ಬೆಳಗಿನ ಜಾವದ ಚುಮುಚುಮು ಚಳಿಯಲ್ಲಿ ಬಣ್ಣ ಬಣ್ಣದ ಬಟ್ಟೆ ತೊಟ್ಟು, ಅಪ್ಪನ ಕೈಯನ್ನೋ ಅಮ್ಮನ ಕೈಯನ್ನೋ ಹಿಡಿದುಕೊಂಡು ಶಾಲೆಗೆ ಹೋಗುತ್ತಿರುವ ಆ ಮುದ್ದು ಮಕ್ಕಳನ್ನು ಕಂಡಾಗ ನಮ್ಮ ಬಾಲ್ಯದಂಗಳಕ್ಕೆ ಕರೆದೊಯ್ಯುತ್ತೀರಿ. ಬಸ್ ಸ್ಟಾಂಡ್ ನಲ್ಲಿ ಲೈಟ್ ಕಂಬ ಹಿಡಿದು ಸುತ್ತುತ್ತಿರುವ ಆ ಅಣ್ಣತಂಗಿಯನ್ನು ಕಂಡಾಗ, ಅಕ್ಕನ ಕೈಯಲ್ಲಿನ ಚಾಕಲೇಟೇ ಬೇಕು ಎಂದು ಅಳುತ್ತಿರುವ ತಂಗಿಯನ್ನು ಕಂಡಾಗ ನಮ್ಮ ಕದನಗಳ ರಣಭೂಮಿಗೆ ಹೊತ್ತೊಯ್ಯುತ್ತೀರಿ. ಅಲ್ಲೆಲ್ಲೋ ಕೆಫೆಯೊಂದರಲ್ಲಿ ಹರಟುತ್ತಿರುವ ಯುವಕ ಯುವತಿಯರನ್ನು ಕಂಡಾಗ ನಮ್ಮ ಕಾಲೇಜಿನ ಆವರಣದಲ್ಲೇ ಇಳಿಸುತ್ತೀರಿ. ಪ್ರೀತಿಪಾತ್ರರಿಂದ ದೂರವಾಗಿ ನೆಲೆಸಿ ನಡೆಯುತಿರಲು ಧುತ್ತೆಂದು ಧಾಳಿ ಮಾಡುತ್ತೀರಿ. ಖಿನ್ನತೆಯನ್ನು ಜೊತೆಗೂಡಿಸುತ್ತೀರಿ. ಆಸಕ್ತಿಯನ್ನು ಕಳೆದುಬಿಡುತ್ತೀರಿ. ಏಕೆ ಹೀಗೆ ಕಾಡುತ್ತೀರಿ? ಬಿಟ್ಟುಕೊಡಿ ಇಂದಿನ ಈ ಹೊತ್ತನ್ನು ಇಂದಿನ ಈ ಹೊತ್ತಿಗೆ. ಬಿಟ್ಟುಬಿಡಿ ಸವಿಯಲು ಈಗ ಕಾಣುತ್ತಿರುವ ಆ ಮಕ್ಕಳ ಮುಗ್ಧತೆಯನ್ನು, ಸೋದರವಾತ್ಸಲ್ಯವನ್ನು, ಹುಡುಗರ ಹುಡುಗಾಟಿಕೆಯನ್ನು. ದಾರಿಮಾಡಿಕೊಡಿ ಹೊಸನೆನಪುಗಳಿಗೆ. ತೆರೆದುಕೊಳ್ಳಲು ಬಿಡಿ ಹೊಸ ಅನುಭವಗಳಿಗೆ.....
