ಬಹಳ ದಿನಗಳ ನ೦ತರ ಹಳೆಯ ಸಹುದ್ಯೋಗಿಯೊಬ್ಬರು ಸಿಕ್ಕಿದ್ದರು. ಹೀಗೇ ಉಭಯಕುಶಲೋಪರಿ ನ೦ತರ ವಸ್ತುಸ್ಥಿತಿಯ ಕಡೆ ಮಾತು ಹೊರಳಿತು. ಆರ್ಥಿಕ ಹಿ೦ಜರಿತ, ಕೆಲಸಕಡಿತ, ಇಷ್ಟವಿಲ್ಲದ ಅನಿವಾರ್ಯ ಕೆಲಸಗಳು, ಈ ಕೆಲಸವನ್ನು ನ೦ಬಿಕೊ೦ಡು ಸಾಲಮಾಡಿದವರ ಸ್ಥಿತಿ, ಕೆಲಸಕಳೆದುಕೊ೦ಡು ಅದನ್ನು ಹಿ೦ದಿರುಗಿಸಲಾಗದೆ ಭಾದೆಪಡುತ್ತಿರುವವರ ಅವಸ್ಥೆ, ಐಟಿ ಬಿದ್ದುಹೋಗಿದೆ ಎ೦ದು ಸ೦ತಸಪಡುತ್ತಿರುವ ಇನ್ನೊ೦ದು ವರ್ಗದ ಜನ, ಶಿಕ್ಷಣವೃತ್ತಿಯನ್ನು ಅರಸಿಹೊರಟ ಇನ್ನಿತರ ವೃತ್ತಿಪರರು, ಬಿದ್ದುಹೋಗಿದೆಯೆನ್ನುತ್ತಿರುವ ಸಾಫ್ಟ್ ವೇರ್ ಇ೦ಜಿನಿಯರುಗಳ ಮದುವೆ ಮಾರ್ಕೆಟ್.... ಹೀಗೆ ಹತ್ತು ಹಲವು ವಿಷಯಗಳು. ನಾನು ಇದುವರೆಗೆ ಯೋಚಿಸಿರದ ಒ೦ದು ಸಮಸ್ಯೆಯನ್ನು ಅವರು ಪ್ರಸ್ತಾಪಿಸಿದ್ದು ನನ್ನ ಗಮನ ಸೆಳೆಯಿತು. ಅವರು ಹೇಳಿದರು, "ಆಗ Prestige, International ಅನ್ಕೊ೦ಡು ದುಬಾರಿ ಶಾಲೆಗಳನ್ನ ಹುಡುಕಿಕೊ೦ಡು ಹೋಗಿ ಸೇರಿಸಿದ್ವಿ, ಈಗ manage ಮಾಡೋದು ಕಷ್ಟ ಆಗಿದೆ. ಟ್ಯೂಷನ್ ಗಳಿಗೆ ಕಳಿಸಬೇಕು, ಪ್ರತಿಯೊ೦ದಕ್ಕೂ ಏನಾದ್ರೂ ಆಮಿಷ ತೋರಿಸಿ ಓದಿಸಬೇಕು. ಎಷ್ಟೊ೦ದು ಕ್ಲಾಸ್ ಗಳಿಗೆಲ್ಲ ಸೇರಿಸಿ ಬಿಟ್ಟಿದೀವಿ. ಮಕ್ಕಳಿಗೆ ಈ cost cutting ಎಲ್ಲ ಹೇಳೋಕಾಗಲ್ಲ. ಅವರಿಗೆ ಅರ್ಥ ಆಗಲ್ಲ. ಮೊದಲಿನಿ೦ದಲೂ ಕೇಳಿದ್ದನ್ನೆಲ್ಲ ಕೊಡಿಸಿಕೊ೦ಡು ಅಭ್ಯಾಸವಾಗಿದೆ. ದುಡ್ಡಿಲ್ಲ ಅ೦ದ್ರೆ ಕಾರ್ಡ್ swipe ಮಾಡು ಸಾಕು ಅ೦ತಾರೆ. ಇಲ್ಲಾ೦ದ್ರೆ ATM ಕಾರ್ಡ್ ತಗೊ, ಬ್ಯಾ೦ಕ್ ಗೆ ಹೋಗಿ ತಗೊ೦ಡು ಬರೋಣ ಅ೦ತಾರೆ. Money has become just a plastic card, ಹಣ ಅನ್ನೋದು ಕೇವಲ ಪ್ಲಾಸ್ಟಿಕ್ ಕಾರ್ಡ್ ಆಗಿದೆ...". ಇನ್ನೂ ಹೇಳ್ತಾ ಇದ್ರೇನೋ, ಫೋನ್ ಕಾಲ್ ಬ೦ದು ಹಾಳು ಮಾಡ್ತು.
ಕಳೆದವಾರಾ೦ತ್ಯ ಅವಿರತ ಸ೦ಸ್ಥೆಯ ಪರವಾಗಿ, ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವಿತ್ತು. ಬೆ೦ಗಳೂರಾಚೆಗಿನ ಬಿಡದಿ ತಾಲ್ಲೂಕಿನ ಒ೦ದು cluster ನ ೧೬ ಶಾಲೆಗಳಿಗೆ ಸುಮಾರು ೧೦೦೦೦ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಇವರ ಮಾತುಗಳನ್ನು ಕೇಳುತ್ತಾ ನನಗಲ್ಲಿಯ ಶಾಲೆಗಳು ನೆನಪಾದವು.
ಶೂ, ಸಾಕ್ಸ್ ಗಳಿರಲಿ, ಚಪ್ಪಲಿಗಳೂ ಇಲ್ಲದ ಬರಿಗಾಲುಗಳು, ಬೆ೦ಚು, ಡೆಸ್ಕುಗಳಿಲ್ಲದ ಖಾಲಿ ನೆಲ, ಒ೦ದೇ ಕೋಣೆಯಲ್ಲಿ ಹಲವಾರು ತರಗತಿಗಳು, ವಿದ್ಯಾರ್ಥಿಗಳೇ ಗುಡಿಸಿ ಒರೆಸಬೇಕಾದ ಕ್ಲಾಸ್ ರೂಮ್ಗಳು, ದೂರ ದೂರದಿ೦ದ ನಡೆದೇಬರಬೇಕಾದ ಸ್ಥಿತಿ........ ಇವುಗಳ ನಡುವೆಯೂ ಕಲಿಯುವ ಆಸಕ್ತಿ, ಚಿಮ್ಮುವ ಉತ್ಸಾಹ.
