Sunday, February 08, 2009

ಯತ್ರ ನಾರ್ಯಸ್ತು ಪೂಜ್ಯಂತೆ....


ಇತ್ತೀಚಿನ ಎಲ್ಲ ಘಟನಾವಳಿಗಳು - ಸ್ಲಮ್ ಡಾಗ್ ನ ಭಾರತ, ಮಂಗಳೂರಿನ ಪಬ್ ಧಾಳಿ ಪ್ರಕರಣ, 'ಪಬ್ ಭರೋ' ಹೇಳಿಕೆ... ಅಬ್ಬಬ್ಬಾ! ಎಲ್ಲಿದ್ದೇವೆ ನಾವು? ಎತ್ತ ಸಾಗುತ್ತಿದ್ದೇವೆ? ಈ ಎಲ್ಲ ಘಟನೆಗಳು ಏನನ್ನು ಸಾಧಿಸಿದವೋ ಗೊತ್ತಿಲ್ಲ, ಆದರೆ ಮಾಧ್ಯಮಗಳ ನೈತಿಕತೆ, ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ.

ಈ ಎಲ್ಲ ಘಟನೆಗಳ ನಡುವೆ ಇನ್ನೂ ಕೆಲವು ಘಟನೆಗಳಿದ್ದವು, ಇವೆ, ಮುಂದೆಯೂ ಇರುತ್ತವೆ. ಅಮಾಯಕ ಬಾಲಕಿಯರ ಅತ್ಯಾಚಾರ, ಬೆತ್ತಲೆ ಮೆರವಣಿಗೆ, ಅಪ್ರಾಪ್ತ ವಯಸ್ಸಿನ ವಿವಾಹಗಳು, ವರದಕ್ಷಿಣೆ ಸಾವುಗಳು, ಹೆಣ್ಣು ಭ್ರೂಣ ಹತ್ಯೆ, ಕುಡುಕ ಗಂಡನ ಶೋಷಣೆ, ಆಸಿಡ್ ದಾಳಿಗಳು, ಅವಿದ್ಯಾವಂತರ ದೈಹಿಕ ಶೋಷಣೆಯಾದರೆ, ವಿದ್ಯಾವಂತರ ಮಾನಸಿಕ ಕಿರುಕುಳಗಳು.... ಈ ಪಟ್ಟಿಗೆ ಕೊನೆಯುಂಟೇ? ಇವು ನಮ್ಮ ನಿತ್ಯ ಕರ್ಮಗಳು. ದೈನಂದಿನ ಜೀವನದ ಆಗುಹೋಗುಗಳು. ಹಾಗಾಗಿ ಇವು ಎಂದಿಗೂ ಮಾಧ್ಯಮೀಕರಣವಾಗುವ, ಇವುಗಳ ವಿರುದ್ಧ ಹೋರಾಡುವಷ್ಟು ದೊಡ್ಡ ಘಟನೆಗಳಲ್ಲ. ಇವು ಎಂದಿಗೂ 'Head Lines' ಅಥವಾ 'Breaking News' ಅಥವಾ 'Hot News' ಗಳಾಗಲಾರವು. ಚಿಂತಕರ ಚಾವಡಿಯ ಚರ್ಚೆಗಳಾಗಲಾರವು. ಸಂಸ್ಕೃತಿಯ ಸಂರಕ್ಷಕರ ಜವಾಬ್ದಾರಿಗಳಾಗಲಾರವು. ನ್ಯಾಯ ರಕ್ಷಕರ ನೈತಿಕ ಹೊಣೆಗಳಾಗಲಾರವು. ಮಹಿಳಾ ಸಬಲೀಕರಣದ ಕಾರ್ಯೋದ್ದೇಶಗಳಾಗಲಾರವು.

ಸಂಸ್ಕೃತಿಯ ಸಂರಕ್ಷಕರೆಂಬ ಪಡೆಯೊಂದು ಹಾಡು ಹಗಲಿನಲ್ಲೇ ಯುವತಿಯರ ಮೇಲೆ ಹಲ್ಲೆ ನಡೆಸಿತಲ್ಲಾ, ಇದು ಸಂಸ್ಕೃತಿಯೇ?

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ: ಕ್ರಿಯಾ: //
(ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ)

ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್ನ ಶೋಚಂತಿ ತು ಯತ್ರೈತಾ ವೃಧ್ಧತೇ ತದ್ಧಿ ಸರ್ವದಾ //
(ಮನೆಯೊಂದರಲ್ಲಿ ಮಗಳು, ಸೊಸೆ, ಅಕ್ಕತಂಗಿಯರು ಮತ್ತಿತರ ಸ್ತ್ರೀಯರು ನರಳಿದಲ್ಲಿ, ಖಂಡಿತವಾಗಿಯು ಆ ಮನೆ ನಾಶವಾಗುತ್ತದೆ. ಸಂತೋಷವಾಗಿದ್ದಲ್ಲಿ, ಸುಖ, ಸಂಪತ್ತು ವರ್ಧಿಸುತ್ತದೆ)

ಜಾಮಯೋ ಯಾತಿ ಮೋಹಾನಿ ಸಂಪತ್ಯ ಪ್ರತಿಪೂಜಿತಾ:ತಾತಿ ಕೃತ್ಯಾಹತಾನೀವ ವಿನಶ್ಯಂತಿ ಸಮನ್ವತ: //
(ಯಾವ ಮನೆಯಲ್ಲಿ ಹೆಂಡತಿ, ಮಗಳು, ಅಕ್ಕತಂಗಿಯರು, ಸೊಸೆಯಂದಿರು ಗೌರವಿಸಲ್ಪಡುವುದಿಲ್ಲವೋ, ಅವಮರ್ಯಾದೆಗೊಳಗಾಗುತ್ತಾರೋ ಆ ಮನೆ ಖಂಡಿತವಾಗಿಯು ನಾಶವಾಗುತ್ತದೆ)

'ಅತಿಥಿ ದೇವೋ ಭವ' ಎಂದು ನಂಬಿದ್ದರೂ, ಎಲ್ಲರಿಗಿಂತ ಮೊದಲು ಅತಿಥಿಗಳನ್ನು ಸತ್ಕರಿಸುತ್ತಿದ್ದರೂ,
ಸುವಾಸಿನೀ: ಕುಮಾರಂಶ್ಚ ರೋಗಿಣೋ ಗರ್ಭಿಣೀ: ಸ್ತ್ರೀಯ:ಅತಿಥಿಭ್ಯೋಗ್ರ ಎವೈತಾನ್ ಭೊಜಯೇದವಿಚಾರಯನ್ //
(ಸುವಾಸಿನಿಯರೂ, ಕುಮಾರಿಯರೂ, ಗರ್ಭಿಣಿ ಸ್ತ್ರೀಯರು, ಇವರೇ ಮೊದಲಾದ ಸ್ತ್ರೀಯರು ಅತಿಥಿಗಳಿಗೂ ಮೊದಲು ಸತ್ಕರಿಸಲ್ಪಡಬೇಕು)

ಇನ್ನು ತಾಯಿಯ ಪಾತ್ರದ ಬಗ್ಗೆ ಹೇಳುವುದೇನಿದೆ?
ಉಪಾಧ್ಯಾಯಾಂದಶಾಚಾರ್ಯ ಆಚಾರ್ಯಾಣಮ್ ಶತ೦ ಪಿತಾಸಹಸ್ತ್ರ೦ ತು ಪಿತೃನ್ಮಾತಾ ಗೌರವೀನಾತಿರಿಚ್ಯತೀ//
(ಗುರುವುಗಿಂತ ಆಚಾರ್ಯರೂ, ಆಚಾರ್ಯರಿಗಿಂತ ತಂದೆಯು, ಎಲ್ಲರಿಗಿಂತ ಹೆಚ್ಚಾಗಿ ತಾಯಿಯು ಪೂಜನೀಯವಾಗಿರುತ್ತಾರೆ)

ಶಿವಾಜಿಯ ಕಥೆಯೊಂದಿದೆ: ಒಮ್ಮೆ ಶಿವಾಜಿ ಕಲ್ಯಾಣಪ್ರಾಂತ್ಯವನ್ನು ಗೆದ್ದು ಅಪಾರ ಸಂಪತ್ತನ್ನು ಸಂಪಾದಿಸಿರುತ್ತಾರೆ. ಆಭಾಜಿಪಂಥ್, ಯುದ್ಧವನ್ನು ಗೆದ್ದ ಸೇನಾಪತಿ, ಸುಂದರ ಸ್ತ್ರೀಯೊಬ್ಬಳು ದೊರಕಿದ್ದಾಳೆ, ಅವಳನ್ನೂ ಮಹರಾಜರಿಗೆ ಸಮರ್ಪಿಸುತ್ತಿದ್ದೇನೆ ಎನ್ನುತ್ತಾನೆ. ಆಕೆ ಯುಧ್ಧದಲ್ಲಿ ಸೋತಿದ್ದ ಮುಘಲ್ ಸುಬೇದಾರನ ಕುಟುಂಬದ ಹೆಣ್ಣುಮಗಳು. ಅದಕ್ಕೆ ಶಿವಾಜಿ, 'ಆಕೆ ತುಂಬಾ ಸುಂದರವಾಗಿದ್ದಾಳೆಂದು ಹೇಳುತ್ತಿದ್ದೀಯೆ. ಆಕೆ ನನ್ನ ತಾಯಿಯ ಸಮಾನ. ನಾನಾಕೆಯನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀರಕ್ಷಣೆ ರಾಜಧರ್ಮ' ಎಂದು ಹೇಳಿ, ಸಕಲ ಗೌರವ ಮರ್ಯಾದೆಗಳೊಂದಿಗೆ ಹಿಂತಿರುಗಿಸುತ್ತಾನೆ. ಆಗ ಸುಬೇದಾರನಿಗೆ ಹೆಣ್ಣಿಗೆ ಈ ಮಣ್ಣಿನಲ್ಲಿ ಕೊಡುವ ಮರ್ಯಾದೆಯ ಅರಿವಾಗುತ್ತದೆ.

