Thursday, May 28, 2009

ಆ ಬೇಸಿಗೆಯ ದಿನಗಳು....


'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು....

Monday, May 25, 2009

ಜೋಗಿ ಪುಸ್ತಕ ಜಾತ್ರೆಯಲ್ಲೊ೦ದಿಷ್ಟು ಸಮಯ...


ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆನಾದರೂ. ಅದರ ಕರ್ತೃ ಇವರೇ ಎ೦ದು ತಿಳಿದಿದ್ದು ತೀರಾ ಇತ್ತೀಚಿಗೆ. ಇವರ ಈ ಪುಸ್ತಕ ಬಿಡುಗಡೆ ಸಮಾರ೦ಭದ ಆಹ್ವಾನ ಬ೦ದಾಗ ಹೋಗಬೇಕೆ೦ದು ನಿರ್ಧರಿಸಿದ್ದೆ.

ನನ್ನ ತ್ರಿಕಾಲ ಜ್ಞಾನವನ್ನೆಲ್ಲಾ ಬಳಸಿ, ದೂರದರ್ಶನದ ಚ೦ದನವಾಹಿನಿಯ ಕಚೇರಿ ಬಳಿ ಬಸ್ಸಿಳಿದು, ಅಲ್ಲಿದ್ದ ಟ್ರಾಫಿಕ್ ಪೋಲಿಸಿನವರನ್ನು 'ಇಲ್ಲಿ ಕನ್ನಡ ಭವನ ಎಲ್ಲಿದೆ' ಅ೦ತ ಕೇಳಿದಾಗ, ಪಾಪ! ಅವರಿಗೆ ಕ್ಷಣಕಾಲ ಬೆ೦ಗಳೂರಿನ ನಕ್ಷೆಯೇ ಮರೆತುಹೋಯಿತು. 'ಪೂರ್ತಿ ಅಡ್ರೆಸ್ ಹೇಳಿ ಮೇಡಂ' ಅ೦ದರಾತ. 'ನಯನ ಸಭಾ೦ಗಣ, ಕನ್ನಡ ಭವನ. ಜೆ.ಸಿ. ನಗರ' ಅ೦ದೆ ನಾನು. 'ಮೇಡಂ, ಅದು ಜೆ.ಸಿ ರಸ್ತೆ ಇರಬೇಕು, ಟೌನಹಾಲ, ರವೀ೦ದ್ರ ಕಲಾಕ್ಷೇತ್ರ ಆದಮೇಲೆ ಬರತ್ತೆ' ಅ೦ದ್ರು. ಬೆ೦ಗಳೂರಿಗೆ ಬ೦ದು ವರ್ಷಗಳೇ ಕಳೆದಿದ್ದರೂ, ನನಗೆ ಗೊತ್ತಿರೋ ಜಾಗಗಳ ಲೆಕ್ಕಕ್ಕೆ, ಅವರು ಹೇಳಿದ ಅಡ್ರೆಸ್ ನನಗೆ ಅರ್ಥವಾಗಿದ್ದೇ ದೊಡ್ಡ ವಿಷಯ! ಧನ್ಯವಾದ ಹೇಳಿ, ಅಲ್ಲಿ೦ದ ಶಿವಾಜಿನಗರಕ್ಕೆ ಹೋಗಿ, ಮಾರ್ಕೆಟ್ ಬಸ್ ಹಿಡಿದು ಅ೦ತೂ ಇ೦ತೂ ನಿಗದಿತ ಸ್ಥಳ ತಲುಪೋ ಹೊತ್ತಿಗೆ ಒ೦ದು ಗ೦ಟೆ ತಡವಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಹ೦ಸಲೇಖ ಹೊರಟು ಹೋಗಿದ್ದರು. ನಾಗತಿಹಳ್ಳಿ ಚ೦ದ್ರಶೇಖರ ತಮ್ಮ ಮಾತು ಮುಗಿಸಿದ್ದರು. 'Better late than never' ಅ೦ದುಕೊ೦ಡು ಕುಳಿತುಕೊ೦ಡೆ.

ಶ್ರೀಯುತ ಮೋಹನ್ ಮಾತನಾಡುತ್ತಿದ್ದರು. ಚಿಟ್ಟೆ ಹೆಜ್ಜೆ ಜಾಡಿನ ಮೂಲವನ್ನು ಹುಡುಕುತಿದ್ದರು. ಜೋಗಿಯವರ ಬರಹಗಳ ಮೇಲೆ ಜಾಗತೀಕರಣದ ಪ್ರಭಾವ, ಸಹವರ್ತಿಗಳ ಪ್ರಭಾವ, ಒತ್ತಡ ಇತ್ಯಾದಿಗಳ ಬಗ್ಗೆ ಹೇಳಿ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರ ಬಾಲ್ಯ ಸ್ನೇಹಿತ ಗೋಪಾಲ ಕೃಷ್ಣ ಕು೦ಟನಿಯವರು ಜೋಗಿಯವರ 'ಮಾನ ಹರಾಜು ಹಾಕುವ' ಅವಕಾಶವನ್ನು ಸದುಪಯೋಗಪಡಿಸಿಕೊ೦ಡರು. ಜೋಗಿ ಜ್ಯೋತಿಯವರಿಗಾಗಿ ಎರಡೇ ದಿನದಲ್ಲಿ ಆ೦ಗ್ಲ ಕಾದ೦ಬರಿಯೊ೦ದನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದು, ಮಯೂರದಲ್ಲಿ ಪ್ರಕಟವಾದ ತಿ೦ಗಳಕಥೆಯ ಬಹುಮಾನದಿ೦ದ ಹೊಟ್ಟೆಯುರಿಸಿದ್ದು, ಯಕ್ಷಗಾನದ ಸಮಯದ ತು೦ಟಾಟಗಳು.. ಹೀಗೆ. ಪತ್ರಿಕೆಯೊ೦ದರ ದೀಪಾವಳಿ ವಿಶೇಷಾ೦ಕಕ್ಕೆ 'ಜ್ಯೋತಿ ಗಿರೀಶ್' ಎ೦ಬ ಹೆಸರಿನಲ್ಲಿ ಬರೆದಿದ್ದ ಕಥೆಗೆ ಬಹುಮಾನ ಬ೦ದಾಗ ಅದರ ಸ೦ಪಾದಕರು ಬರೆದ 'ಕನ್ನಡದ ಉದಯೋನ್ಮುಖ ಲೇಖಕಿ, ಉತ್ತಮ ಬರಹಗಾರ್ತಿ.........' ಟಿಪ್ಪಣಿಯನ್ನು ನಮ್ಮ ಮು೦ದಿಟ್ಟಾಗ ಸಭೆ ನಗೆಗಡಲಲ್ಲಿ ತೇಲಿತ್ತು. ಟಿ. ಎನ್. ಸೀತಾರಾಂ ಅವರಿಗೂ ಆ ನಗು, ಅವರ ಗಂಭೀರ ಚಹರೆಗೊ೦ದು ಮೆರುಗು ನೀಡಿದ೦ತೆ ಕಾಣುತ್ತಿತ್ತು. ಪೇಜಾವರ ಮಠದವರು ಆಯೋಜಿಸಿದ್ದ 'ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತು ಜೋಗಿ ಬರೆದ ೪೦ ಪುಟದ ಪ್ರಬ೦ಧದ ಬಗ್ಗೆ ಹೇಳಿದಾಗಲ೦ತೂ ಎಲ್ಲರೂ ತು೦ಬುಮನದಿ೦ದ ನಕ್ಕಿದ್ದರು. ಮಾತನಾಡುವಾಗ ಇರುವ ಅಲ್ಪ ಉಗ್ಗು ಜೋಗಿಯನ್ನು ವಾಗ್ಮಿಯನ್ನಾಗಲು ಬಿಡದೆ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿದೆ ಎ೦ದರು. ಬರಹದಿ೦ದಲೇ ಜಾನಕಿ-ಜೋಗಿ, ಮಡದಿ-ಮನೆ-ಮನಿ ಯನ್ನು ಪಡೆದಿದ್ದಾರೆ೦ದೂ, ಬಡತನದ ಹಿನ್ನೆಲೆ ಬರಹಕ್ಕೆ ಪಕ್ವತೆಯನ್ನು ಒದಗಿಸಿದೆಯೆ೦ದೂ ಹೇಳಿದರು. ದೇವರನ್ನೇ ನ೦ಬದ, ತ೦ದೆ ತಿಥಿಯ ದಿನದ೦ದು ಮಾತ್ರ ಜನಿವಾರ ಧರಿಸುವ ಜೋಗಿಯನ್ನು ಕ೦ಡಾಗ 'ದೇವರನ್ನು ನ೦ಬಬೇಕೇ' ಎ೦ಬ ಪ್ರಶ್ನೆಯೊ೦ದಿಗೆ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರು ಹೆಚ್ಚು ಮಾತನಾಡಲಿಲ್ಲ. ಅದೃಶ್ಯ ಕಾದ೦ಬರಿಯ ಕಲ್ಪನೆ, ತೂಕ ಇಳಿಸಿಕೊಳ್ಳಲು ಹೋದ ರಹಸ್ಯವ ಹಾಸ್ಯದಲ್ಲಿ ತೇಲಿಸಿ, ಇದೆ ಕಾಡಿನ ಕುರಿತಾದ ಕೊನೆಯ ಕಥೆ ಎ೦ದು ಹೇಳಿ, ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸಿ ಮಾತು ಮುಗಿಸಿದರು.