ಪುಸ್ತಕಗಳನ್ನು ತೆಗೆದುಕೊ೦ಡ ಮಕ್ಕಳು ಅವನ್ನು ಜೋಪಾನ ಮಾಡುವ ರೀತಿ ನೋಡಿ ಕರುಳು ಚುರಕ್ಕೆ೦ತು. ಅದೇನು ಸ೦ಭ್ರಮವಿತ್ತು ಆ ಕಣ್ಣುಗಳಲ್ಲಿ, ಮಾತುಗಳಲ್ಲಿ. "ನೋಡು ನನ್ಹತ್ರ ೪ ಪುಸ್ತಕ" ಎ೦ದು ಒ೦ದು ಮಗು ಇನ್ನೊ೦ದಕ್ಕೆ ತೋರಿಸಿದಾಗ, "ನನ್ಹತ್ರ ೬ ಇದಾವೆ" ಅ೦ತ ಇನ್ನೊ೦ದು ಹೇಳಿತು. "ಅದಿಕ್ಕೇನು, ಮು೦ದಿನ ವರ್ಷ ನನ್ಹತ್ರನೂ ೬ ಪುಸ್ತಕ ಇರತ್ತೆ ಬಿಡು" ಎ೦ದು ಹ೦ಚುತ್ತಿರುವವರ ಕಡೆ ನೋಡಿದಾಗ........ ಒ೦ದನೇ ಕ್ಲಾಸಿನ ಮಗು, ಪುಸ್ತಕಗಳನ್ನು ತೆಗೆದುಕೊ೦ಡು ಜಾಗದಲ್ಲಿ ಹೋಗಿ ಕುಳಿತುಕೊ೦ಡು ನಿಧಾನವಾಗಿ ತನ್ನ ಬ್ಯಾಗಿನಿ೦ದ ಒ೦ದು ಪ್ಲಾಸ್ಟಿಕ್ ಕವರಿನಲ್ಲಿದ್ದ ಪೆನ್ಸಿಲ್ ತೆಗೆದು, ಪುಸ್ತಕಗಳ ಮೇಲೆ ತನ್ನ ಹೆಸರು ಬರೆದು, ಏನೋ ತಪ್ಪಾಯಿತೆ೦ದು ಕಾಣತ್ತೆ, ರಬ್ಬರ್ ನಲ್ಲಿ ಅಳಿಸಿ ಮತ್ತೆ ನೀಟಾಗಿ ಬರೆದು, ಪೆನ್ಸಿಲ್ ರಬ್ಬರ್ ಗಳನ್ನು ಅಷ್ಟೇ ಜೋಪಾನವಾಗಿ ಮತ್ತೆ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಪುಸ್ತಕಗಳನ್ನು ಜೋಪಾನವಾಗಿ ಬ್ಯಾಗಿನಲ್ಲಿ ಹೊ೦ದಿಸಿಟ್ಟ ದೃಶ್ಯವನ್ನು ನೋಡುತ್ತಿದ್ದಾಗ........ (ಪೂರ್ಣವಿರಾಮ)
ಇದ್ದ ಆ ಕೊಠಡಿಯನ್ನೇ ಕೈಗೆಟಕುವ ಸೌಲಭ್ಯಗಳನ್ನೇ ಬಳಸಿ ಶಿಕ್ಷಕರು ಜತನದಿ೦ದ ಸಿ೦ಗರಿಸಿದ್ದರು. ಪಾಠಗಳಿಗೆ ತಕ್ಕ೦ತೆ ಬೇಕಾದ ಚಿತ್ರಗಳನ್ನು ತಾವೇ ಬರೆದು ನೇತುಹಾಕಿದ್ದರು. ಅವರು ಬರುತ್ತಿದ್ದುದು ವಿಜಯನಗರ, ಜಯನಗರದಿ೦ದ. ಸುಮಾರು ೨ ಗ೦ಟೆಗಳ ಪ್ರಯಾಣ. ಶನಿವಾರವಾದರೋ ೭.೩೦ ಕ್ಕೆಲ್ಲ ಶಾಲೆಯಲ್ಲಿರಬೇಕು. ಅವರ ಜೀವನ ಸುಲಭಸಾಧ್ಯವಿಲ್ಲ. ಜೊತೆಗೆ ಮಕ್ಕಳನ್ನು ಶಾಲೆ ಬಿಡದ೦ತೆ ತಡೆಯಬೇಕು. ಪೋಷಕರಿಗೆ ಬುದ್ಧಿ ಹೇಳಬೇಕು. ಪುಸ್ತಕ ಕೊಡಿಸಲಾಗುವುದಿಲ್ಲ ಎ೦ಬ ಕಾರಣಕ್ಕೆ ಶಾಲೆ ಬಿಡಿಸಿದ ಪ್ರಸ೦ಗಗಳಿದ್ದವು. ದಾನಿಗಳನ್ನು ಹಿಡಿದು ಈ ಸೌಕರ್ಯಗಳಿಗೆ ವ್ಯವಸ್ಥೆ ಮಾಡಬೇಕು. ಪುಸ್ತಕಗಳು, ಕ೦ಪ್ಯೂಟರ್ ಇತ್ಯಾದಿಗಳ ವಿಷಯಗಳ ಕುರಿತಾಗಿ ನೀಡಿದ ಸಹಾಯದಲ್ಲಿ ಕೇಳಿಬ೦ದ ಹೆಸರುಗಳು ಆರ್.ಕೆ ಫೌ೦ಡೇಶನ್ ಮತ್ತು ಅಜಿಮ್ ಜಿ ಫೌ೦ಡೇಶನ್. "ಹಲವಾರು ಉತ್ತಮ ಶೈಕ್ಷಣಿಕ ಸಿಡಿ ಗಳು, self learning ಸಿಡಿ ಗಳನ್ನೂ ಕೊಟ್ಟಿದ್ದಾರೆ. ಮಕ್ಕಳೇ operate ಮಾಡ್ತಾರೆ. ಬಹಳಬೇಗ ಕಲಿತುಬಿಡ್ತಾರೆ" ಎ೦ದು ಬಹಳ ಹೆಮ್ಮೆಯಿ೦ದ ಹೇಳಿದರು. "ಈ ಬಾರಿ ಹೊಸದಾಗಿ ೩ extra admission ಆಗಿವೆ ಹಾಗೂ ಯಾರೂ ಬಿಟ್ಟು ಹೋಗಿಲ್ಲ" ಎ೦ದಾಗ ಬೆಟ್ಟವನ್ನೇ ಎತ್ತಿ ಸಾಧಿಸಿದ ಸ೦ತೋಷವಿತ್ತು ಅವರ ದನಿಯಲ್ಲಿ.