ನಿನ್ನ ಹೆಂಡತಿಯನ್ನು ಹೊರತು ಪಡಿಸಿ ಮಿಕ್ಕೆಲ್ಲ ಸ್ತ್ರೀಯರು ನಿನಗೆ ಪರಸ್ತ್ರೀಯರು. ಅವರನ್ನು ನಿನ್ನ ತಾಯಿಯರಂತೆಯು, ಅಕ್ಕ ತಂಗಿಯರಂತೆಯೂ ಕಾಣು ಎಂದಿದ್ದಾರೆ ಹಿರಿಯರು.

ಬಹುಶ: ನಮ್ಮ ಸಂಸ್ಕೃತಿಯ ಬಗ್ಗೆ ನಾವೇ ಹೇಳುವುದು ರುಚಿಸದಿದ್ದಲ್ಲಿ, ಪಾಶ್ಚಿಮಾತ್ಯ Kerry Brown ತನ್ನ 'The Essential Teachings of Hinduism' ಎಂಬ ಪುಸ್ತಕದಲ್ಲಿ ಹೇಳುತ್ತಾನೆ - "In Hinduism a woman is looked after not because she is inferior or incapable but, on the contrary, because she is treasured. She is the pride and power of the society. Just as the crown jewels should not be left unguarded, neither should a woman be left unprotected. No extra burden of earning a living should be placed on women who already bear huge responsibilities in society; childbirth; child care, domestic well being and spiritual growth. She is the transmitter of culture to her children."

ಇದು ನಮ್ಮ ಸಂಸ್ಕೃತಿ. ಇನ್ನಾದರೂ ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನೀತಿಗೊಳಿಸುವ ಕಾರ್ಯಗಳು ನಿಲ್ಲಲಿ. ಗುಂಪೊಂದರ ಉದ್ದೇಶ ಮಾತ್ರ ಸರಿಯಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮಾರ್ಗವೂ ಸರಿಯಿರಬೇಕು.

ಮಂಗಳೂರಿನ ಪಬ್ ವೊಂದರಲ್ಲಿ ಯುವತಿಯೊಬ್ಬಳನ್ನು ಹೊಡೆದಾಕ್ಷಣ, ದೇಶಾದ್ಯಂತ ಮಲಗಿದ್ದ ಸಿಂಹಿಣಿಯರೆಲ್ಲರೂ ಎದ್ದು ಘರ್ಜಿಸುತ್ತಿದ್ದಾರೆ. ಮಹಿಳಾ ಸ್ವಾತಂತ್ರ್ಯ, ಹಕ್ಕುಗಳ ಬಗ್ಗೆ, ನೈತಿಕತೆಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅವರದೇ ಮನೆಗಳಲ್ಲಿ ಕೆಲಸದ ಹೆಣ್ಣು ಮಕ್ಕಳನ್ನು ಅವರೂ, ಅವರ ಮಕ್ಕಳೂ ನಡೆಸಿಕೊಳ್ಳುವ ರೀತಿ/ಅನೀತಿಗಳನ್ನು ಪ್ರಶ್ನಿಸುವವರು ಯಾರು? ಗಂಡಸರು ಕುಡಿಯುತ್ತಾರೆ, ಕುಣಿಯುತ್ತಾರೆ, ಪಬ್ ಗಳಿಗೆ ಹೋಗುತ್ತಾರೆ.ಧೂಮಪಾನ, ಅತ್ಯಾಚಾರಗಳನ್ನು ಮಾಡುತ್ತಿದ್ದಾರೆ. ನಾವು ಅವರಿಗೇನು ಕಮ್ಮಿ? ನಾವೂ ಮಾಡುತ್ತೇವೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ಸಮಾನತೆ, ಹಕ್ಕು ಮತ್ತು ಸಂಸ್ಕ್ರತಿ!!! ಮೊನ್ನೆ ತಾನೇ ಜೈಪುರದಲ್ಲಿ ೧೮ ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆಯಿತು. ಕೇಳಲೂ ಅಸಹ್ಯ ಹುಟ್ಟಿಸುವಂತಹ ಸುದ್ದಿ. ಎಲ್ಲಿ ಹೋಗಿದ್ದರು ಮಹಿಳಾವಾದದ ಕಾರ್ಯಕರ್ತರು? ಬಹುಶ: ಪಬ್ ನಲ್ಲಿ ಕುಳಿತು ತಮ್ಮ ಸಮಾನತೆ, ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದರೆಂದು ತೋರುತ್ತದೆ. ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ 'ಪಬ್ ಭರೋ' ಎಂದು ಕರೆಯಿತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡುವ ನುಡಿಗಳೇ ಇವು? ಈ ರೀತಿಯ ಹೇಳಿಕೆಗಳಿಂದ ಇವರು ತಮ್ಮದಿರಲಿ (ಅವರಿಗಿಲ್ಲ ಎಂಬುದು ತಿಳಿದಿರುವ ವಿಚಾರ) ಸಭ್ಯ ನಾಗರೀಕರ ನಡಾವಳಿಗಳ ವಧೆ ಮಾಡುತ್ತಿದ್ದಾರೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಜನತೆಯನ್ನು ಸರಿದಾರಿಯತ್ತ ಕೊಂಡೊಯ್ದ ವಿವೇಕಾನಂದರಂತಹ ಉದ್ಘೋಷಗಳ ಜರೂರತ್ತಿನ ಸಮಯದಲ್ಲಿ, 'ಬನ್ನಿ, ಕುಡಿದು, ಕುಪ್ಪಳಿಸಿ, ಪಬ್ ಗಳನ್ನು ತುಂಬಿಸಿ' ಎಂಬ ಹೇಳಿಕೆಗಳು..'ಮಾಡು ಇಲ್ಲವೇ ಮಡಿ' ಎಂಬ ಧೋರಣೆಗಳಿಂದ ಗಳಿಸಿದ ಸ್ವಾತಂತ್ರ್ಯದ ಬಳಕೆ ಈ ರೀತಿಯಲ್ಲಿ... ಸಾಮಾಜಿಕ ದುರಂತವೆಂದರೆ ಇದೇ ಅಲ್ಲವೇ? ಪು.ತಿ.ನ ರವರ ಮಾತೊಂದು ಪ್ರಸ್ತುತವಾಗುತ್ತದೆ..
ನುಡಿಯೊಳು ಹೊಳೆವುದು ನಾಡಿನ ನಡವಳಿ
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ //

ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಮೊಡಿದ ಕೆಲವು ಪ್ರಶ್ನೆಗಳು. ಯುವತಿಯರೇ ನಿಮ್ಮನ್ನು ಹೊಡೆಯುವಾಗ ನೀವು ನಂಬಿಕೊಂಡು ಬಂದಿದ್ದ ನಿಮ್ಮ 'ಬಾಯ್' ಫ್ರೆಂಡ್ಸ್ ಎಲ್ಲಿ ಹೋಗಿದ್ದರು? ತಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿರಲಿಲ್ಲವೇ? ನಿಮಗೆ ಆಧುನಿಕತೆಯ ಹೆಸರಿನಲ್ಲಿ ಜೀನ್ಸ್ ಧರಿಸಿ, ಸ್ವಾತಂತ್ರ್ಯದ ಹೆಸರಿನಲ್ಲಿ ಪಬ್ ಗೆ ಹೋಗಲು ತಿಳಿದಿರುವಾಗ, ಯಾರೋ ಮೂರನೆಯ ವ್ಯಕ್ತಿ ಹೊಡೆಯುತಿರುವಾಗ ಎಲ್ಲಿ ಹೋಗಿತ್ತು ನಿಮ್ಮ ಆವೇಶ? ತಿರುಗಿ ಬಾರಿಸಬಾರದಾಗಿತ್ತೆ? ಎಲ್ಲಿ ಹೋಗಿತ್ತು ಸಮಾನತೆ? ಹಾಗೆ ಮಾಡಿದ್ದಲ್ಲಿ, ಅದೂ ಕೂಡ ಮಾಧ್ಯಮೀಕರಣವಾಗಿ, ನಿಮ್ಮ ಮಹಿಳಾ ಸ್ವಾತಂತ್ರ್ಯದ ಚಳುವಳಿಗೆ ಹೊಸ ಆಯಾಮವೊಂದು ಸಿಗುತ್ತಿರಲಿಲ್ಲವೇ? ನಿಮ್ಮ ರಕ್ಷಣೆ ನಿಮ್ಮ ಹೊಣೆ, ಬೇರೆಯವರನ್ನೇಕೆ ಆಧರಿಸಿರುವಿರಿ?

