Wednesday, March 11, 2009

ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳು

Slumdog Millionaire ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪಡೆದವರಲ್ಲಿ ಭಾರತೀಯ ಪ್ರತಿನಿಧಿಗಳೂ ಇದ್ದಾರೆ. ಭಾರತಕ್ಕೇ, ಭಾರತೀಯ ಚಿತ್ರಕ್ಕೇ ಪ್ರಶಸ್ತಿ ಸಿಕ್ಕಿದಷ್ಟು ಎಲ್ಲರೂ ಸಂತೋಷ ಪಟ್ಟಿದ್ದಾಗಿದೆ. ಹೆಮ್ಮೆಯ ಗರಿ ಸಿಕ್ಕಿಸಿಕೊಂಡದ್ದಾಗಿದೆ. ಇಂದೇನಾದರೂ ಆ ಚಿತ್ರದ ಬಗ್ಗೆ ಹೊಸದಾದ (??) ಬಗೆಯಲ್ಲಿ ಹೇಳಹೊರಟರೆ ನನಗೆ ತಲೆಮಾಸಿದವಳೆಂಬ ಬಿರುದು ಖಂಡಿತ. ಆದರೂ ನನ್ನದಲ್ಲದಕ್ಕೆ ನನ್ನದೆಂಬ ಕುರುಡು ಹಮ್ಮಿಗಿಂತ, ತಲೆಮಾಸಿರುವುದೇ ಕ್ಷೇಮವೆಂದುಕೊಂಡು ಅಭಿಪ್ರಾಯಗಳನ್ನು ಮುಂದಿಡುತ್ತಿದ್ದೇನೆ.

ಶೀರ್ಷಿಕೆ ನೋಡಿದಾಗ ಅನಿಸಿದ್ದು ಇದೊಂದು Motivational ಚಿತ್ರವಿರಬೇಕೆಂದು, ಕೊಳೆಗೇರಿ ಹುಡುಗನೊಬ್ಬ ಪರಿಸ್ಥಿತಿಯ ವೈಪರೀತ್ಯಗಳನ್ನು ಮೀರಿ ಕೋಟ್ಯಾಧೀಶನಾಗುವ ಕಥೆಯಿರಬೇಕೆಂದು. ಆದರೆ ಚಿತ್ರದುದ್ದಕ್ಕೂ ಪಾತ್ರಗಳಿಗಿಂತ ಪರಿಸ್ಥಿತಿಗಳೇ ಬೆಳೆದು ನಿಂತಿವೆ! ವಿಷಯಕ್ಕಿಂತ ಚಿತ್ರಣಕ್ಕೇ ಪ್ರಾಧಾನ್ಯತೆಯಿದೆ! ೨/೩ ನೇ ತರಗತಿಯಲ್ಲಿ ನಮ್ಮ ಸಂವಿಧಾನಕ್ಕಿಂತಲೂ ದೊಡ್ಡದಾದ ಪುಸ್ತಕದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಆದರೂ ’ಸತ್ಯ ಮೇವ ಜಯತೇ’ ಗೆ ಜನಮತ ಬೇಕಾಗುತ್ತದೆ! ಹಿಂದಿ - ಇಂಗ್ಲಿಷ್ ಎರಡೂ ಗೊತ್ತಿರುವವನಿಗೆ ನಿಲುಕುವ ಸಾಮಾನ್ಯ ಸತ್ಯವನ್ನು, ಸೈಕಲ್ ಕಳವು ಮಾಡುವ, ಪಾನಿಪೂರಿಯ ಬೆಲೆಗೆ ಹೋಲಿಸಲಾಗಿದೆ! ಜೋರಾಗಿ ಓಡಿದರೇ ಬೀಳುವಂತಹ ಶೌಚಾಲಯದಲ್ಲಿ, ಕೇವಲ ಕುರ್ಚಿ (ಮುಟ್ಟಿದರೆ ಮುರಿಯುವಂತಹ) ಅಡ್ಡ ಇಡುವುದರಿಂದ ಬಾಗಿಲು ತೆರೆಯಲಾಗುವುದಿಲ್ಲ! ಕೋಮುಗಲಭೆಯ ಸಂದರ್ಭದಲ್ಲಿ ಓಡುವುದಕ್ಕೆ ಜಾಗವಿಲ್ಲದಂತಹ ಜಾಗದಲ್ಲಿ ರಾಮವೇಷಧಾರಿ ಎಲ್ಲಿಂದ ಪ್ರತ್ಯಕ್ಷನಾದ? !! ಮುಂಬಯಿಯಿಂದ ಆಗ್ರಾಗೆ ಬರುವಷ್ಟರಲ್ಲಿ ಅದೆಷ್ಟು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ!! ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿರೂಪಕ, ಸ್ಪರ್ಧಿಯನ್ನೂ, ಅವನ ವೃತ್ತಿಯನ್ನೂ ಸಾರ್ವಜನಿಕವಾಗಿ ಹೇಗೆ ಲೇವಡಿ ಮಾಡುತ್ತಾನೆ!! (Big Brother ಪ್ರಭಾವವಿರಬಹುದೇ?!). ಇವೆಲ್ಲಾ silly ವಿಷಯಗಳು. ನಮ್ಮ ಬಾಲಿವುಡ್ ನಲ್ಲಿ ಇದಕ್ಕಿಂತಲೂ ಕಳಪೆ ತರ್ಕಗಳನ್ನು ತೋರಿಸುತ್ತಾರೆ. ಆದ್ದರಿಂದ ಇವೆಲ್ಲವೂ ನಗಣ್ಯ!! (ಪ್ರಶಸ್ತಿಗೂ??!). ಸರಿ, ಇವೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದಾಗ, ಈ ಚಿತ್ರವೂ ಒಂದು ಒಳ್ಳೆಯ ಚಿತ್ರವೇ. ಕಥಾಹಂದರ, ತಾಂತ್ರಿಕತೆ, ಸಂಗೀತ, ಪಾತ್ರಗಳು, ಅಭಿನಯ ಎಲ್ಲವೂ ಮಿಳಿತಗೊಂಡು ಸುಂದರವಾದ ಚಿತ್ರವೊಂದು ಮೂಡಿಬಂದಿದೆ. ಇಂತದೇ ಬಹಳಷ್ಟು ಚಿತ್ರಗಳು ಬಂದು ಹೋಗಿದ್ದರೂ, ಇದು ನಮ್ಮ ಬಾಲಿವುಡ್/ಕಾಲಿವುಡ್ ಮಾಸ್/ಮಸಾಲೆ ಚಿತ್ರವಲ್ಲ ಅಥವಾ ಕೇವಲ ನಮ್ಮ ಬಾಲಿವುಡ್ ಉತ್ತಮ ಚಿತ್ರಗಳ ಸಾಲಿನಲ್ಲಿಲ್ಲ. ಅದನ್ನು ಹಾಗೆ ನೋಡುವುದೇ ಒಂದು ಅಪರಾಧವಾಗುತ್ತದೆ. ಇದೊಂದು ಪೂರ್ಣ ಪ್ರಮಾಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಚಿತ್ರ.

