Tuesday, March 17, 2009

ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಪೂರ್ಣ ಹೆಸರು: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಜನನ: ಮಾರ್ಚ್ ೧೭, ೧೮೮೭
ಮರಣ: ಅಕ್ಟೋಬರ್ ೭, ೧೯೭೫
ತಂದೆ: ವೆಂಕಟರಮಣಯ್ಯ
ತಾಯಿ: ಅಲಮೇಲಮ್ಮ
ತಮ್ಮಂದಿರು: ಡಿ.ವಿ.ಶೇಷಗಿರಿರಾವ್, ಡಿ.ವಿ.ರಾಮರಾವ್
ಪತ್ನಿ: ಭಾಗೀರಥಮ್ಮ
ಮಕ್ಕಳು: ಡಾಬಿ.ಜಿ.ಎಲ್.ಸ್ವಾಮಿ, ಇಂದಿರ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ
ವೃತ್ತಿ: ಸಾಹಿತಿ, ಪತ್ರಕರ್ತ, ಸಮಾಜ ಸೇವಕ
ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (೧೯೬೧)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವನಧರ್ಮಯೋಗ - ೧೯೬೭)
ಪದ್ಮಭೂಷಣ (೧೯೭೪)

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು. ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ. ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ! ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು. ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು. ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು. ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು. ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ.

ಪ್ರತ್ಯೇಕ ಸುಖವಲ್ಪವದು, ಗಳಿಕೆ ತೋರ್ಕೆಯದು
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ
ವ್ಯಕ್ತಿಜೀವನ ಸೊಂಪು ಸಮಷ್ಟಿಜೀವನದಿ
ಒಟ್ಟುಬಾಳ್ವುದ ಕಲಿಯೋ - ಮಂಕುತಿಮ್ಮ

ಎಂದಿರುವ ಡಿವಿಜಿಯವರನ್ನೂ, ಬಂಧನರಹಿತ ಅಲಕ್ ನಿರಂಜನ್, ಬೈರಾಗಿ ಬದುಕು ಸೆಳೆದದ್ದುಂಟು. ಜೀವನದ ಎರಡನೇ ಹಂತ ಎನ್ನಬಹುದಾದ ಇಲ್ಲಿ, ಮೋಕ್ಷಗುಂಡಂ ವೆಂಕಟೇಶಯ್ಯನವರು ಕೊಟ್ಟ Trial and Death of Socrates ಪುಸ್ತಕ ಹಾಗೂ ಸಾಕ್ರಟೀಸನ ಸಂವಾದಗಳು ಮರಳಿ ಲೋಕಜೀವನಕ್ಕೆ ಕರೆತಂದವು. ಸಮಾಜ, ಸಂಪ್ರದಾಯಗಳು ಗೌರವಾರ್ಹ ಎಂಬ ನಂಬಿಕೆ ಮೂಡಿತು. ಕನ್ನಡ ನಾಡಿಗೆ, ಸಾಹಿತ್ಯಕ್ಕೆ ಅವರ ಸೇವೆಯನ್ನು ಪಡೆಯುವ ಭಾಗ್ಯವಿರುವಾಗ ವಿಧಿಯ ವಕ್ರದೃಷ್ಟಿ ಗೆಲ್ಲಲು ಸಾಧ್ಯವೇ ಇರಲಿಲ್ಲ.

ಸುಮಾರು ೧೭ ನೆಯ ವಯಸ್ಸಿಗೆ ಭಾಗೀರಥಮ್ಮನವರೊಂದಿಗೆ ವಿವಾಹವಾಯಿತು. ಸಂಪಾದನೆ ಮಾಡುವುದನಿವಾರ್ಯವಾಯಿತು. ಲಾಯರ್ ಆಗಬೇಕೆಂಬ ತಂದೆಯ ಆಸೆ ಡಿವಿಜಿಯವರಿಗೆ ಸರಿಬರಲಿಲ್ಲ (A good lawyer is a bad neighbor ಎಂಬ ಮಾತು ಅವರ ಧೃಢನಿರ್ಧಾರಕ್ಕೆ ಕಾರಣವಂತೆ). ಶೀಟ್ಮೆಟಲ್ ಕೈಗಾರಿಕೆ ತರಬೇತಿಗೆ ತಂದೆಯಿಂದ ನಕಾರ (ಕ್ಷೌರದ ಬಟ್ಟಲು ತಯಾರಿಸುವ ಕೆಲಸವೆಂದು). ಕಂಪೆನಿಯ ಏಜೆಂಟನಾಗುವ ಯೋಚನೆಗೆ ಗೆಳೆಯರಡ್ಡಿ. ಕೆ.ಜಿ.ಎಫ್ ನ ಸೋಡಾಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಅದೃಷ್ಟವನ್ನರಸಿ ಬೆಂಗಳೂರಿಗೆ ಬಂದರು. ಜಟಕಾಗಾಡಿಗೆ ಬಣ್ಣ ಬಳಿಯುವ ಸಣ್ಣ ಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಬೆಂಗಳೂರಿಗೆ ಬಂದಿದ್ದ ಸ್ವಾಮಿ ಅಭೇದಾನಂದರ ಗೌರವಾರ್ಥ ಬರೆದಿದ್ದ ಇಂಗ್ಲಿಷ್ ಪದ್ಯವನ್ನು ಅಚ್ಚುಮಾಡಿಸಲು ಪರಿಚಯವಾದದ್ದು ನವರತ್ನ ಪ್ರೆಸ್. ಪತ್ರಿಕಾಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದ ದಿವಾನ್ ವಿ.ಪಿ.ಮಾಧವರಾಯರ ದರ್ಬಾರಿನ ವಿರುಧ್ದ ಲೇಖನವನ್ನು ಅದೇ ಪ್ರೆಸ್ ನಡೆಸುತ್ತಿದ್ದ ’ಸೂರ್ಯೋದಯ ಪ್ರಕಾಶಿಕಾ’ ಎಂಬ ಪತ್ರಿಕೆಗೆ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ. ಜೀವನದ ಕೊನೆಯವರೆಗೂ ನಡೆಸಿದ ವೃತ್ತಿ.

