"ಯಾರ್ರೀ ಶಿವಾನಂದ (?!) ಇಲ್ಲೇ ಇಳೀರಿ, ಮುಂದಕ್ಕೆ ಹೋಗಲ್ಲ, ಬ್ಲಾಕ್ ಮಾಡಿದಾರೆ" ಕಂಡಕ್ಟರ್ ಕೂಗಿದಾಗ ದಡಬಡನೆ ಇಳಿದೆ! ರಸ್ತೆ ದಾಟುತ್ತಿದ್ದಂತೆಯೇ ಕಾಣುತ್ತಿತ್ತು "ಸಂತೆ". ಥೇಟ್ ನಮ್ಮೂರಿನ ಸೋಮವಾರದ ಸಂತೆಯನ್ನೇ ಹೋಲುವಂತದ್ದು! ಆದರಲ್ಲಿದ್ದುದು ಹೊಟ್ಟೆಯ ಹಸಿವನ್ನಿಂಗಿಸುವ ಹಣ್ಣು-ತರಕಾರಿಗಳ ಸಂತೆಯಲ್ಲ, ಕಣ್ಣಿನ ದಾಹ ತಣಿಸುವ, ಮನಸ್ಸನ್ನು ಅರಳಿಸುವ "ಚಿತ್ರ ಸಂತೆ".
ಈ ರಾಜಕಾರಣಿಗಳು ಈ ತರಹದ ಸಮಾರಂಭಗಳಿಗೆ ಏತಕ್ಕಾದರೂ ಬರುತ್ತಾರೋ ತಿಳಿಯೆ! ಆ ಟೋಪಿ ಸಚಿವರಿಗೆ ತಾವೆಲ್ಲಿ ಮಾತನಾಡುತ್ತಿದ್ದೇವೆ ಎಂಬುದರ ಅರಿವಾದರೂ ಇತ್ತೋ ನಾಕಾಣೆ . ಆ ಮಹಾಸಾಮ್ರಾಟರ ಹೆಸರಿನ ಸಚಿವರು ಕಲಾಕೃತಿಗಳನ್ನು ವೀಕ್ಷಿಸುವಾಗ ಯಾವುದೋ ಕೇಸಿನ ವಿಚಾರದ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಆದರೂ ಈ ಪುಡಾರಿಗಳ ಬೆಂಬಲವಿಲ್ಲದೆ ಇಂತಹ ಕಾರ್ಯಕ್ರಮಗಳು ನಡೆಯುವುದು ಅಸಾಧ್ಯವಾಗಿರುವುದು ನಮ್ಮ ಪುಣ್ಯಫಲ! ಇವೆಲ್ಲದರ ನಡುವೆಯೂ ಯಾರೋ ಪುಣ್ಯಾತ್ಮರು ಮಹಾನ್ ಕಲಾವಿದ ರೋರಿಕ್ ರವರನ್ನು ನೆನಪಿಸಿಬಿಟ್ಟರು! ಅಂತಹ ಭಾರೀ ಜನಜಂಗುಳಿಯನ್ನೂ ಭೇದಿಸಿ ನೆನಪು ವಿಶಾಲವಾದ ಬಾಲ್ಯದಂಗಳದಲ್ಲಿ ನಿಲ್ಲಿಸಿಬಿಟ್ಟಿತ್ತು!