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೇ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ
ಕಾಲನ ಕೆಲಸವೇ ಅದು. ಯಾರ ಹಂಗೂ ಇಲ್ಲದೆ ಮುಂದೆ ಸಾಗುತ್ತಿರುತ್ತಾನೆ. ದಿನ, ವಾರ, ತಿಂಗಳುಗಳನ್ನು ಹೊತ್ತು ತರುತ್ತಾನೆಯೇ ಹೊರತು ವಸಂತಗಳನ್ನಲ್ಲ. ಆದರೆ ನೀವು ಕಾಲನನ್ನೇ ಮೀರಿದವರು. ಕ್ಷಣಮಾತ್ರದಲ್ಲೇ ಎಷ್ಟು ಏಡುಗಳನ್ನಾದರೂ ಎಣಿಸಿಬಿಡುತ್ತೀರಿ! ಓಡುತ್ತಿರುವ ಕಾಲನೊಂದಿಗೆ ಎಷ್ಟೇ ವೇಗವಾಗಿ ಓಡಿದರೂ ಕಟ್ಟಿಬಿಡುತ್ತೀರಲ್ಲ ಹರಿವಿಗೊಂದು ತಡೆಯನ್ನು! ಮರೆಯಬೇಕೆಂದಿರುವ ಘಟನೆಗಳನ್ನೇ ಬುನಾದಿಯಾಗಿಸಿ, ವ್ಯಕ್ತಿಗಳನ್ನೇ ಕೂಲಿಗಳನ್ನಾಗಿಸಿ ನಿಮ್ಮ ಭದ್ರಕೋಟೆಯನ್ನು ಕಟ್ಟುತ್ತೀರಿ. ಕಾಲಗತಿಯಲ್ಲಿ ಅಳಿಸಿಹೋಗಬಹುದಾದ ಸಾಧ್ಯತೆಯನ್ನೇ ಅಳಿಸಿಹಾಕುತ್ತೀರಿ.
ಕಪ್ಪುಕಣ್ಣಿನ ದಿಟ್ಟ ನೋಟದರೆಚಣವನ್ನೆ
ತೊಟ್ಟಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಇರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ
ಪಯಣದಲ್ಲೂ, ಏಕಾಂತದಲ್ಲೂ, ಕಣ್ಣುಮುಚ್ಚಿದರೂ, ತೆರೆದರೂ, ಮಗ್ಗಲು ಬದಲಿಸಿದರೂ ನೀವೇ ಇರುತ್ತೀರಿ. ಕನಸುಗಳು ಕಣ್ಮರೆಯಾಗಿವೆ. ಕಣ್ಣೀರು ಇಂಗಿ ಹೋಗಿದೆ. ಜೀವನದಲ್ಲಿಯ ಜೀವ ಕಳೆದುಹೋಗೆ, ಕೇವಲ ನಕಾರ ಉಳಿದುಕೊಂಡಿದೆ. ಎದೆ, ತನ್ನ ಗೂಡೇ ಒಡೆದುಹೋಗುತ್ತದೇನೋ ಎನ್ನುವಂತೆ, ಹೃದಯ, ತನ್ನ ಕವಾಟವೇ ಬಿರಿದುಹೋಗುತ್ತದೇನೋ ಎನ್ನುವಂತೆ ಚೀರುತ್ತಿದೆ ನಿಮ್ಮ ಬೇಡಿಯಿಂದ ಬಿಡಿಸಿಕೊಳ್ಳಲು. ಎಲ್ಲಿಯವರೆಗೆ ಕಾಡುತ್ತೀರಿ? ಎಲ್ಲಿಯವರೆಗೆ ನಿಮ್ಮ ಬಂಧನದ ಬೇಲಿಯೊಳಗೆ ಬದುಕನ್ನು ಬಂಧಿಸಿಡುತ್ತೀರಿ? ಮೈಕೊಡವಿ ನಿಮ್ಮಿಂದ ಬಿಡಿಸಿಕೊಂಡರೂ ಕೊನೆಗೆ ಸಿಗುವುದೇನು? ಗತಿಸಿಹೋದ ಗೆಳೆಯರ, ಮುರಿದುಹೋದ ಸಂಬಂಧಗಳ, ಕಳೆದು ಹೋದ ವಿಶ್ವಾಸದ, ನಶಿಸಿ ಹೋದ ನಂಬಿಕೆಯ, ವ್ಯರ್ಥವಾದ ಸಮಯದ ಕುರಿತಾದ ಒಂದು ನಿಡಿದಾದ ಉಸಿರು, ಕೊನೆಯದೇನೋ ಎಂಬಂತೆ ಕಣ್ಣಂಚಿನಲ್ಲಿ ಕೂತಿರುವ ಆ ನೀರ ಬಿಂದು... ...
