Saturday, March 07, 2009

ಪ್ರತಾಪಸಿಂಹರ ಹೊಸ ಪ್ರಶ್ನೆಯ ಸುತ್ತ....


ಇಂದಿನ ಸಮಸ್ಯೆಗಳಿಗೆಲ್ಲ ಐಟಿ ಉದ್ಯೋಗಿಗಳೇ ಕಾರಣವೆಂಬಂತೆ ಬಿಂಬಿಸಿದ್ದ ಪ್ರತಾಪರು, ಇಂದು ನಮ್ಮಲ್ಲಿ ಗೇಟ್ಸ್, ಜಾಬ್ಸ್, ಡೆಲ್ ಯಾಕಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅವರ ಹಿಂದಿನ ಲೇಖನ ಸೃಷ್ಟಿಸಿದ್ದ ಗೊಂದಲಗಳಿಗೆ ಈಗಿನ ಲೇಖನ ಉತ್ತರವೆಂಬಂತೆ ಭಾವಿಸಲಾಗಿದೆ. ಆದರೆ, ಆರ್ಥಿಕತೆಯ ಹಿನ್ನೆಲೆಯಲ್ಲಿ ಬಂದ ಅವರ ಕುರುಡು ಕಾಂಚಾಣಕ್ಕೂ, ತಾಂತ್ರಿಕತೆಯ ಆಧಾರದ ಮೇಲೆ ಅವರು ಇಂದು ಮುಂದಿಟ್ಟಿರುವ ಪ್ರಶ್ನೆಗೂ, ವೃತ್ತಿಪರತೆ, ಹಣದ ಮೌಲ್ಯದ ಅರಿವಿನ ಕುರಿತಾದ ಮೊದಲ ಲೇಖನಕ್ಕೂ, ಪರಿಶ್ರಮ, ಪ್ರತಿಭೆಯನ್ನಾಧರಿಸಿದ ಎರಡನೆಯ ಲೇಖನಕ್ಕೂ, ಸಂಬಳಕ್ಕಾಗಿ ದುಡಿಯುವ ಐಟಿ ಕಾರ್ಮಿಕರ ಕುರಿತಾದ ಮೊದಲ ಭಾಗಕ್ಕೂ, ಬಂಡವಾಳ ಹೂಡುವ ಐಟಿ ದೊರೆಗಳ ಕುರಿತಾದ ಎರಡನೆಯ ಭಾಗಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೂ ಇದಕ್ಕೂ ಐಟಿ ಕ್ಷೇತ್ರ ಎಂಬ ಪದವಷ್ಟೇ ಕೊಂಡಿ.

ಹೊಸ ಚಿಂತನೆಯನ್ನು ಮುಂದಿಟ್ಟಿರುವ, ಐಟಿ ಕ್ಷೇತ್ರದ ಸಮಸ್ಯೆಯನ್ನು ಗುರುತಿಸುವ ಪ್ರಯತ್ನಕ್ಕಾಗಿ ಪ್ರತಾಪರಿಗೆ ಅಭಿನಂದನೆಗಳು. ಕೇವಲ ನಮ್ಮ Open House, All Hands Meet ಗಳಲ್ಲಿ ಕಳೆದು ಹೋಗುತ್ತಿದ್ದ ಪ್ರಶ್ನೆ ಇಂದು ಸಾರ್ವಜನಿಕ ವೇದಿಕೆಯಲ್ಲಿದೆ. ಪ್ರತಾಪರೇ ಹೇಳುವಂತೆ, ಪರಸ್ಪರ ಹಳಿದುಕೊಳ್ಳದೆ ಮುಕ್ತ ಚರ್ಚೆಯಾಗಲಿ. ನಮ್ಮ ಆಶಯವೂ ಅದೇ.

