Tuesday, January 27, 2009

ನಾವು ಹೀಗೇ ಇರಬೇಕೆ?

ಹೀಗೆ ಕನ್ನಡದಂಕಣಗಳ ಲೋಕದಲ್ಲಿ ಸಂಚರಿಸುತ್ತ ’ನಾವೇಕೆ ಹೀಗೆ?’ ಎಂಬ ನಿಲ್ದಾಣದಲ್ಲಿಳಿದೆ. ಅಲ್ಲೊಂದು ಪದದ ಪ್ರಸ್ತಾವವಿತ್ತು ಮತ್ತು ಅದರ ಪ್ರಯೋಗದ ಮೇಲೆ ಅಸಮಾಧಾನವಿತ್ತು - ’ವಿಕಲಚೇತನರು’. ಅದೇ ಅಂಕಣದ ಒಕ್ಕಣೆಗಳಲ್ಲಿ ’ಆತ್ಮಹತ್ಯೆ’ ಎಂಬ ಪದವನ್ನೂ ಕೂಡ ಇದರ ಸಾಲಿಗೆ ಸೇರಿಸಲಾಗಿತ್ತು. ಅಂಗವಿಕಲರ ಬಗ್ಗೆ ಸಮಾಜದ ದೃಷ್ಟಿಕೋನದ ಕುರಿತು ಅಲ್ಲಿ ತೀವ್ರ ವಿರೋಧಗಳಿದ್ದವು. ನನಗೆ ಬರೆದವರ ಪರಿಚಯವಿಲ್ಲ. ಸಂದರ್ಭದ ಅರಿವಿಲ್ಲ. ಹಾಗಾಗಿ ಮುಂದಿನ ಆಲೋಚನೆಗಳಿಗೆ ಆ ಅಂಕಣ ಪೂರಕವೇ ಹೊರತು, ಅದಕ್ಕೆ ನನ್ನ ಪ್ರತಿಕ್ರಿಯೆಗಳಲ್ಲ.

ಚೇತನವೆಂದರೇನು? ನಮ್ಮ ದೇಹ ಸಾಮರ್ಥ್ಯದೊಂದಿಗೆ ಇರುವ, ವರ್ಣಿಸಲಾಗದ ಮತ್ತೊಂದು ಶಕ್ತಿ. ವೈದ್ಯ ಶಾಸ್ತ್ರಕ್ಕೆ ನಿಲುಕದ ಚೈತನ್ಯ. ಅದು ಯಾರ ಅರಿವಿಗೆ ಬರುವುದಿಲ್ಲವೋ, ಬಂದಿಲ್ಲವೋ ಅವರು ಅದರಿಂದ ವಂಚಿತರೇ ಸರಿ. ವಂಚಿತರು ವಿಕಲರಾದರೆ, ಅಂತಹವರು ’ವಿಕಲಚೇತನ’ರೇ ಸರಿ. ನಾನಂತೂ ಇಂತಹ ಪದಪ್ರಯೋಗಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಆದರೆ ಅದನ್ನು ಯಾರಿಗೆ ವಿಶೇಷಣವಾಗಿ ಬಳಸಬೇಕೆನ್ನುವುದನ್ನು ಅರಿತು ಉಪಯೋಗಿಸಬೇಕಷ್ಟೆ!!! ’ಆತ್ಮ’ ವೂ ಇಂಥದೇ ಒಂದು ಚೇತನವಷ್ಟೆ. ’ಆತ್ಮಹತ್ಯೆ’ ಮಾಡಿಕೊಳ್ಳುವವರು ತಮ್ಮ ಈ ಅಂತ:ಶಕ್ತಿಯನ್ನು ಎಂದೋ ಕಳೆದುಕೊಂಡಿರುತ್ತಾರೆ ಇಲ್ಲವೇ ಕೊಂದುಕೊಂಡಿರುತ್ತಾರೆ. ’ಆತ್ಮ’ ಎಂದೋ ಹತ್ಯೆಗೆ ಒಳಗಾಗಿರುತ್ತದೆ. ಆದರೆ ಅದು ಸ್ವಯಂ/ಪರೋಪಕಾರವೊ ಎಂದು ತಿಳಿದಿಲ್ಲದಿರುವಷ್ಟೆ. ನಂತರ ಹೋಗುವುದು ಶಾರೀರಿಕ ಪ್ರಾಣ ಮಾತ್ರ. ಇಂತಹವರಿಗೆ ಸಮಾಜದ ಅಭಿಪ್ರಾಯ ಹೇಗೆ ಮಾನ್ಯವಾಗುತ್ತದೆ?

