Tuesday, March 31, 2009

ಆಟಿಕೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ
ಆಟವಾಡುತ ಈ ಮುಂಜಾವಿನಲ್ಲಿ
ಆ ಮುರಿದ ಕಡ್ಡಿಯ ಜೊತೆಯಲಿ
ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ

ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ
ನೀ ನನ್ನತ್ತ ನೋಡಿದರೆ ಭಾವಿಸಬಹುದು
'ಇದೆಂಥಾ ಆಟವಯ್ಯಾ ನಿನ್ನದು,
ಚೆಂದದ ಬೆಳಗೊಂದು ಹಾಳಾಗಿಹುದು'

ಮಗುವೇ, ಮರೆತಿದ್ದೇನೆ ನಾ ಮಣ್ಣು ಮರಳನ್ನು
ಅವುಗಳೊಂದಿಗೆ ಮೈಮರೆತು ಆಡುವುದನ್ನು
ದುಬಾರಿ ಆಟಿಕೆಗಳ ಬಯಕೆಯೊಂದಿಗೆ
ತುಂಬಿಸುತಿಹೆನು ನಗ-ನಾಣ್ಯಗಳಿಂದ ಕೊಪ್ಪರಿಗೆ

ಕೈಗೆಟುಕಿದ ವಸ್ತುಗಳೆಲ್ಲ ನಿನ್ನ ಆಟಿಕೆಗಳು
ರೂಪಿಸಬಲ್ಲೆ ನೀ ಅವುಗಳಲ್ಲೆ ಸುಂದರ ಆಟ
ನನ್ನವುಗಳೇನಿದ್ದರೂ ನಿಲುಕದ ನಕ್ಷತ್ರಗಳು
ಹಿಡಿಯಲವನು ವ್ಯಯಿಸುವೆ ನನ್ನೆಲ್ಲ ಸಮಯ, ಸಾಮರ್ಥ್ಯ

ತೀರದಾಸೆಗಳ ಸಾಗರ ದಾಟಲು
ಮುರುಕು ದೋಣಿಯಲ್ಲಿ ನನ್ನ ಹೋರಾಟ
ಗೆಲುವೆಂಬ ಸೋಲಿನ ಸುಳಿಯಲ್ಲಿ, ಮರೆತಿದ್ದೇನೆ;
ಮಗುವೇ, ಈ ನನ್ನ ಜೀವನವೂ ಒಂದು ಆಟ!

(ಮೂಲ: ರವೀಂದ್ರನಾಥ ಟಾಗೋರ್, Playthings)

Child, how happy you are sitting in the dust, playing with a broken twig all the morning.
I smile at your play with that little bit of a broken twig.
I am busy with my accounts, adding up figures by the hour.
Perhaps you glance at me and think, "What a stupid game to spoil your morning with!"
Child, I have forgotten the art of being absorbed in sticks and mud-pies.
I seek out costly playthings, and gather lumps of gold and silver.
With whatever you find you create your glad games, I spend both my time and my strength over things I never can obtain.
In my frail canoe I struggle to cross the sea of desire, and forget that I too am playing a game.

Tuesday, March 17, 2009

ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಪೂರ್ಣ ಹೆಸರು: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಜನನ: ಮಾರ್ಚ್ ೧೭, ೧೮೮೭
ಮರಣ: ಅಕ್ಟೋಬರ್ ೭, ೧೯೭೫
ತಂದೆ: ವೆಂಕಟರಮಣಯ್ಯ
ತಾಯಿ: ಅಲಮೇಲಮ್ಮ
ತಮ್ಮಂದಿರು: ಡಿ.ವಿ.ಶೇಷಗಿರಿರಾವ್, ಡಿ.ವಿ.ರಾಮರಾವ್
ಪತ್ನಿ: ಭಾಗೀರಥಮ್ಮ
ಮಕ್ಕಳು: ಡಾಬಿ.ಜಿ.ಎಲ್.ಸ್ವಾಮಿ, ಇಂದಿರ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ
ವೃತ್ತಿ: ಸಾಹಿತಿ, ಪತ್ರಕರ್ತ, ಸಮಾಜ ಸೇವಕ
ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (೧೯೬೧)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವನಧರ್ಮಯೋಗ - ೧೯೬೭)
ಪದ್ಮಭೂಷಣ (೧೯೭೪)

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು. ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ. ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ! ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು. ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು. ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು. ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು. ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ.

ಪ್ರತ್ಯೇಕ ಸುಖವಲ್ಪವದು, ಗಳಿಕೆ ತೋರ್ಕೆಯದು
ಆತ್ಮವಿಸ್ತಾರವಾಗಿಪುದೆ ನಿತ್ಯಸುಖ
ವ್ಯಕ್ತಿಜೀವನ ಸೊಂಪು ಸಮಷ್ಟಿಜೀವನದಿ
ಒಟ್ಟುಬಾಳ್ವುದ ಕಲಿಯೋ - ಮಂಕುತಿಮ್ಮ

ಎಂದಿರುವ ಡಿವಿಜಿಯವರನ್ನೂ, ಬಂಧನರಹಿತ ಅಲಕ್ ನಿರಂಜನ್, ಬೈರಾಗಿ ಬದುಕು ಸೆಳೆದದ್ದುಂಟು. ಜೀವನದ ಎರಡನೇ ಹಂತ ಎನ್ನಬಹುದಾದ ಇಲ್ಲಿ, ಮೋಕ್ಷಗುಂಡಂ ವೆಂಕಟೇಶಯ್ಯನವರು ಕೊಟ್ಟ Trial and Death of Socrates ಪುಸ್ತಕ ಹಾಗೂ ಸಾಕ್ರಟೀಸನ ಸಂವಾದಗಳು ಮರಳಿ ಲೋಕಜೀವನಕ್ಕೆ ಕರೆತಂದವು. ಸಮಾಜ, ಸಂಪ್ರದಾಯಗಳು ಗೌರವಾರ್ಹ ಎಂಬ ನಂಬಿಕೆ ಮೂಡಿತು. ಕನ್ನಡ ನಾಡಿಗೆ, ಸಾಹಿತ್ಯಕ್ಕೆ ಅವರ ಸೇವೆಯನ್ನು ಪಡೆಯುವ ಭಾಗ್ಯವಿರುವಾಗ ವಿಧಿಯ ವಕ್ರದೃಷ್ಟಿ ಗೆಲ್ಲಲು ಸಾಧ್ಯವೇ ಇರಲಿಲ್ಲ.

ಸುಮಾರು ೧೭ ನೆಯ ವಯಸ್ಸಿಗೆ ಭಾಗೀರಥಮ್ಮನವರೊಂದಿಗೆ ವಿವಾಹವಾಯಿತು. ಸಂಪಾದನೆ ಮಾಡುವುದನಿವಾರ್ಯವಾಯಿತು. ಲಾಯರ್ ಆಗಬೇಕೆಂಬ ತಂದೆಯ ಆಸೆ ಡಿವಿಜಿಯವರಿಗೆ ಸರಿಬರಲಿಲ್ಲ (A good lawyer is a bad neighbor ಎಂಬ ಮಾತು ಅವರ ಧೃಢನಿರ್ಧಾರಕ್ಕೆ ಕಾರಣವಂತೆ). ಶೀಟ್ಮೆಟಲ್ ಕೈಗಾರಿಕೆ ತರಬೇತಿಗೆ ತಂದೆಯಿಂದ ನಕಾರ (ಕ್ಷೌರದ ಬಟ್ಟಲು ತಯಾರಿಸುವ ಕೆಲಸವೆಂದು). ಕಂಪೆನಿಯ ಏಜೆಂಟನಾಗುವ ಯೋಚನೆಗೆ ಗೆಳೆಯರಡ್ಡಿ. ಕೆ.ಜಿ.ಎಫ್ ನ ಸೋಡಾಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಅದೃಷ್ಟವನ್ನರಸಿ ಬೆಂಗಳೂರಿಗೆ ಬಂದರು. ಜಟಕಾಗಾಡಿಗೆ ಬಣ್ಣ ಬಳಿಯುವ ಸಣ್ಣ ಕಾರ್ಖಾನೆಯೊಂದರಲ್ಲಿ ಗುಮಾಸ್ತಗಿರಿ ಮಾಡಿದರು. ಬೆಂಗಳೂರಿಗೆ ಬಂದಿದ್ದ ಸ್ವಾಮಿ ಅಭೇದಾನಂದರ ಗೌರವಾರ್ಥ ಬರೆದಿದ್ದ ಇಂಗ್ಲಿಷ್ ಪದ್ಯವನ್ನು ಅಚ್ಚುಮಾಡಿಸಲು ಪರಿಚಯವಾದದ್ದು ನವರತ್ನ ಪ್ರೆಸ್. ಪತ್ರಿಕಾಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದ ದಿವಾನ್ ವಿ.ಪಿ.ಮಾಧವರಾಯರ ದರ್ಬಾರಿನ ವಿರುಧ್ದ ಲೇಖನವನ್ನು ಅದೇ ಪ್ರೆಸ್ ನಡೆಸುತ್ತಿದ್ದ ’ಸೂರ್ಯೋದಯ ಪ್ರಕಾಶಿಕಾ’ ಎಂಬ ಪತ್ರಿಕೆಗೆ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ. ಜೀವನದ ಕೊನೆಯವರೆಗೂ ನಡೆಸಿದ ವೃತ್ತಿ.

