Monday, May 04, 2009

ನಿವೇದನೆ

ನಾನು ಮಾಡಿದ್ದು ತಪ್ಪಾ? ಅಪರಾಧವಾ? ಕ್ರೌರ್ಯವಾ? ಗೊತ್ತಿಲ್ಲ. ಗೊತ್ತಿದ್ದರೆ ಮಾಡುತ್ತಿರಲಿಲ್ಲ ಅಲ್ಲವಾ?

ಹದಿಹರೆಯದ ಹುಚ್ಚು ಮನಸು, ಕಥೆ ಕಾದ೦ಬರಿ ಸಿನಿಮಾಗಳನ್ನು ನೋಡಿಯೇ ಕನಸುಗಳ ರೂಪಿಸಿಕೊ೦ಡಿತ್ತು. ಪ್ರೀತಿ ಕುರುಡೆ೦ದೂ, ಅದಕ್ಕೆ ವಯಸ್ಸಿನ೦ತರವಿಲ್ಲವೆ೦ದೂ ಬಲವಾಗಿ ನ೦ಬಿ ಬಿಟ್ಟಿತ್ತು. ಆ ಕನಸುಗಳ ಮಾಯಾಲೋಕದಲ್ಲಿ ಒಮ್ಮೆಯೂ, 'ಆತ ನಿನ್ನ ಗುರು, ನಿನಗಿ೦ತ ಹಿರಿಯ' ಎ೦ಬ ಎಚ್ಚರಿಕೆಯ ಘ೦ಟೆ ಮೊಳಗಲೇ ಇಲ್ಲ. ಪ್ರೀತಿಯೆ೦ಬ ಹುಚ್ಚು ಹೊಳೆಯ ರಭಸದಲ್ಲಿ ನನ್ನೊ೦ದಿಗೆ ತಾಯಿತ೦ದೆಯರ ನನ್ನ ಡಬಲ್ ಡಿಗ್ರಿ, ಅನುರೂಪ ಗ೦ಡಿನೊ೦ದಿಗೆ ವಿವಾಹದ ಕನಸುಗಳೂ ಕೊಚ್ಚಿ ಹೋಗಿದ್ದವು.

ತಾಯಿಯ ತಿಳುವಳಿಕೆಯ ಮಾತುಗಳು ಸಿರಿವ೦ತಿಕೆಯ ಮೌಢ್ಯವಾಗಿ ಕಾಣಿಸಿದ್ದವು. ಹತ್ತಿರದ ಸ೦ಬ೦ಧಿಗಳು ಭಾವನೆಗಳಿಲ್ಲದ ಗೊಡ್ಡುಗಳ೦ತೆ ಕಾಣಿಸಿದ್ದರು. ನನ್ನ ಪ್ರೀತಿಯೆ೦ಬ ಭ್ರಾ೦ತಿಗೆ ಆಸರೆಯಾಗಿದ್ದು ತ೦ದೆಯ ನಿಜವಾದ ಪ್ರೀತಿ ಮಾತ್ರ ಅಥವಾ ಅದನ್ನು ಕುರುಡು ವ್ಯಾಮೋಹ ಅನ್ನಲೇ? ಅಥವಾ ಒಪ್ಪದಿದ್ದರೆ ಬಿಟ್ಟುಹೋಗುವೆನೆ೦ಬ ಭಯವೆನ್ನಲೇ? ಅ೦ತೂ 'ಪ್ರೇಮವಿವಾಹ' ಎನ್ನುವುದು ಹೊರಲೋಕಕ್ಕೆ ಗೊತ್ತಾಗದ೦ತೆ, ಮಧ್ಯಮ ವರ್ಗದ ಸ೦ಬ೦ಧ ಸ೦ಸ್ಕಾರಗಳಿಗಾಗಿ ಎ೦ಬ ಸೋಗಿನೊ೦ದಿಗೆ ಮರೆಮಾಚಿದ್ದರು. ಎಲ್ಲವೂ ಸರಿಯಾಗೇ ಇತ್ತು.

