Monday, November 30, 2009

ಮಹಾಶ್ವೇತ

"ಶರಣ್ರೀ... ಏನ್ರೀ ಭಾಳ ಬಿಜಿ ಇರಂಗದ. ಕಾಣಂಗೇ ಇಲ್ವಲ್ಲಪ್ಪ ಮಂದಿ!"

"ಹಂಗೇನಿಲ್ರೀ... ಹಿಂಗೇ ನಡೀಲಿಕ್ಹತ್ತದ. ನೀವೇ ಭಾಳ ಬಿಜಿ ಇದ್ದೀರಿ ಕಾಣ್ತದ. ಮುಂಜಾನಿನೂ ಕಾಣಂಗಿಲ್ಲ, ಸಂಜಿಮುಂದೂ ಕಾಣಂಗಿಲ್ಲ. ರೂಮ್ ಏನಾರ ಬದ್ಲಿ ಮಾಡೀರೇನ್ ಮತ್ತ?"

"ಇಲ್ರೀ, ಊರ್ಕಡೀಗೆ ಹೋಗಿದ್ನಾ.."

"ಮನ್ಯಾಗ ಎಲ್ರೂ ಆರಾಮಿದಾರಲ್ರೀ ಮತ್ತ? ಇಲ್ಲಾ... ಹೋಳ್ಗೀ ಊಟ ಏನಾದ್ರೂ ಹಾಕಸ್ತೀರೇನಪ್ಪ ಮತ್ತ?"

"ಅದನ್ನೇನ್ ಕೇಳ್ತೀರಿ.. ಭಾರಿ ದೊಡ್ಡ್ ಕಥಿನ ಅದ ಅದು. ನಿಮ್ ಪುಸ್ತಕಾನ ಚೀಲಕ್ಹಾಕಿ ಕುಂದರ್ರೀ ಮೊದ್ಲು. ನಾ ಹೇಳ್ತೀನಂತ.."

"ಶುರು ಹಚ್ಕೊಳ್ರೀ ನಿಮ್ ಕತಿನ.. ಮಳಿ ಬಂದ್ ನಿಂತದ. ಕಡೀಮಿ ಅಂದ್ರೂ ಎರಡೂವರಿ ತಾಸಾಗ್ತದ ಮನಿ ಮುಟ್ಲಿಕ್ಕ"

"ಬೇಸ್ತ್ವಾರ ಮನಿಗೆ ಫೋನ್ ಹಚ್ಚಿದ್ನಾ ನಮ್ಮಾವಾರು ಫೋನ್ ತಕ್ಕೊಂಡ್ರೀ.. ಎರಡ್ ದಿನ ಸೂಟಿ ತಗೊಂಡ್ ಬಾರ್ಪಾ ಊರಿಗೆ, ಹಿಂಗೆ ಕೆಲ್ಸದ ಅಂದ್ರೀ.. ನಂಗೂ ಈ ಕೆಲ್ಸಬೊಗ್ಸಿ, ಆ ಬಾಸು ಎಲ್ಲ ಸಾಕಾಗಿತ್ತಾ, ಸಿಕ್ ಲೀವ್ ಬೇರೆ ಬೇನಾಮಿ ಬಿದ್ದಿದ್ವಲ್ರೀ, ಅವ್ನೇ ಪ್ಲಾನ್ ಮಾಡ್ಕೊಂಡು ಹೊರೆಟ್ನಾ.."

"ಖರೇನ ನಿಮ್ಗ ಮೈಯಾಗ ಆರಾಮಿಲ್ಲ ಅನ್ಕೊಂಡಿದ್ನಲ್ರೀ ನಾ!"

"ಹ ಹ.. ಮುಂದೇನಾತು ಕೇಳ್ರಲ.. ಊರಿಗ್ ಹೋದ್ನಾ, ಮಾವಾರು ಹುಡುಗಿ ನೋಡ್ಲಿಕ್ಕೆ ಹೋಗೋದದ ಹೊರಡ್ನೀ ಅಂದ್ರೀ.. ಅಲ್ರೀ ಮಾವಾರೆ, ಮೊದ್ಲಿಗೆ ಹುಡುಗಿ ಫೋಟೊ ಗೀಟೋ ತೋರ್ಸ್ಬೇಕಲ್ರೀ ನೀವು, ಹಿಂಗೇ ನಿಂತ್ನಿಲುವ್ನಾಗೆ ಹೊರ್ಡು ಅಂದ್ರೆ ಹೆಂಗ್ರೀ? ಅಂದ್ನಾ. ಇಲ್ಲೋ ಮಾರಾಯ, ಭಾಳ ನಾಚಿಕಿ ಸ್ವಭಾವ ಐತಿ ಹುಡ್ಗೀದು. ಅಕಿದು ಪಟಗಿಟ ಏನೂ ಇಲ್ಲಂತ. ನಾನೆಲ್ಲ ನೋಡೀನಿ. ಛಲೋ ಮಂದಿ. ಹುಡ್ಗಿನೋ ಭಾಳ ಚಂದ ಅದಾಳ. ನೀನೇ ನೋಡ್ತೀಯಂತಲ ನಡಿ.. ಅಂದ್ರೀ. ಸರಿ ಅಂತಂದು ಹೊರಟ್ನಾ.."

"ಹ್ಮ್ಮ್.. "

"ನಾನು, ನಮ್ಮವ್ವ, ಅಪ್ಪಾರು, ಚಿಕ್ಕಕ್ಕ, ಮಾವಾರು ಹೋಗಿದ್ವಿ. ಹುಡ್ಗಿ ಕರ್ಕೊಂಡು ಬಂದ್ರೀ. ನನಿಗೆ ಕೈ ಕಾಲು ನಡುಗ್ಲಿಕ್ಕೇ ಹತ್ತಿದ್ವು ರೀ.. ಒಮ್ಮಿಗೇ ಛಳಿಜ್ವರ ಬಂದಂಗಾತು ನೋಡ್ರೀ.."

"ಯಾಕ್ರೀs?!!!"

"ಅಲ್ರೀ, ಏನ್ ಛಂದ ಇದ್ಲಂತೀರ್ರೀ ಹುಡ್ಗಿ!! ಕೈತೊಳ್ಕೊಂಡು ಮುಟ್ಬೇಕ್ರೀ.."

"ಏನ್ರೀ ನೀವೂ ಈ ಮಟ್ಟಿಗೆ ಹಾಸ್ಯ ಮಾಡೋಂಗಿದ್ಲೇನ್ರೀ ಹುಡುಗಿ??!!"