ಪತ್ರಿಕೋದ್ಯಮವೆಂದೂ ಡಿವಿಜಿ ಯವರಿಗೆ ಹೂವಿನ ಹಾದಿಯಾಗಲಿಲ್ಲ. ಹೆಜ್ಜೆ ಹೆಜ್ಜೆಗೂ ಸವಾಲುಗಳು. ನಾವು ಗಮನಿಸಬೇಕಾದ್ದೆಂದರೆ, ಅದು ಸ್ವಾತಂತ್ರ್ಯ ಪೂರ್ವಕಾಲ. ಇಂದಿನಂತಿರಲಿಲ್ಲ ಅಂದಿನ ಪತ್ರಿಕಾ ಸ್ವಾತಂತ್ರ್ಯ. ಅದರಲ್ಲೂ ನಿಷ್ಪಕ್ಷಪಾತ, ನಿಕೃಷ್ಟತೆ, ಸರಳತೆ ಹಾಗೂ ಸಂಕ್ಷಿಪ್ತತೆಯನ್ನು ಆಧಾರವಾಗಿರಿಸಿಕೊಂಡು ಡಿವಿಜಿಯವರು ಬರೆಯುತ್ತಿದ್ದರು. ಯಾವುದೇ ಸಮಸ್ಯೆಯಾಗಲಿ ಪಕ್ಷಪಾತದ ದೃಷ್ಟಿಯನ್ನು ಬಿಟ್ಟು, ಉದ್ವೇಗರಹಿತರಾಗಿ, ಅದರ ಎಲ್ಲ ಮಜಲುಗಳನ್ನು ಪರಿಶೀಲಿಸುವುದು, ದೇಶದ ಹಿತದೃಷ್ಟಿಯಿಂದ ಅದನ್ನು ಪರಾಮರ್ಶಿಸುವುದು - ಈ ತೆರನಾದ ವಿಮರ್ಶೆ. ಅವರ ಟಿಪ್ಪಣಿಗಳಂತೂ ವಿಷಯಗಳ ಅಧ್ಯಯನ ಹಾಗೂ ಅವುಗಳ ಸಮತೂಕದ ವಿಮರ್ಶೆಗೆ ಮಾದರಿ (ಇಂತಹುದೊಂದು ಲೇಖನ ಇತ್ತೀಚೆಗೆ ಅಡಿಗರ ’ಸಾಕ್ಷಿ’ ಯಲ್ಲಿ ದೊರಕಿತು. ಅತಿವಾಸ್ತವಿಕತೆ - Surrealism ಕುರಿತು. ಸವಿಸ್ತಾರವಾಗಿ, ಸಾಹಿತ್ಯಿಕ ಭಾವ, ಕಾಲಾಂತರದಲ್ಲಿ ಅದರ ಬದಲಾವಣೆ ಕುರಿತಾದ ಉತ್ತಮ ವಿವರಣೆಯಿದೆ. Surrealist ಗಳ ಮನೋಭಾವದ ಆಳವಾದ ಚಿಂತನೆಯಿದೆ, ಅನ್ವೇಷಣೆಗಳ ವಿವರಗಳಿವೆ). ಡಿವಿಜಿಯವರು ತಪ್ಪನ್ನು ಕಂಡರೆ ಖಂಡಿಸದೆ ಬಿಡುತ್ತಿರಲಿಲ್ಲ. ವಿಶ್ವೇಶ್ವರಯ್ಯನವರಿಂದ ’ವಿಷಕಂಟಕಪ್ರಾಯನಾದ ವಿಮರ್ಶಕ’ ಎಂದು ಬಿರುದಾಂಕಿತರಾಗಿದ್ದರು. ಅವರು ನಡೆಸುತ್ತಿದ್ದ ’ಕರ್ನಾಟಕ’ ಪತ್ರಿಕೆ ’ಕಾರ್ಕೋಟಕ’ ಎಂದು ಮೂದಲಿಕೆಗೊಳಗಾಗಿತ್ತು. ’ಪತ್ರಕರ್ತ ಯಾವ ಬಾಹ್ಯ ನಿರ್ಬಂಧಗಳಿಗೂ ಒಳಗಾಗುವಂತಾಗಬಾರದು. ಆದರೆ ತಾನೇ ಹಾಕಿಕೊಂಡ ಶಿಸ್ತು ಸಂಯಮಗಳನ್ನು ಪಾಲಿಸಬೇಕು. ಈ ಆತ್ಮಾನುಶಾಸನ ಅತ್ಯಗತ್ಯ’ ಇದು ಡಿವಿಜಿಯವರ ಖಚಿತ ಅಭಿಪ್ರಾಯ. ಪತ್ರಕರ್ತರ ಸಂಘ ಹುಟ್ಟುಹಾಕಿ, ಭದ್ರಬುನಾದಿ ಹಾಕಿದವರಲ್ಲಿ ಡಿವಿಜಿ ಪ್ರಮುಖರು. ಈ ವೃತ್ತಿಯ ಕುರಿತಾದ ಅವರ ಅಧ್ಯಯನದ ಸಾಕ್ಷಿ ಅವರ ’ವೃತ್ತಪತ್ರಿಕೆಗಳು’ ಹೊತ್ತಿಗೆ. ವಸ್ತುನಿಷ್ಟ, ನಿಷ್ಪಕ್ಷಪಾತ ವಿಮರ್ಶೆಗಳು ಕಾಣೆಯಾಗಿ, ನೈತಿಕ ಅಧ:ಪತನದತ್ತ ಸಾಗುತ್ತಿರುವ ಈ ಸಮಯದಲ್ಲಿ ಪತ್ರಕರ್ತ ಡಿವಿಜಿಯವರು ಆದರ್ಶಪ್ರಾಯರಾಗುತ್ತಾರೆ.

ಡಿವಿಜಿ ಯವರದು ಸೌಮ್ಯಪಂಥ ಮನೋಭಾವ. ದಾದಾಭಾಯಿ ನವರೋಜಿ, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಯವರಿಂದ ಪ್ರಭಾವಿತರಾಗಿದ್ದರು. ೧೯೧೧ ರಲ್ಲಿ ೫ ನೆ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಡಿವಿಜಿ ಯವರು ಒಂದು ನೆನಪಿನ ಪುಸ್ತಕ ಪ್ರಕಟಿಸಿದರು - ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ (ನಮ್ಮ ರಾಷ್ಟ್ರಗೀತೆಗೂ ಅಂಟಿಕೊಂಡಿರುವ ವಿವಾದನೀತನೇ ಅಲ್ಲವೇ). ಬ್ರಿಟಿಶ್ ಪ್ರಭುತ್ವ ಭಾರತಕ್ಕೆ ದೇವರು ದಯಪಾಲಿಸಿದ ವರ ಎಂಬ ಭಾವನೆ ಆ ಪುಸ್ತಕ ಸೂಚಿಸುತ್ತದೆಯೆಂದು ಹೇಳಲಾಗಿದೆ. ಇಲ್ಲಿ ಡಿವಿಜಿ ಯವರ ಭಾವನೆಗಳು ಪ್ರಶ್ನಾತೀತವಲ್ಲದಿದ್ದರೂ, ಇದೇ ಭಾವ ಕೊನೆಯವರೆಗೂ ಇತ್ತೆಂದು ಹೇಳಲಾಗುವುದಿಲ್ಲ. ಸಂಸ್ಥಾನಗಳ ಜನತೆ ರಾಷ್ಟ್ರೀಯ ಭಾವನೆಗಳಿಗೆ ಸ್ಪಂದಿಸಬೇಕು, ಇದಕ್ಕೆ ಜನಜಾಗೃತಿಯ ಅವಶ್ಯಕತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದರು ಡಿವಿಜಿ. ಸಾತಂತ್ಯ್ರಾ ಪೂರ್ವದಲ್ಲೇ (೧೯೧೬ ರ ಸುಮಾರು) The problem of Indian Native states, The states and their people in the Indian Constitution ಎಂಬ ಅವರ ಪುಸ್ತಕಗಳು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಭಾರತ ಸ್ವತಂತ್ರವಾದಾಗ ರಚಿಸಿದ ಪದ್ಯಮಾಲಿಕೆ ’ಸ್ವತಂತ್ರಭಾರತ ಅಭಿನಂದನಸ್ತವ’ ಅವರ ರಾಷ್ಟ್ರಗೌರವಕ್ಕೆ ಸಾಕ್ಷಿ. ’ವಿಶ್ವದಲ್ಲಿ ಭಾರತ ನಿರ್ವಹಿಸಬೇಕಾದ ವಿಶೇಷ ಕರ್ತವ್ಯವಿದೆ. ಇತರ ರಾಷ್ಟ್ರಗಳಿಂದ ಭಿನ್ನವಾದ ಕರ್ತವ್ಯ. ಲೋಕ ಬಯಸುತ್ತಿರುವ ಬೆಳಕು ಇಲ್ಲಿಂದ ಚೆಲ್ಲಬೇಕು. ಅದಕ್ಕೆ ಭಾರತ ಸಜ್ಜುಗೊಳ್ಳಬೇಕು. ತನ್ನೊಳಗಿನ ಭಿನ್ನತೆ, ದಾರಿದ್ರ್ಯ ಅಜ್ಞಾನಗಳನ್ನು ತೊಡೆದುಹಾಕಿ ಬಲಗೊಂಡು ಧೀಮಂತವಾಗಿ ನಿಲ್ಲಬೇಕು. ಅಂಥ ಭಾರತವನ್ನು ಕಟ್ಟುವ ಶಕ್ತಿ, ನಡೆಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಬರಬೇಕು, ನಮ್ಮ ಜನರಿಗೆ ಮೈಗೂಡಬೇಕು’ ಎಂದು ಆಶಿಸಿದರು. ’ರಾಜ್ಯಶಕ್ತಿ ಒಂದು ಕತ್ತಿ, ತಿಳುವಳಿಕೆಯುಳ್ಳವರ ಕೈಯಲ್ಲಿ ಅದು ಉಪಕಾರಿ, ಇಲ್ಲದವರ ಕೈಯಲ್ಲಿ ಅಪಕಾರಿ’ ಎಂದು ಎಚ್ಚರಿಸಿದರು. ’ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ’ ಎಂದವರು ಶತಮಾನದ ಮುಂಚೆಯೇ ಹೇಳಿದ್ದರೂ, ನಾವಿನ್ನೂ ಮೊದಲನೇ ಶತ್ರುವನ್ನೇ ನಿರ್ಮೂಲನ ಮಾಡಿಲ್ಲವೆಂಬುದು ಅಷ್ಟೇ ಸತ್ಯ. ಈ ವ್ಯಾಪಕ ಅಧ್ಯಯನಗಳ ಚಿಂತನೆಯೇ ಅವರ ರಾಜ್ಯಶಾಸ್ತ್ರ ಗ್ರಂಥಗಳಾದ - ರಾಜ್ಯಶಾಸ್ತ್ರ, ರಾಜ್ಯಾಂಗ ತತ್ವಗಳು, ರಾಜಕುಟುಂಬ ಇತ್ಯಾದಿ. ಡಿವಿಜಿಯವರದು ಪಕ್ಷಾತೀತ ರಾಜಕಾರಣ. ಜನಹಿತ, ರಾಷ್ಟ್ರಹಿತ ಮುಖ್ಯ, ಪಕ್ಷಹಿತ ಮುಖ್ಯವಲ್ಲವೆಂಬ ಧೋರಣೆ. ಇಂದಿಗೂ ಇದೆಷ್ಟು ಪ್ರಸ್ತುತವಲ್ಲವೇ.

ಡಿವಿಜಿಯವರ ಮತ್ತೊಂದು ಕ್ಷೇತ್ರ ಸಮಾಜ ಸೇವೆ. ಅಮೆಚ್ಯೂರ್ ಡೆಮೊಕ್ರಾಟಿಕ್ ಅಸೋಸಿಯೇಷನ್, ಮೈಸೂರು ಸಾರ್ವಜನಿಕ ಸಭೆ, ಬೆಂಗಳೂರು ಸಿಟಿಜನ್ಸ್ ಕ್ಲಬ್, ದೇಶಾಭ್ಯುದಯ ಸಂಘ ಎಲ್ಲದರಲ್ಲೂ ಡಿವಿಜಿ ಇದ್ದರು. ೧೯೨೦ ರಲ್ಲೇ ಗೋಖಲೆ ಬಳಗ ರೂಪುಗೊಂಡಿದ್ದರೂ, ೧೯೪೫, ಫೆಬ್ರವರಿ ೧೮ ರಂದು ಅಧಿಕೃತವಾಗಿ ಸ್ಥಾಪನೆಯಾಯಿತು. ತಮ್ಮ ಕೊನೆ ಉಸಿರಿರುವವರೆಗೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವಿಶ್ವೇಶ್ವರಯ್ಯನವರಿಗೆ, ಆಡಳಿತ ವ್ಯವಸ್ಥೆಯ ಒಳಗೆ ಸೇರಿಕೊಳ್ಳದೆಯೇ ಹೊರಗಿನಿಂದಲೇ ಸಹಾಯ ಮಾಡುತ್ತಿದ್ದರು. ಮಿರ್ಜಾ ದಿವಾನಗಿರಿಯಲ್ಲೂ ಇದು ಮುಂದುವರೆಯಿತು. ಆದರೆ ಅವರಿಂದ ಯಾವ ಸಹಾಯವನ್ನೂ ಸ್ವೀಕರಿಸುತ್ತಿರಲಿಲ್ಲ. ಡಿವಿಜಿ ಯವರ ಸಾಂಸಾರಿಕ ಸ್ಥಿತಿ ಮುಗ್ಗಟ್ಟಿನಲ್ಲೇ ಇತ್ತು. ಎಂದೂ ಅವರು ಸಿರಿವಂತಿಕೆಯಿರಲಿ, ಆರ್ಥಿಕವಾಗಿ ನಿಶ್ಚಿಂತೆಯನ್ನೂ ಕಾಣಲಿಲ್ಲ. ಇಂತಹ ಸರಳ ಸಜ್ಜನಿಕೆ ಪ್ರಾಮಾಣಿಕತೆಯ ಜೀವನದಿಂದ ಮಾತ್ರವಲ್ಲವೇ ಅಂತಹ ಮೇರು ಕೃತಿಗಳು ಬರಲು ಸಾಧ್ಯ.