ಒಂದು ದೂರದರ್ಶನದ ಪ್ರಶ್ನಾವಳಿಗಳ ಕಾರ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು, ಅದನ್ನು ಅತಿಸಾಮಾನ್ಯ ಜೀವನದೊಂದಿಗೆ ತಾಳೆಹಾಕಿ ಹೆಣೆದಿರುವ ಕಥಾಹಂದರ ಶ್ಲಾಘನೀಯ. ಒಂದು ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದೊಡನೆ ಅಸಾಮಾನ್ಯರಾಗಿ ಬಿಡುವುದಿಲ್ಲ ಅಥವಾ ಗೆಲ್ಲಲು ಅಸಾಮಾನ್ಯ ಪ್ರತಿಭೆಯ ಅಗತ್ಯವಿಲ್ಲ. ನಮ್ಮನುಭವವೂ ನಮಗೆ ಜ್ಞಾನವನ್ನು ನೀಡುತ್ತದೆ (ಕಲಿಯುವ ಆಸಕ್ತಿಯಿದ್ದಲ್ಲಿ) ಎಂಬುದನ್ನು ಚೆನ್ನಾಗಿ ನಿರೂಪಿಸಲಾಗಿದೆ. ನಮ್ಮ ಡಿವಿಜಿ ಯವರೂ ಹೇಳಿಲ್ಲವೇ

ಅನುಭವದ ಪಾಲೊಳು ವಿಚಾರ ಮಂಥನವಾಗೆ

ಜನಿಯಿಕುಂ ಜ್ಞಾನನವನೀತವದೆ ಸುಖದೆಂ

ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೇ

ನಿನಗೆ ಧರುಮದ ದೀಪ - ಮಂಕುತಿಮ್ಮ

ಇಂತಹುದೊಂದು ಕಥೆಯ, ಕಥಾಹಂದರದ, ಪೂರ್ಣ ಯಶಸ್ಸು ಮೂಲ ಕಥೆಗಾರನಿಗೆ ಮಾತ್ರ ಸಲ್ಲಬೇಕು.

ಮೂಲಕಥೆಗಾರ ಭಾರತೀಯನಾದ್ದರಿಂದ, ಬೇರೆಯವರನ್ನು ಅನರ್ಥಕ್ಕೆ ಹೊಣೆಯಾಗಿಸುವುದರಲ್ಲಿ ಅರ್ಥವಿರಲಿಲ್ಲ. ಆದರಿಂದು ಮೂಲ ಪುಸ್ತಕವನ್ನು (Q & A by Vikas Swarup) ಓದಿ ಮುಗಿಸಿದ ನಂತರ, ಅನರ್ಥದಲ್ಲೂ ಒಂದರ್ಥ ಕಾಣುತ್ತಿದೆ. ಚಲನಚಿತ್ರದ ಪೂರ್ವಾಗ್ರಹದೊಂದಿಗೆ ಓದಲಾರಂಭಿಸಿದಾಗ ಆಘಾತಗಳ ಸರಣಿಯೇ ಕಾದಿತ್ತು.

ಮೊದಲನೆಯದಾಗಿ ನಾಯಕನ ಹೆಸರು ರಾಮ್ ಮೊಹಮ್ಮದ್ ಥಾಮಸ್ ಹಾಗೂ ಈತ ಯಾವುದೇ ಜಾತಿಯವನಲ್ಲ! ಅನಾಥರೆಂಬ ಜಾತಿಯವನು, ಯಾರೂ ಅಣ್ಣ ತಮ್ಮಂದಿರಿಲ್ಲದವನು ಹಾಗೂ ಈತ ಕೊಳೆಗೇರಿಯವನಲ್ಲ! ಕಾಲ್ ಸೆಂಟರಿನ ಚಾಯ್ ವಾಲ ಅಲ್ಲ, ಬಾರ್ ಅಟೆಂಡರ್.

