Friday, February 27, 2009

ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅನ್ನುವ ಹಾಗೆ, ಈಗ Recession ನೆವ ಆಗಿಟ್ಟುಕೊಂಡು ಎಲ್ಲರೂ ಐಟಿ ಕ್ಷೇತ್ರದತ್ತ ಬೆರಳು ತೋರಿಸ್ತಾ ಇದ್ದಾರೆ. ಆರ್ಥಿಕ ಹಿಂಜರಿತ ಅನ್ನೋ ಕಾರಣಕ್ಕೆ ಐಟಿ ಕ್ಷೇತ್ರ ಜ್ಞಾಪಕ ಬಂದಿದೆ. ನಮ್ಮ ದೇಶದ ಮಾರುಕಟ್ಟೆಯನ್ನು ವಿದೇಶೀಯರಿಗೆ ಮುಕ್ತವಾಗಿ ತೆರೆದಿಟ್ಟು, ಅವರೆಲ್ಲ ಎಲ್ಲೆಲ್ಲಿಂದಲೋ ಬಂದು ನಮ್ಮ ಹಣದಿಂದ ಅವರ ಜೇಬನ್ನ ತುಂಬಿಸಿಕೊಳ್ಳುತ್ತಿರುವಾಗ, ನಾವು ಸ್ವಲ್ಪ ಅವರ ಹಣವನ್ನು ನಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪು ಕಾಣಿಸ್ತಾ ಇದೆ! ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆಯ ಕ್ಷೇತ್ರ ಇಂದು ದುರಹಂಕಾರದ ಗೂಡಿನಂತೆ ಕಾಣುತ್ತಿದೆ. ಸಮಸ್ಯೆಯೊಂದು ರೂಪುಗೊಳ್ಳಲು ಎಲ್ಲರೂ ಜೊತೆಗಿದ್ದರು. ಅದರ ಪರಿಣಾಮವನ್ನೆದುರಿಸುವಾಗ ಹೊಣೆಗೇಡಿತನ. ಸರ್ವಜ್ಞ ಸರಿಯಾಗೇ ಹೇಳಿದಾನೆ..

ಮಾಡಿದುದ ಒಪ್ಪದನ / ಮೂಡನಾಗಿಪ್ಪವನ /
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ /
ನೋಡಿದರೆ ತೊಲಗು ಸರ್ವಜ್ಞ //

