Wednesday, August 12, 2009

ಮಳೆಗಾಲದೊಂದು ರಾತ್ರಿ....

ಮಳೆಗಾಲದ ಒಂದು ರಾತ್ರಿ. ಕಛೇರಿಯಲ್ಲಿ ಕೆಲಸ ಮುಗಿದಿತ್ತು. ಮನೆಗೆ ಹೋಗಲೆಂದು ಬಸ್ ಹಿಡಿಯಲು ಹೊರಗೆ ಬಂದೆ. ಮಳೆ ಜಿನುಗುತಿತ್ತು. ಛತ್ರಿ ತಂದಿರಲಿಲ್ಲ (ನೀನೇ ದೊಡ್ಡ ಛತ್ರಿ ಅಂತೀರಾ? ಹಳೇ ಜೋಕು ರೀ!). ಅದೇನೋ ನನ್ನ ಛತ್ರಿಗೂ ಮಳೆಗೂ ಆಗಿ ಬಂದಿಲ್ಲ. ನಾನು ಛತ್ರಿ ತಂದಾಗೆಲ್ಲ ಮಳೆನೇ ಬರುವುದಿಲ್ಲ. ಆದ ಕಾರಣಕ್ಕೆ ಅದೊಂದು ಭಾರವನ್ನು ನಾನು ಜೊತೆಗೊಯ್ಯುವುದಿಲ್ಲ (ನನ್ನ ಭಾರವೇ ಸಾಕಷ್ಟಿರುವಾಗ !!). ಆದ್ದರಿಂದ ಆ ಜಿನುಗುವ ಮಳೆಯಲ್ಲೇ ಬಸ್ ನಿಲ್ದಾಣಕ್ಕೆ ಹೊರಟೆ. ಅಲ್ಲೂ ದುರಾದೃಷ್ಟ ನನ್ನ ಬೆನ್ನು ಬಿಡಲಿಲ್ಲ. ಮಧ್ಯ ಹಾದಿಯಲ್ಲೇ ವರುಣನ (ಅವ)ಕೃಪೆಗೆ ಪಾತ್ರವಾದೆ. ಧೋ ಎಂದು ಒಮ್ಮೆಗೆ ಮಳೆರಾಯನ ಆರ್ಭಟ. ನಿಲ್ಲಲೊಂದು ಸೂರು ಕಾಣಲಿಲ್ಲ. ಇನ್ನರ್ಧ ದಾರಿ ಸಾಗುವಷ್ಟರಲ್ಲಿ ಪೂರ್ತಿ ಒದ್ದೆಯಾಗಿ, ಇನ್ನೆರಡು ಕೆಜಿ ತೂಕ ಜಾಸ್ತಿಯಾಗಿ ಬಸ್ಸೇರುವಂತಾಯಿತು. ನಂತರ ಬಂದವರ ಸ್ಥಿತಿಯೇನು ಭಿನ್ನವಾಗಿರಲಿಲ್ಲ. ಯಾಕೆಂದರೆ ಮಳೆ ನಿಂತಿರಲಿಲ್ಲ. ನಿಲ್ಲುವ ಸೂಚನೆಯೂ ಇರಲಿಲ್ಲ.

ಚಳಿಗೆ ನಡುಗುತಿದ್ದ ಆ ದೇಹಗಳನ್ನೇ ಹೊತ್ತು ಬಸ್ಸು ಹೊರಟಿತು. ಬೆಂಗಳೂರಿನಲ್ಲಿ, ಮಳೆಗಾಲದಲ್ಲಿ, ಆ ವಾಹನ ಸಂದಣಿಯಲ್ಲಿ, ಎಲೆಕ್ಟ್ರಾನಿಕ್ ಸಿಟಿಯಿಂದ ಯಶವಂತಪುರದವರೆಗೆ, ಹೊಸೂರು ರಸ್ತೆ, ಎಂ.ಜಿ. ರಸ್ತೆಗಳನ್ನು ದಾಟಿ ಹೋಗಬೇಕು. ಪಯಣಿಗರ ಸ್ಥಿತಿ ಊಹೆಗೆ ಬಿಟ್ಟಿದ್ದು. ಕಾಲಹರಣವಾದರೂ ಹೇಗೆ? ಪುಸ್ತಕ ಓದುವ ಸ್ಥಿತಿಯಲ್ಲಿರಲಿಲ್ಲ. ಹಾಗೇ ಕಿಟಕಿಯಿಂದಾಚೆ ನೋಡುತ್ತಾ ಕುಳಿತೆ. ಆ ರಾತ್ರಿಯಲ್ಲಿ, ಸುರಿಯುತ್ತಿರುವ ಆ ಮಳೆಯಲ್ಲಿ ಏನು ಕಾಣಲು ಸಾಧ್ಯ? ರಸ್ತೆಯಲ್ಲಿ ತುಂಬಿದ್ದ ನೀರು, ಹುಯ್ಯುತ್ತಿರುವ ಮಳೆ.

ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು. ತೀರ್ಥಹಳ್ಳಿಗೆ. ಹೌದು, ಕುವೆಂಪು, ಹಾ.ಮಾ.ನಾಯಕ್, ಪೂರ್ಣ ಚಂದ್ರ ತೇಜಸ್ವಿ, ಎಂ.ಕೆ.ಇ೦ದಿರಾ ಇವರೇ ಮೊದಲಾದ ಸಾಹಿತ್ಯ ಭೀಮರನ್ನು ನಾಡಿಗೆ ನೀಡಿದ ಅದೇ ಶಿವಮೊಗ್ಗೆಯ ತೀರ್ಥಹಳ್ಳಿ.

ಮಲೆನಾಡಿನ ಮಳೆಯೆಂದರೆ ಬರೀ ಮಳೆಯೆ. ಅನುಭವಿಸಿಯೇ ತೀರಬೇಕು ಅದರ ಸೊಬಗನ್ನ. ದಿನದ ಯಾವ ಹೊತ್ತಿನಲ್ಲಿಯೂ ಸೂರ್ಯ ಕಾಣುವಂತೆಯೇ ಇಲ್ಲ. ಸದಾ ಆ ಕಪ್ಪು ಮೋಡಗಳ ನಡುವೆಯೇ ಅವಿತಿರುತ್ತಿದ್ದ. ಮೇ ತಿಂಗಳಿಗೆಲ್ಲ ಆರಂಭವಾಗಿಬಿಡುವ ಮಳೆ, ಸಪ್ಟೆಂಬರ್ - ಅಕ್ಟೋಬರ್ ನ ವರೆಗೂ ಇರುತ್ತಿತ್ತು. ಆ ನಾಲ್ಕೈದು ತಿಂಗಳು ಬಿಸಿಲೆಂಬುದು ಮರೀಚಿಕೆ. ಬಟ್ಟೆಗಳು ಒಣಗಿವೆಯೆಂದು ಒಳಗೆ ತಂದ ಜ್ಞಾಪಕವೇ ಇಲ್ಲ.

ಶಾಲೆಗಳು ಶುರುವಾಗುತ್ತಿದ್ದುದೇ ಮಳೆಗಾಲದಲ್ಲಿ (ಜೂನ್). ಮಳೆಯಲ್ಲಿ ಶಾಲೆಗೆ ಹೋಗುವುದೇ ಒಂದು ಮಜ. ಆ ದೊಡ್ಡ ದೊಡ್ಡ ಛತ್ರಿಗಳಡಿಯಲ್ಲಿ, ಗಾಳಿಯ ದಿಕ್ಕನ್ನನುಸರಿಸಿ ಛತ್ರಿಯನ್ನಾಡಿಸುತ್ತಾ, ನಿಂತ ನೀರಲ್ಲಿ ಕುಪ್ಪಳಿಸುತ್ತಾ, ಗೆಳೆಯ/ಗೆಳತಿಯರೊಂದಿಗೆ ಹರಟುತ್ತಾ ಸಾಗಿದರೆ ಸುಮಾರು ೩ ಕಿಲೊಮೀಟರುಗಳ ದಾರಿ ಸವೆದದ್ದೇ ತಿಳಿಯುತ್ತಿರಲಿಲ್ಲ.

ಬೆಳಿಗ್ಗೆ ಅಮ್ಮನ ಕೈಯ ಬಿಸಿ ಬಿಸಿ ತಿಂಡಿ ತಿಂದು ಬರುವಷ್ಟರಲ್ಲಿ, ಅಪ್ಪ ರೈನ್ ಕೋಟ್, ಮಳೆಗಾಲದ ಚಪ್ಪಲಿ (ಹೌದು, ಪ್ರತಿ ಮಳೆಗಾಲಕ್ಕೊಂದು ಸ್ಪೆಶಲ್ ಚಪ್ಪಲಿ), ಸ್ಕೂಲ್ ಬ್ಯಾಗ್ ಎಲ್ಲಾ ಸಿದ್ಧವಾಗಿರಿಸಿಕೊಂಡು, ತಾವೂ ಸಿದ್ಧರಾಗಿ, ಕರೆದೊಯ್ಯಲು ತಯಾರಾಗಿರುತ್ತಿದ್ದರು. ದಾರಿಯಲ್ಲಿ ಒಂದು ನಿಮಿಷ ಸುಮ್ಮನಿದ್ದ ಜ್ಞಾಪಕವಿಲ್ಲ. ಅದೇನೇನೊ ಪ್ರಶ್ನೆಗಳು. ಒಟ್ಟಿನಲ್ಲಿ ನಮ್ಮಪ್ಪನ ಜಿಕೆ ಟೆಸ್ಟ್. ತಂದೆಯವರೊ ಫಸ್ಟ್ ಕ್ಲಾಸ್ ನಲ್ಲಿ ಪಾಸ್. ಸಂಜೆ ತಾಯಿಯೊಡನೆ ಹಿಂದಿರುಗುವಾಗ ವರದಿಗಾರ್ತಿಯ ಕೆಲಸ. ದಾರಿಯುದ್ದಕ್ಕೂ ಆ ದಿನ ಶಾಲೆಯ ಆಗುಹೋಗುಗಳ ಸಂಪೂರ್ಣ ವರದಿ.