"ಅಯ್ಯೋ ಶಿವ್ನೇ! ಹಂಗ್ಯಾಕಂತೀರ್ರೀ? ಖರೇನೇ ಭಾಳ ಛಂದಿದ್ಲ್ ರೀ ಹುಡ್ಗಿ. ಬೆಳ್ಳಗೆ ಭಾರೀ ಲಕ್ಷಣ ಇದ್ಲ್ ರೀ! ಒಳ್ಳೇ ಪ್ರೀತಿ ಝಿಂಟಾ ಇದ್ದಂಗಿದ್ಲು ರೀ. ನಕ್ರೆ ಹಂಗೇ ಡಿಂಪಲ್ ಬೀಳ್ತಿದ್ವು ರೀ. ನಾ ನೋಡಿದ್ರ ಹಿಂಗದೀನಿ. ಭದ್ರಾವತಿ ಚಿನ್ನ. ನಾನೇನು ಅಕೀನ ಒಪ್ಪದು, ಇನ್ನೂ ಅಕೀನ ನನ್ನ ಒಪ್ಪಿದ್ರ ಭೇಷಾತು ಅಂದ್ಕೊಂಡೆ ನಾ.."

"ಮುಂದೇನಾತ್ರೀ?"

"ಸರಿ ಅಂತಂದು, ಮನಿಗೆ ಬಂದ್ವಿ. ನಮ್ಮ ಅವ್ವಾರಿಗೆ ಹೇಳಿ ಕಳಿಸಿದ್ರೀ ಅವ್ರು. ಅವ್ವ, ಮಾವಾರು ಹೋದ್ರೀ. ಅವ್ವಾರನ್ನ ಒಳಕರ್ದು ಹುಡ್ಗಿ ಕುತ್ಗಿ ಹತ್ರ ಒಂದು ಸಣ್ ಬಿಳಿ ರಂಗಿಂದು ಕಲೆ ತೋರ್ಸಿ, ದೊಡ್ಡಾಕ್ಟ್ರಿಗೆ ತೋರ್ಸೇವ್ರೀ, ತೊನ್ನಿರ್ಬಹುದು ಅಂದಾರ ಅಂದ್ರಂತ್ರೀ.."

"........................."

"ಭಾಳ ಬೇಸ್ರಾಕತ್ರೀ. ಹಿಂಗಾಗ್ಬಾರ್ದಿತ್ತಲ್ರೀ. ಅಲ್ಲ ಆಟೊಂದು ಛಂದ ಇದ್ಳ್ ರೀ ಹುಡ್ಗಿ.. ಅಕೀಗೆ ಹಿಂಗಂದ್ರ..."

".........................."

"ಏನ್ರೀ ಸೈಲೆಂಟ್ ಆಗ್ಬಿಟ್ರಲ್ರೀ, ಏನಾರ ಮಾತಾಡ್ರೀ.."

"..ಹಿಂಗ ಏನೋ... ಆಮೇಲೇನಾತ್ರೀ?"

"ಇಲ್ರೀ, ಅದು, ಅದೇನೋ ಅಂತಾರಲ್ರೀ.. ಹಾ.. ವಂಶಪಾರಂಪರಿಕ.. ಹಂಗಂತ್ರೀ ಅದು. ಮನ್ಯಾಗ ಯಾರೂ ಒಪ್ಲಿಲ್ಲ"

"ಖಾತ್ರಿ ಐತೇನ್ರೀ ನಿಮಗ? ಅದು ಖರೇನ ಹೆರೆಡಿಟ್ರಿ ಅಂತ? ಎಲ್ಲೋ ಓದಿದ್ನಾ ಹಂಗಲ್ಲ ಅಂತ.."

"ಇಲ್ರೀ ಅದು ಹಂಗ ಅಂತ.."

"ಅವ್ರ ಮನ್ಯಾಗೆ ಬೇರೆ ಯಾರಿಗಾದ್ರೂ ಐತೇನ್ರೀ ಇಲ್ಲಾ ಇತ್ತಂತೇನ್ರೀ?"

"ನನಿಗೆ ತಿಳ್ದಂಗ ಯಾರಿಗೂ ಇಲ್ರೀ.."

"ಮತ್ತಕೀಗ ಹೆಂಗ್ಬಂತಂತ್ರೀ?!"

"ನಂಗೊತ್ತಿಲ್ರೀ. ಹಂಗೂ ಅಕ್ಕ ಕೇಳಿದ್ಲ್ರೀ.. ಹೆಂಗಪ ನೀನೇನಂತಿ ಅಂತ.. ನಾನೇನನ ಹ್ಞೂ ಅಂದ್ರ ಅವ್ವ ಪೊರಿಕಿ ತಗಂಡ್ ಸಾಯೋ ತನ ಹೊಡೀತಾಳ..ಅಕಿ ಒಪ್ಪಂಗಿಲ್ತಗಿ ಅಂದ್ನಾ.."

"ಮದ್ವೀ ಮೊದ್ಲೇ ನಿಮ್ಮನ್ನ ಕರ್ಸಿ ಹೇಳಿದ್ದು ಛಲೋ ಆತ್ನೋಡ್ರಿ.. ಭಾಳ ಒಳ್ಳೆ ಮಂದಿ ಅದಾರ.. ಇಲ್ಲಾಂದ್ರ ಅದೇನೋ ಗಾದೆ ಹೇಳ್ತಾರಲ್ರೀ.. ಸಾವ್ರ ಸುಳ್ಹೇಳಿ ಒಂದ್ಮದ್ವಿ ಮಾಡು ಅಂತ, ಹಂಗೇನಾದ್ರು ಆಗಿದ್ರೆ ಏನ್ ಕತಿರೀ?"

"ಇಲ್ರೀ, ಅವ್ರು ಹೇಳ್ಳಿಕ್ಕೇ ಬೇಕಿತ್ರೀ. ಯಾವಾಗ ಗೊತ್ತಾದ್ರೂ ಹುಡ್ಗಿಗಾನ ರೀ ಕಷ್ಟ. ಒಂದಪ ಮದ್ವಿ ಆದ್ಮೇಲೆ ಗೊತ್ತಾತು ಅಂತಿಟ್ಕೋರ್ರೀ.... ಆಮೇಲಾದ್ರೂ ಅಕಿ ಸುಖ್ನಾಗಿ ಇರ್ತಾಳಂತ ಏನ್ಖಾತ್ರಿ ಇದರೀ ನಿಮಗ? ಕಟ್ಕೊಂಡವ ಬಿಟ್ರೇನ್ಮಾಡ್ತಿದ್ರೀ? ಅವ್ರು ಹೇಳ್ಳೇ ಬೇಕು.. ಹಂಗದ ಸಂದರ್ಭ. ಕಷ್ಟದ ರೀ ಹೆಣ್ಮಕ್ಳ ಜೀವನ.."

