೆ; ಅ೦ತೂ ಫಿಕ್ಷನ್, ಪತ್ತೇದಾರಿ ಕಾದ೦ಬರಿ ಓದಿದ್ದು ಸಾರ್ಥಕ ಆಯ್ತು, ಹೆದರಲಿಲ್ಲ ಅನ್ಕೊ೦ಡು ವಿಜಯೋತ್ಸಾಹದಲ್ಲಿ ಸಾಗ್ತಾ ಇದ್ದೆ. ಮು೦ದೆ ಮತ್ತೊ೦ದು ದೀಪದ ಕ೦ಬ ಬ೦ತು. ನನ್ನ ನೆರಳು ಅ೦ದುಕೊ೦ಡಿದ್ದರ ಪಕ್ಕದಲ್ಲೇ ಇನ್ನೊ೦ದು ದೊಡ್ಡ ಆಕೃತಿ ಕಾಣಿಸ್ತಾ ಇದೆ!!

ಯಾರಿರಬಹುದು? ಯೋಚನೆ ಹತ್ತಿಕೊ೦ಡಿತು. ನಾನು ಬಸ್ಸಿಳಿದಾಗ ಯಾರೂ ಇರಲಿಲ್ಲ. ಬಸ್ನಲ್ಲಿ ಹಿ೦ದಗಡೆ ಯಾರಾದ್ರು ಮಲ್ಕೊ೦ಡಿದ್ರ? ನಾನಿಳಿದ ಮೇಲೆ ಇಳಿದ್ರಾ? ಉಹು, ಏನು ಮಾಡಿದ್ರೂ ಜ್ಞಾಪಕ ಆಗ್ತಾ ಇಲ್ಲ. ಯಾರೋ ಇರ್ತಾರೆ, ಅವರ ಪಾಡಿಗೆ ಅವ್ರು ಹೋಗ್ತಾರೆ ಅನ್ಕೊ೦ಡು ನನ್ನ ನಡಿಗೆಯ ವೇಗ ಹೆಚ್ಚಿಸಿದೆ. ಕತ್ತಲಲ್ಲಿ ಕಾಣದ೦ತಾಗಿ, ಬೆಳಕಿನಲ್ಲಿ ಮತ್ತೆ ಕಾಣಿಸುತ್ತಿತ್ತು ಆ ಆಕೃತಿ.

ಯಾರಿರಬಹುದು? ಪಕ್ಕದ ಅಪಾರ್ಟ್ಮೆ೦ಟಿನವ್ರಾ? ಆಗಲ್ಲ, ಅವ್ರೆನಾದ್ರು ಇಷ್ಟು ಲೇಟ್ ಆಗಿ ಬ೦ದ್ರೆ, ಅವ್ರ ಹೆ೦ಡತಿ ಗ್ರಹಚಾರ ಬಿಡ್ಸಿ ಬಿಡ್ತಾರೆ ಪಾಪ. ಹಾಗೂ ಬ೦ದಿದ್ರೆ, ಬಸ್ ನಲ್ಲೆ ಸಿಗಬೇಕಿತ್ತು. ಮತ್ತೆ ಜಿಮ್ ನಲ್ಲಿ ಸ್ಕ್ವಾಶ್ ಆಡೋಕೆ ಬರ್ತಾನಲ್ಲ ಅವ್ನ? ಛೆ! ಅವನಲ್ಲ, ಅವ್ನಿಷ್ಟು ತೆಳ್ಳಗೆ ಇದ್ದಿದ್ದರೆ, ಜಿಮ್ ಗೇ ಬರ್ತಿರ್ಲಿಲ್ಲ್ವೇನೋ! ನನಗೆ ಈ ಮೆಕ್ಸಿಕನ್ಸ್ ಕ೦ಡ್ರೆ ಸ್ವಲ್ಪ ಭಯ. ಹುಡುಗರು ಅ೦ತಲ್ಲ. ಹುಡುಗೀರನ್ನ ನೋಡಿದ್ರು ಸಹ. ಏನಿಲ್ಲ ಅವ್ರು ಸ್ವಲ್ಪ ಫಾಸ್ಟ್ ಇರ್ತಾರೆ ಅಷ್ಟೇ. ಅದೂ ಅಲ್ದೆ ಎಲ್ಎ ಟ್ರಿಪ್ ಹೋಗಿದ್ದಾಗ ಶವದ ಒಳಗೆ ಡ್ರಗ್ಸ್ ಹಾಕಿ ಅವ್ರು ಮಾಡೋ ಸ್ಮಗ್ಗ್ಲಿ೦ಗ ಬಗ್ಗೆ ಕಥೆ ಕೇಳಿದ್ದೆ. ಹಾಳಾದ್ದು ಅದೆಲ್ಲ ಈಗಲೇ ಜ್ಞಾಪಕ ಬರಬೇಕ? ನಡಿಗೆಯ ವೇಗ ತುಸು ಹೆಚ್ಚಾಯಿತು.

ಯಾರಿದು? ಹಿ೦ತಿರುಗಿ ನೋಡಿ ಬಿಡ್ಲಾ? ಫೋನ್ ತಗೊ೦ಡು ೯೧೧ ಕಾಲ್ ಮಾಡಿ ಬಿಡ್ಲಾ? ಬೇಡಪ್ಪ, ಸಡನ್ ರಿಯಾಕ್ಶನ ಏನಾದ್ರೂ ಯದ್ವಾತದ್ವಾ ಆದ್ರೆ! ಒ೦ದು ಮಾಡೋಕೆ ಹೋಗಿ ಇನ್ನೊ೦ದಾಗ್ಬಿಟ್ರೆ! ಅದ್ಸರಿ ನನ್ನ ಫೋನೆಲ್ಲಿ? ಬೆಳಿಗ್ಗೆ ಚಾರ್ಜ್ ಗೆ ಹಾಕಿ ಬಸ್ ಗೆ ಲೇಟ್ ಆಗತ್ತೆ ಅ೦ತ ಅವಸರದಲ್ಲಿ ಓಡಿದ್ದೆ. ಆಫಿಸ್ ಗೆ ಹೋದಮೇಲೆ ಕಾಲ್ ಮಾಡಿದ್ದಾಗ, ಇಲ್ಲೇ ಇದೆ ಅ೦ತ ರೂಮೇಟ್ ಹೇಳಿದ್ದು ಜ್ಞಾಪಕ ಆಯ್ತು. ಏನೇನೋ ಜ್ಞಾಪಕ ಆಗತ್ತೆ, ಹಿ೦ದಿರೋರು ಯಾರೂ ಅ೦ತ ಗೊತ್ತಾಗ್ತಿಲ್ವಲ್ಲ!

ಆಗ ತಾನೇ ಅಪರ್ಣಾ ಜಿನಾಗ ಕೊಲೆಯ ಆಘಾತದಿ೦ದ ಹೊರಗೆ ಬರ್ತಾ ಇದ್ವಿ. ಅವಳು ಕೂಡ ನಮ್ಮ ಅಪಾರ್ಟ್ಮೆ೦ಟ ಹತ್ರಾನೇ ಇದ್ದಿದ್ದು. ನಮ್ಮ ಬಸ್ಸಿನಲ್ಲೇ ಬರ್ತಾ ಇದ್ದಿದ್ದು (ಇದು ನನ್ನ ರೂಮೇಟ್ ಹೇಳಿದ್ಮೇಲೆ ನನಗೆ ಗೊತ್ತಾಗಿದ್ದು). ನಾನ್ಯಾರ ಹತ್ರಾನು ಜಗಳ ಆಡಿಲ್ಲ. ನಾನೇನು ಆ೦ಧ್ರದವಳಲ್ಲ. ಆದ್ರೂ ಇದು ಯಾರು ನನ್ನ ಹಿ೦ದೆ?

ಅಯ್ಯೋ, ನಮ್ಮ ಅಪ್ಪನವರಿಗೆ ಅಥವಾ ಅಮ್ಮನಿಗೆ ಆಗಲಿ ಯಾವುದೇ ಯಡ್ಡಿಯ ಪರಿಚಯ ಇಲ್ಲ. ಇಲ್ಲಿ ನಮ್ಮ ಪರಿಚಯಸ್ತರು ಅಂತ ಯಾರೂ ಇಲ್ಲ. ಏನಾದ್ರೂ ಆದ್ರೆ ಮನೆಗೆ ಹೇಗಪ್ಪಾ ಗೊತ್ತಾಗೋದು? ರೋಮೇಟ್ಗಳ ನ೦ಬರ ಅವ್ರ ಹತ್ರ ಏನಾದ್ರೂ ಇದ್ಯಾ? ನಮ್ಮನೆ ನ೦ಬರ ರೋಮೇಟ್ಗಳ ಹತ್ರ ಇದ್ಯಾ? ಫೋನ್ ನೋಡಿದ್ರೆ ಸಿಗಬಹುದು. ........... ಹೀಗೆ ಬೆಳಕಲ್ಲಿ ಕಾಣುತಿದ್ದ ಆ ಆಕೃತಿಯ ಹಿ೦ದೆ ಬೆಳಕಿನ ವೇಗಕ್ಕಿ೦ತಲೂ ಹೆಚ್ಚಿನ ವೇಗದಲ್ಲಿ ಯೋಚನೆಗಳು ಓಡುತ್ತಿದ್ದವು. ಆ -೩ ಡಿಗ್ರಿಯಲ್ಲೂ ಬೆವರುತಿದ್ದೆ!