ಸಮಾಜವೆಂದರೇನು? Cambridge ನಿಘಂಟಿನಲ್ಲಿ ’Society’ ಎಂಬ ಪದಕ್ಕೆ ಸಿಕ್ಕಿದ ಅರ್ಥ - " a large group of people who live together in an organized way, making decisions about how to do things and sharing the work that needs to be done". ಹಾಗಾಗಿ, ಸಮಾಜ ಅಂದರೆ ನಾವೇ. ಸಮಾನ ಆಲೋಚನೆಗಳಿರುವವರ ಗುಂಪು. ಆದರೆ ನಾವು ಯಾವುದೇ ಮಾತುಗಳನ್ನು, ಹೆಚ್ಚಾಗಿ ಪ್ರತಿಕ್ರಿಯೆಗಳನ್ನು (ಹೌದು, Reactions not Responses) ಪರಿಗಣಿಸುವಾಗ, ನಮ್ಮಂತಲ್ಲದ ಆಲೋಚನೆಗಳ ಗುಂಪಿಗೆ ಸೇರಿರುವವರ, ಅಂದರೆ ನಮ್ಮದಲ್ಲದ ಸಮಾಜವನ್ನೇಕೆ ಗಣನೆಗೆ ತೆಗೆದುಕೊಳ್ಳುತ್ತೇವೆ? ಲೋಕೋ ಭಿನ್ನ: ರುಚಿ: ಐದೂ ಬೆರಳುಗಳು ಸಮಾನವಾಗಿಲ್ಲ. ಅದಕ್ಕಾಗಿಯೇ ಇಂದು ಕೈ ಕೈಯಾಗಿ ತನ್ನ ಕೆಲಸ ಸಾಗಿಸಿದೆ. ಏನ ಹೇಳಲು ಹೊರಟಿಹೆನೆಂದರೆ, ಒಂದು ಸಮೂಹ ಎಂದಿರುವಾಗ, ಎಲ್ಲ ತರಹದ ಜನರೂ ಇರುತ್ತಾರೆ. ನಿಂದಕರು ಬೇಕಯ್ಯಾ ಹಂದಿಗಳಂತೆ ಎಂದಿಲ್ಲವೇ ದಾಸವಾಣಿ. ಆದರೆ ಹಂದಿಗಳು ಎಲ್ಲಿರಬೇಕೋ ಅಲ್ಲಿರಬೇಕು. ನಾವೂ ಸಹ ಹಂದಿಗಳನ್ನು ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರಬೇಕು.

ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಗಳಿಂದ ಏನೆಲ್ಲಾ ಕಲಿತಿಲ್ಲ? ಅವು ನಮಗೆ ಬೇಕಿಲ್ಲದ ಆಚರಣೆಗಳಾಗಿದ್ದರೂ!! ನಮಗೆ ಅಗತ್ಯವಿರುವ ಶಿಸ್ತು, ಶುಚಿತ್ವ ಮತ್ತು ಸೃಜನಶೀಲತೆಯನ್ನೇಕೆ ಕಲಿಯಲು ತಯಾರಿಲ್ಲ? ಹೌದು. ಇಲ್ಲಿ (ಅಮೆರಿಕ) ಅಂಗವಿಕಲರಿಗೆ ಯಾರೂ ಕರುಣೆ, ಸಹಾನುಭೂತಿ ತೋರುವುದಿಲ್ಲ. ಕಾರಣ? ಅವರು ಕೇಳುವುದಿಲ್ಲ. ಅವರಿಗಾಗೇ ಹಲವು ಸೌಲಭ್ಯಗಳಿವೆ. ಅವರು ಅವುಗಳನ್ನು ತಮ್ಮ ಹಕ್ಕು ಎನ್ನುವ ಧೋರಣೆಯಲ್ಲಿ ನೋಡುತ್ತಾರೆ/ಕೇಳುತ್ತಾರೆ. ನಾವಿಲ್ಲಿ ಅವರಿಗೆ ಸಹಾಯ ಮಾಡಲು ಹಿಂಜರಿಯುತ್ತೇವೆ. ಕಾರಣ, ಅವರಿಗದು ತುಂಬಾಸಲ ಬೇಕಿರುವುದಿಲ್ಲ. ಬೇಕಾದಲ್ಲಿ ಅವರೇ ಕೇಳುತ್ತಾರೆ. ಅದು ಅವರು ನೋಡುವ ರೀತಿ. Nora Robert ಳ ಮಾತೆಷ್ಟು ಪ್ರಸ್ತುತ - "If you don't go after what you want, you'll never have it. If you don't ask, the answer is always no. If you don't step forward, you're always in the same place."