ನಾಯಕ ಭಾಗವಹಿಸಿದ್ದ ದೂರದರ್ಶನದ ಕಾರ್ಯಕ್ರಮ (Who Will Win a Billion - W3B) ದ ರೂವಾರಿ ಭಾರತೀಯನಲ್ಲ! ಅದೊಂದು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿ, ೩೫ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುತ್ತದೆ. ಅದರ ನಿರ್ಮಾಪಕನ ಬಳಿ ನಾಯಕ ಗೆದ್ದ ಹಣ ಕೊಡಲು ಹಣವಿರದ ಕಾರಣ, ಉತ್ತರಿಸಿದವನ ಮೇಲೆ ಮೋಸದ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿರುತ್ತದೆ. ಭಾರತೀಯ ಪೋಲಿಸ್, ಬಾರ್ ಅಟೆಂಡರ್ ಒಬ್ಬ ಗೆಲ್ಲಲು ಸಾಧ್ಯವಿದೆಯೆಂದೂ, ಬುದ್ದಿವಂತಿಕೆಯನ್ನು ಮಾಡುವ ಕೆಲಸ ಹಾಗೂ appearance ಗಳಿಂದ ಅಳೆಯಲಾಗದೆಂದು ಪ್ರತಿಪಾದಿಸಿದಾಗ, ನಿರ್ಮಾಪಕರು ಇಂಗ್ಲೆಂಡ್ ನ ಶೋ ದಲ್ಲಿ ನಡೆದ ಮೋಸದ ಪ್ರಕರಣವನ್ನು ಉಲ್ಲೇಖಿಸಿ, ಹಣದ ಆಮಿಷ ಒಡ್ಡಿ, ಪೋಲಿಸನನ್ನು ಒಪ್ಪಿಸುತ್ತಾರೆ! ನಮ್ಮ ವ್ಯವಸ್ಥೆ ಅವರ ಸ್ವಾರ್ಥಕ್ಕೆ ಬಲಿಯಾಗುತ್ತದೆ!

ಚಲನಚಿತ್ರ/ನಾಯಕರ ಗೀಳಿರುವುದು ನಾಯಕನ ಗೆಳೆಯನಿಗೆ. ಮುಂದೊಂದು ದಿನ ನೀನೊಬ್ಬ ಒಳ್ಳೆಯ ಚಲನಚಿತ್ರ ನಾಯಕನಾಗುತ್ತೀ ಎಂಬ ಜ್ಯೋತಿಷಿಯ ಭರವಸೆಯೊಂದಿಗೆ ಆ ಗೀಳು ಹತ್ತಿಸಿಕೊಂಡಿರುತ್ತಾನೆ. ಆತನೊಬ್ಬ ’ಡಬ್ಬಾವಾಲ’ (ಇವರ ಯಶಸ್ಸಿನ ರಹಸ್ಯವನ್ನು ಪ್ರಖ್ಯಾತ Management School ಗಳಲ್ಲಿ Case study ಮಾಡುತ್ತಿದ್ದಾರೆ) ನಾಗಿ ಕೆಲಸ ಮಾಡುತ್ತಿರುತ್ತಾನೆ. ಒಂದು ದಿನ, ಆತ ತನ್ನ ಮೆಚ್ಚಿನ ನಾಯಕನನ್ನು ಹೋಟೇಲೊಂದರ ಬಳಿ ಕಂಡಾಗ, ಆ ವಾಹನ ಸಂದಣಿಯಲ್ಲಿ, ತನ್ನ ಜೀವದ ಹಂಗು ತೊರೆದು ಓಡಿ, ನಾಯಕನ ದರ್ಶನ ಪಡೆದು ಕೃತಾರ್ಥನಾಗುತ್ತಾನೆ. ಅಲ್ಲೊಂದು ಮುಗ್ಧತೆಯ ಚಿತ್ರಣವಿದೆ. ಪುಸ್ತಕವಿಡೀ ತಡಕಾಡಿದರೂ ಹೇಸಿಗೆಯಲ್ಲಿ ಬೀಳುವ ಚಿತ್ರಣವಿಲ್ಲ! ಕಾಸಿಗಾಗಿ ಅಣ್ಣನೇ ತಮ್ಮನ ಆಸೆಗಳ ಬಲಿ ಕೊಡುವ ಚಿತ್ರಣವಿಲ್ಲ!!

ನಾಯಕನ ಬಾಲ್ಯ ಚರ್ಚ್ ಒಂದರಲ್ಲಿ ರೂಪುಗೊಳ್ಳುತ್ತದೆ. ಮತಾಂತರಕ್ಕೆ ಪ್ರಯತ್ನಿಸುತ್ತಿಲ್ಲವೆಂದು ನಿರೂಪಿಸಲು, ನಾಯಕನ ಹೆಸರಿನಲ್ಲಿ ಎಲ್ಲ ಜಾತಿಗಳ ಹೆಸರುಗಳೂ ಸೇರಿಕೊಳ್ಳುತ್ತವೆ. ಜೊತೆಗೆ ಇಂಗ್ಲಿಷ್ ಭಾಷೆಯ ಅರಿವು ಬಾಲ್ಯದಿಂದಲೇ ದೊರಕುತ್ತದೆ. ಕಥೆಯುದ್ದಕ್ಕೂ ಇದೇ ಆತನ ಪ್ಲಸ್ ಪಾಯಿಂಟ್. ಇಂಗ್ಲೆಂಡಿನ ಪಾದ್ರಿಯೊಬ್ಬ ದೆಹಲಿಯ ಚರ್ಚಿನಲ್ಲಿ, ಧರ್ಮದಿಬ್ಬಗೆಯಲ್ಲಿ ನಡೆಸುತ್ತಿರುವ ಜೀವನ (ಪಾದ್ರಿ ಸಂಸಾರಿಯಗಿದ್ದು, ಆತನಿಗೆ ಮಗನೊಬ್ಬನಿರುತ್ತಾನೆ, ಲೋಕದ ಕಣ್ಣಿಗೆ ಕಾಣದೆ!), ಆತನ ಉತ್ತರಾಧಿಕಾರಿಯೊಬ್ಬ ಧರ್ಮದ ನೆರಳಿನಲ್ಲಿ ನಡೆಸುವ ದುರಾಚಾರಗಳು (Drugs, Homosexuality) ಇತ್ಯಾದಿಗಳನ್ನು ಚೆನ್ನಾಗಿ (??) ಬಿಂಬಿಸಲಾಗಿದೆ. ಚಲನ ಚಿತ್ರದಲ್ಲಿ ಇವಾವುಗಳ ಹತ್ತಿರವೂ ಸುಳಿಯಲಾಗಿಲ್ಲ! Holy Cross ಗೆ ಸಂಬಂಧಪಟ್ಟ ಪ್ರಶ್ನೆಯನ್ನು ರಾಮನ ಕುರಿತಾದ ಪ್ರಶ್ನೆಯಾಗಿ ಬದಲಾಯಿಸಿದ್ದಾರೆ! ಪುಸ್ತಕದಲ್ಲಿ so called ಕೋಮುಗಲಭೆಯ ಕುರಿತಾದ ಯಾವ ಪ್ರಶ್ನೆಯೂ ಇಲ್ಲ!!