ಪ್ರತಿವರ್ಷವೂ ಶಾಲೆ ಶುರುವಾದ ಮೊದಲ ದಿನ, ನೋಟ್ ಪುಸ್ತಕಗಳ ಪಟ್ಟಿ ಮನೆಗೆ ಬರುತ್ತಿತ್ತು. (ಪಠ್ಯಪುಸ್ತಕಗಳು ನಮ್ಮ ಹಿರೀಕರಿ೦ದ ಬೇಸಿಗೆ ರಜೆಯಲ್ಲೇ ಬಂದಿರುತ್ತಿದ್ದವು. ತಂದೆಯವರ ದೆಸೆಯಿಂದ ಅರ್ಧ ಓದಿ ಮುಗಿಸಿಯೂ ಆಗಿರುತ್ತಿತ್ತೆನ್ನಿ). ಅಂದು ಸಂಜೆಯೇ ಪುಸ್ತಕಗಳನ್ನು ತಂದು ಅವುಗಳಿಗೆ ಬೈಂಡ್ ಹಾಕುವ ಕೆಲಸ. ಮೊದಲು ಪೇಪರ್ ಬೈಂಡ್ ಹಾಕಿ ಅದರ ಮೇಲೆ ಪ್ಲಾಸ್ಟಿಕ್ ಬೈಂಡ್ ಹಾಕಿ ಕೊಡುತ್ತಿದ್ದರು. ಮಳೆಗೆ ಪುಸ್ತಕಗಳು ನೆನೆಯಬಾರದಲ್ಲ, ಅದಕ್ಕೆ. ನಮಗೇನಾದರೂ ಪರವಾಗಿಲ್ಲ, ಆದರೆ ಪುಸ್ತಕಗಳನ್ನು ಹಾಳು ಮಾಡಿದರೆ ಮಾತ್ರ ತಂದೆಯವರ ಕೋಪಕ್ಕೆ ಗುರಿಯಾಗಬೇಕಿತ್ತು. ಇಂದೇನಾದರು ನನಗೆ ಪುಸ್ತಕಗಳ ಮಹತ್ವ ತಿಳಿದಿದೆಯೆಂದರೆ ಅದಕ್ಕೆ ಅವರ ಆ ಪುಸ್ತಕ ಭಕ್ತಿಯೆ ಕಾರಣ. ಅದಕ್ಕಾಗಿ ತಂದೆಯವರಿಗೆ ನಾ ಋಣಿ.

ನಮ್ಮ ಮನೆಯ ಹಿಂದೆಯೇ ಒಂದು ಕೆರೆಯಿತ್ತು. ಅದರಿಂದಲೇ ನಮ್ಮ ಮನೆ ಬೀದಿಯನ್ನು "ಶೀಬಿನಕೆರೆ" ಅಂತ ಕರೀತಿದ್ರು ಅನಿಸುತ್ತೆ. ದಿನವೂ ಆ ಕೆರೆದಂಡೆಯಲ್ಲಿಯೇ ನಡೆದು ಶಾಲೆಗೆ ಹೋಗಬೇಕು. ಆ ಕೆರೆಯ ಮಧ್ಯದಲ್ಲಿ ೨/೩ ಬಂಡೆಗಳಿದ್ದವು. ದಿನವೂ ಆ ಬಂಡೆಗಳು ಎಷ್ಟು ಮುಳುಗಿದವು ಎಂದು ಲೆಕ್ಕ ಹಾಕುವುದೇ ಒಂದು ಆಟ. ಕೆರೆದಂಡೆಯಲ್ಲೂ ಕೆಲವು ಗುರುತುಗಳಿದ್ದವು. ಲೈಟ್ ಕಂಬ, ಪಕ್ಕದ ಗದ್ದೆಗಳಿಗೆ ನೀರು ಹಾಯಿಸುವುದಕ್ಕೆಂದು ಏತ ಮಾದರಿಯಲ್ಲಿ ಕಟ್ಟಿದ್ದ ಕಟ್ಟೆ - ಕಾಲುವೆ ಇತ್ಯಾದಿ. ನೀರಿನ ಮಟ್ಟ ಎಷ್ಟಿದೆ ಎಂದು ಇವುಗಳನ್ನೆಲ್ಲ ನೋಡಿ ಹೇಳುವುದು; ಬಂಡೆ ಮುಳುಗಿತು, ಲೈಟ್ ಕಂಬದ ಹತ್ತಿರ ಬಂದಿದೆ.. ಬಹುಶ: ನಮಗರಿವಿಲ್ಲದೆಯೇ "ರೈನ್ ಗೇಜ್" ಒಂದು ವಿನ್ಯಾಸಗೊಂಡಿತ್ತು!!! ಆದರೆ ನೀರು ಒಮ್ಮೆಯೂ ದಂಡೆಯ ತುದಿಯವರೆಗೂ ಬರಲೇ ಇಲ್ಲ.

ಕಾಲಾನಂತರದಲ್ಲಿ, ನನ್ನ ತಂಗಿಯನ್ನು ಶಾಲೆಗೆ ಕರೊದೊಯ್ಯುವ ಜವಾಬ್ದಾರಿ ನನ್ನದಾಯಿತು. ಅದೊಂದು ವಿಶೇಷ ಹಾಗೂ ವಿಚಿತ್ರ ಅನುಭವ. ಅವಳಿಗೆ ರೈನ್ ಕೋಟ್ ಹಾಕಿ ಪೂರ್ತಿ ಪ್ಯಾಕ್ ಮಾಡಿದ್ದರೂ, ನನ್ನ ಛತ್ರಿಯಡಿಯಲ್ಲೇ ಕರೆದೊಯ್ಯಬೇಕಿತ್ತು. ಕಾರಣ, ಅವಳ ರೈನ್ ಕೋಟ್ ಒದ್ದೆಯಾಗಬಾರದು!!! ಮತ್ತೆ ದಾರಿಯುದ್ದಕ್ಕೂ ಒಂದೇ ಪ್ರಶ್ನೆ "ಸಂಜೆ ಬೇಗ ಬರ್ತೀಯ? ಎಷ್ಟೊತ್ತಿಗೆ ಬರ್ತೀಯ ಕರ್ಕೊಂಡು ಹೋಗೊಕೆ?". ನಾನಾಗ ಹೈಸ್ಕೂಲ್. ನಾನೋದಿದ ಪ್ರಾಥಮಿಕ ಶಾಲೆಗೆ ನನ್ನ ತಂಗಿ ಹೋಗ್ತಾ ಇದ್ದದ್ದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಅವಳನ್ನೂ ಜೊತೆಗೆ ಕರೆದುಕೊಂಡು ಹೋಗ್ತಾ ಇದ್ದೆ. ಸಂಜೆ ಬರುವಾಗ ಜೊತೆಯಲ್ಲೇ ಕರೆದುಕೊಂಡು ಬರುತ್ತಾ ಇದ್ದೆ. ಸಾಯಂಕಾಲ ನಾನು ಅವಳ ತರಗತಿಯ ಬಳಿ ಹೋಗುವುದೇ ತಡ, ಅದೆಲ್ಲಿರುತ್ತಿದ್ದಳೊ, ಅದಾವ ಮಾಯದಲ್ಲಿ ನನ್ನ ನೋಡಿರುತ್ತಿದ್ದಳೋ ತಿಳಿಯುತ್ತಿರಲಿಲ್ಲ; ತಕ್ಷಣ ಬಾಗಿಲಲ್ಲಿ ಹಾಜರಾಗುತಿದ್ದಳು. ಟೀಚರ್ ಸಹ, "ಅನುಷ, ನಿನ್ನನ್ನು ಕರೆಯೊದೇ ಬೇಡ" ಅನ್ನುತ್ತಿದ್ದರು.