ಇನ್ನವರ ಸಾಹಿತ್ಯ ಕೃಷಿಯ ಬಗ್ಗೆ ಹೇಳದಿದ್ದಲ್ಲಿ ಲೇಖನ ಅಪೂರ್ಣವಾಗುತ್ತದೆ. ೧೯೪೫ ರಲ್ಲಿ ಪ್ರಕಟವಾದ ೯೪೫ ಚೌಪದಿಗಳ ಮಂಕುತಿಮ್ಮನಕಗ್ಗ ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧ. ನಂಬಿಕೆಯಿಂದ ಆರಂಭವಾಗಿ, ಶಂಕೆಯಿಂದ ಮುನ್ನಡೆಗೊಂಡು, ಜೀವನದ ಅನುಭವಗಳೊಂದಿಗೆ ಹೊಂದಿಕೊಂಡು, ಹೋಲಿಸಿಕೊಂಡು, ಸಂದೇಹಗಳನ್ನು ನಿವಾರಿಸಿ ಮತ್ತೆ ನಂಬಿಕೆಯೆಡೆಗೆ ಕರೆದೊಯ್ಯುವ ಉತ್ಕೃಷ್ಟ ತತ್ವ ಚಿಂತನೆ ಕಗ್ಗ. ಅಂತ:ಪುರ ಗೀತೆಗಳು ಒಂದು ಸಂಗೀತ ಕಾವ್ಯ. ಡಿವಿಜಿಯವರು ಪಿಟೀಲು ನಾರಾಯಣಸ್ವಾಮಿ ಭಾಗವತರು ಹಾಗೂ ಮೈಸೂರು ವಾಸುದೇವಾಚಾರ್ಯರಲ್ಲಿ ಕೆಲಕಾಲ ಸಂಗೀತಾಭ್ಯಾಸ ನಡೆಸಿದ್ದರು. ಅದರ ಜ್ಞಾನ ಅವರ ಈ ಕೃತಿಯಲ್ಲಿ ಕಾಣಸಿಗುತ್ತದೆ. ’ಮುಕುರ ಮುಗ್ಧೆ’ ಯಿಂದ ’ಲತಾಂಗಿ’ ವರೆಗೆ ಒಟ್ಟು ೫೨ ಶಿಲ್ಪಕನ್ನಿಕೆಯರು. ಪುಂವಿಡಂಬಿನಿ, ಕೃತಕಶೂಲಿ, ನಾಗವೈಣಿಕೆಯರಿಗೆ ಮಾತ್ರ ಶಂಕರಾಭರಣಮ್ ರಾಗ. ಮಿಕ್ಕೆಲ್ಲ ಸುಂದರಿಯರಿಗೂ ಪ್ರತ್ಯೇಕ ರಾಗಗಳು. ಚೆನ್ನಕೇಶವನಾದಿಯಾಗಿ, ನಾಂದಿಗೀತೆ, ಮಂಗಳಗೀತೆ, ಸೌಂದರ್ಯಗೀತೆ ಹೀಗೆ ಗೀತೆಗೊಂದು ರಾಗಸಂಯೋಜನೆಯಂತೆ, ಒಟ್ಟು ೫೫ ರಾಗಗಳ ಪ್ರಯೋಗ. ನಡುವೆ ಭಸ್ಮಮೋಹಿನಿಯೆಂಬ ಸಂಗೀತ ರೂಪಕವೂ ಇದೆ. ಹೇಗೆ ನಾಟಕವಾಗಿ ಅಭಿನಯಿಸಬೇಕೆಂಬುದಕ್ಕೆ, ನಾಂದಿಯಿಂದ ಮಂಗಳದವರೆಗೂ, ಹಿಮ್ಮೇಳದ ಜೊತೆಗೆ ಪಾತ್ರಧಾರಿಗಳ ಸಂವಾದಕ್ಕೂ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ, ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಿಯ ಕಲ್ಪನೆಯ ಕಲೆಗೆ, ಕಾವ್ಯದ ಅಲಂಕಾರ, ಸಂಗೀತದ ಅಭಿಷೇಕ ಈ ಕೃತಿ. ಕೇತಕೀವನ - ಒಂದು ವಿಶೇಷ ಕವನಸಂಗ್ರಹವೆನ್ನಬಹುದು. ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ ’ನನಗೆ ಓದುವುದಕ್ಕೂ ಯೋಚಿಸಲಿಕ್ಕೂ ಕೊಂಚ-ಕೊಂಚವಾಗಿಯಾದರು ಬಿಡುವು ದೊರೆಯುತ್ತಿದ್ದ ಕಾಲವೊಂದಿತ್ತು. ಆ ಕಾಲದಲ್ಲಿ ಆಗಾಗ ಮನಸ್ಸಿಗೆ ಭಾವನೆಗಳು ಬರುತ್ತಿದ್ದುದೂ ಉಂಟು. ಅವು ಬಂದಾಗ ಅವು ಹಾರಿ ಹೋಗುವುದಕ್ಕೆ ಮುನ್ನ ಅವುಗಳನ್ನು ಆಗ ತೋಚಿದ ಮಾತುಗಳಲ್ಲಿ, ಆಗ ಕೈಗೆ ಸಿಕ್ಕಿದ ಚೀಟಿಗಳಲ್ಲಿ ಗುರುತುಹಾಕುತ್ತಿದ್ದುದುಂಟು. ಅಂಥ ಚೀಟಿಗಳು ಈಗ ಪುಸ್ತಕವಾಗಿದೆ’. ಆದ್ದರಿಂದಲೇ ಇದರಲ್ಲಿ ವೈವಿಧ್ಯವಿದೆ. ೪ ಸಾಲಿನ ಬಿಎಂಶ್ರೀ ಕುರಿತಾದ ಕವನದಿಂದ ಮಾರುತಿ ಬಗೆಗಿನ ೨.೫ ಪುಟಗಳ ಕವನವೂ ಇದೆ. ಹಂಪೆ, ತಾಜಮಹಲಿನಿಂದ, ಈಜಿಪ್ಟಿನ ಸ್ಪಿಂಕ್ಸ್ ವರೆಗಿನ ಕವನಗಳೂ ಇವೆ. ಅಳು, ನಗು, ಪ್ರೀತಿ, ಪ್ರೇಮ, ಸಂದೇಹ ಎಲ್ಲ ಭಾವನೆಗಳಿವೆ. Keats, Tennyson, Robert browning ರ ಕವನಗಳ ಅನುವಾದಗಳೂ ಇವೆ. ಒಟ್ಟಿನಲ್ಲಿ ಡಿವಿಜಿ ಯವರ ಅರಿವಿನಾಳವಿಸ್ತಾರಗಳಿಲ್ಲಿವೆ. ಗೋಪಾಲಕೃಷ್ಣ ಗೋಖಲೆ, ಗೋಖಲೆ ಜೀವನ ಚರಿತ್ರೆಯಾದರೆ, ಈಶೋಪನಿಷತ್ತು ಕನ್ನಡ ಅರ್ಥಾನುವಾದ. ನಾಕಂಡಿರುವ ಇವು ಅವರ ಸಾಹಿತ್ಯ ಸಾಗರದ ಒಂದು ಹನಿ. ಡಿವಿಜಿಯವರ ಸಾಹಿತ್ಯ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಅದರಲ್ಲಿ ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ತತ್ವಚಿಂತನೆ, ಕವಿತೆಗಳು, ನಾಟಕಗಳು, ಅನುವಾದ ನಾಟಕಗಳು, ರಾಜಕೀಯ, ನಿಬಂಧಗಳು ಎಲ್ಲವೂ ಇವೆ. ವೈಜ್ಞಾನಿಕ - ಸಾಂಪ್ರದಾಯಿಕ ಚಿಂತನೆಗಳು, ಮೂಡಣ - ಪಡುವಣ ವಿಚಾರಗಳು, ಇತಿಹಾಸ - ವಾಸ್ತವಿಕತೆಗಳು ಇವೆಲ್ಲವುಗಳ ಹದವಾದ ಮಿಶ್ರಣ. ಎಲ್ಲ ಕೃತಿಗಳ ಸ್ಥೂಲ ಪರಿಚಯವನ್ನು ಕಸ್ತೂರಿಯವರು ಕೊಟ್ಟಿದ್ದಾರೆ, ಅದನ್ನೋದಿದ ಮೇಲೆ, ಅವರ ಪುಸ್ತಕಗಳನ್ನೋದುವ ಹಂಬಲ ಇಮ್ಮಡಿಯಾಗಿದೆ. ಅವರ ಜನ್ಮಶತಾಬ್ದಿಯ ಅಂಗವಾಗಿ, ಅವರೆಲ್ಲ ಕೃತಿಗಳನ್ನು ’ಡಿವಿಜಿ ಕೃತಿ ಶ್ರೇಣಿ’ ಎಂಬ ಹೆಸರಿನಲ್ಲಿ ೧೧ ಸಂಪುಟಗಳಾಗಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗಳು ಜಂಟಿಯಾಗಿ ಬಿಡುಗಡೆ ಮಾಡಿವೆ ಎಂಬ ಮಾಹಿತಿ ದೊರಕಿತು.

ಪತ್ರಕರ್ತರಾಗಿ, ಸಾಹಿತಿಯಾಗಿ, ಸಮಾಜಸೇವಕರಾಗಿ ನಾಡಿಗೆ ಡಿವಿಜಿ ಯವರ ಸೇವೆ ಅಪಾರ. ಎಲ್ಲರೆನ್ನುವಂತೆ ನಾಡಿನ ನಭೋಮಂಡಲದಲ್ಲಿ ಬೆಳಗುವ ಧೃವತಾರೆ ಡಿವಿಜಿ.

(ಅವರ ಹುಟ್ಟುಹಬ್ಬಕ್ಕೆ ಒಂದು ಕೃತಜ್ಞತಾಪೂರ್ವಕ ಕಿರುಕಾಣಿಕೆ)

Monday, March 16, 2009

ಕವಿತೆಯೆಂದರೇನು?


ಕವಿತೆ, ಕೆಲವು ಪದಗಳ ಸಾಲೇ
ಸಾಲಿನ ಕೊನೆಯ ಪ್ರಾಸವೇ
ಪ್ರಾಸದೊಳಗಿನ ಭಾವವೇ
ಭಾವದೊಳಗಿನ ಕಲ್ಪನೆಯೇ
ಕಲ್ಪನೆಗೊಂದು ಚಿಂತನೆಯೇ
ಚಿಂತಣದೊಂದಿನ ವಿಷಯವೇ
ವಿಷಯದ ಹಿಂದಿನ ಘಟನೆಯೇ
ಘಟನೆಗೊಂದು ತರ್ಕವೇ
ತರ್ಕಕ್ಕೆ ನಿಲುಕದ ಸತ್ಯವೇ
ಸತ್ಯದೊಳಗಿನ ಸೌಂದರ್ಯವೇ
ಸೌಂದರ್ಯವೆಂಬ ಕನಸೇ
ಕನಸಿಂದ ದೊರೆತ ಸ್ಪೂರ್ತಿಯೇ
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ
ಕವಿತೆಯೆಂದರೇನು?

