Monday, December 08, 2008

ಸಂಕ್ರಮಣ



ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ ಋತುಗಳು
ಬದಲಾಗಲು ರವಿ-ಚಂದ್ರ-ಭುವಿ ನಕ್ಷೆಗಳು
ಕೈ ಜೋಡಿಸುತಿಹಳು ಇಳೆ, ಕಾಲನ ಜೊತೆಗೆ
ಸಜ್ಜಾಗುತಿಹಳು ಪ್ರಕೃತಿ, ಬರುವ ನಾಳೆಗಳಿಗೆ

ಓಡುತಿದೆ ಋತುಚಕ್ರ, ಅನುಸರಿಸಿದೆ ಜೀವರಾಶಿ
ಸಿಂಗಾರಗೊಂಡಿದೆ ಸಸ್ಯವರ್ಗ, ನಡೆದಿರಲು ಬಣ್ಣಗಳ ಓಕುಳಿ
ಅದಲು ಬದಲಾಗಿದೆ ಸೂರ್ಯ ಚಂದ್ರರ ಅವಧಿ
ಇರುಳು ದಾಟಿರಲು ಹಗಲಿನ ಪರಿಧಿ

ಹಸಿರು ಎಲೆಗಳಲೆನಿತು ಈ ಕೆಂಪು ವರ್ಣ
ನಿರ್ಗಮಿಸುತಿರುವ ಗ್ರೀಷ್ಮನ ಬೀಳ್ಕೊಡುಗೆಯ ರೋದನವೋ
ಆಗಮಿಸುತಿರುವ ಶಿಶಿರನ ಕೆಂಧೂಳಿ ಸ್ವಾಗತವೋ
ಏನೊಂದು ಅರಿಯದಾಗಿದೆ, ಬರೀ ವಿಸ್ಮಯವಿಲ್ಲಿದೆ

ಅದೆನಿತು ಸಸ್ಯರಾಶಿ, ತವರು ತೊರೆಯದ ಕುಲ ಪುತ್ರನಂತೆ;
ಈ ಮಣ್ಣಿನ ನೀಳೆತ್ತರದ ಸೂಜಿಮೊನೆಯ ನಿತ್ಯಹರಿದ್ವರ್ಣ ಮರಗಳು
ಮೆಟ್ಟಿದ ನೆಲವ ಸ್ವಂತವಾಗಿಸಿಕೊಂಡಿರುವ ಭಾಗಿನಿಯಂತೆ
ಎಲ್ಲಿಂದಲೋ ಬಂದ, ಹಳದಿ ಕೆಂಬಣ್ಣಗಳ ಅಗಲೆಲೆಯ ವೃಕ್ಷಗಳು

ನವಜಾತ ಶಿಶುವಿನಂತಹ ಗುಲಾಬಿ ಬಣ್ಣದೆಲೆಗಳು
ಯೌವನದ ಬಿಸಿರಕ್ತದಂತಹ ಕೆಂಬಣ್ಣದೆಲೆಗಳು
ನವವಸಂತಕೆ ಕಾಲಿಡುತಿರುವಂತಹ ತಿಳಿಗಿಳಿವರ್ಣದೆಲೆಗಳು
ಜವಾಬ್ದಾರಿಗಳಿಂದ ಮಾಗಿದ ಗಾಢಹಸುರೆಲೆಗಳು

ಕರ್ತವ್ಯ ಮುಗಿಸಿ ಹಣ್ಣಾದ ಹಳದಿ ಎಲೆಗಳು
ವೃದ್ಧಾಪ್ಯದ ರುದ್ರಾಕ್ಷಿಯ ಕಂದು ಬಣ್ಣದೆಲೆಗಳು
ಮುಗಿಯಿತು ನಮ್ಮ ಆಯಸ್ಸು, ಇನ್ನು ನಮ್ಮನು ಹರಸು ಎಂದಿರಲು
ಕಾಲನ ಕರೆಗೆ ಓಗೊಟ್ಟು ಬೋಳಾದ ಟೊಂಗೆಗಳು

ಯಾವುದೀ ಮಾಯೆ, ಯಾರೀ ಯಕ್ಷಿಣಿ
ಎನಿತು ಅಲಂಕರಿಸಿಕೊಂಡಿಹಳು ಧಾರಿಣಿ
ನಿಸರ್ಗವೆಲ್ಲ ರಂಗಾದ ರಂಗೋಲಿ, ವರ್ಣಗಳ ಚಿತ್ತಾರ
ಏತಕೀ ಹುನ್ನಾರ, ಏನ ಹೇಳ ಬಯಸಿದೆ ಪರಿಸರ?