ಇಂದು ಐಟಿ ಕ್ಷೇತ್ರದ ವೃತ್ತಿ ಪರತೆ ಮತ್ತದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ, ಬೇರೆ ಯಾವ ಕ್ಷೇತ್ರಗಳಿಗೂ ಇವು ಅನ್ವಯಿಸುವುದಿಲ್ಲದಂತೆ??! ಇಂದು ಮಾಧ್ಯಮದವರೆಂದರೆ ಯಾವ ಚಿತ್ರ ಕಣ್ಣಿಗೆ ಬರುತ್ತದೆ? ಅವರ ಸಾಮಾಜಿಕ ಜವಾಬ್ದಾರಿ ಏನು? ಕಂಡದ್ದು ಕಾಣದ್ದು ಎಲ್ಲದಕ್ಕೂ ಮಸಾಲೆ ಸೇರಿಸಿ, ಜನರಿಗೆ ಬೇಕೋ ಬೇಡವೋ, ದೇಶದ, ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದ್ದೋ, ಕೇವಲ ತಮ್ಮ TRP ಗಳಿಗಾಗಿ, circulation ಗಳಿಗಾಗಿ ವರದಿ ಮಾಡುವ ವ್ಯಕ್ತಿಗಳೆಂದೇ? ಇಂದು ವೈದ್ಯ ವೃತ್ತಿ ಎತ್ತ ಸಾಗುತ್ತಿದೆ? ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಸಾಮಾಜಿಕ ಜವಾಬ್ದಾರಿಯೆನ್ನುವುದು ಒಂದು ವೃತ್ತಿಗೆ ಮೀಸಲೇ? ಇಂದು ಸಾಮಾಜಿಕ ವೃತ್ತಿಯಲ್ಲಿರುವವರಿಗೇ (ಆರಕ್ಷಕರು, ಮಾಧ್ಯಮಗಳು ಇತ್ಯಾದಿ) ಅವುಗಳ ಬಗ್ಗೆ ಅರಿವಿಲ್ಲದಿರುವಾಗ ಸಾಮಾನ್ಯ ’Salary Oriented’ ಗುಂಪಿನಿಂದ ಅದರ ನಿರೀಕ್ಷಣೆ ಎಷ್ಟು ಸರಿ. ಹಾಗೆಂದ ಮಾತ್ರಕ್ಕೆ ಅವರಿಗೆ ಇಲ್ಲವೆಂದಲ್ಲ. ತಪ್ಪುಗಳನ್ನೇನು ಯಾರು ಬೇಕಾದರೂ ಎತ್ತಾಡಬಹುದು. ಆದರೆ, ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಅದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಬೇಕಾದಲ್ಲಿ ಇರಬೇಕಾದ ಪರಿಶ್ರಮ, ಸಾಧನೆ, ಚಾಕಚಕ್ಯತೆ ಬಗ್ಗೆ ಅರಿಯದ ಅಜ್ಞಾನಿಗಳು ಮಾತ್ರ ಹೀಗೆ ಮೂಗೆಳೆಯಲು ಸಾಧ್ಯ. ಇನ್ನೊಮ್ಮೆ ಈ ಸಂಸ್ಥೆಗಳಿಂದ ಎಷ್ಟು ಶಾಲೆಗಳು ಎಷ್ಟು ಹಳ್ಳಿಗಳು ದತ್ತು ತೆಗೆದು ಕೊಳ್ಳಲ್ಪಟ್ಟಿವೆ, ಎಷ್ಟು ವಿದ್ಯಾರ್ಥಿಗಳು ಫಲ ಪಡೆದುಕೊಳ್ಳುತ್ತಿದ್ದಾರೆ, ಎಷ್ಟು ಜನ ಉದ್ಯೋಗಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲದರ ವಿವರಗಳನ್ನು ತಿಳಿದುಕೊಳ್ಳಿ. ಇಂದು ಒಂದು ಕಂಪನಿ ಲಾಭ-ನಷ್ಟಗಳು ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ಅದೇ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಗೊತ್ತಾಗುವುದಿಲ್ಲ. ಕಾರಣ ಅವುಗಳನ್ನು ಪ್ರಚಾರದ ದೃಷ್ಟಿಯಿಂದ ಮಾಡಿರುವುದಿಲ್ಲ, ಜವಾಬ್ದಾರಿ ದೃಷ್ಟಿಯಿಂದ ಮಾಡಲಾಗಿರುತ್ತದೆ. ವಿಪರ್ಯಾಸವೆಂದರೆ, ಇಂದು ಸೇವೆಯೆ ವೃತ್ತಿಯಾಗಿರುವ ವೈದ್ಯವೃತ್ತಿಯಲ್ಲೇ ಗ್ರಾಮ ಸೇವೆಯನ್ನು ಕಡ್ಡಾಯಗೊಳಿಸಬೇಕಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯವನ್ನೂ, ಇಂದಿನ ಪರಿಸ್ಥಿತಿಯನ್ನೂ ಮತ್ತು ಐಟಿ ಉದ್ಯೋಗಿಗಳನ್ನು ಹೋಲಿಸುತ್ತಿದ್ದೀರಿ. ಆದರೆ ಯಾವ ಅರ್ಥದಲ್ಲಿ ಎಂಬುದೇ ಅರ್ಥವಗಲಿಲ್ಲವಷ್ಟೆ. ಬೇರೆ ಯಾವುದಾದರೂ ಕ್ಷೇತ್ರದ ಉದಾಹರಣೆಯನ್ನು ಈ ನಿಟ್ಟಿನಲ್ಲಿ ತೋರಿಸಿದರೆ, ಅರಿತುಕೊಳ್ಳಬಹುದು. ಬೇರಾವ ಉದ್ಯಮ ಕ್ಷೇತ್ರದಿಂದ ’Social Empowerment’ ಆಗಿದೆ? ಎಷ್ಟು ಆಗಿದೆ?

