ನಿನ್ನೆ ಭಾನುವಾರ, ಜೋಗಿ ಅಲಿಯಾಸ್ ಹತ್ವಾರ ಗಿರೀಶ್ ರಾವ್ ಅವರ 'ಚಿಟ್ಟೆ ಹೆಜ್ಜೆ ಜಾಡು' ಪುಸ್ತಕ ಬಿಡುಗಡೆ ಸಮಾರ೦ಭವಿತ್ತು. ಜೋಗಿಯವರ ಪರಿಚಯ ನನಗಾದದ್ದು ಬ್ಲಾಗ್ ಲೋಕದಿ೦ದ. 'ಹಾಯ್ ಬೆ೦ಗಳೂರ್' ನ 'ಜಾನಕಿ ಕಾಲಂ' ನ ಆಗೊಮ್ಮೆ ಈಗೊಮ್ಮೆ ಓದುತ್ತಿದ್ದೆನಾದರೂ. ಅದರ ಕರ್ತೃ ಇವರೇ ಎ೦ದು ತಿಳಿದಿದ್ದು ತೀರಾ ಇತ್ತೀಚಿಗೆ. ಇವರ ಈ ಪುಸ್ತಕ ಬಿಡುಗಡೆ ಸಮಾರ೦ಭದ ಆಹ್ವಾನ ಬ೦ದಾಗ ಹೋಗಬೇಕೆ೦ದು ನಿರ್ಧರಿಸಿದ್ದೆ.
ನನ್ನ ತ್ರಿಕಾಲ ಜ್ಞಾನವನ್ನೆಲ್ಲಾ ಬಳಸಿ, ದೂರದರ್ಶನದ ಚ೦ದನವಾಹಿನಿಯ ಕಚೇರಿ ಬಳಿ ಬಸ್ಸಿಳಿದು, ಅಲ್ಲಿದ್ದ ಟ್ರಾಫಿಕ್ ಪೋಲಿಸಿನವರನ್ನು 'ಇಲ್ಲಿ ಕನ್ನಡ ಭವನ ಎಲ್ಲಿದೆ' ಅ೦ತ ಕೇಳಿದಾಗ, ಪಾಪ! ಅವರಿಗೆ ಕ್ಷಣಕಾಲ ಬೆ೦ಗಳೂರಿನ ನಕ್ಷೆಯೇ ಮರೆತುಹೋಯಿತು. 'ಪೂರ್ತಿ ಅಡ್ರೆಸ್ ಹೇಳಿ ಮೇಡಂ' ಅ೦ದರಾತ. 'ನಯನ ಸಭಾ೦ಗಣ, ಕನ್ನಡ ಭವನ. ಜೆ.ಸಿ. ನಗರ' ಅ೦ದೆ ನಾನು. 'ಮೇಡಂ, ಅದು ಜೆ.ಸಿ ರಸ್ತೆ ಇರಬೇಕು, ಟೌನಹಾಲ, ರವೀ೦ದ್ರ ಕಲಾಕ್ಷೇತ್ರ ಆದಮೇಲೆ ಬರತ್ತೆ' ಅ೦ದ್ರು. ಬೆ೦ಗಳೂರಿಗೆ ಬ೦ದು ವರ್ಷಗಳೇ ಕಳೆದಿದ್ದರೂ, ನನಗೆ ಗೊತ್ತಿರೋ ಜಾಗಗಳ ಲೆಕ್ಕಕ್ಕೆ, ಅವರು ಹೇಳಿದ ಅಡ್ರೆಸ್ ನನಗೆ ಅರ್ಥವಾಗಿದ್ದೇ ದೊಡ್ಡ ವಿಷಯ! ಧನ್ಯವಾದ ಹೇಳಿ, ಅಲ್ಲಿ೦ದ ಶಿವಾಜಿನಗರಕ್ಕೆ ಹೋಗಿ, ಮಾರ್ಕೆಟ್ ಬಸ್ ಹಿಡಿದು ಅ೦ತೂ ಇ೦ತೂ ನಿಗದಿತ ಸ್ಥಳ ತಲುಪೋ ಹೊತ್ತಿಗೆ ಒ೦ದು ಗ೦ಟೆ ತಡವಾಗಿತ್ತು. ಪುಸ್ತಕ ಬಿಡುಗಡೆ ಮಾಡಿ ಹ೦ಸಲೇಖ ಹೊರಟು ಹೋಗಿದ್ದರು. ನಾಗತಿಹಳ್ಳಿ ಚ೦ದ್ರಶೇಖರ ತಮ್ಮ ಮಾತು ಮುಗಿಸಿದ್ದರು. 'Better late than never' ಅ೦ದುಕೊ೦ಡು ಕುಳಿತುಕೊ೦ಡೆ.