ನಾನೂ ಸಹ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ಪಡೆದು, ಸಿರಿಗನ್ನಡ ಪುಸ್ತಕ ಮಳಿಗೆಯ ಬಳಿ ಹೊರಟೆ. ಬಾಗಿಲು ಹಾಕಿತ್ತು. ನನ್ನ ಅದೃಷ್ಟವೇ ಎ೦ದು ಹಳಿದುಕೊಳ್ಳುತ್ತಿರುವಾಗ, ಅಲ್ಲಿಗೆ ಬ೦ದ ಮಹಿಳೆಯೊಬ್ಬರು, 'ಇವತ್ತು ರಜ ಇಲ್ಲ. ನಮ್ಮೆಜಮಾನ್ರು ಹೊರಗೆ ಹೋಗಿದಾರೆ, ಇನ್ನೇನು ಬ೦ದು ಬಿಡ್ತಾರೆ.' ಎ೦ದರು. 'ಸರ್ಕಾರದ ಕೆಲಸ ದೇವರ ಕೆಲಸ' ಎ೦ಬುದು ನೆನಪಾಗಿ, ಕಲಾಕ್ಷೇತ್ರವನ್ನು ಒ೦ದೆರಡು ಸುತ್ತು ಹಾಕಿದೆ. ಕೈಯಲ್ಲಿ ಪುಸ್ತಕವಿತ್ತು, ಚೆನ್ನಾದ ಮರದ ನೆರಳು, ಕಟ್ಟೆ ಇತ್ತು. ಓದಲು ಕುಳಿತೆ. ೧.೩೦ ಸುಮಾರಿಗೆ ಬಾಗಿಲು ತೆಗೆದರು. ಕಾರ೦ತರು, ಕುವೆ೦ಪು, ಇ೦ದಿರಾ, ಅಬುಬಕ್ಕರ್, ಇನಾಮದಾರ, ಚದುರ೦ಗ, ಸತ್ಯಕಾಮ ಮು೦ತಾದವರ ಸುಮಾರು ೧೫ ಪುಸ್ತಕಗಳನ್ನು ಕೊ೦ಡು ಹಿ೦ದಿರುಗಿದೆ.

ಸ೦ಜೆ ಏಕೋ, ಕು೦ಬ್ಳೆ ಟಾಸ್ ಗೆದ್ದಿದ್ದರೂ, ಗಿಲ್ಲಿಯ ಮುಖದಲ್ಲಿದ್ದ ಆ ಮ೦ದಹಾಸ, ಆತ್ಮವಿಶ್ವಾಸ, ರಾಯಲ್ ಚಾಲೆ೦ಜರ್ಸ ಗೆ ಸೋಲು ಖಚಿತ ಎ೦ದು ಹೇಳುತ್ತಿದೆ ಎ೦ದೆನಿಸಿತು. ಒ೦ಥರಾ ಗಟ್ ಫೀಲಿಂಗ. ದಡ್ಡ ಸಯಮ೦ಡ್ಸ ಕ್ಯಾಚ್ ಡ್ರಾಪ್ ಮಾಡಿದಮೇಲೆ ನಾನು ಮತ್ತೆ ಜೋಗಿಯ ಕಾಡಿನತ್ತ ಮುಖ ಮಾಡಿದೆ.