ಇಂದು ಎಲ್ಲ ವ್ಯವಹಾರಗಳೂ ಕೂತಲ್ಲೇ ಆಗಬೇಕು, ಅದೂ ತಕ್ಷಣ. ಯಾರಿಗೂ ಎಲ್ಲಿಯೂ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಎಲ್ಲಕ್ಕೂ ಧಾವಂತ. ಇಂತದೊಂದು ಜೀವನದಲ್ಲಿ ಐಟಿ ಎನ್ನುವುದು ಹಾಸು ಹೊಕ್ಕಾಗಿದೆ. ಎಲ್ಲೋ ಕುಳಿತುಕೊಂಡು ಕಾಫಿ ಹೀರುತ್ತಾ, ಒಬಾಮ ನ ಭಾಷಣ ಕೇಳಿ, ಮಾರ್ಟಿನ್ ಲೂಥರ್ ಕಿಂಗ್ ಮಾತನಾಡಿದಂತೆ ಆಯಿತು ಎಂದು ಲೇಖನ ಬರಿಯುವಾಗ ಐಟಿ ಇತ್ತು. ಭಾರತದ ಮೂಲೆಯಲ್ಲಿರುವ ರೋಗಿಯೊಬ್ಬನಿಗೆ ಆಸ್ಟ್ರೇಲಿಯಾದ ವೈದ್ಯನೊಬ್ಬನ ನೆರವು ಸಿಗೋವಾಗ್ಲು ಐಟಿ ಇದೆ. ಸುಮ್ನೆ ಹೋಗೋ Long Drive ನಲ್ಲು ಐಟಿ ಇದೆ. Late ಅಗತ್ತೆ, Traffic ನಲ್ಲಿ ಸಿಕ್ಕಿ ಹಾಕೊಂಡಿದಿನಿ, ಅಂತ ಅಮ್ಮನಿಗೆ ಸಮಾಧಾನ ಹೇಳೋ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಸುಮ್ನೆ ಯಾರಿಂದಲೋ ತಪ್ಪಿಸ್ಕೊಳ್ಳೊಕೆ ಊರಲ್ಲಿಲ್ಲ ಅಂತ ಸುಳ್ಳು ಹೇಳೊ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಮೊದಲು ಐಟಿ ಕ್ಷೇತ್ರದ ಆಳ ವಿಸ್ತಾರಗಳನ್ನ ತಿಳಿದುಕೊಳ್ಳಿ. ನಂತರ ಜನ ಸಾಮಾನ್ಯರಿಗೆ ತಿಳಿಸಿ. ಒಂದು ಸಾಮಾಜಿಕ ಸ್ಥಾನದಲ್ಲಿರೊ ನಿಮ್ಮಂತವರಿಗೇ ಅದು ತಿಳಿದಿಲ್ಲವಾದಲ್ಲಿ, ಜನ ಸಾಮಾನ್ಯರಿಗೆ ತಿಳಿಯದೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಂದು ಹಾಲುಮಾರುವವನ, Corporation ಕಸ ಗುಡಿಸುವವನ, ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ, ಆ ನಿಮ್ಮ 'Welfare Oriented' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ, ವಿದ್ಯೆ, ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ. ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ. ಯಾವ ಒಂದು ಹಂತದಲ್ಲೂ ಇನ್ನೊಂದು ದೃಷ್ಟಿಯಿಂದ ನೋಡಲಾಗಿಲ್ಲ. ಎಲ್ಲೆಡೆಯೂ ಎಲ್ಲವೂ ಸರಿಯಿರುವುದಿಲ್ಲ. ಸತ್ಯಮ್ ಎಂದು ಹೆಸರಿಟ್ಟುಕೊಂಡು ಮಾಡಿದ ದ್ರೋಹ ಕಣ್ಣಮುಂದಿದೆ. ಆದರೆ ಹುಳುಕುಗಳನ್ನು ಹೇಳುವುದರ ಜೊತೆಗೆ ಹೂವುಗಳನ್ನು ತೋರಿಸಬೇಕು. ಸಮಸ್ಯೆಯಿದೆ ಎಂದು ಹೇಳುವಾಗ ಪರಿಹಾರ ಕಂಡು ಕೊಳ್ಳುವ ಆಸಕ್ತಿ, ಚಿಂತನೆಯಿರಬೇಕು. ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಲೇಖನದಲ್ಲಿ ಹೇಳಿರುವುದು ಬಹುಪಾಲು ಮಂದಿಗೆ. ನೀವೇಕೆ Personal ಆಗಿ ತಗೋಳ್ತೀರಿ ಎಂದು ನುಣುಚಿಕೊಳ್ಳಬಹುದು. ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಡಿ ನೀವು ಬರೆಯುವುದು ನಗ್ನ ಸತ್ಯವೆಂದು ನಂಬುವವರಿದ್ದಾರೆ. ಅನ್ನವಾಗಿದೆಯೇ ಎಂದು ಒಂದು ಅಗಳು ನೋಡಿದರೆ ಸಾಕು ಎನ್ನುವ ಅತಿ ’ವಿವೇಚನೆ’ಯಿಂದ, ಯಾವ ಅಭಿಪ್ರಾಯ ಇಲ್ಲದವರೂ ನಿಮ್ಮ ಅಭಿಪ್ರಾಯವನ್ನೇ ರೂಪಿಸಿಕೊಳ್ಳುವ ಸಾಧ್ಯತೆ ಇದೆ. Cooling Glass ಹಾಕಿಕೊಂಡು ನೋಡಿ ಹಗಲನ್ನೇ ಕತ್ತಲೆಂದು ಬರೆಯುವುದು ನಗ್ನ ಸತ್ಯವಾಗುವುದಿಲ್ಲ. ಸರಿ ತಪ್ಪುಗಳ ಪೂರ್ಣ ವಿಮರ್ಶೆಯಿರಬೇಕಲ್ಲವೇ? ವೃತ್ತಿಯೊಂದರ ಬಗ್ಗೆ ಬರೆಯುವಾಗ, ’ಬಹುಪಾಲು’ ಅನ್ನುವುದನ್ನು ಸಮರ್ಥಿಸುವಂತೆ, ಎಲ್ಲ ಮಜಲುಗಳನ್ನು ವಿಮರ್ಶಿಸಿ.