ಗಾಂಧಿಯವರ ಒಂದು ಮಾತು ನೆನಪಾಗುತ್ತದೆ "Be the change you wish to see in the World". ನಮ್ಮ ದೃಷ್ಟಿಯಲ್ಲಿ ನಾವು ಮೊದಲು ಎದ್ದು ನಿಲ್ಲಬೇಕು. ಎಲ್ಲರೊಳೊಂದಾಗಬೇಕು. ನನ್ನಲ್ಲೇನೋ ಊನವಿದ್ದರೂ ನಾನು ಎಲ್ಲರಂತಿದ್ದೇನೆ, ಅದಕ್ಕಾಗಿ ನನ್ನನ್ನು ಪರಿಗಣಿಸಿ ಎಂಬ ಭಾವನೆಗಿಂತ, ನನ್ನನ್ನು ನಾನಾಗಿರಲು ಬಿಡಿ, ನಾನಿರುವುದೇ ಹೀಗೆ ಎಂಬ ಧೋರಣೆಯಿಂದ ಎದುರಿಸಬೇಕಾಗಿದೆ. ನ್ಯೂನ್ಯತೆಯನ್ನು ನಮ್ಮ ದೃಷ್ಟಿಯಿಂದ ಮೊದಲು ಹೊಡೆದೋಡಿಸಬೇಕಿದೆ. ಇಂದು ಎಲ್ಲ ಅಂಗಾಂಗಗಳು ಸ್ವಸ್ಥಾನದಲ್ಲಿದ್ದು, ಸ್ವಕಾರ್ಯಗಳನ್ನ ಸ್ವಂತವಾಗಿ ನೆರವೇರಿಸಿಕೊಂಡು ಹೋಗುತ್ತಿರುವ ಜನರಲ್ಲಿ, ಅವುಗಳು ಇಲ್ಲದಿದ್ದರೆ? ಎಂಬ ಕಲ್ಪನೆಯೇ ಅಸಾಧ್ಯವಾಗಿರುವಾಗ, ಒಮ್ಮೆಗೆ ಕೈಯಿಲ್ಲದವಳು ಕಾಲಲ್ಲಿ ಬರೆಯುತ್ತಾಳೆಂದರೆ ಅದು ಮೊದಲಿಗೆ ಪವಾಡವಾಗೇ ಕಾಣುವುದು. ಆದರದು ಸ್ವಪ್ರಯತ್ನ, ಛಲ, ಸಾಧನೆ ಎಂದು ತೋಚಲವರಿಗೆ ತಿಳುವಳಿಕೆಯಿರಬೇಕು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ, ಎಲ್ಲ ಸರಿಯಿರುವವನಿಗೆ, ಇಲ್ಲದುದರ ಮೌಲ್ಯ ಹೇಗೆ ತಾನೆ ತಿಳಿದೀತು? ವಸ್ತುವೊಂದನ್ನು ಕಳೆದುಕೊಂಡಾಗಲೇ ತಿಳಿಯುವುದದರ ಬೆಲೆ. ಅದೇ ದುರಂತ!!!