"..............................."

[ಯೌವನದ ಉನ್ಮಾದದಲ್ಲಿ ಸಂತೋಷವನ್ನು ತನ್ನದೇ ರೀತಿಯಲ್ಲಿ ಅನುಭವಿಸಿ, ವಾಸಿಯಾಗಲಾರದ ಖಾಯಿಲೆಯನ್ನು ಅಂಟಿಸಿಕೊಂಡು, ಅದನ್ನು ಮುಚ್ಚಿಟ್ಟು ಮದುವೆಯಾಗಿ, ತನ್ನ ಪತ್ನಿಗೂ ರೋಗವನ್ನು ಧಾರೆಯೆರೆದಿದ್ದವನು................ತನ್ನ ಕೆಲಸದ ಬಗ್ಗೆ ಸುಳ್ಳುಮಾಹಿತಿ ನೀಡಿ ಮದುವೆ ಮಾಡಿಕೊಂಡು ಬಂದು, ಈಗ ತನ್ನ ಹೆಂಡತಿಯ ದುಡಿಮೆಯಲ್ಲಿ ಜೀವಿಸುತ್ತಿರುವುದಲ್ಲದೆ, ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾ, ಮನೆಯವರಿಂದ ದೂರವಿಟ್ಟಿರುವ ಇನ್ನೊಬ್ಬ....... ಕಣ್ಣಾರೆ ಕಂಡಿದ್ದ ಈ ಮಹಾತ್ಮರ ಪತ್ನಿಯರು ಹಾಗೇ ಕಣ್ಮುಂದೆ ಮತ್ತೊಮ್ಮೆ ಹಾದು ಹೋಗುತ್ತಿದ್ದರು......]

"ಮತ್ತೆ ಸೈಲೆಂಟಾದ್ರಲ್ರೀ.. ಏನ್ ಯೋಚ್ನೆ ಮಾಡ್ಲಿಕ್ಹತ್ತೀರಿ?"

"ಏನಿಲ್ರೀ.. ನೀವು ಹೇಳ್ರಲ.."

"ನನ್ನ ದೋಸ್ತ್ ಒಬ್ನದಾನ್ರೀ. ಇದೇ ಪ್ರಾಬ್ಲಮ್ ರೀ. ಹುಡ್ಗಿನ ಎಲ್ರೂ ಒಪ್ಪಿದಾರ್ರೀ. ಮಾತುಕತಿ ಎಲ್ಲ ನಡದದ. ಆದ್ರ ಆಕಿ ಇವ್ನ ಜೋಡಿ ಮಾತ್ರ ಹೇಳ್ಯಾಳಂತ ಹಿಂಗ ಕಾಯಿಲೆ ಅಂತಂದು. ಅವ ನಂಗೇನೂ ಪ್ರಾಬ್ಲಮ್ ಇಲ್ಲ. ಮನ್ಯಾಗ್ ಕೇಳ್ಹೇಳ್ತೀನಿ ಅಂದಾನಂತ್ರೀ. ಮನ್ಯಾಗ್ ಅದೆಂಗ್ ಹೇಳ್ತಾನೋ! ಹೇಳಿದ್ರ ಖರೇನ ಮದ್ವಿ ಮುರಿದ್ ಬೀಳ್ತದ.."

[ಅಲ್ವ! ನೆನ್ನೆ ಮೊನ್ನೆ ಬಂದ ಹುಡುಗಿಗಾಗಿ ಮನೆಯವರ ವಿರೋಧ ಕಟ್ಟಿಕೊಳ್ಳಬೇಕೆ? ಇಷ್ಟು ವರ್ಷ ಸಾಕಿ ಬೆಳೆಸಿದ ತಂದೆತಾಯಿಯರ ಮನಸ್ಸಿಗೆ ನೋವುಂಟು ಮಾಡಬೇಕೆ? ಮನೆಯ ನೆಮ್ಮದಿ ಕದಡಬೇಕೆ? ಮದುವೆ ಅಂದ್ರೆ ಇವರಿಬ್ಬರೇ ಅಲ್ಲ, ಎರಡು ಕುಟುಂಬಗಳ ನಡುವಿನ ಸಂಬಂಧ. ಎಲ್ಲರೂ ಒಪ್ಪಿ ಆದ್ರೆ ಸರಿ. ಅದು ಬಿಟ್ಟು ಹುಡುಗನಿಂದ ಮಾತ್ರ ಈ ತ್ಯಾಗದ ನಿರೀಕ್ಷೆ ಎಷ್ಟು ಸರಿ? ಅನುವಂಶಿಕವಾದ ಕಾಯಿಲೆ ಅಂತ ಮನದ ಮೂಲೆಯಲ್ಲೆಲ್ಲೋ ಭಯ ಇದ್ದೇ ಇರತ್ತೆ. ಜನರ ಕೊಂಕಿನಿಂದಲೂ ತಪ್ಪಿಸಿಕೊಳ್ಳಲಾರ.. ಹೆತ್ತತಾಯಿಗಿಂತ ನೆನ್ನೆ ಮೊನ್ನೆ ನೋಡಿದವಳು ಹೆಚ್ಚಾದಳು.. ಇತ್ಯಾದಿ..]

"ಕಷ್ಟ ಐತ್ರೀ ಹುಡುಗ್ರ ಜೀವ್ನ...."

"ಹೂನ್ರಿ.. ಎಲ್ಲ ಭಾರಿ ಕಾಂಪ್ಲಿಕೇಟೆಡ್ ಅನ್ನಿಸ್ಲಿಕ್ಹತ್ತದ. ಏನೇ ಆಗ್ಲಿ ರೀ ಆ ಹುಡುಗೀನ ಮಾತ್ರ ನಾ ನನ್ ಲೈಫ್ನಾಗೇ ಮರೆಯಂಗಿಲ್ಲ ಬಿಡ್ರೀ. ನಾ ಬೇರೆ ಮದ್ವಿ ಆದ್ರೂ ಅಕಿ ಮಾತ್ರ ನೆನಪಿದ್ದೇ ಇರ್ತಾಳ್ರೀ.."