ಅಡಗಿದೆ ಸುಂದರ ಸೃಷ್ಟಿಯೊಳಗೊಂದು ವಿಶ್ವಕೋಶ
ನೀಡುತಿದೆ ಸರಳ ಜೀವನಕೊಂದು ಸಂದೇಶ
ಅನಿವಾರ್ಯವು ಹೊಂದಾಣಿಕೆ; ಪರಿಷ್ಕೃತ ದೃಷ್ಟಿಕೋನ
ಬಂದೊದಗಲು ಸಂಕ್ರಮಣ, ಪರಿವರ್ತನೆ ಜಗದ ನಿಯಮ!



- ವಿನುತ

5 comments:

Anonymous said...

ವಾಹ್ ... ಹೀಗೇ ಹರಿದು ಬರಲಿ ನಿಮ್ಮಿಂದ ಕಾವ್ಯ ಝರಿ
ಮೆಚ್ಚಿದೆ ನಿಮ್ಮ ಭಾವೆನೆಗಳು ಹರಿದು ಬರುವ ಪರಿ
ಕೊನೆಯ ಸಾಲುಗಳಲ್ಲಿ ವ್ಯಕ್ತಪಡಿಸಿರುವುದು ಬಹಳ ಅರ್ಥಕಾರಿ
ನಿಮ್ಮ ಕವಿತೆಗಳು ನಮಗೆ ಮುದ ನೀಡಿದ್ದಕ್ಕೆ ನಿಮಗೆ ನಾನು ಆಭಾರಿ

ವಿನುತ said...

ಮೆಚ್ಚುಗೆ ವ್ಯಕ್ತಪಡಿಸುವ ಈ ನಿಮ್ಮ ಪರಿ
ಮೂಡಿಸಿದೆ ನನಗೆ ಅಚ್ಚರಿ!
ಕವಿಯೊಬ್ಬರಿಗೆ ಮುದ ನೀಡಿದ್ದರೆ ಕವಿತೆ
ಅದರಲ್ಲೇ ಅದರ ಸಾರ್ಥಕತೆ
ಮೆಚ್ಚಿದೆ ಈ ನಿಮ್ಮ ಆಶುಕವಿತೆ
ಅದಕ್ಕಿದೋ ನನ್ನ ಕೃತಜ್ಞತೆ!

Anonymous said...

ನಾನೊಬ್ಬ ಕವಿಯೂ ಅಲ್ಲ ... ಸಾಹಿತಿಯೂ ಅಲ್ಲ ...
ನಿಮ್ಮ ಕವಿತೆಗಳಿಗೆ ಒಂದೆರಡು ಪ್ರಾಸದ ಸಾಲುಗಳ ಪ್ರತಿಕ್ರಿಯಿಗೆ ಕವಿಯಾಗಿರಬೇಕಿಲ್ಲ ...
ಆದರೂ ನೀವು ನನ್ನನ್ನು ಕವಿಯೆಂದು ಕರೆದಿದ್ದಕ್ಕೆ ನಮಗೆ ಬೇಸರವಿಲ್ಲ ...

Jagali bhaagavata said...

ಈ ಚಿತ್ರ ನಿಮ್ಮದೇ ಕೈಚಳಕವಾ? ಎಗರಿಸಿದ್ದಾ? :-) Fall seasonನಲ್ಲಿ ತೆಗೆದ ಚಿತ್ರ ಅಲ್ವಾ ಇದು?

ವಿನುತ said...

ಚಿತ್ರ ಪ್ರಕೃತಿಯ ಕೈಚಳಕ. ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು ಮಾತ್ರ ನಾನು :)
ಹೌದು, ಖಂಡಿತಾ fall season ನಲ್ಲಿ ತೆಗೆದದ್ದು..