ಹೀಗೊಂದು ಬೀಳ್ಕೊಡುಗೆ ಔತಣಕೂಟವಿತ್ತು. ಸಹುದ್ಯೋಗಿಗಳು ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ ಗೆ ನನ್ನನ್ನು ಸಾಗ ಹಾಕುವ ಸಂಭ್ರಮದಲ್ಲಿದ್ದರು!! ಅಂದೊಂದು ಭೂಕಂಪ (ಚೀನ, ಮೇ ೨೦೦೮) ಸಂಭವಿಸಿತ್ತು. ಮಾತಿನ ಮಧ್ಯೆ ಈ ವಿಷಯ ಕೂಡ ಪ್ರಸ್ತಾಪವಾಯಿತು. ಒಬ್ಬರು "ಬಿಡಿ ಭೂಮಿ ಭಾರ ಕಮ್ಮಿಯಾಗತ್ತೆ, ಶತ್ರು ದೇಶದವರಲ್ಲವೇ?" ಎಂದರು. ಅದಾವ ನೆನಪು ಒತ್ತರಿಸಿತ್ತೊ ನಾಕಾಣೆ, ’ಹೌದು, ಸಾವು ಸಾವೇ. ನಮ್ಮವರಿಗಾದಾಗ ಮಾತ್ರ ಅದರ ತೀವ್ರತೆ ತಿಳಿಯೋದು" ಅಂದು ಬಿಟ್ಟೆ. ಒಂದು ಕ್ಷಣ ಸ್ತಭ್ದ ವಾತಾವರಣ. ಯಾರೋ ಚೇತರಿಸಿಕೊಂಡು, 'Cool down, Have coke..' ಅಂದರು. ಧನ್ಯವಾದಗಳೆಂದು ನಯವಾಗಿ ಪಕ್ಕಕ್ಕೆ ಸರಿಸಿದೆ. ಅಷ್ಟು ಮಾತ್ರ ಹಾಸ್ಯ ಸಹಿಸಲಾರದಷ್ಟು ತಾಳ್ಮೆಗೆಟ್ಟೆನೆ ಎಂದು ಅದೇ ಗುಂಗಿನಲ್ಲಿ ಹಳೆಯ ಕಡತಗಳನ್ನು ಕೆದಕುತ್ತಿದ್ದಾಗ, ಸರ್ವಜ್ಞನ ಈ ವಚನ ಕಣ್ಣಿಗೆ ಬಿತ್ತು,

ಶ್ವಾನ ಬಾಲವದು ಡೊಂಕು ಹೀನ ಮನವದು ಡೊಂಕು

ಕಾನನದಿ ಹರಿವ ನದಿ ಡೊಂಕು, ಪಿಸುಣಿಗನು

ಶಾನೆ ಡೊಂಕೆಂದ ಸರ್ವಜ್ಞ

ಸಂದರ್ಭಗಳು ಎಲ್ಲರಿಗೂ ಒಂದೇ ಅನುಭವವನ್ನು ನೀಡುವುದಿಲ್ಲ. ನೀಡಿದರೂ, ಅದರಿಂದ ಕಲಿಯುವ ಪಾಠ, ಅದಕ್ಕೆ ನಮ್ಮ ಸ್ಪಂದನೆ (Response not Reaction) ಭಿನ್ನವಾಗಿರುತ್ತದೆ. ಗಾಂಧಿ, ನೆಲ್ಸನ್ ಮಂಡೇಲ, ಮಾರ್ಟಿನ್ ಲೂಥರ್ ಕಿಂಗ್ ಇವರುಗಳಿಗೂ ಮೊದಲೇ ವರ್ಣಭೇದ ಇತ್ತು. ಯಾರು ಪ್ರಶ್ನಿಸಿರಲಿಲ್ಲವಷ್ಟೆ. ಪ್ರಶ್ನೆ ಕೇಳದಿರಲು, ಉತ್ತರ ’ಇಲ್ಲ’.