ಪತ್ರಿಕೋದ್ಯಮವೆಂದೂ ಡಿವಿಜಿ ಯವರಿಗೆ ಹೂವಿನ ಹಾದಿಯಾಗಲಿಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳು. ನಾವು ಗಮನಿಸಬೇಕಾದ್ದೆಂದರೆ, ಅದು ಸ್ವಾತಂತ್ರ್ಯ ಪೂರ್ವಕಾಲ. ಇಂದಿನಂತಿರಲಿಲ್ಲ ಅಂದಿನ ಪತ್ರಿಕಾ ಸ್ವಾತಂತ್ರ್ಯ. ಅದರಲ್ಲೂ ನಿಷ್ಪಕ್ಷಪಾತ, ನಿಕೃಷ್ಟತೆ, ಸರಳತೆ ಹಾಗೂ ಸಂಕ್ಷಿಪ್ತತೆಯನ್ನು ಆಧಾರವಾಗಿರಿಸಿಕೊಂಡು ಡಿವಿಜಿಯವರು ಬರೆಯುತ್ತಿದ್ದರು. ಯಾವುದೇ ಸಮಸ್ಯೆಯಾಗಲಿ ಪಕ್ಷಪಾತದ ದೃಷ್ಟಿಯನ್ನು ಬಿಟ್ಟು, ಉದ್ವೇಗರಹಿತರಾಗಿ, ಅದರ ಎಲ್ಲ ಮಜಲುಗಳನ್ನು ಪರಿಶೀಲಿಸುವುದು, ದೇಶದ ಹಿತದೃಷ್ಟಿಯಿಂದ ಅದನ್ನು ಪರಾಮರ್ಶಿಸುವುದು - ಈ ತೆರನಾದ ವಿಮರ್ಶೆ. ಅವರ ಟಿಪ್ಪಣಿಗಳಂತೂ ವಿಷಯಗಳ ಅಧ್ಯಯನ ಹಾಗೂ ಅವುಗಳ ಸಮತೂಕದ ವಿಮರ್ಶೆಗೆ ಮಾದರಿ (ಇಂತಹುದೊಂದು ಲೇಖನ ಇತ್ತೀಚೆಗೆ ಅಡಿಗರ ’ಸಾಕ್ಷಿ’ ಯಲ್ಲಿ ದೊರಕಿತು. ಅತಿವಾಸ್ತವಿಕತೆ - Surrealism ಕುರಿತು. ಸವಿಸ್ತಾರವಾಗಿ, ಸಾಹಿತ್ಯಿಕ ಭಾವ, ಕಾಲಾಂತರದಲ್ಲಿ ಅದರ ಬದಲಾವಣೆ ಕುರಿತಾದ ಉತ್ತಮ ವಿವರಣೆಯಿದೆ. Surrealist ಗಳ ಮನೋಭಾವದ ಆಳವಾದ ಚಿಂತನೆಯಿದೆ, ಅನ್ವೇಷಣೆಗಳ ವಿವರಗಳಿವೆ). ಡಿವಿಜಿಯವರು ತಪ್ಪನ್ನು ಕಂಡರೆ ಖಂಡಿಸದೆ ಬಿಡುತ್ತಿರಲಿಲ್ಲ. ವಿಶ್ವೇಶ್ವರಯ್ಯನವರಿಂದ ’ವಿಷಕಂಟಕಪ್ರಾಯನಾದ ವಿಮರ್ಶಕ’ ಎಂದು ಬಿರುದಾಂಕಿತರಾಗಿದ್ದರು. ಅವರು ನಡೆಸುತ್ತಿದ್ದ ’ಕರ್ನಾಟಕ’ ಪತ್ರಿಕೆ ’ಕಾರ್ಕೋಟಕ’ ಎಂದು ಮೂದಲಿಕೆಗೊಳಗಾಗಿತ್ತು. ’ಪತ್ರಕರ್ತ ಯಾವ ಬಾಹ್ಯ ನಿರ್ಬಂಧಗಳಿಗೂ ಒಳಗಾಗುವಂತಾಗಬಾರದು. ಆದರೆ ತಾನೇ ಹಾಕಿಕೊಂಡ ಶಿಸ್ತು ಸಂಯಮಗಳನ್ನು ಪಾಲಿಸಬೇಕು. ಈ ಆತ್ಮಾನುಶಾಸನ ಅತ್ಯಗತ್ಯ’ ಇದು ಡಿವಿಜಿಯವರ ಖಚಿತ ಅಭಿಪ್ರಾಯ. ಪತ್ರಕರ್ತರ ಸಂಘ ಹುಟ್ಟುಹಾಕಿ, ಭದ್ರಬುನಾದಿ ಹಾಕಿದವರಲ್ಲಿ ಡಿವಿಜಿ ಪ್ರಮುಖರು. ಈ ವೃತ್ತಿಯ ಕುರಿತಾದ ಅವರ ಅಧ್ಯಯನದ ಸಾಕ್ಷಿ ಅವರ ’ವೃತ್ತಪತ್ರಿಕೆಗಳು’ ಹೊತ್ತಿಗೆ. ವಸ್ತುನಿಷ್ಟ, ನಿಷ್ಪಕ್ಷಪಾತ ವಿಮರ್ಶೆಗಳು ಕಾಣೆಯಾಗಿ, ನೈತಿಕ ಅಧ:ಪತನದತ್ತ ಸಾಗುತ್ತಿರುವ ಈ ಸಮಯದಲ್ಲಿ ಪತ್ರಕರ್ತ ಡಿವಿಜಿಯವರು ಆದರ್ಶಪ್ರಾಯರಾಗುತ್ತಾರೆ.