ಇನ್ನಾದರೂ, ಮುಳ್ಳು ಸೀರೆಯ ಮೇಲೆ ಬಿದ್ದರೂ, ಸೀರೆ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಸೀರೆಯೇ ಎಂಬುದರ ಅರಿವು ನಮಗಾಗಲಿ. ಯಾರದೋ ಹೇಳಿಕೆ ಮಾತಿಗೆ ಮರುಳಾಗಿ ನಮ್ಮತನದ ಬಲಿ ನಿಲ್ಲಲಿ. ಸರಿ/ತಪ್ಪುಗಳ ಅರಿತು ನಡೆಯೋಣ. ಸ್ವಾಭಿಮಾನಿಗಳಾಗೋಣ. ಸ್ವಂತದೊಂದು Identity, ಅಸ್ತಿತ್ವವನ್ನು ಬೆಳೆಸಿಕೊಳ್ಳೋಣ. ಸಮಾನತೆಯ ಹೆಸರಿನಲ್ಲಿ, ಆಧುನಿಕತೆಯ ಸೋಗಿನಲ್ಲಿ ಕಣ್ಣಿಗೆ ಕಟ್ಟಿರುವ ಪೊರೆ ತೆಗೆಯೋಣ. ಸಮಾನತೆಯ ಕೂಗು ಬಾರ್, ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಬದಲಾಗಿ, ಶಾಂತಿ, ನೆಮ್ಮದಿಯುಳ್ಳ ಸುಂದರ ಸಮಾಜದ ಬೆಳವಣಿಗೆಯತ್ತ ಸಾಗಲಿ. ನಮಗೆ ದೊರೆತಿರುವ ವಿದ್ಯೆಯ ಸದುಪಯೋಗವಾಗಲಿ. ಸ್ತ್ರೀ ಎನ್ನುವುದು ಕೇವಲ ಭೋಗದ ವಸ್ತುವಲ್ಲ. ಸೂತ್ರದ ಬೊಂಬೆಯಲ್ಲ. ಸ್ತ್ರೀ ಎನ್ನುವುದೊಂದು ಶಕ್ತಿ. ಇದು ಕೇವಲ ಪುರಾಣ, ಇತಿಹಾಸಗಳು, ಕಥೆ ಕವನಗಳಲ್ಲಿರದೆ ನಮ್ಮ ಕೃತಿಗಳಲ್ಲಿರಲಿ. ಯಾರಾದರು ಕೇವಲ ಹೆಣ್ಣು ಎನ್ನುವ ಕಾರಣಕ್ಕೆ ಬೆಲೆ ಕೊಡುವುದರ ಬದಲಾಗಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಲಿ. ಕರ್ತವ್ಯಗಳನ್ನು ನಿರ್ವಹಿಸಿ ಹಕ್ಕುಗಳಿಗಾಗಿ ಹೋರಾಡೋಣ.

ಆಹಾ ಪುರುಷಸಿಂಹಗಳೇ (ದೈಹಿಕ ಸಾಮರ್ಥ್ಯದಲ್ಲಿ ನಿಮಗಿಂತ ಸ್ವಲ್ಪ ಕೆಳಸ್ತರದಲ್ಲಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ) ಅಬಲೆಯರ ಮೇಲಿನ ದೌರ್ಜನ್ಯಕ್ಕೆ ಮೀಸಲಾಗಿರುವ ನಿಮ್ಮ ಸಶಕ್ತಿ ಮತ್ತು ಕುಯುಕ್ತಿಯನ್ನು ಇನ್ನೂ ಉತ್ತಮ ಕಾರ್ಯಗಳಿಗೆ ಬಳಸಿ. ಬೀchiಯವರು ತಮ್ಮ 'ಹುಚ್ಚು-ಹುರುಳು' ಕೃತಿಯಲ್ಲಿ 'ಹೆಂಡತಿಯನ್ನು ಯಾವಾಗ ಹೊಡೆಯಬೇಕು?' ಎಂಬ ಪ್ರಶ್ನೆಯೊಂದನ್ನು ರೂಪಿಸಿ ಬಹಳ ಚೆನ್ನಾಗಿ ವಿಡಂಬನೆ ಮಾಡಿದ್ದಾರೆ. (ಕೆಲ ತುಣುಕು - ಬಜಾರದಲಿ ಬೆಲ್ಲ ದೊರೆಯದಿದ್ದರೆ, ಆಫೀಸಿನಲ್ಲಿ ಆಟ ಸಾಗದಿದ್ದರೆ, ಮಲಗಿದಾಗ ತಿಗಣೆ ಕಡಿದರೆ, ಮಗನು ಶಾಲೆಯಲ್ಲಿ ನಪಾಸಾದರೆ, ಮಳೆಯಾಗಿ ರಸ್ತೆ ಕೆಸರಾದರೆ, ಸಾಲಕೊಟ್ಟವರು ಕಾಟ ಕೊಟ್ಟರೆ, ತನ್ನ ಲೇಖನವನ್ನು ಸಂಪಾದಕರು ಸ್ವೀಕರಿಸಿ ಹಣ ಕಳಿಸದಿದ್ದರೆ, ಗಂಡನೆಂಬ ಸಾಧು ಪ್ರಾಣಿಯು ತನ್ನ ಹೆಂಡತಿಯನ್ನಲ್ಲದೇ ಬೇರಾರನ್ನು ಹೊಡೆಯಲು ಸಾಧ್ಯ? ಯಾರೂ ನಿಷ್ಕಾರಣವಾಗಿ ಹೊಡೆಯುವುದಿಲ್ಲ. ತಾನು ಅವಳ ಗಂಡನೆಂಬುದೇ ಮೊದಲ ಕಾರಣ!) ಶೋಷಣೆಯೆಂಬುದು ದೈಹಿಕ ಹಿಂಸೆಗೆ ಸೀಮಿತವಲ್ಲ. ಮಾನಸಿಕ ಪ್ರಹಾರವೂ ಶೋಷಣೆಯ ಒಂದು ರೂಪವೇ. ಕೆಲವೊಮ್ಮೆ ಅಭಿವ್ಯಕ್ತವಾಗುವುದಿಲ್ಲ, ಆಲೋಚನೆಗಳಲ್ಲಿರುತ್ತದೆ. ತೆರೆ ಮರೆಯ ಕೃತಿಗಳಲ್ಲಿರುತ್ತದೆ. ನೀವು ಮಹಿಳೆಯರನ್ನು ಸಂರಕ್ಷಿಸುವ ಅಗತ್ಯವಿಲ್ಲ, ರಕ್ಷಣೆಗಾಗಿ ಪರದಾಡುವಂತೆ ಮಾಡದಿದ್ದರೇ ಅದೇ ದೊಡ್ಡ ಸಂರಕ್ಷಣೆ. ಒಳಿತನ್ನು ಮಾಡಲಾಗದಿದ್ದರೆ, ಕೆಡುಕನ್ನಂತೂ ಮಾಡಬೇಡಿ.

ಗಂಡು ಹೆಣ್ಣುಗಳು ಪ್ರತಿಸ್ಪರ್ಧಿಗಳಲ್ಲ. ಸಮಾನತೆಯೆನ್ನುವುದು ಮಾಡುವ ಕೆಲಸಗಳಲ್ಲಿಲ್ಲ. ನಮ್ಮ ವಿವೇಚನೆಯಲ್ಲಿದೆ, ಆಲೋಚನೆಗಳಲ್ಲಿದೆ. ಪುರುಷ - ಪುರುಷರಲ್ಲೇ, ಸ್ತ್ರೀ-ಸ್ತ್ರೀಯರಲ್ಲೇ ಸಮಾನತೆಯಿಲ್ಲ, ಕೆಲವರು ಚೆನ್ನಾಗಿ ಮಾತನಾಡಬಹುದು, ಕೆಲವರು ಬರೆಯಬಹುದು, ಇನ್ನು ಕೆಲವರು ನಟಿಸಬಹುದು... ಹೀಗೆ ಹತ್ತು ಹಲವು ಉದಾಹರಣೆಗಳು. ಆದರೂ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಪ್ರತಿಯೊಂದು ಜೀವಿಗೂ ಅದರದೇ ಆದ ವಿಶೇಷತೆಗಳಿವೆ. ನಾನೇ ಹೆಚ್ಚು ಎಂಬ ಹುಂಬತನದ ಅಗತ್ಯವಿಲ್ಲ.

ಪ್ರಕೃತಿ - ಪುರುಷ ಎಂಬ ಸೂತ್ರದ ಸಂಸ್ಕೃತಿ ನಮ್ಮದು. ಒಬ್ಬರಿಗೊಬ್ಬರು ಪೂರಕವೇ ಹೊರತು ಎದುರಾಳಿಗಳಲ್ಲ, ಸಮಾನರಲ್ಲ. ಇಬ್ಬರಿಗೂ ಅವರದೇ ಆದ ಉದ್ದೇಶಗಳಿವೆ, ಜವಾಬ್ದಾರಿಗಳಿವೆ, ಗುಣಗಳಿವೆ, ಸಾಮರ್ಥ್ಯಗಳಿವೆ. ಸಮಾಜದ ಪ್ರಗತಿಯಲ್ಲಿ ಇಬ್ಬರು ಸಹವರ್ತಿಗಳು. ಪರಸ್ಪರ ಗೌರವವಿರಲಿ. ಸಹಬಾಳ್ವೆಯಿರಲಿ. ಅರ್ಥಮಾಡಿಕೊಳ್ಳುವ, ಅರಿತುಕೊಳ್ಳುವ ವಿಶಾಲ ದೃಷ್ಟಿಕೋನ ನಮ್ಮದಾಗಲಿ. ಈ ಎಲ್ಲ ಚಿಂತನೆಗಳು ಕೇವಲ ಎರಡುದಿನದ ಕೆಸರೆರಚಾಟದ ಭಾಗಗಳಾಗದಿರಲಿ. ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗಲಿ. ತೋರಿಕೆಯಾಗದೆ, ಮನಪೂರ್ವಕವಾಗಿ ಆಚರಿಸ್ಪಡಲಿ.

10 comments:

Unknown said...