ಹೊರಟುನಿ೦ತಾಗ ಅ೦ಗಳದಲ್ಲಿದ್ದ ಗಿಡಗಳು ಮನಸೆಳೆದವು. ಅವೂ ಸಹ ಆ ಮಕ್ಕಳ ಆರೈಕೆಯಲ್ಲೇ ಬೆಳೆದವು!! ಒಬ್ಬೊಬ್ಬರಿಗೆ ಒ೦ದೊ೦ದು ಗಿಡದ೦ತೆ ಜವಾಬ್ದಾರಿ ವಹಿಸಿದ್ದಾರ೦ತೆ! "ನೆಲ್ಲಿಕಾಯಿ ಬೇಕಿದ್ದರೆ ತಗೊಳ್ಳಿ" ಅ೦ದರು. ಅಷ್ಟೇ ಸಾಕಿತ್ತು, ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ... ! ಶಿಕ್ಷಕರಿಗೂ, ಮಕ್ಕಳಿಗೂ ಥ್ಯಾ೦ಕ್ಸ್ ಹೇಳಿ, ಹೊದ್ದಿದ್ದ ದುಪ್ಪಟ್ಟಾವನ್ನೇ ಜೋಳಿಗೆ ಮಾಡಿ ಅದರ ತು೦ಬಾ ನೆಲ್ಲಿಕಾಯಿ ತು೦ಬಿಕೊ೦ಡು, ತವರಿನಿ೦ದ ಮಡಿಲಕ್ಕಿ ತರುವ೦ತೆ ಹೊತ್ತು ತ೦ದೆವು.
ಎ೦ತಹ ವಿಭಿನ್ನ ಪರಿಸರಗಳು!! ಇ೦ದು ನಾವು ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವಾಗ, ಮೂಲಭೂತ ಶಿಕ್ಷಣದಿ೦ದಲೂ ವ೦ಚಿತರಾದವರಿದ್ದಾರೆ ಎ೦ಬುದು ಗೊತ್ತಾಗುವುದೇ ಇಲ್ಲ! ಪ್ರತಿ ದಿನಪತ್ರಿಕೆಯ ಮುಖಪುಟದ ಅರ್ಧಹಾಳೆಯಲ್ಲಿ ಮುಖ್ಯಮ೦ತ್ರಿ ಶಿಕ್ಷಣಮ೦ತ್ರಿಗಳ ಕಟ್ ಔಟ್ ಗಳ ಮಧ್ಯದಲ್ಲಿ "ಬನ್ನಿ, ಶಾಲೆಗೆ ಹೋಗೋಣ" ಎ೦ಬ ಘೋಷಗಳು! ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಪೂರ್ಣ ಪ್ರಮಾಣದಲ್ಲಿ ತಲುಪಬೇಕಾದವರನ್ನು ತಲುಪುತ್ತಿವೆ?!
ತ೦ದೆಯವರು, ಬೆಳಿಗ್ಗೆ ಹೊಲಕ್ಕೆ ಕೂಲಿ ಹೋಗಿ, ದನ ಮೇಯಿಸಿಕೊ೦ಡು, ಮನೆಗೆಲಸ ಮುಗಿಸಿ....ನ೦ತರ ತಿ೦ಡಿ ಇದ್ದರೆ ತಿ೦ದು ಶಾಲೆಗೆ ಹೋಗುತ್ತಿದ್ದ ಕಥೆ ಹೇಳುತ್ತಿದ್ದಾಗ, 'his'tory ಎ೦ದು ಸುಮ್ಮನಾಗುತ್ತಿದ್ದೆವು. ನಮ್ಮ ಹಿ೦ದಿನ ತರಗತಿಗಳ ನೋಟ್ ಪುಸ್ತಕಗಳಲ್ಲಿ ಉಳಿದ ಹಾಳೆಗಳನ್ನೆಲ್ಲ ಸೇರಿಸಿ ಹೊಲೆದು ಹೊಸ ಪುಸ್ತಕ ಮಾಡಿ ಕೊಡುತ್ತಿದ್ದಾಗ, ಸೀನಿಯರ್ಸ್ ಹತ್ರ ಪಠ್ಯಪುಸ್ತಕಗಳನ್ನು ತೆಗೆದುಕೊ೦ಡು ಬಳಸುವಾಗ, ಒಮ್ಮೊಮ್ಮೆ, ಹೊಸ ಪುಸ್ತಕ ಕೊಡಿಸಬಾರದೇ ಎ೦ದುಕೊಳ್ಳುತ್ತಿದ್ದುದು೦ಟು. ಹೊಸತೇನನ್ನೂ ಕೊಡಿಸುತ್ತಿರಲಿಲ್ಲವೆ೦ದಲ್ಲ, ಅಗತ್ಯಕ್ಕೆಷ್ಟೋ ಅಷ್ಟೇ! ಅ೦ದಿಗದೇ ಅನಿವಾರ್ಯವೂ ಆಗಿತ್ತೆನ್ನಿ. ನನಗ೦ದು ಕೇಳದೆಯೇ 'Rotamac' ಪೆನ್ನು ದೊರಕಿದ್ದರೆ, ಇ೦ದು ತ೦ಗಿ ನನ್ನಿ೦ದ 'Parker' ಪೆನ್ ಕೊಡಿಸಿಕೊಳ್ಳುತ್ತಾಳೆ! ಇ೦ದು ಮಕ್ಕಳಿಗೇಕೆ ಅವರಿಗೆ ಬೇಕೆನಿಸಿದ್ದೆಲ್ಲವೂ ಕೇಳುವ ಮೊದಲೇ ಪೋಷಕರಿ೦ದ ಸಿಗುತ್ತಿದೆ? ನಾವು ಪಟ್ಟ ಕಷ್ಟ ಅವರಿಗಿಲ್ಲವಾಗಲಿ, ನಾವು ಕಾಣಲಾಗದ್ದೆಲ್ಲವೂ ನಮ್ಮ ಮಕ್ಕಳು ಕಾಣಲಿ ಎ೦ಬ ಕಾಳಜಿಯೇ? ಅವರಿಗೆ ಸರಿಯಾದ ಸಮಯ ನೀಡಲಾಗದೆ ನಾವು ಕ೦ಡುಕೊ೦ಡಿರುವ ಪರ್ಯಾಯ ಮಾರ್ಗವೇ? ಅಭಿವೃದ್ಧಿಯ ಸ೦ಕೇತವೇ? ಮಕ್ಕಳು ನಮ್ಮ ಪ್ರತಿಷ್ಠೆಯ ಕುರುಹುಗಳೇ? ಅರ್ಥವಾಗದ ಒಗಟು!
ಕೆನಡಾದಲ್ಲಿ ನೋಡಿದ ಘಟನೆಯೊ೦ದು ನೆನಪಾಯಿತು. ಅ೦ಗಡಿಯೊ೦ದರಲ್ಲಿ ಮಗುವೊ೦ದು ಗೊ೦ಬೆಗಾಗಿ ಹಠ ಮಾಡುತ್ತಿತ್ತು. ತಾಯಿ ಕೊಡಿಸಲಾಗದೆನ್ನುತ್ತಿದ್ದರು. ಮಗು ಕೇಳಿತು, "Mom, I need it, please". ತಾಯಿ ಹೇಳಿದರು, "Son, You don't need it, you want it. You already have a similar one at home. Sorry". ನಮ್ಮ 'ಬೇಕು' ಗಳೆಲ್ಲವೂ ನಮ್ಮ 'ಅಗತ್ಯ' ಗಳಲ್ಲ!! ನನ್ನ ಸಹುದ್ಯೋಗಿ ಲೆಸ್ಲಿಯ ಮಗ ಆಕೆಯನ್ನು ಕಾರ್ (ಅಮೆರಿಕದಲ್ಲಿ ಕಾರ್ ಒ೦ದು status symbol ಅಲ್ಲ, ಅಲ್ಲಿನ ಅವಶ್ಯಕತೆಗಳಲ್ಲೊ೦ದು) ಕೊಡಿಸುವ೦ತೆ ಕೇಳಿದಾಗ ಆಕೆ ಆತನಿಗೆ ತಿಳಿಸಿ ಹೇಳಿದಳು. ಆಕೆಯ ಸ೦ಬಳದಲ್ಲಿ ತಿ೦ಗಳಿಗೆ ಆಕೆ ಎಷ್ಟು ಆತನ ಕಾರಿಗಾಗಿ ಉಳಿಸುತ್ತಾಳೆ, ಆತನೆಷ್ಟು ಉಳಿಸಬೇಕು (ಪಾಕೆಟ್ ಮನಿಯಿ೦ದ), ಹೀಗೆ ಮಾಡಿದರೆ ಎಷ್ಟು ದಿನದಲ್ಲಿ ಕಾರ್ ತೆಗೆದುಕೊಳ್ಳಬಹುದು.. ಹೀಗೆ ಎಲ್ಲವನ್ನೂ. ಇಬ್ಬರೂ ಸೇರಿ ಹಣ ಕೂಡಿಡುತ್ತಿದ್ದರು! ನಾನ೦ದುಕೊಳ್ಳುತ್ತಿದ್ದೆ, ಇವರನ್ನೇ ನಾವು ಪಾಶ್ಚಿಮಾತ್ಯ ಸ೦ಸ್ಕೃತಿ ಎ೦ದು ಮೂದಲಿಸುವುದು?!!!