ಮನೆ ಹತ್ರ ಬ೦ತು. ಸ್ವಲ್ಪ ಜಾಸ್ತಿ ಬೆಳಕಿತ್ತು. ನನ್ನ ನೆರಳೂ ಕಾಣಿಸ್ತಾ ಇಲ್ಲ, ಆ ಆಕೃತಿನೂ ಕಾಣಿಸ್ತಾ ಇಲ್ಲ! ಏನಾಗ್ತಾ ಇದೆ ಅ೦ತ ಯೋಚಿಸಲೂ ಬಿಡದೆ, ಮೆದುಳು ಹಿ೦ತಿರುಗಿ ನೋಡುವ೦ತೆ ಸೂಚನೆ ನೀಡಿತ್ತು. ಯಾವ ಮನುಷ್ಯರೂ ಇಲ್ಲ!! ನೆರಳು ಕಾಣಿಸ್ತು. ಒ೦ದಲ್ಲ ಮೂರ್ಮೂರು. ಹೊನಲುಬೆಳಕಿನ ಕ್ರಿಕೆಟ್ ಮ್ಯಾಚ್ ಜ್ಞಾಪಕ ಆಯ್ತು. ಎಲ್ಲ ನಿಚ್ಚಳ ಆಯ್ತು. ನಾನು ಬರ್ತಾ ಇದ್ದ ಹಾದೀಲಿ ಎರಡು ಕಡೆ ದೀಪದ ಕ೦ಬಗಳು. ಒ೦ದರಿ೦ದ ಕಾಣ್ತಾ ಇದ್ದದ್ದು ನನ್ನ ನೆರಳು. ಇನ್ನೊ೦ದ್ರಿ೦ದ ಕಾಣ್ತಾ ಇದ್ದದ್ದೂ ನನ್ನ ನೆರಳೇ!! ನಾನು ನೋಡಿ ಹೆದರಿದ್ದು ನನ್ನನ್ನೇ!! ಭಯ ವಿವೇಚನೆಯನ್ನು ನು೦ಗಿ ಬಿಟ್ಟಿತ್ತು! ಸರಳ ಬೆಳಕಿನಾಟವನ್ನು ಮರೆಸಿತ್ತು!

ಅದೇ ಖುಷಿಯಲ್ಲಿ ೩ ಮಹಡಿಗಳನ್ನು ಅರ್ಧ ನಿಮಿಷದಲ್ಲಿ ಹತ್ತಿದ್ದೆ. MP3 ಪ್ಲೇಯರ್ ನಲ್ಲಿ 'ತ೦ಗಾಳಿ .. ' ಹಾಡು ಯಾವಾಗ್ಲೋ ಮುಗಿದಿತ್ತು. 'ಸವಿ ನೆನಪುಗಳು ಬೇಕು ಸವಿಯಲೇ ಬದುಕು.... ' ಹಾಡು ಬರ್ತಾ ಇತ್ತು. ಅದನ್ನ ಆಫ ಕೂಡ ಮಾಡದೆ ಆ ಕಡೆ ಬಿಸಾಕಿ, ಮೊದ್ಲು ಫೋನ್ ತಗೊ೦ಡು ಮನೆಗೆ ಕಾಲ್ ಮಾಡಿ ಅಮ್ಮನ ಹತ್ರ ಒ೦ದು ತಾಸು ಮಾತಾಡಿದ್ಮೇಲೇ ಸಮಾಧಾನ ಆಗಿದ್ದು. ಆಮೇಲೆ ರೂಮೆಟ್ಗಳಿಗೆ ಕಥೆ ಹೇಳ್ಕೊ೦ಡು ಮಲಗೋ ಹೊತ್ತಿಗೆ ಗ೦ಟೆ ೨ ದಾಟಿತ್ತು, ಹೆಚ್ಚೂ ಕಡಿಮೆ ಬೆಳಗಾಗಿತ್ತು!

Friday, April 03, 2009

SkyDiving - ಹೀಗೊಂದು ಅನುಭವ


ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮನ ಬೆಂಬಲ ಬೇರೆ ಕೇಳೋದು. ಅಮ್ಮನ ಯಾವ ಸಮಾಧಾನವು ಪ್ರಯೋಜನಕ್ಕೆ ಬರ್ಲಿಲ್ಲ. ಅದೇ ಮೊದಲು, ಅದೇ ಕೊನೆ. ಮು೦ದೊ೦ದು ಸಲ ನಾನೇ ಧೈರ್ಯ ಮಾಡಿ ಕೂತ್ಕೋತೀನಿ ಅಂದ್ರೂ, ನನ್ನ ಕೂರಿಸಿಕ್ಕಾಗ್ಲಿ, ನನ್ನ ಜೊತೆ ಕೂತ್ಕೋಳ್ಳಿಕ್ಕಾಗ್ಲಿ ಮನೇಲಿ ಯಾರಿಗೂ ಧೈರ್ಯ ಇರ್ಲಿಲ್ಲ. ಇ೦ಥದೊ೦ದು ಹಿನ್ನೆಲೆಯಲ್ಲಿ ಸ್ಕೈ ಡೈವಿಂಗ್!! ಏನ್ ತಮಾಷೆನಾ!!

ಒಂದಿನ ಹೀಗೆ, ನನ್ನ ಸ್ನೇಹಿತೆ ಕರೆ ಮಾಡಿ, ಇಲ್ಲಿ ನನ್ನ ಸಹುದ್ಯೋಗಿಗಳೆಲ್ಲರು ಸ್ಕೈ ಡೈವಿಂಗ್ ಹೋಗ್ತಾ ಇದಾರೆ. ನಾವೂ ಹೋಗೋಣ ಅಂದ್ಲು. ಸರಿ ಇಬ್ರಿಗೂ ಟಿಕೆಟ್ ಬುಕ್ ಮಾಡು ಅಂದೆ. ಹಂಗಂದ್ರೆ ಏನು ಅಂತಾನು ಕೇಳಲಿಲ್ಲ. ಆಮೇಲೆ ಕೆಲಸದ ಮಧ್ಯೆ ಮರೆತೇ ಹೋಗಿತ್ತು. ಹೋಗುವ ಹಿಂದಿನ ದಿನ, ಎಲ್ಲ ರೆಡಿನಾ ಅಂತ ಕರೆ ಬಂತು. ಆಗ ಗೂಗ್ಲಿಸಿದೆ. ಒಂದು ಕ್ಷಣ 'ನಾನ್ಯಾರು' ಅನ್ನೋ ಪ್ರಶ್ನೆ ಮೂಡಿತ್ತು. ಟಿಕೆಟ್ ರದ್ದು ಮಾಡುವ ಅಥವಾ ಬದಲಾಯಿಸೋ ಹಂತ ಮೀರಿತ್ತು!!

ಪ್ರಯಾಣದ ತಯಾರಿ ಶುರು. ಬೆಳಿಗ್ಗೆ ಬೇಗ ಎದ್ದು, ತಿಂಡಿ, ಊಟ (ಶುಧ್ಧ ಸಸ್ಯಾಹಾರಿಗಳಾಗಿರೋದ್ರಿ೦ದ ಮುಂಜಾಗ್ರತೆ) ಎಲ್ಲ ತಯಾರು ಮಾಡಿದ್ವಿ. ಸ್ವಪ್ನ, ಲಾವಣ್ಯ, ಶೈಲಾ ನಮ್ಮನೆಗೆ ಬಂದರು. ನೀರು ತಿಂಡಿ ತಿನಿಸುಗಳನ್ನೆಲ್ಲ ಕಾರಿನಲ್ಲಿ ತುಂಬಿಸಿಕೊಂದು ಹೊರಟಿತು ಸವಾರಿ. ಟಿಪಿಕಲ್ ಸಿಯಾಟಲ್ ಹವಾಮಾನ (ಯಾವಾಗಲು ಮೋಡ ಕವ್ಕೊ೦ಡಿರತ್ತೆ). ಬೆಳ್ಳಂಬೆಳಗ್ಗೆ ೫ ಗಂಟೆ. ಸ್ವಪ್ನ ಡ್ರೈವ್ ಮಾಡ್ತಾ ಇದ್ಲು. ರಾತ್ರಿ ಸರ್ಯಾಗಿ ನಿದ್ದೆ ಮಾಡಿದ್ಯ, ಆಮೇಲೆ ಮಾವನ ಹತ್ರ ಎಲ್ರಿಗೂ ಟಿಕೆಟ್ ಕೊಡಿಸಬೇಡ ಅಂತೆಲ್ಲ ರೇಗಿಸಿಕೊ೦ಡು, ಲೇನ್ ಬದಲಾಯಿಸಬೇಕಾದ್ರೆ ಹಿಂದಿನ ಸೀಟಿನವರೆಲ್ಲ ಹಿಂದಕ್ಕೆ ತಿರುಗಿ ಈಗ ಮಾಡು ಅಂತ ಸಿಗ್ನಲ್ ಕೊಟ್ಟುಕೊಂಡು, ಒಬ್ರು ಸ್ಪೀಡ್ ಲಿಮಿಟ್ ನೋಡ್ಕೊಂಡು, ಜಿಪಿಎಸ್ ಹೊಡ್ಕೋತ ಇದ್ರೂ ಒಬ್ರು ಅದನ್ನು ನೋಡ್ಕೋತಾ ಎಕ್ಸಿಟ್, ಟರ್ನಿಂಗ್ ಎಲ್ಲ ಮತ್ತೊಂದು ಸಲ ಹೇಳ್ಕೊಂಡು..... ಹೀಗೆ ಸಾಗಿತ್ತು ನಮ್ಮ ಪಯಣ. ವಾಶಿ೦ಗ್ಟನ ದಾಟ್ತಾ, ಸರಿಯಾಗಿ ಬೆಳಗಾಗ್ತ, ಅವಳಿಗೂ ಡ್ರೈವಿ೦ಗ ಸಲೀಸಾಗ್ತಾ, ಮಿಕ್ಕಿದವರೆಲ್ಲ ಹಾಗೇ ನಿದ್ರಾದೇವಿಗೆ ಶರಣಾದರು. ನನಗು ಆಕೆಗೂ ಯಾವ ಜನುಮದ ದ್ವೇಷನೋ ಕಾಣೆ, ನನ್ಹತ್ರ ಸುಳೀಲಿಲ್ಲ. ಪೋರ್ಟ್ಲ್ಯಾಂಡ್ ದಾಟಿದೀವಿ ಅಷ್ಟೇ, ಅಬ್ಬಬ್ಬ ಅದೇನು ಫಾಗ್!! ಮುಂದೆ ಒಂದಿಂಚು ಅಷ್ಟೇ ಕಾಣತಾ ಇದ್ದದ್ದು. ಮುಗೀತು ಇವತ್ತಿನ ಡೈವಿಂಗ್ ಕಥೆ ಅನ್ಕೊ೦ಡ್ವಿ. ಕ್ಲಿಯರ್ ಸನ್ನಿ ವೆದರ್ ಅಂತಿದ್ದ ಹವಾಮಾನ ವರದಿಗಳನ್ನೆಲ್ಲಾ ಬೈಕೊ೦ಡೇ ಡ್ರೈವ್ ಸಾಗ್ತಾ ಇತ್ತು. ಇನ್ನ ಸರಿಯಾಗಿ ಬೈದಿದ್ದೇ ಮುಗಿದಿರಲಿಲ್ಲ, ಅಷ್ಟೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಿ ನಗ್ತಾ ಇದ್ದ. ಅಬ್ಬಬ್ಬಾ ಅಂದ್ರೆ ೧-೨ ಮೈಲಿ ಇತ್ತಷ್ಟೇ ಫಾಗ್. ಸೂರ್ಯನ ನಗುವಿಗೊಂದು ಥ್ಯಾಂಕ್ಸ್ ಹೇಳ್ತಾ ಇದ್ವಿ, ಅಷ್ಟೊತ್ತಿಗೆ ಮಿಕ್ಕಿದ ಮೂವರು ಎದ್ದರು.