ಇನ್ನೂ ಪ್ರಾಥಮಿಕ ತರಗತಿಯಲ್ಲಿದ್ದೆ. "ಸುಧಾ" ವಾರಪತ್ರಿಕೆಯಲ್ಲಿ ಕಲಾವಿದ ರೋರಿಕ್ ಕುರಿತಾದ ಮುಖಪುಟ ಲೇಖನ ಬಂದಿತ್ತು. ಮುಖಪುಟದ ಮೂಲೆಯಲ್ಲಿ ರೋರಿಕರ ಪಾಸ್ಪೋರ್ಟ್ ಸೈಜಿನ ಪೋಟೊ, ಉಳಿದ ಪುಟದಲ್ಲಿ ಅವರ ಕಲಾಕೃತಿ. ಕೆಂಪು ಸೀರೆಯಂತಹ ಬಟ್ಟೆ ತೊಟ್ಟ ನೀರೆ, ಕೊಳದ ಬಳಿ, ಬೆನ್ನು ತೋರಿಸಿ, ತಿರುಗಲೋ ಬೇಡವೋ ಎಂಬಂತೆ ಮುಖ ತಿರುಗಿಸಿ ಒಂದು ಕೋನದಲ್ಲಿ ನಿಂತಿದ್ದಾಳೆ. ಸುತ್ತಲ ಸುಂದರ ವನಸಿರಿಯ ನಡುವೆ ನಿಂತಿರುವ ಈ ನೀರೆ, ಸೌಂದರ್ಯ ನನ್ನದೋ, ಪ್ರಕೃತಿಯದೋ ಎನ್ನುವಂತೆ ಪ್ರಶ್ನಿಸುತ್ತಿದ್ದಾಳೆ. ಹೀಗೆ ತಮ್ಮ ಚಿತ್ರದಲ್ಲಿಯೇ ಸೌಂದರ್ಯದ ಪೈಪೋಟಿಯನ್ನು ಚಿತ್ರಿಸಿದ್ದ ಕಲಾವಿದನಿಗೆ ಮರುಳಾಗಿದ್ದೆ! ಸ್ವಲ್ಪ ಹಳತಾದ ಮೇಲೆ, "ಸುಧಾ" ಮುಖಪುಟವನ್ನು ಕಿತ್ತು, ಅಪ್ಪ ಕೊಡಿಸಿದ್ದ ಹೊಸ "ಡ್ರಾಯಿಂಗ್ ಬುಕ್" ಗೆ ಬೈಂಡ್ ಹಾಕಿಕೊಂಡಿದ್ದೆ. ಅಷ್ಟಕ್ಕೇ ಜೂನಿಯರ್ ರೋರಿಕ್ ಆದಷ್ಟು ನಲಿವಿನಿಂದ ಕುಣಿದಾಡಿತ್ತು ಆ ಹುಚ್ಚು ಮನಸ್ಸು!!
ಅದೇ ಗುಂಗಿನಲ್ಲಿ ಕಪ್ಪು ಬಿಳುಪು ಚಿತ್ರಗಳನ್ನು ದಾಟಿ ಮುಂದೆ ಬಂದಿದ್ದೆ. ಮತ್ಯಾವುದೋ ಸುಂದರಿ ಕಾಯುತ್ತಿದ್ದಳು ನನಗಾಗಿ! ಆಕೆಯ ಕಂಗಳು ನನ್ನನ್ನೇ ಕರೆಯುತ್ತಿರುವಂತೆ ಭಾಸವಾಯಿತು! ಅತ್ಯಂತ ಹೊಸತು, ವಿಶೇಷ ಎನಿಸುವಂತಹ ಪ್ರಯೋಗವೇನಾಗಿರಲಿಲ್ಲವದು. ಆದರೂ ಏನೋ ಸೆಳವಿತ್ತು ಆ ಸರಳತೆಯಲ್ಲಿ. ಆ ಕಲಾವಿದಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದೆ ಸಾಗಿದೆ. ಮತ್ತೊಂದಿಷ್ಟು ಚಿತ್ರಗಳು. ಜಲವರ್ಣ, ತೈಲವರ್ಣಗಳು, ಬಿಳಿಯ ಹಾಳೆಯ ಮೇಲೆ, ಡ್ರಾಯಿಂಗ್ ಶೀಟಿನ ಮೇಲೆ, ತೆಳು ಬಟ್ಟೆಯ ಮೇಲೆ, ದೊಡ್ಡ ಕ್ಯಾನವಾಸಿನ ಮೇಲೆ... ಬಗೆ ಬಗೆಯ ಬಣ್ಣಗಳು, ಪ್ರಕೃತಿಯ ವಿವಿಧ ಮೂಡ್ ಗಳು, ಚಂದ್ರನ ಹಲವು ಮುಖಗಳು, ಏಳುವ/ಮುಳುಗುವ ಸೂರ್ಯನ ಚಿತ್ರಗಳು.. ಇಲ್ಲೆಲ್ಲೋ ಕಲಾವಿದನ ಕಲ್ಪನೆಗಿಂತ ನಿಸರ್ಗದ ಸ್ನಿಗ್ಧ ಸೌಂದರ್ಯವೇ ಮೇಲುಗೈ ಸಾಧಿಸಿದೆಯೇನೋ ಎಂದೆನ್ನಿಸಿದರೂ, ಆ ಸೌಂದರ್ಯವನ್ನು ಕುಂಚದಲ್ಲಿ ಸೆರೆಹಿಡಿದು, ಪ್ರಕೃತಿಯ ಪ್ರತಿಕೃತಿ ಸೃಷ್ಟಿಸಿದ ಕಲಾವಿದನ ಕಲಾಪ್ರೌಢಿಮೆಗೆ ಹ್ಯಾಟ್ಸ್ ಆಫ್!!