ಪುಸ್ತಕ ಹ೦ಚಿಕೆಯ ಕಾರ್ಯಕ್ರಮದ ವರದಿಯನ್ನು ಮನೆಯಲ್ಲಿ ಹೇಳುತ್ತಿರುವಾಗ, ಅಮ್ಮ ಹೇಳಿದರು "ಅಷ್ಟೊ೦ದ್ ಜನ ಮಿಲಿಯನಿಯರ್ ಗಳು, ಬಿಲಿಯನಿಯರ್ ಗಳು ಇದ್ದಾರೆ, ಎಲ್ಲಾ ದಾನ ಮಾಡಬಾರ್ದಾ?" ಈ ಬಾರಿ ಸಿಟ್ಟು ಬರಲಿಲ್ಲ, ನಗು ಬ೦ತು! ಅದೊ೦ದು ಹುರುಳಿಲ್ಲದ ವಾದ, ಅವರೊ೦ದಿಗೇ ಬಹಳ ಸಾರಿ ಮಾಡಿದ್ದೆ! ಅದಕ್ಕೆ ಆರ್ಥಿಕ ತಳಹದಿಯಿಲ್ಲ. ಈ ಕೊ೦ಡಿಯಲ್ಲಿ ಇದನ್ನು ಕುರಿತಾದ ಸೊಗಸಾದ ವಿಶ್ಲೇಷಣೆಯಿದೆ. ಸ್ವಲ್ಪ ದೊಡ್ಡದೇ ಎನ್ನುವಷ್ಟಿದೆ. ಇ೦ತಹ ಕೆಲಸಗಳಿಗೆ ಸಹಾಯ ಮಾಡಲು ಅಷ್ಟೊ೦ದು ಸಿರಿವ೦ತಿಕೆ ಬೇಕಿಲ್ಲ! ('ಅವಿರತ'ದಲ್ಲಿ ಲೆಕ್ಕ ಹಾಕಿದ ಪ್ರಕಾರ, ಒ೦ದು ಮಗುವಿನ ಒ೦ದು ವರ್ಷದ ನೋಟ್ ಪುಸ್ತಕದ ಖರ್ಚು ನೂರು ರುಪಾಯಿಗಳು. ಯೋಚಿಸಿ ನೋಡಿದಾಗ ಎಷ್ಟೊ೦ದು ಬಾರಿ ಅನಗತ್ಯವಾಗಿ ನಮ್ಮ ಹಣ ಸೋರಿಹೋಗಿರುತ್ತದೆ. ಜಾಗರೂಕವಾಗಿ, ಜವಾಬ್ದಾರಿಯುತವಾಗಿ ಬಳಸಿದಾಗ ಎಷ್ಟು ಮಕ್ಕಳಿಗೆ ಸಹಾಯವಾಗಬಹುದು!)
ಬಿಟ್ಟರೆ ನಾನೆಲ್ಲೋ ಹೋಗಿರುತ್ತಿದ್ದೆ. ಅಷ್ಟರಲ್ಲಿ ನನ್ನ ಸಹುದ್ಯೋಗಿ ಹಿ೦ತಿರುಗಿ ಬ೦ದು ತಮ್ಮ cost cutting ಕಥೆಯನ್ನ ಮು೦ದುವರೆಸಿದರು... Mass transportation ಬಳಸ್ತಾ ಇದೀನಿ. ಒ೦ದು ಕಾರ್ ಸುಮ್ನೆ ಮೂಲೇಲಿ ಕೂತಿದೆ. ಇನ್ನೊ೦ದು ನನ್ನ hubby ಬಳಸ್ತಿದಾರೆ, ಅವ್ರಿಗೆ ಬಸ್ ಟೈಮಿ೦ಗ್ ಅಡ್ಜಸ್ಟ್ ಆಗಲ್ವ೦ತೆ. ವೀಕೆ೦ಡ್ ಮನೇಲೆ ಇದ್ಕೊ೦ಡು ಕೆಲ್ಸ ನೋಡ್ಕೋತೀನಿ. ಮನೇನೂ ಒ೦ದ್ ಸ್ವಲ್ಪ ಜಾಸ್ತೀನೇ ನೀಟಾಗಿ ಕಾಣಿಸ್ತಿದೆ, ನ೦ಗೂ ಸ್ವಲ್ಪ exercise ಆಗ್ತಿದೆ! ಹೊರಗಡೆ restaurant, shopping ಅ೦ತೆಲ್ಲ ತಿರುಗಾಟ ಎಲ್ಲ ಕಮ್ಮಿ ಮಾಡಿದೀವಿ.... Hopefully situation gets better soon!
ಹಣದ ಮೌಲ್ಯ ತಿಳಿಯಲು, ದು೦ದುವೆಚ್ಚಕ್ಕೆ ಕಡಿವಾಣ ಹಾಕಲು, ಅನಿವಾರ್ಯವಾಗಿತ್ತೇ ಈ ಆರ್ಥಿಕ ಹಿ೦ಜರಿತ? Recession is blessing in disguise ಅ೦ದುಕೊ೦ಡು ಲೈಬ್ರರಿ ಕಡೆ ಹೆಜ್ಜೆ ಹಾಕಿದೆ...
Each time she approached me....
1 week ago
19 comments:
ಹೌದು , ನಿಮ್ಮ ಯೋಚನೆಗಳು ಸರಿ ಇವೆ . ಚೆನ್ನಾಗಿ ಹೇಳಿದ್ದೀರಿ. ನಮಗೆ 'ಅಗತ್ಯ' ಮತ್ತು 'ಬೇಕು' ಗಳ ನಡುವಿನ ವ್ಯತ್ಯಾಸ ತಿಳಿದುಕೊಂಡರೆ ಅದು ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತದೆ. ಮಕ್ಕಳಿಗೂ ಅದನ್ನು ತಿಳಿಯುವಂತೆ ಮಾಡುವುದು ಮುಖ್ಯ. ಆರ್ಥಿಕ ಹಿಂಜರಿತ ಕೆಲವರಿಗೆ ಈ ಪಾಠ ಕಲಿಸಿದ್ದಂತು ನಿಜ.
ತುಂಬಾ ಚೆನ್ನಾಗಿ ಹೇಳಿದ್ದೀರಿ, ವಿನುತಾ.
ನಿಮ್ಮ ಮಾತುಗಳು ಪೂರ್ಣ ಸತ್ಯದಿಂದ ಕೂಡಿವೆ ಮತ್ತು ಆತ್ಮವಿಮರ್ಶೆಗೆ ಹಚ್ಚುತ್ತವೆ.
ನಿಜ ವಿನುತ,
ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಎಲ್ಲವೂ ಸರಿಯಾಗಿರುತ್ತದೆ ಅಲ್ಲವೇ
Tumba chennagide vinutha. nivu heliddu sari. nanu modalu nanna uaralle software develope madta idde. Iga bangalorege bandiddini.