ಆಸ್ಟ್ರೇಲಿಯಾದ diplomat ಕುಟುಂಬವೊಂದಕ್ಕೆ ನಾಯಕ ಕೆಲಸ ಮಾಡುತ್ತಿರುತ್ತಾನೆ. ಎಲ್ಲಿಂದಲೋ ಬಂದು ನಮ್ಮ ನೆಲದಲ್ಲಿ ನೆಲಸಿ, ಕೇವಲ ದುಡ್ಡಿದೆ ಎನ್ನುವ ಕಾರಣಕ್ಕೆ, ಭಾರತೀಯರನ್ನು 'Bloody Indians' ಎನ್ನುವುದವರ ಧೋರಣೆ. ಎಲ್ಲೋ ಕೆಲವು ಭಾರತೀಯರ ಬದಲು ಎಲ್ಲರನ್ನೂ generalise ಮಾಡಿದಾಗ ಅವರಲ್ಲಿಯೇ ಕೆಲಸ ಮಾಡುತ್ತಿದ್ದರೂ, ಬಡತನದಲ್ಲಿದ್ದರೂ, ನಾಯಕನ ದೇಶಾಭಿಮಾನ ಚೆನ್ನಾಗಿ ನಿರೂಪಿಸಲ್ಪಟ್ಟಿದೆ. ಕೇವಲ ಡಿಪ್ಲೊಮಾಟ್ ನ ಕೆಲಸ ಬಿಟ್ಟು ಭಾರತೀಯ ರಕ್ಷಣಾ ರಹಸ್ಯಗಳನ್ನೇ ದೋಚುವ ಹುನ್ನಾರ ನಡೆಸಿರುತ್ತಾನೆ ಆ ಆಸ್ಟ್ರೇಲಿಯನ್. ಇಂತಹುದೊಂದು ಆಷಾಡಭೂತಿತನ, ಬೆನ್ನಲ್ಲೇ ಚೂರಿ ಇರಿಯುವ ಕಾರ್ಯದ ಪ್ರಸ್ತಾವವೇ ಇಲ್ಲ ಚಿತ್ರದಲ್ಲಿ!!

Blood is thicker than Water ಎನ್ನುವ ಮಾತೊಂದು ಬರುತ್ತದೆ. ಅಣ್ಣ ತಮ್ಮನನ್ನು ವ್ಯವಹಾರದ ಸಲುವಾಗಿ ಅಮೆರಿಕಾಗೆ ಕಳುಹಿಸುತ್ತಾನೆ. ಆತ ಹೇಗೆ ಅಲ್ಲಿಯ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಅಣ್ಣನನ್ನೇ ಕೊಲೆ ಮಾಡುವ ಮಟ್ಟಕ್ಕೆ ಇಳಿಯುತ್ತಾನೆಂಬುದರ ಕಥೆ. ಕೊನೆಗೆ ಹೀಗೆ ಮಾಡಿಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪದಲ್ಲೂ, ತಾನೂ ಅದೇ ಜಾಲದಲ್ಲಿ ಪ್ರಾಣಬಿಡುತ್ತಾನೆ. ಅಮೆರಿಕವನ್ನು ವಿಶ್ಲೇಸುವ ಈ ಭಾಗವೂ ಚಿತ್ರದಲ್ಲಿಲ್ಲ. ಕೇವಲ, ಹುಡುಗನೊಬ್ಬನಿಗೆ ೧೦೦ ಡಾಲರ್ ನೋಟೊಂದನ್ನು ಕೈಗಿಟ್ಟು, ಎಲ್ಲರೂ ಕರುಣಾಮಯಿಗಳು ಎಂಬಂತೆ, 'This is real America' ಎಂದು ಹೇಳಿಸಲಾಗಿದೆ!!

