Friday, November 06, 2009

ಅರ್ಥ

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ "ಅರ್ಥ". - ಇದು "ಅರ್ಥ" ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ - ೨೦೦೯) ನೀಡಿರುವ ಒಕ್ಕಣೆ.

"ಅರ್ಥ" - ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಚಿತ್ರ ರೂಪಿಸಿರುವ ಎಳೆಯ ಹಿನ್ನೆಲೆಯಲ್ಲಿ ಇದರ ಸಮರ್ಥನೆ ಸರಿಯಾಗಿ ಮೂಡಿಬಂದಿಲ್ಲವೆನ್ನಬಹುದು. ಹೊರಗಡೆ ತನ್ನ ಸ್ನೇಹಿತರೊಂದಿಗೆ, ವೇಶ್ಯೆಯಾದರೂ ರಾಣಿಯಮ್ಮ (ಅರುಂಧತಿ ಜತ್ಕರ್) ನೊಡನೆ ಶುದ್ಧ ಸ್ನೇಹದಿಂದಿರುವ ಸೀನಪ್ಪ, ಮನೆಗೆ ಬಂದೊಡನೆ ಉಗ್ರಪ್ಪನಾಗುತ್ತಾನೆ. ಏನೋ ನೆವ ತೆಗೆದು ರಂಪ ಮಾಡುತ್ತಾನೆ. ಹೆಂಡತಿಯನ್ನು ಹೊಡೆದು ಹಿಂಸಿಸುತ್ತಾನೆ. ಮಕ್ಕಳು ಮೂಕಪ್ರೇಕ್ಷಕರಾಗುತ್ತಾರೆ (ಸೀನಪ್ಪನ ಮಗ ಶ್ರೀಕಾಂತನ ದು:ಖ, ಅಸಹಾಯಕತೆ, ಹಾಗೂ ಗೊಂದಲಗಳ ನಿರ್ಭಾವುಕ ಅಭಿನಯ ಒಂದು ಕ್ಯಾಚ್). ಇಲ್ಲಿ ಆರ್ಥಿಕ ಬಿಕ್ಕಟ್ಟಿಗಿಂತಲೂ ಸೀನಪ್ಪನ ಮನಸ್ಥಿತಿಯೇ ಸಮಸ್ಯೆಗೆ ಕಾರಣವೇನೋ ಅನಿಸುತ್ತದೆ (ಮತ್ತೊಮ್ಮೆ ಬೀchi ಯವರ ಹುಚ್ಚು-ಹುರುಳಿನ ಹೆಂಡತಿಯನ್ನೇಕೆ ಹೊಡೆಯಬೇಕು? ನೆನಪಾಗುತ್ತದೆ). ನಾಲ್ಕು ಗೋಡೆಗಳ ನಡುವೆ ಇರುವ ಹೆಣ್ಣು, ಹೊರಗೆ ಹೋಗಿ ದುಡಿದುಕೊಂಡು ಬರುವ ಗಂಡನನ್ನೇನು ಪ್ರಶ್ನಿಸುವುದು ಎನ್ನುವ ಹಮ್ಮಿರಬಹುದು. ಅಷ್ಟೆಲ್ಲ ಹಿಂಸೆಯನ್ನು ಅನುಭವಿಸಿದ್ಯಾಗ್ಯೂ, ಮಗಳು "ಅಪ್ಪನ ಜೊತೆ ಟೂ ಬಿಡಮ್ಮ" ಎಂದು ಮುಗ್ಧವಾಗಿ ನುಡಿದಾಗ, "ನನ್ನ ಗಂಡನೊಡನೆಯೇ ಟೂ ಬಿಡಲು ಹೇಳುತ್ತೀಯೇನೆ?" ಎಂದು ಮಗಳಿಗೇ ಹೊಡೆಯುತ್ತಾಳೆ ಸೀನಪ್ಪನ ಹೆಂಡತಿ!! ಎಲ್ಲಿಯವರೆಗೂ, ಗಂಡನ ಎಲ್ಲ ಹಸಿವುಗಳನ್ನು ತೀರಿಸುವುದೇ ತಮ್ಮ ಜೀವನದ ಪರಮೋಚ್ಛ ಕರ್ತವ್ಯವೆಂದು ತಿಳಿದಿರುವ ಹೆಂಗಸರಿರುತ್ತಾರೋ, ಹೆಣ್ಣು ಸಹನಾಮೂರ್ತಿ, ಕ್ಷಮಯಾಧರಿತ್ರೀ ಎಲ್ಲವನ್ನೂ ಸೈರಿಸಿಕೊಂಡು ಹೋಗಬೇಕು ಆಗಲೇ ಸಂಸಾರ ಉಧ್ಧಾರವಾಗುವುದು ಎಂದು ಕಿವಿಯೂದುವವರು ಇರುತ್ತಾರೋ, ಅಲ್ಲಿಯವರೆಗೂ ಈ ನರಕದಿಂದವರಿಗೆ ಬಿಡುಗಡೆಯಿಲ್ಲ.