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ
ಬೆನ್ನಲ್ಲಿ ಇರಿಯದಿರು ಓ! ಚೆಂದ ನೆನಪೇ
ಹೊಸ ಕನಸುಗಳನ್ನು ಹೆಣೆಯಲು ಹವಣಿಸುತ್ತಿರುವಾಗ, ಹಳೆಯ ಛಿದ್ರಗೊಂಡ ಕನಸುಗಳ ಗೋರಿಯಿಂದ ಭಯವನ್ನೆತ್ತಿ ತರುತ್ತೀರಿ. ಹೊಸ ಗುರಿಯ ಹೊಸೆಯುತ್ತಿರಲು, ಹಿಂದೊಮ್ಮೆ ಗುರಿ ತಲುಪಿದ ಸಂಭ್ರಮದಲ್ಲಿ ಬುಡವೇ ಕಳಚಿಬಿದ್ದ ಅನುಭವಗಳ ಹೊತ್ತು ತರುತ್ತೀರಿ. ಕನಸುಗಳಿಲ್ಲದೆ ನಿದ್ದೆ ನಿರ್ವಿಣ್ಣವಾಗಿದೆ. ಗುರಿಯೊಂದು ಕಾಣದೆ ಹಾದಿ ಗೆದ್ದಲು ಹಿಡಿದಿದೆ. ಭವಿಷ್ಯವನ್ನು ನಿರ್ಧರಿಸಲಾಗದೆ, ಗತವನ್ನು ಬದಲಿಸಲಾಗದೆ ಜೀಕುತ್ತಿರುವ ಜೀವನ ಜಡ್ಡುಹಿಡಿದಿದೆ. ಬದುಕು ನಿಮ್ಮ ಸುಳಿಯಲ್ಲೇ ಸುತ್ತಿ ಸುತ್ತಿ ಸ್ಮಶಾನ ಸೇರುವ ಮೊದಲು ಅದನ್ನು ಮುಕ್ತಗೊಳಿಸಿ. ಬಾಳು ಪುನರುಜ್ಜೀವನಗೊಳ್ಳಲಿ ನವಚೈತನ್ಯದೊಂದಿಗೆ, ಸಾಗಲಿ ಹೊಸದಿಗಂತದೆಡೆಗೆ....
[ಕವನ: ಡಾ.ನಿಸಾರ್ ಅಹಮದ್]
[ಚಿತ್ರ: ಪಾಲಚಂದ್ರ]
[ಹಾಡನ್ನು ಇಲ್ಲಿ ಕೇಳಿ]
16 comments:
ವಿನುತ,
ಎಷ್ಟೋ ನೆನಪುಗಳು ಬದುಕಿನ ಆ ಕ್ಷಣದ ಪ್ರಶಾಂತತೆಯನ್ನು ಕದಡಿ ಬಿಡುತ್ತವೆ. ಬರಹ ಓದಿದ ಮೇಲು ಮನದಲ್ಲಿ ಮೆಲುಕು ಹಾಕುವಂತಿದೆ. ಸಾಲಿನಿಂದ ಸಾಲಿಗೆ ಭಾವನೆಗಳ ವ್ಯಾಪ್ತಿ ಹಬ್ಬಿಸುತ್ತ ಸಾಗಿದ್ದೀರಿ. ನನ್ನೂರು ನೆನಪಾಗ್ತಿದೆ, ಜೊತೆಗೆ ಅಮ್ಮ ಕೂಡ.
ನಿಸಾರ್ ಅಹಮದ್‍ರವರ ಕವನಗಳ ಜೊತೆಗೂಡಿಸಿಕೊಂಡು ಭಾವನೆಗಳು, ಕನಸುಗಳು, ನೆನಪುಗಳು ಎಲ್ಲವನ್ನು ಬರಹದಲ್ಲಿ ಚೆನ್ನಾಗಿ ಅಲಂಕರಿಸಿದ್ದೀರಿ...
ಬರಹ ಇಷ್ಟವಾಯಿತು..
ವಿನೂತಾರವರೆ...
ಬಹಳ ಸೊಗಸಾಗಿದೆ..
ನಿಸಾರ್ ಅವರ ಈ ಕವಿತೆ ನನಗೆ ಬಹಳ ಇಷ್ಟ..