ಪಾಕಿಸ್ತಾನ ಭಾರತಕ್ಕೆ ನೀಡಿರುವ ಉಡುಗೊರೆಗಳ (ಯುದ್ಧ ಹಾಗೂ ಭಯೋತ್ಪಾದನೆ) ಹಾಗೂ ನಾವು ಸುಮ್ಮನಿದ್ದಾಗ್ಯೂ ಕಾಲುಕೆರೆದುಕೊಂಡು ಬರುವ ಅವರ ಮನೋಭಾವ ತಿಳಿಸಲಾಗಿದೆ. ಅಲ್ಲದೆ, ದೇಶಕ್ಕೆ ವಿಪತ್ತು ಬಂದಾಗ ಹೇಗೆ ಜನ ಒಂದುಗೂಡಿ ಹೋರಾಡುತ್ತಾರೆ, ಸೈನಿಕರಿಗೆ ಹೇಗೆ ಸ್ಪಂದಿಸುತ್ತಾರೆ, ತಮ್ಮಲ್ಲಿ ಏನಿದೆಯೋ ಅಷ್ಟರಲ್ಲೇ ಹಂಚಿಕೊಳ್ಳುತ್ತಾರೆ, ಇವಲ್ಲದರ ಚಿತ್ರಣವಿದೆ. ಚಲನಚಿತ್ರದಲ್ಲಿ ಕಳೆದುಹೋಗಿದೆ!! ಅಮೆರಿಕ, ಬ್ರಿಟನ್ ನ ಸಹಾಯ ಪಡೆಯುತ್ತಿರುವ ಪಾಕಿಸ್ತಾನದ ಅಧಿಕಪ್ರಸಂಗತನದ ಬಗ್ಗೆ ಪ್ರಸ್ತಾಪಿಸಿದ್ದಲ್ಲಿ ಆಸ್ಕರ್ ತಪ್ಪಿ ಹೋಗುತ್ತಿತ್ತೇನೋ??!!

ಕೇವಲ ಹೊರಜೀವನವನ್ನಷ್ಟೇ ತೋರಿಸಲಾಗಿದೆ. ಅಂತಹುದೊಂದು ಬಡತನದ, ಕೆಳಮಧ್ಯಮವರ್ಗದ ಜನರಲ್ಲೂ ಇರುವ ಆರ್ದ್ರತೆ ಚಲನಚಿತ್ರದಲ್ಲಿಲ್ಲ. ನೆರೆಹೊರೆಯವರಿಗೆ ಸಹಾಯ, ಪಕ್ಕದ ಮನೆ ಹುಡುಗಿಯೊಂದಿಗೆ ಬೆಸೆದುಕೊಳ್ಳುವ ಸಹೋದರಿಯ ಸಂಬಂಧ, ಅನಾಥಾಶ್ರಮದ ಹುಡುಗರೊಂದಿಗಿನ ಭಾತೃ ಸ್ನೇಹ, ಕೇವಲ ಸಹಪ್ರಯಾಣಿಕರಾಗಿದ್ದರೂ ಅಲ್ಲೂ ಬೆಸೆದುಕೊಳ್ಳುವ ಸಂಬಂಧಗಳು, ಇವೆಲ್ಲವೂ ಭಾವನಾತ್ಮಕ ಭಾರತದಲ್ಲಿ ಮಾತ್ರ ಸಾಧ್ಯ. ಚಲನಚಿತ್ರದಲ್ಲಿಲ್ಲ. ಇವನ್ನೆಲ್ಲ ಸೇರಿಸಿದರೆ Bollywood Masala Movie ಆಗಿ ಪ್ರಶಸ್ತಿ ಕೈತಪ್ಪೀತೆಂಬ ಅಳುಕೋ? ಅಥವಾ ಅಂತಹವುಗಳನ್ನು ಚಿತ್ರಿಸುವ ಪ್ರತಿಭೆಯಿಲ್ಲವೋ? ಭಾರತವು ಹೊರಜಗತ್ತಿಗೆ ಇನ್ನೂ ಹತ್ತಿರವಾದೀತೆಂಬ ಭಯವೋ?