ಗಮ್ಯಸ್ಥಾನ ಹತ್ತಿರ ಆಗ್ತಾ ಶುರು ಆಯ್ತು ನಮ್ಮ ಪ್ರವರ. ಏನೇನು ನಿರ್ಭ೦ದಗಳಿದ್ಯೋ, ತೂಕ ಜಾಸ್ತಿ ಅಂತ ಬೇಡ ಅನ್ನಲ್ಲ ತಾನೇ ಅನ್ನೋದು ಒಬ್ಬಳ ಚಿಂತೆ ಆಗಿದ್ರೆ, ಉದ್ದ ಕಮ್ಮಿ ಅಂತ ಮಾಡ್ಬಿಟ್ರೆ ಅಂತ ಇನ್ನೊಬ್ಬಳ ಚಿಂತೆ. ನಾನು ಕೇಳಿದೆ, 'ಕೆಳಗೆ ಬಿದ್ರೆ ಏನಿರತ್ತೆ?' ಅಂತ. ಎಲ್ಲಾರೂ ಜೋರಾಗಿ ನಕ್ಕುಬಿಟ್ರು. 'ನೆಲ ಇರತ್ತೆ, ಇನ್ನೇನಿರತ್ತೆ' ಅಂತಂದ್ರು. ಸಖತ್ ಖುಷಿ ಆಯ್ತು [ನೀರಿರಲ್ಲ ಅಂತ ಖಾತ್ರಿ ಪಡಿಸ್ಕೋಳ್ಳೋಕೆ ಆ ಪ್ರಶ್ನೆ ಕೇಳಿದ್ದೆ. ಗೂಗ್ಲಿಸಿದ್ದ ಒಂದು ಚಿತ್ರದಲ್ಲಿ ಹಾಗಿತ್ತು. ಹಾಗಂತ ನಂಗೇನು Hydrophobia ಇಲ್ಲ, ಈಜು ಬರೋಲ್ವಲ್ಲ ಅದಕ್ಕೆ ಸ್ವಲ್ಪ ಭಯ ಅಷ್ಟೇ]. ಇವನ್ನೆಲ್ಲ ಹೊರಡೋಕು ಮುಂಚೇನೆ ನೋಡ್ಕೋ ಬೇಕಾಗಿತ್ತು, ಆದ್ರೆ ಯಾವ್ದೋ ಟೀಮ್ ನವರು ಬುಕ್ ಮಾಡ್ತಾರೆ ಅಂತ ನಾವೂ ಗುಂಪಲ್ಲಿ ಗೋವಿಂದ ಅ೦ದಿದ್ವಿ. ಮತ್ತೆ ಅದರ ಜ್ಞಾಪಕ ಆಗಿದ್ದು ಹೊರಡೋ ಹಿಂದಿನ ದಿನಾನೆ! ಕುರುಡನಿಗೆ ಇನ್ನೊಬ್ಬ ಕುರುಡ ದಾರಿ ತೋರಿಸಿದ ಹಾಗೆ ನಮಗೆ ನಾವೇ ಸಮಾಧಾನ ಹೇಳ್ಕೊಂಡು, ಧೈರ್ಯ ತಂದು ಕೊಂಡು, ನಿಲ್ದಾಣ ತಲುಪಿದ್ವಿ.

ಈ ಹಾಳಾದ್ದು ಏನು ಮನಸ್ಸು ಅಂತೀನಿ, ಏನೂ ಆಗಲ್ಲ, ತರಬೇತುದಾರರು ಇರ್ತಾರೆ, ಎಷ್ಟೊಂದು ಜನ ಹೋಗಿ ಬಂದಿದ್ದಾರೆ ಅಂತೆಲ್ಲ ಧೈರ್ಯ ಇರತ್ತೆ, ಆದರೂ .. ಎಲ್ಲೋ ಮೂಲೇಲಿ, ಪ್ಯಾರಾಚ್ಯುಟ್ ತೆರೆದುಕೊಳ್ಳದೆ ಇದ್ರೆ, ಇನ್ಯಾವುದಾದರೂ ಕೊಂಡಿ ಕಳಚಿಕೊ೦ಡ್ರೆ.. ಇಂಥದೇ ಯೋಚನೆಗಳು ಮೂಡುತ್ತವಲ್ಲ! ಅದ್ಯಾಕೆ ಯಾವಾಗಲು ಹಗ್ಗವನ್ನೇ ಹಾವು ಅಂದುಕೊಂಡು ಹೆದರ್ತಿವಿ, ಹಾವನ್ನ ಹಗ್ಗ ಅಂದುಕೊಂಡು ಮುಂದಕ್ಕೆ ಹೋಗೋದಿಲ್ಲ! ಭಾರಿ ಕಷ್ಟ ಆಗಿಬಿಟ್ಟಿದೆ ಇವನ್ನೆಲ್ಲ ಅರ್ಥ ಮಾಡಿಕೊಳ್ಳೋದು.

ಮಿಕ್ಕಿದೆಲ್ಲ ಗುಂಪುಗಳು ಬಂದಮೇಲೆ ನೋಂದಣಿ ಆಯ್ತು. ನಾವೆಲ್ಲಾ ನಮ್ಮ ಡೆತ್ ಸರ್ಟಿಫಿಕೆಟ್ ಗಳ ಮೇಲೆ ಸಹಿ ಹಾಕಿ, ಕೊನೆ ಸಾರ್ತಿ ಏನೋ ಅನ್ನೋ ಹಾಗೆ ಹಲ್ಕಿರ್ಕೊ೦ಡು ಭಾವಚಿತ್ರ ತೆಗೆಸಿಕೊ೦ಡಿದ್ದೂ ಆಯ್ತು. ಪ್ಲೇನ್ ನಿಂದ ಕೆಳಗೆ ಹಾರಿದಾಗ ಕೈ-ಕಾಲುಗಳ ಭಂಗಿ ಹೇಗಿರಬೇಕು, ಉಸಿರಾಟ ಹೇಗೆ, ಮತ್ತೆ ಭೂಸ್ಪರ್ಶ ಮಾಡುವಾಗ ಯಾವ ಭಂಗಿ ..ಮತ್ತಿತರ ಸೂಚನೆಗಳನ್ನು ಕೇಳಿಸಿಕೊ೦ಡಿದ್ದೂ ಆಯ್ತು. ೩-೪ ಸಲ ರೆಸ್ಟ್ ರೂಮ್ ಗೆ ಹೋಗಿ ಬಂದದ್ದು ಆಯ್ತು. ಸರಿ ಇಬ್ಬಿಬ್ರನ್ನೇ ಕರೀತೀವಿ ಅಂತ ಕೂರಿಸಿದ್ರು.