ಬಾಡಿಗೆ ಆಟೋ ಓಡಿಸುವ ದೈನಂದಿನ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಂತ ಆಟೋದ ಕಡೆ ಸೀನಪ್ಪನ ಮನಸ್ಸು ವಾಲುತ್ತದೆ (ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರೂ ಸ್ವಂತಕ್ಕೊಂದು ಸೂರು ಮಾಡಿಕೊಳ್ಳಲು ಹಪಹಪಿಸುವಂತೆ!). ಶ್ಯೂರಿಟಿ ಇದ್ದರೆ ಮಾತ್ರ ಸಾಲ ನೀಡುವ ಭಾರತೀಯ ಬ್ಯಾಂಕುಗಳ "ಅರ್ಥ" ವ್ಯವಸ್ಥೆ, ಕೊಡಿಸಿದ ಸಾಲದಲ್ಲಿ "ಪರ್ಸೆ೦ಟೇಜ್" ಕೇಳುವ ನಮ್ಮ ಭ್ರಷ್ಟಾಚಾರ ವ್ಯವಸ್ಥೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಅಜ್ಜಿಯ ಹೆಸರಿನಲ್ಲಿರುವ ಮನೆಯನ್ನು ಶ್ಯೂರಿಟಿಗಾಗಿ ನೀಡುವಲ್ಲಿನ ತೊಡಕಿನ ಬಗ್ಗೆ ಮುಂದಾಲೋಚಿಸಿ ಮಾತನಾಡುವ ಪತ್ನಿ ಮತ್ತೊಮ್ಮೆ ದೂಷಣೆಗೊಳಗಾಗುತ್ತಾಳೆ! ಶೇಕಡಾ ೧೪ ರಷ್ಟು ಬಡ್ಡಿ, ಸಾಲ ತೀರುವವರೆಗೆ ಬ್ಯಾಂಕಿನವರ ವಶದಲ್ಲಿಯೇ ಆಟೋ ಎನ್ನುವ ನಿಭಂದನೆಗಳ ನಡುವೆಯೂ, ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ ಎನ್ನುವ ಸಂಗತಿಯೊಂದೇ ಸೀನಪ್ಪನನ್ನು ವಿದೇಶೀ ಬ್ಯಾಂಕಿನ ಸಾಲದ ತೆಕ್ಕೆಗೆ ತಳ್ಳುತ್ತದೆ. "ತಿಮ್ಮಯ್ಯನಿಗೆ ಹಣ ಕಟ್ಟದೆ ಇದ್ರೆ, ಹಣ ಬಿಟ್ಟು ಬರೀ ಆಟೋ ಎತ್ಕೊಂಡು ಹೋಗ್ತಾನ, ಆದ್ರೆ ಈ ಪರದೇಶಿ ಬ್ಯಾಂಕಿನವ್ರು ಆಟೋ ಜೊತಿಗೆ ನಿನ್ನೂ ಎಳ್ಕೊಂಡು ಹೋದ್ರೇನ್ಮಾಡ್ತೀ?" ಎನ್ನುವ ರಾಣಿಯಮ್ಮನ ಮಾತುಗಳು ನಿಜಕ್ಕೂ ಯೋಚನಾರ್ಹವೆನಿಸುತ್ತವೆ. ಲಾಭವಿಲ್ಲದೇ ಯಾರೂ business ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ. ನಮಗೆ ಪುಕ್ಕಟೆಯಾಗಿ ಅಥವಾ ಕಡಿಮೆ ದರಕ್ಕೆ ಕೊಡಲು ಅವರು ಮಾಡುತ್ತಿರುವುದೇನೂ ದಾನವಲ್ಲ, ಸೇವೆಯಲ್ಲ; ವ್ಯಾಪಾರ. ಆದ್ದರಿಂದ ಅವರ "*" ಮಾರ್ಕುಗಳನ್ನು ಸರಿಯಾಗಿ "ಅರ್ಥ" ಮಾಡಿಕೊಂಡು ವ್ಯವಹರಿಸುವುದು ಕ್ಷೇಮ. ಸಾಲ ಕೇಳಲು ಬಂದಾಗ, ಕೊಡಿಸುವವ, ಒಮ್ಮೆ ಕಾರ್ಡ್ಸ್, ಮತ್ತೊಮ್ಮೆ ಚದುರಂಗ ಆಡುತ್ತಿರುವುದು ಮಾರ್ಮಿಕವಾಗಿದೆ.