ಅಬ್ಬಾ! ಆ ಶಾಲೆಯ ದಿನಗಳೇ!!! ಪಠ್ಯಪುಸ್ತಕಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ. ಆವೇನು ಆಟಗಳು; ಲಗೋರಿ, ಮೈಸೂರ್ ಗೋಲ್, ಕುಂಟಬಿಲ್ಲೆ, ಖೊ ಖೊ, ಕಬಡ್ಡಿ, ವೊಲಿಬಾಲ್, ಬ್ಯಾಡ್ಮಿಂಟನ್, ತರಾವರಿ ನೆಗೆತಗಳು, ಎಸೆತಗಳು, ಓಟಗಳು ಒಂದೇ ಎರಡೇ? ಪ್ರಬಂಧ, ಚರ್ಚೆ, ರಸಪ್ರಶ್ನೆ, ಗಾಯನ, ನೃತ್ಯ, ನಾಟಕ, ಮಾದರಿ ತಯಾರಿಕೆ, ತೋಟಗಾರಿಕೆ, ಚಿತ್ರಕಲೆ, ಆಶುಭಾಷಣ, ಗೈಡ್ಸ್ ಇವುಗಳಿಗೇನು ಲೆಖ್ಖವೇ? ಆಡದ ಆಟಗಳಿಲ್ಲ, ಭಾಗವಹಿಸದ ಚಟುವಟಿಕೆಗಳಿಲ್ಲ. ಚಾತಕ ಪಕ್ಷಿಗಳಂತೆ ಮಳೆಗಾಲ ಮುಗಿಯುವುದನ್ನೇ ಕಾಯುತಿದ್ದೆವು. ಸ್ವಲ್ಪ ಬಿಸಿಲು ಬಂದರೂ ಅನ್ನುವುದಕ್ಕಿಂತ, ಸ್ವಲ್ಪ ಮಳೆ ನಿಂತರೂ ಎನ್ನಬಹುದು. ಬೇಗ ಬೇಗ ಊಟ ಮುಗಿಸಿ ಆಟ. ಯಾವಾಗ ಫ್ರೀ ಪಿರಿಯಡ್ ಸಿಕ್ಕಿದರೂ ಪಿ‌ಇ ಟೀಚರ್ ಹತ್ತಿರ ಹೋಗಿ "ಆಟಕ್ಕೆ ಹೋಗ್ತೀವಿ" ಅಂತ ಒಂದೇ ದುಂಬಾಲು. ಗೇಮ್ಸ್ ಪಿರಿಯಡ್ ನಲ್ಲಂತೂ ಕೇಳೊದೇ ಬೇಡ. ಸುರೆ ಕುಡಿಸಿದ ಕಪಿಗಳಂತೆ ಮೈದಾನಕ್ಕೆ ಧಾಳಿ. ಎಷ್ಟೊಂದು ಆಟಗಳು, ಎಷ್ಟೊಂದು ಜಾಗ!!! ಎಷ್ಟಾಡಿದರೂ ದಣಿವಾಗದು!!! ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃಧ್ಧಿಗಾಗಿ ಶ್ರಮಿಸಿದ, ಶ್ರಮಿಸುತ್ತಿರುವ ಅಂತದೊಂದು ವಿದ್ಯಾಸಂಸ್ಥೆಗೆ ಹಾಗೂ ಅದರ ಸಮಸ್ತ ಶಿಕ್ಷಕ ವೃಂದಕ್ಕೆ ನನ್ನ ಅನಂತಾನಂತ ಧನ್ಯವಾದಗಳು.

ಎಲ್ಲೋ ಮನದ ಮೂಲೆಯಲ್ಲೊಂದು ಕೊರಗು ಕಾಣಿಸಿತು. ಈಗಿನ ನಗರದವರಿಗೆಲ್ಲಿದೆ ಈ ಸೌಭಾಗ್ಯ?? ಎಷ್ಟೊಂದು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಗೇಮ್ಸ್ ಪಿರಿಯಡ್ ಗಳೂ ಇಲ್ಲ. ಎಷ್ಟೊಂದು ಆಟಗಳ ಹೆಸರೇ ತಿಳಿದಿಲ್ಲ. ಮರಕ್ಕೂ ಗಿಡಕ್ಕೂ ವ್ಯತ್ಯಾಸವೇ ತಿಳಿದಿರುವುದಿಲ್ಲ. ಪುಸ್ತಕದ ಹುಳುಗಳಾಗಲು ಸಾಮಾನ್ಯ ಜ್ಞಾನವೆಲ್ಲೋ ಕಳೆದು ಹೋಗುತ್ತಿದೆಯೆ? ಹಾಗೆಂದನಿಸುತ್ತದೆ. ನಾವಾದರೊ ದೊಡ್ಡವರಾಗುತ್ತ, ಪ್ರಗತಿಯ ಹೆಸರಿನಲ್ಲೊ, ಪ್ರತಿಷ್ಠೆಯ ಸೋಗಿನಲ್ಲೋ ಕೇವಲ ಟಿವಿ ಗೋ, ಕಂಪ್ಯೂಟರ್ ಗೋ ಅ೦ಟಿಕೊ೦ಡೆವೇ? ಏನನ್ನೊ ಬೆಲೆಬಾಳುವಂತಹುದನ್ನು ಕಳೆದುಕೊಂಡಂತಹ ಭಾವನೆ ಮೂಡಿತು.