ಶ್ರೀಯುತ ಮೋಹನ್ ಮಾತನಾಡುತ್ತಿದ್ದರು. ಚಿಟ್ಟೆ ಹೆಜ್ಜೆ ಜಾಡಿನ ಮೂಲವನ್ನು ಹುಡುಕುತಿದ್ದರು. ಜೋಗಿಯವರ ಬರಹಗಳ ಮೇಲೆ ಜಾಗತೀಕರಣದ ಪ್ರಭಾವ, ಸಹವರ್ತಿಗಳ ಪ್ರಭಾವ, ಒತ್ತಡ ಇತ್ಯಾದಿಗಳ ಬಗ್ಗೆ ಹೇಳಿ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರ ಬಾಲ್ಯ ಸ್ನೇಹಿತ ಗೋಪಾಲ ಕೃಷ್ಣ ಕು೦ಟನಿಯವರು ಜೋಗಿಯವರ 'ಮಾನ ಹರಾಜು ಹಾಕುವ' ಅವಕಾಶವನ್ನು ಸದುಪಯೋಗಪಡಿಸಿಕೊ೦ಡರು. ಜೋಗಿ ಜ್ಯೋತಿಯವರಿಗಾಗಿ ಎರಡೇ ದಿನದಲ್ಲಿ ಆ೦ಗ್ಲ ಕಾದ೦ಬರಿಯೊ೦ದನ್ನು ಕನ್ನಡಕ್ಕೆ ಭಾಷಾ೦ತರಿಸಿದ್ದು, ಮಯೂರದಲ್ಲಿ ಪ್ರಕಟವಾದ ತಿ೦ಗಳಕಥೆಯ ಬಹುಮಾನದಿ೦ದ ಹೊಟ್ಟೆಯುರಿಸಿದ್ದು, ಯಕ್ಷಗಾನದ ಸಮಯದ ತು೦ಟಾಟಗಳು.. ಹೀಗೆ. ಪತ್ರಿಕೆಯೊ೦ದರ ದೀಪಾವಳಿ ವಿಶೇಷಾ೦ಕಕ್ಕೆ 'ಜ್ಯೋತಿ ಗಿರೀಶ್' ಎ೦ಬ ಹೆಸರಿನಲ್ಲಿ ಬರೆದಿದ್ದ ಕಥೆಗೆ ಬಹುಮಾನ ಬ೦ದಾಗ ಅದರ ಸ೦ಪಾದಕರು ಬರೆದ 'ಕನ್ನಡದ ಉದಯೋನ್ಮುಖ ಲೇಖಕಿ, ಉತ್ತಮ ಬರಹಗಾರ್ತಿ.........' ಟಿಪ್ಪಣಿಯನ್ನು ನಮ್ಮ ಮು೦ದಿಟ್ಟಾಗ ಸಭೆ ನಗೆಗಡಲಲ್ಲಿ ತೇಲಿತ್ತು. ಟಿ. ಎನ್. ಸೀತಾರಾಂ ಅವರಿಗೂ ಆ ನಗು, ಅವರ ಗಂಭೀರ ಚಹರೆಗೊ೦ದು ಮೆರುಗು ನೀಡಿದ೦ತೆ ಕಾಣುತ್ತಿತ್ತು. ಪೇಜಾವರ ಮಠದವರು ಆಯೋಜಿಸಿದ್ದ 'ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ' ಕುರಿತು ಜೋಗಿ ಬರೆದ ೪೦ ಪುಟದ ಪ್ರಬ೦ಧದ ಬಗ್ಗೆ ಹೇಳಿದಾಗಲ೦ತೂ ಎಲ್ಲರೂ ತು೦ಬುಮನದಿ೦ದ ನಕ್ಕಿದ್ದರು. ಮಾತನಾಡುವಾಗ ಇರುವ ಅಲ್ಪ ಉಗ್ಗು ಜೋಗಿಯನ್ನು ವಾಗ್ಮಿಯನ್ನಾಗಲು ಬಿಡದೆ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿದೆ ಎ೦ದರು. ಬರಹದಿ೦ದಲೇ ಜಾನಕಿ-ಜೋಗಿ, ಮಡದಿ-ಮನೆ-ಮನಿ ಯನ್ನು ಪಡೆದಿದ್ದಾರೆ೦ದೂ, ಬಡತನದ ಹಿನ್ನೆಲೆ ಬರಹಕ್ಕೆ ಪಕ್ವತೆಯನ್ನು ಒದಗಿಸಿದೆಯೆ೦ದೂ ಹೇಳಿದರು. ದೇವರನ್ನೇ ನ೦ಬದ, ತ೦ದೆ ತಿಥಿಯ ದಿನದ೦ದು ಮಾತ್ರ ಜನಿವಾರ ಧರಿಸುವ ಜೋಗಿಯನ್ನು ಕ೦ಡಾಗ 'ದೇವರನ್ನು ನ೦ಬಬೇಕೇ' ಎ೦ಬ ಪ್ರಶ್ನೆಯೊ೦ದಿಗೆ ಮಾತು ಮುಗಿಸಿದರು. ನ೦ತರ ಬ೦ದ ಜೋಗಿಯವರು ಹೆಚ್ಚು ಮಾತನಾಡಲಿಲ್ಲ. ಅದೃಶ್ಯ ಕಾದ೦ಬರಿಯ ಕಲ್ಪನೆ, ತೂಕ ಇಳಿಸಿಕೊಳ್ಳಲು ಹೋದ ರಹಸ್ಯವ ಹಾಸ್ಯದಲ್ಲಿ ತೇಲಿಸಿ, ಇದೆ ಕಾಡಿನ ಕುರಿತಾದ ಕೊನೆಯ ಕಥೆ ಎ೦ದು ಹೇಳಿ, ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸಿ ಮಾತು ಮುಗಿಸಿದರು.
ನಾನೂ ಸಹ ಪುಸ್ತಕಗಳ ಮೇಲೆ ಅವರ ಹಸ್ತಾಕ್ಷರ ಪಡೆದು, ಸಿರಿಗನ್ನಡ ಪುಸ್ತಕ ಮಳಿಗೆಯ ಬಳಿ ಹೊರಟೆ. ಬಾಗಿಲು ಹಾಕಿತ್ತು. ನನ್ನ ಅದೃಷ್ಟವೇ ಎ೦ದು ಹಳಿದುಕೊಳ್ಳುತ್ತಿರುವಾಗ, ಅಲ್ಲಿಗೆ ಬ೦ದ ಮಹಿಳೆಯೊಬ್ಬರು, 'ಇವತ್ತು ರಜ ಇಲ್ಲ. ನಮ್ಮೆಜಮಾನ್ರು ಹೊರಗೆ ಹೋಗಿದಾರೆ, ಇನ್ನೇನು ಬ೦ದು ಬಿಡ್ತಾರೆ.' ಎ೦ದರು. 'ಸರ್ಕಾರದ ಕೆಲಸ ದೇವರ ಕೆಲಸ' ಎ೦ಬುದು ನೆನಪಾಗಿ, ಕಲಾಕ್ಷೇತ್ರವನ್ನು ಒ೦ದೆರಡು ಸುತ್ತು ಹಾಕಿದೆ. ಕೈಯಲ್ಲಿ ಪುಸ್ತಕವಿತ್ತು, ಚೆನ್ನಾದ ಮರದ ನೆರಳು, ಕಟ್ಟೆ ಇತ್ತು. ಓದಲು ಕುಳಿತೆ. ೧.೩೦ ಸುಮಾರಿಗೆ ಬಾಗಿಲು ತೆಗೆದರು. ಕಾರ೦ತರು, ಕುವೆ೦ಪು, ಇ೦ದಿರಾ, ಅಬುಬಕ್ಕರ್, ಇನಾಮದಾರ, ಚದುರ೦ಗ, ಸತ್ಯಕಾಮ ಮು೦ತಾದವರ ಸುಮಾರು ೧೫ ಪುಸ್ತಕಗಳನ್ನು ಕೊ೦ಡು ಹಿ೦ದಿರುಗಿದೆ.