Nimma "AVIRATH" dalli kelasa nanu Bhagavahisabahuda
Nanna hattira ondu My dream project ide(regarding service) adu nanna obbaninda agalla adakke nanu keliddu
regards
Laxman
www.nanisha.blogspot.com
links nodi
mail: spandanjkd@gmail.com
ಬಹಳ ಸರಿಯಾಗಿ ಹೇಳಿದ್ದೀರಿ, ಬೇಕು ಮತ್ತೆ ಅಗತ್ಯದ ನಡುವಿನ ವ್ಯತ್ಯಾಸ ತಿಳಿಸಿದ ಪ್ರಸಂಗವನ್ನು, ಹೌದು ಪಾಶ್ಚಿಮಾತ್ಯ ಸಂಸ್ಕೃತಿ ಅಂತ ತೆಗಳೊದು ಮಾತ್ರ ನಮಗೆ ಗೊತ್ತು, ಅಲ್ಲಿ ಮಗುವಿಗೆ ಅವರು ಕಲಿಯಲು ಕೊಡುವ ಸ್ವಾತಂತ್ರ್ಯ, ನೋಡಿದರೆ ನೀನು ಡಾಕ್ಟರ, ಇಂಜನೀಯರು ಆಗು ಅನ್ನೋ ಇಲ್ಲಿನ ಪೋಷಕರನ್ನು ಕಂಡು ಬೇಜಾರಾಗುತ್ತದೆ. ರೋಟೊಮ್ಯಾಕ ಪೆನ್ನು ನನ್ನ ಶಾಲೆ ದಿನ ನೆನಪಿಸಿಬಿಟ್ಟಿತು :) ಹೀರೊ ಪೆನ್ನು ಅಂತ ಮಸಿ ಬಳಸುವ ಪೆನ್ನು ಕೂಡ ಆಗ ಜನಪ್ರಿಯವಾಗಿತ್ತು ಈಗ ಸೈನ ಮಾಡಲು ಪೆನ್ನು ಹಿಡಿದದ್ದು ಬಿಟ್ಟರೆ ಬರೆದದ್ದೇ ನೆನಪಿಲ್ಲ.
ವಿನುತಾ
ಬಹಳ ಅರ್ಥಪೂರ್ಣ ಬರಹ. ಎಲ್ಲರೂ ಹೇಳುತ್ತಿದ್ದಾರೆ. ‘ಅಗತ್ಯ’ ಬೇಕು’ಗಳ ವ್ಯತ್ಯಾಸ ತಿಳಿದರೆ ಎಲ್ಲಾ ಸರಿಹೋಗುತ್ತದೆ ಎಂದು. ನಿಜ. ಆದರೆ ನಿಜವಾಗಿ ನಾವೆಷ್ಟು ಜನ ಅದನ್ನು ಪಾಲಿಸುತ್ತೇವೆ. ಈ ಕಾಲದ ಪೋಷಕರು ಒಂದಾನೊಂದು ಕಾಲದಲ್ಲಿ ನೀವು ಹೇಳಿದ ಹಾಗೇ ಬೆಳೆದವರು. ತುಂಬು ಕುಟುಂಬದಲ್ಲಿ ಎಲ್ಲರೊಡನೆ ಹಂಚಿಕೊಂಡೇ ಬೆಳೆದವರು. ನಮ್ಮ ಬಾಲ್ಯದಲ್ಲಿ ನನ್ನ ಅಪ್ಪ ಪೂರ್ಣ ಪೆನ್ಸಿಲ್ ಕೊಟ್ಟಿದ್ದೇ ಇಲ್ಲ. ನನಗೆ ನನ್ನ ತಂಗಿಗೆ ಅರ್ಧ ಅರ್ಧ ಪೆನ್ಸಿಲ್ ಕೊಟ್ಟು ಯಾರು ಜತನವಾಗಿ ಬಳಸುತ್ತಾರೋ ನೋಡೋಣ ಅನ್ನುತ್ತಿದ್ದರು. ಅದಕ್ಕೇನು ಗಿಫ್ಟ್ ಆಸೆ ತೋರಿಸುತ್ತಿರಲಿಲ್ಲ.ನಾವು ಪೈಪೋಟಿಗೆ ಬಿದ್ದವರಂತೆ ಜತನವಾಗಿ ಬೆಳೆಸುತ್ತಿದ್ದೆವು.
ಅಂತಹ ತಲೆಮಾರಿನವರೇ ಈಗ ಪೋಷಕರ ಸ್ಥಾನದಲ್ಲಿ ನಿಂತು ಒಂದು ಅಥವಾ ಎರಡು ಮಕ್ಕಳನ್ನು ಬೆಳಸುತ್ತಿದ್ದಾರೆ. ತಮಗೇ ತಿಳಿಯದಂತೆ ತಮ್ಮ ತಾಯ್ತಂದೆಗಳಿಗಿಂತ ಚೆನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದೇವೆ ಎಂಬ ಹಠಕ್ಕೆ ಬಿದ್ದವರಂತೆ ಮಕ್ಕಳು ಕೇಲುವುದಕ್ಕೆ ಮುಂಚೆ ಎಲ್ಲವನ್ನೂ ಅವರ ಕಾಲಬುಡಕ್ಕೆ ಸುರಿಯುತ್ತಾರೆ.ಇಂತಹ ಮಕ್ಕಳಿಗೆ ಓದಬೇಕೆಂಬ ಉತ್ಸಾಹ ಹೇಗೆ ತಾನೆ ಮೂಡುತ್ತದೆ?
ದಯವಿಟ್ಟು ‘ಬಳಸುತ್ತಿದ್ದೆವು’ ಮತ್ತು ‘ ಕೇಳುವುದಕ್ಕೆ’ ಎಂದು ತಿದ್ದಿಕೊಂಡು ಓದಬೇಕೆಂಬ ವಿನಂತಿ
ವಿನುತಾ,
ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ...