ಅಷ್ಟೆಲ್ಲ ಆಡಿ ಮನೆಗೆ ಹೋಗುವಷ್ಟರಲ್ಲಿ, ಅಮ್ಮ ತಿಂಡಿ ಹಾಲು ಸಿದ್ಧವಿರಿಸಿರುತ್ತಿದ್ದರು. ಸ್ವಾಹ ಮಾಡಿ ಓದುವ ಪ್ರಕ್ರಿಯೆ ಶುರು. ತಂದೆ ಬರುವಷ್ಟರಲ್ಲಿ ಹೋಮ್ ವರ್ಕ್ ಮುಗಿಸಿರಬೇಕು. ಅವರು ಬಂದು ತಯಾರಾದ ಬಳಿಕ ಪಾಠ ಶುರು. ಅರ್ಥವಾಗಿಲ್ಲ ಅಂದರೆ ಎಷ್ಟು ಬಾರಿಯಾದರೂ ಹೇಳಿಕೊಡುತ್ತಿದ್ದರು. ಆದರೆ "ಅರ್ಥವಾಯಿತು" ಎಂದು, ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಡದೆ ಹೋದರೆ, ಉದಾಸೀನದ ಉತ್ತರವನ್ನೇನಾದರು ಕೊಟ್ಟರೆ, ಮುಗಿಯಿತು ಕಥೆ. ತಿಂದ ಒದೆಗಳು ಈಗಲೂ ಜ್ಞಾಪಕದಲ್ಲಿವೆ!!! "ಓದುವಾಗ ಓದು, ಆಡುವಾಗ ಆಡು" ತಂದೆಯ ಸಿದ್ಧಾಂತ. ಬಹುಶ: ತಂದೆ ಚಿಕ್ಕಂದಿನಿಂದಲೂ ಓದಿನಲ್ಲಿ ಆ ತರಹದ ಸೀರಿಯಸ್ನೆಸ್ ತಂದಿರಲಿಲ್ಲವಾಗಿದ್ದರೆ, ಸ್ವತಂತ್ರವಾಗಿ, ಸಮರ್ಥವಾಗಿ, ಸ್ವಾವಲಂಬಿಯಾಗಿ ಓದುವ ಶಕ್ತಿ ಬರುತ್ತಿತ್ತೇ ಎಂಬುದು ಈಗಲೂ ಪ್ರಶ್ನೆ.

ನಂತರ ಎಲ್ಲರೂ ಕುಳಿತು ಊಟ. ಮಳೆಗಾಲ ಮುಗಿದಿದ್ದರೆ, ಚಂದ್ರನ ಸಾಕ್ಷಿಯಾಗಿ, ಮನೆಯಂಗಳದಲ್ಲಿ, ನೆರೆಯವರೊಡಗೂಡಿ ಬೆಳದಿಂಗಳೂಟ. ಬರಿದೇ ಅನ್ನ ಸಾರು ಊಟವೇ ಆದರೂ, ಎಲ್ಲರೂ ಕೂಡಿ ಹಂಚಿಕೊಂಡು ತಿನ್ನುವಾಗ ... ಅದನ್ನನುಭವಿಸಿಯೇ ತೀರಬೇಕು. ಅದೊಂದು ರಸಕವಳವೇ ಸರಿ.