ಡಿವಿಜಿ ಯವರದು ಸೌಮ್ಯಪಂಥ ಮನೋಭಾವ. ದಾದಾಭಾಯಿ ನವರೋಜಿ, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಯವರಿಂದ ಪ್ರಭಾವಿತರಾಗಿದ್ದರು. ೧೯೧೧ ರಲ್ಲಿ ೫ ನೆ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಡಿವಿಜಿ ಯವರು ಒಂದು ನೆನಪಿನ ಪುಸ್ತಕ ಪ್ರಕಟಿಸಿದರು - ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ (ನಮ್ಮ ರಾಷ್ಟ್ರಗೀತೆಗೂ ಅಂಟಿಕೊಂಡಿರುವ ವಿವಾದನೀತನೇ ಅಲ್ಲವೇ). ಬ್ರಿಟಿಶ್ ಪ್ರಭುತ್ವ ಭಾರತಕ್ಕೆ ದೇವರು ದಯಪಾಲಿಸಿದ ವರ ಎಂಬ ಭಾವನೆ ಆ ಪುಸ್ತಕ ಸೂಚಿಸುತ್ತದೆಯೆಂದು ಹೇಳಲಾಗಿದೆ. ಇಲ್ಲಿ ಡಿವಿಜಿ ಯವರ ಭಾವನೆಗಳು ಪ್ರಶ್ನಾತೀತವಲ್ಲದಿದ್ದರೂ, ಇದೇ ಭಾವ ಕೊನೆಯವರೆಗೂ ಇತ್ತೆಂದು ಹೇಳಲಾಗುವುದಿಲ್ಲ. ಸಂಸ್ಥಾನಗಳ ಜನತೆ ರಾಷ್ಟ್ರೀಯ ಭಾವನೆಗಳಿಗೆ ಸ್ಪಂದಿಸಬೇಕು, ಇದಕ್ಕೆ ಜನಜಾಗೃತಿಯ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದರು ಡಿವಿಜಿ. ಸಾತಂತ್ಯ್ರಾ ಪೂರ್ವದಲ್ಲೇ (೧೯೧೬ ರ ಸುಮಾರು) The problem of Indian Native states, The states and their people in the Indian Constitution ಎಂಬ ಅವರ ಪುಸ್ತಕಗಳು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಭಾರತ ಸ್ವತಂತ್ರವಾದಾಗ ರಚಿಸಿದ ಪದ್ಯಮಾಲಿಕೆ ’ಸ್ವತಂತ್ರಭಾರತ ಅಭಿನಂದನಸ್ತವ’ ಅವರ ರಾಷ್ಟ್ರಗೌರವಕ್ಕೆ ಸಾಕ್ಷಿ. ’ವಿಶ್ವದಲ್ಲಿ ಭಾರತ ನಿರ್ವಹಿಸಬೇಕಾದ ವಿಶೇಷ ಕರ್ತವ್ಯವಿದೆ. ಇತರ ರಾಷ್ಟ್ರಗಳಿಂದ ಭಿನ್ನವಾದ ಕರ್ತವ್ಯ. ಲೋಕ ಬಯಸುತ್ತಿರುವ ಬೆಳಕು ಇಲ್ಲಿಂದ ಚೆಲ್ಲಬೇಕು. ಅದಕ್ಕೆ ಭಾರತ ಸಜ್ಜುಗೊಳ್ಳಬೇಕು. ತನ್ನೊಳಗಿನ ಭಿನ್ನತೆ, ದಾರಿದ್ರ್ಯ ಅಜ್ಞಾನಗಳನ್ನು ತೊಡೆದುಹಾಕಿ ಬಲಗೊಂಡು ಧೀಮಂತವಾಗಿ ನಿಲ್ಲಬೇಕು. ಅಂಥ ಭಾರತವನ್ನು ಕಟ್ಟುವ ಶಕ್ತಿ, ನಡೆಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಬರಬೇಕು, ನಮ್ಮ ಜನರಿಗೆ ಮೈಗೂಡಬೇಕು’ ಎಂದು ಆಶಿಸಿದರು. ’ರಾಜ್ಯಶಕ್ತಿ ಒಂದು ಕತ್ತಿ, ತಿಳುವಳಿಕೆಯುಳ್ಳವರ ಕೈಯಲ್ಲಿ ಅದು ಉಪಕಾರಿ, ಇಲ್ಲದವರ ಕೈಯಲ್ಲಿ ಅಪಕಾರಿ’ ಎಂದು ಎಚ್ಚರಿಸಿದರು. ’ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ’ ಎಂದವರು ಶತಮಾನದ ಮುಂಚೆಯೇ ಹೇಳಿದ್ದರೂ, ನಾವಿನ್ನೂ ಮೊದಲನೇ ಶತ್ರುವನ್ನೇ ನಿರ್ಮೂಲನ ಮಾಡಿಲ್ಲವೆಂಬುದು ಅಷ್ಟೇ ಸತ್ಯ. ಈ ವ್ಯಾಪಕ ಅಧ್ಯಯನಗಳ ಚಿಂತನೆಯೇ ಅವರ ರಾಜ್ಯಶಾಸ್ತ್ರ ಗ್ರಂಥಗಳಾದ - ರಾಜ್ಯಶಾಸ್ತ್ರ, ರಾಜ್ಯಾಂಗ ತತ್ವಗಳು, ರಾಜಕುಟುಂಬ ಇತ್ಯಾದಿ. ಡಿವಿಜಿಯವರದು ಪಕ್ಷಾತೀತ ರಾಜಕಾರಣ. ಜನಹಿತ, ರಾಷ್ಟ್ರಹಿತ ಮುಖ್ಯ, ಪಕ್ಷಹಿತ ಮುಖ್ಯವಲ್ಲವೆಂಬ ಧೋರಣೆ. ಇಂದಿಗೂ ಇದೆಷ್ಟು ಪ್ರಸ್ತುತವಲ್ಲವೇ.

ಡಿವಿಜಿಯವರ ಮತ್ತೊಂದು ಕ್ಷೇತ್ರ ಸಮಾಜ ಸೇವೆ. ಅಮೆಚ್ಯೂರ್ ಡೆಮೊಕ್ರಾಟಿಕ್ ಅಸೋಸಿಯೇಷನ್, ಮೈಸೂರು ಸಾರ್ವಜನಿಕ ಸಭೆ, ಬೆಂಗಳೂರು ಸಿಟಿಜನ್ಸ್ ಕ್ಲಬ್, ದೇಶಾಭ್ಯುದಯ ಸಂಘ ಎಲ್ಲದರಲ್ಲೂ ಡಿವಿಜಿ ಇದ್ದರು. ೧೯೨೦ ರಲ್ಲೇ ಗೋಖಲೆ ಬಳಗ ರೂಪುಗೊಂಡಿದ್ದರೂ, ೧೯೪೫, ಫೆಬ್ರವರಿ ೧೮ ರಂದು ಅಧಿಕೃತವಾಗಿ ಸ್ಥಾಪನೆಯಾಯಿತು. ತಮ್ಮ ಕೊನೆ ಉಸಿರಿರುವವರೆಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶ್ವೇಶ್ವರಯ್ಯನವರಿಗೆ, ಆಡಳಿತ ವ್ಯವಸ್ಥೆಯ ಒಳಗೆ ಸೇರಿಕೊಳ್ಳದೆಯೇ ಹೊರಗಿನಿಂದಲೇ ಸಹಾಯ ಮಾಡುತ್ತಿದ್ದರು. ಮಿರ್ಜಾ ದಿವಾನಗಿರಿಯಲ್ಲೂ ಇದು ಮುಂದುವರೆಯಿತು. ಆದರೆ ಅವರಿಂದ ಯಾವ ಸಹಾಯವನ್ನೂ ಸ್ವೀಕರಿಸುತ್ತಿರಲಿಲ್ಲ. ಡಿವಿಜಿ ಯವರ ಸಾಂಸಾರಿಕ ಸ್ಥಿತಿ ಮುಗ್ಗಟ್ಟಿನಲ್ಲೇ ಇತ್ತು. ಎಂದೂ ಅವರು ಸಿರಿವಂತಿಕೆಯಿರಲಿ, ಆರ್ಥಿಕವಾಗಿ ನಿಶ್ಚಿಂತೆಯನ್ನೂ ಕಾಣಲಿಲ್ಲ. ಇಂತಹ ಸರಳ ಸಜ್ಜನಿಕೆ ಪ್ರಾಮಾಣಿಕತೆಯ ಜೀವನದಿಂದ ಮಾತ್ರವಲ್ಲವೇ ಅಂತಹ ಮೇರು ಕೃತಿಗಳು ಬರಲು ಸಾಧ್ಯ.