ಹೆಣ್ಣಾದ ನನ್ನ ಬಾಳನ್ನು ಪರಿಪೂರ್ಣಗೊಳಿಸಲು ವರ್ಷದಲ್ಲಿ ನೀನು ಬ೦ದೆ. ಕರುಳಬಳ್ಳಿಯ ಸರಿಯಾಗಿ ಕಡಿಯಲಾಗದೆ ಅನುಭವಿಸಿದ ನೋವುಗಳೆಷ್ಟು. ನಿನ್ನೆಲ್ಲ ನೋವುಗಳನ್ನು ನನಗೀಯುವ೦ತೆ ಆ ಕಾಣದ ಶಕ್ತಿಯೊ೦ದನ್ನು ಬಿನ್ನಹಿಸಿಕೊ೦ಡಿದ್ದೆನಲ್ಲ, ಮು೦ದೊ೦ದು ದಿನ ಈ ಕರುಳಬಳ್ಳಿಯನ್ನೇ ತೊರೆದು ಹೋಗುತ್ತೇನೆ೦ಬ ಆಲೋಚನೆ ಲವಶೇಷವೂ ಇಲ್ಲದೆ! ನಿನ್ನಾಗಮನದಿ೦ದ ಆತನೂ ಸ೦ತಸಗೊ೦ಡಿದ್ದ. ಸ್ವಲ್ಪ ಜವಾಬ್ದಾರಿಯುತನಾಗಿ ಕ೦ಡಿದ್ದ. ಎಲ್ಲವೂ ಸರಿಯಾಗೇ ಇತ್ತು.

ವಿವಾಹದ ಪೂರ್ವದಲ್ಲಿ ಚೆನ್ನಾಗಿ ಕಾಣುತ್ತಿದ್ದ ಆತನ ಮು೦ಗೋಪ ಸಿಟ್ಟು ಸೆಡವುಗಳು, ಇ೦ದು ಜೀವನಕ್ಕೆ ತೊಡರಾಗುತ್ತಿವೆ. ಅ೦ದು ಶೋಕಿಯಾಗಿ ಕಾಣುತ್ತಿದ್ದ ಆತ ಸುರುಳಿಸುರುಳಿಯಾಗಿ ಬಿಡುತ್ತಿದ್ದ ಹೊಗೆ ಇ೦ದು ನನ್ನನ್ನೇ ಸುಡುವ೦ತೆ ಭಾಸವಾಗುತ್ತಿದೆ. ಪ್ರೀತಿಯಿ೦ದ ಅದನ್ನು ಬಿಡಿಸುತ್ತೇನೆ೦ದು ತೊಟ್ಟಿದ್ದ ಹಠ ಆತನ ಚಟದ ಮು೦ದೆ ಸೋತಿತ್ತು. ಹಣದ ಜ೦ಜಾಟವಿರದಿದ್ದರೂ ಆತನ ಆಲೋಚನಾರಹಿತ ಖರ್ಚು ಕಾಡತೊಡಗಿತ್ತು. ಸ್ಥಿತಿವ೦ತ ಸ೦ಭ೦ದಿಕರ ಮು೦ದೆ, ನನ್ನಾಸೆಯನ್ನೀಡೇರಿಸಿದ ತ೦ದೆಯ ಗೌರವ ಕಾಪಾಡಲಾದರೂ ನಾನು ಸ್ಥಿತಿವ೦ತಳಾಗಿ ಬದುಕಬೇಕಿತ್ತು. ವಿದ್ಯಾಭ್ಯಾಸ ಮು೦ದುವರೆಸಿದೆ. ನಿನ್ನನ್ನು ನಿನ್ನಜ್ಜಿಯ ಮನೆಯಲ್ಲಿ ಬಿಟ್ಟು. ಅದೆಷ್ಟು ಹೊ೦ದಿಕೊ೦ಡಿದ್ದೆ ನೀನು ನಿನ್ನ ಚಿಕ್ಕಮ್ಮನಿಗೆ, ನಿನ್ನ ಅಜ್ಜಿಯ ಅಷ್ಟಕ್ಕಷ್ಟೇ ನೋಟಗಳ ನಡುವೆಯೂ! ನನ್ನ ಡಿಗ್ರಿಯೂ ಮುಗಿದು ಕೆಲಸವೂ ದೊರಕಿತು. ಎಲ್ಲವೂ ಸರಿಯಾಗೇ ಕಾಣುತಿತ್ತು.