ನಿರೀಕ್ಷಿಸಿದಂತೆ ನಾನು ಮೊದಲು ಹೋಗಲಿಲ್ಲ. ಹಾರುವ ಮೊದಲು, ಸಕಲ ಶಸ್ತ್ರ ಸನ್ನದ್ಧರಾಗಿ (ಹೆಚ್ಚೇನು ಇಲ್ಲ, ಶಿರಸ್ತ್ರಾಣ, ಕನ್ನಡಕ, ಶೂ ಇತಾದಿ ದಿರಿಸುಗಳನ್ನು ತೊಟ್ಟಿದ್ದರು) ಹೊರಬಂದು, ಸ್ನೇಹಿತರಿಗೆಲ್ಲ ತೋರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಹೊರಟರು. ಕ್ಷೇಮವಾಗಿ ಹಿಂತಿರುಗಿದರು. ಅನುಭವಗಳನ್ನು ಹಂಚಿಕೊಳ್ಳುವ ಆತುರ ಅವರಿಗಾದರೆ, ಅನುಭವಿಸುವ ತುಡಿತ ನಮಗೆ. ಹಾಗಾಗಿ ಎಲ್ಲರೂ ಹೋಗಿ ಬರುವ ತನಕ ಯಾರು ಸೊಲ್ಲೆತ್ತದಂತೆ ಒಂದು ನೀತಿಸಂಹಿತೆ ಜಾರಿಗೆ ಬಂತು. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅನ್ನಿಸ್ತಿದೆ. ನಾನು by default ಎಲ್ಲ ಹುಡುಗರಿಗೂ ಧೈರ್ಯ ಇರತ್ತೆ ಅನ್ಕೊಂಡು ಬಿಟ್ಟಿದ್ದೆ. ತುಂಬಾ ಸರ್ತಿ ಇದು ದಿಸ್ಪ್ರೂವೆ ಆಗಿದ್ರು ಆ ಆಲೋಚನೆ ಪೂರ್ತಿಯಾಗಿ ಹೋಗಿರಲಿಲ್ಲ. ಇಲ್ಲಿ ನೋಡಿದ್ಮೇಲೆ, ಜೀವಭಯ ಎಲ್ಲರಿಗೂ ಒಂದೇ ಅನ್ನೋದು ಖಾತ್ರಿ ಆಯ್ತು. ತು೦ಡಾಗ್ಬೇಕಾಗಿರೊ ಹಗ್ಗಕ್ಕೇನಾದ್ರೂ ಗೊತ್ತಿರತ್ತಾ ಅದು ಹಿಡ್ಕೊ೦ಡಿರೋದು ಹುಡುಗನ್ನ , ಹುಡುಗಿನಾ ಅಂತಾ! (ಕೈಲಾಸ೦ ಅವರ ನಾಯಿ ಜೋಕು ಜ್ಞಾಪಕ ಆಗತ್ತಲ್ವಾ!)

ನನ್ನ ಸರದಿ ಬಂತು. ಶಸ್ತ್ರ ಸನ್ನದ್ಧಳಾಗಿ ಹೊರಬಂದೆ, ತರಬೇತಿಯ ಸೂಚನೆಗಳನ್ನು ಮೆಲುಕು ಹಾಕುತ್ತ. ಒಳಗಡೆ ಪುಕಪುಕ ಅಂತಿದ್ರು ಏನೋ ಭಂಡ ಧೈರ್ಯ. ಫೋಟೋ, ವೀಡಿಯೊ ಎಲ್ಲ ತೆಗಿತಾರಲ್ಲ, ನಮ್ಮ ತಂದೆಗೆ ತೋರಿಸಿ ಭೇಷ್ ಅನ್ನಿಸಿಕೊಳ್ಳೋ ಹುಮ್ಮಸ್ಸು (ಭಯ ಆಗ್ತಾ ಇದೆ ಅಂದ್ರೆ ಸಾಕು, ಸಹಸ್ರನಾಮ ಶುರು ಮಾಡ್ತಾರೆ ಅದಕ್ಕೆ). ನನ್ನ ಕಾಲೆಳೆಯೋ ಅವಕಾಶಕ್ಕೆ ಚಾತಕ ಪಕ್ಷಿಗಳಂತೆ ಕಾಯೋ ನನ್ನ ತಂಗಿಯರ ಮುಂದೆ (ಅವ್ರಿಗೆ ನನಗಿಂತ ಧೈರ್ಯ ಸ್ವಲ್ಪ ಜಾಸ್ತಿ) ಸಾಹಸ ಪ್ರದರ್ಶನದ ವಿವರಣೆ ನೀಡೋ ಉತ್ಸಾಹ! ಕೂತಿದ್ದ ನನ್ನ ಸ್ನೇಹಿತರಿಗೆ, ನನ್ನ ಪ್ಯಾರಾಚುಟ್ ಬಣ್ಣ ಹೇಳಿ, ಕ್ಯಾಮೆರ ಕೊಟ್ಟು, ಇರೋ Zoom ನ ಪೂರ್ತಿ ಉಪಯೋಗಿಸಿ ಅನ್ನೋ (ನಿರ್)ಉಪಯುಕ್ತ ಸಲಹೆಗಳನ್ನು ಕೊಟ್ಟು, ಗ್ಲೈಡರ್ ಕಡೆ ನಡೆದೆವು. ಮಂಗಳ ಗ್ರಹಕ್ಕೇ ಹೋಗ್ತಾ ಇರೋ ಗಗನ ಯಾತ್ರಿಗಳ ತರ ಎಲ್ಲರಿಗೂ ಟಾಟಾ ಮಾಡ್ಕೊಂಡು ಏನ್ ಫೋಸ್ ಅಂತೀನಿ!!

ಭೂಮಿಯಿ೦ದ ಮೇಲಕ್ಕೆ ಹಾರಿದ್ವಿ. ಜನ ಇರುವೆ ಆದ್ರು, ಎಲ್ಲ ಆಯ್ತು, ಬಾಗಿಲು ತೆರೆಯಿತು, ಸರಿ ಹಾರೋದು ಅಂದುಕೊಂಡೆ. ಪಕ್ಕದಲ್ಲಿದ್ದ ತರಬೇತುದಾರನ್ನ ಕೇಳಿದೆ. 'ಸ್ವಲ್ಪ ತಾಜಾ ಹವೆ ಒಳಗೆ ಬರಲಿ ಅಂತ' ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಈಗ ಹಾರ್ತೀವ ಅಂದೆ. ಇನ್ನು ೪೦೦೦ ಅಡಿ ಅಷ್ಟೇ ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಮತ್ತೆ ಕೇಳ್ದೆ. ಇನ್ನು ೬೦೦೦ ಅಡಿ, ೧೩೦೦೦ ಅಡಿ ತಲುಪಬೇಕು ಅಂದ್ರು. ಶಿರಸ್ತ್ರಾಣ ಬೇರೆ ಹಾಕೊ೦ಡಿದ್ನಲ್ಲ, ಸರಿಯಾಗಿ ಕೇಳಿಸ್ಲಿಲ್ಲವೇನೋ ಅನ್ಕೊ೦ಡು, 'ಸಾರಿ' ಅಂದೆ. ೧೩೦೦೦ ಅಡಿ ಅಂದ್ರು. ಸ್ವಲ್ಪ ಸುಧಾರಿಸಿಕೊಂಡು, ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು ಅನ್ಕೊಂಡು, ಸುತ್ತ ಕಾಣ್ತಾ ಇದ್ದ ಪರ್ವತ ಶ್ರೇಣಿ ನೋಡ್ಕೊಂಡು ಕುತ್ಕೊ೦ಡೆ. ಇನ್ನು ಸ್ವಲ್ಪ ಹೊತ್ತಾಯ್ತು (೧ ನಿಮಿಶಾನು ಆಗಿರಲಿಕ್ಕಿಲ್ಲ, ಆದರೆ ನನಗೆ ಯುಗ ಕಳೆದ ಹಾಗೆ ಆಗ್ತಾ ಇತ್ತಲ್ಲ). ಮತ್ತೆ ಕೇಳ್ದೆ. ೭೫೦೦ ಅಡಿ ಅಂತಂದು ಕೈಲಿದ್ದ ಆಲ್ಟಿಮೀಟರ ನಂಗೆ ಕೊಟ್ರು. ಸುಮ್ನೆ ಹಾಗೆ ಒಂದು ಮುಗುಳ್ನಕ್ಕು ಹಿಂದಿರುಗಿಸಿದೆ.

ಕೊನೆಗೂ ೧೩೦೦೦ ಅಡಿ ಮೇಲೆ ತಲುಪಿದೆವು. ಒಬ್ಬೊಬ್ಬರೆ ಹಾರೋಕೆ ಶುರು ಮಾಡಿದ್ರು. ನೋಡಿ ಒಂದು ಸಲ ಎದೆ ಧಸಕ್ ಅಂತು. ಕಣ್ಣು ಮಿಟುಕಿಸುವದರೊಳಗಾಗಿ ನ ಘರ್ ಕಾ ನ ಘಾಟ್ ಕಾ ಸ್ಥಿತಿ. ಸರ್ರ್ ಅಂತ ಜಾರ್ಕೊ೦ಡು ಹೋಗಿ ಬೀಳೋದೆ! ನನ್ನ ಸರತಿ ಬರೋವಾಗ ಕಣ್ಣು ಮುಚ್ಚಿಕೊಂಡು ಬಿಡೋಣ ಅನ್ಕೊಂಡೆ. ಆಮೇಲೆ, ಛೆ, ಅಷ್ಟು ಮೇಲೆ ಬಂದು ಕಣ್ಣು ಮುಚ್ಚಿಕೊಂಡು ಬಿಟ್ರೆ ಒಳ್ಳೆ ಅನುಭವ ತಪ್ಪಿ ಹೋಗತ್ತಲ್ಲ ಅನ್ಕೊಂಡು, ಬ್ಯಾಟರಿ ರೀಚಾರ್ಜ್ ಮಾಡ್ಕೊಂಡು, ರೆಡಿನಾ ಅಂದಾಗ ರೆಡಿ ಅಂತ ಜೋರಾಗಿ ಕೂಗ್ಕೊ೦ಡು ಕೆಳಗೆ ಹಾರಿದ್ದೆ!