ISRO, DRDO ಮೊದಲಾದವುಗಳ ಇತಿಹಾಸ ಕೆದಕಿದಾಗ, ಅಬ್ದುಲ್ ಕಲಮರ ’Wings of Fire’ ಓದಿದಾಗ, ಎಂತಹವರ ಜಂಘಾಬಲವೂ ಉಡುಗಿಬಿಡಬೇಕು. ಉಳಿಪೆಟ್ಟು ತಿಂದೂ, ತಿಂದೂ ರೂಪುಗೊಂಡ ಶಿಲ್ಪಗಳಿವು. ದೇಶದ ವೈಜ್ಞಾನಿಕ ಪ್ರಗತಿಯ ರೂವಾರಿಗಳು. ಸೋಲಿನಲ್ಲೂ ಅದರ Top Management ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳು ಉದಾತ್ತವಾದವುಗಳು. (ಇಂತಹುದೊಂದು ನಂಬಿಕೆಯನ್ನು ನಮ್ಮ ಐಟಿ ಕ್ಷೇತ್ರದ ಮೇಲೂ ಇಡುವಂತಾದಲ್ಲಿ??!!) ಸ್ವಾತಂತ್ರ್ಯಾಪೂರ್ವದಲ್ಲೇ, ಭಾರತೀಯರ ಪ್ರತಿಭೆ ಗುರುತಿಸಿ, ಅವರಿಗೆ ಒತ್ತಾಸೆಯಾಗಿರಲೆಂದು, ಶ್ರೀಯುತ Jamsetji Nusserwanji Tata ರವರು ಕಂಡ ಕನಸು, 'Research Institute' ಅಥವಾ 'University of Research' ಎಂದು ಪ್ರಾರಂಭವಾಯಿತು. ಅದೇ ಇಂದಿನ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ (೧೯೦೯ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ, ಇಂದು ಅದರ ಫಲಾನುಭವಿಗಳಾದ ನಮ್ಮೆಲ್ಲರಿಂದ ಕೃತಜ್ಞತೆ, ಈ ಮೂಲಕ). ಅಂತಹುದೊಂದು vision ಇಟ್ಟುಕೊಂಡಿದ್ದ ಮತ್ತೊಬ್ಬ ಟಾಟಾ ಮತ್ತೆ ಬರಲಿಲ್ಲವೆಂಬುದೂ ಅಷ್ಟೇ ಖೇದಕರ. ಈ ಎಲ್ಲ ಸಂಸ್ಥೆಗಳಿಗೂ ಅವುಗಳದೇ ಆದ limitation ಗಳಿವೆ. ದೇಶದ ತಾಂತ್ರಿಕತೆಯ ಕೇಂದ್ರವಾದ ಇವುಗಳೊಳಗೆ ಎಲ್ಲರೂ ಹೋಗುವುದು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಅವು ತೋರಿಸಿದ ದಾರಿಯಲ್ಲಿ ನಡೆಯುವುದಷ್ಟೇ ಸೂಕ್ತ.

ಸ್ವಾತಂತ್ರ್ಯಾಪೂರ್ವದಲ್ಲಿ, ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯನಂತಹವರು ದೇಶದ ಆರ್ಥಿಕ ಪ್ರಗತಿಗಾಗಿ ಕೈಗಾರಿಕೀಕರಣಗೊಳಿಸಿದರು. ಸ್ವಾತಂತ್ರ್ಯಾನಂತರ ಕೆಲವು ಸರ್ಕಾರಿ ಸ್ವಾಮ್ಯಗಳಾದವು. ಕೆಲವು ಹಾಗೆಯೇ ವ್ಯಕ್ತಿಯ/ಕುಟುಂಬದ ಆಡಳಿತದಲ್ಲಿಯೇ ನಡೆದುಕೊಂಡು ಬಂದವು. ಅವುಗಳ ಮಾರುಕಟ್ಟೆ ಭಾರತವೇ ಆಗಿದ್ದಿತು. ನಮ್ಮಲ್ಲಿಯೂ ವಿದೇಶೀ ಉತ್ಪನ್ನಗಳ ಹಾವಳಿ ಕಡಿಮೆಯಿದ್ದಿತು. ಹಾಗಾಗಿ ಇವು ಎಲ್ಲರಿಗೂ ಚಿರಪರಿತ. ನಾವು ಇಂದು ನೋಡುತ್ತಿರುವ ಆರ್ಥಿಕ ಚಿತ್ರಣಕ್ಕೂ, ಕೇವಲ ಸ್ವಾತಂತ್ರ್ಯಾನಂತರದ ಚಿತ್ರಣಕ್ಕೂ ವ್ಯತ್ಯಾಸವಿದೆ. ಈ ವಿಂಗಡನೆಯೇ ಸೂಕ್ತವಲ್ಲವೇನೋ. ಬಹುಶ:, ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟ ನಂತರದ ಹಾಗೂ ಅದರ ಮೊದಲಿನ ಕಾಲವಂದು ವಿಂಗಡಿಸಬಹುದೇನೊ. ೯೦ ರ ದಶಕದಲ್ಲಿ ನಾವು ಜಾಗತೀಕರಣವನ್ನು ಬರಮಾಡಿಕೊಂಡೆವು. ಆಗ, ವಿದೇಶಗಳಲ್ಲಿ ಆಗಲೇ ಸಾಕಷ್ಟು establish ಆಗಿದ್ದ, ಲಾಭದಲ್ಲಿ ನಡೆಯುತ್ತಿದ್ದ ಕಂಪನಿಗಳು, ಪ್ರಾಡಕ್ಟ್ ಗಳು ಭಾರತಕ್ಕೆ ಲಗ್ಗೆಯಿಟ್ಟವು. ಅವರ ಲಾಭಾಂಶದ ಸ್ವಲ್ಪ ಮಾತ್ರ ಹಣಹೂಡಿಕೆ ಸಾಕಾಗಿತ್ತು ಅವರು ಭಾರತದಲ್ಲಿ ಹೆಜ್ಜೆಯಿಡಲು ಅಥವಾ ತಳವೂರಲು (??). ಇವುಗಳಿಂದಾಗಿ ಬಹುಪಾಲು ನಮ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಪೆಟ್ಟು ತಿಂದವು, ಮುಚ್ಚಿಯೇ ಹೋದವು. ಟೆಲೆಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಸಾಧಿಸಿದ್ದ, ಅಂದಿನ C-DoT, ಇಂದಿನ BSNL ನ ಏಕಾಧಿಪತ್ಯ ನಶಿಸಿಹೋಗಿದೆ. ಇಂದಿಗೂ ಮುಕ್ತ ಮಾರುಕಟ್ಟೆಯಲ್ಲಿ ತನ್ನನ್ನು ತಾನು ನಿರೂಪಿಸಲು ಹೆಣಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಸ್ಪರ್ಧೆ ನೀಡಿದ ವಿಡಿಯೋಕಾನ್, ಬಿಪಿಲ್ ನಂತಹ ಸಂಸ್ಥೆಗಳು ಏನಾದವು?

ಜಾಗತಿಕ ಮಾರುಕಟ್ಟೆಗೆ ಸರಿಯಾದ ತಯಾರಿಯಿಲ್ಲದೆ ನಾವು ಹೆಜ್ಜೆಯಿಟ್ಟೆವೇ? ತರಬೇತಿಗೊಳಿಸದೇ ನಮ್ಮನ್ನು ತಳ್ಳಲಾಯಿತೇ? ಗೊತ್ತಿಲ್ಲ. ಇಂತಹುದೊಂದು ಸಂದರ್ಭದಲ್ಲಿ, ಸಂಸ್ಥೆಯೊಂದನ್ನು ಕಟ್ಟಿ ಅದು ಲಾಭಗಳಿಸುವಂತೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ (ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರೇಮ್ ಜಿ, ನಾರಾಯಣ ಮೂರ್ತಿಯವರನ್ನು, ಗೇಟ್ಸ್, ಜಾಬ್ಸ್ ರಿಗೆ ಹೋಲಿಸಲು ಸಾಧ್ಯವಿಲ್ಲವೇ?). ಹಾಗಾಗಿ ’Service Orientation' ಕೇವಲ ಅಗತ್ಯವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನಂತರವಾದರೂ ’Product Orientation' ಆಗಬಹುದಿತ್ತಲ್ಲ. ಇದಕ್ಕೆ ನನಗೆ ದೊರೆತ ಉತ್ತರ - "ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ನಾವು ಸರ್ವೀಸ್ ಕೊಡುತ್ತಿದ್ದೇವೆ. ಹೊಸ ಪ್ರಾಡಕ್ಟ್ ಒಂದನ್ನು ತಂದರೆ ಅವರೊಂದಿಗೇ ಸ್ಪರ್ಧೆಗಿಳಿಯಬೇಕು. ಆಗ Service business ಕೂಡ ಹೊಡೆಸಿಕೊಳ್ಳುತ್ತದೆ. ಅದನ್ನು ಬಿಟ್ಟು ಲಾಭಾಂಶ ಇಲ್ಲ. ಲಾಭಾಂಶವಿಲ್ಲದೇ ಹೊಸ ಪ್ರಾಡಕ್ಟ್ ಗೆ ಕೈ ಹಾಕುವಷ್ಟು ಬಂಡವಾಳವಿಲ್ಲ. ಅದು ಜಾಣತನವೂ ಅಲ್ಲ. ಯಾಕೆಂದರೆ ನಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆ ಭಾರತಕ್ಕೆ ಸೀಮಿತವಾಗಬಹುದು. ಜಾಗತಿಕ ಮಟ್ಟದಲ್ಲಿ client brand establish ಆಗಿದೆ."