Wednesday, March 11, 2009

ಕೊಳೆಗೇರಿಯ ಕೋಟ್ಯಾಧೀಶ ನಾಯಿ(??) ಹಾಗೂ ಪ್ರಶ್ನೋತ್ತರಗಳು

Slumdog Millionaire ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪಡೆದವರಲ್ಲಿ ಭಾರತೀಯ ಪ್ರತಿನಿಧಿಗಳೂ ಇದ್ದಾರೆ. ಭಾರತಕ್ಕೇ, ಭಾರತೀಯ ಚಿತ್ರಕ್ಕೇ ಪ್ರಶಸ್ತಿ ಸಿಕ್ಕಿದಷ್ಟು ಎಲ್ಲರೂ ಸಂತೋಷ ಪಟ್ಟಿದ್ದಾಗಿದೆ. ಹೆಮ್ಮೆಯ ಗರಿ ಸಿಕ್ಕಿಸಿಕೊಂಡದ್ದಾಗಿದೆ. ಇಂದೇನಾದರೂ ಆ ಚಿತ್ರದ ಬಗ್ಗೆ ಹೊಸದಾದ (??) ಬಗೆಯಲ್ಲಿ ಹೇಳಹೊರಟರೆ ನನಗೆ ತಲೆಮಾಸಿದವಳೆಂಬ ಬಿರುದು ಖಂಡಿತ. ಆದರೂ ನನ್ನದಲ್ಲದಕ್ಕೆ ನನ್ನದೆಂಬ ಕುರುಡು ಹಮ್ಮಿಗಿಂತ, ತಲೆಮಾಸಿರುವುದೇ ಕ್ಷೇಮವೆಂದುಕೊಂಡು ಅಭಿಪ್ರಾಯಗಳನ್ನು ಮುಂದಿಡುತ್ತಿದ್ದೇನೆ.

ಶೀರ್ಷಿಕೆ ನೋಡಿದಾಗ ಅನಿಸಿದ್ದು ಇದೊಂದು Motivational ಚಿತ್ರವಿರಬೇಕೆಂದು, ಕೊಳೆಗೇರಿ ಹುಡುಗನೊಬ್ಬ ಪರಿಸ್ಥಿತಿಯ ವೈಪರೀತ್ಯಗಳನ್ನು ಮೀರಿ ಕೋಟ್ಯಾಧೀಶನಾಗುವ ಕಥೆಯಿರಬೇಕೆಂದು. ಆದರೆ ಚಿತ್ರದುದ್ದಕ್ಕೂ ಪಾತ್ರಗಳಿಗಿಂತ ಪರಿಸ್ಥಿತಿಗಳೇ ಬೆಳೆದು ನಿಂತಿವೆ! ವಿಷಯಕ್ಕಿಂತ ಚಿತ್ರಣಕ್ಕೇ ಪ್ರಾಧಾನ್ಯತೆಯಿದೆ! ೨/೩ ನೇ ತರಗತಿಯಲ್ಲಿ ನಮ್ಮ ಸಂವಿಧಾನಕ್ಕಿಂತಲೂ ದೊಡ್ಡದಾದ ಪುಸ್ತಕದಿಂದ ಪಾಠ ಹೇಳಿಕೊಡುತ್ತಿದ್ದಾರೆ. ಆದರೂ ’ಸತ್ಯ ಮೇವ ಜಯತೇ’ ಗೆ ಜನಮತ ಬೇಕಾಗುತ್ತದೆ! ಹಿಂದಿ - ಇಂಗ್ಲಿಷ್ ಎರಡೂ ಗೊತ್ತಿರುವವನಿಗೆ ನಿಲುಕುವ ಸಾಮಾನ್ಯ ಸತ್ಯವನ್ನು, ಸೈಕಲ್ ಕಳವು ಮಾಡುವ, ಪಾನಿಪೂರಿಯ ಬೆಲೆಗೆ ಹೋಲಿಸಲಾಗಿದೆ! ಜೋರಾಗಿ ಓಡಿದರೇ ಬೀಳುವಂತಹ ಶೌಚಾಲಯದಲ್ಲಿ, ಕೇವಲ ಕುರ್ಚಿ (ಮುಟ್ಟಿದರೆ ಮುರಿಯುವಂತಹ) ಅಡ್ಡ ಇಡುವುದರಿಂದ ಬಾಗಿಲು ತೆರೆಯಲಾಗುವುದಿಲ್ಲ! ಕೋಮುಗಲಭೆಯ ಸಂದರ್ಭದಲ್ಲಿ ಓಡುವುದಕ್ಕೆ ಜಾಗವಿಲ್ಲದಂತಹ ಜಾಗದಲ್ಲಿ ರಾಮವೇಷಧಾರಿ ಎಲ್ಲಿಂದ ಪ್ರತ್ಯಕ್ಷನಾದ? !! ಮುಂಬಯಿಯಿಂದ ಆಗ್ರಾಗೆ ಬರುವಷ್ಟರಲ್ಲಿ ಅದೆಷ್ಟು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ!! ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿರೂಪಕ, ಸ್ಪರ್ಧಿಯನ್ನೂ, ಅವನ ವೃತ್ತಿಯನ್ನೂ ಸಾರ್ವಜನಿಕವಾಗಿ ಹೇಗೆ ಲೇವಡಿ ಮಾಡುತ್ತಾನೆ!! (Big Brother ಪ್ರಭಾವವಿರಬಹುದೇ?!). ಇವೆಲ್ಲಾ silly ವಿಷಯಗಳು. ನಮ್ಮ ಬಾಲಿವುಡ್ ನಲ್ಲಿ ಇದಕ್ಕಿಂತಲೂ ಕಳಪೆ ತರ್ಕಗಳನ್ನು ತೋರಿಸುತ್ತಾರೆ. ಆದ್ದರಿಂದ ಇವೆಲ್ಲವೂ ನಗಣ್ಯ!! (ಪ್ರಶಸ್ತಿಗೂ??!). ಸರಿ, ಇವೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದಾಗ, ಈ ಚಿತ್ರವೂ ಒಂದು ಒಳ್ಳೆಯ ಚಿತ್ರವೇ. ಕಥಾಹಂದರ, ತಾಂತ್ರಿಕತೆ, ಸಂಗೀತ, ಪಾತ್ರಗಳು, ಅಭಿನಯ ಎಲ್ಲವೂ ಮಿಳಿತಗೊಂಡು ಸುಂದರವಾದ ಚಿತ್ರವೊಂದು ಮೂಡಿಬಂದಿದೆ. ಇಂತದೇ ಬಹಳಷ್ಟು ಚಿತ್ರಗಳು ಬಂದು ಹೋಗಿದ್ದರೂ, ಇದು ನಮ್ಮ ಬಾಲಿವುಡ್/ಕಾಲಿವುಡ್ ಮಾಸ್/ಮಸಾಲೆ ಚಿತ್ರವಲ್ಲ ಅಥವಾ ಕೇವಲ ನಮ್ಮ ಬಾಲಿವುಡ್ ಉತ್ತಮ ಚಿತ್ರಗಳ ಸಾಲಿನಲ್ಲಿಲ್ಲ. ಅದನ್ನು ಹಾಗೆ ನೋಡುವುದೇ ಒಂದು ಅಪರಾಧವಾಗುತ್ತದೆ. ಇದೊಂದು ಪೂರ್ಣ ಪ್ರಮಾಣದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಚಿತ್ರ.

ಒಂದು ದೂರದರ್ಶನದ ಪ್ರಶ್ನಾವಳಿಗಳ ಕಾರ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು, ಅದನ್ನು ಅತಿಸಾಮಾನ್ಯ ಜೀವನದೊಂದಿಗೆ ತಾಳೆಹಾಕಿ ಹೆಣೆದಿರುವ ಕಥಾಹಂದರ ಶ್ಲಾಘನೀಯ. ಒಂದು ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆದ್ದೊಡನೆ ಅಸಾಮಾನ್ಯರಾಗಿ ಬಿಡುವುದಿಲ್ಲ ಅಥವಾ ಗೆಲ್ಲಲು ಅಸಾಮಾನ್ಯ ಪ್ರತಿಭೆಯ ಅಗತ್ಯವಿಲ್ಲ. ನಮ್ಮನುಭವವೂ ನಮಗೆ ಜ್ಞಾನವನ್ನು ನೀಡುತ್ತದೆ (ಕಲಿಯುವ ಆಸಕ್ತಿಯಿದ್ದಲ್ಲಿ) ಎಂಬುದನ್ನು ಚೆನ್ನಾಗಿ ನಿರೂಪಿಸಲಾಗಿದೆ. ನಮ್ಮ ಡಿವಿಜಿ ಯವರೂ ಹೇಳಿಲ್ಲವೇ

ಅನುಭವದ ಪಾಲೊಳು ವಿಚಾರ ಮಂಥನವಾಗೆ

ಜನಿಯಿಕುಂ ಜ್ಞಾನನವನೀತವದೆ ಸುಖದೆಂ

ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೇ

ನಿನಗೆ ಧರುಮದ ದೀಪ - ಮಂಕುತಿಮ್ಮ

ಇಂತಹುದೊಂದು ಕಥೆಯ, ಕಥಾಹಂದರದ, ಪೂರ್ಣ ಯಶಸ್ಸು ಮೂಲ ಕಥೆಗಾರನಿಗೆ ಮಾತ್ರ ಸಲ್ಲಬೇಕು.

ಮೂಲಕಥೆಗಾರ ಭಾರತೀಯನಾದ್ದರಿಂದ, ಬೇರೆಯವರನ್ನು ಅನರ್ಥಕ್ಕೆ ಹೊಣೆಯಾಗಿಸುವುದರಲ್ಲಿ ಅರ್ಥವಿರಲಿಲ್ಲ. ಆದರಿಂದು ಮೂಲ ಪುಸ್ತಕವನ್ನು (Q & A by Vikas Swarup) ಓದಿ ಮುಗಿಸಿದ ನಂತರ, ಅನರ್ಥದಲ್ಲೂ ಒಂದರ್ಥ ಕಾಣುತ್ತಿದೆ. ಚಲನಚಿತ್ರದ ಪೂರ್ವಾಗ್ರಹದೊಂದಿಗೆ ಓದಲಾರಂಭಿಸಿದಾಗ ಆಘಾತಗಳ ಸರಣಿಯೇ ಕಾದಿತ್ತು.

ಮೊದಲನೆಯದಾಗಿ ನಾಯಕನ ಹೆಸರು ರಾಮ್ ಮೊಹಮ್ಮದ್ ಥಾಮಸ್ ಹಾಗೂ ಈತ ಯಾವುದೇ ಜಾತಿಯವನಲ್ಲ! ಅನಾಥರೆಂಬ ಜಾತಿಯವನು, ಯಾರೂ ಅಣ್ಣ ತಮ್ಮಂದಿರಿಲ್ಲದವನು ಹಾಗೂ ಈತ ಕೊಳೆಗೇರಿಯವನಲ್ಲ! ಕಾಲ್ ಸೆಂಟರಿನ ಚಾಯ್ ವಾಲ ಅಲ್ಲ, ಬಾರ್ ಅಟೆಂಡರ್.

ನಾಯಕ ಭಾಗವಹಿಸಿದ್ದ ದೂರದರ್ಶನದ ಕಾರ್ಯಕ್ರಮ (Who Will Win a Billion - W3B) ದ ರೂವಾರಿ ಭಾರತೀಯನಲ್ಲ! ಅದೊಂದು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿ, ೩೫ ರಾಷ್ಟ್ರಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುತ್ತದೆ. ಅದರ ನಿರ್ಮಾಪಕನ ಬಳಿ ನಾಯಕ ಗೆದ್ದ ಹಣ ಕೊಡಲು ಹಣವಿರದ ಕಾರಣ, ಉತ್ತರಿಸಿದವನ ಮೇಲೆ ಮೋಸದ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿರುತ್ತದೆ. ಭಾರತೀಯ ಪೋಲಿಸ್, ಬಾರ್ ಅಟೆಂಡರ್ ಒಬ್ಬ ಗೆಲ್ಲಲು ಸಾಧ್ಯವಿದೆಯೆಂದೂ, ಬುದ್ದಿವಂತಿಕೆಯನ್ನು ಮಾಡುವ ಕೆಲಸ ಹಾಗೂ appearance ಗಳಿಂದ ಅಳೆಯಲಾಗದೆಂದು ಪ್ರತಿಪಾದಿಸಿದಾಗ, ನಿರ್ಮಾಪಕರು ಇಂಗ್ಲೆಂಡ್ ನ ಶೋ ದಲ್ಲಿ ನಡೆದ ಮೋಸದ ಪ್ರಕರಣವನ್ನು ಉಲ್ಲೇಖಿಸಿ, ಹಣದ ಆಮಿಷ ಒಡ್ಡಿ, ಪೋಲಿಸನನ್ನು ಒಪ್ಪಿಸುತ್ತಾರೆ! ನಮ್ಮ ವ್ಯವಸ್ಥೆ ಅವರ ಸ್ವಾರ್ಥಕ್ಕೆ ಬಲಿಯಾಗುತ್ತದೆ!