ಅದರೊಂದಿಗೆ ನಮ್ಮ ನೆನಪುಗಳನ್ನು ಮೆಲುಕು ಹಾಕಿಸುತ್ತದೆ ನಿಮ್ಮ ಲೇಖನ...
ಬಹಳ ಆಪ್ತವಾಗಿದೆ...
ಅಭಿನಂದನೆಗಳು...
tumbaa khushikodtu nimma baraha:)
ವಿನುತಾರವರೆ,
ಣೆನಪು ಅನ್ನುವುದು ನನ್ನ ಮೆಚ್ಚಿನ ಪದ.
ಬರಹ ಇಷ್ಟವಾಯಿತು
ವಿನುತ,
ನಿಸಾರ್ ಸರ್ ಅವರ ಕವನ, ಅದಕ್ಕೆ ಒಪ್ಪುವ ನಿಮ್ಮ ಬರಹ,, ತುಂಬ ಚೆನ್ನಾಗಿ ಇದೆ.. ಇಷ್ಟ ಆಯಿತು....ಮತ್ತೆ ಮತ್ತೆ ಓದಬೇಕೆನಿಸಿದೆ...
ಗುರು
ವಿನುತ ಅವರೆ,
ತುಂಬಾ ಚೆನ್ನಾಗಿದೆ. ನಿಸಾರ್ ಅವರ ಕವನಗಳು ಜೊತೆಯಲ್ಲಿ ಸೂಕ್ತ ಭಾವ ಬಿಂದುಗಳು.
ವಿನುತಾ
ನೆನಪುಗಳೇ ಹಾಗೆ ಒಲಿದ ನಲ್ಲನ ಹಾಗೆ ದೂರ ತಳ್ಳಲು ಹೋದರೂ ಹಿಂದೆಯೇ ಬರುತ್ತವೆ . ಬರವಣಿಗೆ ಓದಲು ಚೆಂದವೆನಿಸಿತು. ಅಂದಹಾಗೆ ನೆನಪುಗಳ ಬಗ್ಗೆ ನಿಮ್ಮದೇ ಮತ್ತೆರೆಡು ಲೇಖನಗಳನ್ನು ಓದಿದ ನೆನಪು.
ವಿನುತ,
ತುಂಬಾ ಒಳ್ಳ್ಲೆಯ ಬರಹ, ಅದರೊಂದಿಗೆ ಕವನದ ಅಲಂಕಾರ ಬರಹದ ಅಂದವನ್ನು ಹೆಚ್ಚಿಸಿದೆ.
ಸರಳ ಹಾಗೂ ಸೌಂದರ್ಯತೆ ತುಂಬಿದ ಸುಂದರ ಲೇಖನ
nenapugalodane enedukonda nimma baraha akarshakavaagide, oduttale nanna nenapugalu muttige haakidavu.
ವಿನುತ, ನಿಸಾರ ಕವಿತಾ ಸಾರವನ್ನು ನಿಮ್ಮ ಚಿಂತನೆಗಳ ಮಂಥನದಿ ಬೆಸೆದು ಸ್ವಾದಿಷ್ಠ ವ್ಯಂಜನ ತಯಾರಿಸಿದ್ದೀರಿ. ಇಲ್ಲ ಸಲ್ಲದ ನೆವವೊಡ್ಡಿ ಕಾಡುವ ನೆನಪುಗಳು ಮತ್ತೆ ಕಾಡುವ ಪರಿ, ಕೆಲವೊಮ್ಮೆ ನೆನಪು ಎಷ್ಟು ಭಯಾನಕವಾಗಿರುತ್ತೆ ಎನ್ನುವುದಕ್ಕೆ..ಸತ್ತಭೂತವನ್ನು ಹದ್ದು ಎತ್ತಿ ತಂದು ಅಂಗಳದಿ ಹಾಕಿದಂತೆ..ಮನಂಗಳದಿ ಕಾಡುತ್ತವೆ...ಚನ್ನಾಗಿದೆ ಜೋಡಣೆ
ಹಳೆಯ ನೆನಪುಗಳು ಕಾಡುವುದಷ್ಟೇ ಅಲ್ಲ, ಕಿರಿಕಿರಿಕೂಡ ಮಾಡುತ್ತವೆ, ಒಳ್ಳೆ ಮಧುರ ನೆನಪುಗಳು ಮರೆತರೂ ಮರೆಯದ ಕೆಲವು ಕಾಡುವ ನೆನಪುಗಳಿಗೆ ಅಳಿವೇ ಇಲ್ಲ.