ನಮಗೆ ಕಂಡದ್ದು ಮಾತ್ರ ಸತ್ಯವಲ್ಲ ಅಲ್ಲವೇ? ಇದು ನಮ್ಮ ಕ್ಷೇತ್ರ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಕುರುಡು ಹಮ್ಮಾಗಬಾರದಷ್ಟೆ. ಟೀಕೆಯನ್ನು ಸಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಪ್ರಶ್ನೆಯಲ್ಲವಿದು. ಬರೆದಿರುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ವಿಮರ್ಶೆಯಷ್ಟೆ. ಯಾವುದೇ ವೃತ್ತಿಯಾಗಿರಬಹುದು, ಉದಾಹರಣೆಗೆ ಸಂಗೀತ ಲೋಕದ ಬಗ್ಗೆ ಅದರ ಹೊರಗಿರುವವರ ಅರಿವೂ, ಅದರ ಒಳಗಿರುವವರ ಅರಿವೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಅದರ ಬಗ್ಗೆ ತಪ್ಪು ಅಭಿಪ್ರಾಯಗಳು ವ್ಯಕ್ತವಾದಾಗ ಅದನ್ನು ತಿದ್ದುವುದು ಅವರ ಹೊಣೆಯಾಗಿರುತ್ತದೆ. ನಾವೂ ಸಹ ಕೊರತೆಯನ್ನು ತುಂಬುತ್ತಿದ್ದೇವೆಯಷ್ಟೆ. ಒಂದು ವಿಷಯದ ಬಗ್ಗೆ ಇನ್ನಷ್ಟು ಸತ್ಯಗಳನ್ನು ತಿಳಿದುಕೊಳ್ಳುವ ವಿಶಾಲ ಮನಸ್ಸು ನಿಮ್ಮದಾಗಲಿ.

8 comments:

shivu.k said...

ವಿನುತ ಮೇಡಮ್,

ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಇಂಥ ಬರಹವನ್ನು ನಾನು ಗಮನಿಸಿರಲಿಲ್ಲ....ಎಲ್ಲರೂ ಐಟಿಯತ್ತ ಗಮನಿಸುತ್ತಿರುವಾಗ ನೀವು ಎಲ್ಲವನ್ನು ಗಮನಿಸಿಕೊಂಡು ಒಂದು ಅದ್ಭುತ ಲೇಖನ ಬರೆದಿದ್ದೀರಿ...

ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಇವೆಲ್ಲಾ ಸಾಲುಗಳು ತುಂಬಾ ವಸ್ತುನಿಷ್ಟವಾಗಿವೆಯೆಂದು ನನಗನ್ನಿಸುತ್ತದೆ...good keep it up...

ಮತ್ತೆ ನನ್ನ ಬ್ಲಾಗಿನಲ್ಲಿ ಹೊಸ ಲೇಖನವಿದೆ..ಬನ್ನಿ...ಓದಿ..ಹಾಗೂ ನಾಳೆ ನನ್ನ ಬ್ಲಾಗಿಗೆ ಹೊಸ ಲೇಖನ ಚಲಿಸುವ ಭೂಪಟಗಳು ಬರುತ್ತವೆ...ಮನಸಾರೆ ನಗಬೇಕು ಅನ್ನಿಸಿದರೆ ಬನ್ನಿ...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರತಿ ದಿನ ಕಾಸಿಗೆ ಕಾಸಿಗೆ ಲಾಟರಿ ಹೊಡೀತಿದ್ದವನು ರಿಯಲ್ ಎಸ್ಟೇಟ್ ಕೆಲಸ ಮಾಡಿ ನೋಡನೋಡುತ್ತಿದ್ದಂತೆ ಮನೆಕಟ್ಟಿ ವರ್ಣ ಕಾರಲ್ಲಿ ಬಂದರೆ ಜನಕ್ಕೆ ಜೀರ್ಣಿಸಿಕೊಳ್ಳಲಾಗುವುದಿಲ್ಲ. ನಾವು ಹದಿನಾಲ್ಕು ಗಂಟೆ ದುಡಿದರೂ ಇಷ್ಟು ದುಡಿಯಲಾಗದು..ಎಂದು ಹಳಹಳಿಸುವುದಿಲ್ಲವೇ? ಇದು ಐಟಿಗೂ ಅನ್ವಯಿಸುತ್ತದೆ. ಈ ಒಳಗಿರುವ ಹೊಟ್ಟೆಕಿಚ್ಚು ಅವರ ಮೇಲೆ ಆಪಾದನೆ ರೂಪದಲ್ಲಿ, ಹಿಂಜರಿತವಾದಾಗ ಆಳಿಗೊಂದು ಕಲ್ಲಿನ ರೂಪದಲ್ಲಿ ಪ್ರಕಟವಾಗುತ್ತೆ ಅನ್ಸುತ್ತೆ.

Anonymous said...

ಅದ್ಭುತವಾದ ಲೇಖನ... Its really a nice one

ವಿನುತ said...

ಶಿವು ರವರೇ,

ಧನ್ಯವಾದಗಳು. ಹೇಳಹೊರಟಿದ್ದಿಷ್ಟೆ, ಎಷ್ಟೇ ಉಪನ್ಯಾಸ ನೀಡಿದರೂ, ವಾಸ್ತವದಲ್ಲಿ ಎಲ್ಲವೂ ನಡೆಯುವುದು ಹಣದಿಂದಲೇ, ಯಾವ ಕ್ಷೇತ್ರವೂ, ಮನುಷ್ಯನೂ ಇದರಿಂದ ಹೊರತಾಗಿಲ್ಲ ಇಂದಿನ ಜಗತ್ತಿನಲ್ಲಿ.

ಮಲ್ಲಿಕಾರ್ಜುನ್ ಅವರೇ,

ಸರಿಯಾಗಿ ಹೇಳಿದೀರ. ಹಣ ಪುಕ್ಕಟೆಯಾಗಿ ಸಿಕ್ಕು, ಮೋಜಿಗಾಗಿ ಉಡಾಯಿಸಿದ್ದರೆ ಹೊಟ್ಟೆಉರಿದುಕೊಳ್ಳುವುದರಲ್ಲಿ ಒಂದರ್ಥವಿತ್ತು. ಯಾರಿಗೂ ಮೋಸಮಾಡದೆ ಸಂಪಾದಿಸಿದ ಹಣಕ್ಕೂ ಅದೇ ಭಾವನೆಯೇ? ಪ್ರತಿಕ್ರಿಯೆಗೆ ಧನ್ಯವಾದಗಳು.

ರಂಗನಾಥರೇ,

ಧನ್ಯವಾದಗಳು.

Ittigecement said...

ವಿನುತಾರವರೆ..

ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ...

ನಾನೂ ಕೂಡ ಐಟಿ ಬೂಮಲ್ಲಿ ಸ್ವಲ್ಪ ಕಾಸು ಕಂಡಿದ್ದೇನೆ...

ನೀವು ಹೇಳಿದಹಾಗೆ ಪ್ರತಾಪರ ಲೇಖನದಲ್ಲಿ

"ಆಪಾದನೆಗಳು ಕಾಣುತ್ತವೆಯೆ ಹೊರತು..
ಆಧಾರಗಳಿಲ್ಲ.."

ನಿಮ್ಮ ವಸ್ತುನಿಷ್ಠ" ಬರಕ್ಕೊಂದು ನನ್ನದೊಂದು
ಸಲಾಮ್..

ಸರಿಯಾಗಿ.. ನೇರವಾಗಿ ಬರೆದಿದ್ದೀರಿ..

ಅಭಿನಂದನೆಗಳು...

ವಿನುತ said...

ಪ್ರಕಾಶ್ ಅವರೇ,

ಐಟಿಯಿಂದ ಪ್ರಯೋಜನ ಪಡೆದಿದ್ದೇನೆ ಎಂದು ಔದಾರ್ಯದಿಂದ ಒಪ್ಪಿಕೊಳ್ಳುವವರು ವಿರಳ :)
ಬೆಂಬಲಕ್ಕೆ ಧನ್ಯವಾದಗಳು.

yashwanth Raj said...

ನಮಸ್ತೆ ವಿನುತಾರಾವರಿಗೆ,

ಕ್ಷಮಿಸಿ ಇದು ತುಂಬಾ ನಿಧಾನವಾದ ಪ್ರತಿಕ್ರಿಯೆ ಆದರೆ ನಾನು ನಿಮ್ಮ ಲೇಖನ ಓದಿದ್ದು ಈಗಲೇ.
ಧನ್ಯವಾದಗಳು ಈ ಲೇಖನ ಬರೀ ನಿಮ್ಮೊಬ್ಬರ ಪ್ರತಿಕ್ರಿಯೆಯಲ್ಲದೇ ಅದು ಎಲ್ಲ ಐ. ಟಿ. ಕ್ಷೇತ್ರದಲ್ಲಿರುವವರ ಒಕ್ಕೊರಲಿನ ಧ್ವನಿಯಾಗಿದೆ.ಅನಿಷ್ಟಕೆಲ್ಲ ಶನಿಶ್ವರನೆ ಕಾರಣ ಎನ್ನುವಂತೆ Recession effect ಆದ ಮೇಲೆ ಎಲ್ಲರಿಗೂ ಮೊದಲು ಕಂಡಿದ್ದು ಈ ಐ. ಟಿ. ಕ್ಷೇತ್ರ. ಹೌದು ನಮ್ಮ ಕ್ಷೇತ್ರವೂ ಕಾರಣ ಆದರೆ ಪೂರ್ತಿಯಾಗಿ ನಮ್ಮ ಕ್ಷೇತ್ರವೊಂದೇ ಕಾರಣವಲ್ಲ.
ನಾನು ಮೊದ ಮೊದಲು ಪ್ರತಾಪ ಸಿಂಹರ ಲೇಖನಗಳನ್ನು ಓದಿ ಮರುಳಾಗಿದ್ದೇ. ಆದರೆ ಇತ್ತೀಚೆಗೆ ಅವರ ಲೇಖನಗಳನ್ನು ನೋಡಿ ಅನಿಸಿದ್ದು ಅವರು ಒಂದು ಸಮುದಾಯ,ಸಮಾಜಕ್ಕೆ ಬದ್ದವಾಗಿ ಅವರ ಪರವಾಗಿಯೇ ಬರೆಯುತ್ತಾರೆ. ಒಬ್ಬ ಪತ್ರಕರ್ತ ನಿಸ್ಪಾಕ್ಷಪಾತವಾಗಿ ಬರೆದಾಗ ಅವನ ಲೇಖನಗಳ ಬಗೆಗೆ ನಂಬಿಕೆ ಬರುತದ್ದೇ.
ದುಡ್ಡು ಬಿಟ್ಟಿಯಾಗಿ ಬಂದರೆ ಅದರ ಬೆಲೆ ತಿಳಿಯದೇ ಅಡ್ಡ ದಿದ್ಡಿಯಾಗಿ ಕರ್ಚು ಮಾಡುತ್ತೇವೆ ಅದಕ್ಕೆ ತಾಜಾ ಉದಾಹರಣೆ real estate(ನಮ್ಮ ಕಡೆ ಇದಕ್ಕೆ Tsunami ಎಂದು ತಮಾಷೆಯಾಗಿ ಕರೆಯುತ್ತಾರೆ) ಉದ್ಯಮ, ಆದರೆ ನಾವು ಹೆಚ್ಚು ಸಂಬಳ ಪಡೆಯುತ್ತೇವೆಯೆಂದರೆ ಅದಕ್ಕೆ ತಕ್ಕಂತೆ ಕೆಲಸವನ್ನು ಮಾಡಲೇಬೇಕು ಸುಮ್ಮನೇ ಹೆಚ್ಚು ಸಂಬಳ ಕೊಡಲು ಐ. ಟಿ ಕಂಪನಿಯವರೇನು ದಡ್ಡರಲ್ಲ. ಏಕೆಂದರೆ ಇದು ಸರ್ಕಾರಿ ಕೆಲಸವಲ್ಲ ಸೇರುವಾಗೆ ಕಷ್ಟಪಟ್ಟರೆ ಆಮೇಲೆ ಕೊನೆಯವರೆಗೂ ನಿದ್ದೆ ಮಾಡಿ ಬೇಕಾದರೂ ಕಾಲ ಕಳೆಯಲು (ಕೆಲವೊಂದು ಇಲಾಖೆಯಲ್ಲಿನ ಸೋಮಾರಿ ನೌಕರರಿಗೆ ) ಆದರೆ ನಮ್ಮಲ್ಲಿ ಪ್ರತಿ ವರ್ಷ ನಮ್ಮ ಕೆಲಸದ ಗುಣಮಟ್ಟವನ್ನು ನೋಡಿಯೇ ನಮ್ಮ ಭವಿಷ್ಯ ನಿರ್ಧರಿಸುವುದು.

ಇವತ್ತು ಐ ಟಿ ಕ್ಸೆತ್ರದಿಂದ ಆಗಿರುವ ಉಪಯೋಗವನ್ನು ಹೇಳಿದ್ದೀರಿ.
ಇವತ್ತು ಆಸ್ಪತ್ರೆಗಳಲ್ಲಿ ಯಾವುದೇ ಚಿಕಿತ್ಸೆ ಅಥವಾ ಆಪರೇಶನ್ ಒಂದು ಪ್ಯಾಕೇಜ್ ರೂಪದಲ್ಲಿ ಇದೆ ಅಂದರೆ ಆಸ್ಪತ್ರೆ ಇಂದು ಸೇವಾ ಕ್ಷೇತ್ರವೆಂಬುದನ್ನು ಬಿಟ್ಟು ಅದು ಒಂದು ಲಾಭದಾಯಕ ಉದ್ಯಮವಾಗಿ ತೊಡಗಿ ಕೊಂಡಿದೆ.

ವಿನುತ said...

ನಮಸ್ತೆ ಯಶವ೦ತ್.

ಪತ್ರಕರ್ತ ಹಾಗು ನಿಷ್ಪಕ್ಷಪಾತ!! ಅದೆಲ್ಲಾ ಮುಗಿದು ಹೋದ ಕಾಲ ಬಿಡಿ. ಈಗೇನಿದ್ರು ಅದೂ ಕೂಡ ಹೊಟ್ಟೆಹೊರೆಯೊ ಒ೦ದು ವೃತ್ತಿ ಅಷ್ಟೇ. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.