"ಶರಣ್ರೀ... ಏನ್ರೀ ಭಾಳ ಬಿಜಿ ಇರಂಗದ. ಕಾಣಂಗೇ ಇಲ್ವಲ್ಲಪ್ಪ ಮಂದಿ!"
"ಹಂಗೇನಿಲ್ರೀ... ಹಿಂಗೇ ನಡೀಲಿಕ್ಹತ್ತದ. ನೀವೇ ಭಾಳ ಬಿಜಿ ಇದ್ದೀರಿ ಕಾಣ್ತದ. ಮುಂಜಾನಿನೂ ಕಾಣಂಗಿಲ್ಲ, ಸಂಜಿಮುಂದೂ ಕಾಣಂಗಿಲ್ಲ. ರೂಮ್ ಏನಾರ ಬದ್ಲಿ ಮಾಡೀರೇನ್ ಮತ್ತ?""ಇಲ್ರೀ, ಊರ್ಕಡೀಗೆ ಹೋಗಿದ್ನಾ.."
"ಮನ್ಯಾಗ ಎಲ್ರೂ ಆರಾಮಿದಾರಲ್ರೀ ಮತ್ತ? ಇಲ್ಲಾ... ಹೋಳ್ಗೀ ಊಟ ಏನಾದ್ರೂ ಹಾಕಸ್ತೀರೇನಪ್ಪ ಮತ್ತ?""ಅದನ್ನೇನ್ ಕೇಳ್ತೀರಿ.. ಭಾರಿ ದೊಡ್ಡ್ ಕಥಿನ ಅದ ಅದು. ನಿಮ್ ಪುಸ್ತಕಾನ ಚೀಲಕ್ಹಾಕಿ ಕುಂದರ್ರೀ ಮೊದ್ಲು. ನಾ ಹೇಳ್ತೀನಂತ.."
"ಶುರು ಹಚ್ಕೊಳ್ರೀ ನಿಮ್ ಕತಿನ.. ಮಳಿ ಬಂದ್ ನಿಂತದ. ಕಡೀಮಿ ಅಂದ್ರೂ ಎರಡೂವರಿ ತಾಸಾಗ್ತದ ಮನಿ ಮುಟ್ಲಿಕ್ಕ""ಬೇಸ್ತ್ವಾರ ಮನಿಗೆ ಫೋನ್ ಹಚ್ಚಿದ್ನಾ ನಮ್ಮಾವಾರು ಫೋನ್ ತಕ್ಕೊಂಡ್ರೀ.. ಎರಡ್ ದಿನ ಸೂಟಿ ತಗೊಂಡ್ ಬಾರ್ಪಾ ಊರಿಗೆ, ಹಿಂಗೆ ಕೆಲ್ಸದ ಅಂದ್ರೀ.. ನಂಗೂ ಈ ಕೆಲ್ಸಬೊಗ್ಸಿ, ಆ ಬಾಸು ಎಲ್ಲ ಸಾಕಾಗಿತ್ತಾ, ಸಿಕ್ ಲೀವ್ ಬೇರೆ ಬೇನಾಮಿ ಬಿದ್ದಿದ್ವಲ್ರೀ, ಅವ್ನೇ ಪ್ಲಾನ್ ಮಾಡ್ಕೊಂಡು ಹೊರೆಟ್ನಾ.."