ಹಾಗಾದರೆ ನಮ್ಮ Innovation ಏನೂ ಇಲ್ಲವೇ? ಹೊಸ ಹೊಸ ತಂತ್ರಾಂಶಗಳ ಕುರಿತಾದ ಈ Innovation Drive ಗೆ ಅರ್ಥವೇನೆಂದು ಕೇಳಿದಾಗ ಸಿಕ್ಕ ಉತ್ತರ - "ಇಂದು ನೊಕಿಯಾದ ಹೊಸ ಮೊಬೈಲ್ ಗೆ, HP ಪ್ರಿಂಟರ್ ಗೆ ನಾವಿನ್ನೊಂದು ಹೊಸ ಮೊಬೈಲ್, ಪ್ರಿಂಟರ್ ತರುವುದೇ Innovation ಅಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ಪ್ರಾಡಕ್ಟ್ ಗಳಿದ್ದು, ಗ್ರಾಹಕ ಆಗಲೇ confuse ಆಗಿದ್ದಾನೆ. ಹೀಗಿರುವಾಗ ಹೊಸ ಪ್ರಾಡಕ್ಟ್ ಎಷ್ಟು sustain ಆಗುವುದೆಂದು ಹೇಳಬರುವುದಿಲ್ಲ. ಹಾಗಾಗಿ ಸ್ಪರ್ಧಿಸುವ ಬದಲು, ಸಹಯೋಗದೊಂದಿಗೆ ಹೊಸ ತಂತ್ರಜ್ಞಾನಗಳನ್ನು ತರುವುದು Innovation. ಆದ್ದರಿಂದ ಇಂದು service orientation ಎನ್ನುವುದು ಕೇವಲ cheap labour ಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಬೆಳೆದಿದೆ."

ಪ್ರಾಡಕ್ಟ್ ಎಂದರೆ, ಕೇವಲ Physically Feelable ವಸ್ತುವಲ್ಲ. ಬ್ಯಾಂಕಿಂಗ್ ಕೆಲಸಗಳನ್ನು ಸುಲಭಗೊಳಿಸಲು ಇರುವ ಸಹಾಯಕ ಸಾಫ್ಟ್ವೇರ್ ಗಳೂ ಪ್ರಾಡಕ್ಟ್ ಗಳೇ, ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಗಿರುವ ಜಾಲತಾಣಗಳೂ ಪ್ರಾಡಕ್ಟ್ ಗಳೇ. ಇವೆಲ್ಲವನ್ನೂ ಇಲ್ಲಿಯವರೇ, ಇಲ್ಲಿಯವರಿಗಾಗೇ ಮಾಡುತ್ತಿರುವುದು. ಆದರಿಂದು ನಾಯಿಕೊಡೆಗಳಂತೆ ಬೀದಿಗೊಂದು ತಲೆಯೆತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಿಂದ ೫ ಲಕ್ಷ ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎಂಬುದೂ ಪರಿಗಣಿಸಬೇಕಾಗಿರುವ ವಾಸ್ತವ. ಜಾಗತಿಕ ಮಟ್ಟದಲಿ ಸ್ಪರ್ಧಿಸುವಂತಹ ಒಂದು ಉತ್ತಮ ಪ್ರಾಡಕ್ಟ್ ಮಾಡಲು ಬೇಕಾಗಿರುವ ಸ್ಪರ್ಧಾತ್ಮಕ ಛಾತಿ ಎಷ್ಟು ಜನಕ್ಕಿದೆ ಎಂಬುದೂ ಪ್ರಶ್ನಾರ್ಹ. ಮಾಡಿದರೂ, ಪೈರೇಟೆಡ್ ಪ್ರಾಡಕ್ಟ್ ಗಳು ಅನಾಯಾಸವಾಗಿ ದೊರಕುವ ಸುವ್ಯವಸ್ಥೆ ನಮ್ಮಲ್ಲಿರುವಾಗ, ಅವುಗಳು ಎಷ್ಟರ ಮಟ್ಟಿಗೆ ನೆಲೆ ನಿಲ್ಲಬಲ್ಲವು ಎಂಬುದೂ ಪ್ರಶ್ನೆಯೇ.