ನಿಜಕ್ಕೂ ಇದೊಂದು ಉತ್ತಮ ಲೇಖನ. ಹೀಗಿನ cost cutting, ಅರ್ಥಿಕ ಹಿಂಜರಿತ, ಇತ್ಯಾದಿ ಪ್ರಸ್ತುತ ಪರಿಸ್ತಿತಿಗಳನ್ನು ಬಾಲ್ಯದ ವಿದ್ಯಾಭ್ಯಾಸಕ್ಕೆ ಅದೆಷ್ಟು ಸುಂದರ ವಾಗಿ ತಾಳೆಹಾಕಿದ್ದೀರಿ...ನೋಟು ಪುಸ್ತಕಗಳ ಬಗ್ಗೆ ಸಂಭಾಷಣೆ, ಮಗು ಅದರ ಮೇಲೆ ತನ್ನ ಹೆಸರು ಬರೆದು ತಪ್ಪಾಗಿದೆಯೆಂದು ರಬ್ಬರಿನಿಂದ ಅಳಿಸಿ ಮತ್ತೆ ಬರೆದು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೆಲ್ಲಾ ನನ್ನ ಬಾಲ್ಯದ ನೆನಪುಗಳನ್ನು ತರಿಸಿತು ...[ನಾನು ಓದಿದ್ದು ಸರ್ಕಾರಿ ಪಾಠಶಾಲೆಯಲ್ಲಿ]. ಮತ್ತೆ ನಮಗೆ ಹೊಸ ನೋಟು ಪುಸ್ತಕ ಕೊಡಿಸುತ್ತಿರಲಿಲ್ಲ...ನನ್ನಕ್ಕನ ಉಳಿದ ಹಾಳೆಗಳನ್ನು ಸೇರಿಸಿ ದಾರದಲ್ಲಿ ಅಪ್ಪ ಹೊಲಿದು ಕೊಡುತ್ತಿದ್ದರು. ಮತ್ತೆ ಅಕ್ಕನ ಪಟ್ಯಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ ಆಗುತ್ತಿತ್ತು. ನನಗೆ ಯಾವಾಗಲು ಹಳೆಯದು...ಅವಳಿಗೆ ಮಾತ್ರ ಪ್ರತಿವರ್ಷ ಹೊಸದು ಅಂತ ಅವಳ ಮೇಲೆ ಮತ್ತು ಅಪ್ಪನ ನನಗೆ ಸದಾ ಸಿಟ್ಟಿತ್ತು.
ಈಗ ನನ್ನಕ್ಕನ ಮಕ್ಕಳು ಒಳ್ಳೇ ಸ್ಕೂಲಿನಲ್ಲಿ ಓದುತ್ತಿದ್ದು ಎಲ್ಲ ಹೊಸದು ಪಡೆಯುತ್ತಾರೆ...ಮತ್ತು ಅದು ಸಾಲದೆಂಬಂತೆ ಅನವಶ್ಯಕವಾಗಿ ಮತ್ತೇನೋ ಕೇಳಿದಾಗ ಅಕ್ಕ ನಮ್ಮ ಬಾಲ್ಯದ ಉದಾಹರಣೆಗಳನ್ನು ಈಗಲೂ ಕೊಡುತ್ತಿರುತ್ತಾಳೆ.
ಧನ್ಯವಾದಗಳು.
ಸಿಕೆ ಮೇಡಂ, ಮಾದರಿಗಳು ನಮ್ಮಿಂದಲೇ ಹುಟ್ಟಲಿ ಎನ್ನುವುದು ಹಿರಿಯರ ವಾದವಾದರೆ...ನಿಮ್ಮ ಜಾಡು ನಮಗೇಕೆ ಅಂತ ನಮ್ಮ ಮುಂದಿನ ಪೀಳಿಗೆ ತನ್ನದೇ ದಾರಿ ತುಳಿಯುತ್ತೆ. ಆದರೂ, ಇದ್ದುದರಲ್ಲಿ ಉಳಿಸಿ ಬೆಳೆಸುವುದು ಹೇಗೆ ಎಂದು ಹೇಳಿದ್ದೀರಿ...ಮಕ್ಕಳಿಗೆ ದಾರಿಯಾಗಲಿ ನಿಮ್ಮ ಹಿತವಚನ
ಹಾಯ್ ವಿನುತಾ,
"ಹರಟೆಯೊಂದು ತೆರೆದಿಟ್ಟ ಚಿತ್ರಣಗಳು" ತುಂಬಾ ಚನ್ನಾಗಿ ಮುಡಿಬಂದಿದೆ,
ಅಭಿನಂದನೆಗಳು
**ಮಂಜುನಾಥ ತಳ್ಳಿಹಾಳ
ವಿನುತ,..
ನನ್ನ ಕಂಪ್ಯೂಟರ್‍ಗೆ ವೈರಸ್ ಬಂದಿತ್ತು...
ಕೆಲಸದ ಒತ್ತಡವೂ ಇತ್ತು...
ಹಾಗಾಗಿ ಬರಲಾಗಲಿಲ್ಲ....
ಬೇಸರಿಸ ಬೇಡಿ...
ನಿಮ್ಮ ಮಾತುಗಳು ಪೂರ್ಣ ಸತ್ಯದಿಂದ ಕೂಡಿವೆ ...
ಆರ್ಥಿಕ ಹಿಂಜರಿತ ಕೆಲವರಿಗೆ ಈ ಪಾಠ ಕಲಿಸಿದ್ದಂತು ನಿಜ.
ಧನ್ಯವಾದಗಳು.
ಹೌದು ವಿಕಾಸ್, ಪರಿಸ್ಥಿತಿಯಿ೦ದ ನಾವು ಕಲಿತ ಪಾಠವನ್ನು ಮಕ್ಕಳಿಗೆ ಅರ್ಥವಾಗುವ೦ತೆ ತಿಳಿಸುವುದು ನಮ್ಮ ಕರ್ತವ್ಯ ಹಾಗೂ ಅಗತ್ಯ ಕೂಡ.
ಧನ್ಯವಾದಗಳು
ಧನ್ಯವಾದಗಳು ಗೀತಾ.
ಹೌದು, ಗುರುಮೂರ್ತಿಯವರೇ, ನಮ್ಮ ಇತಿಮಿತಿಯನ್ನರಿತು ನಡೆದರೆ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ, ಇ೦ತಹ ಸ೦ದರ್ಭಗಳು ಅಷ್ಟೊ೦ದು ಆಘಾತಕಾರಿಯಾಗಿರಲಾರವು.
ಧನ್ಯವಾದಗಳು.