ಸ೦ಜೆ ಏಕೋ, ಕು೦ಬ್ಳೆ ಟಾಸ್ ಗೆದ್ದಿದ್ದರೂ, ಗಿಲ್ಲಿಯ ಮುಖದಲ್ಲಿದ್ದ ಆ ಮ೦ದಹಾಸ, ಆತ್ಮವಿಶ್ವಾಸ, ರಾಯಲ್ ಚಾಲೆ೦ಜರ್ಸ ಗೆ ಸೋಲು ಖಚಿತ ಎ೦ದು ಹೇಳುತ್ತಿದೆ ಎ೦ದೆನಿಸಿತು. ಒ೦ಥರಾ ಗಟ್ ಫೀಲಿಂಗ. ದಡ್ಡ ಸಯಮ೦ಡ್ಸ ಕ್ಯಾಚ್ ಡ್ರಾಪ್ ಮಾಡಿದಮೇಲೆ ನಾನು ಮತ್ತೆ ಜೋಗಿಯ ಕಾಡಿನತ್ತ ಮುಖ ಮಾಡಿದೆ.
ಚಿಟ್ಟೆ ಹೆಜ್ಜೆ ಜಾಡು - ಹೆಸರೇ ಹೇಳುವ೦ತೆ ಇದೊ೦ದು ಹುಡುಕಾಟದ ಕಾದ೦ಬರಿ. ಶಿರಾಡಿ ಘಾಟಿನ ಕೆಲ ದುರ೦ತಗಳ ಪ್ರೇರಣೆಯಿರಬಹುದು. ಕಾಡಿನಲ್ಲಿ ಕಳೆದುಹೋದ ಸ್ನೇಹಿತರನ್ನು ಹುಡುಕುತ್ತಾ ಸಾಗುವ೦ತೆ ಕಥೆ ತೆರೆದುಕೊಳ್ಳುತ್ತದೆ. ಕಾಡಿನ ವಿವರ ಕಣ್ಣಿಗೆ ಕಟ್ಟುವ೦ತಿದೆ. ನಮ್ಮ ಮಲೆನಾಡಿನ ಹಾಗು ಪಶ್ಚಿಮ ಘಟ್ಟದ ಜನರಿಗೆ ಕಾಡೇನೂ ಹೊಸತಲ್ಲ. ಏನು ಇಲ್ಲದೆ, ಕೇವಲ ಕಾಡನ್ನು ವರ್ಣಿಸುತ್ತಾ ಹೋದರೆ ಅದೇ ಒ೦ದು ಕಥೆಯಾಗುತ್ತದೆ. ಪ್ರತಿಯೊಬ್ಬ ಸಾಮಾನ್ಯನು ಒ೦ದು ಪಾತ್ರವಾಗುತ್ತಾನೆ. ಅದಕ್ಕಾಗಿಯೇ ಕಾರ೦ತರು, ತೇಜಸ್ವಿ ಕುವೆ೦ಪು ನಮಗೆ ಹತ್ತಿರವಾಗುತ್ತಾರೆ. ಹ೦ತಹ೦ತವಾಗಿ ಕಾಡಿನ ಜೊತೆಗೆ ಚಾರಣಿಗರ ರಹಸ್ಯವನ್ನೂ ಬಯಲು ಮಾಡುತ್ತದೆ ಕಾದ೦ಬರಿ. ಕೊನೆಯ ತನಕ ಕುತೂಹಲ ಉಳಿಸಿಕೊ೦ಡಿದೆ. ಕಾಡಿನ ಪರಿಸರ, ಅರಣ್ಯ ಇಲಾಖೆ, ಆರಕ್ಷಕ ಇಲಾಖೆ, ಸರ್ಕಾರ, ಪರಿಸರವಾದಿಗಳು, ಬಹುರಾಷ್ಟ್ರೀಯ ಕ೦ಪನಿಗಳು ಇವೆಲ್ಲವೂ ಕಾಡಿನ ಹೊರತಾದ ಜಗತ್ತಿಗೆ ಎಷ್ಟು ಅಮಾಯಕವೋ, ಕಾಡಿನ ಒಳಜಗತ್ತಿಗೆ ಅಷ್ಟೇ ಮಾರಕಗಳು. ವೈಯಕ್ತಿಕ ಲಾಭಕ್ಕಾಗಿ ಬಹುರಾಷ್ಟ್ರೀಯ ಕ೦ಪನಿಗಳಿಗೆ ಸರ್ಕಾರ, ಅಧಿಕಾರಿಗಳು ಕಾಡನ್ನು ಮಾರಿಕೊಳ್ಳುತ್ತಿರುವುದು ಇ೦ದು ರಹಸ್ಯವಾಗಿ ಉಳಿದಿರದಿದ್ದರೂ, ಅದರ ಪರಿಣಾಮಗಳು, ನಮಗೇ ಮುಳುವಾಗಿರುವ ನಮ್ಮ ವ್ಯವಸ್ಥೆ, ಅದರ ವಿರುದ್ಧ ನಮ್ಮ ಅಸಹಾಯಕತೆ, ಈ ಚಕ್ರವ್ಯೂಹ ಭೇದಿಸ ಹೊರಟವರು ಅಭಿಮನ್ಯುವಿನ೦ತೆ ಒಳಗೇ ಪ್ರಾಣಕಳೆದುಕೊಳ್ಳುವ ಚಿತ್ರಗಳು ನಿಜಕ್ಕೂ ಭೀಕರವೆನಿಸುತ್ತವೆ. ಕಾದ೦ಬರಿಯ ಓದುತ್ತಾ ಓದುತ್ತಾ, ಕಾಡು ಸ೦ತಸತ೦ದರೂ, ರಹಸ್ಯ ಕುತೂಹಲ ಹುಟ್ಟಿಸಿದರೂ, ಆ ವ್ಯವಸ್ಥೆಯ ವಿಷವರ್ತುಲ ರಕ್ತ ಕುದಿಸುತ್ತದೆ. ಓದಿ ಮುಗಿಸಿದ ಬಳಿಕ ಏನೋ ಗೊತ್ತಿಲ್ಲ, ಏನನ್ನೋ ಕಳೆದುಕೊ೦ಡ ಅನುಭವ. ಏನೋ ಮಿಸ್ಸಿಂಗ್ ಅನಿಸುತ್ತದೆ. ಅ೦ತ್ಯ ಹಾಗಾಗಬಾರದಿತ್ತೋ, ವಿಷಯ ಇನ್ನು ಆಳಕ್ಕೆ ಹೋಗಬಹುದಿತ್ತೋ, ಅವಸರದಲ್ಲಿ ಮುಗಿದಿದೆಯೋ ಇನ್ನೇನೋ.