"......................................."

[ಸುಧಾಮೂರ್ತಿಯವರ "ಮಹಾಶ್ವೇತ" ನೆನಪಾಗುತಿತ್ತು. ಹೆಸರಿಗೆ ತಕ್ಕಂತೆ ಅನುಪಮ ಸುಂದರಿಯಾದ "ಅನುಪಮಾ" ಕಾದಂಬರಿಯ ನಾಯಕಿ. ಬಡ ಸ್ಕೂಲ್ ಮಾಸ್ತರ್ ಶಾಮಣ್ಣನ ಮೊದಲನೇ ಹೆಂಡತಿ ಮಗಳು. ಮಹಾಚತುರೆ. ಈಕೆಯ ಸೌಂದರ್ಯಕ್ಕೆ ಮಾರುಹೋದ ಪುಂಡರೀಕ ವೈದ್ಯನಾದ ಆನಂದ. ಮಹಾನ್ ಶ್ರೀಮಂತ, ಅಷ್ಟೇ ರೂಪವಂತ. ಮದುವೆಯ ನಂತರ ಕಾಣಿಸಿಕೊಳ್ಳುವ ಸಣ್ಣ ಬಿಳಿಯ ಕಲೆಯೊಂದು "ಮಹಾಶ್ವೇತ"ವಾಗಿ ಅನುಪಮಳಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ರೋಗವ ಮುಚ್ಚಿಟ್ಟು ಮದುವೆಯಾದಳು ಎನ್ನುವ ಆರೋಪ ತೂಗುಗತ್ತಿಯಂತೆ ಕಾಡುತ್ತಿರುವಾಗ, ಆಕೆ ಮೋಸ ಮಾಡಿಲ್ಲ ಎನ್ನುವುದಕ್ಕೆ ಇದ್ದ ಒಬ್ಬನೇ ಸಾಕ್ಷಿಯಾದ ಆಕೆಯ ಗಂಡನೂ ಮೌನಕ್ಕೆ ಶರಣಾಗುತ್ತಾನೆ. ವೈದ್ಯನಾಗಿ leukoderma ಕೇವಲ ಒಂದು cosmetic disease, ಅಲಂಕಾರಿಕ ಕಾಯಿಲೆ ಎಂದು ತಿಳಿದವನೇ ಕೈಬಿಟ್ಟ ಮೇಲೆ, ಬಡತನದಲ್ಲಿ ಬೇಯುತ್ತಿರುವ ತವರಿನಲ್ಲೂ ಆಸರೆ ಸಿಗದೆ, ಗಂಡನ ಇನ್ನೊಂದು ಮದುವೆ ತಯಾರಿಯ ಸುದ್ದಿ ತಿಳಿಯಲು, ಸಾಯುವ ಸ್ಥಿತಿಗೆ ಹೋದ ಅನುಪಮ, ತನ್ನ ಅಂತ:ಶಕ್ತಿಯನ್ನು ಕಳೆದುಕೊಳ್ಳದೆ ಮರಳಿಬಂದು ಒಂಟಿಯಾಗಿ ಜೀವನದಲ್ಲಿ ಸಾಧನೆಗೈಯುತ್ತಾಳೆ. ಜೀವನ ಭಾಗ ಎರಡರಲ್ಲಿ ಒಬ್ಬ ಪ್ರಜ್ಞಾವಂತ ವೈದ್ಯನ ನಿಶ್ಕಲ್ಮಶ ಸ್ನೇಹ ದೊರೆಯುತ್ತದೆ. ಅದನ್ನು ಪ್ರೇಮವನ್ನಾಗಿಸುವ ಅವಕಾಶವನ್ನು ನಿರಾಕರಿಸಿ, ಅನಿರೀಕ್ಷಿತವಾಗಿ ಮರಳಿಬರುವೆನೆಂದು ಕೇಳುವ ಹಳೆಯ ಗಂಡನನ್ನೂ ನಿರಾಕರಿಸಿ, ಸ್ವಾಭಿಮಾನಿಯಾಗಿ ಅನುಪಮ ಜೀವನದ ದೋಣಿಯನ್ನು ಮುನ್ನಡೆಸುತ್ತಾಳೆ.

ಸುಧಾಮೂರ್ತಿಯವರದೇ "Wise & Otherwise" ನಲ್ಲಿ ಇನ್ನೊಂದು ಕಥೆಯಿದೆ. "ಮಹಾಶ್ವೇತ" ವನ್ನು ಓದಿ, ತನ್ನ ನಿರ್ಧಾರವನ್ನು ಬದಲಿಸಿ, leukoderma ಪೀಡಿತ ಹೆಣ್ಣೊಬ್ಬಳಿಗೆ ಬಾಳು ಕೊಟ್ಟ ಸತ್ಯ ಘಟನೆ. ಇವೆರಡನ್ನೂ ಓದಿದಾಗ, ಹೀಗೂ ಉಂಟೆ?! ಇದು ಜೀವನವಲ್ಲ ಕಥೆ.... ಎಂದು ಸುಮ್ಮನಾಗಿದ್ದೆ... ಆದರೀಗ.........]

"ಆವಾಗ್ಲಿಂದ ನೋಡ್ಲಿಕ್ಹತ್ತೇನಿ..ಏನೋ ಬ್ಯಾಕ್ಗ್ರೌಂಡ್ ಪ್ರೊಸೆಸ್ ನಡ್ಸೀರಿ.. ಏನದು ನಮ್ಗೊಂದಿಷ್ಟು ಹೇಳ್ರಲಾ.."

"ಏನಿಲ್ರೀ..ಹಿಂಗss.."

"ಈಗೇನು..ನೀವು ಹೇಳ್ತೀರೋ ಇಲ್ಲೋ?"

[ನಿಮ್ಮ ಕರ್ಮ!.. ನನ್ನ ತಲೆಯ ಹುಳ ಅವರ ತಲೆಗೆ ವರ್ಗಾವಣೆ ಮಾಡಿದ್ದಾಯ್ತು]

"ಈಗ ನಾನೇನ್ ಮಾಡ್ಬೇಕಂತೀರಿ?"

"ಅದ್ಕೇ ಹೇಳಿದ್ನಾ..ಸುಖಾಸುಮ್ನೆ ಯಾಕ್ ಕೆದಕ್ತೀರಿ, ನಾ ಹೇಳಂಗಿಲ್ಲ ಅಂತ..."

"......................"