ಸೀನಪ್ಪ ತನ್ನ ಸ್ನೇಹಿತರ ಜೊತೆಯಲ್ಲಿ "ಬಾರ್" ನಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಿರುವಾಗ "ನಾವು ಇಲ್ಲಿರಬಾರದಾಗಿತ್ತು, ಫಾರಿನ್ ನಲ್ಲಿರಬೇಕಾಗಿತ್ತು. ಆರಾಮಾಗಿರಬಹುದಾಗಿತ್ತು" ಅಂದುಕೊಳ್ಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ "ನಿನ್ನ ಮನೆಯವರ ಜೊತೆ ಫಾರಿನ್ನಾಗೆ ಮಾಡ್ತಾರಂತಲ್ಲ ಹಂಗೆ ವೀಕೆಂಡ್ ಮಾಡು, ನೆಮ್ಮದಿಯಾಗಿರ್ತೀಯ" ಅನ್ನೋ ಸಲಹೆ ಬರುತ್ತದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಮ್ಮ ಜನರಲ್ಲಿ "ಫಾರಿನ್" ಕುರಿತಾಗಿ ಇರುವ ತಪ್ಪು ಅಭಿಪ್ರಾಯಗಳನ್ನು ಕುರಿತು ಅಚ್ಚರಿಯಾಗುತ್ತದೆ! ಅಲ್ಲಿಯೂ ಭಿಕ್ಷುಕರಿದ್ದಾರೆ, ಕಳ್ಳರಿದ್ದಾರೆ, ಕೊಲೆಗಾರರಿದ್ದಾರೆ, ಅಕ್ರಮ ನಿವಾಸಿಗಳಿದ್ದಾರೆ, ವಲಸಿಗರಿದ್ದಾರೆ, ಹುಚ್ಚರಿದ್ದಾರೆ! ವರ್ಣಬೇಧದ ಸಣ್ಣ under current ಇನ್ನೂ ಹರಿಯುತ್ತಿದೆ! ಅಲ್ಲಿಯೂ ವಿವಿಧ ಜಾತಿಗಳಿವೆ, ಅಪ್ಪಟ ಲಂಪಟ "ಧರ್ಮ"ಗುರುಗಳಿದ್ದಾರೆ! ಒಂದು ಜಾತಿಯವರು ಇನ್ನೊಂದು ಜಾತಿಯ ಆರಾಧನಾ ಸ್ಥಳಕ್ಕೆ ಹೋಗುವುದಿಲ್ಲ, ಅದೇನೋ ಅಸಡ್ಡೆ, ಅಗೌರವ! ನಾವೆಲ್ಲ ಒಬಾಮನ ದೀಪಾವಳಿ ನೋಡಿ ಮರುಳಾದದ್ದೇ ಹೆಚ್ಚು! ಅದೇಕೋ ನಮ್ಮ ಮಾಧ್ಯಮಗಳಿಗೆ ನಮ್ಮ ಹುಳುಕುಗಳನ್ನು ವೈಭವೀಕರಿಸುವಲ್ಲಿ ಇರುವ ಉತ್ಸುಕತೆ ಅಲ್ಲಿನ ಮಾಧ್ಯಮಗಳಲ್ಲಿಲ್ಲ. ಅದೇಕೋ ನಮ್ಮ ಜನಕ್ಕೆ ಆದಾಯ ಡಾಲರುಗಳಲ್ಲಿರುವುದು ಕಾಣುತ್ತದೆಯೇ ಹೊರತು ವೆಚ್ಚವೂ ಡಾಲರ್ ಗಳಲ್ಲಿಯೇ ಎನ್ನುವುದು ಕಾಣುವುದಿಲ್ಲ! ಅಲ್ಲಿ ಹೋಗಿ ಪೆಟ್ರೋಲ್ ಬಂಕುಗಳಲ್ಲಿ, ಮಾಲ್ ಗಳ ರೆಸ್ಟ್ ರೂಮ್ ಗಳಲ್ಲಿ ಕ್ಲೀನರ್ ಗಳಾಗಿ ಕೆಲಸಮಾಡಿದರೂ ಸರಿಯೇ, ಫಾರಿನ್ ಕೆಲಸವೇ ಆಗಬೇಕು! ಅದೇ ಕೆಲಸ ಇಲ್ಲಿ ಮಾಡಿದರೆ, dignity of labour! ಅದೇಕೋ ಅಲ್ಲಿನ ಐಷಾರಾಮ ಜೀವನವನ್ನು ನೋಡುವ ನಾವು, ಅಲ್ಲಿನ ಶಿಸ್ತು ಶುಚಿತ್ವವನ್ನು, ಗಂಡ ಹೆಂಡತಿಯನ್ನು ವಿನಾಕಾರಣ ಹೊಡೆಯುವುದಿಲ್ಲ ಎನ್ನುವುದನ್ನು, ದಂಪತಿಗಳು ಮಕ್ಕಳ ಮುಂದೆ ಜಗಳವಾಡುವುದಿಲ್ಲ ಎನ್ನುವುದನ್ನು, ವೃತ್ತಿ-ಸಂಸಾರವನ್ನು ಬೆರೆಸಿ ಕಿಚಡಿಯನ್ನು ಅವರು ಮಾಡುವುದಿಲ್ಲ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ! ಇಷ್ಟೆಲ್ಲದರ ನಡುವೆಯೂ ಮನೆಯವರೊಡನೆ ಸಮಯ ಕಳೆಯಬೇಕೆಂಬುದನ್ನು ಪಾಶ್ಚಿಮಾತ್ಯರ ವೀಕೆಂಡೇ ನಮಗೆ ಕಲಿಸಬೇಕಾಯಿತೇ? ವಿಪರ್ಯಾಸ!!

ಮನೆಯಲ್ಲಿ ದಿನನಿತ್ಯ ನಡೆಯುವ ಪ್ರಹಸನದಿಂದ ದೂರವಾಗಲು, ಜಂಜಡಗಳಿಂದ ಬಿಡಿಸಿಕೊಳ್ಳಲು, ಹೊತ್ತು ಕಳೆಯಲು, ಸೀನಪ್ಪನ ಮಗ ಶ್ರೀಕಾಂತ ಯಾವುದೋ ಮೂಲಭೂತವಾದಿ ಸಂಘಟನೆಗೆ ಸೇರಿರುತ್ತಾನೆ. ಅಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿ ಅಪ್ಪನ ವಿದೇಶಿ ಆಚರಣೆಗಳ ವಿರುಧ್ಧ ಮಾತನಾಡುತ್ತಾನೆ; ರಾಣಿಯಮ್ಮನನ್ನು ಬದಲಾಯಿಸುತ್ತಾನೆ. ಮಹಾನ್ ದೇಶಭಕ್ತ, ಕ್ರಾಂತಿಕಾರಿ ನಾಯಕ, ಸಂಸ್ಕೃತಿಯ ಪರಿಪಾಲಕನಂತೆ ತಂದೆಗೆ ಕಾಣುತ್ತಾನೆ. ಮಗ ಹೇಳಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಮಗ ಏನನ್ನೋ ಮಹತ್ತರವಾದದ್ದನ್ನು ಹೇಳುತ್ತಿದ್ದಾನೆ ಎಂದುಕೊಳ್ಳುವ ಸೀನಪ್ಪನಲ್ಲಿ ನಿಜವಾದ ಅರ್ಥದಲ್ಲಿ ಮುಗ್ಧ ಶ್ರೀಸಾಮಾನ್ಯ ಪ್ರತಿಬಿಂಬಿಸುತ್ತಾನೆ. ಒಂದೊಮ್ಮೆ, ಮಗ ಡ್ರಗ್ಸ್ ಎನ್ನುವ ದುಶ್ಚಟಕ್ಕೆಲ್ಲಿ ಬಲಿಯಾಗುವನೋ ಎಂದು ಕಳವಳಪಟ್ಟು ಅವುಗಳಿಂದ ದೂರವಿರಲು ತಾಕೀತು ಮಾಡುವ ಸೀನಪ್ಪನಿಗೆ, ಈಗ ಮಗನಿಗಂಟಿಕೊಂಡಿರುವ "ಚಟ" ಯಾವುದೇ ಗಾಂಜಾ, ಅಫೀಮಿಗಿಂತಲೂ ಅಪಾಯಕಾರಿ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಆತನನ್ನಷ್ಟೇ ಅಲ್ಲ, ಅನೇಕಾನೇಕ ಅಮಾಯಕರನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು "ಅರ್ಥ"ವಾಗುವುದೇ ಇಲ್ಲ. ಕಾಡುವ ವಿಷಯವೆಂದರೆ, ಯಾವನೋ ತಲೆಮಾಸಿದವನ ಹಳಸಲು ಆದರ್ಶಗಳಿಗೆ, ಕೊಳೆತ ಸಿಧ್ಧಾಂತಗಳಿಗೆ, ಕೆಟ್ಟ ರಾಜಕೀಯಕ್ಕೆ ಇರುವ ಪ್ರಭಾವ, ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುವ ಸಾಮಾನ್ಯರ ಆಲೋಚನೆಗಳಿಗಿಲ್ಲವಲ್ಲ! ಸಾಮಾನ್ಯ ಜನರಲ್ಲಿರುವ ಜಾತಿ ಪಂಗಡಗಳನ್ನು ಮೀರಿದ ಸ್ನೇಹ ಪ್ರೀತ್ಯಾದರಗಳು ಅದೇಕೋ "ಬುಧ್ಧಿವಂತ" ಜನರಲ್ಲಿ ಕಾಣೆಯಾಗಿವೆ! ಇಷ್ಟಾದರೂ ಅಂತದೊಂದು ಪ್ರಭಾವಳಿಗೆ ಬಲಿಯಾಗುವವರು ಸಾಮಾನ್ಯರೇ! ಸ್ವಾತಂತ್ರ್ಯದ ಜೊತೆಜೊತೆಗೆ ಬಂದ ದೇಶವಿಭಜನೆಯ ಗಲಭೆಯಿಂದ ಪ್ರಾರಂಭವಾಗಿ, ಸಿಖ್ ಹತ್ಯಾಕಾಂಡ, ಅಯೋಧ್ಯಾ ವಿವಾದ, ಗೋಧ್ರಾ ಪ್ರಕರಣ, ಈದ್ಗಾ ಪ್ರಕರಣ..... ಇಲ್ಲೆಲ್ಲೂ ಯಾವೊಬ್ಬ ನಾಯಕನ ಒಂದು ಕೂದಲೂ ಕದಲಲಿಲ್ಲ. ಬಲಿಯಾದವರೆಲ್ಲ ಶ್ರೀಸಾಮಾನ್ಯರು! ಇಂತದೊಂದು ಸಂದೇಶ, ಚಿತ್ರದಲ್ಲಿ ಸೀನಪ್ಪನ ಮಗ ಹಾಗೂ ಮುಸ್ಲಿಂ ಸ್ನೇಹಿತ ಕೋಮುಗಲಭೆಯಲ್ಲಿ ಸತ್ತಾಗ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೇಶದ ಅರ್ಥವ್ಯವಸ್ಥೆಗೊಂದು ಹೊಸದಿಕ್ಕನ್ನು ತೋರಿಸಬೇಕಾಗಿರುವ ದೇಶೀಯತೆ ಎನ್ನುವುದು ಮೂಲಭೂತವಾದಿಗಳ ಹಾಗೂ ಜ್ಯಾತ್ಯಾತೀತವಾದಿಗಳ ನಡುವೆ ಅಪಭ್ರಂಶುವಾಗಿ ನಲುಗುತ್ತಿರುವುದು ನಿಜಕ್ಕೂ ದುರಂತ...