ಗ್ರಾಹಕನೇ ಪ್ರಭುವಾಗಿರುವ, ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಕೇವಲ ಪ್ರಾಡಕ್ಟ್ ಗಳನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಉದ್ಯೋಗಗಳ ಸೃಷ್ಟಿ ಸಾಧ್ಯವಿತ್ತೇ? ಸರಕಾರಿ ಸ್ವಾಮ್ಯದ ಸಂಸ್ಥೆಗಳು/ ಸಂಶೋಧನೆ ಆಧಾರವಾಗಿರಿಸಿಕೊಂಡ ಸಂಸ್ಥೆಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಪ್ರಾಂತೀಯ, ಜಾತಿಯ ಆಧಾರದ ಮೇಲೆ ನಿಂತಿರುವದರಿಂದ ಪ್ರತಿಭೆಗೆ ಮನ್ನಣೆ ದೊರಕದೆ ಹತಾಶವಾದವರೆಷ್ಟು? ಈ ನಿರ್ಬಂಧಗಳನ್ನು ಮೀರಿ ನಿಂತ ಐಟಿ ಕ್ಷೇತ್ರ ಜನರಿಗೆ ಹತ್ತಿರವಾದದ್ದು ಅಸಹಜವೇ?

ದೂರದೃಷ್ಟಿಯಿಲ್ಲದೆ ಬೆಳೆದಿದ್ದರೆ, ಇಂದು ಕೇವಲ ಭಾರತೀಯ ಐಟಿ ಕ್ಷೇತ್ರ ಬವಣೆ ಅನುಭವಿಸಬೇಕಿತ್ತಲ್ಲವೇ? Product Oriented ಜಪಾನ್, ಚೀನಾ ದ ಆರ್ಥಿಕ ಸ್ಥಿತಿಯೂ ಏಕೆ ನಲುಗುತ್ತಿದೆ? ರಫ್ತು ಆಧಾರಿತ ಕ್ಷೇತ್ರಗಳೆಲ್ಲವೂ ಇಂದು ಬಳಲುತ್ತಿರುವುದು ಸತ್ಯವಲ್ಲವೇ? ಇದರಲ್ಲಿ ಜಾಗತೀಕರಣದ ಕೊಡುಗೆಯೆಷ್ಟು? ಇಂದು ತಪ್ಪೆಲ್ಲವೂ ಐಟಿ ಕ್ಷೇತ್ರದ ದಿಗ್ಗಜರದಾದರೆ, ಅವರಿಗೆ ದೂರದರ್ಶಿತ್ವ ಇಲ್ಲವೆಂದಾಗಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೇಕೆ ಅವರಿಗೆ ನೀಡಬೇಕಿತ್ತು? ಎಲ್ಲಿ ಎಡವಬಹುದೆಂದರಿತವರು ಅವರಿಗೆ ಎಚ್ಚರಿಸುವ ಪ್ರಯತ್ನವನ್ನೇಕೆ ಮಾಡಲಿಲ್ಲ? ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದೇವೆಯೇ? ತಪ್ಪು ಜರುಗಿದ್ದೇ ಆಗಿದಲ್ಲಿ, ಸರಿಪಡಿಸುವ ಬಗೆಗಳೆಂತು? ಸಾಮಾನ್ಯ ಕಾರ್ಮಿಕರಿಂದಲೂ ಸಾಧ್ಯವೇ ಅಥವಾ ಬಂಡವಾಳ ಹೂಡಲು ಸಾಧ್ಯವಿರುವವರಿಂದ ಮಾತ್ರ ಸಾಧ್ಯವೇ? (ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತೀತೆಂದು ಭಾವಿಸುತ್ತೇನೆ)

5 comments:

ಮಲ್ಲಿಕಾರ್ಜುನ.ಡಿ.ಜಿ. said...

