"ಓ ನನ್ನ ಚೇತನ
ಆಗು ನೀ ಅನಿಕೇತನ.."
ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನಮ್ಮ ಆಧುನಿಕ ನುಡಿತಜ್ಞರ ಪ್ರಕಾರ, ಅಂಗವಿಕಲ == ವಿಕಲಚೇತನ (== physically challenged == specially abled). ಆಹಾ! ಎಂತಹ ಭಾಷಾ ಪ್ರಾವೀಣ್ಯತೆ! ನಿಜಕ್ಕೂ ಕುವೆಂಪು ಚೇತನ ಇಂದಿಗೆ ನಿರ್ನಾಮವಾಯಿತು. "ಚೇತನ" ವನ್ನು ನಾಮಪದವಾಗಿ ಬಳಸಿದಾಗ - ಮನಸ್ಸು, ಬುದ್ಧಿ, ಪ್ರಜ್ಞೆ ಎಂತಲೂ, ಗುಣವಾಚಕವಾಗಿ ಬಳಸಿದಾಗ - ಇಂದ್ರಿಯಗ್ರಹಣ ಶಕ್ತಿಯುಳ್ಳ, ಪ್ರಜ್ಞೆಯುಳ್ಳ, ಸಜೀವವಾದ ಎಂಬ ಅರ್ಥವೆಂದು ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟು ಹೇಳುತ್ತದೆ. ಹೀಗಿರಲು, ಕೆಲವು ಅಂಗಗಳು ಊನವಾಗಿರುವವ ವಿಕಲಚೇತನ!! ಎಷ್ಟು ಅರ್ಥಹೀನ ಹಾಗೂ ಅಮಾನವೀಯ! ಬಹುಶ: ಆ ಭಾಷಾಪರಿಣತರೊಮ್ಮೆ ಅಂತರರಾಷ್ಟ್ರೀಯ ಅಂಗವಿಕಲರ ಒಲಂಪಿಕ್ಸ್ (IWAS - 2009) ಕ್ರೀಡಾಕೂಟವನ್ನೊಮ್ಮೆ ವೀಕ್ಷಿಸಿದ್ದರೆ ಇಂತದೊಂದು ಪದದ ರಚನೆಯೇ ಆಗುತ್ತಿರಲಿಲ್ಲವೇನೋ!
ರಗ್ಬಿ, ಟೇಬಲ್ ಟೆನ್ನಿಸ್, ವಾಲಿಬಾಲ್, ಶಾಟ್ಪುಟ್, ಜಾವ್ಲಿನ್, ಡಿಸ್ಕ್ ಥ್ರೋ, ಆರ್ಚರಿ, ಲಾಂಗ್ ಜಂಪ್, ಹೈಜಂಪ್, ಈಜು, ಅಥ್ಲೆಟಿಕ್ಸ್............ ಕ್ರೀಡೆಗಳ ಪಟ್ಟಿ ಬೆಳೆಯುತ್ತದೆ. ಆಟಗಾರರಿಗಿದ್ದ ಅರ್ಹತೆ, ಕೈಗಳಿಲ್ಲ, ಕಾಲ್ಗಳಿಲ್ಲ, ಬೆರಳುಗಳಿಲ್ಲ, ಸೊಟ್ಟ ಕಾಲುಗಳು, ಸ್ವಾಧೀನವಿಲ್ಲದ ಕೈಗಳು, ಸೊಂಟ.....ಆದರೆ ಅವರಲ್ಲಿದ್ದ ಆ sportsmanship? ಆ ಹೋರಾಡುವ ಛಾತಿ? ಸಾಧಿಸುವ ಛಲ? ಜೀವನೋತ್ಸಾಹ? ಕ್ಷಮಿಸಿ, ಎಲ್ಲ ಸರಿಯಿರುವ ನಮ್ಮಲ್ಲಿಲ್ಲ. ಚಿನ್ನದ ಪದಕವನ್ನು ಪಡೆಯಲು ಚಿಗರೆಯಂತೆ ಜಿಗಿಯುತ್ತಾ ಮೆಟ್ಟಿಲಿಳಿದು ಬರುತ್ತಿದ್ದಾಳೆ ಆ ಚೀನಾದ ಯುವತಿ. ಆಕೆಗೆ ಎರಡೂ ಕಾಲುಗಳಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ! ಮಡಿಚಲೇ ಆಗದ ಒಂದು ಕಾಲು, ಸ್ವಾಧೀನವೇ ಇಲ್ಲದ ಒಂದು ಕೈ. ೫ ಸೆಟ್ ಗಳ ತನಕ ನಿಲ್ಲದ ಹೋರಾಟ, ಚೀನಾದ ಟೇಬಲ್ ಟೆನ್ನಿಸ್ ಆಟಗಾರನ ಪರಿಯದು. ಅಷ್ಟೇ ರೋಚಕ ಪ್ರತಿಸ್ಪರ್ಧೆಯನ್ನೊಡ್ಡಿದವನು, ಒಂದು ಕೋಲಿನ ಸಹಾಯದಿಂದ ನಿಂತು, ಉಳಿದಿರುವ ಒಂದರ್ಧ ಕೈಯಲ್ಲಿ ಸರ್ವ್ ಮಾಡುತ್ತಾ ಆಡಿದ ಭಾರತೀಯ! ಸ್ಟೂಲ್ ಮೇಲೆ ಕೂತು ಅಷ್ಟು ದೂರ ಜಾವ್ಲಿನ್ ಎಸೆದ ಆ ಪೋರಿಯನ್ನು, ಮರಳಿ ಆಕೆಯ ಕುರ್ಚಿಯ ಮೇಲೆ ಕೂರಿಸಿದಾಗಲೇ ತಿಳಿದದ್ದು ಆಕೆಯ ದೇಹದ ಕೆಳಾರ್ಧ ಸ್ವಾಧೀನದಲ್ಲಿಲ್ಲವೆಂದು! ಇವರುಗಳನ್ನೇ ವಿಕಲಚೇತರನರೆಂದಿದ್ದು?? ಇಷ್ಟಕ್ಕೂ ಇಂತದೊಂದು ಕ್ರೀಡಾಕೂಟದ ಪರಿಕಲ್ಪನೆ ಶುರುವಾಗಿದ್ದೇ, "ವಿಕೃತ ಚೇತನ"ರ ಯುದ್ಧದಾಹಕ್ಕೆ ಬಲಿಯಾಗಿ ಅಂಗವಿಕಲರಾದವರ ಪುನಶ್ಚೇತನದ ನಿಟ್ಟಿನಲ್ಲಿ.
ಗೆಳೆಯ ಗೆದ್ದಾಗ ಚಪ್ಪಾಳೆ ಹೊಡೆದು ಹರ್ಷಿಸಲು ಕೈಗಳಿಲ್ಲ, ಓಡಿ ಹೋಗಿ ತಬ್ಬಿಕೊಳ್ಳಲು ಕಾಲುಗಳಿಲ್ಲ. ಆದರೂ ಕೂಗುತ್ತಾ, ಕಿರಿಚುತ್ತಾ, ಕಣ್ಣುಗಳಲ್ಲೇ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಿಸುತ್ತಾ ಅವರನ್ನವರೇ ಅಭಿನಂದಿಸುತ್ತಿದ್ದ ರೀತಿ....! ಅಭಿನಂದಿಸಲು ಹೊರಗಿನ ಪ್ರೇಕ್ಷಕರಾದರೂ ಯಾರಿದ್ದರು ಬಿಡಿ. ರಾತ್ರಿಯೇ ಸರತಿಯಲ್ಲಿ ನಿಂತು ೩ ದಿನಗಳ ನಂತರದ ಮ್ಯಾಚಿಗೆ ನೂಕುನುಗ್ಗಲಿನಲ್ಲಿ ಟಿಕೆಟ್ ತೆಗೆದುಕೊಂಡು ಕ್ರೀಡಾಂಗಣ ಭರ್ತಿಮಾಡುವ ಜನ, ಉಚಿತಪ್ರವೇಶವಿದ್ದರೂ, ಇಂತಹ ಕ್ರೀಡಾಕೂಟಗಳಿಗೆ ಬಾರದಿರವುದು ಆಶ್ಚರ್ಯವೇ ಆಗದಷ್ಟರ ಮಟ್ಟಿಗೆ ನಮಗೆ ಅಭ್ಯಾಸವಾಗಿಬಿಟ್ಟಿದೆ. ಆಯೋಜಕರು ಹೇಳುತ್ತಿದ್ದರು, "ಭಾರತದಲ್ಲಿ ಜನ ಬಂದರೆ ಪವಾಡ, ಚೀನಾದಲ್ಲಿ ಜನ ಬಾರದಿದ್ದಿದ್ದರೆ ಪವಾಡ! ಆದರೆ ಅಲ್ಲಿಯೂ ಪವಾಡವಾಗಿರಲಿಲ್ಲ, ಇಲ್ಲಿಯೂ ಪವಾಡವಾಗಲಿಲ್ಲ!" ಒಮ್ಮೆ ನಮ್ಮ ಪತ್ರಿಕೆಗಳ ಕ್ರೀಡಾಪುಟವನ್ನೊಮ್ಮೆ ನೋಡಿದರೆ ಸತ್ಯ ಕಣ್ಣಿಗೆ ರಾಚುತ್ತದೆ. ಕೆಲಕ್ರೀಡೆಗಳ ವರದಿಗಳು ಪುಟದ ತುಂಬಾ, ಇನ್ಕೆಲವು ಮೂಲೆಗುಂಪು. ಪ್ರೆಸ್ ಮೀಟ್ ಕರೆದು ಮಾಹಿತಿಯನ್ನು ಧಾರಾಳವಾಗಿ ನೀಡಿದ್ದರೂ, ಈ ಕ್ರೀಡಾಕೂಟದ ಕುರಿತು ಪತ್ರಿಕೆಗಳಲ್ಲಿ ಬಂದದ್ದೆಷ್ಟು? ಜನರಿಗೆ ತಲುಪಿದ್ದೆಷ್ಟು? ನಾಯಿ ಬಾಲ ಡೊಂಕು, ಸರಿ, ಚಿಕ್ಕದಾಗಿ ಹಾಕಿದ್ದರೂ ಪರವಾಗಿಲ್ಲ, ಆದರೆ ವಿಕಲಚೇತನರೆಂದು ಯಾಕೆ ಅವಮಾನ ಮಾಡುತ್ತೀರಿ? IWAS (International wheelchair & Amputees Sports Federation) World Games 2009 ಅಂದರೆ "ಅಂತರರಾಷ್ಟ್ರೀಯ ವಿಕಲಚೇತನರ ಕ್ರೀಡಾಕೂಟ" ಎಂತಲೇ??!!
ಪಾಶ್ಚಿಮಾತ್ಯ, ಅಭಿವೃಧ್ಧಿ ಹೊಂದಿರುವ ದೇಶಗಳಲ್ಲಿರುವ ಶೇಕಡಾ ಒಂದರಷ್ಟು ಸವಲತ್ತುಗಳು ಇವರಿಗೆ ನಮ್ಮ ದೇಶದಲ್ಲಿ ಇಲ್ಲ. ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಚಲನಚಿತ್ರ ಮಂದಿರಗಳಲ್ಲಿ ಇವರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಎಷ್ಟಿದೆ ನಮ್ಮಲ್ಲಿ? ಬಸ್ ಗಳಲ್ಲಿ ಮೊದಲೆರಡು ಸೀಟ್ ರಿಸರ್ವೇಷನ್ ನೋಡಿರುತ್ತೇವೆ. ಅಷ್ಟೆತ್ತರ ಮೆಟ್ಟಿಲುಗಳನ್ನು ಆ ಜನಗಳ ತಿಕ್ಕಾಟದ ನಡುವೆಯೂ ಹತ್ತಿಬಂದು ಕೂರುತ್ತಾರೆ, "ವಿಕಲಚೇತನರಿಗೆ" ಎಂಬ ಹೆಸರಿನಡಿಯಲ್ಲಿ!! ಸರ್ಕಾರವನ್ನೂ, ವ್ಯವಸ್ಥೆಯನ್ನೂ ದೂರುವ ಮೊದಲು, ನಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಜರೂರತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಕ್ಷುಲ್ಲಕವೆನಿಸುವ ಎಷ್ಟೋ ಕೆಲಸಗಳು ಅವರಿಗೆ ಮಹತ್ವದ್ದಾಗಿರುತ್ತವೆ ಎನ್ನುವ ಅರಿವು ನಮಗಿರಬೇಕು. "ಪಾಪ.." ಮೊದಲು ಈ ಪದವನ್ನು ಇವರ ಮುಂದೆ ಪ್ರಯೋಗಿಸುವುದನ್ನು ನಿಲ್ಲಿಸಿ ದಯವಿಟ್ಟು! ನಮ್ಮ ಕರುಣೆಯ ಅಗತ್ಯ ಅವರಿಗಿಲ್ಲ. ಅವರ ನ್ಯೂನ್ಯತೆಯನ್ನು ಪದೇಪದೇ ನೆನಪಿಸಿ ಅವರ ಅಂತ:ಶಕ್ತಿಯನ್ನು ಕೊಲ್ಲುವ ಕೆಲಸ ಮೊದಲು ನಿಲ್ಲಬೇಕಿದೆ. "ಮೊದ್ಲೇ ಕೈಯಿಲ್ಲ, ನೀನ್ಯಾಕೆ ಬರ್ಲಿಕ್ಕೆ ಹೋದೆ, ನಾನೇ ತಂದುಕೊಡ್ತಾ ಇರ್ಲಿಲ್ವ?", "ಕೈಕಾಲಿಲ್ಲ, ಆ ಕುರ್ಚಿ ಮೇಲೆ ಕುತ್ಕೊಂಡು ಶಾಪಿಂಗ್ ಮಾಡೋ ಹುಚ್ಚು ಏನು ಇವ್ಳಿಗೆ, ಯಾರ್ಗಾದ್ರು ಹೇಳಿದ್ರೆ ತಂದ್ಕೊಡ್ತಾ ಇರ್ಲಿಲ್ವ?... ಇಂತಹ ಪ್ರಜ್ಞಾಹೀನ ಮಾತುಗಳನ್ನಾಡುವವರಿಗೆ "ವಿಕಲ ಚೇತನ" ಎಂಬ ಪದ ಸರಿಯಾಗಿ ಒಪ್ಪುತ್ತದೆ. ಒಂದು ದಿನ ಬಿಎಮ್ಟಿಸಿ ಬಸ್ಸಿನಲ್ಲಿ, ಕಾಲು ಸ್ವಲ್ಪ ಊನವಾಗಿದ್ದ ಮಹಿಳೆಯೊಬ್ಬರು ಹತ್ತಿದ್ದರು. ಅವರಿಗಾಗಿ ಕಾದಿರಿಸಲಾಗಿದ್ದ ಸೀಟಿನಲ್ಲಿ ಯುವತಿಯೊಬ್ಬಳು ಹ್ಯಾಂಡ್ಸ್ ಫ್ರೀ ಬಳಸಿ ಮಾತನಾಡುವುದರಲ್ಲಿ ನಿರತಳಾಗಿದ್ದಳು. ಆದ್ದರಿಂದ ಸ್ವಲ್ಪ ಜೋರಾಗೇ ಹೇಳಿ ಎಬ್ಬಿಸಿ ಕೂರಬೇಕಾಯಿತು. ಅಷ್ಟಕ್ಕೇ ನನ್ನ ಪಕ್ಕ ನಿಂತಿದ್ದ ವ್ಯಕ್ತಿ, "ಕಾಲು ಸರಿಯಿಲ್ದಲೇ ಇಷ್ಟು ಜೋರು ಬಾಯಿ, ಇನ್ನೇನಾದ್ರು ಅದೂ ಸರಿಯಿದ್ದಿದ್ದ್ರೆ...." ಅಂದ್ರು. ನಾನಂದೆ "ನೀವೊಂದೆರಡ್ನಿಮಿಷ ಅವರ ಥರ ಕಾಲು ಸೊಟ್ಟಗೆ ಮಾಡ್ಕೊಂಡು ನಿಂತ್ಕೊಳಿ ನೋಡೋಣ?". ಆಕೆ ತನ್ನ ಹಕ್ಕು ಚಲಾಯಿಸಿದ್ದೇ ತಪ್ಪೇ?! "Treat people, like the way you want to be treated" - ಒಳ್ಳೆಯ ಜೋಕ್ ಅನ್ಸತ್ತೆ. ನಮ್ಮ ತಟ್ಟೇಲಿ ನಾಯಿನೇ ಸತ್ತು ಬಿದ್ದಿರತ್ತೆ, ಆದರೆ ನಮ್ಮ ಮಾತೆಲ್ಲ ಪಕ್ಕದವರ ತಟ್ಟೆಯಲ್ಲಿ ಬಿದ್ದಿರುವ ನೊಣದ್ದೇ! ಇದೇ ಪಾಶ್ಚಿಮಾತ್ಯ ದೇಶದಲ್ಲಾಗಿದ್ದರೆ.......! ನಮಗೆ ಒಗ್ಗತ್ತೋ ಇಲ್ವೋ, ನಮಗೆ ಬೇಕೋ ಬೇಡ್ವೋ, ಆದ್ರೂ ಪಾಶ್ಚಿಮಾತ್ಯರ ಉಡುಗೆ-ತೊಡುಗೆ, ಆಹಾರ ಕ್ರಮ ಇವೆಲ್ಲವನ್ನೂ ಢಾಳಾಗಿ ಅನುಕರಣೆ ಮಾಡ್ತೀವಿ, ಆದರೆ ಅವರ ಸೃಜನಶೀಲತೆ, ಸಹಾಯಹಸ್ತ, ಶಿಸ್ತು, ಸಮಯಪ್ರಜ್ಞೆ ನಮಗ್ಯಾಕೋ ಬೇಕಿಲ್ಲವಾಗಿದೆ!
ಜನರ ಅಲ್ಪ ಪ್ರೋತ್ಸಾಹದ ನಡುವೆಯೂ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಿದ ಆಯೋಜಕರಿಗೆ ವಂದನೆಗಳು. ಪದಕ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಯಾರು ಸೋತರೂ, ಯಾರು ಗೆದ್ದರೂ, ಕೊನೆಗೆ ಗೆಲ್ಲುವುದು ಕ್ರೀಡೆಯೇ ಎನ್ನುವ, ದೇಶ ಭಾಷೆಗಳನ್ನುಮೀರಿದ ಆ ಕ್ರೀಡಾಮನೋಭಾವದಿಂದ ಆಡುತ್ತಾ ಕ್ರೀಡಾಕೂಟಕ್ಕೆ ಮೆರುಗು ನೀಡಿದ ಕ್ರೀಡಾಪಟುಗಳು, ಮಾಕಿ-ಮಂಕಿ ಎನ್ನುತ್ತ ಮೈದಾನವನ್ನು ರಣರಂಗವಾಗಿಸುವ, ಕ್ರೀಡೆಯ ಉದ್ದೇಶಕ್ಕೇ ಮಸಿಬಳಿಯುವಂತಹ "ಡೋಪಿಂಗ್" ನಂತಹ ಅಭ್ಯಾಸವನ್ನು ಹುಟ್ಟು ಹಾಕಿರುವ ಸಕಲಾಂಗರ ಕ್ರೀಡಾಕೂಟಗಳಿಗೆ ನಿಜಕ್ಕೂ ಮಾದರಿಯಾಗಿದ್ದರು. ಜೀವನದಲ್ಲಿ ಸಾಧನೆಗೈಯಲು ಬೇಕಾಗಿರುವುದು ಕೇವಲ ಅಂಗಾಂಗಗಳಲ್ಲ, ಆಸಕ್ತಿ, ಛಲ, ಚೇತನ, ಚೈತನ್ಯ. ಅಂತಹ ಅಂತ:ಶಕ್ತಿಯ ಸದುಪಯೋಗದಲ್ಲಿ ಈ "ಸಚೇತ"ರು ನಮಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಸಚೇತನರನ್ನು, ವಿಕಲಚೇತನರೆಂದು ಅವಮಾನ ಮಾಡಿದ್ದರೆ, ಹಾಗೆ ಕರೆವನನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂಡಿ ಹಿಪ್ಪೇಕಾಯಿ ಮಾಡಿಹಾಕುತ್ತಿದ್ದರು (Sue ಮಾಡುತ್ತಿದ್ದರು). ಆದರೆ ಇದು ನಮ್ಮ ಭಾರತ. ಅದರಲ್ಲೂ ಕಸ್ತೂರಿಯ ಕಂಪಿರುವ ಕನ್ನಡದ ಕರ್ನಾಟಕ. ಇಲ್ಲಿ ಸಬ್ ಕುಚ್ ಚಲ್ತಾ ಹೈ! ಭಾಷೆಯನ್ನೂ, ಭಾವನೆಗಳನ್ನೂ any one can take for a ride! It's a silly matter you know!
[ಇಂದು ವಿಶ್ವ ಅಂಗವಿಕಲರ ದಿನ. ಇವರುಗಳು ನಮ್ಮ ಕರುಣೆಯಿಂದಲ್ಲ, ಅವರ ಹಕ್ಕಿನಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ. ನಮ್ಮಿಂದೇನಾದರೂ ಸಹಾಯವಾಗುವಂತಿದ್ದರೆ ಮನ:ಪೂರ್ವಕವಾಗಿ ಮಾಡೋಣ. ಸಾಧ್ಯವಾಗದಿದ್ದಲ್ಲಿ ಸುಮ್ಮನಿರೋಣ, ಆದರೆ ಅವರ ಆ ಬದುಕೆನೆಡೆಗಿನ ಪ್ರೀತಿಗೆ, ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡ.]