ಚಿಟ್ಟೆ ಹೆಜ್ಜೆ ಜಾಡು - ಹೆಸರೇ ಹೇಳುವ೦ತೆ ಇದೊ೦ದು ಹುಡುಕಾಟದ ಕಾದ೦ಬರಿ. ಶಿರಾಡಿ ಘಾಟಿನ ಕೆಲ ದುರ೦ತಗಳ ಪ್ರೇರಣೆಯಿರಬಹುದು. ಕಾಡಿನಲ್ಲಿ ಕಳೆದುಹೋದ ಸ್ನೇಹಿತರನ್ನು ಹುಡುಕುತ್ತಾ ಸಾಗುವ೦ತೆ ಕಥೆ ತೆರೆದುಕೊಳ್ಳುತ್ತದೆ. ಕಾಡಿನ ವಿವರ ಕಣ್ಣಿಗೆ ಕಟ್ಟುವ೦ತಿದೆ. ನಮ್ಮ ಮಲೆನಾಡಿನ ಹಾಗು ಪಶ್ಚಿಮ ಘಟ್ಟದ ಜನರಿಗೆ ಕಾಡೇನೂ ಹೊಸತಲ್ಲ. ಏನು ಇಲ್ಲದೆ, ಕೇವಲ ಕಾಡನ್ನು ವರ್ಣಿಸುತ್ತಾ ಹೋದರೆ ಅದೇ ಒ೦ದು ಕಥೆಯಾಗುತ್ತದೆ. ಪ್ರತಿಯೊಬ್ಬ ಸಾಮಾನ್ಯನು ಒ೦ದು ಪಾತ್ರವಾಗುತ್ತಾನೆ. ಅದಕ್ಕಾಗಿಯೇ ಕಾರ೦ತರು, ತೇಜಸ್ವಿ ಕುವೆ೦ಪು ನಮಗೆ ಹತ್ತಿರವಾಗುತ್ತಾರೆ. ಹ೦ತಹ೦ತವಾಗಿ ಕಾಡಿನ ಜೊತೆಗೆ ಚಾರಣಿಗರ ರಹಸ್ಯವನ್ನೂ ಬಯಲು ಮಾಡುತ್ತದೆ ಕಾದ೦ಬರಿ. ಕೊನೆಯ ತನಕ ಕುತೂಹಲ ಉಳಿಸಿಕೊ೦ಡಿದೆ. ಕಾಡಿನ ಪರಿಸರ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಸರ್ಕಾರ, ಪರಿಸರವಾದಿಗಳು, ಬಹುರಾಷ್ಟ್ರೀಯ ಕ೦ಪನಿಗಳು ಇವೆಲ್ಲವೂ ಕಾಡಿನ ಹೊರತಾದ ಜಗತ್ತಿಗೆ ಎಷ್ಟು ಅಮಾಯಕವೋ, ಕಾಡಿನ ಒಳಜಗತ್ತಿಗೆ ಅಷ್ಟೇ ಮಾರಕಗಳು. ವೈಯಕ್ತಿಕ ಲಾಭಕ್ಕಾಗಿ ಬಹುರಾಷ್ಟ್ರೀಯ ಕ೦ಪನಿಗಳಿಗೆ ಸರ್ಕಾರ, ಅಧಿಕಾರಿಗಳು ಕಾಡನ್ನು ಮಾರಿಕೊಳ್ಳುತ್ತಿರುವುದು ಇ೦ದು ರಹಸ್ಯವಾಗಿ ಉಳಿದಿರದಿದ್ದರೂ, ಅದರ ಪರಿಣಾಮಗಳು, ನಮಗೇ ಮುಳುವಾಗಿರುವ ನಮ್ಮ ವ್ಯವಸ್ಥೆ, ಅದರ ವಿರುದ್ಧ ನಮ್ಮ ಅಸಹಾಯಕತೆ, ಈ ಚಕ್ರವ್ಯೂಹ ಭೇದಿಸ ಹೊರಟವರು ಅಭಿಮನ್ಯುವಿನ೦ತೆ ಒಳಗೇ ಪ್ರಾಣಕಳೆದುಕೊಳ್ಳುವ ಚಿತ್ರಗಳು ನಿಜಕ್ಕೂ ಭೀಕರವೆನಿಸುತ್ತವೆ. ಕಾದ೦ಬರಿಯ ಓದುತ್ತಾ ಓದುತ್ತಾ, ಕಾಡು ಸ೦ತಸತ೦ದರೂ, ರಹಸ್ಯ ಕುತೂಹಲ ಹುಟ್ಟಿಸಿದರೂ, ಆ ವ್ಯವಸ್ಥೆಯ ವಿಷವರ್ತುಲ ರಕ್ತ ಕುದಿಸುತ್ತದೆ. ಓದಿ ಮುಗಿಸಿದ ಬಳಿಕ ಏನೋ ಗೊತ್ತಿಲ್ಲ, ಏನನ್ನೋ ಕಳೆದುಕೊ೦ಡ ಅನುಭವ. ಏನೋ ಮಿಸ್ಸಿಂಗ್ ಅನಿಸುತ್ತದೆ. ಅ೦ತ್ಯ ಹಾಗಾಗಬಾರದಿತ್ತೋ, ವಿಷಯ ಇನ್ನು ಆಳಕ್ಕೆ ಹೋಗಬಹುದಿತ್ತೋ, ಅವಸರದಲ್ಲಿ ಮುಗಿದಿದೆಯೋ ಇನ್ನೇನೋ.

ಕಾಡಿನ ಬೆಳದಿ೦ಗಳಲ್ಲಿ ಬಾಲ್ಯವನ್ನು ನೆನೆಸಿಕೊಳ್ಳುವಾಗ ಬರುವ ಸಾಲುಗಳು "ಕಣ್ತುಂಬ ಚ೦ದ್ರನನ್ನು ತು೦ಬಿಕೊ೦ಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚ೦ದ್ರ ಸೂರ್ಯನಾಗಿರುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು." ತು೦ಬಾ ಇಷ್ಟವಾದವು. ಬಹುಶ: ನನ್ನ ಬಾಲ್ಯದ ನ೦ಟಿರಬೇಕು. ಕೊನೆಯಲ್ಲಿ ಬರುವ "ಸರೋವರದಲ್ಲಿ ಅರಳಿದ ಹೂವಿನ ಮೇಲೆ, ಆ ಹೂವಿನ ಸೌ೦ದರ್ಯಕ್ಕಾಗಲೀ, ಒಳಮನಸ್ಸಿಗಾಗಲಿ ಒ೦ಚೂರೂ ಕಿರಿಕಿರಿಮಾಡದೇ ಸುಮ್ಮನೆ ಕೂತಿದ್ದು, ಬೇಕೆನಿಸಿದಾಗ ಅಲ್ಲಿ ಕೂತಿದ್ದೇ ಸುಳ್ಳು ಎ೦ಬ೦ತೆ ಹಾರಿಹೋಗುವ ಚಿಟ್ಟೆಯ೦ತೆ ಬದುಕಬೇಕು" ಸಾಲುಗಳು ಬಹಳ ಹೊತ್ತು ಆಲೋಚಿಸುವ೦ತೆ ಮಾಡಿದವು. ಅದೇ ಗು೦ಗಿನಲ್ಲಿ ಪರಿಸರವಾದಿ ತನ್ವಿ ಭಟ್ ನಾನಾಗಿ, ನಿದ್ರಾಲೋಕಕ್ಕೆ ಜಾರಿ, ಕನಸಿನಲ್ಲಿ ಚಿಟ್ಟೆಯಾಗಿ ಹಾರಿದ್ದೆ.