ಉರುಳುತ್ತಿದ್ದ ಕಾಲಚಕ್ರದೊಂದಿಗೆ, ತಂದೆಯವರ ವರ್ಗಾವಣೆಯ ಫಲವಾಗಿ ನಗರವೊ೦ದಕ್ಕೆ ಬಂದಾಗ, ಹೊಸ ಅನುಭವ. ಹೊಸ ಜಾಗ, ಹೊಸ ಶಾಲೆ, ಹೊಸ ಜನ. ಹೊಸದರಲ್ಲಿ ಏನೋ ಕಸಿವಿಸಿ, ಮುಜುಗರ. ಹಳ್ಳಿಯಿಂದ ಬಂದವಳೆಂಬ ಅಸಡ್ಡೆಯೋ, ಅಥವಾ ಅಲ್ಲಿಯವರು ಬೆರೆಯುತ್ತಿದ್ದುದೇ ಹಾಗೆಯೋ ಗೊತ್ತಿಲ್ಲ. ಜನ ಯಾವುದೋ ಮುಸುಕು ಹಾಕಿಕೊಂಡು ಬದುಕುತ್ತಿದ್ದಾರೇನೊ ಎಂದು ಭಾಸವಾಯಿತು. ಆಟ-ಪಾಠ-ಪಠ್ಯೇತರ ಚಟುವಟಿಕೆಗಳೆಲ್ಲದರಲ್ಲೂ ಮುಂದಿರುತ್ತಿದ್ದ ನನಗೆ, ಎಲ್ಲೋ ಕೂಡಿಹಾಕಿದ ಅನುಭವ. ಆಡುವ ಆಟವನ್ನು ವರ್ಷದ ಶುರುವಿನಲ್ಲೇ ಹೇಳಿ, ವರ್ಷ ಪೂರ್ತಿ ಅದೇ ಆಟವನ್ನಾಡಬೇಕು. ಲೈಬ್ರರಿ ಪಿರಿಯಡ್ ನಲ್ಲಿ ಕನ್ನಡ ಪುಸ್ತಕ ಓದಿದರೆ "ಕನ್ನಡ ಪುಸ್ತಕ??" ಎಂಬಂತೊಂದು ನೋಟ. ಅದೇಕೆ ಎಂಬುದು ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಪಠ್ಯೇತರ ಚಟುವಟಿಕೆಗಳೂ ಸಹ ಕೆಲವೇ ಬಲ್ಲಿದವರಿಗೆ ತಿಳಿದಿರುತ್ತಿತ್ತು. ಆದರೆ ಹಠಕ್ಕಾಗಿ ಬರೆದ ಕನ್ನಡ ಪ್ರಬಂಧವೊಂದಕ್ಕೆ ರಾಜ್ಯ ಪ್ರಶಸ್ತಿ ಬಂದಾಗ ಚಿತ್ರಣ ಬದಲಾಯಿತೆನ್ನಿ. ನಿಜವಾದ ಚಿತ್ರಣವಲ್ಲ, ನನ್ನ ಪಾಲಿನದು ಮಾತ್ರ; ಅಂದರೆ ನಾನೂ ಆ ಬಲ್ಲಿದವರಲ್ಲೊಬ್ಬಳಾದೆ ಅಷ್ಟೆ!!! ಆದರೂ ಎಲ್ಲೋ ನನ್ನ ಆ ಮೊದಲಿನ ಫಾರ್ಮ್ ಕಳೆದು ಹೋದ ಅನುಭವ.

ನಂತರದ ಆ ಎರಡು ವರ್ಷಗಳು (೧ ಮತ್ತು ೨ ನೇ ಪಿ.ಯು.ಸಿ) ಹೇಗೆ ಓಡಿದವೋ ತಿಳಿಯಲಿಲ್ಲ. ಶುರು ಎನ್ನುವುದರೊಳಗಾಗಿ ಕೊನೆಯಾಗಿದ್ದವು. ಜೀವನದ "ಕೋಮಾ" ಸ್ಥಿತಿ ಅನಿಸುತ್ತದೆ. ಇಂಜಿನಿಯರಿಂಗ್ ಸಹ ಹಿಡಿಯುವುದರೊಳಗಾಗಿ ಜಾರಿ ಹೋಗಿತ್ತು. ಬರೀ ಇಂಟರ್ನಲ್ಸ್ - ಲ್ಯಾಬ್ - ಎಕ್ಸ್ಟರ್ನಲ್ಸ್ ಗಳಲ್ಲಿಯೇ ಮುಗಿದು ಹೋಯಿತು.

ಕಾಲಗರ್ಭದಲ್ಲಡಗಿದ್ದ ಈ ನೆನಪುಗಳು, ಮನ:ದ ಸ್ಮೃತಿಪಟಲದಲ್ಲಿ ಹೀಗೆ ಹಾದು ಹೋಗುತ್ತಿರುವಾಗ, ಅಬ್ಬಾ! ಕಾಲವೇ! ನಿನ್ನ ಹಿಡಿದವರುಂಟೇ ಎಂದೆನಿಸಿ ಎಚ್ಚರವಾಯಿತು. ಆಗ ಯಾವುದೋ ರೇಡಿಯೊ ವಾಹಿನಿಯಲ್ಲಿ ಬರುತ್ತಿದ್ದ ಹಳೇ ಹಿಂದಿ ಹಾಡಿನತ್ತ ಗಮನ ಹೋಯಿತು. ಹಾಡಿನ ಸಾಹಿತ್ಯ ಜ್ಞಾಪಕವಿಲ್ಲ. ಆದರೆ ಅದು ತಂದೆ ಮಗಳನ್ನು ಮದುವೆ ಮಾಡಿ ಕಳುಹಿಸುವ ಸಂದರ್ಭದಲ್ಲಿ ಹಾಡುವ ಹಾಡು. ಮಗಳ ಬಾಲ್ಯದ ನೆನಪುಗಳ ಸರಮಾಲೆ. ಏಕೋ ನನಗರಿವಿಲ್ಲದೆಯೇ ಕಣ್ಣಿನಿಂದೆರಡು ಹನಿ ಕೆಳಗುದುರಿತು. ಕೈ ಮೇಲೇನೋ ಬೆಚ್ಚಗಾದಾಗ ಅರಿವಿಗೆ ಬಂತು. ನೆನೆದದ್ದು ಒಳ್ಳೆಯದೇ ಆಯಿತು, ಕಣ್ಣೀರೆಂದು ಗೊತ್ತಾಗುವುದಿಲ್ಲ ಎಂಬ ಸಮಾಧಾನದಲ್ಲಿ ಪಕ್ಕಕ್ಕೆ ತಿರುಗಿದೆ. ಅವರು ಯಾವಾಗಲೋ ಇಳಿದು ಹೋಗಿದ್ದರು. ಆಗಲೇ ಸಾಕಷ್ಟು ನೆಂದಿದ್ದ ದೇಹಕ್ಕೆ ಆ ಎರಡು ಹನಿಗಳೇನು ಭಾರವಾಗಲಿಲ್ಲ.............

25 comments:

PARAANJAPE K.N. said...