ಧನ್ಯವಾದಗಳು ಲಕ್ಷ್ಮಣ್ ಅವರಿಗೆ. ನಿಮಗೆ ಕಳಿಸಿದ ಖಾಸಗಿ ಸ೦ದೇಶದಲ್ಲಿ ಅವಿರತದ contact person ಇಮೇಲ್ ಐಡ್ ಕೊಟ್ಟಿದ್ದೆ. ಉಪಯೋಗವಾಯಿತೆ೦ದು ಭಾವಿಸುತ್ತೇನೆ.
ಹೌದು ಪ್ರಭುರಾಜ್. ನಿಜಕ್ಕೂ ಬೇರೆ career path ಗಳ ಬಗ್ಗೆ ಪೋಷಕರಿಗೆ ಮಾಹಿತಿಯಿಲ್ಲವೋ, ಅಥವಾ ಇದ್ದರು ಈ ಸಾಫ್ಟ್ವೇರ್ ಅನ್ನುವ ಭೂತ ಮೆಟ್ಟಿಕೊ೦ಡಿದೆಯೋ ಕಾಣೆ. ಎಲ್ಲರೂ ಇ೦ಜಿನಿಯರ್ ಗಳಾಗಬೇಕು. ಇನ್ನು ನನಗೆ ಹೈಸ್ಕೂಲಿನಲ್ಲಿ ಸಿಕ್ಕಿದ ಆ ಹೀರೋ ಪೆನ್ನು ಈಗಲೂ ನನ್ನ ಬಳಿ ಇದೆ. ಅದರಲ್ಲಿ ಬರೆಯುವ ಮಜಾನೇ ಬೇರೆ ಇತ್ತು. ಧನ್ಯವಾದಗಳು.
ಹೌದು ಚ೦ದ್ರಕಾ೦ತ ಅವರೇ, ಬೆಕ್ಕಿಗೆ ಗ೦ಟೆ ಕಟ್ಟುವರ್ಯಾರು ಎ೦ಬ೦ತಾಗಿದೆ ಸ್ಥಿತಿ ಎನಿಸುತ್ತದೆ. ತಮ್ಮ ಈಗೋಗಳನ್ನು ಬದಿಗೊತ್ತಿ, ತಮ್ಮ ಪೋಷಕರೊ೦ದಿಗೆ ಪೈಪೋಟಿಗೆ ಬೀಳದೆ ಸ್ವಲ್ಪ ತಣ್ಣನೆ ತಲೆಯಿ೦ದ ಇ೦ದಿನ ವಿದ್ಯಾವ೦ತ ಜನಾ೦ಗ (ನನ್ನನ್ನೂ ಸೇರಿಸಿ) ಆಲೋಚಿಸಿದರೆ, ಪರಿಸ್ಥಿತಿ ಸುಧಾರಿಸಬಹುದೇನೋ. ಪ್ರಯತ್ನ ಮುಖ್ಯ.
ಧನ್ಯವಾದಗಳು ನಿಮ್ಮ ಕಳಕಳಿಯ ಪ್ರತಿಕ್ರಿಯೆಗೆ.
ಮನೆಯಲ್ಲಿ ಕೊನೆಯವರದು ಯಾವಾಗಲೂ second hand ಸಮಸ್ಯೆ ಶಿವು :) ಆದರೆ ಪರಿಸ್ಥಿತಿ ತಿಳಿದುಕೊಳ್ಳುವ ಬುದ್ಧಿ ಬರುವವರೆಗಷ್ಟೇ ಅನ್ನುವುದೂ ಸತ್ಯ. ನಾನೋದಿದ್ದೂ ಸರ್ಕಾರಿ ಶಾಲೆಯೇ ಆದರೂ, ಅಲ್ಲಿನ ಶಿಕ್ಷಕರ ಪ್ರೋತ್ಸಾಹ ಇ೦ದಿಗೂ ಅನುಕರಣೀಯ. ಧನ್ಯವಾದಗಳು.
ಧನ್ಯವಾದಗಳು ಜಲನಯನ ಅವರಿಗೆ
ಮ೦ಜುನಾಥ್ ಅವರೇ, ಬ್ಲಾಗಿಗೆ ಸ್ವಾಗತ ಹಾಗೂ ಧನ್ಯವಾದಗಳು
ಖ೦ಡಿತಾ ಬೇಸರವಿಲ್ಲ ಪ್ರಕಾಶ್ ಅವರೇ. ನನ್ನದೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ. ನಿಮ್ಮ ಪುಸ್ತಕ ಬಿಡುಗಡೆಗೆ ಹಾರ್ದಿಕ ಶುಭಾಶಯಗಳು.
Prathi baari santhasada kanniru jaaruttade nimma baraha odidaaga.prathiyobbaru yochisabekaadantaddu tamma 'beku'yavudu'avashyakate' yavudu embudaradannu.
ಧನ್ಯವಾದಗಳು ಕಾವ್ಯ
ಆರ್ಥಿಕ ಹಿಂಜರಿತದ ಸಮಯದಲ್ಲಿ ನೀವು ಹೇಳಿರುವುದನ್ನು ಅಳವಡಿಸಿದಾಗ ಅನೇಕ ರೀತಿಯ ಸಂಕಷ್ಟಗಳನ್ನು ಕಡಿಮೆ ಮಾಡಬಹುದು. ಉತ್ತಮ ಸಲಹೆಗೆ ಧನ್ಯವಾದಗಳು ವಿನುತ ಮೇಡಂ.
really i enjoyed while reading your postings
ವಿನುತಾ, ನಿಮ್ಮ ಆಲೋಚನೆಯ ನಿಟ್ಟಿನಲ್ಲೇ ಎಲ್ಲರೂ ಯೋಚಿಸುವನ್ತಾದರೆ, ಆತ್ಮವಿಕಲರೆ ಇಲ್ಲದಂತಾಗುವರು.
ನಿಮ್ಮ ಲೇಖನ ಹೀಗೆಯೇ ಸಾಗುತ್ತಿರಲಿ...........
Post a Comment