"ಒಂದಂತೂ ಖರೇ ರಿ.. ನೀವೇನ್ ಮಾಡ್ಬೇಕಂತ ಯಾರೂ ನಿಮ್ಗೆ ಹೇಳಂಗಿಲ್ಲ. ಹೇಳ್ಲೂ ಬಾರ್ದು. ಅದು ಸರಿಯಿರಂಗಿಲ್ಲ.. ನಿರ್ಧಾರ ಯಾವತ್ತಿದ್ರೂ ನಿಮ್ದೇ ಇರ್ತೈತ್ರೀ.."

"ಅಂತೂ ಒಳ್ಳೇ ಇಬ್ಬಂದಿಗೆ ಸಿಕ್ಸಿದ್ರೀ ರೀ ನನ್ನ.."

"....................."

[ಅವರು ಸಿಕ್ಕಾಗೆಲ್ಲ ಈ ವಿಷಯ ನೆನಪಿಸ್ತಾರೆ. ಸಾಧ್ಯವಾದಷ್ಟು ವಿಷಯಾಂತರ ಮಾಡ್ತೀನಿ. ಸಿಕ್ಕಾಗೆಲ್ಲ ಈ ವಿಷ್ಯ ಮಾತ್ರ ಮಾತಾಡೋದು ಬೇಡಪ್ಪ ಅಂತ ಬೇಡ್ಕೋತೀನಿ! ನಾ ಮಾಡಿದ್ದು ತಪ್ಪಾ? ಅವ್ರಿಗೆ ಆ ಕಥೆ ಹೇಳಬಾರದಿತ್ತಾ? ನನಗೇನೋ ಒಂದು ಬಗೆಯ ಅಪರಾಧಿ ಭಾವ ಕಾಡ್ತಾ ಇದೆ. ಯಾಕಂದ್ರೆ ಅವರ ಸ್ಥಾನದಲ್ಲಿ ನಾನಿದ್ದಿದ್ದ್ರೆ ಏನು ಮಾಡ್ತಿದ್ದೆ? ಉತ್ತರ ಸಿಕ್ಕಿಲ್ಲ.......... ನಿರ್ಧಾರ ಸುಲಭವಲ್ಲ...........]

Friday, November 06, 2009

ಅರ್ಥ

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ "ಅರ್ಥ". - ಇದು "ಅರ್ಥ" ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ - ೨೦೦೯) ನೀಡಿರುವ ಒಕ್ಕಣೆ.

"ಅರ್ಥ" - ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಚಿತ್ರ ರೂಪಿಸಿರುವ ಎಳೆಯ ಹಿನ್ನೆಲೆಯಲ್ಲಿ ಇದರ ಸಮರ್ಥನೆ ಸರಿಯಾಗಿ ಮೂಡಿಬಂದಿಲ್ಲವೆನ್ನಬಹುದು. ಹೊರಗಡೆ ತನ್ನ ಸ್ನೇಹಿತರೊಂದಿಗೆ, ವೇಶ್ಯೆಯಾದರೂ ರಾಣಿಯಮ್ಮ (ಅರುಂಧತಿ ಜತ್ಕರ್) ನೊಡನೆ ಶುದ್ಧ ಸ್ನೇಹದಿಂದಿರುವ ಸೀನಪ್ಪ, ಮನೆಗೆ ಬಂದೊಡನೆ ಉಗ್ರಪ್ಪನಾಗುತ್ತಾನೆ. ಏನೋ ನೆವ ತೆಗೆದು ರಂಪ ಮಾಡುತ್ತಾನೆ. ಹೆಂಡತಿಯನ್ನು ಹೊಡೆದು ಹಿಂಸಿಸುತ್ತಾನೆ. ಮಕ್ಕಳು ಮೂಕಪ್ರೇಕ್ಷಕರಾಗುತ್ತಾರೆ (ಸೀನಪ್ಪನ ಮಗ ಶ್ರೀಕಾಂತನ ದು:ಖ, ಅಸಹಾಯಕತೆ, ಹಾಗೂ ಗೊಂದಲಗಳ ನಿರ್ಭಾವುಕ ಅಭಿನಯ ಒಂದು ಕ್ಯಾಚ್). ಇಲ್ಲಿ ಆರ್ಥಿಕ ಬಿಕ್ಕಟ್ಟಿಗಿಂತಲೂ ಸೀನಪ್ಪನ ಮನಸ್ಥಿತಿಯೇ ಸಮಸ್ಯೆಗೆ ಕಾರಣವೇನೋ ಅನಿಸುತ್ತದೆ (ಮತ್ತೊಮ್ಮೆ ಬೀchi ಯವರ ಹುಚ್ಚು-ಹುರುಳಿನ ಹೆಂಡತಿಯನ್ನೇಕೆ ಹೊಡೆಯಬೇಕು? ನೆನಪಾಗುತ್ತದೆ). ನಾಲ್ಕು ಗೋಡೆಗಳ ನಡುವೆ ಇರುವ ಹೆಣ್ಣು, ಹೊರಗೆ ಹೋಗಿ ದುಡಿದುಕೊಂಡು ಬರುವ ಗಂಡನನ್ನೇನು ಪ್ರಶ್ನಿಸುವುದು ಎನ್ನುವ ಹಮ್ಮಿರಬಹುದು. ಅಷ್ಟೆಲ್ಲ ಹಿಂಸೆಯನ್ನು ಅನುಭವಿಸಿದ್ಯಾಗ್ಯೂ, ಮಗಳು "ಅಪ್ಪನ ಜೊತೆ ಟೂ ಬಿಡಮ್ಮ" ಎಂದು ಮುಗ್ಧವಾಗಿ ನುಡಿದಾಗ, "ನನ್ನ ಗಂಡನೊಡನೆಯೇ ಟೂ ಬಿಡಲು ಹೇಳುತ್ತೀಯೇನೆ?" ಎಂದು ಮಗಳಿಗೇ ಹೊಡೆಯುತ್ತಾಳೆ ಸೀನಪ್ಪನ ಹೆಂಡತಿ!! ಎಲ್ಲಿಯವರೆಗೂ, ಗಂಡನ ಎಲ್ಲ ಹಸಿವುಗಳನ್ನು ತೀರಿಸುವುದೇ ತಮ್ಮ ಜೀವನದ ಪರಮೋಚ್ಛ ಕರ್ತವ್ಯವೆಂದು ತಿಳಿದಿರುವ ಹೆಂಗಸರಿರುತ್ತಾರೋ, ಹೆಣ್ಣು ಸಹನಾಮೂರ್ತಿ, ಕ್ಷಮಯಾಧರಿತ್ರೀ ಎಲ್ಲವನ್ನೂ ಸೈರಿಸಿಕೊಂಡು ಹೋಗಬೇಕು ಆಗಲೇ ಸಂಸಾರ ಉಧ್ಧಾರವಾಗುವುದು ಎಂದು ಕಿವಿಯೂದುವವರು ಇರುತ್ತಾರೋ, ಅಲ್ಲಿಯವರೆಗೂ ಈ ನರಕದಿಂದವರಿಗೆ ಬಿಡುಗಡೆಯಿಲ್ಲ.

