Friday, April 03, 2009

SkyDiving - ಹೀಗೊಂದು ಅನುಭವ


ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮನ ಬೆಂಬಲ ಬೇರೆ ಕೇಳೋದು. ಅಮ್ಮನ ಯಾವ ಸಮಾಧಾನವು ಪ್ರಯೋಜನಕ್ಕೆ ಬರ್ಲಿಲ್ಲ. ಅದೇ ಮೊದಲು, ಅದೇ ಕೊನೆ. ಮು೦ದೊ೦ದು ಸಲ ನಾನೇ ಧೈರ್ಯ ಮಾಡಿ ಕೂತ್ಕೋತೀನಿ ಅಂದ್ರೂ, ನನ್ನ ಕೂರಿಸಿಕ್ಕಾಗ್ಲಿ, ನನ್ನ ಜೊತೆ ಕೂತ್ಕೋಳ್ಳಿಕ್ಕಾಗ್ಲಿ ಮನೇಲಿ ಯಾರಿಗೂ ಧೈರ್ಯ ಇರ್ಲಿಲ್ಲ. ಇ೦ಥದೊ೦ದು ಹಿನ್ನೆಲೆಯಲ್ಲಿ ಸ್ಕೈ ಡೈವಿಂಗ್!! ಏನ್ ತಮಾಷೆನಾ!!

ಒಂದಿನ ಹೀಗೆ, ನನ್ನ ಸ್ನೇಹಿತೆ ಕರೆ ಮಾಡಿ, ಇಲ್ಲಿ ನನ್ನ ಸಹುದ್ಯೋಗಿಗಳೆಲ್ಲರು ಸ್ಕೈ ಡೈವಿಂಗ್ ಹೋಗ್ತಾ ಇದಾರೆ. ನಾವೂ ಹೋಗೋಣ ಅಂದ್ಲು. ಸರಿ ಇಬ್ರಿಗೂ ಟಿಕೆಟ್ ಬುಕ್ ಮಾಡು ಅಂದೆ. ಹಂಗಂದ್ರೆ ಏನು ಅಂತಾನು ಕೇಳಲಿಲ್ಲ. ಆಮೇಲೆ ಕೆಲಸದ ಮಧ್ಯೆ ಮರೆತೇ ಹೋಗಿತ್ತು. ಹೋಗುವ ಹಿಂದಿನ ದಿನ, ಎಲ್ಲ ರೆಡಿನಾ ಅಂತ ಕರೆ ಬಂತು. ಆಗ ಗೂಗ್ಲಿಸಿದೆ. ಒಂದು ಕ್ಷಣ 'ನಾನ್ಯಾರು' ಅನ್ನೋ ಪ್ರಶ್ನೆ ಮೂಡಿತ್ತು. ಟಿಕೆಟ್ ರದ್ದು ಮಾಡುವ ಅಥವಾ ಬದಲಾಯಿಸೋ ಹಂತ ಮೀರಿತ್ತು!!

ಪ್ರಯಾಣದ ತಯಾರಿ ಶುರು. ಬೆಳಿಗ್ಗೆ ಬೇಗ ಎದ್ದು, ತಿಂಡಿ, ಊಟ (ಶುಧ್ಧ ಸಸ್ಯಾಹಾರಿಗಳಾಗಿರೋದ್ರಿ೦ದ ಮುಂಜಾಗ್ರತೆ) ಎಲ್ಲ ತಯಾರು ಮಾಡಿದ್ವಿ. ಸ್ವಪ್ನ, ಲಾವಣ್ಯ, ಶೈಲಾ ನಮ್ಮನೆಗೆ ಬಂದರು. ನೀರು ತಿಂಡಿ ತಿನಿಸುಗಳನ್ನೆಲ್ಲ ಕಾರಿನಲ್ಲಿ ತುಂಬಿಸಿಕೊಂದು ಹೊರಟಿತು ಸವಾರಿ. ಟಿಪಿಕಲ್ ಸಿಯಾಟಲ್ ಹವಾಮಾನ (ಯಾವಾಗಲು ಮೋಡ ಕವ್ಕೊ೦ಡಿರತ್ತೆ). ಬೆಳ್ಳಂಬೆಳಗ್ಗೆ ೫ ಗಂಟೆ. ಸ್ವಪ್ನ ಡ್ರೈವ್ ಮಾಡ್ತಾ ಇದ್ಲು. ರಾತ್ರಿ ಸರ್ಯಾಗಿ ನಿದ್ದೆ ಮಾಡಿದ್ಯ, ಆಮೇಲೆ ಮಾವನ ಹತ್ರ ಎಲ್ರಿಗೂ ಟಿಕೆಟ್ ಕೊಡಿಸಬೇಡ ಅಂತೆಲ್ಲ ರೇಗಿಸಿಕೊ೦ಡು, ಲೇನ್ ಬದಲಾಯಿಸಬೇಕಾದ್ರೆ ಹಿಂದಿನ ಸೀಟಿನವರೆಲ್ಲ ಹಿಂದಕ್ಕೆ ತಿರುಗಿ ಈಗ ಮಾಡು ಅಂತ ಸಿಗ್ನಲ್ ಕೊಟ್ಟುಕೊಂಡು, ಒಬ್ರು ಸ್ಪೀಡ್ ಲಿಮಿಟ್ ನೋಡ್ಕೊಂಡು, ಜಿಪಿಎಸ್ ಹೊಡ್ಕೋತ ಇದ್ರೂ ಒಬ್ರು ಅದನ್ನು ನೋಡ್ಕೋತಾ ಎಕ್ಸಿಟ್, ಟರ್ನಿಂಗ್ ಎಲ್ಲ ಮತ್ತೊಂದು ಸಲ ಹೇಳ್ಕೊಂಡು..... ಹೀಗೆ ಸಾಗಿತ್ತು ನಮ್ಮ ಪಯಣ. ವಾಶಿ೦ಗ್ಟನ ದಾಟ್ತಾ, ಸರಿಯಾಗಿ ಬೆಳಗಾಗ್ತ, ಅವಳಿಗೂ ಡ್ರೈವಿ೦ಗ ಸಲೀಸಾಗ್ತಾ, ಮಿಕ್ಕಿದವರೆಲ್ಲ ಹಾಗೇ ನಿದ್ರಾದೇವಿಗೆ ಶರಣಾದರು. ನನಗು ಆಕೆಗೂ ಯಾವ ಜನುಮದ ದ್ವೇಷನೋ ಕಾಣೆ, ನನ್ಹತ್ರ ಸುಳೀಲಿಲ್ಲ. ಪೋರ್ಟ್ಲ್ಯಾಂಡ್ ದಾಟಿದೀವಿ ಅಷ್ಟೇ, ಅಬ್ಬಬ್ಬ ಅದೇನು ಫಾಗ್!! ಮುಂದೆ ಒಂದಿಂಚು ಅಷ್ಟೇ ಕಾಣತಾ ಇದ್ದದ್ದು. ಮುಗೀತು ಇವತ್ತಿನ ಡೈವಿಂಗ್ ಕಥೆ ಅನ್ಕೊ೦ಡ್ವಿ. ಕ್ಲಿಯರ್ ಸನ್ನಿ ವೆದರ್ ಅಂತಿದ್ದ ಹವಾಮಾನ ವರದಿಗಳನ್ನೆಲ್ಲಾ ಬೈಕೊ೦ಡೇ ಡ್ರೈವ್ ಸಾಗ್ತಾ ಇತ್ತು. ಇನ್ನ ಸರಿಯಾಗಿ ಬೈದಿದ್ದೇ ಮುಗಿದಿರಲಿಲ್ಲ, ಅಷ್ಟೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಿ ನಗ್ತಾ ಇದ್ದ. ಅಬ್ಬಬ್ಬಾ ಅಂದ್ರೆ ೧-೨ ಮೈಲಿ ಇತ್ತಷ್ಟೇ ಫಾಗ್. ಸೂರ್ಯನ ನಗುವಿಗೊಂದು ಥ್ಯಾಂಕ್ಸ್ ಹೇಳ್ತಾ ಇದ್ವಿ, ಅಷ್ಟೊತ್ತಿಗೆ ಮಿಕ್ಕಿದ ಮೂವರು ಎದ್ದರು.