ಒಂದು ಕ್ಷಣ ಏನಾಗ್ತಾ ಇದೆ ಅಂತ ಗೊತ್ತಾಗ್ಲಿಲ್ಲ. ಗಾಳಿಯ ಒತ್ತಡ. ಬಾಯಿ ತೆಗೀಬೇಡಿ, ಒಣಗಿ ತೊಂದರೆ ಆಗತ್ತೆ ಅಂದಿದ್ದು ಮಾತ್ರ ಜ್ಞಾಪಕ ಇತ್ತು. ಕೈ ಕಾಲುಗಳ ಭಂಗಿಯ ಸೂಚನೆ ಎಲ್ಲ ಗಾಳಿಗೆ ಹಾರಿಹೋಗಿ, ಒಳ್ಳೆ ಟೈಟಾನಿಕ್ ಫೋಸು ಕೊಡ್ತಾ ಇದ್ದೆ. ಮೂಗಲ್ಲಿ ಉಸಿರಾಡಬಹುದು ಅನ್ನೋದು ಮರೆತುಹೋಗಿತ್ತು. ಫೋಟೋಗ್ರಾಫರ್ ಕಾಣಿಸಿದರು. ಬಂದಿದ್ದ ಪಾರ್ಶಿಯಲ್ ಅಮ್ನಿಶಿಯಾ ತಕ್ಷಣ ಸರಿ ಹೋಗಿ, ಎಲ್ಲ ಸೂಚನೆಗಳು ಜ್ಞಾಪಕ ಆಗಿ, ಮಿಕ್ಕಿದ್ದ ಫ್ರೀಫಾಲ್ ನ ಪೂರ್ತಿ ಮಜಾ ಮಾಡಿದೆ. ಫ್ರೀಫಾಲ್ ಮುಗಿದಮೇಲೆ ಪ್ಯಾರಾಚ್ಯುಟ್ ತೆರೆದುಕೊಳ್ತು. ಆಹಾ! ತ್ರಿಶಂಕು ಸ್ವರ್ಗ! ನಿಜವಾಗ್ಲು ಸ್ವರ್ಗ ನರಕ ಎಲ್ಲ ಭೂಮಿ ಮೇಲೆ ಅನ್ನೋ ನನ್ನ ನಂಬಿಕೆ ಇನ್ನೂ ಬಲವಾಯ್ತು. ಮೌ೦ಟ ಹೆಲನ್, ಮೌ೦ಟ ಆಡಮ್ಸ್, ಮೌ೦ಟ ರೈನರ್ .... ಹಿಮಾಚ್ಛಾದಿತ ಪರ್ವತ ಶ್ರೇಣಿ ... ಏನು ಸುಂದರ ಇಳೆ... ವರ್ಣನೆಗೆ ನನ್ನ ಪದ ಭ೦ಢಾರ ಚಿಕ್ಕದು. ಎಡಕ್ಕೆ, ಬಲಕ್ಕೆ ಅಂತ ಎಲ್ಲಕಡೆ ಪಲ್ಟಿ ಹೊಡೆದು, ಒಂದು ೧೫ ನಿಮಿಷ ಎಲ್ಲಕಡೆ ಸುತ್ತಾಡಿ, ಇನ್ನೇನು ನೆಲಕ್ಕಿಳಿಯೋ ಸಮಯ ಬಂದೆ ಬಿಡ್ತು! ಹಾರೋಕು ಮುಂಚೆ ಇದ್ದ ಭಯ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ, ಹೊಸ ಲೋಕದಲ್ಲಿ ತೇಲಿ ಹೋಗಿದ್ದೆ. ಆ ಲೋಕದಿಂದ ಮತ್ತೆ ಭೂಮಿಗೆ ಬರಲು ಮನಸ್ಸೇ ಇರಲಿಲ್ಲ. ಆದರೇನು ಮಾಡೋದು, All Good things have to come to an end. ಸರಿಯಾಗಿ ನೆಲಕ್ಕಿಳಿದಿದ್ದಾಯ್ತು. ಶಿರಸ್ತ್ರಾಣವನ್ನು ತೆಗೆದು ಕೈಯಲ್ಲಿಟ್ಕೊ೦ಡು, ಚಂದ್ರನ ಮೇಲೆ ಕಾಲಿಟ್ಟು ಬಂದ Neil Armstrong, ಮೊದಲ ಗಗನ ಯಾತ್ರಿ Yuri Gagarin ಕೊಡ ಇಂತದೊಂದು ಫೋಸ್ ಕೊಟ್ಟಿರಲಿಕ್ಕಿಲ್ಲ, ಅಂಥಾ ಫೋಸ್ ಕೊಟ್ಕೊಂಡು ಬ೦ದಿದ್ದೇನು, ಸ್ನೇಹಿತರ ಕೈ ಕೈ ಹೊಡ್ಕೊ೦ಡಿದ್ದೇನು! ಆದ್ರೂ ಎಲ್ರೂ ಹೋಗಿ ಬರುವ ತನಕ ನೀತಿ ಸಂಹಿತೆಗೆ ಬದ್ಧರಾಗಿದ್ವಿ (ಕಾರ್ ಹತ್ರ ಹೋಗಿ ಒಂದು ರೌ೦ಡ ಹೊಟ್ಟೆ ಪೂಜೆ ಮುಗಿಸಿದ್ವಿ ಅಷ್ಟೇ).

ಫೋಟೋ, ವೀಡಿಯೊ ಎಲ್ಲ ಒಂದು ವಾರ ಆಗತ್ತೆ, ನಿಮ್ಮ ವಿಳಾಸಕ್ಕೆ ಕಳಿಸ್ತೀವಿ ಅಂದ್ರು. ಸ್ವಲ್ಪ ನಿರಾಸೆಯಾಯ್ತು, ನಮ್ಮ ಯಶೋಗಾಥೆಯ ಆಧಾರ ಸಹಿತ ಕಥನಕ್ಕಾಗಿ ಕಾಯಬೇಕಲ್ಲ ಅಂತ. ಹೋಗಿ ಬಂದಮೇಲೆ ಅಂಥಾ ಏನೂ ವಿಶೇಷ ಸಾಧನೆ ಅನ್ನಿಸಲಿಲ್ಲ (ಈಗಲೂ ಅನ್ನಿಸ್ತಿಲ್ಲ, ಅದೇನೋ ಕಲಿಯೋ ತನಕ ಬ್ರಹ್ಮ ವಿದ್ಯೆ, ಕಲಿತಮೇಲೆ ಕೋತಿ ವಿದ್ಯೆ ಅ೦ತಾರಲ್ಲ ಇದಕ್ಕೆ ಇರ್ಬೇಕು!). ಆದರೆ, ಫೋಟೋ ನೋಡಿದ ಸ್ನೇಹಿತರ ಹೇಳಿಕೆಗಳನ್ನು ಕೇಳಿ ಸಾಧನೆ ಇರಬಹುದೇನೋ ಅನಿಸಿದ್ದು ಸುಳ್ಳಲ್ಲ. ಹೋಗಿಬಂದು ವಾರವಾದ್ರು ಅದರ ಚರ್ಚೆಯಲ್ಲಿದ್ದಿದು ಸುಳ್ಳಲ್ಲ. ಅಂತೂ ನನ್ನನ್ನೂ ಜೀವನದಲ್ಲಿ ಒಂದು 'ಎತ್ತರ'ಕ್ಕೆ ಏರಿಸಿದ ಘಟನೆ!! ಒಂದು ಸುಂದರ ಅನುಭವ ಈ ಸ್ಕೈ ಡೈವಿಂಗ್.

Tuesday, March 31, 2009

ಆಟಿಕೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ

ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'

ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು
ಅವುಗಳೊಂದಿಗೆ ಮೈಮರೆತು ಆಡುವುದನ್ನು
ದುಬಾರಿ ಆಟಿಕೆಗಳ ಬಯಕೆಯೊಂದಿಗೆ
ತುಂಬಿಸುತಿಹೆನು ನಗ-ನಾಣ್ಯಗಳಿಂದ ಕೊಪ್ಪರಿಗೆ

ಕೈಗೆಟುಕಿದ ವಸ್ತುಗಳೆಲ್ಲ ನಿನ್ನ ಆಟಿಕೆಗಳು
ರೂಪಿಸಬಲ್ಲೆ ನೀ ಅವುಗಳಲ್ಲೆ ಸುಂದರ ಆಟ
ನನ್ನವುಗಳೇನಿದ್ದರೂ ನಿಲುಕದ ನಕ್ಷತ್ರಗಳು
ಹಿಡಿಯಲವನು ವ್ಯಯಿಸುವೆ ನನ್ನೆಲ್ಲ ಸಮಯ, ಸಾಮರ್ಥ್ಯ

ತೀರದಾಸೆಗಳ ಸಾಗರ ದಾಟಲು
ಮುರುಕು ದೋಣಿಯಲ್ಲಿ ನನ್ನ ಹೋರಾಟ
ಗೆಲುವೆಂಬ ಸೋಲಿನ ಸುಳಿಯಲ್ಲಿ, ಮರೆತಿದ್ದೇನೆ;
ಮಗುವೇ, ಈ ನನ್ನ ಜೀವನವೂ ಒಂದು ಆಟ!

(ಮೂಲ: ರವೀಂದ್ರನಾಥ ಟಾಗೋರ್, Playthings)

Child, how happy you are sitting in the dust, playing with a broken twig all the morning.
I smile at your play with that little bit of a broken twig.
I am busy with my accounts, adding up figures by the hour.
Perhaps you glance at me and think, "What a stupid game to spoil your morning with!"
Child, I have forgotten the art of being absorbed in sticks and mud-pies.
I seek out costly playthings, and gather lumps of gold and silver.
With whatever you find you create your glad games, I spend both my time and my strength over things I never can obtain.
In my frail canoe I struggle to cross the sea of desire, and forget that I too am playing a game.