ಬಹುಶ: ಇವೆಲ್ಲವು ಕೇವಲ ಹೇಳುವುದಕ್ಕಾಗಿಯೇ ಇರುವ ಮಾತುಗಳು, ಆಡುವುದು ಬಹಳ ಸುಲಭ ಎನಿಸಿದರೆ ತಪ್ಪೇನಿಲ್ಲ. ಆದರೆ ಅಂಗವಿಕಲರೊಡನೆ, ಆತ್ಮದ ಹತ್ಯೆಯಾಗಿದ್ದರೂ ಬದುಕಿರುವವರೊಡನೆ (ಅಂಗವಿಕಲ, ಈ ಪದವೂ ಎಷ್ಟು ಆಭಾಸವೆನಿಸುತ್ತದೆ. "Energy can neither be created nor be destroyed, But can be changed from one form to another" ಎನ್ನುವ ಮೂಲ ಭೌತಶಾಸ್ತ್ರದ ಸಿದ್ಧಾಂತದಂತೆ, ಯಾವುದೋ ಒಂದು ಅಂಗ ಊನವಿದ್ದರೂ, ಇನ್ಯಾವುದೋ ರೂಪದಲ್ಲಿ ವ್ಯಕ್ತಿಯ ಚೈತನ್ಯ ಇಮ್ಮಡಿಸಿರುತ್ತದೆ. ನ್ಯೂನ್ಯತೆಯನ್ನು ನೋಡಿ ಅಂಗವಿಕಲ ಎನ್ನಬಹುದಾದರೆ, ಹೆಚ್ಚಿನ ಸಾಮರ್ಥ್ಯವನ್ನು ನೋಡಿ ಏನೂ ಹೇಳಲಾರೆವೆ? ಸೂಕ್ತ ಪದ ತಿಳಿದಿದ್ದರೆ ತಿಳಿಸಿ) ಮಾತನಾಡುವುದು ಕಷ್ಟಸಾಧ್ಯ. ಎಲ್ಲ ಸರಿಯಿರುವವರು, ಏನೋ ಸರಿಯಿಲ್ಲ ಎಂದು ಬಲವಾಗಿ ನಂಬಿದವರೊಡನೆ, ಸತ್ಯ ಕಣ್ಣಿಗೆ ರಾಚುತ್ತಾ ಕುಳಿತಿರಲು, ಯಾವ ನೈತಿಕ ಆಧಾರದ ಮೇಲೆ, ನೀನು ಹೀಗಿರು ಎಂದು ಹೇಳಲಾಗುತ್ತದೆ? ಆದರೂ, ಅಂಗವಿಕಲರ ಜೊತೆಗಿನ ತೀರ ಹತ್ತಿರದ ಒಡನಾಟ, ಆತ್ಮಹತ್ಯೆಯಂತಹ ಘಟನೆಗಳ ಒಳಹೊಕ್ಕು ಬಂದಿರುವ ಅನುಭವದೊಂದಿಗೆ, ಅವರ ಮಾತುಗಳ ದನಿಯಾಗಿ, ನೋಟದ ದೃಷ್ಟಿಯಾಗಿ, ಹೀಗನ್ನಿಸುವುದು ತರವೇ.

ಪರಿವರ್ತನೆ ಜಗದ ನಿಯಮ !!! ಜೀವವಿಕಾಸದ ಉದಾಹರಣೆಯನ್ನೇ ತೆಗೆದುಕೊಂಡರೂ, ನಮ್ಮ ಆ ಪೂರ್ವಿಕ ’......pithecus' ಗಳಿಗೆ ನಮ್ಮನ್ನು ಹೋಲಿಸಿಕೊಂಡಾಗ, ಒಂದು ಕ್ರಮದಲ್ಲಿ ಬೆಳೆದು ಬಂದಿದ್ದೇವೆ. ಕಾಲಾಂತರದಲ್ಲಿ ಉಪಯೋಗಿಸದ ಎಷ್ಟೋ ದೇಹದ ಭಾಗಗಳು ಇಂದು ನಮ್ಮಲ್ಲಿ ನಶಿಸಿ ಹೋಗಿವೆ. ಹಾಗೆಯೆ ಕೆಟ್ಟದ್ದನ್ನು, ನಕಾರತ್ಮಕವಾದದ್ದನ್ನು ಬಿಟ್ಟು ಕೇವಲ ಒಳ್ಳೆಯದಷ್ಟನ್ನೆ ಒಳಗೆ ತೆಗೆದುಕೊಳ್ಳುವ ಶೋಧಕವೊಂದನ್ನು ನಾವು ಅಳವಡಿಸಿಕೊಂಡರೆ, ಮುಂದೊಂದು ದಿನ ಉಪಯೋಗಿಸದ ಕಾರಣ ಕೆಟ್ಟದೆಂಬುದು ಕಾಣೆಯಾಗಬಹುದು. ’IDEAL’ ನಳೊಂದು ’IDEAL' ಸ್ಥಿತಿ ಇದು. ಬರೆಯುವಾಗ ಇದು ಸಾಧ್ಯವೆ? ಎಂಬ ಅಪನಂಬಿಕೆಯ ಮಾಗಿ ಗಾಳಿ ನನ್ನ ಕೂದಲನ್ನು ಕೊಂಕಿಸಿ ಸಾಗಿತು. ಅಷ್ಟು ಮಾತ್ರ ಅವಿಶ್ವಾಸ, ಅಪನಂಬಿಕೆ ನಮ್ಮಲ್ಲಿ ಮೈಗೂಡಿದೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ, ಎಂಬಂತೆ, ಕೆಟ್ಟದ್ದು ಒಳ್ಳೆಯದಕ್ಕಿಂತ ಬೇಗ ಪರಿಣಾಮ ಬೀರುತ್ತದೆ. ಕೆಟ್ಟದ್ದಕ್ಕೆ ಒಗ್ಗಿಕೊಂಡಿದ್ದೇವೆ. ಸುಂದರ ಸಮಾಜದ ಕನಸನ್ನೂ ಕಾಣಲಾರದೆಯೇ???

2 comments:

ತೇಜಸ್ವಿನಿ ಹೆಗಡೆ- said...

ವಿನುತ ಅವರೆ,

ನಾವೇಕೆ ಹೀಗೆ? ಬ್ಲಾಗ್‌ನಲ್ಲಿ ಒಂದು ಲೇಖನವನ್ನು ಮರು ಓದುತ್ತಿರುವಾಗ ನಿಮ್ಮ ಲಿಂಕ್ ಸಿಕ್ಕಿತು. ನಿಮ್ಮ ಈ ಲೇಖನ ತುಂಬಾ ಗಾಢವಾದ ಪರಿಣಾಮವನ್ನು ಬೀರಿತು. ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಅಂಗವಿಕಲರನ್ನು ಅವರ ಪಾಡಿಗೆ ಬಿಡುವ ಮನೋಭಾವವನ್ನು ಆಶಿಸುವುದು ತುಂಬಾ ದೂರದ ಆಶಯ ಬಿಡಿ.(ಇದರ ಅನುಭವ ನನಗೆ ಬಹಳಷ್ಟು ಆಗಿದೆ.. ಆಗುತ್ತಲೂ ಇದೆ.) ತಮ್ಮ ಹಕ್ಕಿಗಾಗಿ ಅವರು ಹೋರಾಡುವುದನ್ನೂ ಸಹಿಸದ ಸಮಾಜ ತಮ್ಮೊಂದಿಗೆ ಇಂತಹವರನ್ನು ಬಾಳ್ವೆಗೆ ಬಿಟ್ಟಿರುವುದೇ ಒಂದು ದೊಡ್ಡುಪಕಾರ ಎಂದು ಭಾವಿಸುವುದೇ ಹೆಚ್ಚು! ನನಗೆ ವಿಕಲಚೇತನ ಪದ ಪ್ರಯೋಗದ ಪ್ರತಿ ತೀವ್ರ ಆಕ್ಷೇಪವಿದೆ. ಕೆಲ ದಿನಗಳ ಹಿಂದೆ ಆಕಾಶವಾಣಿ ಬೆಂಗಳೂರಿನಲ್ಲಿ ನನ್ನ ಸಂದರ್ಶನವಿತ್ತು ಆಗಲೂ ನಾನು ಈ ಕುರಿತು ಸ್ಪಷ್ಟವಾಗಿ ಹೇಳಿದ್ದೆ. ಯಾರ ಚೇತನವೂ ವಿಕಲವಾಗಿರುವುದಿಲ್ಲ. ಮಾನಸಿಕ ಅಸ್ವಸ್ಥರಲ್ಲೂ ಒಂದು ಚೇತನ ಸುಪ್ತವಾಗಿ ಸಚೇತವಾಗಿರುತ್ತದೆ. ಹಾಗಾಗಿ ಈ ಪದಪ್ರಯೋಗ ಎಲ್ಲಿಯೂ ಸಲ್ಲ. ಸಚೇತ ಎಂಬ ಪದ ನಮ್ಮಂತಹವರಿಗೆ ತುಂಬಾ ಸೂಕ್ತ ಎನ್ನುವುದು ನನ್ನ ಅಭಿಮತ.