ಚಲನಚಿತ್ರ/ನಾಯಕರ ಗೀಳಿರುವುದು ನಾಯಕನ ಗೆಳೆಯನಿಗೆ. ಮುಂದೊಂದು ದಿನ ನೀನೊಬ್ಬ ಒಳ್ಳೆಯ ಚಲನಚಿತ್ರ ನಾಯಕನಾಗುತ್ತೀ ಎಂಬ ಜ್ಯೋತಿಷಿಯ ಭರವಸೆಯೊಂದಿಗೆ ಆ ಗೀಳು ಹತ್ತಿಸಿಕೊಂಡಿರುತ್ತಾನೆ. ಆತನೊಬ್ಬ ’ಡಬ್ಬಾವಾಲ’ (ಇವರ ಯಶಸ್ಸಿನ ರಹಸ್ಯವನ್ನು ಪ್ರಖ್ಯಾತ Management School ಗಳಲ್ಲಿ Case study ಮಾಡುತ್ತಿದ್ದಾರೆ) ನಾಗಿ ಕೆಲಸ ಮಾಡುತ್ತಿರುತ್ತಾನೆ. ಒಂದು ದಿನ, ಆತ ತನ್ನ ಮೆಚ್ಚಿನ ನಾಯಕನನ್ನು ಹೋಟೇಲೊಂದರ ಬಳಿ ಕಂಡಾಗ, ಆ ವಾಹನ ಸಂದಣಿಯಲ್ಲಿ, ತನ್ನ ಜೀವದ ಹಂಗು ತೊರೆದು ಓಡಿ, ನಾಯಕನ ದರ್ಶನ ಪಡೆದು ಕೃತಾರ್ಥನಾಗುತ್ತಾನೆ. ಅಲ್ಲೊಂದು ಮುಗ್ಧತೆಯ ಚಿತ್ರಣವಿದೆ. ಪುಸ್ತಕವಿಡೀ ತಡಕಾಡಿದರೂ ಹೇಸಿಗೆಯಲ್ಲಿ ಬೀಳುವ ಚಿತ್ರಣವಿಲ್ಲ! ಕಾಸಿಗಾಗಿ ಅಣ್ಣನೇ ತಮ್ಮನ ಆಸೆಗಳ ಬಲಿ ಕೊಡುವ ಚಿತ್ರಣವಿಲ್ಲ!!

ನಾಯಕನ ಬಾಲ್ಯ ಚರ್ಚ್ ಒಂದರಲ್ಲಿ ರೂಪುಗೊಳ್ಳುತ್ತದೆ. ಮತಾಂತರಕ್ಕೆ ಪ್ರಯತ್ನಿಸುತ್ತಿಲ್ಲವೆಂದು ನಿರೂಪಿಸಲು, ನಾಯಕನ ಹೆಸರಿನಲ್ಲಿ ಎಲ್ಲ ಜಾತಿಗಳ ಹೆಸರುಗಳೂ ಸೇರಿಕೊಳ್ಳುತ್ತವೆ. ಜೊತೆಗೆ ಇಂಗ್ಲಿಷ್ ಭಾಷೆಯ ಅರಿವು ಬಾಲ್ಯದಿಂದಲೇ ದೊರಕುತ್ತದೆ. ಕಥೆಯುದ್ದಕ್ಕೂ ಇದೇ ಆತನ ಪ್ಲಸ್ ಪಾಯಿಂಟ್. ಇಂಗ್ಲೆಂಡಿನ ಪಾದ್ರಿಯೊಬ್ಬ ದೆಹಲಿಯ ಚರ್ಚಿನಲ್ಲಿ, ಧರ್ಮದಿಬ್ಬಗೆಯಲ್ಲಿ ನಡೆಸುತ್ತಿರುವ ಜೀವನ (ಪಾದ್ರಿ ಸಂಸಾರಿಯಗಿದ್ದು, ಆತನಿಗೆ ಮಗನೊಬ್ಬನಿರುತ್ತಾನೆ, ಲೋಕದ ಕಣ್ಣಿಗೆ ಕಾಣದೆ!), ಆತನ ಉತ್ತರಾಧಿಕಾರಿಯೊಬ್ಬ ಧರ್ಮದ ನೆರಳಿನಲ್ಲಿ ನಡೆಸುವ ದುರಾಚಾರಗಳು (Drugs, Homosexuality) ಇತ್ಯಾದಿಗಳನ್ನು ಚೆನ್ನಾಗಿ (??) ಬಿಂಬಿಸಲಾಗಿದೆ. ಚಲನ ಚಿತ್ರದಲ್ಲಿ ಇವಾವುಗಳ ಹತ್ತಿರವೂ ಸುಳಿಯಲಾಗಿಲ್ಲ! Holy Cross ಗೆ ಸಂಬಂಧಪಟ್ಟ ಪ್ರಶ್ನೆಯನ್ನು ರಾಮನ ಕುರಿತಾದ ಪ್ರಶ್ನೆಯಾಗಿ ಬದಲಾಯಿಸಿದ್ದಾರೆ! ಪುಸ್ತಕದಲ್ಲಿ so called ಕೋಮುಗಲಭೆಯ ಕುರಿತಾದ ಯಾವ ಪ್ರಶ್ನೆಯೂ ಇಲ್ಲ!!

ಆಸ್ಟ್ರೇಲಿಯಾದ diplomat ಕುಟುಂಬವೊಂದಕ್ಕೆ ನಾಯಕ ಕೆಲಸ ಮಾಡುತ್ತಿರುತ್ತಾನೆ. ಎಲ್ಲಿಂದಲೋ ಬಂದು ನಮ್ಮ ನೆಲದಲ್ಲಿ ನೆಲಸಿ, ಕೇವಲ ದುಡ್ಡಿದೆ ಎನ್ನುವ ಕಾರಣಕ್ಕೆ, ಭಾರತೀಯರನ್ನು 'Bloody Indians' ಎನ್ನುವುದವರ ಧೋರಣೆ. ಎಲ್ಲೋ ಕೆಲವು ಭಾರತೀಯರ ಬದಲು ಎಲ್ಲರನ್ನೂ generalise ಮಾಡಿದಾಗ ಅವರಲ್ಲಿಯೇ ಕೆಲಸ ಮಾಡುತ್ತಿದ್ದರೂ, ಬಡತನದಲ್ಲಿದ್ದರೂ, ನಾಯಕನ ದೇಶಾಭಿಮಾನ ಚೆನ್ನಾಗಿ ನಿರೂಪಿಸಲ್ಪಟ್ಟಿದೆ. ಕೇವಲ ಡಿಪ್ಲೊಮಾಟ್ ನ ಕೆಲಸ ಬಿಟ್ಟು ಭಾರತೀಯ ರಕ್ಷಣಾ ರಹಸ್ಯಗಳನ್ನೇ ದೋಚುವ ಹುನ್ನಾರ ನಡೆಸಿರುತ್ತಾನೆ ಆ ಆಸ್ಟ್ರೇಲಿಯನ್. ಇಂತಹುದೊಂದು ಆಷಾಡಭೂತಿತನ, ಬೆನ್ನಲ್ಲೇ ಚೂರಿ ಇರಿಯುವ ಕಾರ್ಯದ ಪ್ರಸ್ತಾವವೇ ಇಲ್ಲ ಚಿತ್ರದಲ್ಲಿ!!

Blood is thicker than Water ಎನ್ನುವ ಮಾತೊಂದು ಬರುತ್ತದೆ. ಅಣ್ಣ ತಮ್ಮನನ್ನು ವ್ಯವಹಾರದ ಸಲುವಾಗಿ ಅಮೆರಿಕಾಗೆ ಕಳುಹಿಸುತ್ತಾನೆ. ಆತ ಹೇಗೆ ಅಲ್ಲಿಯ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಅಣ್ಣನನ್ನೇ ಕೊಲೆ ಮಾಡುವ ಮಟ್ಟಕ್ಕೆ ಇಳಿಯುತ್ತಾನೆಂಬುದರ ಕಥೆ. ಕೊನೆಗೆ ಹೀಗೆ ಮಾಡಿಬಿಟ್ಟೆನಲ್ಲಾ ಎಂಬ ಪಶ್ಚಾತ್ತಾಪದಲ್ಲೂ, ತಾನೂ ಅದೇ ಜಾಲದಲ್ಲಿ ಪ್ರಾಣಬಿಡುತ್ತಾನೆ. ಅಮೆರಿಕವನ್ನು ವಿಶ್ಲೇಸುವ ಈ ಭಾಗವೂ ಚಿತ್ರದಲ್ಲಿಲ್ಲ. ಕೇವಲ, ಹುಡುಗನೊಬ್ಬನಿಗೆ ೧೦೦ ಡಾಲರ್ ನೋಟೊಂದನ್ನು ಕೈಗಿಟ್ಟು, ಎಲ್ಲರೂ ಕರುಣಾಮಯಿಗಳು ಎಂಬಂತೆ, 'This is real America' ಎಂದು ಹೇಳಿಸಲಾಗಿದೆ!!

ಪಾಕಿಸ್ತಾನ ಭಾರತಕ್ಕೆ ನೀಡಿರುವ ಉಡುಗೊರೆಗಳ (ಯುದ್ಧ ಹಾಗೂ ಭಯೋತ್ಪಾದನೆ) ಹಾಗೂ ನಾವು ಸುಮ್ಮನಿದ್ದಾಗ್ಯೂ ಕಾಲುಕೆರೆದುಕೊಂಡು ಬರುವ ಅವರ ಮನೋಭಾವ ತಿಳಿಸಲಾಗಿದೆ. ಅಲ್ಲದೆ, ದೇಶಕ್ಕೆ ವಿಪತ್ತು ಬಂದಾಗ ಹೇಗೆ ಜನ ಒಂದುಗೂಡಿ ಹೋರಾಡುತ್ತಾರೆ, ಸೈನಿಕರಿಗೆ ಹೇಗೆ ಸ್ಪಂದಿಸುತ್ತಾರೆ, ತಮ್ಮಲ್ಲಿ ಏನಿದೆಯೋ ಅಷ್ಟರಲ್ಲೇ ಹಂಚಿಕೊಳ್ಳುತ್ತಾರೆ, ಇವಲ್ಲದರ ಚಿತ್ರಣವಿದೆ. ಚಲನಚಿತ್ರದಲ್ಲಿ ಕಳೆದುಹೋಗಿದೆ!! ಅಮೆರಿಕ, ಬ್ರಿಟನ್ ನ ಸಹಾಯ ಪಡೆಯುತ್ತಿರುವ ಪಾಕಿಸ್ತಾನದ ಅಧಿಕಪ್ರಸಂಗತನದ ಬಗ್ಗೆ ಪ್ರಸ್ತಾಪಿಸಿದ್ದಲ್ಲಿ ಆಸ್ಕರ್ ತಪ್ಪಿ ಹೋಗುತ್ತಿತ್ತೇನೋ??!!