ಬಾಡಿಗೆ ಆಟೋ ಓಡಿಸುವ ದೈನಂದಿನ ಜಂಜಾಟದಿಂದ ಮುಕ್ತಿ ಪಡೆಯಲು ಸ್ವಂತ ಆಟೋದ ಕಡೆ ಸೀನಪ್ಪನ ಮನಸ್ಸು ವಾಲುತ್ತದೆ (ಬಾಡಿಗೆ ಮನೆಯಲ್ಲಿರುವ ಪ್ರತಿಯೊಬ್ಬರೂ ಸ್ವಂತಕ್ಕೊಂದು ಸೂರು ಮಾಡಿಕೊಳ್ಳಲು ಹಪಹಪಿಸುವಂತೆ!). ಶ್ಯೂರಿಟಿ ಇದ್ದರೆ ಮಾತ್ರ ಸಾಲ ನೀಡುವ ಭಾರತೀಯ ಬ್ಯಾಂಕುಗಳ "ಅರ್ಥ" ವ್ಯವಸ್ಥೆ, ಕೊಡಿಸಿದ ಸಾಲದಲ್ಲಿ "ಪರ್ಸೆ೦ಟೇಜ್" ಕೇಳುವ ನಮ್ಮ ಭ್ರಷ್ಟಾಚಾರ ವ್ಯವಸ್ಥೆಯನ್ನು ಚೆನ್ನಾಗಿ ತೋರಿಸಿದ್ದಾರೆ. ಅಜ್ಜಿಯ ಹೆಸರಿನಲ್ಲಿರುವ ಮನೆಯನ್ನು ಶ್ಯೂರಿಟಿಗಾಗಿ ನೀಡುವಲ್ಲಿನ ತೊಡಕಿನ ಬಗ್ಗೆ ಮುಂದಾಲೋಚಿಸಿ ಮಾತನಾಡುವ ಪತ್ನಿ ಮತ್ತೊಮ್ಮೆ ದೂಷಣೆಗೊಳಗಾಗುತ್ತಾಳೆ! ಶೇಕಡಾ ೧೪ ರಷ್ಟು ಬಡ್ಡಿ, ಸಾಲ ತೀರುವವರೆಗೆ ಬ್ಯಾಂಕಿನವರ ವಶದಲ್ಲಿಯೇ ಆಟೋ ಎನ್ನುವ ನಿಭಂದನೆಗಳ ನಡುವೆಯೂ, ಯಾವುದೇ ದಾಖಲಾತಿಗಳನ್ನು ಕೇಳುವುದಿಲ್ಲ ಎನ್ನುವ ಸಂಗತಿಯೊಂದೇ ಸೀನಪ್ಪನನ್ನು ವಿದೇಶೀ ಬ್ಯಾಂಕಿನ ಸಾಲದ ತೆಕ್ಕೆಗೆ ತಳ್ಳುತ್ತದೆ. "ತಿಮ್ಮಯ್ಯನಿಗೆ ಹಣ ಕಟ್ಟದೆ ಇದ್ರೆ, ಹಣ ಬಿಟ್ಟು ಬರೀ ಆಟೋ ಎತ್ಕೊಂಡು ಹೋಗ್ತಾನ, ಆದ್ರೆ ಈ ಪರದೇಶಿ ಬ್ಯಾಂಕಿನವ್ರು ಆಟೋ ಜೊತಿಗೆ ನಿನ್ನೂ ಎಳ್ಕೊಂಡು ಹೋದ್ರೇನ್ಮಾಡ್ತೀ?" ಎನ್ನುವ ರಾಣಿಯಮ್ಮನ ಮಾತುಗಳು ನಿಜಕ್ಕೂ ಯೋಚನಾರ್ಹವೆನಿಸುತ್ತವೆ. ಲಾಭವಿಲ್ಲದೇ ಯಾರೂ business ಮಾಡುವುದಿಲ್ಲ, ಮಾಡಲಾಗುವುದೂ ಇಲ್ಲ. ನಮಗೆ ಪುಕ್ಕಟೆಯಾಗಿ ಅಥವಾ ಕಡಿಮೆ ದರಕ್ಕೆ ಕೊಡಲು ಅವರು ಮಾಡುತ್ತಿರುವುದೇನೂ ದಾನವಲ್ಲ, ಸೇವೆಯಲ್ಲ; ವ್ಯಾಪಾರ. ಆದ್ದರಿಂದ ಅವರ "*" ಮಾರ್ಕುಗಳನ್ನು ಸರಿಯಾಗಿ "ಅರ್ಥ" ಮಾಡಿಕೊಂಡು ವ್ಯವಹರಿಸುವುದು ಕ್ಷೇಮ. ಸಾಲ ಕೇಳಲು ಬಂದಾಗ, ಕೊಡಿಸುವವ, ಒಮ್ಮೆ ಕಾರ್ಡ್ಸ್, ಮತ್ತೊಮ್ಮೆ ಚದುರಂಗ ಆಡುತ್ತಿರುವುದು ಮಾರ್ಮಿಕವಾಗಿದೆ.

