skip to main |
skip to sidebar
ಅಂತರ
ಮುಂಜಾನೆಯ ಹಿಮದಲ್ಲಿ
ಉಸಿರಿನ ಹೊಗೆಯಲ್ಲಿ
ಮರಗಟ್ಟುವ ಚಳಿಯಲ್ಲಿ
ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ
ಭುವಿ ತಲುಪಲು ರವಿತೇಜನ ಪರದಾಟ
ಮಂಜಿನೊಡನೆ ಬೆಳಕಿನ ಸರಸ
ಹಸಿರು ಹುಲ್ಲಿಗೆಂತೊ ಸಂತಸ
ನೀರ ಹನಿಗಳಲ್ಲೇನೊ ಉಲ್ಲಾಸ
ಹುಲ್ಲಿನ ಅಂಚಿನಲ್ಲೊಂದು ಕತ್ತಿಯ ಛಳಪು
ನೀರ ಹನಿಗಳಲ್ಲಿ ವಜ್ರದ ಹೊಳಪು
ಸೀಳಿ ಬಂದಿರಲು ಸೂರ್ಯ ರಶ್ಮಿ
ಮುಗಿಲೆತ್ತರದ ದಟ್ಟ ಮರಗಳ,
ಹರಡಿದ ಮಂಜಿನ ಪದರಗಳ
ಹೊನ್ನಿನ ತೇರಿನ ಹಾದಿಯದು ಕವಿಗೆ
ಬರಿಯ ಟಿಂಡಾಲ್ ಪರಿಣಾಮವದು ವಿಜ್ಞಾನಿಗೆ
ಹಕ್ಕಿಗಳ ಚಿಲಿಪಿಲಿ ಕಲರವಗಳು
ಟೊಂಗೆಗಳಿಗೆ ಪೋಣಿಸಿದ ಗಾಜಿನ ಮಣಿಗಳು
ಅದರೊಳಗೆ ತೂರಿ ಬಂದ ಸಪ್ತವರ್ಣಗಳು
ನಿರ್ಮಿಸೀತೆ ಮಾನವನ ಕೃತ್ರಿಮ ಜ್ಞಾನ
ಪ್ರಕೃತಿಯ ನೈಜ ಸುಂದರತೆಯ ಸೊಬಗನ್ನ?
ಅಸ್ತಂಗತನಾಗಲು ಅರುಣ
ಸರ್ವಸ್ವವೂ ನಿರ್ವರ್ಣ
ಶೀತಲ ಗಾಳಿಯ ಸಂಚಲನ
ಭಯಾನಕ ಭೀಭತ್ಸ ರಸಗಳ ಆಂದೋಲನ
ಇರುಳ ಸೌಂದರ್ಯದಳೊಂದು ಕ್ರೌರ್ಯದ ಸಮ್ಮಿಲನ
ದೂರ ಸರಿದಿರಲು ಇಳೆ ರವಿಯಿಂದ
ಮೂಡಿದೆ ಇಂತೊಂದು ವೈಪರೀತ್ಯ
ಆಕ್ಷೇಪಿಸಿತ್ತು ಮನ ಆದಿತ್ಯನ ಸುಡುಬಿಸಿಲೆಂದು
ಇಂದು ಬಯಸಿ ಬೇಡಿದೆ ಆತನ ಸಾನ್ನಿಹಿತ್ಯ
ವಸ್ತುವೊಂದನ್ನು ಕಳೆದುಕೊಂಡಾಗಲೆ ತಿಳಿಯುವುದೆ ಅದರ ಬೆಲೆ?
-ವಿನುತ
6 comments:
೨೧ ನೆಯ ಶತಮಾನದಲ್ಲಿ
ಗಣಕ ಯಂತ್ರದ ಯುಗದಲ್ಲಿ
ಆಂಗ್ಲ ಭಾಷೆಯ ಪ್ರಭಾವದ ಮಧ್ಯದಲ್ಲಿ
ಸಿನಿಮಾ ಹಾಡುಗಳ ಹಾವಳಿಯಲ್ಲಿ
ಇಂತಹ ಸುಂದರ ಕನ್ನಡ ಪದಗಳನ್ನೊಳಗೊಂಡಿದ ಕವನ
ಆ ಕವಯತ್ರಿಗೆ ನನ್ನ ನಮನ ...
BTW, I am Pratibha's friend and bumped onto your blog when I was reading her blog.
ಕನ್ನಡವೆಂದು ಸುಂದರ, ಸರಳ
ಆದರೂ ಓದಲಾಗದವರೆ ಬಹಳ
ಓದುಗರ ಸಂಖ್ಯೆ ವಿರಳ
ಹೀಗಿರಲು, ಕವನಕ್ಕೊಂದು ಕವನದ ಪ್ರತಿಕ್ರಿಯೆ
ಸಂತಸ ತಂದಿದೆ ನಿಮ್ಮ ಈ ಪ್ರಕ್ರಿಯೆ
ಧನ್ಯವಾದಗಳು
"ಕನ್ನಡವೆಂದು ಸುಂದರ, ಸರಳ" ವಾಕ್ಯವು "ಕನ್ನಡವೆಂದೂ ಸುಂದರ, ಸರಳ" ಆಗಿರಬೇಕಲ್ಲವೇ ?? ಅಥವ "ಕನ್ನಡ ಭಾಷೆಯೆಂದೂ ಸುಂದರ ಸರಳ" ಎಂದಾಗಿರಬೇಕಲ್ಲವೇ ??
ಈ ಅತಿ ಸೂಕ್ಷ್ಮ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದಕ್ಕೆ ಮನ್ನಿಸಿ ...
ನಿಮ್ಮ ಒಕ್ಕಣೆ ಸರಿಯಾಗಿದೆ, ಆದರೆ ನನ್ನ ತಪ್ಪು ಏನೆಂದು ಸರಿಯಾಗಿ ಕಾಣಿಸ್ತಾ ಇಲ್ಲ. ಹೃಸ್ವ ಮತ್ತು ಧೀರ್ಘ ಗಳ ಈ ತರ್ಕ ನಾನೂ ನಡೆಸಿದೆ, ಉತ್ತರ ಹೇಳಿದರೆ ಸಹಾಯವಾಗತ್ತೆ :) ಆದರೆ ಬರೆಯ ಹೊರಟಿದ್ದು ’ಕನ್ನಡವೆಂಬುದು’ ಬರೆದದ್ದು ’ಕನ್ನಡವೆಂದು’.
ಕ್ಷಮೆ ಕೇಳುವ ತಪ್ಪೇನೂ ನಡೆದಿಲ್ಲ. ಸೂಕ್ಷ್ಮ ವಿಷಯಗಳೆ ಆಘಾತಕಾರಿ ಪರಿಣಾಮಗಳನ್ನು ತರುವುದು. ಹಾಗಾಗಿ ಅವುಗಳ ಕಡೆ ಗಮನ ಅತ್ಯಗತ್ಯ :)
"ಕನ್ನಡವೆಂದೂ" ಎಂಬುದನ್ನು "ಕನ್ನಡವು ಎಂದೂ" ಎನ್ನುವ ಅಭಿಪ್ರಾಯ ನಮ್ಮದಾಗಿತ್ತು ...
sogasaagide...kavithe mattu meelina vimarshe :)
Post a Comment