ಕಾಲಗರ್ಭದಲ್ಲಡಗಿದ್ದ ನೆನಪುಗಳನ್ನು ಕೆದಕಿ ನಮ್ಮೊಡನೆ ಹನ್ಚಿಕೊನ್ಡಿದ್ದೀರಿ. ಚೆನ್ನಾಗಿದೆ. ನೆನಪುಗಳ ಮಾತು ಮಧುರ

shivu.k said...

ವಿನುತಾ,

ನಿಮ್ಮ ಲೇಖನ ನನ್ನ ಬಾಲ್ಯದ ಆಟಗಳನ್ನು ನೆನಪಿಸಿತು. ಮಳೆಯೊಂದನ್ನು ಬಿಟ್ಟು ನೀವು ಹೇಳಿದ ಎಲ್ಲಾ ಆಟಗಳನ್ನು ನಾವು ಆಡಿ ಮಜಮಾಡಿದ್ದೇವೆ. ಮತ್ತೆ ಅದರಲ್ಲೂ ಸೂರ್‍ಚಂಡು ಅನ್ನುವ ಆಟದಲ್ಲಿ ಅದೆಷ್ಟು ಜನರಿಗೆ ಬಾಲಿನಲ್ಲಿ ಹೊಡೆದಿದ್ದೇನೋ, ನಾನು ಆ ಬಾಲಿನಲ್ಲಿ ಅದೆಷ್ಟು ಏಟು ತಿಂದಿದ್ದೆನೋ...ಲೆಕ್ಕವಿಲ್ಲ. ಒಮ್ಮೆ ಆ ಆಟದಲ್ಲಿ ಒಬ್ಬ ಬಾಲಿನಿಂದ ಗುರಿಯಿಟ್ಟು ಹೊಡೆದದ್ದು ನೇರ ನನ್ನ ಕಿವಿ ಪಕ್ಕ ಬಿದ್ದು ತಲೆ ಗಿರ್ ಆಂತ ತಿರುಗಿ ಬಿದ್ದುಬಿಟ್ಟಿದ್ದೆ. ಎಷ್ಟು ಹೊತ್ತು ಎಚ್ಚರವೇ ಆಗಿರಲಿಲ್ಲ...

ಮಳೆ, ಬಾಲ್ಯ, ಸ್ಕೂಲು, ಎಲ್ಲವನ್ನು ಮರೆತು ಈಗ ದುಡಿಮೆಯ ಹುಳುಗಳಾಗಿಬಿಟ್ಟಿದ್ದೇವಲ್ಲ....

ಕಚಗುಳಿಯಿಡುವಂತಹ ಲೇಖನ...ಇಷ್ಟವಾಯಿತು.

Rajesh Manjunath - ರಾಜೇಶ್ ಮಂಜುನಾಥ್ said...

ವಿನುತ,
ಬಹುಶಃ ಬಾಲ್ಯವನ್ನು ಮತ್ತು ಅದರ ಸೊಗಸನ್ನು ಇದಕ್ಕಿಂತ ಸೊಗಸಾಗಿ ವಿವರಿಸಲು ಸಾಧ್ಯವೇ ಇಲ್ಲವೇನೋ, ಒಂದು ಒಳ್ಳೆಯ ಬರಹ, ಮನವನ್ನು ಎಬ್ಬಿಸಿಕೊಂಡು ಬಾಲ್ಯದ ಅಂಗಳಕ್ಕೆ ಕರೆದೊಯ್ದು ನಿಲ್ಲಿಸಿದಂತಿದೆ, ಸದ್ದು!!! ಇದರ ಸವಿ ಸವಿಯುತ್ತಿದ್ದೇನೆ, ನಿಶ್ಶಬ್ಧವಾಗಿರಿ ಎಂದು ಕಿವಿಯಂಚಿನಲ್ಲಿ ಉಸುರಿದಂತಿದೆ.

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

ಸಾಗರದಾಚೆಯ ಇಂಚರ said...

ಮಳೆಯ ಜೊತೆಗಿನ ನಿಮ್ಮ ಮಧುರ ಅನುಭವಗಳು ಸುಂದರವಾಗಿವೆ. ಹಲ;ಎಯ ನೆನಪುಗಳು ನಮ್ಮ ಮುಂದಿನ ಬಾಳ ದಾರಿಗೆ ದೀವಿಗೆಯಂತೆ ಅಂತ ಕೇಳಿದ್ದೇನೆ. ನೆನಪುಗಳ ಮೆಲುಕು ಎಷ್ಟೊಂದು ಮಧುರ ಅಲ್ವ. ಅದಕ್ಕೆ ಇನ್ನು ಬಾಲ್ಯತನ ನೆನಪು ಆಗ್ತಾ ಇರುತ್ತೆ.

Prabhuraj Moogi said...

ಬಾಲ್ಯದ ಬಗ್ಗೆ ಸೂಪರಾಗಿ ಬರೆದಿದ್ದೀರಾ, ಶಾಲೇಲಿ ಗಾಳಿಗೆ ಛತ್ರಿ ಉಲ್ಟಪಲ್ಟ ತಿರುಗಿ ನೆನೆದ ಅನುಭವಗಳು ನೆನಪಿಗೆ ಬಂದ್ವು... ನನಗೆ ಇಲ್ಲಿ ಅಪ್ಪನ ಜಿ ಕೆ ಟೆಸ್ಟ್, ಅಮ್ಮನಿಗೆ ವರದಿಗಾರ್ತಿಯಾಗಿದ್ದು, ನೆನೆದ ದೇಹಕ್ಕೆ ಕಣ್ಣೀರ ಹನಿಗಳೇನು ಭಾರವಾಗಲಿಲ್ಲ ಅಂದಿದ್ದು... ಈ ವಿಶೇಷಣಗಳು ಬಹಳೆ ಇಷ್ಟವಾದವು. ಹೀಗೆ ಬರೀತಾ ಇರಿ

Arun said...