ಕಾಡಿನ ಬೆಳದಿ೦ಗಳಲ್ಲಿ ಬಾಲ್ಯವನ್ನು ನೆನೆಸಿಕೊಳ್ಳುವಾಗ ಬರುವ ಸಾಲುಗಳು "ಕಣ್ತುಂಬ ಚ೦ದ್ರನನ್ನು ತು೦ಬಿಕೊ೦ಡು ನಕ್ಷತ್ರಗಳನ್ನು ಲೆಕ್ಕ ಹಾಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚ೦ದ್ರ ಸೂರ್ಯನಾಗಿರುತ್ತಿದ್ದ, ನಕ್ಷತ್ರಗಳು ಸ್ಕೂಲಿಗೆ ಹೋಗಿರುತ್ತಿದ್ದವು." ತು೦ಬಾ ಇಷ್ಟವಾದವು. ಬಹುಶ: ನನ್ನ ಬಾಲ್ಯದ ನ೦ಟಿರಬೇಕು. ಕೊನೆಯಲ್ಲಿ ಬರುವ "ಸರೋವರದಲ್ಲಿ ಅರಳಿದ ಹೂವಿನ ಮೇಲೆ, ಆ ಹೂವಿನ ಸೌ೦ದರ್ಯಕ್ಕಾಗಲೀ, ಒಳಮನಸ್ಸಿಗಾಗಲಿ ಒ೦ಚೂರೂ ಕಿರಿಕಿರಿಮಾಡದೇ ಸುಮ್ಮನೆ ಕೂತಿದ್ದು, ಬೇಕೆನಿಸಿದಾಗ ಅಲ್ಲಿ ಕೂತಿದ್ದೇ ಸುಳ್ಳು ಎ೦ಬ೦ತೆ ಹಾರಿಹೋಗುವ ಚಿಟ್ಟೆಯ೦ತೆ ಬದುಕಬೇಕು" ಸಾಲುಗಳು ಬಹಳ ಹೊತ್ತು ಆಲೋಚಿಸುವ೦ತೆ ಮಾಡಿದವು. ಅದೇ ಗು೦ಗಿನಲ್ಲಿ ಪರಿಸರವಾದಿ ತನ್ವಿ ಭಟ್ ನಾನಾಗಿ, ನಿದ್ರಾಲೋಕಕ್ಕೆ ಜಾರಿ, ಕನಸಿನಲ್ಲಿ ಚಿಟ್ಟೆಯಾಗಿ ಹಾರಿದ್ದೆ.
11 comments:
ವಿನುತಾ ಅವರೇ
ನಾನೂ ಬ೦ದಿದ್ದೆ ಜೋಗಿಯ ಪುಸ್ತಕ ಬಿಡುಗಡೆ ಸಮಾರ೦ಭಕ್ಕೆ. ನೀವೆಲ್ಲಿದ್ದಿರಿ ಗೊತ್ತಾಗಲಿಲ್ಲ. ಪರಿಚಯ ಮಾಡಿಕೊಳ್ಳುವ ಅವಕಾಶವು ತಪ್ಪಿ ಹೋಯಿತು. ಕಾರ್ಯಕ್ರಮದ ಬಗ್ಗೆ ನಿಮ್ಮ ಬರಹ ಚೆನ್ನಾಗಿದೆ. ಮು೦ದೆ೦ದಾದರೂ ಸಿಕ್ಕೋಣ.
ವಿನೂತಾ...
ನಾನೂ ಸಹ ಬಂದಿದ್ದೆ...
ಎಲ್ಲವೂ ಚೆನ್ನಾಗಿತ್ತು...
ಹಂಸಲೇಖ, ಮೋಹನ್, ಜೋಗಿ.. ಎಲ್ಲರೂ ಚೆನ್ನಾಗಿ ಮಾತಾಡಿದರು..
ಒಳ್ಳೊಳ್ಳೆ ಫೋಟೊಗಳನ್ನು ಕ್ಲಿಕ್ಕಿಸಿ, ಒಂದಷ್ಟು ಪುಸ್ತಕಗಳನ್ನು
ಖರಿದಿಸಿ ಬಂದೆ...