ವಿನುತ ಅವರೇ,
ನಿಮ್ಮ ಲೇಖನವೂ ಸಮಯೋಚಿತವಾಗಿಯೂ, ಅರ್ಥಯುತವೂ ಆಗಿದೆ. ಆದರೆ ಏನು ಮಾಡೋದು ರೀ, ನಮ್ಮ ಸಂಸ್ಕೃತಿ, ಸಮಾಜ ಎಲ್ಲವು ಪಾಶ್ಚಿಮಾತ್ಯ ಮಯವಾಗಿ ಬಿಟ್ಟಿದೆ..
ನಿಜಕೂ ನಿಮ್ಮ ಲೇಖನ ತುಂಬಾ ವಿಚಾರವುಳ್ಳದ್ದಾಗಿದೆ.
ಸುನಿಲ್ ಮಲ್ಲೇನಹಳ್ಳಿ

Anonymous said...

ವಿನುತಜಿ,

ಚೆನ್ನಾಗಿದೆ ಮೂಡಿ ಬಂದಿದೆ ನಿಮ್ಮ ಚಿಂತನೆ...
ಗಂಡು ಹೆಣ್ಣಿನ ಸಮಾನತೆಯನ್ನು ಸಮಾಜದಲ್ಲಿ ಹೇಗೆ ಕಾಪಾಡುವುದು ಎಂಬ ಪ್ರಶ್ನೆ ಉದ್ಭವಾಗುತ್ತೆ... ಸಮಯವಿದ್ದರೆ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ... We need solutions and people who can implement them; not just opinions.

ರಾಜೀವ್

Anonymous said...

ವಿನುತಾ,

ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯಗಳು ನನಗೆ ಸರಿಕಾಣಲಿಲ್ಲ. ನಿಮ್ಮಂತಹದೇ ಅಭಿಪ್ರಾಯ ಅನೇಕ ಹೆಂಗಸರೂ (ಆಶ್ಚರ್ಯದ ವಿಷಯ), ಗಂಡಸರೂ (ಆಶ್ಚರ್ಯದ ವಿಷಯವಲ್ಲ!) ಬರೆಯುತ್ತಿದ್ದಾರೆ. ನನ್ನ ತಕರಾರಿರುವುದು ನಿಮ್ಮ ಈ ಮಾತುಗಳ ಬಗ್ಗೆ:


"ಮಂಗಳೂರಿನ ಪಬ್ ವೊಂದರಲ್ಲಿ ಯುವತಿಯೊಬ್ಬಳನ್ನು ಹೊಡೆದಾಕ್ಷಣ, .....ಅವರೂ, ಅವರ ಮಕ್ಕಳೂ ನಡೆಸಿಕೊಳ್ಳುವ ರೀತಿ/ಅನೀತಿಗಳನ್ನು ಪ್ರಶ್ನಿಸುವವರು ಯಾರು?

ಮೊದಲನೆಯದಾಗಿ ನೀವು ನಡೆದಿರುವ ಪ್ರಕರಣವನ್ನು ತೀರಾ ಸಣ್ಣದು ಮಾಡಿ ಮಾತಾಡುತ್ತಿದ್ದೀರ. ಒಬ್ಬಳು ಯುವತಿಯನ್ನು ಹೊಡೆಯಲಿಲ್ಲ, ಬದಲಾಗಿ, ಮೊದಲೇ ಮಾಧ್ಯಮಗಳಿಗೆ ಅಲ್ಲಿಗೆ ಬರುವಂತೆ ಆಹ್ವಾನವಿತ್ತು, ಆಮೇಲೆ ಒಂದು ಹುಂಬರ ದಂಡು ಹೋಗಿ, ತಮ್ಮ ಪಾಡಿಗೆ ತಾವು, ತಮ್ಮ ದುಡ್ಡನ್ನು ಖರ್ಚು ಮಾಡಿಕೊಂಡು, ತಮ್ಮ ಸಮಯವನ್ನು ವ್ಯಯಿಸುತ್ತಾ, ಬೇರೆಯವರಿಗೆ ಯಾವ ತೊಂದರೆಯನ್ನೂ ಮಾಡದೇ ಇದ್ದ ಹೆಣ್ಣು ಮಕ್ಕಳ ಮೇಲೆ ಅನಾಗರಿಕವಾಗಿ, ಅಸಂವಿಧಾನಾತ್ಮಕವಾಗಿ ದಾಳಿ ಮಾಡಿದ್ದಾರೆ. ಆ ಹುಂಬರ ಗುರಿ ಅಲ್ಲಿದ್ದ ಗಂಡಸರಾಗಿರಲಿಲ್ಲ, ಬದಲಾಗಿ ಅಲ್ಲಿದ್ದ ಹೆಣ್ಣು ಮಕ್ಕಳಾಗಿದ್ದರು. ಇದು ಮಹಿಳಾ ಸ್ವಾತಂತ್ರ್ಯವನ್ನು, ಹಕ್ಕನ್ನು ಪ್ರಶ್ನಿಸುವ ಸಂದರ್ಭ ಅಲ್ಲವೆಂದು ಹೇಗೆ ಹೇಳುತ್ತೀರಿ?

ಎರಡನೆಯದಾಗಿ, ಕೆಲಸದ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿಯನ್ನು ಪ್ರಶಿಸಿದ್ದೀರಿ. ಇದಕ್ಕೂ ಪಬ್ ಪ್ರಕರಣಕ್ಕೂ ಯಾವ ಸಂಬಂಧ? ಯಾರೂ ಕೆಲಸದ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿಯನ್ನು ಪ್ರಶ್ನಿಸುತ್ತಿಲ್ಲ ಎಂಬ ನಿಮ್ಮ ಮಾತಿಗೆ ಆಧಾರವೇನು? ಪಬ್ ನಲ್ಲಿ ದಾಳಿ ನಡೆದಾಗ ಆ ಘಟನೆಯನ್ನು ಕುರಿತು ಚರ್ಚೆ ಮಾಡದೆ ಇನ್ಯಾವುದೋ ಘಟನೆಯನ್ನು ಕುರಿತು ಚರ್ಚೆ ಮಾಡುವಷ್ಟು ನಮ್ಮ ಮಾಧ್ಯಮಗಳಿನ್ನೂ ಕೆಟ್ಟಿಲ್ಲ.


"ನಾವು ಅವರಿಗೇನು ಕಮ್ಮಿ? ನಾವೂ ಮಾಡುತ್ತೇವೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ಸಮಾನತೆ, ಹಕ್ಕು ಮತ್ತು ಸಂಸ್ಕ್ರತಿ!!!"

ನೀವು ಹೇಳುತ್ತಿರುವ ಇದೇ ಮಾತುಗಳನ್ನು ಹೆಂಗಸರು ಕೆಲಸಕ್ಕೆ ಹೋಗುವ ವಿಷಯ ಬಂದಾಗ ಗಂಡಸರೂ ಹೆಂಗಸರೂ ಹೇಳುತ್ತಿದ್ದರು. ಸರಿಯಾಗಿ ಅರ್ಥ ಮಾಡಿಕೊಳ್ಳಿ: ಹದಿನೆಂಟು ಮೀರಿದ ಹೆಣ್ಣಾಗಲೀ ಗಂಡಾಗಲೀ ನೀವು ಪಟ್ಟಿ ಮಾಡಿರುವ "ಅತ್ಯಾಚಾರ"ಗಳನ್ನು ಮಾಡುತ್ತಿದ್ದರೆ, ಅದನ್ನು ಹೊಡೆದು ಬಡಿದು "ಪಾಠ ಕಲಿಸಲು" ಯಾರಿಗೂ ಹಕ್ಕಿಲ್ಲ.


"ಮೊನ್ನೆ ತಾನೇ ಜೈಪುರದಲ್ಲಿ ೧೮ ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆಯಿತು. ಕೇಳಲೂ ಅಸಹ್ಯ ಹುಟ್ಟಿಸುವಂತಹ ಸುದ್ದಿ. ಎಲ್ಲಿ ಹೋಗಿದ್ದರು ಮಹಿಳಾವಾದದ ಕಾರ್ಯಕರ್ತರು? ಬಹುಶ: ಪಬ್ ನಲ್ಲಿ ಕುಳಿತು ತಮ್ಮ ಸಮಾನತೆ, ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದರೆಂದು ತೋರುತ್ತದೆ."

ನೀವೇನು ಮಾಡುತ್ತಿದ್ದಿರಿ? ಅಮೇರಿಕಾದಲ್ಲಿ ಕುಳಿತು ನಿಮ್ಮ ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದಿರಾ? ಈ ಹೇಯವಾದ ಕೃತ್ಯವನ್ನು ಪ್ರತಿಭಟಿಸುವುದು ಕೇವಲ ಮಹಿಳೆಯರ ಕರ್ತವ್ಯವೇ? ಗಂಡಸರನ್ನೇಕೆ ನೀವು ಪ್ರಶ್ನಿಸುತ್ತಿಲ್ಲ?


"ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ 'ಪಬ್ ಭರೋ' ಎಂದು ಕರೆಯಿತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡುವ ನುಡಿಗಳೇ ಇವು?"

ಅವರೇನು ಹೇಳಬೇಕಾಗಿತ್ತು? ಪುಂಡರಿಗೆ ಹೆದರಿಕೊಂಡು ಮನೆಯಲ್ಲಿ ಕಂಬಳಿ ಹೊದ್ದು ಮಲಗಿ ಎಂದು ಹೇಳಬೇಕಾಗಿತ್ತೆ? ಇಲ್ಲಾ ಅಮೆರಿಕಕ್ಕೆ ವಲಸೆ ಹೋಗಿ ಎಂದು ಹೇಳಬೇಕಾಗಿತ್ತೆ?


"ಯುವತಿಯರೇ ನಿಮ್ಮನ್ನು ಹೊಡೆಯುವಾಗ ನೀವು ನಂಬಿಕೊಂಡು ಬಂದಿದ್ದ ನಿಮ್ಮ 'ಬಾಯ್' ಫ್ರೆಂಡ್ಸ್ ಎಲ್ಲಿ ಹೋಗಿದ್ದರು? ತಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿರಲಿಲ್ಲವೇ?"

ಈ ಪ್ರಶ್ನೆಯನ್ನು ನೀವು ಬಾಯ್ ಫ್ರೆಂಡ್ಸ್ ಗಳನ್ನು ಕೇಳಬೇಕಲ್ಲವೆ? ಕೇವಲ ಯುವತಿಯರನ್ನು ಯಾಕೆ ಕೇಳುತ್ತೀರಿ?


"ಯಾರೋ ಮೂರನೆಯ ವ್ಯಕ್ತಿ ಹೊಡೆಯುತಿರುವಾಗ ಎಲ್ಲಿ ಹೋಗಿತ್ತು ನಿಮ್ಮ ಆವೇಶ? ತಿರುಗಿ ಬಾರಿಸಬಾರದಾಗಿತ್ತೆ? ಎಲ್ಲಿ ಹೋಗಿತ್ತು ಸಮಾನತೆ? ಹಾಗೆ ಮಾಡಿದ್ದಲ್ಲಿ, ಅದೂ ಕೂಡ ಮಾಧ್ಯಮೀಕರಣವಾಗಿ, ನಿಮ್ಮ ಮಹಿಳಾ ಸ್ವಾತಂತ್ರ್ಯದ ಚಳುವಳಿಗೆ ಹೊಸ ಆಯಾಮವೊಂದು ಸಿಗುತ್ತಿರಲಿಲ್ಲವೇ? ನಿಮ್ಮ ರಕ್ಷಣೆ ನಿಮ್ಮ ಹೊಣೆ, ಬೇರೆಯವರನ್ನೇಕೆ ಆಧರಿಸಿರುವಿರಿ?"

ನೀವೇ ನಿಮ್ಮ ಬರಹದಲ್ಲಿ ಇನ್ನೊಂದು ಕಡೆ ಹೆಂಗಸರ ದೈಹಿಕ ಸಾಮರ್ಥ್ಯದ ಬಗ್ಗೆ ಹೇಳಿದ್ದೀರ. ಆದರೂ ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ದ್ವೇಷದ ಕಾರಣದಿಂದ ಎಷ್ಟು ಅಸಡ್ಡೆ-ತುಂಬಿದ ಹಾಗೂ ಅಸಂಬದ್ಧವಾದ ಮಾತುಗಳನ್ನು ಬರೆದಿದ್ದೀರ!!

ನಿಮ್ಮ ಮಾತುಗಳು ದಂತಗೋಪುರದ ಮೇಲೆ ಕುಳಿತು ಬರೆದಿರುವ ಅರೆಬೆಂದ ಅಭಿಪ್ರಾಯಗಳು! ನೀವು ಮಾಡಬೇಕಾದ ಹೋಮ್ ವರ್ಕ್ ತುಂಬಾ ಇದೆ. ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಿ. ಯಾವುದಾದರೂ ಸಂಘಟನೆಯನ್ನು ಸೇರಿ ಸೇವೆ ಮಾಡಿ, ಮಾಡುವ ಇಚ್ಛೆ ಇಲ್ಲದಿದ್ದರೆ ಇದರ ಬಗ್ಗೆ ಬರೆಯುವುದನ್ನು ನಿಲ್ಲಿಸಿ. ನಿಮ್ಮ ಬರಹವನ್ನು ನೀವೇ ಓದಿ, ಅದರಲ್ಲಿ ಇರುವ contradictions ನಿವಾರಿಸಿ ಆಮೇಲೆ ಪೋಸ್ಟ್ ಮಾಡಿ.

ಕೊನೆಯದಾಗಿ, ನೀವು ಅಮೇರಿಕಾವನ್ನು ಬಿಟ್ಟು ಭಾರತಕ್ಕೆ ಎಂದಿಗೂ ಬರಬೇಡಿ. ಮನೆಯಲ್ಲಿ ಬೆಚ್ಚಗೆ ಕುಳಿತು ಬೇರೆಯವರು ಏನು ಮಾಡಬೇಕೆಂದು ಮಾತ್ರ ಹೇಳುವ ನಿಮ್ಮಂಥವರ ಅವಶ್ಯಕತೆ ಭಾರತಕ್ಕಿಲ್ಲ.

Anonymous said...

Read this and participate

http://thepinkchaddicampaign.blogspot.com/

ವಿನುತ said...

ಅನಾಮಿಕರೇ,

ಪ್ರತಿಯೊಂದು ವಿದ್ಯಮಾನವೂ ನಾವು ನೋಡುವ ದೃಷ್ಟಿಕೋನದ ರೂಪವನ್ನು ಪಡೆದುಕೊಳ್ಳುತ್ತದೆ. ನಾವು ಮಾಡುವ ಎಲ್ಲ ಕಾರ್ಯಗಳಿಗೂ ಒಂದು ಕಾರಣವಿರುತ್ತದೆ. ಕಳ್ಳನಿಗೂ, ಕುಡುಕನಿಗೂ, ಕೊಲೆಗಡುಕನಿಗೂ, ಸೈನಿಕನಿಗೂ, ಭಯೋತ್ಪಾದಕನಿಗೂ, ಸ್ವಾಮಿಗೂ, ಸಾಧ್ವಿಗೂ, ವೇಶ್ಯೆಗೂ ಎಲ್ಲರಿಗೂ ಅವರದೇ ಕಾರಣಗಳಿರುತ್ತವೆ. ಎಲ್ಲರೂ ಅವರ ಮೂಗಿನ ನೇರಕ್ಕೆ ಅವರೇ ಸರಿ. ಆದರೆ ಒಂದು ಆರೋಗ್ಯಕರ ಸಮಾಜದ ಪರಿಧಿಯಲ್ಲಿ ಸರಿ/ತಪ್ಪುಗಳನ್ನು ವಿಶ್ಲೇಷಿಸಿದಾಗ ಘಟನೆಯ ಹಲವು ಮಜಲುಗಳು ಕಾಣಿಸಬಹುದು. ಹಾಗೆ ನನಗೆ ಈ ಘಟನೆಯಲ್ಲಿ ಕಂಡುಬಂದ ಮಜಲುಗಳ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೀನೆಯಷ್ಟೆ.

ಇದು ಮಹಿಳಾ ಸ್ವಾತಂತ್ರ್ಯವನ್ನು, ಹಕ್ಕನ್ನು ಪ್ರಶ್ನಿಸುವ ಸಂದರ್ಭ ಅಲ್ಲವೆಂದು ಹೇಗೆ ಹೇಳುತ್ತೀರಿ?
-"ಈ ಎಲ್ಲ ಘಟನೆಗಳು ಏನನ್ನು ಸಾಧಿಸಿದವೋ ಗೊತ್ತಿಲ್ಲ, ಆದರೆ ಮಾಧ್ಯಮಗಳ ನೈತಿಕತೆ, ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ" ಎಂದು ಮೊದಲಿಗೇ ಹೇಳಿದ್ದೇನೆ - ಇವು ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ ಎಂದು

ಅದನ್ನು ಹೊಡೆದು ಬಡಿದು "ಪಾಠ ಕಲಿಸಲು" ಯಾರಿಗೂ ಹಕ್ಕಿಲ್ಲ.
-ನಾನೆಲ್ಲೂ ಹೊಡೆದು ಬಡೆದು ಪಾಠ ಕಲಿಸುವ ಬಗ್ಗೆ ಪ್ರಸ್ತಾಪಿಸಿಲ್ಲ, ಸಮರ್ಥಿಸಿಲ್ಲ. ಬದಲಾಗಿ ಪ್ರಶ್ನಿಸಿದ್ದೇನೆ - "ಸಂಸ್ಕೃತಿಯ ಸಂರಕ್ಷಕರೆಂಬ ಪಡೆಯೊಂದು ಹಾಡು ಹಗಲಿನಲ್ಲೇ ಯುವತಿಯರ ಮೇಲೆ ಹಲ್ಲೆ ನಡೆಸಿತಲ್ಲಾ, ಇದು ಸಂಸ್ಕೃತಿಯೇ?... ಇನ್ನಾದರೂ ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನೀತಿಗೊಳಿಸುವ ಕಾರ್ಯಗಳು ನಿಲ್ಲಲಿ. ಗುಂಪೊಂದರ ಉದ್ದೇಶ ಮಾತ್ರ ಸರಿಯಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮಾರ್ಗವೂ ಸರಿಯಿರಬೇಕು."

ನೀವೇನು ಮಾಡುತ್ತಿದ್ದಿರಿ? ಅಮೇರಿಕಾದಲ್ಲಿ ಕುಳಿತು ನಿಮ್ಮ ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದಿರಾ? ಈ ಹೇಯವಾದ ಕೃತ್ಯವನ್ನು ಪ್ರತಿಭಟಿಸುವುದು ಕೇವಲ ಮಹಿಳೆಯರ ಕರ್ತವ್ಯವೇ? ಗಂಡಸರನ್ನೇಕೆ ನೀವು ಪ್ರಶ್ನಿಸುತ್ತಿಲ್ಲ?
- ಒಂದು ಘಟನೆ ನಡೆಯುವಾಗ, ಅದನ್ನು ವಿರೋಧಿಸುವವರು ಅಥವಾ ಸರಿಯಾದ ಪ್ರಜ್ಞೆಯುಳ್ಳವರು ಆ ಸ್ಥಳದಲ್ಲಿ ಇದ್ದರೆ, ಆ ದುರ್ಘಟನೆ ಸಂಭವಿಸುವುದೇ ಇಲ್ಲ. ನಾನು ಹೇಳಹೊರಟಿದ್ದೇನೆಂದರೆ, ಮಂಗಳೂರಿನ ಘಟನೆ ಆಗಿ ಹೋಗಿದೆ. ಅಂತೆಯೇ ಇನ್ನೂ ಗಂಭೀರವಾದ, ಕೀಳುಮಟ್ಟದ ಘಟನೆಗಳೂ ನಡೆದಿವೆ. ಆದರೆ ಮಂಗಳೂರಿನ ವಿಷಯದಲ್ಲಿ ತೋರಿಸಿದ ಆಸಕ್ತಿ, ಕಳಕಳಿ, ಸಾಮಾಜಿಕ ಜವಾಬ್ದಾರಿ, ನೈತಿಕತೆ, ಮಿಕ್ಕ ಎಷ್ಟು ಘಟನೆಗಳಿಗೆ ಸಿಕ್ಕಿದೆ? ಸಿಗುವ ಸಂಭವವಿದೆ?
- ಯುವತಿಯರ ಮೇಲಾದ ದೌರ್ಜನ್ಯವನ್ನು ಮಾತ್ರ ಪ್ರಶ್ನಿಸಿ, ಆ ಮೂಲಕ ಪಬ್ ಗೆ ಹೋಗಿ ಸ್ವಾತಂತ್ರ್ಯ ಪ್ರದರ್ಶನ ಮಾಡುವುದಕ್ಕೆ ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೀಸಲಿಟ್ಟ ಕಾರ್ಯಕರ್ತೆಯರೆನಿಸಿಕೊಂಡವರಿಗೆ ಆ ಪ್ರಶ್ನೆ.

ಅವರೇನು ಹೇಳಬೇಕಾಗಿತ್ತು? ಪುಂಡರಿಗೆ ಹೆದರಿಕೊಂಡು ಮನೆಯಲ್ಲಿ ಕಂಬಳಿ ಹೊದ್ದು ಮಲಗಿ ಎಂದು ಹೇಳಬೇಕಾಗಿತ್ತೆ? ಇಲ್ಲಾ ಅಮೆರಿಕಕ್ಕೆ ವಲಸೆ ಹೋಗಿ ಎಂದು ಹೇಳಬೇಕಾಗಿತ್ತೆ?
- ಏನೂ ಹೇಳದಿದ್ದರೂ ನಡೆಯುತ್ತಿತ್ತು. ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೂ, ಯುವ ಜನತೆಯನ್ನು ಪಬ್ ಬಾರ್ ಗಳಿಗೆ ಹೋಗಿ ಕುಡಿದು ಕುಣಿಯಿರಿ ಎಂದು ಹೇಳುವುದಕ್ಕೂ ವ್ಯತ್ಯಾಸ ಗುರುತಿಸಲಾಗದ ನಿಮಗೆ, ಸ್ವಾತಂತ್ರ್ಯದ ಕಲ್ಪನೆಯೇ ಸರಿಯಾಗಿ ತಿಳಿದಂತಿಲ್ಲ.

ಈ ಪ್ರಶ್ನೆಯನ್ನು ನೀವು ಬಾಯ್ ಫ್ರೆಂಡ್ಸ್ ಗಳನ್ನು ಕೇಳಬೇಕಲ್ಲವೆ? ಕೇವಲ ಯುವತಿಯರನ್ನು ಯಾಕೆ ಕೇಳುತ್ತೀರಿ?
- ಮತ್ತೊಮ್ಮೆ ವಾಕ್ಯವನ್ನು ಪೂರ್ಣವಾಗಿ ಓದಿ ’ನೀವು ನಂಬಿಕೊಂಡು ಬಂದಿದ್ದ ’ - ಆದ್ದರಿಂದ ಯುವತಿಯರನ್ನಷ್ಟೇ ಕೇಳಿದ್ದು. ಕುಂಬಳಕಾಯಿಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರೇಕೆ?

ನೀವೇ ನಿಮ್ಮ ಬರಹದಲ್ಲಿ ಇನ್ನೊಂದು ಕಡೆ ಹೆಂಗಸರ ದೈಹಿಕ ಸಾಮರ್ಥ್ಯದ ಬಗ್ಗೆ ಹೇಳಿದ್ದೀರ. ಆದರೂ ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ದ್ವೇಷದ ಕಾರಣದಿಂದ ಎಷ್ಟು ಅಸಡ್ಡೆ-ತುಂಬಿದ ಹಾಗೂ ಅಸಂಬದ್ಧವಾದ ಮಾತುಗಳನ್ನು ಬರೆದಿದ್ದೀರ!!
- "ದೈಹಿಕ ಸಾಮರ್ಥ್ಯದಲ್ಲಿ ನಿಮಗಿಂತ ಸ್ವಲ್ಪ ಕೆಳಸ್ತರದಲ್ಲಿದ್ದಾಳೆ", ಸ್ವಲ್ಪ ಕೆಳಸ್ತರವೆಂದಿದ್ದೇನೆಯೇ ಹೊರತು, ನಿಶ್ಯಕ್ತೆ ಎಂದು ಹೇಳಿಲ್ಲ. ನಾ ನೋಡಿದ ವೀಡಿಯೋದಲ್ಲಿ ಒಬ್ಬಳನ್ನು ಒಬ್ಬ ಹೊಡೆಯುತ್ತಿದ್ದ. ಮಿಕ್ಕವರೆಲ್ಲರೂ, (ಚಿತ್ರೀಕರಿಸುತ್ತಿದ್ದವನನ್ನೂ ಸೇರಿಸಿ) ನೋಡುತ್ತಿದ್ದರು. ಆಕೆ ಹೊಡೆಸಿಕೊಳ್ಳುತ್ತಿದ್ದಳು. ತಿರುಗಿ ಹೊಡೆಯಲಾರದಷ್ಟು ಅಶಕ್ತಳಾಗಿರಲಿಲ್ಲವೆಂದು ನನ್ನ ಅನಿಸಿಕೆಯಾಗಿತ್ತಷ್ಟೆ.

ನಿಮ್ಮ ಎಲ್ಲ ಮಾತುಗಳಲ್ಲೂ ನಾನು ಭಾರತದಲ್ಲಿಲ್ಲ ಎಂಬ ಕುಹಕವೇ ಕಾಣುತ್ತದೆ. ಅದನ್ನು ನಾನು ಹೇಗೂ ಅರ್ಥೈಸಬಹುದು. ನಿಮಗೆ ಬರಲಾಗಲಿಲ್ಲವೆಂಬ ಹೊಟ್ಟೆಯುರಿಯೆಂದೋ, ಅಥವಾ ನೀವೇ great ಎನ್ನುವ ನಿಮ್ಮ Ego. ಆದರೆ ಅದರಗತ್ಯ ನನಗಿಲ್ಲ. ಮೊದಲು ಒಬ್ಬ ವ್ಯಕ್ತಿಯ ಆಲೋಚನೆಗಳಿಗೆ ದೇಶ, ಭಾಷೆಯ ಮಿತಿಯನ್ನು ಹಾಕುವ ಈ ನಿಮ್ಮ ಸಂಕುಚಿತ ಮನೋಭಾವನೆಯಿಂದ ಹೊರಬನ್ನಿ.

ನಾನಿಂದು ಇಲ್ಲಿಗೆ ಬರಲು, ಆ ಸ್ತ್ರೀ ಸ್ವಾತಂತ್ರ್ಯದ ಹೋರಾಟವನ್ನೇ ಮಾಡಿ ಬಂದಿರುವುದು. ಆದರೆ ನನ್ನ ಹೋರಾಟ ನಿಮ್ಮ ಹಾಗೆ ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಕಡೆಗಿರಲಿಲ್ಲವಷ್ಟೆ. ಕೇವಲ high class society ಗಳ ಹೆಣ್ಣುಮಕ್ಕಳ ಪರ ಹೋರಾಟವನ್ನು ಮೀಸಲಿಟ್ಟಿರುವ ನಿಮ್ಮಂತವರಿಂದ ನಾನು, ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ, ಸೇವೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ. ಹಳ್ಳಿಯಿಂದ ನಗರದವರೆಗಿನ ನನ್ನ ಜೀವನದಲ್ಲಿ, ನೋಡಿದ್ದೇನೆ, ಕಲಿತಿದ್ದೇನೆ. ಗಂಡಸರು ಮಾಡುವ ಕೆಲಸವನ್ನು ಮಾಡುವುದೇ ಸಮಾನತೆ ಎಂದು ಹೇಳಿ, ಅದಕ್ಕಿರುವ ಅರ್ಥವನ್ನೂ ಹಾಳುಮಾಡಿ, ಕರ್ತವ್ಯಗಳ ಅರಿವಿಲ್ಲದೇ ಹಕ್ಕುಗಳ ಬಗ್ಗೆ ಮಾತನಾಡುವ ನೀವು ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಜವಾದ ಅರ್ಥದಲ್ಲಿ ಹೋಮ್ ವರ್ಕ್ ಮಾಡಿ.