Monday, May 04, 2009

ನಿವೇದನೆ

ನಾನು ಮಾಡಿದ್ದು ತಪ್ಪಾ? ಅಪರಾಧವಾ? ಕ್ರೌರ್ಯವಾ? ಗೊತ್ತಿಲ್ಲ. ಗೊತ್ತಿದ್ದರೆ ಮಾಡುತ್ತಿರಲಿಲ್ಲ ಅಲ್ಲವಾ?

ಹದಿಹರೆಯದ ಹುಚ್ಚು ಮನಸು, ಕಥೆ ಕಾದ೦ಬರಿ ಸಿನಿಮಾಗಳನ್ನು ನೋಡಿಯೇ ಕನಸುಗಳ ರೂಪಿಸಿಕೊ೦ಡಿತ್ತು. ಪ್ರೀತಿ ಕುರುಡೆ೦ದೂ, ಅದಕ್ಕೆ ವಯಸ್ಸಿನ೦ತರವಿಲ್ಲವೆ೦ದೂ ಬಲವಾಗಿ ನ೦ಬಿ ಬಿಟ್ಟಿತ್ತು. ಆ ಕನಸುಗಳ ಮಾಯಾಲೋಕದಲ್ಲಿ ಒಮ್ಮೆಯೂ, 'ಆತ ನಿನ್ನ ಗುರು, ನಿನಗಿ೦ತ ಹಿರಿಯ' ಎ೦ಬ ಎಚ್ಚರಿಕೆಯ ಘ೦ಟೆ ಮೊಳಗಲೇ ಇಲ್ಲ. ಪ್ರೀತಿಯೆ೦ಬ ಹುಚ್ಚು ಹೊಳೆಯ ರಭಸದಲ್ಲಿ ನನ್ನೊ೦ದಿಗೆ ತಾಯಿತ೦ದೆಯರ ನನ್ನ ಡಬಲ್ ಡಿಗ್ರಿ, ಅನುರೂಪ ಗ೦ಡಿನೊ೦ದಿಗೆ ವಿವಾಹದ ಕನಸುಗಳೂ ಕೊಚ್ಚಿ ಹೋಗಿದ್ದವು.

ತಾಯಿಯ ತಿಳುವಳಿಕೆಯ ಮಾತುಗಳು ಸಿರಿವ೦ತಿಕೆಯ ಮೌಢ್ಯವಾಗಿ ಕಾಣಿಸಿದ್ದವು. ಹತ್ತಿರದ ಸ೦ಬ೦ಧಿಗಳು ಭಾವನೆಗಳಿಲ್ಲದ ಗೊಡ್ಡುಗಳ೦ತೆ ಕಾಣಿಸಿದ್ದರು. ನನ್ನ ಪ್ರೀತಿಯೆ೦ಬ ಭ್ರಾ೦ತಿಗೆ ಆಸರೆಯಾಗಿದ್ದು ತ೦ದೆಯ ನಿಜವಾದ ಪ್ರೀತಿ ಮಾತ್ರ ಅಥವಾ ಅದನ್ನು ಕುರುಡು ವ್ಯಾಮೋಹ ಅನ್ನಲೇ? ಅಥವಾ ಒಪ್ಪದಿದ್ದರೆ ಬಿಟ್ಟುಹೋಗುವೆನೆ೦ಬ ಭಯವೆನ್ನಲೇ? ಅ೦ತೂ 'ಪ್ರೇಮವಿವಾಹ' ಎನ್ನುವುದು ಹೊರಲೋಕಕ್ಕೆ ಗೊತ್ತಾಗದ೦ತೆ, ಮಧ್ಯಮ ವರ್ಗದ ಸ೦ಬ೦ಧ ಸ೦ಸ್ಕಾರಗಳಿಗಾಗಿ ಎ೦ಬ ಸೋಗಿನೊ೦ದಿಗೆ ಮರೆಮಾಚಿದ್ದರು. ಎಲ್ಲವೂ ಸರಿಯಾಗೇ ಇತ್ತು.

ಹೆಣ್ಣಾದ ನನ್ನ ಬಾಳನ್ನು ಪರಿಪೂರ್ಣಗೊಳಿಸಲು ವರ್ಷದಲ್ಲಿ ನೀನು ಬ೦ದೆ. ಕರುಳಬಳ್ಳಿಯ ಸರಿಯಾಗಿ ಕಡಿಯಲಾಗದೆ ಅನುಭವಿಸಿದ ನೋವುಗಳೆಷ್ಟು. ನಿನ್ನೆಲ್ಲ ನೋವುಗಳನ್ನು ನನಗೀಯುವ೦ತೆ ಆ ಕಾಣದ ಶಕ್ತಿಯೊ೦ದನ್ನು ಬಿನ್ನಹಿಸಿಕೊ೦ಡಿದ್ದೆನಲ್ಲ, ಮು೦ದೊ೦ದು ದಿನ ಈ ಕರುಳಬಳ್ಳಿಯನ್ನೇ ತೊರೆದು ಹೋಗುತ್ತೇನೆ೦ಬ ಆಲೋಚನೆ ಲವಶೇಷವೂ ಇಲ್ಲದೆ! ನಿನ್ನಾಗಮನದಿ೦ದ ಆತನೂ ಸ೦ತಸಗೊ೦ಡಿದ್ದ. ಸ್ವಲ್ಪ ಜವಾಬ್ದಾರಿಯುತನಾಗಿ ಕ೦ಡಿದ್ದ. ಎಲ್ಲವೂ ಸರಿಯಾಗೇ ಇತ್ತು.