ಹೆಸರಿಗೆ ಪೂರಕವಾಗಿ ಚಿತ್ರತೆಗೆಯುವಂತಿದ್ದರೆ, ಕೊಳೆಗೇರಿ ಹುಡುಗನೊಬ್ಬನ ಸಾಮರ್ಥ್ಯ highlight ಆಗಿರಬೇಕಿತ್ತು. (ಆಗಿದೆ, ನಿಮಗೆ ಕಾಣದಿದ್ದಲ್ಲಿ ನಮ್ಮ ತಪ್ಪಲ್ಲ ಎನ್ನುವ ಬುದ್ಧಿಜೀವಿಗಳೂ ಇದ್ದಾರೆ ಎಂಬುದು ಗೊತ್ತು. ನಾವು ಕುಟುಂಬದವರೆಲ್ಲ ಒಟ್ಟಿಗೇ ಮಲಗುತ್ತೇವೆಂದು ಹೇಳಿದಾಗ, 'Are you gay?' ಎಂದು ಕೇಳಿದ ಅಂತರರಾಷ್ಟ್ರೀಯ (ಅ)ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಲ್ಲೊಮ್ಮೆ ನೋಡಿ ಎಂದಷ್ಟೇ ಹೇಳಬಲ್ಲೆ). ಚಲನಚಿತ್ರದಲ್ಲಿ ನಾಯಕ ಕೇವಲ ಹೆಣ್ಣು-ಹೊನ್ನಿನೊಂದಿಗೆ ಹೋದವನಂತೆ ಚಿತ್ರಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ವೇಶ್ಯಾವಾಟಿಕೆಗಳಂತಹ ಜಾಗದಲ್ಲಿ ಗುರುತಿಸಲಾಗಿದೆ. ಮೂಲದಲ್ಲಿ ಕೇವಲ ಕೊನೆಯ ಹಂತದಲ್ಲಿ ಬರುವ ಪಾತ್ರ ನಾಯಕಿಯದು ಹಾಗೂ ಅಸಲಿಗೆ, ಹಣಕ್ಕಾಗಿ ಅಂಥದೊಂದು ಪ್ರಶ್ನಾವಳಿಗಳ ಕಾರ್ಯಕ್ರಮಕ್ಕೆ ನಾಯಕ ಹೋಗಿರುವುದೇ ಇಲ್ಲ!! ಚಿತ್ರದಲ್ಲಿ, ನಾಯಕ ಒಮ್ಮೆಗೇ ಇಂಗ್ಲಿಶ್ ಕಲಿತು, ಪ್ರವಾಸಿಗರಿಗೆ ಗೈಡ್ ಆಗಿಬಿಡುತ್ತಾನೆ ಹಾಗೂ ತಪ್ಪಾಗಿ ಗೈಡ್ ಮಾಡುತ್ತಾನೆ. ನಾವೂ ಸಹ ಆ ಗಳಿಗೆಯಲ್ಲಿ ಆ ಹಾಸ್ಯಕ್ಕೆ ನಕ್ಕು ಸುಮ್ಮನಾಗಬಹುದು.ಆದರೆ ಮೂಲದಲ್ಲಿ ನಾಯಕ, ಕೇವಲ ತನ್ನ ಸ್ಮರಣ ಶಕ್ತಿಯಿಂದ ಏನನ್ನೋ ಹೇಳಿದರೂ (ಕೆಲವು ತಪ್ಪು ಮಾಹಿತಿಗಳು), ನಂತರದಲ್ಲಿ, ಅಲ್ಲಿನ ನಿಜವಾದ ಗೈಡ್ ಗಳು ಹೇಳುತ್ತಿದ್ದದ್ದನ್ನು ಕೇಳಿ, ಕೇಳಿ ಕಲಿತುಕೊಳ್ಳುತ್ತಾನೆ. ಅಂತಹುದೊಂದು ಗ್ರಹಣ ಶಕ್ತಿ ಚಿತ್ರದಲ್ಲಿ ಸೆನ್ಸಾರ್ ಆಗಿದೆ! ಹೀಗೆ ಇಲ್ಲದುದನ್ನು ಸೇರಿಸುವುದರಿಂದ ಮಾಸಾಲ ಮಾಲು ಆಗುವುದಿಲ್ಲವೇ? ನಿಬ್ಬೆರಗಾಗುವಂತಹ ನಿಜಜೀವನದ ಉದಾಹರಣೆ ಇಲ್ಲಿದೆ ನೋಡಿ.

ಆದರೂ ಆ ಚಿತ್ರತಂಡಕ್ಕೆ ಪ್ರಶಸ್ತಿಯ ಸುರಿಮಳೆಯಾಗಿರುವದರಲ್ಲಿ ಆಶ್ಚರ್ಯವಿಲ್ಲ!! ಏಕಂತೀರಾ? ಅವರ ಚಾಣಾಕ್ಷತನವನ್ನೊಮ್ಮೆ ಪರಿಶೀಲಿಸಿ. ಭಾರತೀಯ ಕಥಾವಸ್ತು. ಮೂಲಕಥೆಗಾರ ಭಾರತೀಯ. ಪಾತ್ರಧಾರಿಗಳು ಭಾರತೀಯರು. ಸಂಗೀತಗಾರ ಹೆಸರಾಂತ ಭಾರತೀಯ ನಿರ್ದೇಶಕ ಹಾಗೂ ಭಾರತೀಯರ ಕಣ್ಮಣಿ. ಆದರೆ ನಡೆದದ್ದೆಲ್ಲ ಬ್ರಿಟಿಷನೊಬ್ಬನ ನಿರ್ದೇಶನದಂತೆ. ಬೊಕ್ಕಸ ಭರ್ತಿಯಾದದ್ದು ಬ್ರಿಟನ್ನಿನದು. ಇಂತಹುದೊಂದು ದುರುದ್ದೇಶದ ಕಾರ್ಯಸಾಧನೆಯನ್ನು ಭಾರತೀಯರೊಂದಿಗೇ ಇದ್ದುಕೊಂಡು ಮಾಡಿದರೆ ಅವರನ್ನು ವಿರೋಧಿಸಲಾಗದು. ಅಂತಹುದೊಂದು ಭದ್ರಕೋಟೆಯನ್ನು ತಮ್ಮ ಸುತ್ತ ಕಟ್ಟಿಕೊಂಡಿದ್ದಾರೆ, ಭಾರತೀಯ ಬುದ್ಧಿಜೀವಿಗಳ ಸಹಾಯದಿಂದ! ನಾವು ತೋರಿಸುತ್ತಿರುವುದು ನಿಮ್ಮನ್ನೇ, ಇದರ ಮೂಲವೂ ನಿಮ್ಮವನದೇ ಎಂದು ನಂಬಿಸಿದ್ದಾರೆ! ಇಂತಹ ಒಡೆದಾಳುವ ನೀತಿಯಿಂದಲ್ಲವೇ ಭಾರತ ಬ್ರಿಟಿಷರ ವಶವಾದದ್ದು? ಇಲ್ಲವಾದಲ್ಲಿ, ಪರಕೀಯನೊಬ್ಬ ಬಂದು, ಭಾರತವನ್ನು ಕೆಟ್ಟದಾಗಿ ಚಿತ್ರಿಸಿ, ’This is Real India' ಎಂದು ಭಾರತೀಯನಿಂದಲೇ ಹೇಳಿಸಿ, ಭಾರತೀಯರೂ ಸುಮ್ಮನೇ ಅದನ್ನೊಪ್ಪುವಂತೆ ಮಾಡುವುದೇನು ಸಾಮಾನ್ಯವೇ? ಅದಕ್ಕಾಗಿ ಅವರು ಪ್ರಶಸ್ತಿಗೆ ಅರ್ಹರು!