Tuesday, March 17, 2009

ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಪೂರ್ಣ ಹೆಸರು: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಜನನ: ಮಾರ್ಚ್ ೧೭, ೧೮೮೭
ಮರಣ: ಅಕ್ಟೋಬರ್ ೭, ೧೯೭೫
ತಂದೆ: ವೆಂಕಟರಮಣಯ್ಯ
ತಾಯಿ: ಅಲಮೇಲಮ್ಮ
ತಮ್ಮಂದಿರು: ಡಿ.ವಿ.ಶೇಷಗಿರಿರಾವ್, ಡಿ.ವಿ.ರಾಮರಾವ್
ಪತ್ನಿ: ಭಾಗೀರಥಮ್ಮ
ಮಕ್ಕಳು: ಡಾಬಿ.ಜಿ.ಎಲ್.ಸ್ವಾಮಿ, ಇಂದಿರ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ
ವೃತ್ತಿ: ಸಾಹಿತಿ, ಪತ್ರಕರ್ತ, ಸಮಾಜ ಸೇವಕ
ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (೧೯೬೧)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವನಧರ್ಮಯೋಗ - ೧೯೬೭)
ಪದ್ಮಭೂಷಣ (೧೯೭೪)

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು. ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ. ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ! ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು. ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು. ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು. ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು. ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ.

ಪ್ರತ್ಯೇಕ ಸುಖವಲ್ಪವದು, ಗಳಿಕೆ ತೋರ್ಕೆಯದು
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ
ವ್ಯಕ್ತಿಜೀವನ ಸೊಂಪು ಸಮಷ್ಟಿಜೀವನದಿ
ಒಟ್ಟುಬಾಳ್ವುದ ಕಲಿಯೋ - ಮಂಕುತಿಮ್ಮ

ಎಂದಿರುವ ಡಿವಿಜಿಯವರನ್ನೂ, ಬಂಧನರಹಿತ ಅಲಕ್ ನಿರಂಜನ್, ಬೈರಾಗಿ ಬದುಕು ಸೆಳೆದದ್ದುಂಟು. ಜೀವನದ ಎರಡನೇ ಹಂತ ಎನ್ನಬಹುದಾದ ಇಲ್ಲಿ, ಮೋಕ್ಷಗುಂಡಂ ವೆಂಕಟೇಶಯ್ಯನವರು ಕೊಟ್ಟ Trial and Death of Socrates ಪುಸ್ತಕ ಹಾಗೂ ಸಾಕ್ರಟೀಸನ ಸಂವಾದಗಳು ಮರಳಿ ಲೋಕಜೀವನಕ್ಕೆ ಕರೆತಂದವು. ಸಮಾಜ, ಸಂಪ್ರದಾಯಗಳು ಗೌರವಾರ್ಹ ಎಂಬ ನಂಬಿಕೆ ಮೂಡಿತು. ಕನ್ನಡ ನಾಡಿಗೆ, ಸಾಹಿತ್ಯಕ್ಕೆ ಅವರ ಸೇವೆಯನ್ನು ಪಡೆಯುವ ಭಾಗ್ಯವಿರುವಾಗ ವಿಧಿಯ ವಕ್ರದೃಷ್ಟಿ ಗೆಲ್ಲಲು ಸಾಧ್ಯವೇ ಇರಲಿಲ್ಲ.

ಸುಮಾರು ೧೭ ನೆಯ ವಯಸ್ಸಿಗೆ ಭಾಗೀರಥಮ್ಮನವರೊಂದಿಗೆ ವಿವಾಹವಾಯಿತು. ಸಂಪಾದನೆ ಮಾಡುವುದನಿವಾರ್ಯವಾಯಿತು. ಲಾಯರ್ ಆಗಬೇಕೆಂಬ ತಂದೆಯ ಆಸೆ ಡಿವಿಜಿಯವರಿಗೆ ಸರಿಬರಲಿಲ್ಲ (A good lawyer is a bad neighbor ಎಂಬ ಮಾತು ಅವರ ಧೃಢನಿರ್ಧಾರಕ್ಕೆ ಕಾರಣವಂತೆ). ಶೀಟ್ಮೆಟಲ್ ಕೈಗಾರಿಕೆ ತರಬೇತಿಗೆ ತಂದೆಯಿಂದ ನಕಾರ (ಕ್ಷೌರದ ಬಟ್ಟಲು ತಯಾರಿಸುವ ಕೆಲಸವೆಂದು). ಕಂಪೆನಿಯ ಏಜೆಂಟನಾಗುವ ಯೋಚನೆಗೆ ಗೆಳೆಯರಡ್ಡಿ. ಕೆ.ಜಿ.ಎಫ್ ನ ಸೋಡಾಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಅದೃಷ್ಟವನ್ನರಸಿ ಬೆಂಗಳೂರಿಗೆ ಬಂದರು. ಜಟಕಾಗಾಡಿಗೆ ಬಣ್ಣ ಬಳಿಯುವ ಸಣ್ಣ ಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಬೆಂಗಳೂರಿಗೆ ಬಂದಿದ್ದ ಸ್ವಾಮಿ ಅಭೇದಾನಂದರ ಗೌರವಾರ್ಥ ಬರೆದಿದ್ದ ಇಂಗ್ಲಿಷ್ ಪದ್ಯವನ್ನು ಅಚ್ಚುಮಾಡಿಸಲು ಪರಿಚಯವಾದದ್ದು ನವರತ್ನ ಪ್ರೆಸ್. ಪತ್ರಿಕಾಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದ ದಿವಾನ್ ವಿ.ಪಿ.ಮಾಧವರಾಯರ ದರ್ಬಾರಿನ ವಿರುಧ್ದ ಲೇಖನವನ್ನು ಅದೇ ಪ್ರೆಸ್ ನಡೆಸುತ್ತಿದ್ದ ’ಸೂರ್ಯೋದಯ ಪ್ರಕಾಶಿಕಾ’ ಎಂಬ ಪತ್ರಿಕೆಗೆ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ. ಜೀವನದ ಕೊನೆಯವರೆಗೂ ನಡೆಸಿದ ವೃತ್ತಿ.

ಪತ್ರಿಕೋದ್ಯಮವೆಂದೂ ಡಿವಿಜಿ ಯವರಿಗೆ ಹೂವಿನ ಹಾದಿಯಾಗಲಿಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳು. ನಾವು ಗಮನಿಸಬೇಕಾದ್ದೆಂದರೆ, ಅದು ಸ್ವಾತಂತ್ರ್ಯ ಪೂರ್ವಕಾಲ. ಇಂದಿನಂತಿರಲಿಲ್ಲ ಅಂದಿನ ಪತ್ರಿಕಾ ಸ್ವಾತಂತ್ರ್ಯ. ಅದರಲ್ಲೂ ನಿಷ್ಪಕ್ಷಪಾತ, ನಿಕೃಷ್ಟತೆ, ಸರಳತೆ ಹಾಗೂ ಸಂಕ್ಷಿಪ್ತತೆಯನ್ನು ಆಧಾರವಾಗಿರಿಸಿಕೊಂಡು ಡಿವಿಜಿಯವರು ಬರೆಯುತ್ತಿದ್ದರು. ಯಾವುದೇ ಸಮಸ್ಯೆಯಾಗಲಿ ಪಕ್ಷಪಾತದ ದೃಷ್ಟಿಯನ್ನು ಬಿಟ್ಟು, ಉದ್ವೇಗರಹಿತರಾಗಿ, ಅದರ ಎಲ್ಲ ಮಜಲುಗಳನ್ನು ಪರಿಶೀಲಿಸುವುದು, ದೇಶದ ಹಿತದೃಷ್ಟಿಯಿಂದ ಅದನ್ನು ಪರಾಮರ್ಶಿಸುವುದು - ಈ ತೆರನಾದ ವಿಮರ್ಶೆ. ಅವರ ಟಿಪ್ಪಣಿಗಳಂತೂ ವಿಷಯಗಳ ಅಧ್ಯಯನ ಹಾಗೂ ಅವುಗಳ ಸಮತೂಕದ ವಿಮರ್ಶೆಗೆ ಮಾದರಿ (ಇಂತಹುದೊಂದು ಲೇಖನ ಇತ್ತೀಚೆಗೆ ಅಡಿಗರ ’ಸಾಕ್ಷಿ’ ಯಲ್ಲಿ ದೊರಕಿತು. ಅತಿವಾಸ್ತವಿಕತೆ - Surrealism ಕುರಿತು. ಸವಿಸ್ತಾರವಾಗಿ, ಸಾಹಿತ್ಯಿಕ ಭಾವ, ಕಾಲಾಂತರದಲ್ಲಿ ಅದರ ಬದಲಾವಣೆ ಕುರಿತಾದ ಉತ್ತಮ ವಿವರಣೆಯಿದೆ. Surrealist ಗಳ ಮನೋಭಾವದ ಆಳವಾದ ಚಿಂತನೆಯಿದೆ, ಅನ್ವೇಷಣೆಗಳ ವಿವರಗಳಿವೆ). ಡಿವಿಜಿಯವರು ತಪ್ಪನ್ನು ಕಂಡರೆ ಖಂಡಿಸದೆ ಬಿಡುತ್ತಿರಲಿಲ್ಲ. ವಿಶ್ವೇಶ್ವರಯ್ಯನವರಿಂದ ’ವಿಷಕಂಟಕಪ್ರಾಯನಾದ ವಿಮರ್ಶಕ’ ಎಂದು ಬಿರುದಾಂಕಿತರಾಗಿದ್ದರು. ಅವರು ನಡೆಸುತ್ತಿದ್ದ ’ಕರ್ನಾಟಕ’ ಪತ್ರಿಕೆ ’ಕಾರ್ಕೋಟಕ’ ಎಂದು ಮೂದಲಿಕೆಗೊಳಗಾಗಿತ್ತು. ’ಪತ್ರಕರ್ತ ಯಾವ ಬಾಹ್ಯ ನಿರ್ಬಂಧಗಳಿಗೂ ಒಳಗಾಗುವಂತಾಗಬಾರದು. ಆದರೆ ತಾನೇ ಹಾಕಿಕೊಂಡ ಶಿಸ್ತು ಸಂಯಮಗಳನ್ನು ಪಾಲಿಸಬೇಕು. ಈ ಆತ್ಮಾನುಶಾಸನ ಅತ್ಯಗತ್ಯ’ ಇದು ಡಿವಿಜಿಯವರ ಖಚಿತ ಅಭಿಪ್ರಾಯ. ಪತ್ರಕರ್ತರ ಸಂಘ ಹುಟ್ಟುಹಾಕಿ, ಭದ್ರಬುನಾದಿ ಹಾಕಿದವರಲ್ಲಿ ಡಿವಿಜಿ ಪ್ರಮುಖರು. ಈ ವೃತ್ತಿಯ ಕುರಿತಾದ ಅವರ ಅಧ್ಯಯನದ ಸಾಕ್ಷಿ ಅವರ ’ವೃತ್ತಪತ್ರಿಕೆಗಳು’ ಹೊತ್ತಿಗೆ. ವಸ್ತುನಿಷ್ಟ, ನಿಷ್ಪಕ್ಷಪಾತ ವಿಮರ್ಶೆಗಳು ಕಾಣೆಯಾಗಿ, ನೈತಿಕ ಅಧ:ಪತನದತ್ತ ಸಾಗುತ್ತಿರುವ ಈ ಸಮಯದಲ್ಲಿ ಪತ್ರಕರ್ತ ಡಿವಿಜಿಯವರು ಆದರ್ಶಪ್ರಾಯರಾಗುತ್ತಾರೆ.