ಇನ್ನವರ ಸಾಹಿತ್ಯ ಕೃಷಿಯ ಬಗ್ಗೆ ಹೇಳದಿದ್ದಲ್ಲಿ ಲೇಖನ ಅಪೂರ್ಣವಾಗುತ್ತದೆ. ೧೯೪೫ ರಲ್ಲಿ ಪ್ರಕಟವಾದ ೯೪೫ ಚೌಪದಿಗಳ ಮಂಕುತಿಮ್ಮನಕಗ್ಗ ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧ. ನಂಬಿಕೆಯಿಂದ ಆರಂಭವಾಗಿ, ಶಂಕೆಯಿಂದ ಮುನ್ನಡೆಗೊಂಡು, ಜೀವನದ ಅನುಭವಗಳೊಂದಿಗೆ ಹೊಂದಿಕೊಂಡು, ಹೋಲಿಸಿಕೊಂಡು, ಸಂದೇಹಗಳನ್ನು ನಿವಾರಿಸಿ ಮತ್ತೆ ನಂಬಿಕೆಯೆಡೆಗೆ ಕರೆದೊಯ್ಯುವ ಉತ್ಕೃಷ್ಟ ತತ್ವ ಚಿಂತನೆ ಕಗ್ಗ. ಅಂತ:ಪುರ ಗೀತೆಗಳು ಒಂದು ಸಂಗೀತ ಕಾವ್ಯ. ಡಿವಿಜಿಯವರು ಪಿಟೀಲು ನಾರಾಯಣಸ್ವಾಮಿ ಭಾಗವತರು ಹಾಗೂ ಮೈಸೂರು ವಾಸುದೇವಾಚಾರ್ಯರಲ್ಲಿ ಕೆಲಕಾಲ ಸಂಗೀತಾಭ್ಯಾಸ ನಡೆಸಿದ್ದರು. ಅದರ ಜ್ಞಾನ ಅವರ ಈ ಕೃತಿಯಲ್ಲಿ ಕಾಣಸಿಗುತ್ತದೆ. ’ಮುಕುರ ಮುಗ್ಧೆ’ ಯಿಂದ ’ಲತಾಂಗಿ’ ವರೆಗೆ ಒಟ್ಟು ೫೨ ಶಿಲ್ಪಕನ್ನಿಕೆಯರು. ಪುಂವಿಡಂಬಿನಿ, ಕೃತಕಶೂಲಿ, ನಾಗವೈಣಿಕೆಯರಿಗೆ ಮಾತ್ರ ಶಂಕರಾಭರಣಮ್ ರಾಗ. ಮಿಕ್ಕೆಲ್ಲ ಸುಂದರಿಯರಿಗೂ ಪ್ರತ್ಯೇಕ ರಾಗಗಳು. ಚೆನ್ನಕೇಶವನಾದಿಯಾಗಿ, ನಾಂದಿಗೀತೆ, ಮಂಗಳಗೀತೆ, ಸೌಂದರ್ಯಗೀತೆ ಹೀಗೆ ಗೀತೆಗೊಂದು ರಾಗಸಂಯೋಜನೆಯಂತೆ, ಒಟ್ಟು ೫೫ ರಾಗಗಳ ಪ್ರಯೋಗ. ನಡುವೆ ಭಸ್ಮಮೋಹಿನಿಯೆಂಬ ಸಂಗೀತ ರೂಪಕವೂ ಇದೆ. ಹೇಗೆ ನಾಟಕವಾಗಿ ಅಭಿನಯಿಸಬೇಕೆಂಬುದಕ್ಕೆ, ನಾಂದಿಯಿಂದ ಮಂಗಳದವರೆಗೂ, ಹಿಮ್ಮೇಳದ ಜೊತೆಗೆ ಪಾತ್ರಧಾರಿಗಳ ಸಂವಾದಕ್ಕೂ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ, ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಿಯ ಕಲ್ಪನೆಯ ಕಲೆಗೆ, ಕಾವ್ಯದ ಅಲಂಕಾರ, ಸಂಗೀತದ ಅಭಿಷೇಕ ಈ ಕೃತಿ. ಕೇತಕೀವನ - ಒಂದು ವಿಶೇಷ ಕವನಸಂಗ್ರಹವೆನ್ನಬಹುದು. ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ’ನನಗೆ ಓದುವುದಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರು ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದುದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ ಗುರುತುಹಾಕುತ್ತಿದ್ದುದುಂಟು. ಅಂಥ ಚೀಟಿಗಳು ಈಗ ಪುಸ್ತಕವಾಗಿದೆ’. ಆದ್ದರಿಂದಲೇ ಇದರಲ್ಲಿ ವೈವಿಧ್ಯವಿದೆ. ೪ ಸಾಲಿನ ಬಿಎಂಶ್ರೀ ಕುರಿತಾದ ಕವನದಿಂದ ಮಾರುತಿ ಬಗೆಗಿನ ೨.೫ ಪುಟಗಳ ಕವನವೂ ಇದೆ. ಹಂಪೆ, ತಾಜಮಹಲಿನಿಂದ, ಈಜಿಪ್ಟಿನ ಸ್ಪಿಂಕ್ಸ್ ವರೆಗಿನ ಕವನಗಳೂ ಇವೆ. ಅಳು, ನಗು, ಪ್ರೀತಿ, ಪ್ರೇಮ, ಸಂದೇಹ ಎಲ್ಲ ಭಾವನೆಗಳಿವೆ. Keats, Tennyson, Robert browning ರ ಕವನಗಳ ಅನುವಾದಗಳೂ ಇವೆ. ಒಟ್ಟಿನಲ್ಲಿ ಡಿವಿಜಿ ಯವರ ಅರಿವಿನಾಳವಿಸ್ತಾರಗಳಿಲ್ಲಿವೆ. ಗೋಪಾಲಕೃಷ್ಣ ಗೋಖಲೆ, ಗೋಖಲೆ ಜೀವನ ಚರಿತ್ರೆಯಾದರೆ, ಈಶೋಪನಿಷತ್ತು ಕನ್ನಡ ಅರ್ಥಾನುವಾದ. ನಾಕಂಡಿರುವ ಇವು ಅವರ ಸಾಹಿತ್ಯ ಸಾಗರದ ಒಂದು ಹನಿ. ಡಿವಿಜಿಯವರ ಸಾಹಿತ್ಯ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಅದರಲ್ಲಿ ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ತತ್ವಚಿಂತನೆ, ಕವಿತೆಗಳು, ನಾಟಕಗಳು, ಅನುವಾದ ನಾಟಕಗಳು, ರಾಜಕೀಯ, ನಿಬಂಧಗಳು ಎಲ್ಲವೂ ಇವೆ. ವೈಜ್ಞಾನಿಕ - ಸಾಂಪ್ರದಾಯಿಕ ಚಿಂತನೆಗಳು, ಮೂಡಣ - ಪಡುವಣ ವಿಚಾರಗಳು, ಇತಿಹಾಸ - ವಾಸ್ತವಿಕತೆಗಳು ಇವೆಲ್ಲವುಗಳ ಹದವಾದ ಮಿಶ್ರಣ. ಎಲ್ಲ ಕೃತಿಗಳ ಸ್ಥೂಲ ಪರಿಚಯವನ್ನು ಕಸ್ತೂರಿಯವರು ಕೊಟ್ಟಿದ್ದಾರೆ, ಅದನ್ನೋದಿದ ಮೇಲೆ, ಅವರ ಪುಸ್ತಕಗಳನ್ನೋದುವ ಹಂಬಲ ಇಮ್ಮಡಿಯಾಗಿದೆ. ಅವರ ಜನ್ಮಶತಾಬ್ದಿಯ ಅಂಗವಾಗಿ, ಅವರೆಲ್ಲ ಕೃತಿಗಳನ್ನು ’ಡಿವಿಜಿ ಕೃತಿ ಶ್ರೇಣಿ’ ಎಂಬ ಹೆಸರಿನಲ್ಲಿ ೧೧ ಸಂಪುಟಗಳಾಗಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಬಿಡುಗಡೆ ಮಾಡಿವೆ ಎಂಬ ಮಾಹಿತಿ ದೊರಕಿತು.