ಸತತ ನಾಲ್ಕೈದು ಸ್ಟಾಲುಗಳಲ್ಲಿ ಇಂತವೇ ಚಿತ್ರಗಳು ಏಕತಾನತೆಯನ್ನು ತಂದಿರಲು, ಖಾದಿಭಂಡಾರದ ಬಳಿ ಹೊಸಬಗೆಯ ಚಿತ್ರಗಳು ಕಂಡುಬಂದವು. ಅವುಗಳ ಪ್ರಾಕಾರ ತಿಳಿದಿಲ್ಲವಾದರೂ, ಅದರಲ್ಲಿನ ವಿಷಯ ಪ್ರಸ್ತುತಿ ಮನ:ಸೆಳೆಯಿತು. ಅರ್ಥೈಸಲು ಪ್ರಯತ್ನಿಸುತ್ತಿದ್ದಾಗ, ಹಿಂದಿನಿಂದ ಯಾರೋ ಕಲಾಪ್ರೇಮಿಗಳು ಹೇಳಿದರು, "ಇದು ನನಗೆ ತುಂಬಾ ಇಷ್ಟವಾದ ಪೇಂಟಿಂಗು. ಆದ್ರೆ ಅದೇನು ಅಂತ ಅರ್ಥ ಆಗ್ಲಿಲ್ಲ ಅಷ್ಟೆ!" ಆ ಮಾತುಗಳ "ಅರ್ಥ" ಅರ್ಥವಾಯಿತೇ ಹೊರತು, ಅದರಲ್ಲಿನ "ಭಾವ" ಅರ್ಥವಾಗಲಿಲ್ಲ. ಆದರೂ ಹಿನ್ನೆಲೆಯಲ್ಲಿ ಅನೇಕ ಪ್ರಶ್ನೆಗಳೆದ್ದವು. ಕಲಾಕೃತಿಯೊಂದನ್ನು ಎಂದಿಗಾದರೂ ಅರ್ಥಮಾಡಿಕೊಳ್ಳುವ ಅನಿವಾರ್ಯತೆಯಿದೆಯೇ? ಅದು ಅರ್ಥವಾಗದೆಯೇ ಇಷ್ಟವಾಗಲು ಸಾಧ್ಯವೇ? ಸಾಧ್ಯವಿಲ್ಲವೇ? ಅರ್ಥವಾದರೂ ಕಲಾಕಾರನ ದೃಷ್ಟಿಯಲ್ಲೇ ಅರಿತುಕೊಳ್ಳಬಲ್ಲೆವೇ? ಅರ್ಥೈಸುವಿಕೆ ನಮ್ಮ ತಿಳುವಳಿಕೆ, ಆಸಕ್ತಿಯ ಹಿನ್ನೆಲೆಯಲ್ಲಿ ಮಾತ್ರವೇ ಅಲ್ಲವೇ? ಆದರೂ, ಕಲಾಕಾರ ಕಲಾಕೃತಿಯನ್ನು ರಚಿಸಿದ ಹಿನ್ನೆಲೆ, ಪರಿಕಲ್ಪನೆಗೆ ಆದಷ್ಟೂ ಹತ್ತಿರ ಹೋದಾಗಲೇ ಅದರ ಸೌಂದರ್ಯವನ್ನು ಗರಿಷ್ಟ ಮಟ್ಟದಲ್ಲಿ ಆಸ್ವಾದಿಸಲು ಸಾಧ್ಯವಲ್ಲವೇ?..............