ಪ್ರತಿಯೋಂದು ಸಾಲಿನಲ್ಲೂ ಭಾವನೆಗಳು ಒತ್ತಿ ಒತ್ತಿ ಇಟ್ಟಂತೆ ಇದೆ, ನೆನಪುಗಳ ಬಗ್ಗೆ ನೆನಪಿಡುವಂತಹ ಲೇಖನ.
ಅದರಲ್ಲೂ
"ಎದೆಗೊಳವ ರಾಡಿಗೊಳಿಸುವೆಯೇಕೆ ಮಧುರ ನೆನಪೇ"
"ಗತವನ್ನು ಬದಲಿಸಲಾಗದೆ ಜೀಕುತ್ತಿರುವ ಜೀವನ ಜಡ್ಡುಹಿಡಿದಿದೆ." ಇವಂತೂ ಬಹಳ ಇಷ್ಟವಾದವು...
ನನ್ನಷ್ಟಕ್ಕೆ ನನಗೇ ಈ ಸಾಲುಗಳು ಮತ್ತೆ ನೆನಪಾಗಿ ಕಾಡದಿರಲಿಕ್ಕಿಲ್ಲ.
ತುಂಬಾ ಚನ್ನಾಗಿದೆ,ಕವನಗಳೊಂದಿಗೆ ನಿಮ್ಮ ಬರವಣಿಗೆ ರೀತಿ ಮತ್ತು ನೆನಪಿನ ತುಣುಕುಗಳು. . ಇನ್ನು ನಾ ನಿಮ್ಮ ಕಾಯಂ ಓದುಗ. ಹಾಗೆ ದಯವಿಟ್ಟು ಒಮ್ಮೆ ನನ್ನದೊಂದು ಬ್ಲಾಗ್ ಇದೆ ನೋಡಿ, ಓದಿ ತಮ್ಮ ಸಲಹೆಗಳೊಂದಿಗೆ ನಿಮ್ಮ ಜೊತೆ ನನ್ನೂ ಸೇರಿಸಿಕೊಳ್ಳುವಿರಾ? ಹಾಗಾದರೆ ನನ್ನ ಬ್ಲಾಗ್ neenandre.blogspot.com
ವಿನುತ.....
ಈ ಕವನ ನನಗೆ ತುಂಬಾ ಇಷ್ಟವಾದುದು. ಕೇಳುತ್ತಿದ್ದರೆ ಮನಸ್ಸು ಎಲ್ಲೋ ಕಳೆದೇ ಹೋಗುತ್ತದೆ ಅಲ್ಲವಾ? ನಿಮ್ಮ ಬರಹ ಕೂಡ ಸಾಹಿತ್ಯಕ್ಕೆ ಪೂರಕವಾಗಿ ಅರ್ಥ ಜೊತೆಗೂಡಿಸುತ್ತದೆ. ಧನ್ಯವಾದಗಳು.... ಹಾಡಿನ ಕೊಂಡಿ ಕೂಡ ಹಾಕಿದ್ದರೆ ಚೆನ್ನಾಗಿತ್ತು........
ಶ್ಯಾಮಲ
ತುಂಬಾ ಸುಂದರ ಹಾಗೂ ನನ್ನಿಷ್ಟದ ಕವನಕ್ಕೆ ಅರ್ಥವತ್ತಾದ, ಭಾವಪೂರ್ಣ ನಿಮ್ಮ ಅನಿಸಿಕೆಗಳ ಸಾಥ್ ಚೆನ್ನಾಗಿ ಮೂಡಿದೆ. ಬರೆಯುತ್ತಿರಿ. ಬರುತ್ತಿರುವೆ.
ಪ್ರತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಇಂತೆಯೇ ಇರಲಿ.
ಶ್ಯಾಮಲ, ಹಾಡಿನ ಕೊಂಡಿ ಹಾಕಿದ್ದೇನೆ. ವಂದನೆಗಳು.
Post a Comment