ಪತ್ರಕರ್ತರಾಗಿ, ಸಾಹಿತಿಯಾಗಿ, ಸಮಾಜಸೇವಕರಾಗಿ ನಾಡಿಗೆ ಡಿವಿಜಿ ಯವರ ಸೇವೆ ಅಪಾರ. ಎಲ್ಲರೆನ್ನುವಂತೆ ನಾಡಿನ ನಭೋಮಂಡಲದಲ್ಲಿ ಬೆಳಗುವ ಧೃವತಾರೆ ಡಿವಿಜಿ.

(ಅವರ ಹುಟ್ಟುಹಬ್ಬಕ್ಕೆ ಒಂದು ಕೃತಜ್ಞತಾಪೂರ್ವಕ ಕಿರುಕಾಣಿಕೆ)

8 comments:

Ittigecement said...

ವಿನುತಾ..

ಸಮಯೋಚಿತ ಲೇಖನ..
ಅವರ ಜನ್ಮದಿನದಂದು.. ಅವರಸ್ಮರಣೆ,..
ಅವರ ಕಾರ್ಯ ಕ್ರತಿಗಳ ಮೆಲುಕು...
ಭೇಷ್..!

ಎಲ್ಲ ಆಧ್ಯಾತ್ಮ ಸಾರಗಳು "ಮಂಕುತಿಮ್ಮನ ಕಗ್ಗದಲ್ಲಿದೆ"
ಅವರು ಬದುಕಿದ ರೀತಿಯೂ ನಮಗೆ ಆದರ್ಶ..!

ಸುಂದರವಾದ ಲೇಖನಕ್ಕೆ

ಅಭಿನಂದನೆಗಳು..

Rajesh Manjunath - ರಾಜೇಶ್ ಮಂಜುನಾಥ್ said...

ವಿನುತ,
ಉತ್ತಮ ಮತ್ತು ಉಪಯುಕ್ತ ಮಾಹಿತಿಗಳು...
ಆದರೆ ನಿಮ್ಮ ಲೇಖನವನ್ನು ಪೂರ್ಣವಾಗಿ ನಕಲು ಮಾಡಿದ್ದು ನಿಜಕ್ಕೂ ಅಸಹ್ಯವೆನ್ದೆನಿಸಿತು.... ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ ಧ್ರುತಿಗೆದಡಿರಿ...

guruve said...

ವಿನುತಾರವರೆ,

ಡಿ ವಿ ಜಿ ಯವರ ಜೀವನ ಮತ್ತು ಸಾಹಿತ್ಯದ ಬಗ್ಗೆ ಸವಿವರವಾದ ಲೇಖನ ಬಹಳ ಚೆನ್ನಾಗಿದೆ. ಮತ್ತೊಮ್ಮೆ ಓದುವ ಹಾಗಿದೆ ಮತ್ತು ಸಂಗ್ರಹಕ್ಕೆ ಯೋಗ್ಯವಾದದ್ದನ್ನು ಬರೆದಿದ್ದೀರ. ಅಭಿನಂದನೆಗಳು. ನನಗೆ ತಿಳಿಯದ ಹಲವು ವಿಷಯಗಳು ಸಿಕ್ಕವು.

ಈ ಆಂತ:ಪುರ ಗೀತ, ಇಡೀ ಭಾರತದಲ್ಲಿ (ಯಾವುದೇ ಭಾಷೆಯಲ್ಲಾದರೂ) ಅಪೂರ್ವ ಮತ್ತು ವಿಶಿಷ್ಟ ಕೃತಿಯಂತೆ. ಬೇರೆ ಯಾವ ಭಾಷೆಯಲ್ಲೂ ಈ ರೀತಿಯ, ಶಿಲ್ಪ ಕೆಲೆ ಆಧಾರಿತ ಗೇಯ ಕೃತಿ ಇಲ್ಲಿಯವರೆಗೂ ಬಂದಿಲ್ಲವಂತೆ . (ಗೋಖಲೆ ವಿಚಾರ ವೇದಿಕೆಯ ಅಧ್ಯಕ್ಷ ರಾಮಸ್ವಾಮಿಯವರು ಹೇಳಿದ್ದು - ಸಮಾಜ ಸೇವಕರ ಸಮಿತಿಯವರು ನಡೆಸಿದ ಗುಂಡಪ್ಪನವರ ಜನ್ಮೋತ್ಸವ ಕಾರ್ಯಕ್ರಮದಲ್ಲಿ). ಮದ್ರಾಸ್ ಮ್ಯೂಸಿಕ್ ಅಕ್ಯಾಡಮಿಯವರು ದೇಶದ ಎಲ್ಲಾ ರಾಜ್ಯದ ಸಾಹಿತ್ಯ ಸಂಘಗಳಿಗೂ ಪತ್ರ ಬರೆದು ಈ ಕೃತಿಯ ಬಗ್ಗೆ ಪರಿಚಯಿಸಿ, ನಿಮ್ಮ ಭಾಷೆಯಲ್ಲೇನಾದರೂ ಈ ರೀತಿಯ ಕೃತಿಯುಂಟೆ? ಎಂಬುದಾಗಿ ಪ್ರಶ್ನಿಸಿದಾಗ, ಅಲ್ಲಲ್ಲಿ ಒಂದೋ ಎರಡೋ ಪದ್ಯಗಳನ್ನು ಬಿಟ್ಟರೆ, ಈ ಪರಿಯ (ಇಡೀ ದೇವಾಲಾಯದ ಮೂರುತಿಗಳ ಮೇಲಿನ ಕಾವ್ಯ ಚಿತ್ರಣವಿರುವ) ಕೃತಿಯ ಬಗ್ಗೆ ಯಾವ ರಾಜ್ಯದಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರಲಿಲ್ಲವಂತೆ.