"ಖರೇನ ನಿಮ್ಗ ಮೈಯಾಗ ಆರಾಮಿಲ್ಲ ಅನ್ಕೊಂಡಿದ್ನಲ್ರೀ ನಾ!""ಹ ಹ.. ಮುಂದೇನಾತು ಕೇಳ್ರಲ.. ಊರಿಗ್ ಹೋದ್ನಾ, ಮಾವಾರು ಹುಡುಗಿ ನೋಡ್ಲಿಕ್ಕೆ ಹೋಗೋದದ ಹೊರಡ್ನೀ ಅಂದ್ರೀ.. ಅಲ್ರೀ ಮಾವಾರೆ, ಮೊದ್ಲಿಗೆ ಹುಡುಗಿ ಫೋಟೊ ಗೀಟೋ ತೋರ್ಸ್ಬೇಕಲ್ರೀ ನೀವು, ಹಿಂಗೇ ನಿಂತ್ನಿಲುವ್ನಾಗೆ ಹೊರ್ಡು ಅಂದ್ರೆ ಹೆಂಗ್ರೀ? ಅಂದ್ನಾ. ಇಲ್ಲೋ ಮಾರಾಯ, ಭಾಳ ನಾಚಿಕಿ ಸ್ವಭಾವ ಐತಿ ಹುಡ್ಗೀದು. ಅಕಿದು ಪಟಗಿಟ ಏನೂ ಇಲ್ಲಂತ. ನಾನೆಲ್ಲ ನೋಡೀನಿ. ಛಲೋ ಮಂದಿ. ಹುಡ್ಗಿನೋ ಭಾಳ ಚಂದ ಅದಾಳ. ನೀನೇ ನೋಡ್ತೀಯಂತಲ ನಡಿ.. ಅಂದ್ರೀ. ಸರಿ ಅಂತಂದು ಹೊರಟ್ನಾ.."
"ಹ್ಮ್ಮ್.. ""ನಾನು, ನಮ್ಮವ್ವ, ಅಪ್ಪಾರು, ಚಿಕ್ಕಕ್ಕ, ಮಾವಾರು ಹೋಗಿದ್ವಿ. ಹುಡ್ಗಿ ಕರ್ಕೊಂಡು ಬಂದ್ರೀ. ನನಿಗೆ ಕೈ ಕಾಲು ನಡುಗ್ಲಿಕ್ಕೇ ಹತ್ತಿದ್ವು ರೀ.. ಒಮ್ಮಿಗೇ ಛಳಿಜ್ವರ ಬಂದಂಗಾತು ನೋಡ್ರೀ.."
"ಯಾಕ್ರೀs?!!!""ಅಲ್ರೀ, ಏನ್ ಛಂದ ಇದ್ಲಂತೀರ್ರೀ ಹುಡ್ಗಿ!! ಕೈತೊಳ್ಕೊಂಡು ಮುಟ್ಬೇಕ್ರೀ.."
"ಏನ್ರೀ ನೀವೂ ಈ ಮಟ್ಟಿಗೆ ಹಾಸ್ಯ ಮಾಡೋಂಗಿದ್ಲೇನ್ರೀ ಹುಡುಗಿ??!!""ಅಯ್ಯೋ ಶಿವ್ನೇ! ಹಂಗ್ಯಾಕಂತೀರ್ರೀ? ಖರೇನೇ ಭಾಳ ಛಂದಿದ್ಲ್ ರೀ ಹುಡ್ಗಿ. ಬೆಳ್ಳಗೆ ಭಾರೀ ಲಕ್ಷಣ ಇದ್ಲ್ ರೀ! ಒಳ್ಳೇ ಪ್ರೀತಿ ಝಿಂಟಾ ಇದ್ದಂಗಿದ್ಲು ರೀ. ನಕ್ರೆ ಹಂಗೇ ಡಿಂಪಲ್ ಬೀಳ್ತಿದ್ವು ರೀ. ನಾ ನೋಡಿದ್ರ ಹಿಂಗದೀನಿ. ಭದ್ರಾವತಿ ಚಿನ್ನ. ನಾನೇನು ಅಕೀನ ಒಪ್ಪದು, ಇನ್ನೂ ಅಕೀನ ನನ್ನ ಒಪ್ಪಿದ್ರ ಭೇಷಾತು ಅಂದ್ಕೊಂಡೆ ನಾ.."
