ಸುರಿದಿರಲು ಮಂಜಿನ ಹೂಮಳೆ
ಇಳೆಯಾಗಿದೆ ಬಿಳಿಹತ್ತಿಯ ಹಾಳೆ
ಕಾಣದಾಗಿದೆ ನಡೆದಾಡುವ ಹಾದಿ
ಆದ್ಯಂತವಾಗಿದೆ ಹಿಮದ ವಾರಿಧಿ
ನಾಕಂಡ ಮೊದಲ ಹಿಮಪಾತ
ಆದ ಸಂತೋಷ ಅಪರಿಮಿತ
ಹಿಡಿಯ ಹೊರಟೆ ಸೌಂದರ್ಯದ ಸೆರೆ
ಕಳಚಿ ಕ್ಯಾಮೆರ ಕಣ್ಣಿನ ಪೊರೆ
ಹಿಮರಾಜ ಸರಿಯಲು ನೇಪಥ್ಯಕ್ಕೆ
ಧುತ್ತೆಂದು ಧಾಳಿ ಹಿಮದಾಟಕೆ
ಅದೆಂತು ಚೆಲ್ಲಾಟ, ಹಿಮದೆರಚಾಟ
ಮರುಕಳಿಸಿತ್ತು ಬಾಲ್ಯದ ಹುಡುಗಾಟ
ಒತ್ತಿದರೆ ಅಂಟುವ, ಮುಟ್ಟಿದರೆ ಕರಗದ
ಮಂಜಿಗೊಂದು ಕಲ್ಪನೆಯ ರೂಪ,
ಹಿಮ-ಮಾನವ-ಮಾನಸಿಯರ ಪ್ರತಿರೂಪು
ತಂದಿತ್ತು ಮರಳ ಕಪ್ಪೆಗೂಡಿನ ನೆನಪು
ಕೈ-ಕಾಲುಗಳು ಕಳೆದುಕೊಳ್ಳಲು ಅರಿವಳಿಕೆ
ಮೂಡಿತಾಗ ತಿಳುವಳಿಕೆ
ಮಿತಿಮೀರಿದ ಗಮ್ಮತ್ತು, ಪ್ರಾಣಕ್ಕೇ ಕುತ್ತು
ಸುಂದರ ಪ್ರಕೃತಿಯಾದೀತು ವಿಕೃತಿ
ಘನೀಭವಿಸಿತ್ತು ಹಿಮ; ಮರದಲ್ಲಿ, ನೆಲದಲ್ಲಿ
ಮರವು ಸುಂದರ, ನೆಲವು ಭೀಕರ
ಹೆಜ್ಜೆಗೊಂದು ಕಂದರ, ದಾರಿ ಅಗೋಚರ
ತಪ್ಪಿದರೆ ಆಯಾಮ, ಊಹಿಸಲಾಗದು ಪರಿಣಾಮ
ಹಸಿ ಸೌದೆ ಸುಟ್ಟರೂ ಇಲ್ಲದಷ್ಟು ಹೊಗೆ,
ಉಸಿರಾಡಲು; ಉಸಿರುಗಟ್ಟಿಸುವ ಚಳಿಗೆ
ಉರಿಯುತ್ತಿದ್ದ ಕಂಗಳಲ್ಲಿ ಒತ್ತರಿಸಿತ್ತು ಅಳು
ನೆನಪಾಗಲು ಅಮ್ಮನ ಬೆಚ್ಚನೆ ಮಡಿಲು
ಬೆಚ್ಚನೆ ದಿರಿಸಿನೊಳಗೊಂದು ದಿರಿಸು,
ಎರಡೆರಡು ಕಾಲ್ಚೀಲ, ಕೈ ಗ್ಲವಸು,
ಇಷ್ಟಾದರೂ ನಡುಗುತ್ತಿದ್ದ ದೇಹ; ಮೂಡಿಸಿತ್ತು
ಯೋಧರು ಮನುಷ್ಯರೇ ಎಂಬ ಸಂದೇಹ
ಎದೆಗುಂದದೆ ಸೃಷ್ಟಿಯ ವೈಪರೀತ್ಯಗಳಿಗೆ
ಕಾವಲಾಗಿಹರು ದೇಶದ ಭದ್ರತೆಗೆ
ಆದರ್ಶವಾಯಿತವರ ಜೀವನ
ಸಲ್ಲಿಸಿದೆನೊಂದು ಕೃತಜ್ಞತಾಪೂರ್ವಕ ನಮನ
-ವಿನುತ
Who Will Listen?
1 week ago
5 comments:
ಚೆನ್ನಾಗಿದೆ ... ನಾನು ಕೂಡ ಕಳೆದ ವಾರ ಒಂದು ಚುಟುಕ ಬರೆದಿದ್ದೆ ...
ಮೈ ಕೊರೆಯುವ ಚಳಿಯಿರಲು;
ಹಿಮವು ಎಡಬಿಡದೆ ಸುರಿಯುತಿರಲು;
ಅವಳ ನೆನಪುಗಳು ಕಾಡುತಿರಲು;
ಅವಳ ಸನಿಹವನು ಬಯಸುತಿರಲು;
ಮದ್ಯವೇ ಬೇಕಿಲ್ಲ ಏರಲು ಅಮಲು ...
ಅಂದ ಹಾಗೆ , ನೀವು ಸದ್ಯಕ್ಕಿರುವ ದೇಶ ಮತ್ತು ಸ್ಥಳ ??
ತುಂಬಾ ಸೊಗಸಾಗಿ ಬರೆದಿದ್ದೀರಿ. ಕಲ್ಪನೆಯೊ? ಸ್ವಾನುಭವವೊ? :)
ಕಳೆದ ಬಾರಿ ನಿಮ್ಮನ್ನು ಆಶುಕವಿ ಎಂದರೆ ಇಲ್ಲವೆಂದಿರಿ?
ಸದ್ಯಕ್ಕೆ ನಾನಿರುವ ದೇಶ: ಅಮೆರಿಕ
ಸ್ಥಳ: ರೆಡ್ಮಂಡ್, ವಾಶಿಂಗ್ಟನ್
ನನ್ನ ಕಲ್ಪನೆ .. ಆಶು ಕವಿ ಅಲ್ಲ ... ಅಶು ಕವಿತ್ವ is like instant coffee ... ಇದು ಕಳೆದ ವಾರ ಬರೆದ ಕವನ ... i know ರೆಡ್ಮಂಡ್ for microsoft research center...
ಕಳೆದ ವಾರಕ್ಕೆ ಅದು ಆಶುಕವಿತೆ :) ಅಂತು ಕವಿ (ಆಶುಕವಿಯಲ್ಲದಿದ್ದರೂ) ಅನ್ನುವುದನ್ನ ಒಪ್ಪಿಕೊಂಡಿರಿ :)
ನೀವಿರುವ ಸ್ಥಳ?
ಸದ್ಯಕ್ಕೆ ಒಟ್ಟಾವ, ಕೆನಡಾ ...
Post a Comment