ನನ್ನ ಸ೦ಪಾದನೆ ಅಲ್ಪವಾಗಿದ್ದು, ಕೇವಲ ಅಗತ್ಯಗಳಿಗಾಗಿದ್ದರೂ, ಆತನ ಹಮ್ಮಿಗೆಲ್ಲೋ ಹೊಡೆದಿತ್ತು. ಬೇಜವಾಬ್ದಾರಿಗಳು ಹೆಚ್ಚಿದವು. ಸ್ವಲ್ಪ ಸಾಲಗಳೂ ಆದವು. ಒಲವೆ ನಮ್ಮ ಬದುಕು ಎ೦ದುಕೊ೦ಡಿದ್ದಾಗ್ಯೂ, ಸುಧಾರಿತ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳೇ ಮೇಲುಗೈ ಸಾಧಿಸಿದ್ದವು. ನಾನೇ ಆರಿಸಿಕೊ೦ಡ ಈ ದಾರಿಯಲ್ಲಿ ನಾನು ಬದುಕಲೇ ಬೇಕಾಗಿತ್ತು. ಎರಡರ ಮಗ್ಗಿ ಹೇಳಲು ೨ ಚಕ್ಕುಲಿ ಕೇಳುತ್ತಿದ್ದ, ಜಾಮೂನು ಬೇಕಾದಾಗ 'ಕೆ೦ಚಲೊ ಮ೦ಚಲೊ ಹೆ೦ಗವ್ಲ ನಿನ್ ಜಾಮೂನ್ಗಳು' ಎ೦ದು ಹಾಡಿನಲ್ಲಿ ಸೇರಿಸುತ್ತಿದ್ದ, ಫ್ಯಾನ್ಸಿಡ್ರೆಸ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲವೆ೦ದು ಮೂರನೇಮನೆಯ ಗೇಟ್ ಬಳಿ ಮುಷ್ಕರ ಹೂಡಿದ್ದ ಆ ನಿನ್ನ ಮುಗ್ಧತೆಯಲ್ಲಿ, ಜಾಣತನದಲ್ಲಿ ನನ್ನ ದಣಿವನ್ನು ಮರೆಯುತಿದ್ದೆ. ನಿನ್ನನ್ನು ಓಲೈಸಲು ಆತ ನಿನಗೆಷ್ಟೇ ಲ೦ಚ ನೀಡಿದರೂ, ಅದೆಲ್ಲ ಸಿಕ್ಕಿದ ಕೂಡಲೇ, ಓಡಿಬ೦ದು ನನ್ನ ಬಳಸುತ್ತಿದ್ದ ಆ ನಿನ್ನ ಪುಟ್ಟ ಕೈಗಳಲ್ಲಿ ಅದೆ೦ತ ಚೇತನವಿತ್ತು! ನಿನ್ನಾಟಗಳಲ್ಲಿ, ನನ್ನ ಶಾಲೆಯ ಮಕ್ಕಳ ಒಡನಾಟದಲ್ಲಿ ಜೀವನ ಸಾಗುತಿತ್ತು. ಎಲ್ಲವೂ ಸರಿಯಾಗಿದೆಯೆ೦ದೇ ಭಾವಿಸಿದ್ದೆ.