"ಮುಂದೇನಾತ್ರೀ?""ಸರಿ ಅಂತಂದು, ಮನಿಗೆ ಬಂದ್ವಿ. ನಮ್ಮ ಅವ್ವಾರಿಗೆ ಹೇಳಿ ಕಳಿಸಿದ್ರೀ ಅವ್ರು. ಅವ್ವ, ಮಾವಾರು ಹೋದ್ರೀ. ಅವ್ವಾರನ್ನ ಒಳಕರ್ದು ಹುಡ್ಗಿ ಕುತ್ಗಿ ಹತ್ರ ಒಂದು ಸಣ್ ಬಿಳಿ ರಂಗಿಂದು ಕಲೆ ತೋರ್ಸಿ, ದೊಡ್ಡಾಕ್ಟ್ರಿಗೆ ತೋರ್ಸೇವ್ರೀ, ತೊನ್ನಿರ್ಬಹುದು ಅಂದಾರ ಅಂದ್ರಂತ್ರೀ.."
".........................""ಭಾಳ ಬೇಸ್ರಾಕತ್ರೀ. ಹಿಂಗಾಗ್ಬಾರ್ದಿತ್ತಲ್ರೀ. ಅಲ್ಲ ಆಟೊಂದು ಛಂದ ಇದ್ಳ್ ರೀ ಹುಡ್ಗಿ.. ಅಕೀಗೆ ಹಿಂಗಂದ್ರ..."
"..........................""ಏನ್ರೀ ಸೈಲೆಂಟ್ ಆಗ್ಬಿಟ್ರಲ್ರೀ, ಏನಾರ ಮಾತಾಡ್ರೀ.."
"..ಹಿಂಗ ಏನೋ... ಆಮೇಲೇನಾತ್ರೀ?""ಇಲ್ರೀ, ಅದು, ಅದೇನೋ ಅಂತಾರಲ್ರೀ.. ಹಾ.. ವಂಶಪಾರಂಪರಿಕ.. ಹಂಗಂತ್ರೀ ಅದು. ಮನ್ಯಾಗ ಯಾರೂ ಒಪ್ಲಿಲ್ಲ"
"ಖಾತ್ರಿ ಐತೇನ್ರೀ ನಿಮಗ? ಅದು ಖರೇನ ಹೆರೆಡಿಟ್ರಿ ಅಂತ? ಎಲ್ಲೋ ಓದಿದ್ನಾ ಹಂಗಲ್ಲ ಅಂತ..""ಇಲ್ರೀ ಅದು ಹಂಗ ಅಂತ.."
"ಅವ್ರ ಮನ್ಯಾಗೆ ಬೇರೆ ಯಾರಿಗಾದ್ರೂ ಐತೇನ್ರೀ ಇಲ್ಲಾ ಇತ್ತಂತೇನ್ರೀ?""ನನಿಗೆ ತಿಳ್ದಂಗ ಯಾರಿಗೂ ಇಲ್ರೀ.."
"ಮತ್ತಕೀಗ ಹೆಂಗ್ಬಂತಂತ್ರೀ?!""ನಂಗೊತ್ತಿಲ್ರೀ. ಹಂಗೂ ಅಕ್ಕ ಕೇಳಿದ್ಲ್ರೀ.. ಹೆಂಗಪ ನೀನೇನಂತಿ ಅಂತ.. ನಾನೇನನ ಹ್ಞೂ ಅಂದ್ರ ಅವ್ವ ಪೊರಿಕಿ ತಗಂಡ್ ಸಾಯೋ ತನ ಹೊಡೀತಾಳ..ಅಕಿ ಒಪ್ಪಂಗಿಲ್ತಗಿ ಅಂದ್ನಾ.."