ಅರ್ಥಕ್ಕೊಂದು ಹೊಸ ಅರ್ಥ ಕೊಡುವಲ್ಲಿ ಚಿತ್ರ ಸಾರ್ಥಕತೆ ಪಡೆದಿದೆ. ನಡುನಡುವೆ ಬರುವ ವಚನಗಳು, ನಾಗೇಂದ್ರ ಶಾ ರವರ ಚುಟುಕುಗಳು ಸರಿಯಾಗಿ ಕುಟುಕುತ್ತವೆ. ಆ ಪಾತ್ರವಂತೂ ನಿಜಕ್ಕೂ a treat to watch. ಕೊನೆಯಲ್ಲಿ, ಕೋಮುಗಲಭೆಯ ದಳ್ಳುರಿಯಲ್ಲಿ ಸೀನಪ್ಪನ ಆಟೋ, ವಿದೇಶಿ ಬ್ಯಾಂಕಿನ ಎತ್ತರದ ಹೋರ್ಡಿ೦ಗ್ ನ ಕೆಳಗೆ ಹತ್ತಿ ಉರಿಯುತ್ತಿರುತ್ತದೆ. "ಮನೆಯೊಳಗೆ ಕತ್ತಲಾಗಿದೆ ದೀಪ ಹಚ್ರೋ" ಎಂದು ಅಜ್ಜಿ ನುಡಿಯುತ್ತಾರೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?