ಸೀನಪ್ಪ ತನ್ನ ಸ್ನೇಹಿತರ ಜೊತೆಯಲ್ಲಿ "ಬಾರ್" ನಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳುತ್ತಿರುವಾಗ "ನಾವು ಇಲ್ಲಿರಬಾರದಾಗಿತ್ತು, ಫಾರಿನ್ ನಲ್ಲಿರಬೇಕಾಗಿತ್ತು. ಆರಾಮಾಗಿರಬಹುದಾಗಿತ್ತು" ಅಂದುಕೊಳ್ಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ "ನಿನ್ನ ಮನೆಯವರ ಜೊತೆ ಫಾರಿನ್ನಾಗೆ ಮಾಡ್ತಾರಂತಲ್ಲ ಹಂಗೆ ವೀಕೆಂಡ್ ಮಾಡು, ನೆಮ್ಮದಿಯಾಗಿರ್ತೀಯ" ಅನ್ನೋ ಸಲಹೆ ಬರುತ್ತದೆ. ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಮ್ಮ ಜನರಲ್ಲಿ "ಫಾರಿನ್" ಕುರಿತಾಗಿ ಇರುವ ತಪ್ಪು ಅಭಿಪ್ರಾಯಗಳನ್ನು ಕುರಿತು ಅಚ್ಚರಿಯಾಗುತ್ತದೆ! ಅಲ್ಲಿಯೂ ಭಿಕ್ಷುಕರಿದ್ದಾರೆ, ಕಳ್ಳರಿದ್ದಾರೆ, ಕೊಲೆಗಾರರಿದ್ದಾರೆ, ಅಕ್ರಮ ನಿವಾಸಿಗಳಿದ್ದಾರೆ, ವಲಸಿಗರಿದ್ದಾರೆ, ಹುಚ್ಚರಿದ್ದಾರೆ! ವರ್ಣಬೇಧದ ಸಣ್ಣ under current ಇನ್ನೂ ಹರಿಯುತ್ತಿದೆ! ಅಲ್ಲಿಯೂ ವಿವಿಧ ಜಾತಿಗಳಿವೆ, ಅಪ್ಪಟ ಲಂಪಟ "ಧರ್ಮ"ಗುರುಗಳಿದ್ದಾರೆ! ಒಂದು ಜಾತಿಯವರು ಇನ್ನೊಂದು ಜಾತಿಯ ಆರಾಧನಾ ಸ್ಥಳಕ್ಕೆ ಹೋಗುವುದಿಲ್ಲ, ಅದೇನೋ ಅಸಡ್ಡೆ, ಅಗೌರವ! ನಾವೆಲ್ಲ ಒಬಾಮನ ದೀಪಾವಳಿ ನೋಡಿ ಮರುಳಾದದ್ದೇ ಹೆಚ್ಚು! ಅದೇಕೋ ನಮ್ಮ ಮಾಧ್ಯಮಗಳಿಗೆ ನಮ್ಮ ಹುಳುಕುಗಳನ್ನು ವೈಭವೀಕರಿಸುವಲ್ಲಿ ಇರುವ ಉತ್ಸುಕತೆ ಅಲ್ಲಿನ ಮಾಧ್ಯಮಗಳಲ್ಲಿಲ್ಲ. ಅದೇಕೋ ನಮ್ಮ ಜನಕ್ಕೆ ಆದಾಯ ಡಾಲರುಗಳಲ್ಲಿರುವುದು ಕಾಣುತ್ತದೆಯೇ ಹೊರತು ವೆಚ್ಚವೂ ಡಾಲರ್ ಗಳಲ್ಲಿಯೇ ಎನ್ನುವುದು ಕಾಣುವುದಿಲ್ಲ! ಅಲ್ಲಿ ಹೋಗಿ ಪೆಟ್ರೋಲ್ ಬಂಕುಗಳಲ್ಲಿ, ಮಾಲ್ ಗಳ ರೆಸ್ಟ್ ರೂಮ್ ಗಳಲ್ಲಿ ಕ್ಲೀನರ್ ಗಳಾಗಿ ಕೆಲಸಮಾಡಿದರೂ ಸರಿಯೇ, ಫಾರಿನ್ ಕೆಲಸವೇ ಆಗಬೇಕು! ಅದೇ ಕೆಲಸ ಇಲ್ಲಿ ಮಾಡಿದರೆ, dignity of labour! ಅದೇಕೋ ಅಲ್ಲಿನ ಐಷಾರಾಮ ಜೀವನವನ್ನು ನೋಡುವ ನಾವು, ಅಲ್ಲಿನ ಶಿಸ್ತು ಶುಚಿತ್ವವನ್ನು, ಗಂಡ ಹೆಂಡತಿಯನ್ನು ವಿನಾಕಾರಣ ಹೊಡೆಯುವುದಿಲ್ಲ ಎನ್ನುವುದನ್ನು, ದಂಪತಿಗಳು ಮಕ್ಕಳ ಮುಂದೆ ಜಗಳವಾಡುವುದಿಲ್ಲ ಎನ್ನುವುದನ್ನು, ವೃತ್ತಿ-ಸಂಸಾರವನ್ನು ಬೆರೆಸಿ ಕಿಚಡಿಯನ್ನು ಅವರು ಮಾಡುವುದಿಲ್ಲ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ! ಇಷ್ಟೆಲ್ಲದರ ನಡುವೆಯೂ ಮನೆಯವರೊಡನೆ ಸಮಯ ಕಳೆಯಬೇಕೆಂಬುದನ್ನು ಪಾಶ್ಚಿಮಾತ್ಯರ ವೀಕೆಂಡೇ ನಮಗೆ ಕಲಿಸಬೇಕಾಯಿತೇ? ವಿಪರ್ಯಾಸ!!

