Friday, October 09, 2009

ಕಾಡದಿರಿ ನೆನಪುಗಳೇ....!


ಬೆಳಗಿನ ಜಾವದ ಚುಮುಚುಮು ಚಳಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಅಪ್ಪನ ಕೈಯನ್ನೋ ಅಮ್ಮನ ಕೈಯನ್ನೋ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುವ ಆ ಮುದ್ದು ಮಕ್ಕಳನ್ನು ಕಂಡಾಗ ನಮ್ಮ ಬಾಲ್ಯದಂಗಳಕ್ಕೆ ಕರೆದೊಯ್ಯುತ್ತೀರಿ. ಬಸ್ ಸ್ಟಾಂಡ್ ನಲ್ಲಿ ಲೈಟ್ ಕಂಬ ಹಿಡಿದು ಸುತ್ತುತ್ತಿರುವ ಆ ಅಣ್ಣತಂಗಿಯನ್ನು ಕಂಡಾಗ, ಅಕ್ಕನ ಕೈಯಲ್ಲಿನ ಚಾಕಲೇಟೇ ಬೇಕು ಎಂದು ಅಳುತ್ತಿರುವ ತಂಗಿಯನ್ನು ಕಂಡಾಗ ನಮ್ಮ ಕದನಗಳ ರಣಭೂಮಿಗೆ ಹೊತ್ತೊಯ್ಯುತ್ತೀರಿ. ಅಲ್ಲೆಲ್ಲೋ ಕೆಫೆಯೊಂದರಲ್ಲಿ ಹರಟುತ್ತಿರುವ ಯುವಕ ಯುವತಿಯರನ್ನು ಕಂಡಾಗ ನಮ್ಮ ಕಾಲೇಜಿನ ಆವರಣದಲ್ಲೇ ಇಳಿಸುತ್ತೀರಿ. ಪ್ರೀತಿಪಾತ್ರರಿಂದ ದೂರವಾಗಿ ನೆಲೆಸಿ ನಡೆಯುತಿರಲು ಧುತ್ತೆಂದು ಧಾಳಿ ಮಾಡುತ್ತೀರಿ. ಖಿನ್ನತೆಯನ್ನು ಜೊತೆಗೂಡಿಸುತ್ತೀರಿ. ಆಸಕ್ತಿಯನ್ನು ಕಳೆದುಬಿಡುತ್ತೀರಿ. ಏಕೆ ಹೀಗೆ ಕಾಡುತ್ತೀರಿ? ಬಿಟ್ಟುಕೊಡಿ ಇಂದಿನ ಈ ಹೊತ್ತನ್ನು ಇಂದಿನ ಈ ಹೊತ್ತಿಗೆ. ಬಿಟ್ಟುಬಿಡಿ ಸವಿಯಲು ಈಗ ಕಾಣುತ್ತಿರುವ ಆ ಮಕ್ಕಳ ಮುಗ್ಧತೆಯನ್ನು, ಸೋದರವಾತ್ಸಲ್ಯವನ್ನು, ಹುಡುಗರ ಹುಡುಗಾಟಿಕೆಯನ್ನು. ದಾರಿಮಾಡಿಕೊಡಿ ಹೊಸನೆನಪುಗಳಿಗೆ. ತೆರೆದುಕೊಳ್ಳಲು ಬಿಡಿ ಹೊಸ ಅನುಭವಗಳಿಗೆ.....

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೇ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಾಲನ ಕೆಲಸವೇ ಅದು. ಯಾರ ಹಂಗೂ ಇಲ್ಲದೆ ಮುಂದೆ ಸಾಗುತ್ತಿರುತ್ತಾನೆ. ದಿನ, ವಾರ, ತಿಂಗಳುಗಳನ್ನು ಹೊತ್ತು ತರುತ್ತಾನೆಯೇ ಹೊರತು ವಸಂತಗಳನ್ನಲ್ಲ. ಆದರೆ ನೀವು ಕಾಲನನ್ನೇ ಮೀರಿದವರು. ಕ್ಷಣಮಾತ್ರದಲ್ಲೇ ಎಷ್ಟು ಏಡುಗಳನ್ನಾದರೂ ಎಣಿಸಿಬಿಡುತ್ತೀರಿ! ಓಡುತ್ತಿರುವ ಕಾಲನೊಂದಿಗೆ ಎಷ್ಟೇ ವೇಗವಾಗಿ ಓಡಿದರೂ ಕಟ್ಟಿಬಿಡುತ್ತೀರಲ್ಲ ಹರಿವಿಗೊಂದು ತಡೆಯನ್ನು! ಮರೆಯಬೇಕೆಂದಿರುವ ಘಟನೆಗಳನ್ನೇ ಬುನಾದಿಯಾಗಿಸಿ, ವ್ಯಕ್ತಿಗಳನ್ನೇ ಕೂಲಿಗಳನ್ನಾಗಿಸಿ ನಿಮ್ಮ ಭದ್ರಕೋಟೆಯನ್ನು ಕಟ್ಟುತ್ತೀರಿ. ಕಾಲಗತಿಯಲ್ಲಿ ಅಳಿಸಿಹೋಗಬಹುದಾದ ಸಾಧ್ಯತೆಯನ್ನೇ ಅಳಿಸಿಹಾಕುತ್ತೀರಿ.