Just install Add-Kannada widget on your blog/ website, Then u can easily submit your pages to all top Kannada Social bookmarking and networking sites.

Kannada bookmarking and social networking sites give more visitors than if we submit our articles on reddit.com or digg ..etc because naturally of their content specific.

Click here for Install Add-Kannada widget

Unknown said...

ಮಳೆ ಹೊತ್ತು ತರುವ ನೆನಪುಗಳ ಸರಮಾಲೆಯ ನವಿರುತನ,ಅದರ ಸೊಬಗೆ ಸೊಬಗು ನಿಮ್ಮ ಬರಹವನ್ನು ಗುಕ್ಕಿನಲ್ಲೇ ಓದಿ ಮುಗಿಸಿ ನಿಮ್ಮ ಬ್ಲಾಗ್ನ follower ಆಗಿಬಿಟ್ಟೆ ಒಮ್ಮೆ ನನ್ನ ಬ್ಲಾಗ್ ನೋಡಿ.....sahayaatri.blogspot.com

ಮುಸ್ಸ೦ಜೆ said...

ತು೦ಬಾ ಚೆನ್ನಾಗಿ ನೆನಪಿಸಿಕೊಟ್ಟೀದ್ದೀರ. ಬಾಲ್ಯದ ದಿನದ ಮಳೆಗಾಲದ ಮಲೆನಾಡ ಚ೦ದದ ನೆನಪಾಯ್ತು.

kavya H S said...

barahagalige shakti ideyo athava barahagaararige shakti ideyo confusion shuruvaagide vinutharavare.Thumba bhaavukalaagi kanmucchi kulithe.nanna amulya bhaavanegalu e amulya barahadalliddavu,santasada kanniru jaaruttale ide yake gottilla.kushiyalli baro kanniru maja kodutte thumba thanks nimage.

ಜಲನಯನ said...

ವಿನುತ, ಹೇಗೆ ವಿವರವಾಗಿ ನೆನೆಪಿನಾಳದಿಂದ ಹೆಕ್ಕಿ ತೆಗೆದಿರಿ ಎಲ್ಲವನ್ನೂ? ಹಳ್ಳಿಯ ಆ ದಿನಗಳು ನಮ್ಮ ಜೀವನದ ಅಪೂರ್ವ ಕ್ಷಣಗಳು..ನಿಜಕ್ಕೂ ಮರೆಯಲಸಾಧ್ಯ.

Ittigecement said...

ವಿನುತಾ....


ನನ್ನ ಬಾಲ್ಯದ ದಿನಗಳು ನೆನಪಾದವು....
ನಿಮ್ಮ ಬರಹದ ಆಪ್ತತೆ ಇಷ್ಟವಾಗುತ್ತದೆ....

ಬಹಳ ತಡವಾಗಿ ಬಂದಿದ್ದೇನೆ ಕ್ಷಮೆ ಇರಲಿ...

ಚಂದದ ಬರಹಕ್ಕೆ ಅಭಿನಂದನೆಗಳು....

soumya said...

superb ranju... i liked the ending... its damn good...... !!

Pramod said...

ನಿಮ್ಮ ಲೇಖನದಲ್ಲಿ ಪ್ರತಿಯೊಬ್ಬರ ಬಾಲ್ಯ ಬ೦ದು ಹೋಗುತ್ತದೆ. ಫೆ೦ಟಾಸ್ಟಿಕ್

Rakesh Holla said...

Chennagide...
Nice articles...

Anonymous said...

Good Writing... I remembered my school days.. thanks for such a good post.

Sudheendra Budya
http://sudheendr.wordpress.com

ಅರವಿಂದ ಸೋಮಣ್ಣ(ARVIND SOMANNA) said...

nice.....

ಗೌತಮ್ ಹೆಗಡೆ said...

tumba khushi kottitu nimma barahada vishaya haagu shaili:)

ವಿನುತ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಬಾಲ್ಯವೂ ಇದರಲ್ಲಿ ಹಾದುಹೋಗಿದ್ದರೆ, ಸಾರ್ಥಕವಾಯಿತು ಬರಹ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ.

Unknown said...

"""ನನ್ನ ಬಾಲ್ಯದ ದಿನಗಳು ನೆನಪಾದವು"""

Dayananda M R said...

kaaduva nenapugalu.... :)
adbhutavaada abhivyakti

Karthik Kamanna said...

ಹಳ್ಳಿಯ ಬಾಲ್ಯ ಮತ್ತು ನಗರದ ಬಾಲ್ಯಗಳ ತುಲನೆ ತೂಕವಾಗಿದೆ. ಲೇಖನ ಚೆನ್ನಾಗಿದೆ.

Chandru said...
This comment has been removed by the author.
Chandru said...

ಮಳೆ ನಿಂತ ಟಪ್ ಟಪ್ ಹನಿಗಳಂತೆ ಒಂದೊದು ಹನಿಯು ಒಂದು ನೆನಪು .. ಮನ ಒಪ್ಪುವ ಎಲ್ಲರ ಬಾಲ್ಯವನ್ನು ಮರುಕಳಿಸುವ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು

Anonymous said...

A heart-warming walk, down the memory lane as tides of nostalgia drift oneself ashore. Rightly said, difficulty in literature lies not in writing but in expressing ourselves with apt expressions. Not all are blessed with the art of writing. Let this creative streak find its expressions in more ways than one bringing joy to one and all. Personally, I thank you for a wonderful write-up.