9 comments:

Ganesh Bhat said...

i like your blog. please visit my blog www.aaptamitra.blogspot.com

ಜಲನಯನ said...

ವಿನುತ, ನಿಜಜೀವನದಲ್ಲಿ ಮಧ್ಯಮ ವರ್ಗ ಬಡುವ ಪಾಡು ನೀವು ಹೇಳಿದ ಆಟೋ ಚಾಲಕನ ಜೀವನದ ಪ್ರತಿರೂಪವೇ...ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ..ಹಣದ ವರ್ಗಾವಣೆ ಮಾಡುವುದು..ಪ್ರತಿಸಲ ಸೋರಿಹೋಗುವುದನ್ನು ಸರಿಪಡಿಸಲು ಹೊಸ ಸಾಲ..ಹೀಗೆ ನಿಲ್ಲದ ಜಂಜಾಟ ಅವನದು...
ಲೇಖನ ಚನ್ನಾಗಿ ಮೂಡಿಬಂದಿದೆ...ಆಫ್ ಬೀಟ್ ಚಿತ್ರಗಳನ್ನು (ಚಿತ್ರೋತ್ಸವದ್ದು) ನೋಡಿದ್ದರೆ..ಅವುಗಳಲ್ಲಿ ನಿಮಗೆ ಮೆಚ್ಚುಗೆಯಾದ ಕಥೆಯ ಬಗ್ಗೆ ತಿಳಿಸಿ..

PARAANJAPE K.N. said...

ಚೆನ್ನಾಗಿದೆ

ಸುಧೀಂದ್ರ said...

ವಿಮರ್ಶೆನ ಚೆನಾಗಿ ಬರೆದಿದ್ದೀರ... ಈ ಸಿನಿಮಾನ ಸುಮಾರು ಈಗೊಂದು ಸ್ವಲ್ಪ ದಿನಗಳ (ಕೆಲವು ತಿಂಗಳ) ಹಿಂದೆ ಸುವರ್ಣ ವಾಹಿನಿಯಲ್ಲಿ ನೋಡಿದ್ದೆ. ಹೆಸರು ಮರೆತಿತ್ತು. ಈಗ ಗೊತ್ತಾಯ್ತ ನಾನು ಅವತ್ತು ನೋಡಿದ್ದು "ಅರ್ಥ" ಸಿನಿಮಾನ ಅಂತ.

ಪ್ರತಿ ಶನಿವಾರ ಬೆಳಿಗ್ಗೆ ಹತ್ತು ಘಂಟೆಗೆ ಸುವರ್ಣ ವಾಹಿನಿಯಲ್ಲಿ ಈ ಥರದ (ಕಲಾತ್ಮಕ) ಚಿತ್ರಗಳನ್ನು ಪ್ರಸಾರ ಮಾಡ್ತಾರೆ.

ಸಾಗರದಾಚೆಯ ಇಂಚರ said...

ವಿನುತ,
ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದಿರಾ,
ವಿವರವಾದ ಬರಹ
,

guruve said...

’ಅರ್ಥ’ದ ವಿಭಿನ್ನ ಅರ್ಥಗೊಳೊಂದಿಗೆ, ನಿಮ್ಮ ಸುದೀರ್ಘ ವಿಮರ್ಶೆಯನ್ನು ಓದಿದಾಗ ಸಿನಿಮಾ ಕಣ್ಮುಂದೆ ಬರುತ್ತದೆ. ನೀವು ಹೆಸರಿಸಿರುವ ಸಾಕಷ್ಟು ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಚಲನಚಿತ್ರದಲ್ಲಾಗಿದೆ..

Prabhuraj Moogi said...