ನಾನು ’ಸಿರಿಗನ್ನಡ ಮಳಿಗೆ’ (ರಾಜ್ಯಸರ್ಕಾರ ಕ್ಕೆ ಸಂಬಂಧವಿರುವ ಪ್ರಕಾಶನದ ಪುಸ್ತಕ ಮಳಿಗೆ) ಯಲ್ಲಿ ವಿಚಾರಿಸಿದಂತೆ, ಈ ಡಿ ವಿ ಜಿ ಕೃತಿ ಶ್ರೇಣಿಯಲ್ಲಿ, ಸಂಪುಟ-೧೦ ಮಾತ್ರ ದೊರಕುತ್ತಿರುವುದು. ಬೇರೆ ಸಂಪುಟಗಳ ಮರು ಮುದ್ರಣ ಕಂಡಿಲ್ಲ.

Laxman (ಲಕ್ಷ್ಮಣ ಬಿರಾದಾರ) said...

ತುಂಬಾ ಚೆನ್ನಾಗಿದೆ
ವಿನುತಾ
ಬರಿತಾ ಇರಿ
ಲಕ್ಷ್ಮಣ

ವಿನುತ said...

ಪ್ರಕಾಶ್ ರವರೇ,
ನೀವೆಂದಂತೆ ಡಿವಿಜಿಯವರ ಜೀವನವೇ ಒಂದು ಆದರ್ಶ.
ಪ್ರೋತ್ಸಾಹಕ್ಕೆ ಧನ್ಯವಾದಗಳು

ರಾಜೇಶ್,
ಬೆಂಬಲಕ್ಕೆ ಧನ್ಯವಾದಗಳು

ಗುರುರವರೇ,
ಅಂತ:ಪುರಗೀತೆಗಳ ಬಗ್ಗೆ ನೀವು ನೀಡಿದ ಮಾಹಿತಿ, ಡಿವಿಜಿಯವರ ಕೃತಿಗಳ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿಸುತ್ತದೆ. ಅವರ ಕೃತಿ ಶ್ರೇಣಿಯ ಬಗ್ಗೆ ನನಗೆ ಅಂತರ್ಜಾಲದಲ್ಲಿ ದೊರೆತ ಮಾಹಿತಿಯದು. ಬೇರೆ ಮಳಿಗೆಗಳಲ್ಲಿ ನಾನೂ ಹುಡುಕಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ಧನ್ಯವಾದಗಳು.

ಲಕ್ಷ್ಮಣರವರೇ
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

Parisarapremi said...

ಹೊತ್ತಿಗೆಗಳ ಪಟ್ಟಿಗೆ "ಜೀವನ ಧರ್ಮಯೋಗ"ವನ್ನೂ ಸೇರಿಸಿಕೊಳ್ಳಿ. ಭಗವದ್ಗೀತೆಯ ತಾತ್ಪರ್ಯ. ಅದ್ಭುತವಾದ ಕೃತಿ. "ಧೀಮಂತ" ಎಂಬ ಸುಮಾರು ಏಳುನೂರೈವತ್ತು ಪುಟಗಳುಳ್ಳ ಪುಸ್ತಕ ಎಂ.ವಿ.ಸೀತಾರಾಮಯ್ಯನವರು ಸಂಪಾದಿಸಿದ್ದಾರೆ. ಡಿವಿಜಿಯವರ ಪ್ರಬಂಧಗಳು ಮತ್ತು ಭಾಷಣಗಳು. ಬಹಳ ಸೊಗಸಾಗಿದೆ. :-)

ಡಿ.ವಿ.ಜಿಯವರ ಈ ಚಿಕ್ಕ ಮತ್ತು ಚೊಕ್ಕ ಬಯಾಗ್ರಫಿಯನ್ನು ನೀಡಿದ್ದಕ್ಕೆ ಧನ್ಯವಾದಗಳು.

ವಿನುತ said...

'ಜೀವನ ಧರ್ಮಯೋಗ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ , ಮರೆಯಲು ಸಾಧ್ಯವೇ!! ಆದರೆ ಇನ್ನು ಓದಿಲ್ಲ :) 'ಧೀಮಂತ' ದ ಬಗ್ಗೆ ಮಾಹಿತಿಗಾಗಿ ಧನ್ಯವಾದಗಳು.

木須炒餅Jerry said...

cool!i love it!情色遊戲,情色a片,情色網,性愛自拍,美女寫真,亂倫,戀愛ING,免費視訊聊天,視訊聊天,成人短片,美女交友,美女遊戲,18禁,三級片,自拍,後宮電影院,85cc,免費影片,線上遊戲,色情遊戲,日本a片,美女,成人圖片區,avdvd,色情遊戲,情色貼圖,女優,偷拍,情色視訊,愛情小說,85cc成人片,成人貼圖站,成人論壇,080聊天室,080苗栗人聊天室,免費a片,視訊美女,視訊做愛,免費視訊,伊莉討論區,sogo論壇,台灣論壇,plus論壇,維克斯論壇,情色論壇,性感影片,正妹,走光,色遊戲,情色自拍,kk俱樂部,好玩遊戲,免費遊戲,貼圖區,好玩遊戲區,中部人聊天室,情色視訊聊天室,聊天室ut,做愛