ಕಪ್ಪುಕಣ್ಣಿನ ದಿಟ್ಟ ನೋಟದರೆಚಣವನ್ನೆ
ತೊಟ್ಟಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಇರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ

ಪಯಣದಲ್ಲೂ, ಏಕಾಂತದಲ್ಲೂ, ಕಣ್ಣುಮುಚ್ಚಿದರೂ, ತೆರೆದರೂ, ಮಗ್ಗಲು ಬದಲಿಸಿದರೂ ನೀವೇ ಇರುತ್ತೀರಿ. ಕನಸುಗಳು ಕಣ್ಮರೆಯಾಗಿವೆ. ಕಣ್ಣೀರು ಇಂಗಿ ಹೋಗಿದೆ. ಜೀವನದಲ್ಲಿಯ ಜೀವ ಕಳೆದುಹೋಗೆ, ಕೇವಲ ನಕಾರ ಉಳಿದುಕೊಂಡಿದೆ. ಎದೆ, ತನ್ನ ಗೂಡೇ ಒಡೆದುಹೋಗುತ್ತದೇನೋ ಎನ್ನುವಂತೆ, ಹೃದಯ, ತನ್ನ ಕವಾಟವೇ ಬಿರಿದುಹೋಗುತ್ತದೇನೋ ಎನ್ನುವಂತೆ ಚೀರುತ್ತಿದೆ ನಿಮ್ಮ ಬೇಡಿಯಿಂದ ಬಿಡಿಸಿಕೊಳ್ಳಲು. ಎಲ್ಲಿಯವರೆಗೆ ಕಾಡುತ್ತೀರಿ? ಎಲ್ಲಿಯವರೆಗೆ ನಿಮ್ಮ ಬಂಧನದ ಬೇಲಿಯೊಳಗೆ ಬದುಕನ್ನು ಬಂಧಿಸಿಡುತ್ತೀರಿ? ಮೈಕೊಡವಿ ನಿಮ್ಮಿಂದ ಬಿಡಿಸಿಕೊಂಡರೂ ಕೊನೆಗೆ ಸಿಗುವುದೇನು? ಗತಿಸಿಹೋದ ಗೆಳೆಯರ, ಮುರಿದುಹೋದ ಸಂಬಂಧಗಳ, ಕಳೆದು ಹೋದ ವಿಶ್ವಾಸದ, ನಶಿಸಿ ಹೋದ ನಂಬಿಕೆಯ, ವ್ಯರ್ಥವಾದ ಸಮಯದ ಕುರಿತಾದ ಒಂದು ನಿಡಿದಾದ ಉಸಿರು, ಕೊನೆಯದೇನೋ ಎಂಬಂತೆ ಕಣ್ಣಂಚಿನಲ್ಲಿ ಕೂತಿರುವ ಆ ನೀರ ಬಿಂದು... ...

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲ್ಲಿ ಇರಿಯದಿರು ಓ! ಚೆಂದ ನೆನಪೇ

ಹೊಸ ಕನಸುಗಳನ್ನು ಹೆಣೆಯಲು ಹವಣಿಸುತ್ತಿರುವಾಗ, ಹಳೆಯ ಛಿದ್ರಗೊಂಡ ಕನಸುಗಳ ಗೋರಿಯಿಂದ ಭಯವನ್ನೆತ್ತಿ ತರುತ್ತೀರಿ. ಹೊಸ ಗುರಿಯ ಹೊಸೆಯುತ್ತಿರಲು, ಹಿಂದೊಮ್ಮೆ ಗುರಿ ತಲುಪಿದ ಸಂಭ್ರಮದಲ್ಲಿ ಬುಡವೇ ಕಳಚಿಬಿದ್ದ ಅನುಭವಗಳ ಹೊತ್ತು ತರುತ್ತೀರಿ. ಕನಸುಗಳಿಲ್ಲದೆ ನಿದ್ದೆ ನಿರ್ವಿಣ್ಣವಾಗಿದೆ. ಗುರಿಯೊಂದು ಕಾಣದೆ ಹಾದಿ ಗೆದ್ದಲು ಹಿಡಿದಿದೆ. ಭವಿಷ್ಯವನ್ನು ನಿರ್ಧರಿಸಲಾಗದೆ, ಗತವನ್ನು ಬದಲಿಸಲಾಗದೆ ಜೀಕುತ್ತಿರುವ ಜೀವನ ಜಡ್ಡುಹಿಡಿದಿದೆ. ಬದುಕು ನಿಮ್ಮ ಸುಳಿಯಲ್ಲೇ ಸುತ್ತಿ ಸುತ್ತಿ ಸ್ಮಶಾನ ಸೇರುವ ಮೊದಲು ಅದನ್ನು ಮುಕ್ತಗೊಳಿಸಿ. ಬಾಳು ಪುನರುಜ್ಜೀವನಗೊಳ್ಳಲಿ ನವಚೈತನ್ಯದೊಂದಿಗೆ, ಸಾಗಲಿ ಹೊಸದಿಗಂತದೆಡೆಗೆ....

[ಕವನ: ಡಾ.ನಿಸಾರ್ ಅಹಮದ್]
[ಚಿತ್ರ: ಪಾಲಚಂದ್ರ]
[ಹಾಡನ್ನು ಇಲ್ಲಿ ಕೇಳಿ]