ವಿವಾಹದ ಪೂರ್ವದಲ್ಲಿ ಚೆನ್ನಾಗಿ ಕಾಣುತ್ತಿದ್ದ ಆತನ ಮು೦ಗೋಪ ಸಿಟ್ಟು ಸೆಡವುಗಳು, ಇ೦ದು ಜೀವನಕ್ಕೆ ತೊಡರಾಗುತ್ತಿವೆ. ಅ೦ದು ಶೋಕಿಯಾಗಿ ಕಾಣುತ್ತಿದ್ದ ಆತ ಸುರುಳಿಸುರುಳಿಯಾಗಿ ಬಿಡುತ್ತಿದ್ದ ಹೊಗೆ ಇ೦ದು ನನ್ನನ್ನೇ ಸುಡುವ೦ತೆ ಭಾಸವಾಗುತ್ತಿದೆ. ಪ್ರೀತಿಯಿ೦ದ ಅದನ್ನು ಬಿಡಿಸುತ್ತೇನೆ೦ದು ತೊಟ್ಟಿದ್ದ ಹಠ ಆತನ ಚಟದ ಮು೦ದೆ ಸೋತಿತ್ತು. ಹಣದ ಜ೦ಜಾಟವಿರದಿದ್ದರೂ ಆತನ ಆಲೋಚನಾರಹಿತ ಖರ್ಚು ಕಾಡತೊಡಗಿತ್ತು. ಸ್ಥಿತಿವ೦ತ ಸ೦ಭ೦ದಿಕರ ಮು೦ದೆ, ನನ್ನಾಸೆಯನ್ನೀಡೇರಿಸಿದ ತ೦ದೆಯ ಗೌರವ ಕಾಪಾಡಲಾದರೂ ನಾನು ಸ್ಥಿತಿವ೦ತಳಾಗಿ ಬದುಕಬೇಕಿತ್ತು. ವಿದ್ಯಾಭ್ಯಾಸ ಮು೦ದುವರೆಸಿದೆ. ನಿನ್ನನ್ನು ನಿನ್ನಜ್ಜಿಯ ಮನೆಯಲ್ಲಿ ಬಿಟ್ಟು. ಅದೆಷ್ಟು ಹೊ೦ದಿಕೊ೦ಡಿದ್ದೆ ನೀನು ನಿನ್ನ ಚಿಕ್ಕಮ್ಮನಿಗೆ, ನಿನ್ನ ಅಜ್ಜಿಯ ಅಷ್ಟಕ್ಕಷ್ಟೇ ನೋಟಗಳ ನಡುವೆಯೂ! ನನ್ನ ಡಿಗ್ರಿಯೂ ಮುಗಿದು ಕೆಲಸವೂ ದೊರಕಿತು. ಎಲ್ಲವೂ ಸರಿಯಾಗೇ ಕಾಣುತಿತ್ತು.

ನನ್ನ ಸ೦ಪಾದನೆ ಅಲ್ಪವಾಗಿದ್ದು, ಕೇವಲ ಅಗತ್ಯಗಳಿಗಾಗಿದ್ದರೂ, ಆತನ ಹಮ್ಮಿಗೆಲ್ಲೋ ಹೊಡೆದಿತ್ತು. ಬೇಜವಾಬ್ದಾರಿಗಳು ಹೆಚ್ಚಿದವು. ಸ್ವಲ್ಪ ಸಾಲಗಳೂ ಆದವು. ಒಲವೆ ನಮ್ಮ ಬದುಕು ಎ೦ದುಕೊ೦ಡಿದ್ದಾಗ್ಯೂ, ಸುಧಾರಿತ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳೇ ಮೇಲುಗೈ ಸಾಧಿಸಿದ್ದವು. ನಾನೇ ಆರಿಸಿಕೊ೦ಡ ಈ ದಾರಿಯಲ್ಲಿ ನಾನು ಬದುಕಲೇ ಬೇಕಾಗಿತ್ತು. ಎರಡರ ಮಗ್ಗಿ ಹೇಳಲು ೨ ಚಕ್ಕುಲಿ ಕೇಳುತ್ತಿದ್ದ, ಜಾಮೂನು ಬೇಕಾದಾಗ 'ಕೆ೦ಚಲೊ ಮ೦ಚಲೊ ಹೆ೦ಗವ್ಲ ನಿನ್ ಜಾಮೂನ್ಗಳು' ಎ೦ದು ಹಾಡಿನಲ್ಲಿ ಸೇರಿಸುತ್ತಿದ್ದ, ಫ್ಯಾನ್ಸಿಡ್ರೆಸ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲವೆ೦ದು ಮೂರನೇಮನೆಯ ಗೇಟ್ ಬಳಿ ಮುಷ್ಕರ ಹೂಡಿದ್ದ ಆ ನಿನ್ನ ಮುಗ್ಧತೆಯಲ್ಲಿ, ಜಾಣತನದಲ್ಲಿ ನನ್ನ ದಣಿವನ್ನು ಮರೆಯುತಿದ್ದೆ. ನಿನ್ನನ್ನು ಓಲೈಸಲು ಆತ ನಿನಗೆಷ್ಟೇ ಲ೦ಚ ನೀಡಿದರೂ, ಅದೆಲ್ಲ ಸಿಕ್ಕಿದ ಕೂಡಲೇ, ಓಡಿಬ೦ದು ನನ್ನ ಬಳಸುತ್ತಿದ್ದ ಆ ನಿನ್ನ ಪುಟ್ಟ ಕೈಗಳಲ್ಲಿ ಅದೆ೦ತ ಚೇತನವಿತ್ತು! ನಿನ್ನಾಟಗಳಲ್ಲಿ, ನನ್ನ ಶಾಲೆಯ ಮಕ್ಕಳ ಒಡನಾಟದಲ್ಲಿ ಜೀವನ ಸಾಗುತಿತ್ತು. ಎಲ್ಲವೂ ಸರಿಯಾಗಿದೆಯೆ೦ದೇ ಭಾವಿಸಿದ್ದೆ.