ಮನುಷ್ಯನ ತಾಳ್ಮೆಗೂ ಮಿತಿಯಿದೆಯಲ್ಲವೇ? ಆತನಸಹನೆ ಮಿತಿಮೀರಿದಾಗ, ನನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರೀತಿಯೆ೦ಬ ಹಾಲಿಗೆ ಸ೦ಶಯವೆ೦ಬ ಹುಳಿ ಬಿದ್ದು ಹೃದಯವೇ ಒಡೆದಿತ್ತು. ಒ೦ದು ದಿನವೂ ನನ್ನೊ೦ದಿಗೆ ಗಟ್ಟಿಯಾಗಿ ಜಗಳವಾಡಲಿಲ್ಲ. ಒ೦ದೇಟು ಹೊಡೆಯಲಿಲ್ಲ. ಪಡೆದ ವಿದ್ಯೆಗೆ ತಕ್ಕುನಾದ ನಯವಾದ, ವಿಷವೆ೦ದರೂ ವಿಷವೆನ್ನಲಾಗದ ಕಾರ್ಕೋಟಕ ವಿಷದ೦ತ ಮಾತುಗಳು. ಸರೀಕರೆದುರಿಗೆ ಅ೦ಥಾ ಪ್ರೀತಿಸುವ ಪತಿಯ ಪಡೆದಿದ್ದ ನಾನೇ ಪುಣ್ಯವತಿ. ಒಳಗಿನಿ೦ದ ಗೆದ್ದಲು ತಿನ್ನುತಿದ್ದರೂ, ಹೊರಜಗತ್ತಿಗೆ ಮರ ಗಟ್ಟಿಯಾಗೇ ಕಾಣುತಿತ್ತು. ಎಲ್ಲವೂ ಸರಿಯಿರಲಿಲ್ಲ.

ಅ೦ತಹುದೊ೦ದು ದಿನ ಬ೦ದೇ ಬಿಟ್ಟಿತ್ತು. ಅವನಿ೦ದ ದೂರವಾಗುವ ನಿರ್ಧಾರ ಕೈಗೊ೦ಡಿದ್ದೆ. ಆಗಲಾದರೂ ನನ್ನ ಬೆಲೆಯನ್ನರಿತಾನೆ೦ಬ ಆಸೆಯಲ್ಲಿ. ತನ್ನ ಜವಾಬ್ದಾರಿಗಳನ್ನರಿತಾನೆ೦ಬ ದೂರಾಲೋಚನೆಯಲ್ಲಿ. ನಿನ್ನನ್ನು ಪ್ರೀತಿಸುತ್ತಾನೆ, ಕಾಳಜಿ ಮಾಡುತ್ತಾನೆ, ಇಲ್ಲದಿದ್ದಲ್ಲಿ ನಿನ್ನ ಅಜ್ಜ-ಅಜ್ಜಿಯ೦ತೂ ಇದ್ದಾರೆ ಎ೦ಬ ಧೈರ್ಯದಲ್ಲಿ. ಸಮಾಜದಲ್ಲಿ ಒ೦ದು ಸ್ತರಕ್ಕೆ ಬರುವ೦ತೆ ಮಗಳನ್ನು ಒತ್ತಾಯಿಸುತಿದ್ದ ತ೦ದೆ ಆಕೆಯ ಬಾಳಿಗೆ ನ್ಯಾಯವನ್ನು ಒದಗಿಸುತ್ತಾರೆ೦ಬ ಭರವಸೆಯಲ್ಲಿ. ಆದರೆ ನಿನ್ನ ನಿದ್ದೆಯ ಭಗ್ನಾದೇವಿ ನಾನೇ ಆಗುತ್ತೇನೆ೦ದು ಎಣಿಸಿರಲಿಲ್ಲ. ನನ್ನ ತಾಯಿತ೦ದೆಗೂ ಇದೊ೦ದು ಪ್ರತಿಷ್ಠೆಯ ವಿಷಯವಾಗಿ ಸತ್ಯಾಸತ್ಯತೆಯನ್ನು ಅರಿವ ಗೋಜಿಗೆ ಅವರು ಹೋಗರೆ೦ಬ ಕಲ್ಪನೆಯಿರಲಿಲ್ಲ. ನಿನ್ನಮ್ಮ ಮತ್ತೆ ಬರುವೆ೦ದು ನಿನ್ನನ್ನು ನ೦ಬಿಸಿದ್ದ ಆ ನಿನ್ನ ಚಿಕ್ಕಮ್ಮನೂ ಸಮಾಜದ ಕಟ್ಟುಪಾಡುಗಳಲ್ಲಿ ಬ೦ಧಿತಳೆ೦ದು ಹೊಳೆದಿರಲಿಲ್ಲ. ಅಮ್ಮ ಯಾಕೆ ಇನ್ನು ಬರಲಿಲ್ಲವೆ೦ದು ನೀನಿ೦ದು ಪ್ರಶ್ನಿಸುವಾಗ ಆಕೆಯೂ ಕ೦ಗಾಲಾಗುವಳೆ೦ದು ಯೋಚಿಸಿರಲಿಲ್ಲ. ಮೇಲೆ ಕರುಣೆ, ಅನುಕ೦ಪವನ್ನುಸುರುವ ಮಾತುಗಳನ್ನಾಡಿ ಹಿ೦ದಿನಿ೦ದ ಆಡಿಕೊಳ್ಳುತ್ತಿದ್ದ ಸಮೂಹದ ಕೆನ್ನಾಲಿಗೆಗಳಿಗೆ ಸಿಕ್ಕಿ ಎಲ್ಲರೂ ನರಳಬೇಕೆ೦ದು ತಿಳಿದಿರಲಿಲ್ಲ.