ಸತ್ಯಾಸತ್ಯತೆಯನ್ನು ಅರಿವ ಪ್ರಯತ್ನವನ್ನೂ ಮಾಡದೆ, ಒಬ್ಬ ವ್ಯಕ್ತಿಯ ಬಗ್ಗೆ, ಆಲೋಚನೆಗಳ ಬಗ್ಗೆ, ಮಹಿಳಾ ಸ್ವಾತಂತ್ರ್ಯದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವ ನಿಮ್ಮಂತಹ ಅನಾಮಧೇಯರಿಂದ ನಿಜವಾಗಿ ತಲುಪಬೇಕಾದ ಮಹಿಳೆಯರಿಗೆ ತಲುಪುವ ಸ್ವಾತಂತ್ರ್ಯ ಅಷ್ಟರಲ್ಲೇ ಇದೆ. ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳದೆ ಅದನ್ನು ಸಂರಕ್ಷಿಸುತ್ತೇನೆಂಬುದು, ಸ್ವಾತಂತ್ರ್ಯದ ಬೆಲೆ ತಿಳಿಯದೆ ಅದನ್ನು ಎಲ್ಲೆಡೆಯೂ ಬಳಸುವುದು, ಕರ್ತವ್ಯ ನಿರ್ವಹಿಸದೆ ಹಕ್ಕುಗಳಿಗಾಗಿ ಹೋರಾಡುವುದು ಹಾಸ್ಯಾಸ್ಪದ, ತಿಳಿಗೇಡಿತನ ಹಾಗೂ ಬೇಜವಾಬ್ದಾರಿತನ. ನಿಮ್ಮಂತವರ ಅವಶ್ಯಕತೆಯೂ ಭಾರತಕ್ಕಿಲ್ಲ.

Anonymous said...

"ನಾನೆಲ್ಲೂ ಹೊಡೆದು ಬಡೆದು ಪಾಠ ಕಲಿಸುವ ಬಗ್ಗೆ ಪ್ರಸ್ತಾಪಿಸಿಲ್ಲ, ಸಮರ್ಥಿಸಿಲ್ಲ. ಬದಲಾಗಿ ಪ್ರಶ್ನಿಸಿದ್ದೇನೆ"

ಇಲ್ಲ, ಸಮರ್ಥಿಸಿಲ್ಲ. ಆದರೆ ನೀವು ಪ್ರಶ್ನಿಸಿರುವುದು ಸಂಸ್ಕೃತಿಯ ಆಧಾರದ ಮೇಲೆ. ಅಲ್ಲಿದ್ದ ಹುಡುಗಿಯರ ಸಂವಿಧಾನಾತ್ಮಕ ಹಕ್ಕುಗಳ ಆಧಾರದ ಮೇಲಲ್ಲ. ಸಂಸ್ಕೃತಿ ಬಗ್ಗೆ ಎಲ್ಲರಿಗೂ ಅವರದೇ ಆದ ನಂಬಿಕೆ ಕಲ್ಪನೆಗಳಿರುತ್ತವೆ. ಅದರ ಆಧಾರದ ಮೇಲೆ ಕೆಲವರ ಪ್ರಕಾರ ನೀವು ಹೊರಗೆ ಕೆಲಸ ಮಾಡುವುದೂ ತಪ್ಪಾಗುತ್ತದೆ. ಹಾಗೆಂದು ನೀವು ಮನೆಯಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೀರ? ಸಂವಿಧಾನ ಸಂಸ್ಕೃತಿಯಂತಲ್ಲ, ಅದು ನಿರ್ದಿಷ್ಟವಾದ ಬರಹದ ರೂಪದಲ್ಲಿದೆ. ಅದನ್ನು ಓದಿ, ಅದನ್ನು ಎತ್ತಿ ಹಿಡಿಯಬೇಕಾದದ್ದು ದೇಶದ ಜನರೆಲ್ಲರ ಕರ್ತವ್ಯ. ಭಾರತದ ಸಂವಿಧಾನದ ಪ್ರಕಾರ ಹುಡುಗಿಯರು ಪಬ್ ಗೆ ಹೋಗುವುದು ತಪ್ಪಲ್ಲ. ಹುಡುಗಿಯರನ್ನು ಪಬ್ ಗೆ ಹೋಗುವುದರಿಂದ ಬಲಾತ್ಕಾರವಾಗಿ ತಡೆಯುವುದು ತಪ್ಪು. ನಿಮ್ಮ ಅಮೆರಿಕನ್ ಸ್ನೇಹಿತರನ್ನು ಕೇಳಿ ಸಂವಿಧಾನದ significance ಏನೆಂದು ಅರ್ಥ ಮಾಡಿಕೊಳ್ಳಿ.


"ನಾನಿಂದು ಇಲ್ಲಿಗೆ ಬರಲು, ಆ ಸ್ತ್ರೀ ಸ್ವಾತಂತ್ರ್ಯದ ಹೋರಾಟವನ್ನೇ ಮಾಡಿ ಬಂದಿರುವುದು."

ಇರಬಹುದು, ಆದರೆ ಹೋರಾಟವನ್ನು ನೀವು ಮುಂದುವರಿಸಿಲ್ಲ. ನೀವು ಹಗುರವಾಗಿ ಮಾತಾಡುವ ಮಹಿಳಾ ಸಂಘದ ಕಾರ್ಯಕರ್ತರು ಜೀವನವಿಡೀ ಇತರ ಮಹಿಳೆಯರಿಗಾಗಿ ದುಡಿಯುತ್ತಾರೆ.


"ಆದರೆ ನನ್ನ ಹೋರಾಟ ನಿಮ್ಮ ಹಾಗೆ ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಕಡೆಗಿರಲಿಲ್ಲವಷ್ಟೆ."

ಪಬ್ ಗಳಿಗೆ ಹೋಗುವುದೇ ಹೋರಾಟವಲ್ಲ. ಪಬ್ ಗೆ ಹೋಗುವ ಜನ ಅಲ್ಲಿಗೆ ಹೋಗಲು ಕಾರಣ ಅಲ್ಲಿಗೆ ಹೋಗಲು ಅವರಿಗೆ ಇಷ್ಟ, ಅಷ್ಟೇ. ನಿಮ್ಮನ್ನು ಯಾರೂ ಪಬ್ಬಿಗೆ ಹೋಗಿ ಎಂದು ಹೇಳುತ್ತಿಲ್ಲ. ಹಾಗೆಯೇ ಪಬ್ಬಿಗೆ ಹೋಗುವವರ ತಂಟೆ ನೀವು ನಿಮ್ಮ ರಾಮಸೇನೆಯವರು ಹೋಗಬೇಕಾಗಿಲ್ಲ."ಕೇವಲ high class society ಗಳ ಹೆಣ್ಣುಮಕ್ಕಳ ಪರ ಹೋರಾಟವನ್ನು ಮೀಸಲಿಟ್ಟಿರುವ ನಿಮ್ಮಂತವರಿಂದ ನಾನು, ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ, ಸೇವೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ."

ಅಗತ್ಯ ಇದೆ. ಯಾಕೆಂದರೆ, ಪಬ್ಬಿಗೆ ಹೋಗುವವರು high society ಎಂಬುದು ನಿಮ್ಮ ತಪ್ಪು ಕಲ್ಪನೆ. ಇಷ್ಟಾಗಿಯೂ high society ಯ ಹೆಂಗಸರ ಪರವಾಗಿ ಹೋರಾಡುವುದರಲ್ಲಿ ತಪ್ಪೇನಿದೆ? ಇವತ್ತು ಪಬ್ ದಾಳಿಯ ವಿರುದ್ಧ ಹೋರಾಡುತ್ತಿರುವ ಮಹಿಳೆಯರು, ಮಹಿಳಾ ಸಂಘಗಳು ಹಾಗು ಹಲವಾರು ಗಂಡಸರು high society ಗೆ ಸೇರಿಲ್ಲದ ಹೆಂಗಸರ ಪರವಾಗಿಯೂ ಹೋರಾಡಿದ್ದಾರೆ.


"ಗಂಡಸರು ಮಾಡುವ ಕೆಲಸವನ್ನು ಮಾಡುವುದೇ ಸಮಾನತೆ ಎಂದು ಹೇಳಿ, ಅದಕ್ಕಿರುವ ಅರ್ಥವನ್ನೂ ಹಾಳುಮಾಡಿ, ಕರ್ತವ್ಯಗಳ ಅರಿವಿಲ್ಲದೇ ಹಕ್ಕುಗಳ ಬಗ್ಗೆ ಮಾತನಾಡುವ ನೀವು ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ."

ಇನ್ನೊಂದು ಬಾಲಿಶವಾದ ಕಲ್ಪನೆ! ಪಬ್ಬಿಗೆ ಹೋಗುವ ಹುಡುಗಿಯರು ಅಲ್ಲಿಗೆ ಹೋಗುವುದು ಗಂಡಸರೊಂದಿಗೆ ಸಮಾನತೆಯನ್ನು ಸಾಧಿಸಲಿಕ್ಕಲ್ಲ! ಪಬ್ಬಿಗೆ ಹೋಗಲು ಅವರಿಗಿಷ್ಟ ಅದಕ್ಕೆ! "ಬಾಯ್ ಫ್ರೆಂಡ್ಸ್" ಗಳನ್ನು ನಂಬಿಕೊಂಡು ಪಬ್ ಗೆ ಹೋಗುವುದಿಲ್ಲ, ಅವರಾಗಿಯೇ, ಅವರ ಆಯ್ಕೆಯಂತೆ ಹೋಗುತ್ತಾರೆ.


"ನಾನು ಹೇಳಹೊರಟಿದ್ದೇನೆಂದರೆ, ಮಂಗಳೂರಿನ ಘಟನೆ ಆಗಿ ಹೋಗಿದೆ."

