Monday, January 05, 2009
ದೀಪಕ
ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ
ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು
ನೀಳ ನಾಸಿಕ, ಹವಳದಂತಹ ತುಟಿಗಳು
ತುಂಬುಗೆನ್ನೆಗಳು, ತೀಡಿದ ಹುಬ್ಬುಗಳು
ಕಂಗೊಳಿಸುತ್ತಿದ್ದ ಆ ಬಟ್ಟಲುಗಣ್ಣುಗಳು
ಮಿಡಿಯದಿರಲು ಸಾಧ್ಯವೇ ಹೃದಯಗಳು
ನೀ ನುಡಿದ ಮಧುರ ಸಿಹಿಮಾತುಗಳು
ಉಲಿದಂತಿತ್ತು ಸರಸ್ವತಿಯೇ ಸಪ್ತಸ್ವರಗಳು
ಆ ನಿನ್ನ ಸೌಂದರ್ಯದ ಅದಮ್ಯತೆ
ನಾಚಿಸುವಂತಿತ್ತು ನಿಸರ್ಗದ ರಮ್ಯತೆ
ಕಳೆಯಲು ಸಮಯ, ತಿಳಿಯಲು ವಿಷಯ
ಅರಿವಾಗಲು ವಿಧಿಯ ಒಳಸಂಚು
ಬಡಿದಂತಾಗಿತ್ತು ಮಿಂಚು, ಬರಸಿಡಿಲು
ಗೋಚರಿಸಿತ್ತು ಸೃಷ್ಟಿಯ ಕ್ರೂರ ಮಜಲು
ಹಣತೆಯ ಅಡಿಯಲ್ಲೆ ಅಂಧಕಾರದ ತವರು
ಬ್ರಹ್ಮನ ಸೃಷ್ಟಿ ಸ್ವಾತಂತ್ರ್ಯ ಪ್ರಶ್ನಿಸುವರ್ಯಾರು
ಸೂರ್ಯನಿಲ್ಲದಿದ್ದರೇನು, ಚಂದ್ರನಿಹನು ರಾತ್ರಿಗೆ
ಬೆಳಕಿಲ್ಲದಿದ್ದರೇನು, ನಾದವಿದೆ ನಿನ್ನ ಬಾಳಿಗೆ
ಅಜ್ಞಾನದ ಅಂಧಕಾರದೊಳು ನಾವು ಗಾವಿಲರು
ನ್ಯೂನ್ಯತೆಯ ಮೀರಿ ಬದುಕುವ ಇವರೇ ಧನ್ಯರು
ಶುಭಕೋರಿ ಯೋಚಿಸುತ್ತ ನಾ ನಿಂತಿರಲು ನಿಶ್ಚಲಳಾಗಿ
ನೀ ಸಾಗಿದ್ದೆ ಮುಂದೆ, ಕಟು ಸತ್ಯಕ್ಕೆ ಸಾಕ್ಷಿಯಾಗಿ.....
-ವಿನುತ
Subscribe to:
Post Comments (Atom)
5 comments:
tumba sogasagide ... heege bareetiri ... but, sad ending eke ?
:) ಯಾಕೆ ಅಂದ್ರೆ ಏನು ಹೇಳಲಿ?
haage summane helide ...
Anda haage .. Sankranthi Habbada Shubhashayagalu
ಬರೆಯಲೇ ಬೇಕು ಅಂತ ಬರೆದಿದ್ದಲ್ಲ, ಯಾಕೋ ಆ ದಿನ "ಮೂಡ್" ಹಾಗೆ ಇತ್ತು ಅಷ್ಟೆ :)
ನಿಮಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
Post a Comment