ಭಾರತದಲ್ಲೇ ಭಾರತದ ಬಗ್ಗೆ ಹೀಗೆ ಪಂಗಡಗಳನ್ನು ಸೃಷ್ಟಿಸಿ ಮೋಜು ನೋಡುವ ಅವರ ಧಾರ್ಷ್ಟ್ಯವನ್ನು ಮೆಚ್ಚಬೇಕೋ, ನಮ್ಮ ಬಲಹೀನತೆಗೆ ಮರುಗಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ, ನಮ್ಮ ತಾಯಿಗೆ ನಾವೇ ಹರಕಲು ಸೀರೆ ಉಡಿಸಿ ಪ್ರದರ್ಶನಕ್ಕಿಡಲು ಅನುಮತಿ ನೀಡಿ, ನಾವೂ ಆನಂದಿಸಿ, ಪ್ರದರ್ಶಕರನ್ನು ತಲೆಮೇಲೆ ಹೊತ್ತು ನಡೆಯುವ ನಮ್ಮ ಈ ಕೀಳರಿಮೆಯ ದೇಶಾಭಿಮಾನ, ಅದೇ ಸತ್ಯ ಎನ್ನುವ ಬುದ್ಧಿವಂತರ ಕೂಟ, ಇವುಗಳೊಡನೆ ಚರ್ಚಾಕೂಟ ಏರ್ಪಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮಾಧ್ಯಮಗಳು, ಎಲ್ಲವನ್ನು ಪ್ರಶ್ನಿಸಿ ಪ್ರಶ್ನಿಸಿ ಉತ್ತರಗಳೊಡನೆ ಮತ್ತದೇ ಪ್ರಶ್ನೆಗಳ ಸುಳಿಯೊಳಗೆ ಸಿಲುಕುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಸಾಮಾನ್ಯ ಭಾರತೀಯನ ಪಾಡು!!

6 comments:

shivu.k said...

ವಿನುತಾ ಮೇಡಮ್,

ಈ ಚಲನಚಿತ್ರದ ವಿಮರ್ಶೆ ಎಂದ ತಕ್ಷಣ ನಾನು ಬೇರೆ ಬ್ಲಾಗಿನತ್ತ ಕಣ್ಣು ಹರಿಸಿದ್ದೆ...ಅಷ್ಟು ಬೇಸರವಾಗಿತ್ತು..ಈ ವಿಚಾರ,,,ಆದರೂ ನೋಡೋಣವೆಂದು ಓದಿದರೆ ನೀವು ನೋಡಿರುವ ರೀತಿ ವಿಮರ್ಶಿಸಿರುವ ಪರಿಯನ್ನು ಕಂಡಾಗ ನನಗೆ ತುಂಬಾ ಖುಷಿಯಾಯಿತು....ನಿಜಕ್ಕೂ ಕೆಲವು ಒಳ್ಳೆಯ ಮತ್ತು ಕೆಟ್ಟ ಆಂಶಗಳನ್ನು ವಸ್ತುನಿಷ್ಟವಾಗಿ..ಪ್ರಾಮಾಣಿಕವಾಗಿ ಹೇಳಿದ್ದೀರಿ....ಕೊನೆಯಲ್ಲಿ ನಮ್ಮೆಲ್ಲಾ ಭಾರತೀಯರನ್ನು ಉಪಯೋಗಿಸಿಕೊಂಡು ಬ್ರೀಟಿಷರು ಏನೆಲ್ಲ ಮಾಡುತ್ತಾರೆ ಅನ್ನುವುದನ್ನು ಚೆನ್ನಾಗಿ ತೋರಿಸಿದ್ದೀರಿ...ನಾನು ಇದೇ ಸಿನಿಮಾವನ್ನು ನನ್ನ ದೃಷ್ಟಿಕೋನದಲ್ಲಿ ನೋಡಿ ಸುನಾಥ್ ಸರ್‍ ಬ್ಲಾಗಿನಲ್ಲಿ ಅವರ ಲೇಖನಕ್ಕೆ ಕಾಮೆಂಟು ಹಾಕಿದ್ದೇನೆ...ಸಾಧ್ಯವಾದರೆ ನೋಡಿ...
ಒಂದು ಉತ್ತಮ ವಿಮರ್ಶೆ..ಅಭಿನಂದನೆಗಳು..

Sunil Mallenahalli said...

ವಿನುತ ಅವರೇ, ನೀವು ಹೇಳೋದು ನೂರಕ್ಕೆ ನೂರಷ್ಟು ನಿಜ. ಭಾರತವನ್ನು ಚೆನ್ನಾಗಿ ಬೈದು ಬರೆದರೆ ಮಾತ್ರವೇ ಪ್ರಶಸ್ತಿಗಳು ಸಿಗುವುದು ಎನ್ನರಿಗೂ ಮನವರಿಕೆಯಾಗಿದೆ..ಅಡಿಗರ White Tiger..ಇವಾಗ Slum Dog Millionaire..ಹೀಗೆ ಸಾಲು ಸಾಲು ಉದಾಹರಣೆಗಳು ಇವೆ. ನಿಮ್ಮ ಬರಹದಲ್ಲಿ ನಿಮ್ಮ ಜ್ಞಾನ ಸಂಪತ್ತು ಅದ್ಬುತವಾಗಿರುವುದು ಕಾಣಿಸುತ್ತದೆ.

ಮಲ್ಲಿಕಾರ್ಜುನ.ಡಿ.ಜಿ. said...