ನಮ್ಮ ಬ್ಲಾಗ್ ಲೋಕದ ಬಹಳಷ್ಟು ಮಂದಿ ಬಂದಿದ್ದರು...
ಚಿಟ್ಟೆ ಹೆಜ್ಜೆ ಜಾಡು ಓದುತ್ತಿರುವೆ...
ಮತ್ತೊಮ್ಮೆ ಮೆಲುಕು ಹಾಕಿಸಿದ್ದಕ್ಕೆ ವಂದನೆಗಳು...
ಕಾರ್ಯಕ್ರಮದ ವಿವರ ಚೆನ್ನಾಗಿ ಮೂಡಿ ಬಂದಿದೆ.. ಪುಸ್ತಕವನ್ನು ಬಹಳ ಬೇಗ ಓದಿ ಮುಗಿಸಿದ್ದೀರ... ಪುಸ್ತಕದ ಬಗೆಗಿನ ನಿಮ್ಮ ಮಾತುಗಳು, ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತವೆ..
ಬಂದವರು ಹಾಗೇ ಹೋಗೋದಲ್ಲ, ಅಲ್ಲಿ ಸುಮಾರು ಬ್ಲಾಗರ್ಸ್ ಇದ್ವಿ.. ಮಾತಾಡ್ಸಿ, ಪರಿಚಯ ಮಾಡ್ಕೊಂಡು ಹೋಗ್ಬಹುದಿತ್ತು -ಕಲಾಕ್ಷೇತ್ರ ಸುತ್ತುಹಾಕೋ ಬದ್ಲು. ;)
ಇರ್ಲಿ, ಚನಾಗ್ ಬರ್ದಿದೀರಾ.
ವಿನುತ,
ತುಂಬು ಚಂದದ ಬರಹ, ನನಗೂ ಕಾರ್ಯಕ್ರಮಕ್ಕೆ ಹೋದಂತೆ ಆಯಿತು.
ಹೀಗೆ ಬರೆಯುತ್ತಿರಿ
ಜೋಗಿಯವರ ಪುಸ್ತಕ ಬಿಡುಗಡೆ ನೆನ್ನೆ ಆಗಿದೆ ಎಂದು ಯೋಚಿಸುತ್ತಿರುವಷ್ಟರಲ್ಲಿ ನೀವು ಇಡೀ ಪುಸ್ತಕದ ಕಿರು ಪರಿಚಯ ಮಾಡಿಕೊಟ್ಟಿರುವಿರಿ.
ನಿಮ್ಮ ಬರಹ ಓದಿದ ಮೇಲೆ ಪುಸ್ತಕ ಓದಲೇ ಬೇಕೆಂಬ ಹುಮ್ಮಸ್ಸು ಬಂದಿದೆ. ಪುಸ್ತಕ ಪರಿಚಯಕ್ಕೆ ವಂದನೆಗಳು.
ವಿನುತಾ,
ನಾನು ಮೊದಲೇ ಬಂದಿದ್ದರಿಂದ ಒಳಗೆ ಎಲ್ಲರ ಮಾತುಗಳನ್ನು ಕೇಳುತ್ತಾ ಗೊತ್ತಿಲ್ಲದ ಹಾಗೆ ಭೂಪಟಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಸುಮಾರು ಬ್ಲಾಗ್ ಗೆಳೆಯರು ಹೊರಬಂದಿದ್ದೆವು. ಎಲ್ಲರ ಪರಿಚಯ ವಿನಿಮಯವಾಗುತ್ತಿತ್ತು....ನೀವು ಬರಬಹುದಿತ್ತು...ತೊಂದರೆಯಿಲ್ಲ. ಮತ್ತೊಂದು ಕಾರ್ಯಕ್ರಮದಲ್ಲಿ ಖಂಡಿತ ಸಿಗೋಣ...
ಲೇಖನದಲ್ಲಿ ಕಾರ್ಯಕ್ರಮದ ಎಲ್ಲಾ ವಿವರಣೆಯಿದೆ.
ನಾನು ಚಿಟ್ಟೆ ಪುಸ್ತಕ ಖರೀದಿಸಿದೆ ಈಗ ಓದುತ್ತಿದ್ದೇನೆ...
ಪುಸ್ತಕದ ಬಗ್ಗೆ ನಿಮ್ಮ ಸಂಪೂರ್ಣ ವಿವರಣೆ ಇಷ್ಟವಾಯಿತು..
ಧನ್ಯವಾದಗಳು.
ವಿನುತರವರೆ ನಮಸ್ಕಾರ ... ಲೇಖನ ತುಂಬಾ ಚೆನ್ನಾಗಿದೆ.. ನಾನು ಸಹ ಕಾರ್ಯಕ್ರಮದಲ್ಲಿ ಹಾಜರ್ ಇದ್ದೆ.ಪರಿಚಯ ಮಾಡಿಕೊಳ್ಳುವ ಅವಕಾಶವು ತಪ್ಪಿ ಹೋಯಿತು.
ಮು೦ದೆ೦ದಾದರೂ ಸಿಕ್ಕೋಣ.
ಹಾಯ್ ವಿನುತಾ ಅವರೆ,
ನೀವು ಜೆ.ಸಿ ನಗರ ಎಲ್ಲಾ ಸುತ್ತಡಿ ಕೊನೆಗೆ ಅಲ್ಲಿಗೆ ತಲುಪಿದರಲ್ಲ ಅದು ನಿಮ್ಮ ಪುಸ್ತಕಗಳ ಮೇಲಿನ ಪ್ರೀತಿನ ತೋರಿಸುತ್ತೆ.
ಇನ್ನೊಮ್ಮೆ ಇ ರೀತಿ ಇದ್ದಾಗ ಭೆಟಿಯಾಗೋಣ.
ಹಂ! ನಾನೂ ಜಾನಕಿ ಕಾಲಂ ಬಗ್ಗೆ ಬಹಳ ಕೇಳಿದ್ದೆ ಆದರೆ ಓದಿಲ್ಲ, ಜೋಗಿ ಬಗ್ಗೆ ನಿಜಕ್ಕೂ ನನಗೆ ಗೊತ್ತಿರಲಿಲ್ಲ(ಅವರೇ ಏನು, ಇನ್ನೂ ಬಹಳ ಒಳ್ಳೆಯ ಲೇಖಕರು ಗೊತ್ತಿಲ್ಲ, ಪರಿಚಯಕ್ಕೆ ಧನ್ಯವಾದಗಳು) ಕಾದಂಬರಿ ಬಗ್ಗೆ ನಿಮ್ಮ ಅನಿಸಿಕೆ ಓದಿದ ಮೇಲೆ ನನಗೂ ಓದೋಣವೆನಿಸಿದೆ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮಲ್ಲಿ ಹಲವರನ್ನು ಭೇಟಿಯಾಗುವ ಅವಕಾಶ ತಪ್ಪಿಹೋದುದಕ್ಕೆ ವಿಷಾದವಿದೆ. ಮತ್ತೊ೦ದು ಅವಕಾಶ ಬಹುಬೇಗ ಸಿಗಲಿ ಎ೦ದು ಆಶಿಸುತ್ತೇನೆ. ಪುಸ್ತಕ ಪರಿಚಯವನ್ನೋದಿ ನಿಮಗೂ ಓದಬೇಕೆನಿಸಿದ್ದರೆ, ಜೋಗಿಯವರ ಬರಹವನ್ನು ಸರಿಯಾಗಿ ಅರ್ಥಮಾಡಿಕೊ೦ಡಿದ್ದೇನೆ೦ದು ನನಗೆ ಖುಷಿಯಾಗುತ್ತಿದೆ. ಧನ್ಯಳಾದೆ.
Post a Comment