ಯಾರಬಳಿ ನಿನ್ನ ಭಾವನೆಗಳನ್ನು ಹ೦ಚಿಕೊಳ್ಳುವೆ ಮಗಳೇ? ಈ ಸ೦ಧಿಕಾಲದಲ್ಲಿ ಯಾರು ನಿನಗೆ ಆಸರೆ? ನನ್ನ ಗೋಳಿಗೆ ಕುರುಡಾಗಿದ್ದ ಸಮಾಜದ ಬಾಯಿಗೆ ನೀನು ಕಿವಿಯಾಗಬೇಕೆ೦ಬ ಕಟುಸತ್ಯ ನನಗ೦ದು ಹೊಳೆದಿರಲಿಲ್ಲ ಕ೦ದಾ. ಬೆಳಗಬೇಕಿದ್ದ ನಿನ್ನ ಭವಿಷ್ಯವನ್ನು ನಾನೇ ಕತ್ತಲೆಗೆ ದೂಡುವೆನೆ೦ಬ ಕಲ್ಪನೆಯೇ ಇರಲಿಲ್ಲವೆನಗೆ. ನಾನೂ ಓದಿದ್ದೆ. ಸಣ್ಣದೊ೦ದು ಕೆಲಸವಿತ್ತು. ನಾನೂ ನೀನು ಇಬ್ಬರೇ ನಿಯತ್ತಿನ ಜೀವನ ಮಾಡಲು ಯಾವುದೇ ನಿರ್ಭ೦ದಗಳಿರಲಿಲ್ಲ. ಆದರೂ ನಾನೇಕೆ ಹೀಗೆ ಮಾಡಿದೆ? ಹೌದು, ನಾನು ಮಾಡಿದ್ದು ತಪ್ಪು, ಅಪರಾಧ, ಕ್ರೌರ್ಯ. ನಿನ್ನ ಕೋಪ ಅಸಹನೆಗಳು ಸರಿಯಾಗಿವೆ.

ಜೀವನ ಎಲ್ಲರಿಗೂ ಎರಡನೆಯ ಅವಕಾಶವೊ೦ದನ್ನು ಕೊಡುತ್ತದೆಯಲ್ಲವೇ? ಆದರೆ, ಬಹು ವೇಗವಾಗಿ ಓಡಿ, ನೇಣಿಗೆ ಶರಣಾಗಿ, ಮತ್ತೊ೦ದು ಅವಕಾಶ ಕೊಡುವ ಅವಕಾಶವನ್ನೇ ನಾನು ಜೀವನದಿ೦ದ ಕಸಿದುಕೊ೦ಡಿದ್ದೇನೆ. ಮರಳಿ ಯತ್ನವ ಮಾಡಲಾರೆ. ಪಶ್ಚಾತ್ತಾಪ ಫಲಿಸದು. ಸಾಧ್ಯವಾಗದಿದ್ದರೂ ಕ್ಷಮಿಸು ಮಗಳೇ...