ಗಮ್ಯಸ್ಥಾನ ಹತ್ತಿರ ಆಗ್ತಾ ಶುರು ಆಯ್ತು ನಮ್ಮ ಪ್ರವರ. ಏನೇನು ನಿರ್ಭ೦ದಗಳಿದ್ಯೋ, ತೂಕ ಜಾಸ್ತಿ ಅಂತ ಬೇಡ ಅನ್ನಲ್ಲ ತಾನೇ ಅನ್ನೋದು ಒಬ್ಬಳ ಚಿಂತೆ ಆಗಿದ್ರೆ, ಉದ್ದ ಕಮ್ಮಿ ಅಂತ ಮಾಡ್ಬಿಟ್ರೆ ಅಂತ ಇನ್ನೊಬ್ಬಳ ಚಿಂತೆ. ನಾನು ಕೇಳಿದೆ, 'ಕೆಳಗೆ ಬಿದ್ರೆ ಏನಿರತ್ತೆ?' ಅಂತ. ಎಲ್ಲಾರೂ ಜೋರಾಗಿ ನಕ್ಕುಬಿಟ್ರು. 'ನೆಲ ಇರತ್ತೆ, ಇನ್ನೇನಿರತ್ತೆ' ಅಂತಂದ್ರು. ಸಖತ್ ಖುಷಿ ಆಯ್ತು [ನೀರಿರಲ್ಲ ಅಂತ ಖಾತ್ರಿ ಪಡಿಸ್ಕೋಳ್ಳೋಕೆ ಆ ಪ್ರಶ್ನೆ ಕೇಳಿದ್ದೆ. ಗೂಗ್ಲಿಸಿದ್ದ ಒಂದು ಚಿತ್ರದಲ್ಲಿ ಹಾಗಿತ್ತು. ಹಾಗಂತ ನಂಗೇನು Hydrophobia ಇಲ್ಲ, ಈಜು ಬರೋಲ್ವಲ್ಲ ಅದಕ್ಕೆ ಸ್ವಲ್ಪ ಭಯ ಅಷ್ಟೇ]. ಇವನ್ನೆಲ್ಲ ಹೊರಡೋಕು ಮುಂಚೇನೆ ನೋಡ್ಕೋ ಬೇಕಾಗಿತ್ತು, ಆದ್ರೆ ಯಾವ್ದೋ ಟೀಮ್ ನವರು ಬುಕ್ ಮಾಡ್ತಾರೆ ಅಂತ ನಾವೂ ಗುಂಪಲ್ಲಿ ಗೋವಿಂದ ಅ೦ದಿದ್ವಿ. ಮತ್ತೆ ಅದರ ಜ್ಞಾಪಕ ಆಗಿದ್ದು ಹೊರಡೋ ಹಿಂದಿನ ದಿನಾನೆ! ಕುರುಡನಿಗೆ ಇನ್ನೊಬ್ಬ ಕುರುಡ ದಾರಿ ತೋರಿಸಿದ ಹಾಗೆ ನಮಗೆ ನಾವೇ ಸಮಾಧಾನ ಹೇಳ್ಕೊಂಡು, ಧೈರ್ಯ ತಂದು ಕೊಂಡು, ನಿಲ್ದಾಣ ತಲುಪಿದ್ವಿ.

ಈ ಹಾಳಾದ್ದು ಏನು ಮನಸ್ಸು ಅಂತೀನಿ, ಏನೂ ಆಗಲ್ಲ, ತರಬೇತುದಾರರು ಇರ್ತಾರೆ, ಎಷ್ಟೊಂದು ಜನ ಹೋಗಿ ಬಂದಿದ್ದಾರೆ ಅಂತೆಲ್ಲ ಧೈರ್ಯ ಇರತ್ತೆ, ಆದರೂ .. ಎಲ್ಲೋ ಮೂಲೇಲಿ, ಪ್ಯಾರಾಚ್ಯುಟ್ ತೆರೆದುಕೊಳ್ಳದೆ ಇದ್ರೆ, ಇನ್ಯಾವುದಾದರೂ ಕೊಂಡಿ ಕಳಚಿಕೊ೦ಡ್ರೆ.. ಇಂಥದೇ ಯೋಚನೆಗಳು ಮೂಡುತ್ತವಲ್ಲ! ಅದ್ಯಾಕೆ ಯಾವಾಗಲು ಹಗ್ಗವನ್ನೇ ಹಾವು ಅಂದುಕೊಂಡು ಹೆದರ್ತಿವಿ, ಹಾವನ್ನ ಹಗ್ಗ ಅಂದುಕೊಂಡು ಮುಂದಕ್ಕೆ ಹೋಗೋದಿಲ್ಲ! ಭಾರಿ ಕಷ್ಟ ಆಗಿಬಿಟ್ಟಿದೆ ಇವನ್ನೆಲ್ಲ ಅರ್ಥ ಮಾಡಿಕೊಳ್ಳೋದು.

ಮಿಕ್ಕಿದೆಲ್ಲ ಗುಂಪುಗಳು ಬಂದಮೇಲೆ ನೋಂದಣಿ ಆಯ್ತು. ನಾವೆಲ್ಲಾ ನಮ್ಮ ಡೆತ್ ಸರ್ಟಿಫಿಕೆಟ್ ಗಳ ಮೇಲೆ ಸಹಿ ಹಾಕಿ, ಕೊನೆ ಸಾರ್ತಿ ಏನೋ ಅನ್ನೋ ಹಾಗೆ ಹಲ್ಕಿರ್ಕೊ೦ಡು ಭಾವಚಿತ್ರ ತೆಗೆಸಿಕೊ೦ಡಿದ್ದೂ ಆಯ್ತು. ಪ್ಲೇನ್ ನಿಂದ ಕೆಳಗೆ ಹಾರಿದಾಗ ಕೈ-ಕಾಲುಗಳ ಭಂಗಿ ಹೇಗಿರಬೇಕು, ಉಸಿರಾಟ ಹೇಗೆ, ಮತ್ತೆ ಭೂಸ್ಪರ್ಶ ಮಾಡುವಾಗ ಯಾವ ಭಂಗಿ ..ಮತ್ತಿತರ ಸೂಚನೆಗಳನ್ನು ಕೇಳಿಸಿಕೊ೦ಡಿದ್ದೂ ಆಯ್ತು. ೩-೪ ಸಲ ರೆಸ್ಟ್ ರೂಮ್ ಗೆ ಹೋಗಿ ಬಂದದ್ದು ಆಯ್ತು. ಸರಿ ಇಬ್ಬಿಬ್ರನ್ನೇ ಕರೀತೀವಿ ಅಂತ ಕೂರಿಸಿದ್ರು.

ನಿರೀಕ್ಷಿಸಿದಂತೆ ನಾನು ಮೊದಲು ಹೋಗಲಿಲ್ಲ. ಹಾರುವ ಮೊದಲು, ಸಕಲ ಶಸ್ತ್ರ ಸನ್ನದ್ಧರಾಗಿ (ಹೆಚ್ಚೇನು ಇಲ್ಲ, ಶಿರಸ್ತ್ರಾಣ, ಕನ್ನಡಕ, ಶೂ ಇತಾದಿ ದಿರಿಸುಗಳನ್ನು ತೊಟ್ಟಿದ್ದರು) ಹೊರಬಂದು, ಸ್ನೇಹಿತರಿಗೆಲ್ಲ ತೋರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಹೊರಟರು. ಕ್ಷೇಮವಾಗಿ ಹಿಂತಿರುಗಿದರು. ಅನುಭವಗಳನ್ನು ಹಂಚಿಕೊಳ್ಳುವ ಆತುರ ಅವರಿಗಾದರೆ, ಅನುಭವಿಸುವ ತುಡಿತ ನಮಗೆ. ಹಾಗಾಗಿ ಎಲ್ಲರೂ ಹೋಗಿ ಬರುವ ತನಕ ಯಾರು ಸೊಲ್ಲೆತ್ತದಂತೆ ಒಂದು ನೀತಿಸಂಹಿತೆ ಜಾರಿಗೆ ಬಂತು. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅನ್ನಿಸ್ತಿದೆ. ನಾನು by default ಎಲ್ಲ ಹುಡುಗರಿಗೂ ಧೈರ್ಯ ಇರತ್ತೆ ಅನ್ಕೊಂಡು ಬಿಟ್ಟಿದ್ದೆ. ತುಂಬಾ ಸರ್ತಿ ಇದು ದಿಸ್ಪ್ರೂವೆ ಆಗಿದ್ರು ಆ ಆಲೋಚನೆ ಪೂರ್ತಿಯಾಗಿ ಹೋಗಿರಲಿಲ್ಲ. ಇಲ್ಲಿ ನೋಡಿದ್ಮೇಲೆ, ಜೀವಭಯ ಎಲ್ಲರಿಗೂ ಒಂದೇ ಅನ್ನೋದು ಖಾತ್ರಿ ಆಯ್ತು. ತು೦ಡಾಗ್ಬೇಕಾಗಿರೊ ಹಗ್ಗಕ್ಕೇನಾದ್ರೂ ಗೊತ್ತಿರತ್ತಾ ಅದು ಹಿಡ್ಕೊ೦ಡಿರೋದು ಹುಡುಗನ್ನ , ಹುಡುಗಿನಾ ಅಂತಾ! (ಕೈಲಾಸ೦ ಅವರ ನಾಯಿ ಜೋಕು ಜ್ಞಾಪಕ ಆಗತ್ತಲ್ವಾ!)

ನನ್ನ ಸರದಿ ಬಂತು. ಶಸ್ತ್ರ ಸನ್ನದ್ಧಳಾಗಿ ಹೊರಬಂದೆ, ತರಬೇತಿಯ ಸೂಚನೆಗಳನ್ನು ಮೆಲುಕು ಹಾಕುತ್ತ. ಒಳಗಡೆ ಪುಕಪುಕ ಅಂತಿದ್ರು ಏನೋ ಭಂಡ ಧೈರ್ಯ. ಫೋಟೋ, ವೀಡಿಯೊ ಎಲ್ಲ ತೆಗಿತಾರಲ್ಲ, ನಮ್ಮ ತಂದೆಗೆ ತೋರಿಸಿ ಭೇಷ್ ಅನ್ನಿಸಿಕೊಳ್ಳೋ ಹುಮ್ಮಸ್ಸು (ಭಯ ಆಗ್ತಾ ಇದೆ ಅಂದ್ರೆ ಸಾಕು, ಸಹಸ್ರನಾಮ ಶುರು ಮಾಡ್ತಾರೆ ಅದಕ್ಕೆ). ನನ್ನ ಕಾಲೆಳೆಯೋ ಅವಕಾಶಕ್ಕೆ ಚಾತಕ ಪಕ್ಷಿಗಳಂತೆ ಕಾಯೋ ನನ್ನ ತಂಗಿಯರ ಮುಂದೆ (ಅವ್ರಿಗೆ ನನಗಿಂತ ಧೈರ್ಯ ಸ್ವಲ್ಪ ಜಾಸ್ತಿ) ಸಾಹಸ ಪ್ರದರ್ಶನದ ವಿವರಣೆ ನೀಡೋ ಉತ್ಸಾಹ! ಕೂತಿದ್ದ ನನ್ನ ಸ್ನೇಹಿತರಿಗೆ, ನನ್ನ ಪ್ಯಾರಾಚುಟ್ ಬಣ್ಣ ಹೇಳಿ, ಕ್ಯಾಮೆರ ಕೊಟ್ಟು, ಇರೋ Zoom ನ ಪೂರ್ತಿ ಉಪಯೋಗಿಸಿ ಅನ್ನೋ (ನಿರ್)ಉಪಯುಕ್ತ ಸಲಹೆಗಳನ್ನು ಕೊಟ್ಟು, ಗ್ಲೈಡರ್ ಕಡೆ ನಡೆದೆವು. ಮಂಗಳ ಗ್ರಹಕ್ಕೇ ಹೋಗ್ತಾ ಇರೋ ಗಗನ ಯಾತ್ರಿಗಳ ತರ ಎಲ್ಲರಿಗೂ ಟಾಟಾ ಮಾಡ್ಕೊಂಡು ಏನ್ ಫೋಸ್ ಅಂತೀನಿ!!

ಭೂಮಿಯಿ೦ದ ಮೇಲಕ್ಕೆ ಹಾರಿದ್ವಿ. ಜನ ಇರುವೆ ಆದ್ರು, ಎಲ್ಲ ಆಯ್ತು, ಬಾಗಿಲು ತೆರೆಯಿತು, ಸರಿ ಹಾರೋದು ಅಂದುಕೊಂಡೆ. ಪಕ್ಕದಲ್ಲಿದ್ದ ತರಬೇತುದಾರನ್ನ ಕೇಳಿದೆ. 'ಸ್ವಲ್ಪ ತಾಜಾ ಹವೆ ಒಳಗೆ ಬರಲಿ ಅಂತ' ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಈಗ ಹಾರ್ತೀವ ಅಂದೆ. ಇನ್ನು ೪೦೦೦ ಅಡಿ ಅಷ್ಟೇ ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಮತ್ತೆ ಕೇಳ್ದೆ. ಇನ್ನು ೬೦೦೦ ಅಡಿ, ೧೩೦೦೦ ಅಡಿ ತಲುಪಬೇಕು ಅಂದ್ರು. ಶಿರಸ್ತ್ರಾಣ ಬೇರೆ ಹಾಕೊ೦ಡಿದ್ನಲ್ಲ, ಸರಿಯಾಗಿ ಕೇಳಿಸ್ಲಿಲ್ಲವೇನೋ ಅನ್ಕೊ೦ಡು, 'ಸಾರಿ' ಅಂದೆ. ೧೩೦೦೦ ಅಡಿ ಅಂದ್ರು. ಸ್ವಲ್ಪ ಸುಧಾರಿಸಿಕೊಂಡು, ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು ಅನ್ಕೊಂಡು, ಸುತ್ತ ಕಾಣ್ತಾ ಇದ್ದ ಪರ್ವತ ಶ್ರೇಣಿ ನೋಡ್ಕೊಂಡು ಕುತ್ಕೊ೦ಡೆ. ಇನ್ನು ಸ್ವಲ್ಪ ಹೊತ್ತಾಯ್ತು (೧ ನಿಮಿಶಾನು ಆಗಿರಲಿಕ್ಕಿಲ್ಲ, ಆದರೆ ನನಗೆ ಯುಗ ಕಳೆದ ಹಾಗೆ ಆಗ್ತಾ ಇತ್ತಲ್ಲ). ಮತ್ತೆ ಕೇಳ್ದೆ. ೭೫೦೦ ಅಡಿ ಅಂತಂದು ಕೈಲಿದ್ದ ಆಲ್ಟಿಮೀಟರ ನಂಗೆ ಕೊಟ್ರು. ಸುಮ್ನೆ ಹಾಗೆ ಒಂದು ಮುಗುಳ್ನಕ್ಕು ಹಿಂದಿರುಗಿಸಿದೆ.

ಕೊನೆಗೂ ೧೩೦೦೦ ಅಡಿ ಮೇಲೆ ತಲುಪಿದೆವು. ಒಬ್ಬೊಬ್ಬರೆ ಹಾರೋಕೆ ಶುರು ಮಾಡಿದ್ರು. ನೋಡಿ ಒಂದು ಸಲ ಎದೆ ಧಸಕ್ ಅಂತು. ಕಣ್ಣು ಮಿಟುಕಿಸುವದರೊಳಗಾಗಿ ನ ಘರ್ ಕಾ ನ ಘಾಟ್ ಕಾ ಸ್ಥಿತಿ. ಸರ್ರ್ ಅಂತ ಜಾರ್ಕೊ೦ಡು ಹೋಗಿ ಬೀಳೋದೆ! ನನ್ನ ಸರತಿ ಬರೋವಾಗ ಕಣ್ಣು ಮುಚ್ಚಿಕೊಂಡು ಬಿಡೋಣ ಅನ್ಕೊಂಡೆ. ಆಮೇಲೆ, ಛೆ, ಅಷ್ಟು ಮೇಲೆ ಬಂದು ಕಣ್ಣು ಮುಚ್ಚಿಕೊಂಡು ಬಿಟ್ರೆ ಒಳ್ಳೆ ಅನುಭವ ತಪ್ಪಿ ಹೋಗತ್ತಲ್ಲ ಅನ್ಕೊಂಡು, ಬ್ಯಾಟರಿ ರೀಚಾರ್ಜ್ ಮಾಡ್ಕೊಂಡು, ರೆಡಿನಾ ಅಂದಾಗ ರೆಡಿ ಅಂತ ಜೋರಾಗಿ ಕೂಗ್ಕೊ೦ಡು ಕೆಳಗೆ ಹಾರಿದ್ದೆ!

ಒಂದು ಕ್ಷಣ ಏನಾಗ್ತಾ ಇದೆ ಅಂತ ಗೊತ್ತಾಗ್ಲಿಲ್ಲ. ಗಾಳಿಯ ಒತ್ತಡ. ಬಾಯಿ ತೆಗೀಬೇಡಿ, ಒಣಗಿ ತೊಂದರೆ ಆಗತ್ತೆ ಅಂದಿದ್ದು ಮಾತ್ರ ಜ್ಞಾಪಕ ಇತ್ತು. ಕೈ ಕಾಲುಗಳ ಭಂಗಿಯ ಸೂಚನೆ ಎಲ್ಲ ಗಾಳಿಗೆ ಹಾರಿಹೋಗಿ, ಒಳ್ಳೆ ಟೈಟಾನಿಕ್ ಫೋಸು ಕೊಡ್ತಾ ಇದ್ದೆ. ಮೂಗಲ್ಲಿ ಉಸಿರಾಡಬಹುದು ಅನ್ನೋದು ಮರೆತುಹೋಗಿತ್ತು. ಫೋಟೋಗ್ರಾಫರ್ ಕಾಣಿಸಿದರು. ಬಂದಿದ್ದ ಪಾರ್ಶಿಯಲ್ ಅಮ್ನಿಶಿಯಾ ತಕ್ಷಣ ಸರಿ ಹೋಗಿ, ಎಲ್ಲ ಸೂಚನೆಗಳು ಜ್ಞಾಪಕ ಆಗಿ, ಮಿಕ್ಕಿದ್ದ ಫ್ರೀಫಾಲ್ ನ ಪೂರ್ತಿ ಮಜಾ ಮಾಡಿದೆ. ಫ್ರೀಫಾಲ್ ಮುಗಿದಮೇಲೆ ಪ್ಯಾರಾಚ್ಯುಟ್ ತೆರೆದುಕೊಳ್ತು. ಆಹಾ! ತ್ರಿಶಂಕು ಸ್ವರ್ಗ! ನಿಜವಾಗ್ಲು ಸ್ವರ್ಗ ನರಕ ಎಲ್ಲ ಭೂಮಿ ಮೇಲೆ ಅನ್ನೋ ನನ್ನ ನಂಬಿಕೆ ಇನ್ನೂ ಬಲವಾಯ್ತು. ಮೌ೦ಟ ಹೆಲನ್, ಮೌ೦ಟ ಆಡಮ್ಸ್, ಮೌ೦ಟ ರೈನರ್ .... ಹಿಮಾಚ್ಛಾದಿತ ಪರ್ವತ ಶ್ರೇಣಿ ... ಏನು ಸುಂದರ ಇಳೆ... ವರ್ಣನೆಗೆ ನನ್ನ ಪದ ಭ೦ಢಾರ ಚಿಕ್ಕದು. ಎಡಕ್ಕೆ, ಬಲಕ್ಕೆ ಅಂತ ಎಲ್ಲಕಡೆ ಪಲ್ಟಿ ಹೊಡೆದು, ಒಂದು ೧೫ ನಿಮಿಷ ಎಲ್ಲಕಡೆ ಸುತ್ತಾಡಿ, ಇನ್ನೇನು ನೆಲಕ್ಕಿಳಿಯೋ ಸಮಯ ಬಂದೆ ಬಿಡ್ತು! ಹಾರೋಕು ಮುಂಚೆ ಇದ್ದ ಭಯ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ, ಹೊಸ ಲೋಕದಲ್ಲಿ ತೇಲಿ ಹೋಗಿದ್ದೆ. ಆ ಲೋಕದಿಂದ ಮತ್ತೆ ಭೂಮಿಗೆ ಬರಲು ಮನಸ್ಸೇ ಇರಲಿಲ್ಲ. ಆದರೇನು ಮಾಡೋದು, All Good things have to come to an end. ಸರಿಯಾಗಿ ನೆಲಕ್ಕಿಳಿದಿದ್ದಾಯ್ತು. ಶಿರಸ್ತ್ರಾಣವನ್ನು ತೆಗೆದು ಕೈಯಲ್ಲಿಟ್ಕೊ೦ಡು, ಚಂದ್ರನ ಮೇಲೆ ಕಾಲಿಟ್ಟು ಬಂದ Neil Armstrong, ಮೊದಲ ಗಗನ ಯಾತ್ರಿ Yuri Gagarin ಕೊಡ ಇಂತದೊಂದು ಫೋಸ್ ಕೊಟ್ಟಿರಲಿಕ್ಕಿಲ್ಲ, ಅಂಥಾ ಫೋಸ್ ಕೊಟ್ಕೊಂಡು ಬ೦ದಿದ್ದೇನು, ಸ್ನೇಹಿತರ ಕೈ ಕೈ ಹೊಡ್ಕೊ೦ಡಿದ್ದೇನು! ಆದ್ರೂ ಎಲ್ರೂ ಹೋಗಿ ಬರುವ ತನಕ ನೀತಿ ಸಂಹಿತೆಗೆ ಬದ್ಧರಾಗಿದ್ವಿ (ಕಾರ್ ಹತ್ರ ಹೋಗಿ ಒಂದು ರೌ೦ಡ ಹೊಟ್ಟೆ ಪೂಜೆ ಮುಗಿಸಿದ್ವಿ ಅಷ್ಟೇ).

ಫೋಟೋ, ವೀಡಿಯೊ ಎಲ್ಲ ಒಂದು ವಾರ ಆಗತ್ತೆ, ನಿಮ್ಮ ವಿಳಾಸಕ್ಕೆ ಕಳಿಸ್ತೀವಿ ಅಂದ್ರು. ಸ್ವಲ್ಪ ನಿರಾಸೆಯಾಯ್ತು, ನಮ್ಮ ಯಶೋಗಾಥೆಯ ಆಧಾರ ಸಹಿತ ಕಥನಕ್ಕಾಗಿ ಕಾಯಬೇಕಲ್ಲ ಅಂತ. ಹೋಗಿ ಬಂದಮೇಲೆ ಅಂಥಾ ಏನೂ ವಿಶೇಷ ಸಾಧನೆ ಅನ್ನಿಸಲಿಲ್ಲ (ಈಗಲೂ ಅನ್ನಿಸ್ತಿಲ್ಲ, ಅದೇನೋ ಕಲಿಯೋ ತನಕ ಬ್ರಹ್ಮ ವಿದ್ಯೆ, ಕಲಿತಮೇಲೆ ಕೋತಿ ವಿದ್ಯೆ ಅ೦ತಾರಲ್ಲ ಇದಕ್ಕೆ ಇರ್ಬೇಕು!). ಆದರೆ, ಫೋಟೋ ನೋಡಿದ ಸ್ನೇಹಿತರ ಹೇಳಿಕೆಗಳನ್ನು ಕೇಳಿ ಸಾಧನೆ ಇರಬಹುದೇನೋ ಅನಿಸಿದ್ದು ಸುಳ್ಳಲ್ಲ. ಹೋಗಿಬಂದು ವಾರವಾದ್ರು ಅದರ ಚರ್ಚೆಯಲ್ಲಿದ್ದಿದು ಸುಳ್ಳಲ್ಲ. ಅಂತೂ ನನ್ನನ್ನೂ ಜೀವನದಲ್ಲಿ ಒಂದು 'ಎತ್ತರ'ಕ್ಕೆ ಏರಿಸಿದ ಘಟನೆ!! ಒಂದು ಸುಂದರ ಅನುಭವ ಈ ಸ್ಕೈ ಡೈವಿಂಗ್.

16 comments:

ಸಾಗರದಾಚೆಯ ಇಂಚರ said...

nimma anubhava chennagide, hanchikondiddakke dhanyvaadagalu

ಧರಿತ್ರಿ said...

ಅನುಭವವನ್ನು ಬಿಚ್ಚಿಟ್ಟ ಪರಿ ಚೆನ್ನಾಗಿದೆ
-ಧರಿತ್ರಿ

ವಿಕಾಸ್ ಹೆಗಡೆ said...

ಅಬ್ಬಾ..! ಗ್ರೇಟ್ ಕಣ್ರೀ.. ! ರೋಚಕ ಅನುಭವ..

ಉಮಿ :) said...

ನವಿರು ಹಾಸ್ಯದಿಂದ ಕೂಡಿದ ನಿಮ್ಮ ವರ್ಣನಾ ಶೈಲಿ ತುಂಬಾ ಹಿಡಿಸಿತು. ಸ್ಕೈ ಡೈವಿಂಗ್ ನಲ್ಲಿ ಅಷ್ಟೊಂದು ಮಜ ಇರುತ್ತೆ ಅಂತ ಗೊತ್ತಿರ್ಲಿಲ್ಲ. ನನಗೆಂದಾದರೂ ಆ ಅವಕಾಶ ಸಿಕ್ರೆ ಎರಡೂ ಕೈಯಿಂದ ಬಾಚಿಕೊಳ್ತೀನಿ. :)

ಸಿಮೆಂಟು ಮರಳಿನ ಮಧ್ಯೆ said...

ವಿನುತಾ...

ಗ್ರೇಟ್...!

ಅದರ ಫೋಟೊ, ವೀಡಿಯೋ ತೋರಿಸಿ....

ನಿಮ್ಮ ಅನುಭವ ಓದಿ...

ಹೊಟ್ಟೆಕಿಚ್ಚಾಯಿತು....

ನಾವು ತೇಲಿಹೋದಂತೆ ಅನಿಸಿತು....

PARAANJAPE K.N. said...

ವಿಣುತಾ,
ರೋಮಾ೦ಚಕ ಅನುಭವವನ್ನು ಬರವಣಿಗೆಯ ಮೂಲಕ ಯಥಾವತ್ ನಮ್ಮ ಮು೦ದಿಟ್ಟಿರುವ ಪರಿ ಇಷ್ಟವಾಯಿತು. ಚೆನ್ನಾಗಿದೆ.

ಚಂದ್ರಕಾಂತ ಎಸ್ said...

‘ಕೆಂಡಸಂಪಿಗೆ’ಯಲ್ಲಿ ಈ ದಿನ ನಿಮ್ಮ ಬ್ಲಾಗ್ ಪರಿಚಯ ಮಾಡಿಕೊಂಡು ಇಲ್ಲಿಗೆ ಬಂದು ಕಣ್ಣುಮಿಟುಕಿಸದೆ ನಿಮ್ಮ ಅನುಭವ ಪೂರ್ತಿ ಓದಿದೆ. ನಿಮಗೆ ಭಯವಾದಾಗ ನನಗೂ ಭಯವಾಗಿ, ನೀವು ಕೆಳಗಿಳಿದಾಗ ‘ಅಯ್ಯೋ ಎಲ್ಲಾ ಮುಗಿಯಿತೇ’ ಅನಿಸಿತು.ನಾವು ನೇಪಾಳಕ್ಕೆ ಹೋದಾಗ ಅಲ್ಲಿ ಎವೆರೆಸ್ಟ್ ಮರ್ವತ,ಕಾಂಚನ್ಜಂಗಾ ಇವೆಲ್ಲವನ್ನೂ ವಿಮಾನದಲ್ಲೇ ಕುಳಿತು ನೋಡಿದ ರೋಮಾಂಚನದ ಅನುಭವ ನೆನಪಾಯಿತು. ಬಿಸಿಲಿಗೆ ಹೊಳೆಯುವ ಬೆಳ್ಳಿಬೆಟ್ಟಗಳ ಸೌಂದರ್ಯ ಕಂಡುಸ್ವರ್ಗಲೋಕದ ವರ್ಣನೆ ಸುಳ್ಳಲ್ಲ ಅನಿಸಿತು. ಅದ್ಭುತ ಬರಹಕ್ಕೆ ಧನ್ಯವಾದಗಳು.

Guru's world said...

ವಿನುತ,
very nice experiance ಅಂತ ಕಾಣುತ್ತೆ.. ಚೆನ್ನಾಗಿ ವಿವರಿಸಿದ್ದಿರ , ನಿಜವಾಗ್ಲೂ ನಿಮ್ಮ ಧೈರ್ಯ ಮೆಚ್ಚಬೇಕಾದ್ದೆ. joint weel ನಲ್ಲಿ ಕೂಥ್ಕೋಳೋಕ್ಕೆ ಹೆದರಿ ಕೊಳ್ತಾ ಇದ್ದೋರು , sky diving ಅಂದ್ರೆ ಸುಮ್ನೆನ್ನ, .. ಅಂತು ಒಳ್ಳೆ ಚಾನ್ಸ್.. ಚೆನ್ನಾಗಿ enjoye ಮಾಡಿದ್ರಿ,,, ನನಗಂತು ಈ ಥರ adventure ಅಂದ್ರೆ ತುಂಬಾನೆ ಇಷ್ಟ , ನಾನು ಒಂದು ಎರಡು ಸಲ para ರೈಡಿಂಗ್ ಹೋಗ್ಗಿದ್ದೆ.. ಬಟ್ ಅದು ಇಷ್ಟು ಮಜಾ ಇರೋಲ್ಲ ಬಿಡಿ...
ಗುರು

shivu said...

ವಿನುತಾ ಮೇಡಮ್,

ವಾಹ್! ಸೂಪರ್... ಈ ಡೈವಿಂಗಿನ ಪ್ರತಿಯೊಂದು ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ....ಎಲ್ಲಾ ಪಕ್ಕದಲ್ಲೇ ನಿಂತು ಅನುಭವಿಸಿದಂತೆ ಆಯ್ತು....ಕೆಳಗೆ ದುಮುಕುವವರೆಗಿನ ವಿವರಣೆ ಓಕೆ....ಅದ್ರೆ ದುಮುಕಿದ ಮೇಲೆ ಹಾರಾಡುತ್ತಾ ತೇಲಾಡುತ್ತಾ....ಇದ್ದಾಗ ಆದ ಮನಸ್ಸಿನಲ್ಲಿ ಮೂಡಿದ, ಕಾಡಿದ, ಹಾಡಿದ, ಓಡಿದ, ಭಾವನೆಗಳನ್ನು ಹೆಚ್ಚು ನಿರೀಕ್ಷಿಸಿದ್ದೆ....ಅದೇ ತಾನೆ ಮಜ.....ಸಾಧ್ಯವಾದರೆ ಮತ್ತೊಮ್ಮೆ ಹೋಗಿ ಅನುಭವಿಸಿ...ಬರೆಯಿರಿ....
ಫೋಟೊ ಮತ್ತು ವಿಡಿಯೋಗಾಗಿ ಕಾಯುತ್ತೇನೆ...

ಧನ್ಯವಾದಗಳು...

guruve said...

ರೋಚಕ ಅನುಭವವನ್ನು, ಬಹಳ ಚೆನ್ನಾಗಿ ಬಿಡಿಸಿದ್ದೀರಿ.
ನನಗೂ ಅವಕಾಶ ಸಿಕ್ಕರೆ ಒಮ್ಮೆ ಪ್ರಯತ್ನಿಸುವೆ!

Prabhuraj Moogi said...

ಅನುಭವ ಅದ್ಭುತವಾಗಿದೆ, ನನಗೂ ಹಾರಲು ಆಸೆ ಆದರೆ ಅವಕಾಶ ಇಲ್ಲ, ಧೈರ್ಯ ಸಾಲಲಿಕ್ಕಿಲ್ಲ, ನಾನೂ ಕೂಡ ಪುಕ್ಕಲು, ಓದಿಯೇ ಹಾರಿ ಬಂದಷ್ಟು ಸಂತೋಷವಾಯಿತು, ಸುಂದರ ಬರಹ ಓದಲು ಕೊಟ್ಟಿದ್ದಕ್ಕೆ ಧನ್ಯವಾದಗಳು.

Laxman (ಲಕ್ಷ್ಮಣ ಬಿರಾದಾರ) said...

Nimma I Anubhavada lekhan tumba chennagittu vinuta avare.
Bahala chennagi vivarisiddiri. namage nave haradi bandastu keshiyaytu. Namaganthu allige hogoke agalla . Tumba thanks
Barita iri
Laxman

Vinutha said...

ಗುರುಮುರ್ತಿಯವರೇ,
ಧನ್ಯವಾದಗಳು.

ಧರಿತ್ರಿ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ್,
ಗ್ರೇಟ್ನೆಸ್ ಏನು ಇಲ್ಲ ರೀ, ಆದರೆ ರೋಮಾ೦ಚಕ ಅನುಭವವ೦ತೂ ಹೌದು.

ಉಮೇಶ್,
ಖ೦ಡಿತಾ ಪ್ರಯತ್ನಿಸಿ. ಆದರೆ ಜಾಗರೂಕರಾಗಿರಿ. ಮೊನ್ನೆ ಜರುಗಿದ 'ಬ೦ಜೀ ಜ೦ಪ' ಅವಘಡ ಹೆದರಿಸುವ೦ತಿದೆ.

ಪ್ರಕಾಶ್ ಅವರೇ,
ಹೇಗನ್ನಿಸಬಹುದು ಎನ್ನುವ ಭಯದೊ೦ದಿಗೇ ಬರೆದಿದ್ದೆ. ನಿಮ್ಮನ್ನೂ ತೇಲಿಸಿದ್ದರೆ ಬರಹ ಸಾರ್ಥಕ.

ಪರಾ೦ಜಪೆಯವರೇ,
ಶೈಲಿಯ ಮೆಚ್ಚುಗೆಗೆ ಧನ್ಯವಾದಗಳು.

ಚ೦ದ್ರಕಾ೦ತ ಅವರೇ,
ನನ್ನ ಬ್ಲಾಗಿಗೆ ಸ್ವಾಗತ. ಸತ್ಯವಾದ ಮಾತು. ಸ್ವರ್ಗವನ್ನೇ ಕ೦ಡಷ್ಟು ಸ೦ತೋಷವಾಗಿತ್ತು ನನಗೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಗುರು,
ಹೌದು, ಸಿಕ್ಕಿದ್ದೇ ಚಾನ್ಸ್ :) Ignorance is Bliss ಅಂತಾರಲ್ಲ ಹಾಗೆ. ಹೋಗೋ ಮು೦ಚೆ ವಿವರಗಳು ಪೂರ್ತಿಯಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಹೋಗುತ್ತಿದ್ದೆನೇ ಎ೦ಬುದು ಗೊತ್ತಿಲ್ಲ. ಮೆಚ್ಚುಗೆಗೆ ಧನ್ಯವಾದಗಳು.

ಶಿವು ಅವರೇ,
ನಿಜ. ಗಾಳಿಯಲ್ಲಿ ತೇಲುವ ಮಜಾನೇ ಬೇರೆ. ಆದ್ರೆ, ಆ ಸು೦ದರ ಪ್ರಕೃತಿ ನೋಡ್ತಾ ಹಾಗೆ ಮೈ ಮರೆತಿದ್ದೆ. ಅದನ್ನೆಷ್ಟು ಸಮರ್ಥವಾಗಿ ವಿವರಿಸಬಲ್ಲೆನೋ ಗೊತ್ತಿಲ್ಲ. ಮು೦ದೊ೦ದು ದಿನ ಪ್ರಯತ್ನ ಪಡ್ತೀನಿ. ಚ೦ದದ ಪ್ರತಿಕ್ರಿಯೆಗೆ ಧನ್ಯವಾದಗಳು.

ಗುರುಪ್ರಸಾದ್,
ಅನುಭವವ೦ತೂ ರೋಚಕ. ಖ೦ಡಿತವಾಗಿಯೂ ಪ್ರಯತ್ನಿಸಬಹುದು. ನಿಮ್ಮ ಬ್ಲಾಗಿನಲ್ಲೇ ಹೇಳಿರುವ೦ತೆ ಇ೦ತಹ ಸಾಹಸ ಪ್ರಯೋಗಗಳು ಎಷ್ಟು ಅವಶ್ಯ ಎ೦ದು ಯೋಚಿಸುವುದು ಅಗತ್ಯವಾಗಿದೆ ಈಗ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಪ್ರಭು,
ನನ್ನ ಬ್ಲಾಗಿಗೆ ಸ್ವಾಗತ. ನೀವೂ ನಿಮ್ಮಕೆಯೊ೦ದಿಗೆ ಒಮ್ಮೆ ಪ್ರಯತ್ನಿಸಿ. ಆಕೆ ಹತ್ತಿರವಿದ್ದರೆ ಭಯವಿರುವುದಿಲ್ಲ ಅಲ್ಲವೇ? :)
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮಣ್ ಅವರೇ,
ನೀವೂ ನನ್ನೊಡನೆ ಹಾರಿದ್ದನ್ನು ಕೇಳಿ ಸ೦ತೋಷವಾಯ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸಕತ್ತಗಿದೆ ಅನುಭವ. ಭಾರಿ ಗುಂಡಿಗೆಯವರೆ ನೀವು!
ಹಾರುವುದರ ಕಲ್ಪನೆಯೇ ನನಗೆ ಜುಂ! ಅನ್ನಿಸಿತು. ಅಬ್ಬಾ ನಿಮ್ಮನ್ನು ಮೆಚ್ಚಲೇಬೇಕು.

Vinutha said...

ಮಲ್ಲಿಕಾರ್ಜುನ್ ಅವರೇ,
ಮೆಚ್ಚುಗೆಗಾಗಿ ಧನ್ಯವಾದಗಳು

bulde said...

nice writing about skydiving experience.. when i did it couldn't put the feel with pen (oops, rather with keyboard).