ಮೇಡಂ,
ನೀವು ಚಿತ್ರವನ್ನಷ್ಟೇ ವಿಮರ್ಷಿಸದೆ ಅದರ originalಪುಸ್ತಕದ ಬಗ್ಗೆ ಕೂಡ ಬರೆದಿರುವುದು ಇಷ್ಟವಾಯಿತು. ನೀವು ಬರೆದಿರುವುದರ ಬಗ್ಗೆ ನನ್ನ ಸಹಮತವಿದೆ. ಚಿತ್ರವನ್ನು ಹೀಗೂ ನೋಡಬಹುದೆಂದು ತಿಳಿಯಿತು.ಥ್ಯಾಂಕ್ಸ್.

Ittigecement said...

ವಿನುತಾ...

ನಿಮ್ಮ ವಿಮರ್ಶೆ ಬಹಳ ಇಷ್ಟವಾಯಿತು...

ನಿಮ್ಮ ಭಿಪ್ರಾಯಕ್ಕೆ ನನ್ನ ಸಹಮತವಿದೆ...

ಈ ಚಿತ್ರಕ್ಕಿಂತ "ಲಗಾನ್" ಬಹಳ ಉತ್ತಮವಿತ್ತು

ಅದರಲ್ಲಿ ಕೆಂಪು ಮುಸುಡಿಯನ್ನು ಚಂದವಾಗಿ ಚಾಳಿಸಿದ್ದರು..

ಎಲ್ಲದೂ ಒಂದಕ್ಕೊಂದು ಲಿಂಕ್ ಇದೆ ಅಲ್ಲವೆ..?

ಚಂದದ ವಿಮರ್ಶೆಗೆ

ಅಭಿನಂದನೆಗಳು..

Pratibha said...

ವಿನುತಾ ಮೇಡಂ, (ಇಲ್ಲಿ ತಮ್ಮನ್ನು ಹಾಗೆಯೇ ಸಂಬೋಧಿಸುವುದರಿಂದ, ನಾನು ಸಹ ಪ್ರೋಟೋಕಾಲ್ ಅನುಸರಿತ್ತಿದ್ದೇನೆ - ಬ್ರಿಟಿಷರು ಬಿಟ್ಟುಹೋದರು, ನಾವು ಸಾರ್, ಮೇಡಂ ಅನ್ನುವುದನ್ನು ಬಿಡುವ ಯಾವ ಲಕ್ಷಣವೂ ಕಾಣೆ...ನಾನು ಆಪಾದಿಸುತ್ತಿಲ್ಲ, ಹೀಗೆಯೇ ಅನಿಸಿತು ಅಷ್ಟೆ...ತಮ್ಮ ಕಾಲೆಳೆಯಲು ಮತ್ತೊಂದು ನೆಪ :) )
ನಿಮ್ಮ ಅಭಿಪ್ರಾಯಗಳು ಎಂದಿನಂತೆ ಭಿನ್ನವಾಗಿವೆ. ನಾನು ನಿಮ್ಮ ಶಿಫಾರಸ್ಸಿನಂತೆ ಚಿತ್ರವನ್ನು ನೋಡಬೇಕೆಂದಿದ್ದೆ, ಈ ವಿಮರ್ಷೆ ಓದಿದ ಬಳಿಕ ನೋಡಲೇಬೇಕೆಂದು ಅನಿಸುತ್ತಿದೆ. ಒಸ್ಕಾರ್ ಸಿಕ್ಕ(ಸರಿ ಗೆದ್ದ!) ಚಿತ್ರವನ್ನು ಹಿಗ್ಗ ಮುಗ್ಗಾ ಎಂದಿನಂತೆ ಪಾಯಿಂಟ್ ಹಾಕಿ ತರ್ಕಬದ್ಧ ವಿಮರ್ಷಗೆ ಒಳಪಡಿಸಿ ಜಗ್ಗಾಡಿದ್ದು ಓದಲು ಮಜವಾಗಿತ್ತು. ಅಭಿನಂದನೆಗಳು. ನೀವು ಏನೇ ಹೇಳಿ ನಮ್ಮ ಜನಕ್ಕೆ ಅಭಿಮಾನದ ಕೊರತೆಯೋ, ಅಥವಾ ಮೇಲ್ಮಟ್ಟದಲ್ಲಿ ಗುರುತಿಸಲ್ಪಡುವ ಅತೀವ ಹಂಬಲವೋ, ತಮ್ಮ ಜಗತ್ತಿನ ಗುರುತು ತಮಗೆ ಪ್ರಿಯವಲ್ಲವೋ, ಏನೋ ಆದರೆ ತಮ್ಮ ತನದಲ್ಲಿ ತಮಗೆ ಮತ್ತಷ್ಟು ನಂಬಿಕೆ ಇದ್ದರೆ ಚೆನ್ನಗಿರುತ್ತಿತ್ತೇನೋ.

ವಿನುತ said...

ವಿರೋಧವನ್ನು ನಿರೀಕ್ಷಿಸುತ್ತಿದ್ದ ಲೇಖನವೊಂದಕ್ಕೆ ಸಹಮತ ದೊರಕಿದ್ದು ಬಹಳ ಸಂತೋಷ ನೀಡಿತು. ಎಲ್ಲರಿಗೂ ಧನ್ಯವಾದಗಳು.

Prati, ನಿನ್ನುಳಿದ ಹೊರತು ಇತರರಿಗೆ ನನ್ನ ವ್ಯಕ್ತಿಗತ ಪರಿಚಯವಿಲ್ಲವಾದ್ದರಿಂದ ಒಂದು ವಿಭಿನ್ನ ಪರಿಸರ ನಿನಗೆ ಕಾಣುತ್ತಿದೆ. ನೀನು ಮಾತ್ರ ನಿನ್ನ ಶೈಲಿಯನ್ನೇ ಬಳಸು :))