ಡಿವಿಜಿ ಯವರದು ಸೌಮ್ಯಪಂಥ ಮನೋಭಾವ. ದಾದಾಭಾಯಿ ನವರೋಜಿ, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಯವರಿಂದ ಪ್ರಭಾವಿತರಾಗಿದ್ದರು. ೧೯೧೧ ರಲ್ಲಿ ೫ ನೆ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಡಿವಿಜಿ ಯವರು ಒಂದು ನೆನಪಿನ ಪುಸ್ತಕ ಪ್ರಕಟಿಸಿದರು - ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ (ನಮ್ಮ ರಾಷ್ಟ್ರಗೀತೆಗೂ ಅಂಟಿಕೊಂಡಿರುವ ವಿವಾದನೀತನೇ ಅಲ್ಲವೇ). ಬ್ರಿಟಿಶ್ ಪ್ರಭುತ್ವ ಭಾರತಕ್ಕೆ ದೇವರು ದಯಪಾಲಿಸಿದ ವರ ಎಂಬ ಭಾವನೆ ಆ ಪುಸ್ತಕ ಸೂಚಿಸುತ್ತದೆಯೆಂದು ಹೇಳಲಾಗಿದೆ. ಇಲ್ಲಿ ಡಿವಿಜಿ ಯವರ ಭಾವನೆಗಳು ಪ್ರಶ್ನಾತೀತವಲ್ಲದಿದ್ದರೂ, ಇದೇ ಭಾವ ಕೊನೆಯವರೆಗೂ ಇತ್ತೆಂದು ಹೇಳಲಾಗುವುದಿಲ್ಲ. ಸಂಸ್ಥಾನಗಳ ಜನತೆ ರಾಷ್ಟ್ರೀಯ ಭಾವನೆಗಳಿಗೆ ಸ್ಪಂದಿಸಬೇಕು, ಇದಕ್ಕೆ ಜನಜಾಗೃತಿಯ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದರು ಡಿವಿಜಿ. ಸಾತಂತ್ಯ್ರಾ ಪೂರ್ವದಲ್ಲೇ (೧೯೧೬ ರ ಸುಮಾರು) The problem of Indian Native states, The states and their people in the Indian Constitution ಎಂಬ ಅವರ ಪುಸ್ತಕಗಳು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಭಾರತ ಸ್ವತಂತ್ರವಾದಾಗ ರಚಿಸಿದ ಪದ್ಯಮಾಲಿಕೆ ’ಸ್ವತಂತ್ರಭಾರತ ಅಭಿನಂದನಸ್ತವ’ ಅವರ ರಾಷ್ಟ್ರಗೌರವಕ್ಕೆ ಸಾಕ್ಷಿ. ’ವಿಶ್ವದಲ್ಲಿ ಭಾರತ ನಿರ್ವಹಿಸಬೇಕಾದ ವಿಶೇಷ ಕರ್ತವ್ಯವಿದೆ. ಇತರ ರಾಷ್ಟ್ರಗಳಿಂದ ಭಿನ್ನವಾದ ಕರ್ತವ್ಯ. ಲೋಕ ಬಯಸುತ್ತಿರುವ ಬೆಳಕು ಇಲ್ಲಿಂದ ಚೆಲ್ಲಬೇಕು. ಅದಕ್ಕೆ ಭಾರತ ಸಜ್ಜುಗೊಳ್ಳಬೇಕು. ತನ್ನೊಳಗಿನ ಭಿನ್ನತೆ, ದಾರಿದ್ರ್ಯ ಅಜ್ಞಾನಗಳನ್ನು ತೊಡೆದುಹಾಕಿ ಬಲಗೊಂಡು ಧೀಮಂತವಾಗಿ ನಿಲ್ಲಬೇಕು. ಅಂಥ ಭಾರತವನ್ನು ಕಟ್ಟುವ ಶಕ್ತಿ, ನಡೆಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಬರಬೇಕು, ನಮ್ಮ ಜನರಿಗೆ ಮೈಗೂಡಬೇಕು’ ಎಂದು ಆಶಿಸಿದರು. ’ರಾಜ್ಯಶಕ್ತಿ ಒಂದು ಕತ್ತಿ, ತಿಳುವಳಿಕೆಯುಳ್ಳವರ ಕೈಯಲ್ಲಿ ಅದು ಉಪಕಾರಿ, ಇಲ್ಲದವರ ಕೈಯಲ್ಲಿ ಅಪಕಾರಿ’ ಎಂದು ಎಚ್ಚರಿಸಿದರು. ’ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ’ ಎಂದವರು ಶತಮಾನದ ಮುಂಚೆಯೇ ಹೇಳಿದ್ದರೂ, ನಾವಿನ್ನೂ ಮೊದಲನೇ ಶತ್ರುವನ್ನೇ ನಿರ್ಮೂಲನ ಮಾಡಿಲ್ಲವೆಂಬುದು ಅಷ್ಟೇ ಸತ್ಯ. ಈ ವ್ಯಾಪಕ ಅಧ್ಯಯನಗಳ ಚಿಂತನೆಯೇ ಅವರ ರಾಜ್ಯಶಾಸ್ತ್ರ ಗ್ರಂಥಗಳಾದ - ರಾಜ್ಯಶಾಸ್ತ್ರ, ರಾಜ್ಯಾಂಗ ತತ್ವಗಳು, ರಾಜಕುಟುಂಬ ಇತ್ಯಾದಿ. ಡಿವಿಜಿಯವರದು ಪಕ್ಷಾತೀತ ರಾಜಕಾರಣ. ಜನಹಿತ, ರಾಷ್ಟ್ರಹಿತ ಮುಖ್ಯ, ಪಕ್ಷಹಿತ ಮುಖ್ಯವಲ್ಲವೆಂಬ ಧೋರಣೆ. ಇಂದಿಗೂ ಇದೆಷ್ಟು ಪ್ರಸ್ತುತವಲ್ಲವೇ.

ಡಿವಿಜಿಯವರ ಮತ್ತೊಂದು ಕ್ಷೇತ್ರ ಸಮಾಜ ಸೇವೆ. ಅಮೆಚ್ಯೂರ್ ಡೆಮೊಕ್ರಾಟಿಕ್ ಅಸೋಸಿಯೇಷನ್, ಮೈಸೂರು ಸಾರ್ವಜನಿಕ ಸಭೆ, ಬೆಂಗಳೂರು ಸಿಟಿಜನ್ಸ್ ಕ್ಲಬ್, ದೇಶಾಭ್ಯುದಯ ಸಂಘ ಎಲ್ಲದರಲ್ಲೂ ಡಿವಿಜಿ ಇದ್ದರು. ೧೯೨೦ ರಲ್ಲೇ ಗೋಖಲೆ ಬಳಗ ರೂಪುಗೊಂಡಿದ್ದರೂ, ೧೯೪೫, ಫೆಬ್ರವರಿ ೧೮ ರಂದು ಅಧಿಕೃತವಾಗಿ ಸ್ಥಾಪನೆಯಾಯಿತು. ತಮ್ಮ ಕೊನೆ ಉಸಿರಿರುವವರೆಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶ್ವೇಶ್ವರಯ್ಯನವರಿಗೆ, ಆಡಳಿತ ವ್ಯವಸ್ಥೆಯ ಒಳಗೆ ಸೇರಿಕೊಳ್ಳದೆಯೇ ಹೊರಗಿನಿಂದಲೇ ಸಹಾಯ ಮಾಡುತ್ತಿದ್ದರು. ಮಿರ್ಜಾ ದಿವಾನಗಿರಿಯಲ್ಲೂ ಇದು ಮುಂದುವರೆಯಿತು. ಆದರೆ ಅವರಿಂದ ಯಾವ ಸಹಾಯವನ್ನೂ ಸ್ವೀಕರಿಸುತ್ತಿರಲಿಲ್ಲ. ಡಿವಿಜಿ ಯವರ ಸಾಂಸಾರಿಕ ಸ್ಥಿತಿ ಮುಗ್ಗಟ್ಟಿನಲ್ಲೇ ಇತ್ತು. ಎಂದೂ ಅವರು ಸಿರಿವಂತಿಕೆಯಿರಲಿ, ಆರ್ಥಿಕವಾಗಿ ನಿಶ್ಚಿಂತೆಯನ್ನೂ ಕಾಣಲಿಲ್ಲ. ಇಂತಹ ಸರಳ ಸಜ್ಜನಿಕೆ ಪ್ರಾಮಾಣಿಕತೆಯ ಜೀವನದಿಂದ ಮಾತ್ರವಲ್ಲವೇ ಅಂತಹ ಮೇರು ಕೃತಿಗಳು ಬರಲು ಸಾಧ್ಯ.