ಇಲ್ಲ, ಆಗಿಹೋಗಿಲ್ಲ. ಮತ್ತೆ ಮತ್ತೆ ನಡೆಯುವ ಸಾಧ್ಯತೆ ಇದೆ. ಈ ಸಾಧ್ಯತೆಯನ್ನು ತಡೆಯಲೆಂದೇ ಹೋರಾಟಗಳನ್ನು ನಡೆಸುತ್ತಿರುವುದು.


"ಅಂತೆಯೇ ಇನ್ನೂ ಗಂಭೀರವಾದ, ಕೀಳುಮಟ್ಟದ ಘಟನೆಗಳೂ ನಡೆದಿವೆ. ಆದರೆ ಮಂಗಳೂರಿನ ವಿಷಯದಲ್ಲಿ ತೋರಿಸಿದ ಆಸಕ್ತಿ, ಕಳಕಳಿ, ಸಾಮಾಜಿಕ ಜವಾಬ್ದಾರಿ, ನೈತಿಕತೆ, ಮಿಕ್ಕ ಎಷ್ಟು ಘಟನೆಗಳಿಗೆ ಸಿಕ್ಕಿದೆ? ಸಿಗುವ ಸಂಭವವಿದೆ?"

ಇನ್ನೂ ಗಂಭೀರವಾದ ಘಟನೆಗಳು ನಡೆದಿವೆ ಎಂದ ಮಾತ್ರಕ್ಕೆ ಈ ಘಟನೆಯನ್ನು ಸಣ್ಣ ವಿಷಯವೆಂದು ಮರೆತುಬಿಡಲು ಸಾಧ್ಯವಿಲ್ಲ. ಬೇರೆ ಘಟನೆಗಳ ಬಗ್ಗೆ ಜನರ ಗಮನ ಸೆಳೆದು, ಹೋರಾಡುವುದರಿಂದ ನಿಮ್ಮನ್ನು ಯಾರೂ ತಡೆಯುತ್ತಿಲ್ಲ.

ವಿನುತ said...

ಸಂವಿಧಾನವನ್ನು ಎತ್ತಿ ಹಿಡಿಯಬೇಕಾದದ್ದು ಹೇಗೆ ದೇಶದ ಜನರ ಕರ್ತವ್ಯವೋ, ಹಾಗೆಯೇ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೂ ಅಷ್ಟೇ ದೊಡ್ಡ ಜವಾಬ್ದಾರಿ. ಸಂವಿಧಾನ ನಮಗೆ ಕೇವಲ ಹಕ್ಕುಗಳನ್ನು ನೀಡಿಲ್ಲ. ಕರ್ತವ್ಯಗಳನ್ನೂ ನೀಡಿದೆ. ಸಾಮಾಜಿಕ ಜವಾಬ್ದಾರಿಗಳನ್ನು ವಹಿಸಿದೆ. ಇಂತದೊಂದು significance ಅರಿಯಲು ಅಮೆರಿಕನ್ ಸ್ನೇಹಿತರ ಅವಶ್ಯಕತೆಯಿಲ್ಲ. ಅರಿತುಕೊಳ್ಳುವ ಮನಸ್ಸಿಲ್ಲದ ನೀವು, ಯಾರ ಸಹಾಯದಿಂದಲೂ ಅರಿಯಲಾರಿರಿ. ಮಲಗಿರುವವರನ್ನು ಎಬ್ಬಿಸಬಹುದು. ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಅಸಾಧ್ಯ.

ನಾನು ಹಗುರವಾಗಿ ಮಾತನಾಡಿದ್ದು, ಇತರರಿಗಾಗಿ ಶ್ರಮಿಸುವ ನಿಜವಾದ ಕಾರ್ಯಕರ್ತರ ಬಗ್ಗೆಯಲ್ಲ. ಯಾಕೆಂದರೆ ಅವರ ಪರಿಶ್ರಮ, ಅವರನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಗಂಡಸರು ಕುಡಿಯುತ್ತಾರೆಂದು ನಾವೂ ಕುಡಿಯುತ್ತೇವೆಂದು ಹೊರಟಿರುವ, ಬೇಜವಬ್ದಾರಿ ಹೇಳಿಕೆಗಳನ್ನು ಕೊಡುತ್ತಿರುವ, ಕೇವಲ ಶ್ರೀಮಂತರಿಗೆ ಅನ್ಯಾಯವಾಗಿದೆಯೆಂದೆನಿಸಿದಾಗ ಮಾತ್ರ ಆರ್ಭಟಿಸಿ, ಮಹಿಳಾ ಸ್ವಾತಂತ್ರ್ಯವನ್ನು ಪಬ್, ಬಾರ್ ಗಳತ್ತ ಕೊಂಡೊಯ್ಯುತಿರುವ ಬೂಟಾಟಿಕೆ ಕಾರ್ಯಕರ್ತರ ಬಗ್ಗೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅವಶ್ಯಕತೆಯೇನಿದೆ?

ಪಬ್ ಗಳಿಗೆ ಹೋಗುವುದು ಆಧುನಿಕತೆ, ಸ್ವಾತಂತ್ರ್ಯ ಎಂಬ ಭ್ರಮೆಯಲ್ಲಿ, ಅಮೂಲ್ಯವಾದ ದುಡ್ಡಿನ ಹಾಗೂ ಸಮಯದ ಪರಿವೆಯಿಲ್ಲದೆ, ಪ್ರಜ್ಞೆಕಳೆದುಕೊಳ್ಳುವವರ ಬಗ್ಗೆ ನನ್ನ ಕಲ್ಪನೆ ಬಾಲಿಶವಾಗಿದ್ದಲ್ಲಿ, ಹಾಗೆಯೇ ಸರಿ. ಆದರೆ ವಾಸ್ತವಿಕತೆ ನಿಮ್ಮಷ್ಟು ಬಾಲಿಶವಾಗಿಲ್ಲ. ಒಮ್ಮೆ ಆ ಪಬ್ ಬಾರ್ ಗಳಿಂದ ಹೊರಬಂದು, ಬ್ರಿಗೇಡ್ ರಸ್ತೆ, ಎ೦.ಜಿ ರಸ್ತೆಗಳಿಂದಾಚೆ ಬಂದು ಜಗತ್ತನ್ನು ನೋಡಿ. ಕಲ್ಪನೆಗೂ ವಾಸ್ತವಿಕತೆಗೂ ವ್ಯತ್ಯಾಸ ತಿಳಿಯುತ್ತದೆ. ಕೇವಲ ವಿರೋಧಿಸುವುದಕ್ಕಾಗಿಯೇ ವಿರೋಧಿಸಬೇಡಿ.

ರೇಣುಕಾ ಚೌಧರಿ ನಿಮ್ಮ ನಾಯಕಿಯಾಗಿರಬಹುದು. ಪಬ್ ಭರೋ ನಿಮ್ಮ ಚಳುವಳಿಯಾಗಿರಬಹುದು. ಆದರೆ ರಾಮಸೇನೆಗೂ, ನನಗೂ ಯಾವ ಸಂಬಂಧವಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ವೈಯಕ್ತಿಕ ಆರೋಪಗಳನ್ನು ಮಾಡುವಾಗ ಇರಬೇಕಾದ ಸಭ್ಯತೆಯನ್ನರಿಯಿರಿ.

ಒಂದು ನಿರ್ದಿಷ್ಟ ಗುರಿಯಿಲ್ಲದ, ಉದ್ದೇಶರಹಿತ, ಅವಶ್ಯಕತೆಯಿಲ್ಲದ ಹೋರಾಟಗಳನ್ನೇ ತಡೆಯಲು ಸಾಧ್ಯವಾಗದಿರುವಾಗ, ಉತ್ತಮ ಉದ್ದೇಶಗಳ, ಆರೋಗ್ಯಕರ ಸಮಾಜ ನಿರ್ಮಾಣದ ಹೋರಾಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ವಿನುತ said...

ಸುನಿಲ್, ರಾಜೀವ್,

ಧನ್ಯವಾದಗಳು.

ಚಿಂತನಾರ್ಹ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದೀರಿ. ಗಂಡ-ಹೆಂಡತಿಯರ ನಡುವಿನ, ಸಹುದ್ಯೋಗಿಗಳೊಡನೆ, ಅಕ್ಕ-ತಂಗಿಯರೊಡನೆ, ಅಣ್ಣ-ತಮ್ಮಂದಿರೊಡಗಿನ ನಮ್ಮ ನಡವಳಿಕೆಗಳು, ಆಲೋಚನೆಗಳನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ, ಕೊರತೆಯನ್ನು ತುಂಬಿಕೊಂಡರೆ, ಬದಲಾವಣೆ ನಮ್ಮಿಂದಲೇ ಶುರುವಾಗಬಹುದೆಂದುಕೊಳ್ಳುತ್ತೇನೆ.

ravihara said...

ಬಹಳ ಒಳ್ಳೆಯ ವಿಚಾರಧಾರೆಯನ್ನು ಮೂಡಿಸಿದ್ದೀರಿ... ಧನ್ಯವಾದಗಳು. ಎಲ್ಲರೂ ಇಂತಹ ಚಿಂತನೆಯಲ್ಲಿ ತೊಡಗಿ, ಆಗಬೇಕಿರುವ ಸಾಮಾಜಿಕ ಮಾರ್ಪಾಡುಗಳೆಡೆಗೆ ಹೆಜ್ಜೆಯನ್ನಿಡಬೇಕಿದೆ.

- ರವಿ

ವಿನುತ said...

ಸಹಮತಕ್ಕೆ ಧನ್ಯವಾದಗಳು ರವಿಯವರೇ...