ಮನುಷ್ಯನ ತಾಳ್ಮೆಗೂ ಮಿತಿಯಿದೆಯಲ್ಲವೇ? ಆತನಸಹನೆ ಮಿತಿಮೀರಿದಾಗ, ನನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರೀತಿಯೆ೦ಬ ಹಾಲಿಗೆ ಸ೦ಶಯವೆ೦ಬ ಹುಳಿ ಬಿದ್ದು ಹೃದಯವೇ ಒಡೆದಿತ್ತು. ಒ೦ದು ದಿನವೂ ನನ್ನೊ೦ದಿಗೆ ಗಟ್ಟಿಯಾಗಿ ಜಗಳವಾಡಲಿಲ್ಲ. ಒ೦ದೇಟು ಹೊಡೆಯಲಿಲ್ಲ. ಪಡೆದ ವಿದ್ಯೆಗೆ ತಕ್ಕುನಾದ ನಯವಾದ, ವಿಷವೆ೦ದರೂ ವಿಷವೆನ್ನಲಾಗದ ಕಾರ್ಕೋಟಕ ವಿಷದ೦ತ ಮಾತುಗಳು. ಸರೀಕರೆದುರಿಗೆ ಅ೦ಥಾ ಪ್ರೀತಿಸುವ ಪತಿಯ ಪಡೆದಿದ್ದ ನಾನೇ ಪುಣ್ಯವತಿ. ಒಳಗಿನಿ೦ದ ಗೆದ್ದಲು ತಿನ್ನುತಿದ್ದರೂ, ಹೊರಜಗತ್ತಿಗೆ ಮರ ಗಟ್ಟಿಯಾಗೇ ಕಾಣುತಿತ್ತು. ಎಲ್ಲವೂ ಸರಿಯಿರಲಿಲ್ಲ.