ಅದೇ ಗುಂಗಿನಲ್ಲಿ ಮುಂದೆ ಸಾಗುತ್ತಿದ್ದಾಗ ಮತ್ತೊಂದು ವಿಸ್ಮಯ ಕಾದಿತ್ತು! ಡಿಜಿಟಲ್ ತಂತ್ರಜ್ಞಾನ, ಫೋಟೋಗ್ರಫಿ ಎನ್ನುವುದು ಬಂದಮೇಲೆ, ನಿಸರ್ಗದ ಸೌಂದರ್ಯವನ್ನೂ, ಐತಿಹಾಸಿಕ ಸ್ಮಾರಕಗಳನ್ನು ಫೋಟೋದಲ್ಲಿ ಹಿಡಿದಷ್ಟು ಸ್ಪಷ್ಟವಾಗಿ ಪೇಂಟಿಂಗ್ ನಲ್ಲಿ ಹಿಡಿಯುವುದು ಸಾಧ್ಯವಿಲ್ಲವೆನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಆ ಶಿಲ್ಪಕಲೆಯ ಚಿತ್ರಕಲೆಯನ್ನು ನೋಡಿದ ಕ್ಷಣ ಅಭಿಪ್ರಾಯ ಬುಡಮೇಲಾಯಿತು! ಬೇಲೂರು, ಹಳೆಬೀಡುಗಳಲ್ಲಿ ಕಲ್ಲನ್ನು ಕೆತ್ತಿ ಕಲೆಯಾಗಿಸಿದ ಶಿಲ್ಪಿಗಳಷ್ಟೇ ಅದ್ಭುತವಾಗಿ ಕುಂಚದಲ್ಲಿ ಮರುಸೃಷ್ಟಿಸಿದ ಆ ಕಲಾವಿದನ ಕಲಾನೈಪುಣ್ಯತೆಗೊಂದು ಸಲಾಮ್!!
ದೇವರ ಕುರಿತಾದ ನಮ್ಮ ನಂಬಿಕೆಗಳೇನೇ ಇರಲಿ, ಈ ಕಲಾವಿದರಿಗೆ ಮಾತ್ರ ಇವರೆಂದಿಗೂ ಸ್ಪೂರ್ತಿಯ ಸೆಲೆಯೇನೋ! ಮುಕ್ಕೋಟಿ ದೇವರುಗಳಿದ್ದರೂ, ಗಣೇಶ ಮತ್ತು ಕೃಷ್ಣ ಇವರ Hot favourite ಗಳೇನೋ! ಅದೆಷ್ಟು ತರಾವರಿಯ ಗಣಪನ ಚಿತ್ರಗಳು! ಕೃಷ್ಣನ ವಿಧಗಳೇ ವಿಧಗಳು - ಬಾಲಕೃಷ್ಣ, ತುಂಟಕೃಷ್ಣ, ಬೆಣ್ಣೆಕೃಷ್ಣ, ಗೋವರ್ಧನಧಾರಿ, ಗೋಪಿಕಾಲೋಲ, ರಾಧಾಕೃಷ್ಣ, ಮೀರಾಕೃಷ್ಣ... ಎಣೆಯುಂಟೇ ಈತನ ಅವತಾರಗಳಿಗೆ! ದೇವತೆಗಳಲ್ಲಿ ಸರಸ್ವತಿಯ ಬಾಹುಳ್ಯವಿದ್ದರೆ, ದಂಪತಿಗಳ ಗುಂಪಿನಲ್ಲಿ ಉಮಾಮಹೇಶ್ವರರು ಜನಪ್ರಿಯರಂತೆ ಕಂಡರು. ವನ್ಯಪ್ರಾಣಿಗಳ ಚಿತ್ರಗಳಲ್ಲಿ, ಭಾರತದ ಹುಲಿ, ಆಫ್ರಿಕಾದ ಆನೆಗಳದ್ದೇ ಕಾರುಬಾರು. ವ್ಯಂಗ್ಯ ಚಿತ್ರಗಳು ನಗೆಯ ಅಲೆಯನ್ನೇ ಎಬ್ಬಿಸಿದರೆ, ಸಾಂಪ್ರದಾಯಿಕ ಚಿತ್ರಗಳು ಮೈಸೂರು, ತಂಜಾವೂರು ಕಲಾವೈಭವವನ್ನು ಮತ್ತೆ ಮೆರೆಯಿಸಿದವು. ಕೆಂಪು ಕಚ್ಚೆಸೀರೆಯುಟ್ಟು ಹಂಸದ ಬಳಿನಿಂತಿರುವ ಅಪ್ಪಟ ಭಾರತೀಯ ನೀರೆಯ ಚಿತ್ರವಂತೂ ಅದೆಷ್ಟು ಕಲಾವಿದರ ಕುಂಚದಲ್ಲಿ ಕುಣಿದಾಡಿದೆಯೋ! (ಮೂಲ ಚಿತ್ರ ರೋರಿಕರದ್ದೇ?)