"ಮದ್ವೀ ಮೊದ್ಲೇ ನಿಮ್ಮನ್ನ ಕರ್ಸಿ ಹೇಳಿದ್ದು ಛಲೋ ಆತ್ನೋಡ್ರಿ.. ಭಾಳ ಒಳ್ಳೆ ಮಂದಿ ಅದಾರ.. ಇಲ್ಲಾಂದ್ರ ಅದೇನೋ ಗಾದೆ ಹೇಳ್ತಾರಲ್ರೀ.. ಸಾವ್ರ ಸುಳ್ಹೇಳಿ ಒಂದ್ಮದ್ವಿ ಮಾಡು ಅಂತ, ಹಂಗೇನಾದ್ರು ಆಗಿದ್ರೆ ಏನ್ ಕತಿರೀ?""ಇಲ್ರೀ, ಅವ್ರು ಹೇಳ್ಳಿಕ್ಕೇ ಬೇಕಿತ್ರೀ. ಯಾವಾಗ ಗೊತ್ತಾದ್ರೂ ಹುಡ್ಗಿಗಾನ ರೀ ಕಷ್ಟ. ಒಂದಪ ಮದ್ವಿ ಆದ್ಮೇಲೆ ಗೊತ್ತಾತು ಅಂತಿಟ್ಕೋರ್ರೀ.... ಆಮೇಲಾದ್ರೂ ಅಕಿ ಸುಖ್ನಾಗಿ ಇರ್ತಾಳಂತ ಏನ್ಖಾತ್ರಿ ಇದರೀ ನಿಮಗ? ಕಟ್ಕೊಂಡವ ಬಿಟ್ರೇನ್ಮಾಡ್ತಿದ್ರೀ? ಅವ್ರು ಹೇಳ್ಳೇ ಬೇಕು.. ಹಂಗದ ಸಂದರ್ಭ. ಕಷ್ಟದ ರೀ ಹೆಣ್ಮಕ್ಳ ಜೀವನ.."
"..............................."[ಯೌವನದ ಉನ್ಮಾದದಲ್ಲಿ ಸಂತೋಷವನ್ನು ತನ್ನದೇ ರೀತಿಯಲ್ಲಿ ಅನುಭವಿಸಿ, ವಾಸಿಯಾಗಲಾರದ ಖಾಯಿಲೆಯನ್ನು ಅಂಟಿಸಿಕೊಂಡು, ಅದನ್ನು ಮುಚ್ಚಿಟ್ಟು ಮದುವೆಯಾಗಿ, ತನ್ನ ಪತ್ನಿಗೂ ರೋಗವನ್ನು ಧಾರೆಯೆರೆದಿದ್ದವನು................ತನ್ನ ಕೆಲಸದ ಬಗ್ಗೆ ಸುಳ್ಳುಮಾಹಿತಿ ನೀಡಿ ಮದುವೆ ಮಾಡಿಕೊಂಡು ಬಂದು, ಈಗ ತನ್ನ ಹೆಂಡತಿಯ ದುಡಿಮೆಯಲ್ಲಿ ಜೀವಿಸುತ್ತಿರುವುದಲ್ಲದೆ, ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾ, ಮನೆಯವರಿಂದ ದೂರವಿಟ್ಟಿರುವ ಇನ್ನೊಬ್ಬ....... ಕಣ್ಣಾರೆ ಕಂಡಿದ್ದ ಈ ಮಹಾತ್ಮರ ಪತ್ನಿಯರು ಹಾಗೇ ಕಣ್ಮುಂದೆ ಮತ್ತೊಮ್ಮೆ ಹಾದು ಹೋಗುತ್ತಿದ್ದರು......]
"ಮತ್ತೆ ಸೈಲೆಂಟಾದ್ರಲ್ರೀ.. ಏನ್ ಯೋಚ್ನೆ ಮಾಡ್ಲಿಕ್ಹತ್ತೀರಿ?""ಏನಿಲ್ರೀ.. ನೀವು ಹೇಳ್ರಲ.."