ಮನೆಯಲ್ಲಿ ದಿನನಿತ್ಯ ನಡೆಯುವ ಪ್ರಹಸನದಿಂದ ದೂರವಾಗಲು, ಜಂಜಡಗಳಿಂದ ಬಿಡಿಸಿಕೊಳ್ಳಲು, ಹೊತ್ತು ಕಳೆಯಲು, ಸೀನಪ್ಪನ ಮಗ ಶ್ರೀಕಾಂತ ಯಾವುದೋ ಮೂಲಭೂತವಾದಿ ಸಂಘಟನೆಗೆ ಸೇರಿರುತ್ತಾನೆ. ಅಲ್ಲಿನ ವಿಚಾರಗಳಿಂದ ಪ್ರಭಾವಿತನಾಗಿ ಅಪ್ಪನ ವಿದೇಶಿ ಆಚರಣೆಗಳ ವಿರುಧ್ಧ ಮಾತನಾಡುತ್ತಾನೆ; ರಾಣಿಯಮ್ಮನನ್ನು ಬದಲಾಯಿಸುತ್ತಾನೆ. ಮಹಾನ್ ದೇಶಭಕ್ತ, ಕ್ರಾಂತಿಕಾರಿ ನಾಯಕ, ಸಂಸ್ಕೃತಿಯ ಪರಿಪಾಲಕನಂತೆ ತಂದೆಗೆ ಕಾಣುತ್ತಾನೆ. ಮಗ ಹೇಳಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕಾಗಿಯೇ ಮಗ ಏನನ್ನೋ ಮಹತ್ತರವಾದದ್ದನ್ನು ಹೇಳುತ್ತಿದ್ದಾನೆ ಎಂದುಕೊಳ್ಳುವ ಸೀನಪ್ಪನಲ್ಲಿ ನಿಜವಾದ ಅರ್ಥದಲ್ಲಿ ಮುಗ್ಧ ಶ್ರೀಸಾಮಾನ್ಯ ಪ್ರತಿಬಿಂಬಿಸುತ್ತಾನೆ. ಒಂದೊಮ್ಮೆ, ಮಗ ಡ್ರಗ್ಸ್ ಎನ್ನುವ ದುಶ್ಚಟಕ್ಕೆಲ್ಲಿ ಬಲಿಯಾಗುವನೋ ಎಂದು ಕಳವಳಪಟ್ಟು ಅವುಗಳಿಂದ ದೂರವಿರಲು ತಾಕೀತು ಮಾಡುವ ಸೀನಪ್ಪನಿಗೆ, ಈಗ ಮಗನಿಗಂಟಿಕೊಂಡಿರುವ "ಚಟ" ಯಾವುದೇ ಗಾಂಜಾ, ಅಫೀಮಿಗಿಂತಲೂ ಅಪಾಯಕಾರಿ ಎನ್ನುವುದು ಗೊತ್ತಾಗುವುದೇ ಇಲ್ಲ. ಅದು ಆತನನ್ನಷ್ಟೇ ಅಲ್ಲ, ಅನೇಕಾನೇಕ ಅಮಾಯಕರನ್ನೂ, ಸಮಾಜದ ಸ್ವಾಸ್ಥ್ಯವನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು "ಅರ್ಥ"ವಾಗುವುದೇ ಇಲ್ಲ. ಕಾಡುವ ವಿಷಯವೆಂದರೆ, ಯಾವನೋ ತಲೆಮಾಸಿದವನ ಹಳಸಲು ಆದರ್ಶಗಳಿಗೆ, ಕೊಳೆತ ಸಿಧ್ಧಾಂತಗಳಿಗೆ, ಕೆಟ್ಟ ರಾಜಕೀಯಕ್ಕೆ ಇರುವ ಪ್ರಭಾವ, ಶಾಂತಿ ನೆಮ್ಮದಿಯ ಸಮಾಜವನ್ನು ಬಯಸುವ ಸಾಮಾನ್ಯರ ಆಲೋಚನೆಗಳಿಗಿಲ್ಲವಲ್ಲ! ಸಾಮಾನ್ಯ ಜನರಲ್ಲಿರುವ ಜಾತಿ ಪಂಗಡಗಳನ್ನು ಮೀರಿದ ಸ್ನೇಹ ಪ್ರೀತ್ಯಾದರಗಳು ಅದೇಕೋ "ಬುಧ್ಧಿವಂತ" ಜನರಲ್ಲಿ ಕಾಣೆಯಾಗಿವೆ! ಇಷ್ಟಾದರೂ ಅಂತದೊಂದು ಪ್ರಭಾವಳಿಗೆ ಬಲಿಯಾಗುವವರು ಸಾಮಾನ್ಯರೇ! ಸ್ವಾತಂತ್ರ್ಯದ ಜೊತೆಜೊತೆಗೆ ಬಂದ ದೇಶವಿಭಜನೆಯ ಗಲಭೆಯಿಂದ ಪ್ರಾರಂಭವಾಗಿ, ಸಿಖ್ ಹತ್ಯಾಕಾಂಡ, ಅಯೋಧ್ಯಾ ವಿವಾದ, ಗೋಧ್ರಾ ಪ್ರಕರಣ, ಈದ್ಗಾ ಪ್ರಕರಣ..... ಇಲ್ಲೆಲ್ಲೂ ಯಾವೊಬ್ಬ ನಾಯಕನ ಒಂದು ಕೂದಲೂ ಕದಲಲಿಲ್ಲ. ಬಲಿಯಾದವರೆಲ್ಲ ಶ್ರೀಸಾಮಾನ್ಯರು! ಇಂತದೊಂದು ಸಂದೇಶ, ಚಿತ್ರದಲ್ಲಿ ಸೀನಪ್ಪನ ಮಗ ಹಾಗೂ ಮುಸ್ಲಿಂ ಸ್ನೇಹಿತ ಕೋಮುಗಲಭೆಯಲ್ಲಿ ಸತ್ತಾಗ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ದೇಶದ ಅರ್ಥವ್ಯವಸ್ಥೆಗೊಂದು ಹೊಸದಿಕ್ಕನ್ನು ತೋರಿಸಬೇಕಾಗಿರುವ ದೇಶೀಯತೆ ಎನ್ನುವುದು ಮೂಲಭೂತವಾದಿಗಳ ಹಾಗೂ ಜ್ಯಾತ್ಯಾತೀತವಾದಿಗಳ ನಡುವೆ ಅಪಭ್ರಂಶುವಾಗಿ ನಲುಗುತ್ತಿರುವುದು ನಿಜಕ್ಕೂ ದುರಂತ...

ಅರ್ಥಕ್ಕೊಂದು ಹೊಸ ಅರ್ಥ ಕೊಡುವಲ್ಲಿ ಚಿತ್ರ ಸಾರ್ಥಕತೆ ಪಡೆದಿದೆ. ನಡುನಡುವೆ ಬರುವ ವಚನಗಳು, ನಾಗೇಂದ್ರ ಶಾ ರವರ ಚುಟುಕುಗಳು ಸರಿಯಾಗಿ ಕುಟುಕುತ್ತವೆ. ಆ ಪಾತ್ರವಂತೂ ನಿಜಕ್ಕೂ a treat to watch. ಕೊನೆಯಲ್ಲಿ, ಕೋಮುಗಲಭೆಯ ದಳ್ಳುರಿಯಲ್ಲಿ ಸೀನಪ್ಪನ ಆಟೋ, ವಿದೇಶಿ ಬ್ಯಾಂಕಿನ ಎತ್ತರದ ಹೋರ್ಡಿ೦ಗ್ ನ ಕೆಳಗೆ ಹತ್ತಿ ಉರಿಯುತ್ತಿರುತ್ತದೆ. "ಮನೆಯೊಳಗೆ ಕತ್ತಲಾಗಿದೆ ದೀಪ ಹಚ್ರೋ" ಎಂದು ಅಜ್ಜಿ ನುಡಿಯುತ್ತಾರೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ?