ಜನಿಸಿದಂದು ಹೆಣ್ಣುಮಗುವೊಂದು
ಯಾರೂ ಚಿಂತೆ, ದು:ಖಕ್ಕೀಡಾಗದಿರಲಿ
ಹೊರೆಯೆಂಬ ಭಾವ ಬೆಳೆಯಗೊಡದೆ
ಸ್ವಾಭಿಮಾನಿಯಾಗಿ ಬೆಳೆಸುವಂತಾಗಲಿ
ಎಲ್ಲರೂ ವಿದ್ಯಾವಂತೆಯರಾಗಲಿ
ಪಡೆದ ವಿದ್ಯೆಯ ಸದುಪಯೋಗವಾಗಲಿ
ಆರ್ಥಿಕ ಸಬಲೀಕರಣವಾಗಲಿ
ಸಾಮಾಜಿಕ ಹೊಣೆ ಹೊರುವಂತಾಗಲಿ
ಮದುವೆ ಮಾರುಕಟ್ಟೆಯಾಗದಿರಲಿ
ದಕ್ಷಿಣೆಗೆ ವರ ಪಡೆವ ವ್ಯಾಪಾರವಾಗದಿರಲಿ
ಸಂಸಾರ ಸಾಗಿಸುವ ಪಯಣದಲ್ಲಿ
ಸದಸ್ಯರೆಲ್ಲರ ಸಹಕಾರ ದೊರೆಯುವಂತಾಗಲಿ
ಅತ್ತೆಯಂದಿರು ತಾಯಿಯರಂತಾಗಲಿ
ನಾದಿನಿಯರು ಅಕ್ಕತಂಗಿಯರಂತಾಗಲಿ
ಸೊಸೆಯಂದಿರು ಮಕ್ಕಳಂತಾಗಲಿ
ಹೆಣ್ಣಿಗೆ ಹೆಣ್ಣೇ ಶತ್ರುವೆಂಬುದನೃತವಾಗಲಿ
ತಾಳ್ಮೆಯೇ ನಮ್ಮ ತಲೆತೆಗೆಯದಿರಲಿ
ವಾತ್ಸಲ್ಯವೇ ವಿಷವಾಗದಿರಲಿ
ಕರುಣೆಯೇ ಕುಣಿಕೆಯಾಗದಿರಲಿ
ಮಮತೆಯೇ ಮೃತ್ಯುವಾಗದಿರಲಿ
ಮಾತುಗಳು ಮೋಸಮಾಡದಿರಲಿ
ನಂಬಿಕೆಗಳು ಸುಳ್ಳಾಗದಿರಲಿ
ಆಲೋಚನೆಗಳು ಅಪರಾಧವಾಗದಿರಲಿ
ಕ್ಷಮೆಯೇ ಕಟುಕತನವಾಗದಿರಲಿ
ಮಹಿಳಾಸ್ವಾತಂತ್ರ್ಯವೆಂಬುದು ಅಳಿಯಲಿ
ಹುಟ್ಟಿನಿಂದಲೇ ನಮಗದು ದೊರಕಲಿ
ಮಹಿಳಾದಿನವೆಂಬುದು ಕಾಣೆಯಾಗಲಿ
ಎಲ್ಲ ದಿನಗಳೂ ನಮ್ಮವಾಗಲಿ
4 comments:
ವಿನುತಾರವರೆ..
ಮಹಿಳಾ ದಿನಾಚರಣೆಯ ಶುಭಾಶಯಗಳು...
ಮಹಿಳೆಯರ ಎಲ್ಲ ಆಶಯಗಳು..
ಸಮಸ್ಯೆಗಳು.., ಪರಿಹಾರಗಳು...
ಎಲ್ಲವೂ ನಿಮ್ಮ ಕವನದಲ್ಲಿ...
ಚಂದದ ಪದಗಳಲ್ಲಿ ಬಿಂಬಿತವಾಗಿವೆ..
ಸಮಯೋಚಿತ
ಸುಂದರ...
ಕವನಕ್ಕಾಗಿ...
ಅಭಿನಂದನೆಗಳು...
(ನಾನು ನಿಮ್ಮ ಬ್ಲಾಗ್ ಅನುಸರಿಸುತ್ತಿದ್ದರೂ ನಿಮ್ಮ ಹೊಸ ಲೇಖನಗಳು ನನಗೆ ಗೊತ್ತಾಗುತ್ತಿಲ್ಲ..
ತಾಂತ್ರಿಕ ದೋಷವೇ..?)
ಪ್ರಕಾಶ್ ಅವರೇ,
ಧನ್ಯವಾದಗಳು.
(ನನಗೆ dashboard ನಲ್ಲಿ ಎಲ್ಲ ಹೊಸ ಲೇಖನಗಳು ಕಾಣುತ್ತವೆ. ನೀವೂ ಅಲ್ಲಿಯೇ ಗಮನಿಸುತ್ತಿದ್ದೀರೆಂದು ಭಾವಿಸಿದ್ದೇನೆ. ಆದಗ್ಯೂ, ನೀವು ಹೆಚ್ಚೇನು ಮಿಸ್ ಮಾಡಿಕೊಂಡಿಲ್ಲ, ಹಿಂದಿನ ಲೇಖನ ಹೊರತು ಪಡಿಸಿ :) )
ವಿನುತಾ ಮೇಡಮ್,
ಹೆಣ್ಣಿನ ಬಗ್ಗೆ ಬರೆದ ಕವನ ಚೆನ್ನಾಗಿದೆ...
ಅದರಲ್ಲಿ ನೀವು ಬಯಸಿದ ಎಲ್ಲವೂ ಸಿದ್ಧಿಸಲಿ ಅಂತ ಆರೈಸುತ್ತೇನೆ...ಧನ್ಯವಾದಗಳು...
ಶಿವು..
ನಿಮ್ಮೆಲ್ಲರ ಹಾರೈಕೆಗಳೇ ನಮಗೆ ಶ್ರೀರಕ್ಷೆ.
ಧನ್ಯವಾದಗಳು ಶಿವು ಅವರಿಗೆ.
Post a Comment