"ನನ್ನ ದೋಸ್ತ್ ಒಬ್ನದಾನ್ರೀ. ಇದೇ ಪ್ರಾಬ್ಲಮ್ ರೀ. ಹುಡ್ಗಿನ ಎಲ್ರೂ ಒಪ್ಪಿದಾರ್ರೀ. ಮಾತುಕತಿ ಎಲ್ಲ ನಡದದ. ಆದ್ರ ಆಕಿ ಇವ್ನ ಜೋಡಿ ಮಾತ್ರ ಹೇಳ್ಯಾಳಂತ ಹಿಂಗ ಕಾಯಿಲೆ ಅಂತಂದು. ಅವ ನಂಗೇನೂ ಪ್ರಾಬ್ಲಮ್ ಇಲ್ಲ. ಮನ್ಯಾಗ್ ಕೇಳ್ಹೇಳ್ತೀನಿ ಅಂದಾನಂತ್ರೀ. ಮನ್ಯಾಗ್ ಅದೆಂಗ್ ಹೇಳ್ತಾನೋ! ಹೇಳಿದ್ರ ಖರೇನ ಮದ್ವಿ ಮುರಿದ್ ಬೀಳ್ತದ.."[ಅಲ್ವ! ನೆನ್ನೆ ಮೊನ್ನೆ ಬಂದ ಹುಡುಗಿಗಾಗಿ ಮನೆಯವರ ವಿರೋಧ ಕಟ್ಟಿಕೊಳ್ಳಬೇಕೆ? ಇಷ್ಟು ವರ್ಷ ಸಾಕಿ ಬೆಳೆಸಿದ ತಂದೆತಾಯಿಯರ ಮನಸ್ಸಿಗೆ ನೋವುಂಟು ಮಾಡಬೇಕೆ? ಮನೆಯ ನೆಮ್ಮದಿ ಕದಡಬೇಕೆ? ಮದುವೆ ಅಂದ್ರೆ ಇವರಿಬ್ಬರೇ ಅಲ್ಲ, ಎರಡು ಕುಟುಂಬಗಳ ನಡುವಿನ ಸಂಬಂಧ. ಎಲ್ಲರೂ ಒಪ್ಪಿ ಆದ್ರೆ ಸರಿ. ಅದು ಬಿಟ್ಟು ಹುಡುಗನಿಂದ ಮಾತ್ರ ಈ ತ್ಯಾಗದ ನಿರೀಕ್ಷೆ ಎಷ್ಟು ಸರಿ? ಅನುವಂಶಿಕವಾದ ಕಾಯಿಲೆ ಅಂತ ಮನದ ಮೂಲೆಯಲ್ಲೆಲ್ಲೋ ಭಯ ಇದ್ದೇ ಇರತ್ತೆ. ಜನರ ಕೊಂಕಿನಿಂದಲೂ ತಪ್ಪಿಸಿಕೊಳ್ಳಲಾರ.. ಹೆತ್ತತಾಯಿಗಿಂತ ನೆನ್ನೆ ಮೊನ್ನೆ ನೋಡಿದವಳು ಹೆಚ್ಚಾದಳು.. ಇತ್ಯಾದಿ..]
"ಕಷ್ಟ ಐತ್ರೀ ಹುಡುಗ್ರ ಜೀವ್ನ....""ಹೂನ್ರಿ.. ಎಲ್ಲ ಭಾರಿ ಕಾಂಪ್ಲಿಕೇಟೆಡ್ ಅನ್ನಿಸ್ಲಿಕ್ಹತ್ತದ. ಏನೇ ಆಗ್ಲಿ ರೀ ಆ ಹುಡುಗೀನ ಮಾತ್ರ ನಾ ನನ್ ಲೈಫ್ನಾಗೇ ಮರೆಯಂಗಿಲ್ಲ ಬಿಡ್ರೀ. ನಾ ಬೇರೆ ಮದ್ವಿ ಆದ್ರೂ ಅಕಿ ಮಾತ್ರ ನೆನಪಿದ್ದೇ ಇರ್ತಾಳ್ರೀ.."