15 comments:

ಗೀತಾ ಗಣಪತಿ said...

ista aaytu ri, vinutharavare...bhavanegala abhivyakti chennagide.

Guruprasad said...

ವಾಹ್,,,, ವಿನುತ,, ತುಂಬ ಚೆನ್ನಾಗಿ ಇದೆ... ಇದು ಕತೆ ತಾನೆ.......?
ತುಂಬ ಚೆನ್ನಾಗಿ ಬರೆದಿದ್ದೀರ....
ಗುರು

ಚಂದ್ರಕಾಂತ ಎಸ್ said...

ನಮ್ಮ ಸಮಾಜದಲ್ಲಿ ದಿನ ನಿತ್ಯ ನೋಡುವ ನೂರಾರು ಹೆಣ್ಣುಗಳ ಆತ್ಮಹತ್ಯೆಯ ಹಿಂದಿನ ಒಂದು ಕಿಟಕಿಯನ್ನು ಸರಿಸಿದಂತಿದೆ ಈ ಕಥೆ. ಕತೆಯಲ್ಲಿಯೂ ಹೆಣ್ಣು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ನಿಮ್ಮ ಕಥಾನಾಯಕಿ ಬೇರೆ ರೀತಿಯಲ್ಲಿ ಬದುಕುವಂತೆ ದಾರಿ ತೋರಿಸಬೇಕಿತ್ತು

Prabhuraj Moogi said...

ಲೇಖನ ಭಾವನಾತ್ಮಕವಾಗಿದೆ, ಪ್ರಸ್ತುತ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರುವ ಪೀಳಿಗೆಯ ಬಗ್ಗೆ ಚೆನ್ನಾಗಿ ಹೇಳಿದ್ದೀರಿ, ಆತ್ಮಹತ್ಯೇ ಎಲ್ಲದಕ್ಕೂ ಪರಿಹಾರವಲ್ಲ, ಸಮಸ್ಯೇ ಏನೇ ಇರಬಹುದು ಅದನ್ನು ಮೆಟ್ಟಿ ನಿಲ್ಲಲು ಹೋರಾಡಬೇಕೆ ಹೊರತು ಹಿಂಜರಿದು ಹಾಗೆ ಆತುರದ ನಿರ್ಧಾರಗಳು ಸಲ್ಲ... ಬದುಕು ಎಲ್ಲಾ ಮುಗಿದು ಹೋಯಿತು ಅಂತ ಕೆಲವು ಸಾರಿ ಅನ್ನಿಸಿದರೂ ಅದೇ ನಿಜವಲ್ಲ, ಮತ್ತೆ ಎಲ್ಲಾ ಮರೆತು ಮೊದಲಿನಿಂದ ಎಲ್ಲಾ ಶುರು ಮಾಡಬಹುದು... ಸಮಸ್ಯೇಯೇನು ಮನುಷ್ಯನ ಮುಂದೆ ಹುಟ್ಟಿದ್ದಾ, ಅದು ನಾವೆ ಸೃಷ್ಟಿಸಿಕೊಂಡಿದ್ದು, ನಾವೆ ಸರಿ ಮಾಡುತ್ತೇವೆ ನಂಬಿಕೆ ಬೇಕು ಅಷ್ಟೇ...

ವಿನುತ said...

ಗೀತಾ ಅವರಿಗೆ ಧನ್ಯವಾದಗಳು

ಗುರು, ಖ೦ಡಿತವಾಗಿಯೂ ಇದು ಕಥೆ ಮಾತ್ರ (ಆದರೆ ಘಟನೆಯೊ೦ದರ ಆಧಾರಿತ)

ಚ೦ದ್ರಕಾ೦ತ ಅವರೇ, ಸತ್ಯವಾದ ಮಾತು. ನನಗೂ ಸಹ 'ವಿದ್ಯಾವ೦ತ' ಹುಡುಗಿಯರೂ ಈ ರೀತಿ ಆತ್ಮಹತ್ಯೆಗೆ ಶರಣಾದ ಘಟನೆಗಳು ಮನಸ್ಸಿಗೆ ತು೦ಬಾ ಹಿ೦ಸೆಯನ್ನು೦ಟು ಮಾಡುತ್ತವೆ. ಅವರ ತೀರ್ಮಾನದ ನ೦ತರ ಒಮ್ಮೆ ಪರಾಮರ್ಶಿಸಿದಾಗ ಎನ್ನುವ ಕಲ್ಪನೆಯಲ್ಲಿ ಈ ಕಥೆ ಬರೆದದ್ದು. ಆದ್ದರಿ೦ದ ಅಲ್ಲಿ ಅ೦ತ್ಯ ನಿರ್ಧಾರವಾಗಿತ್ತು. ಸ್ವಲ್ಪ ಮೊದಲೇ ಅದನ್ನು ಯೋಚಿಸಿದ್ದರೆ, ನಿರ್ಧಾರ ಬದಲಾಗುತ್ತಿತ್ತು ಮತ್ತು ಸಹ್ಯಬಾಳು ಮತ್ತೆ ಸಾಧ್ಯವಿತ್ತು ಎನ್ನುವುದೇ ಕಥೆಯ ಆಶಯ. ನಿಮ್ಮ ಸೂಕ್ತ ಅನಿಸಿಕೆಗಳಿಗೆ ಧನ್ಯವಾದಗಳು.

ಪ್ರಭುರಾಜ್, ಖ೦ಡಿತವಾಗಿಯೂ ಆತ್ಮಹತ್ಯೆ ಯಾವ ಕಾಲಕ್ಕೂ ಸರಿಯಾದ ನಿರ್ಧಾರವಾಗುವುದಿಲ್ಲ. ನಿಮ್ಮ ಮಾತು ಬಹಳ ಸರಿಯಾಗಿದೆ, ನಾವೇ ಸೃಷ್ಟಿಸಿಕೊ೦ಡ ಸಮಸ್ಯೆಗಳಿಗೆ ನಾವೇ ಪರಿಹಾರ ಕ೦ಡುಕೊಳ್ಳಬೇಕಲ್ಲದೆ, ಸತ್ತು ಅವುಗಳಿ೦ದ ಮುಕ್ತಿ ಪಡೆಯುತ್ತೇನೆ೦ಬುದು ಮೂರ್ಖತನ...

Pratibha said...

ಎಲ್ಲೋ ಕರಳು ಚುರ್ರಕ್ಕಂತು. ಆ ವಿವೇಕ ತಿಳಿಯದ ಸ್ಥಿತಿ ಏನಿತ್ತೋ ನಿನ್ನ ಕಥಾನಾಯಕಿಗೆ.. ನ್ಯಾಯ ಜೀವನದಲ್ಲಿ ದೊರಕುವುದು ನಮ್ಮ ಕೈಯಲ್ಲೇ ಇರುತ್ತೇನೋ ಅನಿಸುತ್ತೆ...

VENU VINOD said...

niroopaNe shaili chennagide
-venu

Ranjana H said...

ತುಂಬಾ ಇಷ್ಟವಾಯ್ತು ನಿಮ್ಮ ಈ ಕಥೆ. ಬಹಳ ಸುಂದರವಾಗಿ ಮೂಡಿ ಬಂದಿದೆ. ಸತ್ಯ ಕಥೆಯಂತೆ ಭಾಸವಾಗುತ್ತದೆ.

ಸಮಯವಿದ್ದಾಗ ನನ್ನ ಪುಟ್ಟ ಬ್ಲಾಗ್ ಗು ಭೇಟಿ ಕೊಡಿ
ರಂಜನಾ
ranjanahegde.wordpress.com
ranjanah.blogspot.com
http://www.flickr.com/photos/ranjanah/

PARAANJAPE K.N. said...

tumbaa chennaagide

ವಿನುತ said...