ಕೇವಲ ಹೊರಜೀವನವನ್ನಷ್ಟೇ ತೋರಿಸಲಾಗಿದೆ. ಅಂತಹುದೊಂದು ಬಡತನದ, ಕೆಳಮಧ್ಯಮವರ್ಗದ ಜನರಲ್ಲೂ ಇರುವ ಆರ್ದ್ರತೆ ಚಲನಚಿತ್ರದಲ್ಲಿಲ್ಲ. ನೆರೆಹೊರೆಯವರಿಗೆ ಸಹಾಯ, ಪಕ್ಕದ ಮನೆ ಹುಡುಗಿಯೊಂದಿಗೆ ಬೆಸೆದುಕೊಳ್ಳುವ ಸಹೋದರಿಯ ಸಂಬಂಧ, ಅನಾಥಾಶ್ರಮದ ಹುಡುಗರೊಂದಿಗಿನ ಭಾತೃ ಸ್ನೇಹ, ಕೇವಲ ಸಹಪ್ರಯಾಣಿಕರಾಗಿದ್ದರೂ ಅಲ್ಲೂ ಬೆಸೆದುಕೊಳ್ಳುವ ಸಂಬಂಧಗಳು, ಇವೆಲ್ಲವೂ ಭಾವನಾತ್ಮಕ ಭಾರತದಲ್ಲಿ ಮಾತ್ರ ಸಾಧ್ಯ. ಚಲನಚಿತ್ರದಲ್ಲಿಲ್ಲ. ಇವನ್ನೆಲ್ಲ ಸೇರಿಸಿದರೆ Bollywood Masala Movie ಆಗಿ ಪ್ರಶಸ್ತಿ ಕೈತಪ್ಪೀತೆಂಬ ಅಳುಕೋ? ಅಥವಾ ಅಂತಹವುಗಳನ್ನು ಚಿತ್ರಿಸುವ ಪ್ರತಿಭೆಯಿಲ್ಲವೋ? ಭಾರತವು ಹೊರಜಗತ್ತಿಗೆ ಇನ್ನೂ ಹತ್ತಿರವಾದೀತೆಂಬ ಭಯವೋ?

ಹೆಸರಿಗೆ ಪೂರಕವಾಗಿ ಚಿತ್ರತೆಗೆಯುವಂತಿದ್ದರೆ, ಕೊಳೆಗೇರಿ ಹುಡುಗನೊಬ್ಬನ ಸಾಮರ್ಥ್ಯ highlight ಆಗಿರಬೇಕಿತ್ತು. (ಆಗಿದೆ, ನಿಮಗೆ ಕಾಣದಿದ್ದಲ್ಲಿ ನಮ್ಮ ತಪ್ಪಲ್ಲ ಎನ್ನುವ ಬುದ್ಧಿಜೀವಿಗಳೂ ಇದ್ದಾರೆ ಎಂಬುದು ಗೊತ್ತು. ನಾವು ಕುಟುಂಬದವರೆಲ್ಲ ಒಟ್ಟಿಗೇ ಮಲಗುತ್ತೇವೆಂದು ಹೇಳಿದಾಗ, 'Are you gay?' ಎಂದು ಕೇಳಿದ ಅಂತರರಾಷ್ಟ್ರೀಯ (ಅ)ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಲ್ಲೊಮ್ಮೆ ನೋಡಿ ಎಂದಷ್ಟೇ ಹೇಳಬಲ್ಲೆ). ಚಲನಚಿತ್ರದಲ್ಲಿ ನಾಯಕ ಕೇವಲ ಹೆಣ್ಣು-ಹೊನ್ನಿನೊಂದಿಗೆ ಹೋದವನಂತೆ ಚಿತ್ರಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ವೇಶ್ಯಾವಾಟಿಕೆಗಳಂತಹ ಜಾಗದಲ್ಲಿ ಗುರುತಿಸಲಾಗಿದೆ. ಮೂಲದಲ್ಲಿ ಕೇವಲ ಕೊನೆಯ ಹಂತದಲ್ಲಿ ಬರುವ ಪಾತ್ರ ನಾಯಕಿಯದು ಹಾಗೂ ಅಸಲಿಗೆ, ಹಣಕ್ಕಾಗಿ ಅಂಥದೊಂದು ಪ್ರಶ್ನಾವಳಿಗಳ ಕಾರ್ಯಕ್ರಮಕ್ಕೆ ನಾಯಕ ಹೋಗಿರುವುದೇ ಇಲ್ಲ!! ಚಿತ್ರದಲ್ಲಿ, ನಾಯಕ ಒಮ್ಮೆಗೇ ಇಂಗ್ಲಿಶ್ ಕಲಿತು, ಪ್ರವಾಸಿಗರಿಗೆ ಗೈಡ್ ಆಗಿಬಿಡುತ್ತಾನೆ ಹಾಗೂ ತಪ್ಪಾಗಿ ಗೈಡ್ ಮಾಡುತ್ತಾನೆ. ನಾವೂ ಸಹ ಆ ಗಳಿಗೆಯಲ್ಲಿ ಆ ಹಾಸ್ಯಕ್ಕೆ ನಕ್ಕು ಸುಮ್ಮನಾಗಬಹುದು.ಆದರೆ ಮೂಲದಲ್ಲಿ ನಾಯಕ, ಕೇವಲ ತನ್ನ ಸ್ಮರಣ ಶಕ್ತಿಯಿಂದ ಏನನ್ನೋ ಹೇಳಿದರೂ (ಕೆಲವು ತಪ್ಪು ಮಾಹಿತಿಗಳು), ನಂತರದಲ್ಲಿ, ಅಲ್ಲಿನ ನಿಜವಾದ ಗೈಡ್ ಗಳು ಹೇಳುತ್ತಿದ್ದದ್ದನ್ನು ಕೇಳಿ, ಕೇಳಿ ಕಲಿತುಕೊಳ್ಳುತ್ತಾನೆ. ಅಂತಹುದೊಂದು ಗ್ರಹಣ ಶಕ್ತಿ ಚಿತ್ರದಲ್ಲಿ ಸೆನ್ಸಾರ್ ಆಗಿದೆ! ಹೀಗೆ ಇಲ್ಲದುದನ್ನು ಸೇರಿಸುವುದರಿಂದ ಮಾಸಾಲ ಮಾಲು ಆಗುವುದಿಲ್ಲವೇ? ನಿಬ್ಬೆರಗಾಗುವಂತಹ ನಿಜಜೀವನದ ಉದಾಹರಣೆ ಇಲ್ಲಿದೆ ನೋಡಿ.

ಆದರೂ ಆ ಚಿತ್ರತಂಡಕ್ಕೆ ಪ್ರಶಸ್ತಿಯ ಸುರಿಮಳೆಯಾಗಿರುವದರಲ್ಲಿ ಆಶ್ಚರ್ಯವಿಲ್ಲ!! ಏಕಂತೀರಾ? ಅವರ ಚಾಣಾಕ್ಷತನವನ್ನೊಮ್ಮೆ ಪರಿಶೀಲಿಸಿ. ಭಾರತೀಯ ಕಥಾವಸ್ತು. ಮೂಲಕಥೆಗಾರ ಭಾರತೀಯ. ಪಾತ್ರಧಾರಿಗಳು ಭಾರತೀಯರು. ಸಂಗೀತಗಾರ ಹೆಸರಾಂತ ಭಾರತೀಯ ನಿರ್ದೇಶಕ ಹಾಗೂ ಭಾರತೀಯರ ಕಣ್ಮಣಿ. ಆದರೆ ನಡೆದದ್ದೆಲ್ಲ ಬ್ರಿಟಿಷನೊಬ್ಬನ ನಿರ್ದೇಶನದಂತೆ. ಬೊಕ್ಕಸ ಭರ್ತಿಯಾದದ್ದು ಬ್ರಿಟನ್ನಿನದು. ಇಂತಹುದೊಂದು ದುರುದ್ದೇಶದ ಕಾರ್ಯಸಾಧನೆಯನ್ನು ಭಾರತೀಯರೊಂದಿಗೇ ಇದ್ದುಕೊಂಡು ಮಾಡಿದರೆ ಅವರನ್ನು ವಿರೋಧಿಸಲಾಗದು. ಅಂತಹುದೊಂದು ಭದ್ರಕೋಟೆಯನ್ನು ತಮ್ಮ ಸುತ್ತ ಕಟ್ಟಿಕೊಂಡಿದ್ದಾರೆ, ಭಾರತೀಯ ಬುದ್ಧಿಜೀವಿಗಳ ಸಹಾಯದಿಂದ! ನಾವು ತೋರಿಸುತ್ತಿರುವುದು ನಿಮ್ಮನ್ನೇ, ಇದರ ಮೂಲವೂ ನಿಮ್ಮವನದೇ ಎಂದು ನಂಬಿಸಿದ್ದಾರೆ! ಇಂತಹ ಒಡೆದಾಳುವ ನೀತಿಯಿಂದಲ್ಲವೇ ಭಾರತ ಬ್ರಿಟಿಷರ ವಶವಾದದ್ದು? ಇಲ್ಲವಾದಲ್ಲಿ, ಪರಕೀಯನೊಬ್ಬ ಬಂದು, ಭಾರತವನ್ನು ಕೆಟ್ಟದಾಗಿ ಚಿತ್ರಿಸಿ, ’This is Real India' ಎಂದು ಭಾರತೀಯನಿಂದಲೇ ಹೇಳಿಸಿ, ಭಾರತೀಯರೂ ಸುಮ್ಮನೇ ಅದನ್ನೊಪ್ಪುವಂತೆ ಮಾಡುವುದೇನು ಸಾಮಾನ್ಯವೇ? ಅದಕ್ಕಾಗಿ ಅವರು ಪ್ರಶಸ್ತಿಗೆ ಅರ್ಹರು!

ಭಾರತದಲ್ಲೇ ಭಾರತದ ಬಗ್ಗೆ ಹೀಗೆ ಪಂಗಡಗಳನ್ನು ಸೃಷ್ಟಿಸಿ ಮೋಜು ನೋಡುವ ಅವರ ಧಾರ್ಷ್ಟ್ಯವನ್ನು ಮೆಚ್ಚಬೇಕೋ, ನಮ್ಮ ಬಲಹೀನತೆಗೆ ಮರುಗಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ, ನಮ್ಮ ತಾಯಿಗೆ ನಾವೇ ಹರಕಲು ಸೀರೆ ಉಡಿಸಿ ಪ್ರದರ್ಶನಕ್ಕಿಡಲು ಅನುಮತಿ ನೀಡಿ, ನಾವೂ ಆನಂದಿಸಿ, ಪ್ರದರ್ಶಕರನ್ನು ತಲೆಮೇಲೆ ಹೊತ್ತು ನಡೆಯುವ ನಮ್ಮ ಈ ಕೀಳರಿಮೆಯ ದೇಶಾಭಿಮಾನ, ಅದೇ ಸತ್ಯ ಎನ್ನುವ ಬುದ್ಧಿವಂತರ ಕೂಟ, ಇವುಗಳೊಡನೆ ಚರ್ಚಾಕೂಟ ಏರ್ಪಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮಾಧ್ಯಮಗಳು, ಎಲ್ಲವನ್ನು ಪ್ರಶ್ನಿಸಿ ಪ್ರಶ್ನಿಸಿ ಉತ್ತರಗಳೊಡನೆ ಮತ್ತದೇ ಪ್ರಶ್ನೆಗಳ ಸುಳಿಯೊಳಗೆ ಸಿಲುಕುವ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಸಾಮಾನ್ಯ ಭಾರತೀಯನ ಪಾಡು!!

Monday, March 09, 2009

ಮಹಿಳಾ ದಿನದೊಂದು ಕನಸು...