"......................................."[ಸುಧಾಮೂರ್ತಿಯವರ "ಮಹಾಶ್ವೇತ" ನೆನಪಾಗುತಿತ್ತು. ಹೆಸರಿಗೆ ತಕ್ಕಂತೆ ಅನುಪಮ ಸುಂದರಿಯಾದ "ಅನುಪಮಾ" ಕಾದಂಬರಿಯ ನಾಯಕಿ. ಬಡ ಸ್ಕೂಲ್ ಮಾಸ್ತರ್ ಶಾಮಣ್ಣನ ಮೊದಲನೇ ಹೆಂಡತಿ ಮಗಳು. ಮಹಾಚತುರೆ. ಈಕೆಯ ಸೌಂದರ್ಯಕ್ಕೆ ಮಾರುಹೋದ ಪುಂಡರೀಕ ವೈದ್ಯನಾದ ಆನಂದ. ಮಹಾನ್ ಶ್ರೀಮಂತ, ಅಷ್ಟೇ ರೂಪವಂತ. ಮದುವೆಯ ನಂತರ ಕಾಣಿಸಿಕೊಳ್ಳುವ ಸಣ್ಣ ಬಿಳಿಯ ಕಲೆಯೊಂದು "ಮಹಾಶ್ವೇತ"ವಾಗಿ ಅನುಪಮಳಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ರೋಗವ ಮುಚ್ಚಿಟ್ಟು ಮದುವೆಯಾದಳು ಎನ್ನುವ ಆರೋಪ ತೂಗುಗತ್ತಿಯಂತೆ ಕಾಡುತ್ತಿರುವಾಗ, ಆಕೆ ಮೋಸ ಮಾಡಿಲ್ಲ ಎನ್ನುವುದಕ್ಕೆ ಇದ್ದ ಒಬ್ಬನೇ ಸಾಕ್ಷಿಯಾದ ಆಕೆಯ ಗಂಡನೂ ಮೌನಕ್ಕೆ ಶರಣಾಗುತ್ತಾನೆ. ವೈದ್ಯನಾಗಿ leukoderma ಕೇವಲ ಒಂದು cosmetic disease, ಅಲಂಕಾರಿಕ ಕಾಯಿಲೆ ಎಂದು ತಿಳಿದವನೇ ಕೈಬಿಟ್ಟ ಮೇಲೆ, ಬಡತನದಲ್ಲಿ ಬೇಯುತ್ತಿರುವ ತವರಿನಲ್ಲೂ ಆಸರೆ ಸಿಗದೆ, ಗಂಡನ ಇನ್ನೊಂದು ಮದುವೆ ತಯಾರಿಯ ಸುದ್ದಿ ತಿಳಿಯಲು, ಸಾಯುವ ಸ್ಥಿತಿಗೆ ಹೋದ ಅನುಪಮ, ತನ್ನ ಅಂತ:ಶಕ್ತಿಯನ್ನು ಕಳೆದುಕೊಳ್ಳದೆ ಮರಳಿಬಂದು ಒಂಟಿಯಾಗಿ ಜೀವನದಲ್ಲಿ ಸಾಧನೆಗೈಯುತ್ತಾಳೆ. ಜೀವನ ಭಾಗ ಎರಡರಲ್ಲಿ ಒಬ್ಬ ಪ್ರಜ್ಞಾವಂತ ವೈದ್ಯನ ನಿಶ್ಕಲ್ಮಶ ಸ್ನೇಹ ದೊರೆಯುತ್ತದೆ. ಅದನ್ನು ಪ್ರೇಮವನ್ನಾಗಿಸುವ ಅವಕಾಶವನ್ನು ನಿರಾಕರಿಸಿ, ಅನಿರೀಕ್ಷಿತವಾಗಿ ಮರಳಿಬರುವೆನೆಂದು ಕೇಳುವ ಹಳೆಯ ಗಂಡನನ್ನೂ ನಿರಾಕರಿಸಿ, ಸ್ವಾಭಿಮಾನಿಯಾಗಿ ಅನುಪಮ ಜೀವನದ ದೋಣಿಯನ್ನು ಮುನ್ನಡೆಸುತ್ತಾಳೆ.