ಇನ್ನು ಆತ್ಮವೆನ್ನುವುದು ನಿರ್ವಿಕಾರವಾದದ್ದು. ಇದರ ಹತ್ಯೆ ಎನ್ನುವುದೇ ಒಂದು ಮಿಥ್ಯಾಭಾವ. ಆತ್ಮದೊಂದಿಗೆ ಮಿಳಿತವಾಗಿರುವ ಜೀವವನ್ನು ಅದಕ್ಕಂಟಿರುವ ಕರ್ಮವನ್ನು ಮಾತ್ರ ಓರ್ವ ಹತಾಶ ವ್ಯಕ್ತಿ ಕೊಲ್ಲುತ್ತಾನೆ. ಇದಕ್ಕೆ ಆತ್ಮಹತ್ಯೆ ಎನ್ನುತ್ತಾರೆ ಅಷ್ಟೆ. ನನ್ನ ಪ್ರಕಾರ ಇದಕ್ಕೆ ಜೀವ ಹತ್ಯೆ ಎನ್ನುವುದು ಹೆಚ್ಚು ಸೂಕ್ತ ಎನಿಸುತ್ತದೆ.

ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

ವಿನುತ said...

ತೇಜಸ್ವಿನಿಯವರೇ,

ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ, ಕ್ಷಮೆಯಿರಲಿ.
ನಿಮ್ಮ ಮಾತನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಅಂಗವಿಕಲರಿಗೆ ವಿಕಲಚೇತನರು ಎನ್ನುವ ಪದವನ್ನು ಬಳಸುವುದನ್ನು ನಾನೂ ವಿರೋಧಿಸುತ್ತೇನೆ. ಅದನ್ಯಾರು ಬಳಕೆಗೆ ತಂದರೋ ಅವರೇ ವಿಕಲಚೇತನರೆಂದು ನನ್ನ ನಂಬಿಕೆ. ಇಷ್ಟೆಲ್ಲ ವಿರೋಧದ ನಡುವೆಯೂ, ಆ ಪದ ಬಸ್ ಗಳಲ್ಲಿ "ಕಾದಿರಿಸಲಾಗಿದೆ" ಎನ್ನುವ ಕಡೆ ಬಳಸಲ್ಪಡುತ್ತಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ IWAS-2009 ಅಂತರರಾಷ್ಟ್ರೀಯ ಕ್ರೀಡಾಕೂಟವನ್ನೂ ಸಹ ವಿಕಲಚೇತನರ ಕ್ರೀಡಾಕೂಟವೆಂದು ಕನ್ನಡ ಪತ್ರಿಕೆಗಳು ಕರೆಯುತ್ತಿವೆ. ಮೈಯೆಲ್ಲ ಪರಚಿಕೊಳ್ಳುವಂತಾಗುತ್ತಿದೆ. ಒಮ್ಮೆ ಆ ಕ್ರೀಡಾಪಟುಗಳನ್ನು ಕಣ್ಣಾರೆ ಕಂಡುಬಂದಲ್ಲಿ ಇವರುಗಳಿಗೆ ಅರ್ಥವಾಗುತ್ತಿತ್ತು ಯಾರು ವಿಕಲಚೇತನರೆಂದು!