ಜನಿಸಿದಂದು ಹೆಣ್ಣುಮಗುವೊಂದು
ಯಾರೂ ಚಿಂತೆ, ದು:ಖಕ್ಕೀಡಾಗದಿರಲಿ
ಹೊರೆಯೆಂಬ ಭಾವ ಬೆಳೆಯಗೊಡದೆ
ಸ್ವಾಭಿಮಾನಿಯಾಗಿ ಬೆಳೆಸುವಂತಾಗಲಿ

ಎಲ್ಲರೂ ವಿದ್ಯಾವಂತೆಯರಾಗಲಿ
ಪಡೆದ ವಿದ್ಯೆಯ ಸದುಪಯೋಗವಾಗಲಿ
ಆರ್ಥಿಕ ಸಬಲೀಕರಣವಾಗಲಿ
ಸಾಮಾಜಿಕ ಹೊಣೆ ಹೊರುವಂತಾಗಲಿ

ಮದುವೆ ಮಾರುಕಟ್ಟೆಯಾಗದಿರಲಿ
ದಕ್ಷಿಣೆಗೆ ವರ ಪಡೆವ ವ್ಯಾಪಾರವಾಗದಿರಲಿ
ಸಂಸಾರ ಸಾಗಿಸುವ ಪಯಣದಲ್ಲಿ
ಸದಸ್ಯರೆಲ್ಲರ ಸಹಕಾರ ದೊರೆಯುವಂತಾಗಲಿ

ಅತ್ತೆಯಂದಿರು ತಾಯಿಯರಂತಾಗಲಿ
ನಾದಿನಿಯರು ಅಕ್ಕತಂಗಿಯರಂತಾಗಲಿ
ಸೊಸೆಯಂದಿರು ಮಕ್ಕಳಂತಾಗಲಿ
ಹೆಣ್ಣಿಗೆ ಹೆಣ್ಣೇ ಶತ್ರುವೆಂಬುದನೃತವಾಗಲಿ

ತಾಳ್ಮೆಯೇ ನಮ್ಮ ತಲೆತೆಗೆಯದಿರಲಿ
ವಾತ್ಸಲ್ಯವೇ ವಿಷವಾಗದಿರಲಿ
ಕರುಣೆಯೇ ಕುಣಿಕೆಯಾಗದಿರಲಿ
ಮಮತೆಯೇ ಮೃತ್ಯುವಾಗದಿರಲಿ

ಮಾತುಗಳು ಮೋಸಮಾಡದಿರಲಿ
ನಂಬಿಕೆಗಳು ಸುಳ್ಳಾಗದಿರಲಿ
ಆಲೋಚನೆಗಳು ಅಪರಾಧವಾಗದಿರಲಿ
ಕ್ಷಮೆಯೇ ಕಟುಕತನವಾಗದಿರಲಿ

ಮಹಿಳಾಸ್ವಾತಂತ್ರ್ಯವೆಂಬುದು ಅಳಿಯಲಿ
ಹುಟ್ಟಿನಿಂದಲೇ ನಮಗದು ದೊರಕಲಿ
ಮಹಿಳಾದಿನವೆಂಬುದು ಕಾಣೆಯಾಗಲಿ
ಎಲ್ಲ ದಿನಗಳೂ ನಮ್ಮವಾಗಲಿ

Saturday, March 07, 2009

ಪ್ರತಾಪಸಿಂಹರ ಹೊಸ ಪ್ರಶ್ನೆಯ ಸುತ್ತ....


ಇಂದಿನ ಸಮಸ್ಯೆಗಳಿಗೆಲ್ಲ ಐಟಿ ಉದ್ಯೋಗಿಗಳೇ ಕಾರಣವೆಂಬಂತೆ ಬಿಂಬಿಸಿದ್ದ ಪ್ರತಾಪರು, ಇಂದು ನಮ್ಮಲ್ಲಿ ಗೇಟ್ಸ್, ಜಾಬ್ಸ್, ಡೆಲ್ ಯಾಕಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅವರ ಹಿಂದಿನ ಲೇಖನ ಸೃಷ್ಟಿಸಿದ್ದ ಗೊಂದಲಗಳಿಗೆ ಈಗಿನ ಲೇಖನ ಉತ್ತರವೆಂಬಂತೆ ಭಾವಿಸಲಾಗಿದೆ. ಆದರೆ, ಆರ್ಥಿಕತೆಯ ಹಿನ್ನೆಲೆಯಲ್ಲಿ ಬಂದ ಅವರ ಕುರುಡು ಕಾಂಚಾಣಕ್ಕೂ, ತಾಂತ್ರಿಕತೆಯ ಆಧಾರದ ಮೇಲೆ ಅವರು ಇಂದು ಮುಂದಿಟ್ಟಿರುವ ಪ್ರಶ್ನೆಗೂ, ವೃತ್ತಿಪರತೆ, ಹಣದ ಮೌಲ್ಯದ ಅರಿವಿನ ಕುರಿತಾದ ಮೊದಲ ಲೇಖನಕ್ಕೂ, ಪರಿಶ್ರಮ, ಪ್ರತಿಭೆಯನ್ನಾಧರಿಸಿದ ಎರಡನೆಯ ಲೇಖನಕ್ಕೂ, ಸಂಬಳಕ್ಕಾಗಿ ದುಡಿಯುವ ಐಟಿ ಕಾರ್ಮಿಕರ ಕುರಿತಾದ ಮೊದಲ ಭಾಗಕ್ಕೂ, ಬಂಡವಾಳ ಹೂಡುವ ಐಟಿ ದೊರೆಗಳ ಕುರಿತಾದ ಎರಡನೆಯ ಭಾಗಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೂ ಇದಕ್ಕೂ ಐಟಿ ಕ್ಷೇತ್ರ ಎಂಬ ಪದವಷ್ಟೇ ಕೊಂಡಿ.

ಹೊಸ ಚಿಂತನೆಯನ್ನು ಮುಂದಿಟ್ಟಿರುವ, ಐಟಿ ಕ್ಷೇತ್ರದ ಸಮಸ್ಯೆಯನ್ನು ಗುರುತಿಸುವ ಪ್ರಯತ್ನಕ್ಕಾಗಿ ಪ್ರತಾಪರಿಗೆ ಅಭಿನಂದನೆಗಳು. ಕೇವಲ ನಮ್ಮ Open House, All Hands Meet ಗಳಲ್ಲಿ ಕಳೆದು ಹೋಗುತ್ತಿದ್ದ ಪ್ರಶ್ನೆ ಇಂದು ಸಾರ್ವಜನಿಕ ವೇದಿಕೆಯಲ್ಲಿದೆ. ಪ್ರತಾಪರೇ ಹೇಳುವಂತೆ, ಪರಸ್ಪರ ಹಳಿದುಕೊಳ್ಳದೆ ಮುಕ್ತ ಚರ್ಚೆಯಾಗಲಿ. ನಮ್ಮ ಆಶಯವೂ ಅದೇ.

ISRO, DRDO ಮೊದಲಾದವುಗಳ ಇತಿಹಾಸ ಕೆದಕಿದಾಗ, ಅಬ್ದುಲ್ ಕಲಮರ ’Wings of Fire’ ಓದಿದಾಗ, ಎಂತಹವರ ಜಂಘಾಬಲವೂ ಉಡುಗಿಬಿಡಬೇಕು. ಉಳಿಪೆಟ್ಟು ತಿಂದೂ, ತಿಂದೂ ರೂಪುಗೊಂಡ ಶಿಲ್ಪಗಳಿವು. ದೇಶದ ವೈಜ್ಞಾನಿಕ ಪ್ರಗತಿಯ ರೂವಾರಿಗಳು. ಸೋಲಿನಲ್ಲೂ ಅದರ Top Management ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳು ಉದಾತ್ತವಾದವುಗಳು. (ಇಂತಹುದೊಂದು ನಂಬಿಕೆಯನ್ನು ನಮ್ಮ ಐಟಿ ಕ್ಷೇತ್ರದ ಮೇಲೂ ಇಡುವಂತಾದಲ್ಲಿ??!!) ಸ್ವಾತಂತ್ರ್ಯಾಪೂರ್ವದಲ್ಲೇ, ಭಾರತೀಯರ ಪ್ರತಿಭೆ ಗುರುತಿಸಿ, ಅವರಿಗೆ ಒತ್ತಾಸೆಯಾಗಿರಲೆಂದು, ಶ್ರೀಯುತ Jamsetji Nusserwanji Tata ರವರು ಕಂಡ ಕನಸು, 'Research Institute' ಅಥವಾ 'University of Research' ಎಂದು ಪ್ರಾರಂಭವಾಯಿತು. ಅದೇ ಇಂದಿನ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ (೧೯೦೯ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ, ಇಂದು ಅದರ ಫಲಾನುಭವಿಗಳಾದ ನಮ್ಮೆಲ್ಲರಿಂದ ಕೃತಜ್ಞತೆ, ಈ ಮೂಲಕ). ಅಂತಹುದೊಂದು vision ಇಟ್ಟುಕೊಂಡಿದ್ದ ಮತ್ತೊಬ್ಬ ಟಾಟಾ ಮತ್ತೆ ಬರಲಿಲ್ಲವೆಂಬುದೂ ಅಷ್ಟೇ ಖೇದಕರ. ಈ ಎಲ್ಲ ಸಂಸ್ಥೆಗಳಿಗೂ ಅವುಗಳದೇ ಆದ limitation ಗಳಿವೆ. ದೇಶದ ತಾಂತ್ರಿಕತೆಯ ಕೇಂದ್ರವಾದ ಇವುಗಳೊಳಗೆ ಎಲ್ಲರೂ ಹೋಗುವುದು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಅವು ತೋರಿಸಿದ ದಾರಿಯಲ್ಲಿ ನಡೆಯುವುದಷ್ಟೇ ಸೂಕ್ತ.

ಸ್ವಾತಂತ್ರ್ಯಾಪೂರ್ವದಲ್ಲಿ, ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯನಂತಹವರು ದೇಶದ ಆರ್ಥಿಕ ಪ್ರಗತಿಗಾಗಿ ಕೈಗಾರಿಕೀಕರಣಗೊಳಿಸಿದರು. ಸ್ವಾತಂತ್ರ್ಯಾನಂತರ ಕೆಲವು ಸರ್ಕಾರಿ ಸ್ವಾಮ್ಯಗಳಾದವು. ಕೆಲವು ಹಾಗೆಯೇ ವ್ಯಕ್ತಿಯ/ಕುಟುಂಬದ ಆಡಳಿತದಲ್ಲಿಯೇ ನಡೆದುಕೊಂಡು ಬಂದವು. ಅವುಗಳ ಮಾರುಕಟ್ಟೆ ಭಾರತವೇ ಆಗಿದ್ದಿತು. ನಮ್ಮಲ್ಲಿಯೂ ವಿದೇಶೀ ಉತ್ಪನ್ನಗಳ ಹಾವಳಿ ಕಡಿಮೆಯಿದ್ದಿತು. ಹಾಗಾಗಿ ಇವು ಎಲ್ಲರಿಗೂ ಚಿರಪರಿತ. ನಾವು ಇಂದು ನೋಡುತ್ತಿರುವ ಆರ್ಥಿಕ ಚಿತ್ರಣಕ್ಕೂ, ಕೇವಲ ಸ್ವಾತಂತ್ರ್ಯಾನಂತರದ ಚಿತ್ರಣಕ್ಕೂ ವ್ಯತ್ಯಾಸವಿದೆ. ಈ ವಿಂಗಡನೆಯೇ ಸೂಕ್ತವಲ್ಲವೇನೋ. ಬಹುಶ:, ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟ ನಂತರದ ಹಾಗೂ ಅದರ ಮೊದಲಿನ ಕಾಲವಂದು ವಿಂಗಡಿಸಬಹುದೇನೊ. ೯೦ ರ ದಶಕದಲ್ಲಿ ನಾವು ಜಾಗತೀಕರಣವನ್ನು ಬರಮಾಡಿಕೊಂಡೆವು. ಆಗ, ವಿದೇಶಗಳಲ್ಲಿ ಆಗಲೇ ಸಾಕಷ್ಟು establish ಆಗಿದ್ದ, ಲಾಭದಲ್ಲಿ ನಡೆಯುತ್ತಿದ್ದ ಕಂಪನಿಗಳು, ಪ್ರಾಡಕ್ಟ್ ಗಳು ಭಾರತಕ್ಕೆ ಲಗ್ಗೆಯಿಟ್ಟವು. ಅವರ ಲಾಭಾಂಶದ ಸ್ವಲ್ಪ ಮಾತ್ರ ಹಣಹೂಡಿಕೆ ಸಾಕಾಗಿತ್ತು ಅವರು ಭಾರತದಲ್ಲಿ ಹೆಜ್ಜೆಯಿಡಲು ಅಥವಾ ತಳವೂರಲು (??). ಇವುಗಳಿಂದಾಗಿ ಬಹುಪಾಲು ನಮ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಪೆಟ್ಟು ತಿಂದವು, ಮುಚ್ಚಿಯೇ ಹೋದವು. ಟೆಲೆಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಸಾಧಿಸಿದ್ದ, ಅಂದಿನ C-DoT, ಇಂದಿನ BSNL ನ ಏಕಾಧಿಪತ್ಯ ನಶಿಸಿಹೋಗಿದೆ. ಇಂದಿಗೂ ಮುಕ್ತ ಮಾರುಕಟ್ಟೆಯಲ್ಲಿ ತನ್ನನ್ನು ತಾನು ನಿರೂಪಿಸಲು ಹೆಣಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಸ್ಪರ್ಧೆ ನೀಡಿದ ವಿಡಿಯೋಕಾನ್, ಬಿಪಿಲ್ ನಂತಹ ಸಂಸ್ಥೆಗಳು ಏನಾದವು?