ಸುಧಾಮೂರ್ತಿಯವರದೇ "Wise & Otherwise" ನಲ್ಲಿ ಇನ್ನೊಂದು ಕಥೆಯಿದೆ. "ಮಹಾಶ್ವೇತ" ವನ್ನು ಓದಿ, ತನ್ನ ನಿರ್ಧಾರವನ್ನು ಬದಲಿಸಿ, leukoderma ಪೀಡಿತ ಹೆಣ್ಣೊಬ್ಬಳಿಗೆ ಬಾಳು ಕೊಟ್ಟ ಸತ್ಯ ಘಟನೆ. ಇವೆರಡನ್ನೂ ಓದಿದಾಗ, ಹೀಗೂ ಉಂಟೆ?! ಇದು ಜೀವನವಲ್ಲ ಕಥೆ.... ಎಂದು ಸುಮ್ಮನಾಗಿದ್ದೆ... ಆದರೀಗ.........]"ಆವಾಗ್ಲಿಂದ ನೋಡ್ಲಿಕ್ಹತ್ತೇನಿ..ಏನೋ ಬ್ಯಾಕ್ಗ್ರೌಂಡ್ ಪ್ರೊಸೆಸ್ ನಡ್ಸೀರಿ.. ಏನದು ನಮ್ಗೊಂದಿಷ್ಟು ಹೇಳ್ರಲಾ.."
"ಏನಿಲ್ರೀ..ಹಿಂಗss..""ಈಗೇನು..ನೀವು ಹೇಳ್ತೀರೋ ಇಲ್ಲೋ?"
[ನಿಮ್ಮ ಕರ್ಮ!.. ನನ್ನ ತಲೆಯ ಹುಳ ಅವರ ತಲೆಗೆ ವರ್ಗಾವಣೆ ಮಾಡಿದ್ದಾಯ್ತು]"ಈಗ ನಾನೇನ್ ಮಾಡ್ಬೇಕಂತೀರಿ?"
"ಅದ್ಕೇ ಹೇಳಿದ್ನಾ..ಸುಖಾಸುಮ್ನೆ ಯಾಕ್ ಕೆದಕ್ತೀರಿ, ನಾ ಹೇಳಂಗಿಲ್ಲ ಅಂತ...""......................"
"ಒಂದಂತೂ ಖರೇ ರಿ.. ನೀವೇನ್ ಮಾಡ್ಬೇಕಂತ ಯಾರೂ ನಿಮ್ಗೆ ಹೇಳಂಗಿಲ್ಲ. ಹೇಳ್ಲೂ ಬಾರ್ದು. ಅದು ಸರಿಯಿರಂಗಿಲ್ಲ.. ನಿರ್ಧಾರ ಯಾವತ್ತಿದ್ರೂ ನಿಮ್ದೇ ಇರ್ತೈತ್ರೀ..""ಅಂತೂ ಒಳ್ಳೇ ಇಬ್ಬಂದಿಗೆ ಸಿಕ್ಸಿದ್ರೀ ರೀ ನನ್ನ.."
"....................."[ಅವರು ಸಿಕ್ಕಾಗೆಲ್ಲ ಈ ವಿಷಯ ನೆನಪಿಸ್ತಾರೆ. ಸಾಧ್ಯವಾದಷ್ಟು ವಿಷಯಾಂತರ ಮಾಡ್ತೀನಿ. ಸಿಕ್ಕಾಗೆಲ್ಲ ಈ ವಿಷ್ಯ ಮಾತ್ರ ಮಾತಾಡೋದು ಬೇಡಪ್ಪ ಅಂತ ಬೇಡ್ಕೋತೀನಿ! ನಾ ಮಾಡಿದ್ದು ತಪ್ಪಾ? ಅವ್ರಿಗೆ ಆ ಕಥೆ ಹೇಳಬಾರದಿತ್ತಾ? ನನಗೇನೋ ಒಂದು ಬಗೆಯ ಅಪರಾಧಿ ಭಾವ ಕಾಡ್ತಾ ಇದೆ. ಯಾಕಂದ್ರೆ ಅವರ ಸ್ಥಾನದಲ್ಲಿ ನಾನಿದ್ದಿದ್ದ್ರೆ ಏನು ಮಾಡ್ತಿದ್ದೆ? ಉತ್ತರ ಸಿಕ್ಕಿಲ್ಲ.......... ನಿರ್ಧಾರ ಸುಲಭವಲ್ಲ...........]