ಇನ್ನವರ ಸಾಹಿತ್ಯ ಕೃಷಿಯ ಬಗ್ಗೆ ಹೇಳದಿದ್ದಲ್ಲಿ ಲೇಖನ ಅಪೂರ್ಣವಾಗುತ್ತದೆ. ೧೯೪೫ ರಲ್ಲಿ ಪ್ರಕಟವಾದ ೯೪೫ ಚೌಪದಿಗಳ ಮಂಕುತಿಮ್ಮನಕಗ್ಗ ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧ. ನಂಬಿಕೆಯಿಂದ ಆರಂಭವಾಗಿ, ಶಂಕೆಯಿಂದ ಮುನ್ನಡೆಗೊಂಡು, ಜೀವನದ ಅನುಭವಗಳೊಂದಿಗೆ ಹೊಂದಿಕೊಂಡು, ಹೋಲಿಸಿಕೊಂಡು, ಸಂದೇಹಗಳನ್ನು ನಿವಾರಿಸಿ ಮತ್ತೆ ನಂಬಿಕೆಯೆಡೆಗೆ ಕರೆದೊಯ್ಯುವ ಉತ್ಕೃಷ್ಟ ತತ್ವ ಚಿಂತನೆ ಕಗ್ಗ. ಅಂತ:ಪುರ ಗೀತೆಗಳು ಒಂದು ಸಂಗೀತ ಕಾವ್ಯ. ಡಿವಿಜಿಯವರು ಪಿಟೀಲು ನಾರಾಯಣಸ್ವಾಮಿ ಭಾಗವತರು ಹಾಗೂ ಮೈಸೂರು ವಾಸುದೇವಾಚಾರ್ಯರಲ್ಲಿ ಕೆಲಕಾಲ ಸಂಗೀತಾಭ್ಯಾಸ ನಡೆಸಿದ್ದರು. ಅದರ ಜ್ಞಾನ ಅವರ ಈ ಕೃತಿಯಲ್ಲಿ ಕಾಣಸಿಗುತ್ತದೆ. ’ಮುಕುರ ಮುಗ್ಧೆ’ ಯಿಂದ ’ಲತಾಂಗಿ’ ವರೆಗೆ ಒಟ್ಟು ೫೨ ಶಿಲ್ಪಕನ್ನಿಕೆಯರು. ಪುಂವಿಡಂಬಿನಿ, ಕೃತಕಶೂಲಿ, ನಾಗವೈಣಿಕೆಯರಿಗೆ ಮಾತ್ರ ಶಂಕರಾಭರಣಮ್ ರಾಗ. ಮಿಕ್ಕೆಲ್ಲ ಸುಂದರಿಯರಿಗೂ ಪ್ರತ್ಯೇಕ ರಾಗಗಳು. ಚೆನ್ನಕೇಶವನಾದಿಯಾಗಿ, ನಾಂದಿಗೀತೆ, ಮಂಗಳಗೀತೆ, ಸೌಂದರ್ಯಗೀತೆ ಹೀಗೆ ಗೀತೆಗೊಂದು ರಾಗಸಂಯೋಜನೆಯಂತೆ, ಒಟ್ಟು ೫೫ ರಾಗಗಳ ಪ್ರಯೋಗ. ನಡುವೆ ಭಸ್ಮಮೋಹಿನಿಯೆಂಬ ಸಂಗೀತ ರೂಪಕವೂ ಇದೆ. ಹೇಗೆ ನಾಟಕವಾಗಿ ಅಭಿನಯಿಸಬೇಕೆಂಬುದಕ್ಕೆ, ನಾಂದಿಯಿಂದ ಮಂಗಳದವರೆಗೂ, ಹಿಮ್ಮೇಳದ ಜೊತೆಗೆ ಪಾತ್ರಧಾರಿಗಳ ಸಂವಾದಕ್ಕೂ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ, ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಿಯ ಕಲ್ಪನೆಯ ಕಲೆಗೆ, ಕಾವ್ಯದ ಅಲಂಕಾರ, ಸಂಗೀತದ ಅಭಿಷೇಕ ಈ ಕೃತಿ. ಕೇತಕೀವನ - ಒಂದು ವಿಶೇಷ ಕವನಸಂಗ್ರಹವೆನ್ನಬಹುದು. ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ’ನನಗೆ ಓದುವುದಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರು ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದುದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ ಗುರುತುಹಾಕುತ್ತಿದ್ದುದುಂಟು. ಅಂಥ ಚೀಟಿಗಳು ಈಗ ಪುಸ್ತಕವಾಗಿದೆ’. ಆದ್ದರಿಂದಲೇ ಇದರಲ್ಲಿ ವೈವಿಧ್ಯವಿದೆ. ೪ ಸಾಲಿನ ಬಿಎಂಶ್ರೀ ಕುರಿತಾದ ಕವನದಿಂದ ಮಾರುತಿ ಬಗೆಗಿನ ೨.೫ ಪುಟಗಳ ಕವನವೂ ಇದೆ. ಹಂಪೆ, ತಾಜಮಹಲಿನಿಂದ, ಈಜಿಪ್ಟಿನ ಸ್ಪಿಂಕ್ಸ್ ವರೆಗಿನ ಕವನಗಳೂ ಇವೆ. ಅಳು, ನಗು, ಪ್ರೀತಿ, ಪ್ರೇಮ, ಸಂದೇಹ ಎಲ್ಲ ಭಾವನೆಗಳಿವೆ. Keats, Tennyson, Robert browning ರ ಕವನಗಳ ಅನುವಾದಗಳೂ ಇವೆ. ಒಟ್ಟಿನಲ್ಲಿ ಡಿವಿಜಿ ಯವರ ಅರಿವಿನಾಳವಿಸ್ತಾರಗಳಿಲ್ಲಿವೆ. ಗೋಪಾಲಕೃಷ್ಣ ಗೋಖಲೆ, ಗೋಖಲೆ ಜೀವನ ಚರಿತ್ರೆಯಾದರೆ, ಈಶೋಪನಿಷತ್ತು ಕನ್ನಡ ಅರ್ಥಾನುವಾದ. ನಾಕಂಡಿರುವ ಇವು ಅವರ ಸಾಹಿತ್ಯ ಸಾಗರದ ಒಂದು ಹನಿ. ಡಿವಿಜಿಯವರ ಸಾಹಿತ್ಯ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಅದರಲ್ಲಿ ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ತತ್ವಚಿಂತನೆ, ಕವಿತೆಗಳು, ನಾಟಕಗಳು, ಅನುವಾದ ನಾಟಕಗಳು, ರಾಜಕೀಯ, ನಿಬಂಧಗಳು ಎಲ್ಲವೂ ಇವೆ. ವೈಜ್ಞಾನಿಕ - ಸಾಂಪ್ರದಾಯಿಕ ಚಿಂತನೆಗಳು, ಮೂಡಣ - ಪಡುವಣ ವಿಚಾರಗಳು, ಇತಿಹಾಸ - ವಾಸ್ತವಿಕತೆಗಳು ಇವೆಲ್ಲವುಗಳ ಹದವಾದ ಮಿಶ್ರಣ. ಎಲ್ಲ ಕೃತಿಗಳ ಸ್ಥೂಲ ಪರಿಚಯವನ್ನು ಕಸ್ತೂರಿಯವರು ಕೊಟ್ಟಿದ್ದಾರೆ, ಅದನ್ನೋದಿದ ಮೇಲೆ, ಅವರ ಪುಸ್ತಕಗಳನ್ನೋದುವ ಹಂಬಲ ಇಮ್ಮಡಿಯಾಗಿದೆ. ಅವರ ಜನ್ಮಶತಾಬ್ದಿಯ ಅಂಗವಾಗಿ, ಅವರೆಲ್ಲ ಕೃತಿಗಳನ್ನು ’ಡಿವಿಜಿ ಕೃತಿ ಶ್ರೇಣಿ’ ಎಂಬ ಹೆಸರಿನಲ್ಲಿ ೧೧ ಸಂಪುಟಗಳಾಗಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಬಿಡುಗಡೆ ಮಾಡಿವೆ ಎಂಬ ಮಾಹಿತಿ ದೊರಕಿತು.

ಪತ್ರಕರ್ತರಾಗಿ, ಸಾಹಿತಿಯಾಗಿ, ಸಮಾಜಸೇವಕರಾಗಿ ನಾಡಿಗೆ ಡಿವಿಜಿ ಯವರ ಸೇವೆ ಅಪಾರ. ಎಲ್ಲರೆನ್ನುವಂತೆ ನಾಡಿನ ನಭೋಮಂಡಲದಲ್ಲಿ ಬೆಳಗುವ ಧೃವತಾರೆ ಡಿವಿಜಿ.

(ಅವರ ಹುಟ್ಟುಹಬ್ಬಕ್ಕೆ ಒಂದು ಕೃತಜ್ಞತಾಪೂರ್ವಕ ಕಿರುಕಾಣಿಕೆ)