ಜಾಗತಿಕ ಮಾರುಕಟ್ಟೆಗೆ ಸರಿಯಾದ ತಯಾರಿಯಿಲ್ಲದೆ ನಾವು ಹೆಜ್ಜೆಯಿಟ್ಟೆವೇ? ತರಬೇತಿಗೊಳಿಸದೇ ನಮ್ಮನ್ನು ತಳ್ಳಲಾಯಿತೇ? ಗೊತ್ತಿಲ್ಲ. ಇಂತಹುದೊಂದು ಸಂದರ್ಭದಲ್ಲಿ, ಸಂಸ್ಥೆಯೊಂದನ್ನು ಕಟ್ಟಿ ಅದು ಲಾಭಗಳಿಸುವಂತೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ (ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರೇಮ್ ಜಿ, ನಾರಾಯಣ ಮೂರ್ತಿಯವರನ್ನು, ಗೇಟ್ಸ್, ಜಾಬ್ಸ್ ರಿಗೆ ಹೋಲಿಸಲು ಸಾಧ್ಯವಿಲ್ಲವೇ?). ಹಾಗಾಗಿ ’Service Orientation' ಕೇವಲ ಅಗತ್ಯವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನಂತರವಾದರೂ ’Product Orientation' ಆಗಬಹುದಿತ್ತಲ್ಲ. ಇದಕ್ಕೆ ನನಗೆ ದೊರೆತ ಉತ್ತರ - "ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ನಾವು ಸರ್ವೀಸ್ ಕೊಡುತ್ತಿದ್ದೇವೆ. ಹೊಸ ಪ್ರಾಡಕ್ಟ್ ಒಂದನ್ನು ತಂದರೆ ಅವರೊಂದಿಗೇ ಸ್ಪರ್ಧೆಗಿಳಿಯಬೇಕು. ಆಗ Service business ಕೂಡ ಹೊಡೆಸಿಕೊಳ್ಳುತ್ತದೆ. ಅದನ್ನು ಬಿಟ್ಟು ಲಾಭಾಂಶ ಇಲ್ಲ. ಲಾಭಾಂಶವಿಲ್ಲದೇ ಹೊಸ ಪ್ರಾಡಕ್ಟ್ ಗೆ ಕೈ ಹಾಕುವಷ್ಟು ಬಂಡವಾಳವಿಲ್ಲ. ಅದು ಜಾಣತನವೂ ಅಲ್ಲ. ಯಾಕೆಂದರೆ ನಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆ ಭಾರತಕ್ಕೆ ಸೀಮಿತವಾಗಬಹುದು. ಜಾಗತಿಕ ಮಟ್ಟದಲ್ಲಿ client brand establish ಆಗಿದೆ."

ಹಾಗಾದರೆ ನಮ್ಮ Innovation ಏನೂ ಇಲ್ಲವೇ? ಹೊಸ ಹೊಸ ತಂತ್ರಾಂಶಗಳ ಕುರಿತಾದ ಈ Innovation Drive ಗೆ ಅರ್ಥವೇನೆಂದು ಕೇಳಿದಾಗ ಸಿಕ್ಕ ಉತ್ತರ - "ಇಂದು ನೊಕಿಯಾದ ಹೊಸ ಮೊಬೈಲ್ ಗೆ, HP ಪ್ರಿಂಟರ್ ಗೆ ನಾವಿನ್ನೊಂದು ಹೊಸ ಮೊಬೈಲ್, ಪ್ರಿಂಟರ್ ತರುವುದೇ Innovation ಅಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ಪ್ರಾಡಕ್ಟ್ ಗಳಿದ್ದು, ಗ್ರಾಹಕ ಆಗಲೇ confuse ಆಗಿದ್ದಾನೆ. ಹೀಗಿರುವಾಗ ಹೊಸ ಪ್ರಾಡಕ್ಟ್ ಎಷ್ಟು sustain ಆಗುವುದೆಂದು ಹೇಳಬರುವುದಿಲ್ಲ. ಹಾಗಾಗಿ ಸ್ಪರ್ಧಿಸುವ ಬದಲು, ಸಹಯೋಗದೊಂದಿಗೆ ಹೊಸ ತಂತ್ರಜ್ಞಾನಗಳನ್ನು ತರುವುದು Innovation. ಆದ್ದರಿಂದ ಇಂದು service orientation ಎನ್ನುವುದು ಕೇವಲ cheap labour ಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಬೆಳೆದಿದೆ."

ಪ್ರಾಡಕ್ಟ್ ಎಂದರೆ, ಕೇವಲ Physically Feelable ವಸ್ತುವಲ್ಲ. ಬ್ಯಾಂಕಿಂಗ್ ಕೆಲಸಗಳನ್ನು ಸುಲಭಗೊಳಿಸಲು ಇರುವ ಸಹಾಯಕ ಸಾಫ್ಟ್ವೇರ್ ಗಳೂ ಪ್ರಾಡಕ್ಟ್ ಗಳೇ, ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಗಿರುವ ಜಾಲತಾಣಗಳೂ ಪ್ರಾಡಕ್ಟ್ ಗಳೇ. ಇವೆಲ್ಲವನ್ನೂ ಇಲ್ಲಿಯವರೇ, ಇಲ್ಲಿಯವರಿಗಾಗೇ ಮಾಡುತ್ತಿರುವುದು. ಆದರಿಂದು ನಾಯಿಕೊಡೆಗಳಂತೆ ಬೀದಿಗೊಂದು ತಲೆಯೆತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಿಂದ ೫ ಲಕ್ಷ ಪದವೀಧರರು ಹೊರಬರುತ್ತಿದ್ದಾರೆಯೇ ಹೊರತು, ತಂತ್ರಜ್ಞರಲ್ಲ ಎಂಬುದೂ ಪರಿಗಣಿಸಬೇಕಾಗಿರುವ ವಾಸ್ತವ. ಜಾಗತಿಕ ಮಟ್ಟದಲಿ ಸ್ಪರ್ಧಿಸುವಂತಹ ಒಂದು ಉತ್ತಮ ಪ್ರಾಡಕ್ಟ್ ಮಾಡಲು ಬೇಕಾಗಿರುವ ಸ್ಪರ್ಧಾತ್ಮಕ ಛಾತಿ ಎಷ್ಟು ಜನಕ್ಕಿದೆ ಎಂಬುದೂ ಪ್ರಶ್ನಾರ್ಹ. ಮಾಡಿದರೂ, ಪೈರೇಟೆಡ್ ಪ್ರಾಡಕ್ಟ್ ಗಳು ಅನಾಯಾಸವಾಗಿ ದೊರಕುವ ಸುವ್ಯವಸ್ಥೆ ನಮ್ಮಲ್ಲಿರುವಾಗ, ಅವುಗಳು ಎಷ್ಟರ ಮಟ್ಟಿಗೆ ನೆಲೆ ನಿಲ್ಲಬಲ್ಲವು ಎಂಬುದೂ ಪ್ರಶ್ನೆಯೇ.

ಗ್ರಾಹಕನೇ ಪ್ರಭುವಾಗಿರುವ, ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಕೇವಲ ಪ್ರಾಡಕ್ಟ್ ಗಳನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಉದ್ಯೋಗಗಳ ಸೃಷ್ಟಿ ಸಾಧ್ಯವಿತ್ತೇ? ಸರಕಾರಿ ಸ್ವಾಮ್ಯದ ಸಂಸ್ಥೆಗಳು/ ಸಂಶೋಧನೆ ಆಧಾರವಾಗಿರಿಸಿಕೊಂಡ ಸಂಸ್ಥೆಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಪ್ರಾಂತೀಯ, ಜಾತಿಯ ಆಧಾರದ ಮೇಲೆ ನಿಂತಿರುವದರಿಂದ ಪ್ರತಿಭೆಗೆ ಮನ್ನಣೆ ದೊರಕದೆ ಹತಾಶವಾದವರೆಷ್ಟು? ಈ ನಿರ್ಬಂಧಗಳನ್ನು ಮೀರಿ ನಿಂತ ಐಟಿ ಕ್ಷೇತ್ರ ಜನರಿಗೆ ಹತ್ತಿರವಾದದ್ದು ಅಸಹಜವೇ?

ದೂರದೃಷ್ಟಿಯಿಲ್ಲದೆ ಬೆಳೆದಿದ್ದರೆ, ಇಂದು ಕೇವಲ ಭಾರತೀಯ ಐಟಿ ಕ್ಷೇತ್ರ ಬವಣೆ ಅನುಭವಿಸಬೇಕಿತ್ತಲ್ಲವೇ? Product Oriented ಜಪಾನ್, ಚೀನಾ ದ ಆರ್ಥಿಕ ಸ್ಥಿತಿಯೂ ಏಕೆ ನಲುಗುತ್ತಿದೆ? ರಫ್ತು ಆಧಾರಿತ ಕ್ಷೇತ್ರಗಳೆಲ್ಲವೂ ಇಂದು ಬಳಲುತ್ತಿರುವುದು ಸತ್ಯವಲ್ಲವೇ? ಇದರಲ್ಲಿ ಜಾಗತೀಕರಣದ ಕೊಡುಗೆಯೆಷ್ಟು? ಇಂದು ತಪ್ಪೆಲ್ಲವೂ ಐಟಿ ಕ್ಷೇತ್ರದ ದಿಗ್ಗಜರದಾದರೆ, ಅವರಿಗೆ ದೂರದರ್ಶಿತ್ವ ಇಲ್ಲವೆಂದಾಗಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೇಕೆ ಅವರಿಗೆ ನೀಡಬೇಕಿತ್ತು? ಎಲ್ಲಿ ಎಡವಬಹುದೆಂದರಿತವರು ಅವರಿಗೆ ಎಚ್ಚರಿಸುವ ಪ್ರಯತ್ನವನ್ನೇಕೆ ಮಾಡಲಿಲ್ಲ? ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದೇವೆಯೇ? ತಪ್ಪು ಜರುಗಿದ್ದೇ ಆಗಿದಲ್ಲಿ, ಸರಿಪಡಿಸುವ ಬಗೆಗಳೆಂತು? ಸಾಮಾನ್ಯ ಕಾರ್ಮಿಕರಿಂದಲೂ ಸಾಧ್ಯವೇ ಅಥವಾ ಬಂಡವಾಳ ಹೂಡಲು ಸಾಧ್ಯವಿರುವವರಿಂದ ಮಾತ್ರ ಸಾಧ್ಯವೇ? (ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತೀತೆಂದು ಭಾವಿಸುತ್ತೇನೆ)