ಮತ್ತೆ ಪ್ರತಾಪನಿಗೆ ಪ್ರತಿಕ್ರಿಯೆಯೇ ಅಂದುಕೊಂಡೆ.
ಆದರೆ ನೀವು ಎತ್ತಿರುವ ಪ್ರಶ್ನೆಗಳು ಆತ್ಮಾವಲೋಕನ ಮಾಡುವಂತಿವೆ.
ಅದಕ್ಕೇ ಹಿರಿಯರು ಅನ್ನೋದು- ಒಂದು ಬೆರಳು ಮುಂದೆ ತೋರಿಸಿದರೆ ಉಳಿದ ಬೆರಳು ನಮ್ಮೆಡೆಗೆ ತಿರುಗಿರುತ್ತವೆ ಎಂದು.

Vinutha said...

ಮಲ್ಲಿಕಾರ್ಜುನ ಅವರೇ,

ಏಕೋ ಈ ಬಾರಿಯೂ ಪ್ರತಾಪರು ಸಮಸ್ಯೆಯ ಮೂಲವನ್ನು ತಲುಪುವ ಪ್ರಯತ್ನ ಮಾಡಿದ್ದಾರೆಂದು ಅನ್ನಿಸಲಿಲ್ಲ. ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ತಾಂತ್ರಿಕತೆಯ ಹಿನ್ನೆಲೆಯಲ್ಲಿ, ಮತ್ತೆ ಅವರ ಲೇಖನ ಸಂಪೂರ್ಣತೆಯನ್ನು ಕಳೆದುಕೊಂಡಿದೆ. ಅವರನ್ನು ವಿರೋಧಿಸುವ ಹಾಗೂ ಪ್ರಶ್ನಿಸುವ ಉದ್ದೇಶವಲ್ಲ, ಇದೊಂದು ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಒಳಹರಿವು ಗೊತ್ತಿರುವುದರಿಂದ ಹಂಚಿಕೊಳ್ಳುವ ಪ್ರಯತ್ನವಷ್ಟೆ. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

ಸುನಿಲ್ ಮಲ್ಲೇನಹಳ್ಳಿ / Sunil Mallenahalli said...

ವಿನುತ ಅವರೇ,
ನಿಜಕ್ಕೂ ಲೇಖನ ತುಂಬಾ ಮಾಹಿತಿಪೂರ್ಣವಾಗಿದೆ. ಟಾಟಾ, ವಿಶ್ವೇಶ್ವರಯ್ಯನವರ ಬಗ್ಗೆ, ಜಾಗತೀಕರಣದ ಬಗ್ಗೆ, ವಿದೇಶಿ ಪ್ರಾಡಕ್ಟ್ ಗಳ ಬಗ್ಗೆ ಎಲ್ಲದರ ಬಗ್ಗೆ ನೀವು ಚರ್ಚೆಸಿದ್ದಿರಾ..ನಿಮ್ಮ ಈ ಪ್ರಯತ್ನಕ್ಕೆ ವಂದನೆಗಳು.

Vinutha said...

ಸ್ವದೇಶಿ ಯಾವುದು, ವಿದೇಶಿ ಯಾವುದು ಎನ್ನುವುದು ತಿಳಿಯದಷ್ಟರ ಮಟ್ಟಿಗೆ ಜಾಗತೀಕರಣ ನಮ್ಮ ಜೀವನದೊಳಗೆ ಹಾಸು ಹೊಕ್ಕಾಗಿದೆ. ಅದು ವರವೋ ಶಾಪವೋ ಎಂದು ನಿರ್ಧರಿಸಲಾಗದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುನಿಲ್ ಅವರೇ.

木須炒餅Jerry said...

cool!very creative!AV,無碼,a片免費看,自拍貼圖,伊莉,微風論壇,成人聊天室,成人電影,成人文學,成人貼圖區,成人網站,一葉情貼圖片區,色情漫畫,言情小說,情色論壇,臺灣情色網,色情影片,色情,成人影城,080視訊聊天室,a片,A漫,h漫,麗的色遊戲,同志色教館,AV女優,SEX,咆哮小老鼠,85cc免費影片,正妹牆,ut聊天室,豆豆聊天室,聊天室,情色小說,aio,成人,微風成人,做愛,成人貼圖,18成人,嘟嘟成人網,aio交友愛情館,情色文學,色情小說,色情網站,情色,A片下載,嘟嘟情人色網,成人影片,成人圖片,成人文章,成人小說,成人漫畫,視訊聊天室,性愛,成人圖片區,性愛自拍,美女寫真,自拍