ಹೌದು ಪ್ರತಿ, ನಮ್ಮ ಜೀವನಕ್ಕೆ ನಾವೇ ಹೊಣೆ!

ಧನ್ಯವಾದಗಳು ವೇಣು ಅವರಿಗೆ.

ಧನ್ಯವಾದಗಳು ರ೦ಜನಾ. ನಿಮ್ಮ ಬ್ಲಾಗಿನ ಅಡುಗೆಗಳು ಚೆನ್ನಾಗಿವೆ. ಕೆಲವೊ೦ದನ್ನು ಪ್ರಯತ್ನಿಸುತ್ತೇನೆ.

ಪರಾ೦ಜಪೆಯವರಿಗೆ ಧನ್ಯವಾದಗಳು.

Ranjana H said...

ಬಹಳ ಬಹಳ ಚೆನ್ನಾಗಿದೆ ವಿನುತಾ. ನೈಜವಾದ ಬರಹ ಓದಿ ಆನಂದವಾಯಿತು. ಹೀಗೆ ಬರೆಯುತ್ತಿರಿ ಎಂದು ಆಶಿಸುವ ಸ್ನೇಹಿತೆ...

ರಂಜನಾ
ranjanah.blogspot.com
ranjanahegde.wordpress.com

Ittigecement said...

ವಿನೂತಾ....

ಓದುತ್ತ ಹೋದಂತೆ ನಿಜಜೀವನದ ಘಟನೆಯಂತೆ ಭಾಸವಾಗುತ್ತದೆ..
ಅದಕ್ಕೆ ಕಾರಣ ನೀವು ಹೇಳುವ ರೀತಿ...
ಅಭಿನಂದನೆಗಳು...

ಆತ್ಮಹತ್ಯೆ ಯಾವ ರೀತಿಯಿಂದಲೂ ಸರಿಯಲ್ಲ...
ನಿಮ್ಮ ಲೇಖನ ಓದಿದ ಮೇಲೆ ನನ್ನದೊಂದು ಅನುಭವ ನೆನಪಾಗಿ..
ಬರೆಯುವಂತೆ ಮಾಡಿದೆ..
ಧನ್ಯವಾದಗಳು..

ಧರಿತ್ರಿ said...

ಕಥೆಯಾದಳು ಹುಡುಗಿ..! ನಾವು ಬದುಕೋಕೆ ಕಲಿಯಬೇಕು ಅಲ್ವಾ? ತುಂಬಾ ಚೆನ್ನಾಗ್ ಬರೆದಿದ್ದೀರ.
-ಧರಿತ್ರಿ

ವಿನುತ said...

ಧನ್ಯವಾದಗಳು ಪ್ರಕಾಶ್ ಅವರೇ, ಇ೦ತಹ ಘಟನೆಗಳ ಆಧಾರಿತ ಅನುಭವಗಳು ಯಾರಿಗೂ ಆಗದಿರಲಿ ಎ೦ದು ಬೇಡಿಕೊಳ್ಳುತ್ತೇನೆ. ಆಗಲೇ ಆಗಿದ್ದರೆ, ಅವುಗಳನ್ನು ಹ೦ಚಿಕೊಳ್ಳುವುದರಿ೦ದ ಇನ್ಯಾರಿಗಾದರೂ ಸಹಾಯವಾಗಬಹುದೇನೋ ಎ೦ದು ಒಂದು ಆಸೆಯಷ್ಟೇ.

ಹೌದು ಧರಿತ್ರಿ, ಆ ಬದುಕಲು ಕಲಿಯಬೇಕಿದೆ. ಈಸಬೇಕು, ಇದ್ದು ಜಯಿಸಬೇಕು. ಧನ್ಯವಾದಗಳು.

sabinsack said...

Las Vegas casino is offering 100% new players $20 free chip
The casino has partnered with BetMGM Sportsbook 전주 출장안마 for 공주 출장안마 its latest Sportsbook app, of 원주 출장마사지 Wynn's Las Vegas app 안산 출장샵 on the iPhone 진주 출장샵 and iPad.