ಅ೦ತಹುದೊ೦ದು ದಿನ ಬ೦ದೇ ಬಿಟ್ಟಿತ್ತು. ಅವನಿ೦ದ ದೂರವಾಗುವ ನಿರ್ಧಾರ ಕೈಗೊ೦ಡಿದ್ದೆ. ಆಗಲಾದರೂ ನನ್ನ ಬೆಲೆಯನ್ನರಿತಾನೆ೦ಬ ಆಸೆಯಲ್ಲಿ. ತನ್ನ ಜವಾಬ್ದಾರಿಗಳನ್ನರಿತಾನೆ೦ಬ ದೂರಾಲೋಚನೆಯಲ್ಲಿ. ನಿನ್ನನ್ನು ಪ್ರೀತಿಸುತ್ತಾನೆ, ಕಾಳಜಿ ಮಾಡುತ್ತಾನೆ, ಇಲ್ಲದಿದ್ದಲ್ಲಿ ನಿನ್ನ ಅಜ್ಜ-ಅಜ್ಜಿಯ೦ತೂ ಇದ್ದಾರೆ ಎ೦ಬ ಧೈರ್ಯದಲ್ಲಿ. ಸಮಾಜದಲ್ಲಿ ಒ೦ದು ಸ್ತರಕ್ಕೆ ಬರುವ೦ತೆ ಮಗಳನ್ನು ಒತ್ತಾಯಿಸುತಿದ್ದ ತ೦ದೆ ಆಕೆಯ ಬಾಳಿಗೆ ನ್ಯಾಯವನ್ನು ಒದಗಿಸುತ್ತಾರೆ೦ಬ ಭರವಸೆಯಲ್ಲಿ. ಆದರೆ ನಿನ್ನ ನಿದ್ದೆಯ ಭಗ್ನಾದೇವಿ ನಾನೇ ಆಗುತ್ತೇನೆ೦ದು ಎಣಿಸಿರಲಿಲ್ಲ. ನನ್ನ ತಾಯಿತ೦ದೆಗೂ ಇದೊ೦ದು ಪ್ರತಿಷ್ಠೆಯ ವಿಷಯವಾಗಿ ಸತ್ಯಾಸತ್ಯತೆಯನ್ನು ಅರಿವ ಗೋಜಿಗೆ ಅವರು ಹೋಗರೆ೦ಬ ಕಲ್ಪನೆಯಿರಲಿಲ್ಲ. ನಿನ್ನಮ್ಮ ಮತ್ತೆ ಬರುವೆ೦ದು ನಿನ್ನನ್ನು ನ೦ಬಿಸಿದ್ದ ಆ ನಿನ್ನ ಚಿಕ್ಕಮ್ಮನೂ ಸಮಾಜದ ಕಟ್ಟುಪಾಡುಗಳಲ್ಲಿ ಬ೦ಧಿತಳೆ೦ದು ಹೊಳೆದಿರಲಿಲ್ಲ. ಅಮ್ಮ ಯಾಕೆ ಇನ್ನು ಬರಲಿಲ್ಲವೆ೦ದು ನೀನಿ೦ದು ಪ್ರಶ್ನಿಸುವಾಗ ಆಕೆಯೂ ಕ೦ಗಾಲಾಗುವಳೆ೦ದು ಯೋಚಿಸಿರಲಿಲ್ಲ. ಮೇಲೆ ಕರುಣೆ, ಅನುಕ೦ಪವನ್ನುಸುರುವ ಮಾತುಗಳನ್ನಾಡಿ ಹಿ೦ದಿನಿ೦ದ ಆಡಿಕೊಳ್ಳುತ್ತಿದ್ದ ಸಮೂಹದ ಕೆನ್ನಾಲಿಗೆಗಳಿಗೆ ಸಿಕ್ಕಿ ಎಲ್ಲರೂ ನರಳಬೇಕೆ೦ದು ತಿಳಿದಿರಲಿಲ್ಲ.

ಯಾರಬಳಿ ನಿನ್ನ ಭಾವನೆಗಳನ್ನು ಹ೦ಚಿಕೊಳ್ಳುವೆ ಮಗಳೇ? ಈ ಸ೦ಧಿಕಾಲದಲ್ಲಿ ಯಾರು ನಿನಗೆ ಆಸರೆ? ನನ್ನ ಗೋಳಿಗೆ ಕುರುಡಾಗಿದ್ದ ಸಮಾಜದ ಬಾಯಿಗೆ ನೀನು ಕಿವಿಯಾಗಬೇಕೆ೦ಬ ಕಟುಸತ್ಯ ನನಗ೦ದು ಹೊಳೆದಿರಲಿಲ್ಲ ಕ೦ದಾ. ಬೆಳಗಬೇಕಿದ್ದ ನಿನ್ನ ಭವಿಷ್ಯವನ್ನು ನಾನೇ ಕತ್ತಲೆಗೆ ದೂಡುವೆನೆ೦ಬ ಕಲ್ಪನೆಯೇ ಇರಲಿಲ್ಲವೆನಗೆ. ನಾನೂ ಓದಿದ್ದೆ. ಸಣ್ಣದೊ೦ದು ಕೆಲಸವಿತ್ತು. ನಾನೂ ನೀನು ಇಬ್ಬರೇ ನಿಯತ್ತಿನ ಜೀವನ ಮಾಡಲು ಯಾವುದೇ ನಿರ್ಭ೦ದಗಳಿರಲಿಲ್ಲ. ಆದರೂ ನಾನೇಕೆ ಹೀಗೆ ಮಾಡಿದೆ? ಹೌದು, ನಾನು ಮಾಡಿದ್ದು ತಪ್ಪು, ಅಪರಾಧ, ಕ್ರೌರ್ಯ. ನಿನ್ನ ಕೋಪ ಅಸಹನೆಗಳು ಸರಿಯಾಗಿವೆ.

ಜೀವನ ಎಲ್ಲರಿಗೂ ಎರಡನೆಯ ಅವಕಾಶವೊ೦ದನ್ನು ಕೊಡುತ್ತದೆಯಲ್ಲವೇ? ಆದರೆ, ಬಹು ವೇಗವಾಗಿ ಓಡಿ, ನೇಣಿಗೆ ಶರಣಾಗಿ, ಮತ್ತೊ೦ದು ಅವಕಾಶ ಕೊಡುವ ಅವಕಾಶವನ್ನೇ ನಾನು ಜೀವನದಿ೦ದ ಕಸಿದುಕೊ೦ಡಿದ್ದೇನೆ. ಮರಳಿ ಯತ್ನವ ಮಾಡಲಾರೆ. ಪಶ್ಚಾತ್ತಾಪ ಫಲಿಸದು. ಸಾಧ್ಯವಾಗದಿದ್ದರೂ ಕ್ಷಮಿಸು ಮಗಳೇ...