ತಡವಾಗಿ ಬಂದೆ ನಿಮ್ಮ ಬ್ಲಾಗಗೆ, ಅರ್ಥ ಒಳ್ಳೆ ಚಿತ್ರ ಅಂತಾಯಿತು, ರಂಗಾಯಣ ರಘು, ಮತ್ತು ಮೇಘಾ ನಾಡಿಗೇರ್ ಅವರ ಅಭಿನಯ ಅಂದ್ರೆ ನೋಡಲೇಬೇಕು, ಈ ಮೇಘ ಅವರು ಸಾಧನೆ ಅಂತ ಧಾರವಾಹಿಯಲ್ಲಿ ಚಿತ್ತಿ ಅಂತ ಪಾತ್ರ ಮಾಡಿದ್ರು ಬಹಳೆ ಚೆನ್ನಾಗಿತ್ತು(ಧಾರವಾಡದಲ್ಲಿ ಅವರನ್ನೊಮ್ಮೆ ನೋಡಿ ತೆಗೆದುಕೊಂಡಿದ್ದ ಅಟೋಗ್ರಾಫ ಕೂಡ ಇದೆ)... ನನಗಂತೂ ಚಿತ್ರ ನೋಡಲೇ ಬೇಕೆನ್ನಿಸಿದೆ, ಯಾವ ಚಿತ್ರಮಂದಿರದಲ್ಲಿ ಬಂದಿರಲಿಕ್ಕಿಲ್ಲ, ಸೀ.ಡಿ ಸಿಕ್ಕರೆ ನೋಡಬೇಕು(ನಿಮಗೆ ಎಲ್ಲಿಯಾದರೂ ಸಿಗುವ ಬಗ್ಗೆ ಗೊತ್ತಿದ್ದರೆ ಹೇಳಿ).
ಈ ಅರ್ಥವ್ಯವಸ್ಥೆಯಂತೂ ನನಗೆ ಅರ್ಥ್ವವಾಗದ ಕಗ್ಗಂಟು, ಈ ಡಾಲರು ರೂಪಾಯಿ ಬೆಲೆ ಏಕೆ ಅಂತರವಿದೆ, ಇರುವುದಾದರೆ ಏಕಿರಬೇಕು? ಇನ್ನು ದುಡ್ಡು ಪ್ರಿಂಟ್ ಮಾಡಲು ಆ ಮೊತ್ತದ ಚಿನ್ನ ಇರಬೇಕಂತೆ, ಅದು ಹೇಗೆ ನಿರ್ಧರಿಸುತ್ತಾರೆ ಹೀಗೆ ಹತ್ತು ಹಲವು ಪ್ರಶ್ನೆಗಳಿವೆ...

ವಿನುತ said...

ಧನ್ಯವಾದಗಳು ಎಲ್ಲರಿಗೂ.

ಜಲನಯನ ಅವರೇ, ಚಿತ್ರೋತ್ಸವದಲ್ಲಿ ೪ ಚಿತ್ರಗಳ ಪ್ರದರ್ಶನವಿತ್ತು - ಗುಬ್ಬಚ್ಚಿಗಳು, ದಾಟು, ಅರ್ಥ ಮತ್ತು ಬನದನೆರಳು.
ನನಗೆ ನೋಡಲಿಕ್ಕಾಗಿದ್ದು "ಅರ್ಥ" ಒಂದೇ.

ಸುಧೀಂದ್ರ, ಮಾಹಿತಿಗೆ ಧನ್ಯವಾದಗಳು.

ಪ್ರಭುರಾಜ್, ಅರ್ಥವ್ಯವಸ್ಥೆಯನ್ನು ಅರ್ಥೈಸಲು ನಾನೂ ಹೆಣಗುತ್ತಿದ್ದೇನೆ :) "ಸ್ವಪ್ನ" ದಲ್ಲಿ ಸಿ.ಡಿ ಸಿಕ್ಕರೂ ಸಿಗಬಹುದು. ಆದರೆ ಖಚಿತವಾಗಿ ಗೊತ್ತಿಲ್ಲ.

木須炒餅Jerry said...

cool!i love it!AV,無碼,a片免費看,自拍貼圖,伊莉,微風論壇,成人聊天室,成人電影,成人文學,成人貼圖區,成人網站,一葉情貼圖片區,色情漫畫,言情小說,情色論壇,臺灣情色網,色情影片,色情,成人影城,080視訊聊天室,a片,A漫,h漫,麗的色遊戲,同志色教館,AV女優,SEX,咆哮小老鼠,85cc免費影片,正妹牆,ut聊天室,豆豆聊天室,聊天室,情色小說,aio,成人,微風成人,做愛,成人貼圖,18成人,嘟嘟成人網,aio交友愛情館,情色文學,色情小說,色情網站,情色,A片下載,嘟嘟情人色網,成人影片,成人圖片,成人文章,成人小說,成人漫畫,視訊聊天室,性愛,情色,日本a片,美女,成人圖片區