ಆ Art gallery ಯ ಒಳಗೆ ಅಷ್ಟೆಲ್ಲ ಸಾಂಪ್ರದಾಯಿಕ ಚಿತ್ರಕಲೆಗಳ ನಡುವೆ ಇತ್ತೊಂದು ವಿಶೇಷ ಅನಿಸುವಂತಹ ಚಿತ್ರ. ಅದನ್ನ Modern Art ಅಂತಾರೋ ಗೊತ್ತಿಲ್ಲ, ಏಕೋ ಈ ನಡುವೆ ಮನಸ್ಸು "ಅತಿ"ಯಾದ ಬಣ್ಣಗಳನ್ನ ವಿರೋಧಿಸುತ್ತದೆ. ಅನೇಕರು "ಡಲ್" ಎಂದೆನ್ನುವ ಪೇಸ್ಟಲ್ ಬಣ್ಣಗಳನ್ನೇ ಬಯಸುತ್ತದೆ. ಇಂತಹ ಬಣ್ಣಗಳನ್ನು ಬಳಸಿ ಅಥವಾ ಕೇವಲ ಕಪ್ಪು ಬಿಳುಪಿನಲ್ಲೇ ಹೊಸತೇನನ್ನಾದರೂ ಹೇಳುವಂತಿರುವ ಕಲಾಕೃತಿಗಳಿಗಾಗಿ ಹುಡುಕುತ್ತಿರುತ್ತದೆ. ಬಹುಶ: ಇವೆಲ್ಲವೂ ಅದರಲ್ಲಿತ್ತು ಅನಿಸಿದ್ದಕ್ಕಾಗಿಯೋ ಏನೋ, ಆ ಚಿತ್ರ ಎಳೆದು ನಿಲ್ಲಿಸಿಕೊಂಡುಬಿಟ್ಟಿತ್ತು! ಅಲ್ಲಿ ಫೋಟೋ ತೆಗೆಯುವಂತಿರಲಿಲ್ಲವಾದ್ದರಿಂದ, ಕಣ್ಣಿನಲ್ಲಿಯೇ ಕ್ಲಿಕ್ ಮಾಡಿ ಮೆದುಳಿನಲ್ಲಿ ಸಂಗ್ರಹಿಸಿಕೊಂಡು ಹಿಂತಿರುಗಿದ್ದಾಯಿತು. ನಾರಾಯಣ್ ರವರ Jockey ಮತ್ತು ಉತ್ತರಕರ್ನಾಟಕದ ಗ್ರಾಮ್ಯ ಚಿತ್ರಗಳು ಗಮನ ಸೆಳೆದವು. ನಿಜಕ್ಕೂ ನಾನು ಕಳೆದುಹೋಗಿದ್ದು, ರಮೇಶ್ ತೆರ್ದಾಲ್ ರವರ ಚಿತ್ರಗಳನ್ನು ನೋಡುತ್ತಾ. ಹುಚ್ಚು ಮನಸ್ಸಿನ ಹಲವು ಮುಖಗಳು ಅಲ್ಲಿ ಚಿತ್ರಿತವಾಗಿದ್ದವು. "ಶಾಂತಿ" ಎಂದೊಡನೆ ಬಿಳಿಪಾರಿವಾಳ ಅಥವಾ ಬುಧ್ಧನ ಚಿತ್ರಗಳು ಸಾಮಾನ್ಯ. ಇಲ್ಲಿಯೂ ಆ ಬುದ್ಧನ prototype ಬಳಸಿದ್ದರೂ, ಉಳಿದ ಚಿತ್ರಗಳು ಏನೋ ಹೊಸದೆನಿಸಿದವು. ಪ್ರಕೃತಿಯ ನಡುವೆ ಕುಳಿತು ನಿಸರ್ಗವನ್ನು ಚಿತ್ರಿಸಬಹುದು, ಯಾರನ್ನೋ ನೆನೆಯುತ್ತಾ, ಭಾವಚಿತ್ರದೊಳಗೂ ಭಾವನೆಯನ್ನು ತುಂಬಬಹುದು! ಆದರೆ, ಕಣ್ಣಿಗೆ ಕಾಣದ, ಹರಿಬಿಟ್ಟಲ್ಲಿ ಹರಿಯುವ ಈ ಮನಸ್ಸನ್ನು ಚಿತ್ರದಲ್ಲಿ ಹಿಡಿದಿಡುವುದಿದೆಯಲ್ಲ ಅದೇಕೋ ತುಂಬಾ ಕಷ್ಟವೆನಿಸುತ್ತದೆ!!
ಸಹಬ್ಲಾಗಿಗರಾದ ಪಾಲಚಂದ್ರ ಮತ್ತು ಸವಿತ ರವರ ಸ್ಟಾಲ್ ಗೆ ಹೋಗದಿದ್ದರೆ ಚಿತ್ರಸಂತೆ ಮುಗಿಯುವುದಿಲ್ಲ! ಪಾಲರ ಚಿತ್ರಗಳನ್ನು ನೋಡಿಯೇ ಇದ್ದೇವೆ, ಹೇಳಲು ಹೆಚ್ಚೇನೂ ಉಳಿದಿಲ್ಲ! ಸವಿತಾರವರ ವಾರ್ಲಿ ಪೇಂಟಿಂಗ್ ವಿಶಿಷ್ಟವಾಗಿತ್ತು. ಮಹಾರಾಷ್ಟ್ರ, ಗುಜರಾತ್ ಕಡೆಯ ಗ್ರಾಮ್ಯ ಕಲೆಯಿದು. ಉತ್ತರ ಕರ್ನಾಟಕದ ಕಡೆಯಲ್ಲೂ ಕಾಣಬಹುದು. ಭೂಮಿ ಹುಣ್ಣಿವೆ, ಮಣ್ಣೆತ್ತಿನ ಅಮವಾಸ್ಯೆ (??) ಸಮಯದಲ್ಲಿ ಅವ್ವ/ಅತ್ತೆ ಊರ್ಮಂಜ(ಕೆಮ್ಮಣ್ಣು), ಸಗಣಿಯನ್ನು, ಹಂಚು ತೊಳೆದ ನೀರಲ್ಲಿ ಕಲೆಸಿ ಗೋಡೆಗೆ ಬಳಿದು (background) ಸುಣ್ಣವನ್ನು ಗಟ್ಟಿಯಾಗಿ ಕಲೆಸಿ ಅಂಚಿಕಡ್ಡಿಯಲ್ಲಿ ಚಿತ್ರಿಸುತ್ತಿದ್ದ ನೆನಪು.. ಬ್ಲಾಗಿಗರಿಬ್ಬರಿಗೂ ಅಭಿನಂದನೆಗಳು.
ಚಿತ್ರಗಳು ನೋಡಿದಷ್ಟೂ ನೋಡಿಸಿಕೊಳ್ಳಬೇಕು. ಪ್ರತಿಬಾರಿ ನೋಡಿದಾಗಲೂ ಹೊಸದರಂತೆ ಕಾಣಬೇಕು. ಅದೆಷ್ಟೋ ಆಲೋಚನೆಗಳನ್ನು ನಮ್ಮಲ್ಲಿ ಹುಟ್ಟುಹಾಕಬೇಕು. ನೋಡುತ್ತಲೇ ಹಾಗೇ ಕಳೆದುಹೋಗಬೇಕು. ಸಂತೆಯಲ್ಲೊಂದು ಏಕಾಂತತೆಯನ್ನು ಸೃಷ್ಟಿಸಬೇಕು. ಹೀಗೇ ಇನ್ನೇನೋ...! ಇವೆಲ್ಲವನ್ನೂ ಚಿತ್ರಸಂತೆ ನೀಡಿತ್ತು...
The verse she wrote...
3 weeks ago